ಸೋಮವಾರ, ಸೆಪ್ಟೆಂಬರ್ 1, 2025

ಧರ್ಮಸ್ಥಳ ಸತ್ಯಯಾತ್ರೆಯಲ್ಲಿ ಉಕ್ಕಿನ ನಗರದ ಜೆಡಿಎಸ್ ಮುಖಂಡರು ಭಾಗಿ

ಧರ್ಮಸ್ಥಳ ಗ್ರಾಮದಲ್ಲಿ ಕೊಲೆ ಹಾಗು ಅತ್ಯಾಚಾರಕ್ಕೆ ಒಳಗಾದ ನೂರಾರು ಶವ ಹೂಳಲಾಗಿದೆ ಎಂಬ ದೂರಿನ ನೆಪದಲ್ಲಿ ಕ್ಷೇತ್ರದ ಅಪಪ್ರಚಾರ ನಡೆದಿದೆ ಎಂದು ಆರೋಪಿಸಿ ಜಾತ್ಯಾತೀತ ಜನತಾ ದಳ ವತಿಯಿಂದ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಸತ್ಯಯಾತ್ರೆಯಲ್ಲಿ ಭದ್ರಾವತಿ ವಿಧಾನಸಭಾ ಕ್ಷೇತ್ರದ ಪಕ್ಷದ ಪ್ರಮುಖರು ಪಾಲ್ಗೊಂಡಿದ್ದರು. 
    ಭದ್ರಾವತಿ : ಧರ್ಮಸ್ಥಳ ಗ್ರಾಮದಲ್ಲಿ ಕೊಲೆ ಹಾಗು ಅತ್ಯಾಚಾರಕ್ಕೆ ಒಳಗಾದ ನೂರಾರು ಶವ ಹೂಳಲಾಗಿದೆ ಎಂಬ ದೂರಿನ ನೆಪದಲ್ಲಿ ಕ್ಷೇತ್ರದ ಅಪಪ್ರಚಾರ ನಡೆದಿದೆ ಎಂದು ಆರೋಪಿಸಿ ಜಾತ್ಯಾತೀತ ಜನತಾ ದಳ ವತಿಯಿಂದ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಸತ್ಯಯಾತ್ರೆಯಲ್ಲಿ ವಿಧಾನಸಭಾ ಕ್ಷೇತ್ರದ ಪಕ್ಷದ ಪ್ರಮುಖರು ಪಾಲ್ಗೊಂಡಿದ್ದರು. 
    ಪಕ್ಷದ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಪಾಲ್ಗೊಂಡಿದ್ದ ಪಕ್ಷದ ಸ್ಥಳೀಯ ಮುಖಂಡರಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಶಾರದ ಅಪ್ಪಾಜಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ, ಪಕ್ಷದ ನಗರ ಘಟಕದ ಅಧ್ಯಕ್ಷ ಆರ್. ಕುರುಣಾಮೂರ್ತಿ, ನ್ಯಾಯವಾದಿ ಟಿ. ಚಂದ್ರೇಗೌಡ, ನಗರಸಭೆ ಮಾಜಿ ಅಧ್ಯಕ್ಷೆ ವಿಶಾಲಾಕ್ಷಿ, ಶಿಮುಲ್ ಮಾಜಿ ಅಧ್ಯಕ್ಷ ಡಿ. ಆನಂದ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಧರ್ಮೇಗೌಡ, ಭಾಗ್ಯಮ್ಮ, ಗ್ರಾಮ ಪಂಚಾಯಿತಿ, ನಗರಸಭೆ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಪಕ್ಷದ ಜನಪ್ರತಿನಿಧಿಗಳು, ಇನ್ನಿತರರು ಶ್ರೀ ಮಂಜುನಾಥ ಸ್ವಾಮಿ ದರ್ಶನ ಪಡೆದು ನಂತರ ಶ್ರೀ ಕ್ಷೇತ್ರದ ಧರ್ಮಾಧಿಕಾರಿ, ರಾಜ್ಯಸಭಾ ಸದಸ್ಯ ಡಾ. ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿ ಸತ್ಯಯಾತ್ರೆ ಕುರಿತು ವಿವರಿಸಿದರು. 
 

ರೋಟರಿ ಕ್ಲಬ್ ೨೦೨೪-೨೫ನೇ ಸಾಲಿನ ಸಾಧನೆಗೆ ಪ್ರಶಸ್ತಿ

ಭದ್ರಾವತಿ ನಗರದ ರೋಟರಿ ಕ್ಲಬ್ ಕಳೆದ ೨೦೨೪-೨೫ನೇ ಸಾಲಿನಲ್ಲಿ ಅಂದಿನ ಅಧ್ಯಕ್ಷರಾಗಿದ್ದ ರಾಘವೇಂದ್ರ ಉಪಾಧ್ಯಾಯರವರ ನೇತೃತ್ವದಲ್ಲಿ ಉತ್ತಮ ಸಾಧನೆ ಮಾಡಿದ್ದು, ಇದನ್ನು ಗುರುತಿಸಿ ಉಡುಪಿ ಗುಂಡ್ಮಿ(ಸಾಸ್ತಾನ್)ಯಲ್ಲಿ ಜರುಗಿದ ರೋಟರಿ ಅಂತರಾಷ್ಟ್ರೀಯ ಸಮ್ಮೇಳನದಲ್ಲಿ ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು. 
    ಭದ್ರಾವತಿ : ನಗರದ ರೋಟರಿ ಕ್ಲಬ್ ಕಳೆದ ೨೦೨೪-೨೫ನೇ ಸಾಲಿನಲ್ಲಿ ಅಂದಿನ ಅಧ್ಯಕ್ಷರಾಗಿದ್ದ ರಾಘವೇಂದ್ರ ಉಪಾಧ್ಯಾಯರವರ ನೇತೃತ್ವದಲ್ಲಿ ಉತ್ತಮ ಸಾಧನೆ ಮಾಡಿದ್ದು, ಇದನ್ನು ಗುರುತಿಸಿ ಉಡುಪಿ ಗುಂಡ್ಮಿ(ಸಾಸ್ತಾನ್)ಯಲ್ಲಿ ಜರುಗಿದ ರೋಟರಿ ಅಂತರಾಷ್ಟ್ರೀಯ ಸಮ್ಮೇಳನದಲ್ಲಿ ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು. 
    ರಾಘವೇಂದ್ರ ಉಪಾಧ್ಯಾಯರವರ ನೇತೃತ್ವದ ತಂಡ ಅವರ ಅವಧಿಯಲ್ಲಿ ಉತ್ತಮ ಹಣಕಾಸಿನ ನಿರ್ವಹಣೆ ಜೊತೆಗೆ ಹಲವಾರು ಸಾಮಾಜಿಕ ಸೇವಾ ಕಾರ್ಯಗಳನ್ನು ಯಶಸ್ವಿಯಾಗಿ ಕೈಗೊಂಡಿದ್ದು, ಮಹಿಳೆಯರು ಮತ್ತು ಮಕ್ಕಳ ಆರೋಗ್ಯ, ಹಸಿರು ಜಾಗೃತಿ, ರಸ್ತೆ ಸಪ್ತಾಹ ಸುರಕ್ಷತೆ, ಪರಿಸರ ಸಂರಕ್ಷಣೆ ಸೇರಿದಂತೆ ಇನ್ನಿತರ ಸೇವಾ ಕಾರ್ಯಗಳು ಒಳಗೊಂಡಿವೆ. ಅಲ್ಲದೆ ವಿಭಿನ್ನತೆಯಿಂದ ಕೂಡಿರುವ ಕಾರ್ಯ ಯೋಜನೆಗಳನ್ನು ರೂಪಿಸುವ ಮೂಲಕ ಗಮನ ಸೆಳೆದಿತ್ತು. 
    ಪ್ರಶಸ್ತಿಯನ್ನು ರಾಘವೇಂದ್ರ ಉಪಾಧ್ಯಾಯರವರ ತಂಡ ಸ್ವೀಕರಿಸಿತು. ಪ್ರಮುಖರಾದ ಮಾಜಿ ಜಿಲ್ಲಾ ಗೌರ್‍ನರ್ ದೇವಾನಂದ್, ಜಿಲ್ಲಾ ಗೌರ್‍ನರ್ ಪಾಲಾಕ್ಷ, ನಾಗರಾಜ್, ವಸಂತ ಹೋಬಳಿದಾರ್ ಮತ್ತು ಅಭಿನಂದನ್ ಶೆಟ್ಟಿ ಉಪಸ್ಥಿತರಿದ್ದರು. 
    ನಗರದ ರೋಟರಿ ಕ್ಲಬ್ ಪ್ರಮುಖರಾದ ಪ್ರಸಕ್ತ ಸಾಲಿನ ಅಧ್ಯಕ್ಷ ಶಿವಕುಮಾರ್, ಕೆ.ಎಚ್ ತೀರ್ಥಯ್ಯ, ಕೂಡ್ಲಿಗೆರೆ ಹಾಲೇಶ್, ದುಷ್ಯಂತ್ ರಾಜ್ ಮತ್ತು ನಿರಂಜನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ಭಾನುವಾರ, ಆಗಸ್ಟ್ 31, 2025

ಬಲಿಜ ಸಮುದಾಯದವರು ಸಂಘಟಿತಗೊಂಡಲ್ಲಿ ಮಾತ್ರ ಭವಿಷ್ಯದಲ್ಲಿ ಬಲಾಢ್ಯಗೊಳ್ಳಲು ಸಾಧ್ಯ : ಎಂ.ಆರ್ ಸೀತಾರಾಮು

ಭದ್ರಾವತಿ ಹಳೇನಗರದ ಬಸವೇಶ್ವರವೃತ್ತದ ಬಲಿಜ ಸಮುದಾಯ ಭವನದಲ್ಲಿ ತಾಲೂಕು ಬಲಿಜ ಸಂಘ ವತಿಯಿಂದ ಭಾನುವಾರ ಆಯೋಜಿಸಲಾಗಿದ್ದ ಕೈವಾರ ಸದ್ಗುರು ಯೋಗಿನಾರೇಯಣ ತಾತಯ್ಯನವರ ೧೯೦ನೇ ಜಯಂತ್ಯೋತ್ಸವ ಕಾರ್ಯಕ್ರಮ ಮಾಜಿ ಸಚಿವ, ವಿಧಾನ ಪರಿಷತ್ ಸದಸ್ಯ ಎಂ.ಆರ್ ಸೀತಾರಾಮು ಉದ್ಘಾಟಿಸಿ ಮಾತನಾಡಿದರು. 
    ಭದ್ರಾವತಿ : ಬಲಿಜ ಸಮುದಾಯದವರು ಸಂಘಟಿತಗೊಂಡಲ್ಲಿ ಮಾತ್ರ ಭವಿಷ್ಯದಲ್ಲಿ ಬಲಾಢ್ಯಗೊಳ್ಳಲು ಸಾಧ್ಯ. ಇದನ್ನು ಪ್ರತಿಯೊಬ್ಬರು ಅರ್ಥಮಾಡಿಕೊಂಡು ಸಂಘಟನೆಯಲ್ಲಿ ಮುನ್ನಡೆಯಬೇಕೆಂದು ಮಾಜಿ ಸಚಿವ, ವಿಧಾನ ಪರಿಷತ್ ಸದಸ್ಯ ಎಂ.ಆರ್ ಸೀತಾರಾಮು ಹೇಳಿದರು. 
    ಹಳೇನಗರದ ಬಸವೇಶ್ವರವೃತ್ತದ ಬಲಿಜ ಸಮುದಾಯ ಭವನದಲ್ಲಿ ತಾಲೂಕು ಬಲಿಜ ಸಂಘ ವತಿಯಿಂದ ಭಾನುವಾರ ಆಯೋಜಿಸಲಾಗಿದ್ದ ಕೈವಾರ ಸದ್ಗುರು ಯೋಗಿನಾರೇಯಣ ತಾತಯ್ಯನವರ ೧೯೦ನೇ ಜಯಂತ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 
    ಪ್ರತಿಭಾವಂತರು, ಬುದ್ದಿವಂತರು ಇರುವ ಬಲಿಜ ಸಮುದಾಯದಲ್ಲಿ ಒಗ್ಗಟ್ಟಿನ ಕೊರತೆ ಇದೆ. ಇದನ್ನು ಸರಿಪಡಿಸಿಕೊಂಡಲ್ಲಿ ಮಾತ್ರ ಸಮಾಜ ಬಲಾಢ್ಯವಾಗಿ ಬೆಳೆಯಲು ಸಾಧ್ಯ. ಬಲಿಜ ಸಮುದಾಯದವರು ಯಾವುದೇ ಪಕ್ಷದಲ್ಲಿರಲಿ, ಯಾವುದೇ ಕ್ಷೇತ್ರದಲ್ಲಿರಲಿ, ಯಾವುದೇ ಹುದ್ದೆಯಲ್ಲಿರಲಿ  ಅವರನ್ನು ಸಂಘಟನೆ ಮೂಲಕ ಪ್ರೋತ್ಸಾಹಿಸಿ ಬೆಂಬಲಿಸುವ ಮೂಲಕ ಒಗ್ಗಟ್ಟು ಪ್ರದರ್ಶಿಸಬೇಕು. ಆ ಮೂಲಕ ಸಮುದಾಯಕ್ಕೆ ಉತ್ತಮ ಸಂದೇಶ ನೀಡಬೇಕೆಂದರು. 
    ರಾಜಕಾರಣದಲ್ಲಿ ಹಲವಾರು ಜಾತಿಯವರಿದ್ದಾರೆ. ಆಯಾ ಜಾತಿಯ ರಾಜಕಾರಣಿಗಳು ಆಯಾ ಸಮಾಜದ ಮೇಲೆ ಪ್ರೀತಿ, ವಿಶ್ವಾಸದ ಮೂಲಕ ಅಭಿವೃದ್ದಿಗೆ ಸಾಕಷ್ಟು ಕೊಡುಗೆಗಳನ್ನು ನೀಡುತ್ತಾ ಬಂದಿದ್ದಾರೆ. ಈ ನಿಟ್ಟಿನಲ್ಲಿ ನಮ್ಮ ಸಮುದಾಯದ ನಾಯಕರು ರಾಜಕೀಯವಾಗಿ ಹೆಚ್ಚು ಹೆಚ್ಚಾಗಿ ಬೆಳೆಯಬೇಕು. ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ನಗರಸಭೆ, ಪಟ್ಟಣ ಪಂಚಾಯಿತಿ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ನಮ್ಮ ಸಮುದಾಯದವರು ಪ್ರತಿನಿಧಿಸಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಮ್ಮನ್ನು ಪ್ರತಿನಿಧಿಸುವ ವ್ಯಕ್ತಿ ಇದ್ದಾಗ ಮಾತ್ರ ಸಮಾಜದ ಏಳಿಗೆ ಸಾಧ್ಯ ಎಂದರು. 
    ಈ ಕ್ಷೇತ್ರದಲ್ಲಿನ ಬಲಿಜ ಸಮುದಾಯದವರ ಸಮಸ್ಯೆಗಳಿಗೆ ಶಾಸಕ ಬಿ.ಕೆ ಸಂಗಮೇಶ್ವರ್ ಮತ್ತು ಅವರ ಕುಟುಂಬ ಸದಸ್ಯರು ಹೆಚ್ಚಿನ ರೀತಿಯಲ್ಲಿ ಸ್ಪಂದಿಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಭವಿಷ್ಯದಲ್ಲಿ ಸಮುದಾಯದವರು ಶಾಸಕರು ಮತ್ತು ಅವರ ಕುಟುಂಬ ಸದಸ್ಯರನ್ನು ಬೆಂಬಲಿಸಲು ಮುಂದಾಗುವುದು ಸೂಕ್ತ ಎಂದರು. 
     ನಗರಸಭೆ ಹಿರಿಯ ಸದಸ್ಯ ಬಿ.ಕೆ ಮೋಹನ್ ಮಾತನಾಡಿ, ಕ್ಷೇತ್ರದಲ್ಲಿ ಬಲಿಜ ಸಮುದಾಯದ ಅಭಿವೃದ್ದಿಗೆ ಶಾಸಕರು ಸಾಕಷ್ಟು ಶ್ರಮಿಸಿದ್ದಾರೆ. ಎಂ.ಆರ್ ಸೀತಾರಾಮು ಅವರು ಸಹ ತಮಗೆ ಲಭ್ಯವಿರುವ ಅನುದಾನ ಕ್ಷೇತ್ರಕ್ಕೆ ನೀಡಿದ್ದಾರೆ. ಶ್ರೀಕೃಷ್ಣ ದೇವರಾಯ ರಸ್ತೆ ಹೆಸರು ನಾಮಕರಣಗೊಳಿಸುವಲ್ಲಿ ಪಕ್ಷತೀತವಾಗಿ ಸಹಕರಿಸಿದ ನಗರಸಭೆ ಎಲ್ಲಾ ಸದಸ್ಯರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.  
    ಶಾಸಕ ಬಿ.ಕೆ ಸಂಗಮೇಶ್ವರ್ ಮಾತನಾಡಿ, ಕೈವಾರ ತಾತಯ್ಯನವರ ಆದರ್ಶ ಗುಣಗಳನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಬೇಕು. ಸಮುದಾಯದ ಅಭಿವೃದ್ದಿಗಾಗಿ ನಾನು ಹಾಗೂ ನನ್ನ ಕುಟುಂಬದವರು ಸದಾ ನಿಮ್ಮೊಂದಿಗಿರುವುದಾಗಿ ಭರವಸೆ ನೀಡಿದರು. 
    ಬಲಿಜ ಸಂಘದ ಅಧ್ಯಕ್ಷ ಎಚ್.ಆರ್ ರಂಗನಾಥ್ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು. ನಗರಸಭೆ ಉಪಾಧ್ಯಕ್ಷ ಮಣಿ ಎಎನ್‌ಎಸ್, ಸದಸ್ಯರಾದ ಚನ್ನಪ್ಪ, ವಿ. ಕದಿರೇಶ್, ಬಸವರಾಜ ಬಿ. ಆನೇಕೊಪ್ಪ, ಅನುಸುಧ ಮೋಹನ್ ಪಳನಿ, ಕೆ. ಸುದೀಪ್ ಕುಮಾರ್, ಅನುಪಮ ಚನ್ನೇಶ್, ಮಾಜಿ ಸದಸ್ಯ ಕರಿಯಪ್ಪ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಿ.ಕೆ ಶಿವಕುಮಾರ್, ಮಾಜಿ ಉಪ ಮೇಯರ್ ಮಹಮದ್ ಸನಾವುಲ್ಲಾ, ತಾಲೂಕು ಮಾಜಿ ಸದಸ್ಯ ಕೆ. ಮಂಜುನಾಥ್, ಬಲಿಜ ಸಮಾಜದ ತಾಲೂಕು ಗೌರವಾಧ್ಯಕ್ಷರಾದ ಜೆ.ಎಸ್ ಸಂಜೀವಮೂರ್ತಿ, ಎಸ್.ಎನ್ ಸುಬ್ರಮಣ್ಯ, ಉಪಾಧ್ಯಕ್ಷರಾದ ಪದ್ಮ ಹನುಮಂತಪ್ಪ, ಎಸ್.ಬಿ ಜಂಗಮಪ್ಪ, ಪ್ರಧಾನ ಕಾರ್ಯದರ್ಶಿ ಪಿ. ಸತೀಶ್, ಸಹ ಕಾರ್ಯದರ್ಶಿ ಟಿ. ರಮೇಶ್, ಮುಖಂಡರಾದ ಬಿ. ಗಂಗಾಧರ್, ಟಿ.ಡಿ ಶಶಿಕುಮಾರ್,  ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ಧಾರ್ಮಿಕರ ಸೇವಕರ ದಿನ : ಧರ್ಮಗುರು ರೋಮನ್ ಪಿಂಟೋಗೆ ಸನ್ಮಾನ

ಭದ್ರಾವತಿ ಗಾಂಧಿನಗರದ ವೇಲಾಂಗಣಿ ಆರೋಗ್ಯ ಮಾತೆ ದೇವಾಲಯದಲ್ಲಿ ಜಾತ್ರಾ ಮಹೋತ್ಸವದ ಅಂಗವಾಗಿ ನಡೆಯುತ್ತಿರುವ ೯ ದಿನಗಳ ಭಕ್ತಿ ಕಾರ್ಯದಲ್ಲಿ ಭಾನುವಾರ ಧಾರ್ಮಿಕ ಸೇವಕರ ದಿನದ ಅಂಗವಾಗಿ ಕಬಳೆ ಧರ್ಮ ಕೇಂದ್ರದ ಧರ್ಮ ಗುರುಗಳಾದ ಫಾದರ್ ರೋಮನ್ ಪಿಂಟೋರವರನ್ನು ಸನ್ಮಾನಿಸಿ, ಗೌರವಿಸಲಾಯಿತು.  
    ಭದ್ರಾವತಿ: ಗಾಂಧಿನಗರದ ವೇಲಾಂಗಣಿ ಆರೋಗ್ಯ ಮಾತೆ ದೇವಾಲಯದಲ್ಲಿ ಜಾತ್ರಾ ಮಹೋತ್ಸವದ ಅಂಗವಾಗಿ ನಡೆಯುತ್ತಿರುವ ೯ ದಿನಗಳ ಭಕ್ತಿ ಕಾರ್ಯದಲ್ಲಿ ಭಾನುವಾರ ಧಾರ್ಮಿಕ ಸೇವಕರ ದಿನವನ್ನಾಗಿ ಆಚರಿಸಲಾಯಿತು. 
    ಕಳೆದ ೨೩ ವರ್ಷಗಳಿಂದ ಸತತವಾಗಿ ಧಾರ್ಮಿಕ ಸೇವೆ ಸಲ್ಲಿಸುತ್ತಿರುವ ಕಬಳೆ ಧರ್ಮ ಕೇಂದ್ರದ ಧರ್ಮ ಗುರುಗಳಾದ ಫಾದರ್ ರೋಮನ್ ಪಿಂಟೋ ರವರಿಗೆ ಧರ್ಮ ಕೇಂದ್ರದ ಪರವಾಗಿ ಧರ್ಮ ಕೇಂದ್ರದ ಗುರುಗಳಾದ ಫಾದರ್ ಸ್ಟೀವನ್ ಡೇಸಾ,  ಸಿಸ್ಟರ್ ವಿನ್ಸಿ , ಸಿಸ್ಟರ್ ಶೋಭನ ರವರು ಸನ್ಮಾನಿಸಿ, ಗೌರವಿಸಿದರು. ಧರ್ಮಭಗಿನಿಯರು, ಭಕ್ತಾಧಿಗಳು ಪಾಲ್ಗೊಂಡಿದ್ದರು.

ದೇವಸ್ಥಾನ ನಿರ್ಮಾಣದ ಜೊತೆಗೆ ವಿನಾಯಕ ಮಹೋತ್ಸವ : ೧೭ನೇ ವರ್ಷದ ಮೂರ್ತಿ ವಿಸರ್ಜನೆ

ಭದ್ರಾವತಿ ನಗರಸಭೆ ವಾರ್ಡ್ ನಂ.೯ ಮತ್ತು ೧೦ರ ವ್ಯಾಪ್ತಿಯ ತಾಲೂಕು ಶ್ರೀ ವೈಷ್ಣವ ಸಂಸ್ಥಾಪಕರು ದೇವಸ್ಥಾನ, ಶ್ರೀ ಮಹಾವಿಷ್ಣು ಮೃತ್ಯುಂಜಯ ಮತ್ತು ಅಭಯ ಹಸ್ತ ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನ ಸೇವಾ ಟ್ರಸ್ಟ್ ವತಿಯಿಂದ ಕಳೆದ ಸುಮಾರು ೧೭ ವರ್ಷಗಳಿಂದ ವಿನಾಯಕ ಮಹೋತ್ಸವ ಆಚರಿಸಿಕೊಂಡು ಬರಲಾಗುತ್ತಿದ್ದು, ಭಾನುವಾರ ಸಂಜೆ ಮೂರ್ತಿ ವಿಸರ್ಜನೆ ನಡೆಸಲಾಯಿತು.   
    ಭದ್ರಾವತಿ: ನಗರಸಭೆ ವಾರ್ಡ್ ನಂ.೯ ಮತ್ತು ೧೦ರ ವ್ಯಾಪ್ತಿಯ ವಿಜಯನಗರದ ತಾಲೂಕು ಶ್ರೀ ವೈಷ್ಣವ ಸಂಸ್ಥಾಪಕರು ದೇವಸ್ಥಾನ, ಶ್ರೀ ಮಹಾವಿಷ್ಣು ಮೃತ್ಯುಂಜಯ ಮತ್ತು ಅಭಯ ಹಸ್ತ ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನ ಸೇವಾ ಟ್ರಸ್ಟ್ ವತಿಯಿಂದ ಕಳೆದ ಸುಮಾರು ೧೭ ವರ್ಷಗಳಿಂದ ವಿನಾಯಕ ಮಹೋತ್ಸವ ಆಚರಿಸಿಕೊಂಡು ಬರಲಾಗುತ್ತಿದ್ದು, ಭಾನುವಾರ ಸಂಜೆ ಮೂರ್ತಿ ವಿಸರ್ಜನೆ ನಡೆಸಲಾಯಿತು. 
    ದೇವಸ್ಥಾನದ ಪ್ರಧಾನ ಅರ್ಚಕರಾದ ನಗರದ ವಿಐಎಸ್‌ಎಲ್ ಕಾರ್ಖಾನೆ ನಿವೃತ್ತ ನೌಕರ ಎನ್. ಗೋವಿಂದರಾಜುರವರು ತಮ್ಮ ಸ್ವಂತ ಜಾಗದಲ್ಲಿ ಕಳೆದ ಸುಮಾರು ೧೩ ವರ್ಷಗಳಿಂದ ಹಂತ ಹಂತವಾಗಿ ದೇವಸ್ಥಾನ ನಿರ್ಮಿಸುತ್ತಿದ್ದು, ಟ್ರಸ್ಟ್ ರಚಿಸಿಕೊಂಡು ಜಾಗ ಹಸ್ತಾಂತರಿಸುವ ಜೊತೆಗೆ ತಮ್ಮದೇ ಸುಮಾರು ೧೦ ಲಕ್ಷಕ್ಕೂ ಹೆಚ್ಚಿನ ಹಣ ದೇವಸ್ಥಾನದ ನಿರ್ಮಾಣ ಕಾರ್ಯಕ್ಕೆ ವ್ಯಯ ಮಾಡಿದ್ದಾರೆ. ಈ ನಡುವೆ ಜನಪ್ರತಿನಿಧಿ, ಸ್ಥಳೀಯ ಸಂಸ್ಥೆಗಳು ಹಾಗು ದಾನಿಗಳಿಂದ ಸಹಾಯ ಹಸ್ತ ನಿರೀಕ್ಷಿಸುತ್ತಿದ್ದಾರೆ. ಈ ಅವರ ನಿರೀಕ್ಷೆಗೆ ತಕ್ಕಂತೆ ನೆರವು ಬಂದಲ್ಲಿ ಶೀಘ್ರದಲ್ಲಿಯೇ ದೇವಸ್ಥಾನ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ. 
    ಈ ನಡುವೆ ವಿನಾಯಕ ಮಹೋತ್ಸವ, ಶ್ರೀ ರಾಮ ನವಮಿ, ವೈಕುಂಠ ಏಕಾದಶಿ ಸೇರಿದಂತೆ ಇನ್ನಿತರ ಹಬ್ಬ, ಉತ್ಸವಗಳನ್ನು ಸಹ ಅದ್ದೂರಿಯಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಈ ಬಾರಿ ವಿನಾಯಕ ಮೋಹತ್ಸವ ಅದ್ದೂರಿಯಾಗಿ ನಡೆಸುವ ಮೂಲಕ ಹೊಸಮನೆ ಅಶ್ವತ್ಥನಗರ ಭೂತಪ್ಪ ದೇವಸ್ಥಾನದ ಬಳಿ ಗೊಂದಿ ಕಾಲುವೆಯಲ್ಲಿ ಮೂರ್ತಿ ವಿಸರ್ಜನೆಯೊಂದಿಗೆ ಮುಕ್ತಾಯಗೊಳಿಸಲಾಗಿದೆ. 
    ಟ್ರಸ್ಟ್ ಅಧ್ಯಕ್ಷರಾದ ಪ್ರಧಾನ ಅರ್ಚಕ ಎನ್. ಗೋವಿಂದರಾಜು, ವ್ಯವಸ್ಥಾಪಕಿ ಡಿ. ಮಂಜುಳ ಗೋವಿಂದರಾಜು, ಪತ್ರಿಕಾ ವಿತರಕ ಕೃಷ್ಣಮೂರ್ತಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಲಕ್ಷಾಂತರ ರು. ಮೌಲ್ಯದ ಮಾಂಗಲ್ಯ ಸರ ಕಳ್ಳತನ : ಇಬ್ಬರ ಸೆರೆ

ಮನೆಯ ಬೀರುವಿನಲ್ಲಿದ್ದ ಲಕ್ಷಾಂತರ ರು. ಮೌಲ್ಯದ ಮಾಂಗಲ್ಯ ಸರ ಕಳ್ಳತನ ಮಾಡಿದ್ದ ಇಬ್ಬರನ್ನು ಭದ್ರಾವತಿ ಪೇಪರ್‌ಟೌನ್ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿರುವ ಘಟನೆ ನಡೆದಿದೆ. 
    ಭದ್ರಾವತಿ : ಮನೆಯ ಬೀರುವಿನಲ್ಲಿದ್ದ ಲಕ್ಷಾಂತರ ರು. ಮೌಲ್ಯದ ಮಾಂಗಲ್ಯ ಸರ ಕಳ್ಳತನ ಮಾಡಿದ್ದ ಇಬ್ಬರನ್ನು ಪೇಪರ್‌ಟೌನ್ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿರುವ ಘಟನೆ ನಡೆದಿದೆ. 
    ಬೆಂಗಳೂರಿನ ಕೆಂಗೇರಿ ನಿವಾಸಿಗಳಾದ ಆರ್. ಮಂಜುಳಾ(೨೧) ಮತ್ತು ಸುಜೈನ್ ಖಾನ್(೨೪) ಎಂಬುವರನ್ನು ಬಂಧಿಸಲಾಗಿದೆ. ಇಬ್ಬರು ದಂಪತಿಯಾಗಿದ್ದು, ಕಳ್ಳತನ ಮಾಡಿದ್ದ ಸುಮಾರು ೭,೮೨,೦೦೦ ರು. ಮೌಲ್ಯದ ೮೩ ಗ್ರಾಂ ತೂಕದ ಮಾಂಗಲ್ಯ ಸರ ವಶಪಡಿಸಿಕೊಳ್ಳಲಾಗಿದೆ. 
    ಘಟನೆ ವಿವರ : 
    ಆ.೧೮ ರಂದು ಕಾಗದನಗರದ ೫ನೇ ವಾರ್ಡ್ ನಿವಾಸಿ ಚಂದ್ರಮ್ಮ ಎಂಬುವರ ಮನೆಯ ಬೀರುವಿನಲ್ಲಿದ್ದ ೯೫ ಗ್ರಾಂ ತೂಕದ ಬಂಗಾರದ ಆಭರಣಗಳು ಕಳ್ಳತನವಾಗಿರುವ ಸಂಬಂಧ ದೂರು ದಾಖಲಾಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಪತ್ತೆ ಕಾರ್ಯಾಚರಣೆಗಾಗಿ ಜಿಲ್ಲಾ ಪೊಲೀಸ್ ಅಧೀಕ್ಷಕ ಜಿ.ಕೆ ಮಿಥುನ್ ಕುಮಾರ್ ಮತ್ತು ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಎ.ಜಿ ಕಾರಿಯಪ್ಪ ಹಾಗು ಎಸ್. ರಮೇಶ್ ಕುಮಾರ್‌ರವರ ಮಾರ್ಗದರ್ಶನದಲ್ಲಿ ಹಾಗೂ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಕೆ.ಆರ್ ನಾಗರಾಜರವರ ಮೇಲ್ವಿಚಾರಣೆಯಲ್ಲಿ, ಠಾಣಾ ಪೊಲೀಸ್ ನಿರೀಕ್ಷಕಿ ಕೆ. ನಾಗಮ್ಮರವರ ನೇತೃತ್ವದಲ್ಲಿ ಠಾಣೆಯ ಸಿಬ್ಬಂದಿಗಳಾದ ಸಹಾಯಕ ಠಾಣಾ ನಿರೀಕ್ಷಕ ರತ್ನಾಕರ್, ಪ್ರಕಾಶ, ಅರುಣ್, ನಾಗರಾಜ, ಹನುಮಂತ, ಆಸ್ಮಾ, ಸ್ವೀಕೃತ ಮತ್ತು ಅನುರೂಪ ಅವರುಗಳನ್ನೊಳಗೊಂಡ ತನಿಖಾ ತಂಡವನ್ನು ರಚಿಸಲಾಗಿತ್ತು. 
    ಆರ್. ಮಂಜುಳಾ ಮತ್ತು ಸುಜೈನ್ ಖಾನ್ ಇಬ್ಬರು ಚಂದ್ರಮ್ಮನವರ ಸಂಬಂಧಿಗಳಾಗಿದ್ದು, ಮನೆಯಲ್ಲಿ ಯಾರು ಇಲ್ಲದಿರುವಾಗ ಬೀರುವಿನಲ್ಲಿದ್ದ ಮಾಂಗಲ್ಯ ಸರ ಕಳ್ಳತನ ಮಾಡಿದ್ದರು ಎಂದು ತನಿಖೆಯಿಂದ ತಿಳಿದು ಬಂದಿದೆ. 
    ಜಿಲ್ಲಾ ಪೊಲೀಸ್ ಅಧೀಕ್ಷಕ ಜಿ.ಕೆ ಮಿಥುನ್ ಕುಮಾರ್ ಮತ್ತು ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಎ.ಜಿ ಕಾರಿಯಪ್ಪ ಹಾಗು ಎಸ್. ರಮೇಶ್ ಕುಮಾರ್‌ರವರು ತನಿಖಾ ತಂಡದ ಕಾರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ. 
 

ಭದ್ರಾವತಿ ಪೇಪರ್‌ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಮನೆಯೊಂದರಲ್ಲಿ ಲಕ್ಷಾಂತರ ರು. ಮಾಂಗಲ್ಯ ಸರ ಕಳ್ಳತನ ಮಾಡಿದ್ದ ಬೆಂಗಳೂರಿನ ದಂಪತಿ ಆರ್. ಮಂಜುಳಾ-ಸುಜೈನ್ ಖಾನ್. 

ಶ್ರೀ ಕೃಷ್ಣ ದೇವರಾಯ ರಸ್ತೆ ಉದ್ಘಾಟನೆ

ಭದ್ರಾವತಿ ನಗರದ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣ ಹಾಗು ಸಂಗೊಳ್ಳಿ ರಾಯಣ್ಣ ಖಾಸಗಿ ಬಸ್ ನಿಲ್ದಾಣದಿಂದ ರಂಗಪ್ಪ ವೃತ್ತ ಸಂಪರ್ಕಿಸುವ ಹೊಸಸೇತುವೆ ಮಾರ್ಗದ ರಸ್ತೆ ಇದೀಗ ಶ್ರೀ ಕೃಷ್ಣ ದೇವರಾಯ ರಸ್ತೆಯಾಗಿ ನಾಮಕರಣಗೊಂಡು ಭಾನುವಾರ ಉದ್ಘಾಟನೆಗೊಂಡಿತು. 
    ಭದ್ರಾವತಿ: ನಗರದ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣ ಹಾಗು ಸಂಗೊಳ್ಳಿ ರಾಯಣ್ಣ ಖಾಸಗಿ ಬಸ್ ನಿಲ್ದಾಣದಿಂದ ರಂಗಪ್ಪ ವೃತ್ತ ಸಂಪರ್ಕಿಸುವ ಹೊಸಸೇತುವೆ ಮಾರ್ಗದ ರಸ್ತೆ ಇದೀಗ ಶ್ರೀ ಕೃಷ್ಣ ದೇವರಾಯ ರಸ್ತೆಯಾಗಿ ನಾಮಕರಣಗೊಂಡು ಭಾನುವಾರ ಉದ್ಘಾಟನೆಗೊಂಡಿತು. 
    ಮಾಜಿ ಸಚಿವ, ವಿಧಾನಪರಿಷತ್ ಸದಸ್ಯ ಎಂ.ಆರ್ ಸೀತಾರಾಮು ಹಾಗು ಕರ್ನಾಟಕ ರಾಜ್ಯ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದ ಬಳಿ ಅಳವಡಿಸಲಾಗಿರುವ ನಾಮಫಲಕ ಅನಾವರಣಗೊಳಿಸುವ ಮೂಲಕ ಶ್ರೀ ಕೃಷ್ಣ ದೇವರಾಯ ರಸ್ತೆ ಉದ್ಘಾಟಿಸಿದರು. 


    ಬಲಿಜ ಸಮುದಾಯದವರ ಕೋರಿಕೆ ಮೇರೆಗೆ ಈ ಹಿಂದೆ ಶ್ರೀ ಕೃಷ್ಣ ದೇವರಾಯ ರಸ್ತೆ ಹೆಸರು ನಾಮಕರಣಗೊಳಿಸುವ ಸಂಬಂಧ ನಗರಸಭೆಯಲ್ಲಿ ಸಲ್ಲಿಕೆಯಾಗಿದ್ದ ಪ್ರಸ್ತಾವನೆಗೆ ನಗರಸಭೆ ಎಲ್ಲಾ ಸದಸ್ಯರು ಪಕ್ಷ ಬೇಧ ಮರೆತು ಒಮ್ಮತ ಸೂಚಿಸಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದು, ಸರ್ಕಾರದಿಂದ ಅನುಮೋದನೆಗೊಂಡಿದೆ. 
    ನಗರಸಭೆ ಉಪಾಧ್ಯಕ್ಷ ಮಣಿ ಎಎನ್‌ಎಸ್, ಸದಸ್ಯರಾದ ಬಿ.ಟಿ ನಾಗರಾಜ್, ಬಸವರಾಜ ಬಿ. ಆನೇಕೊಪ್ಪ, ಅನುಸುಧ ಮೋಹನ್ ಪಳನಿ, ಕೆ. ಸುದೀಪ್ ಕುಮಾರ್, ಬಲಿಜ ಸಮಾಜದ ತಾಲೂಕು ಅಧ್ಯಕ್ಷ ಎಚ್.ಆರ್ ರಂಗನಾಥ್, ಉಪಾಧ್ಯಕ್ಷರಾದ ಪದ್ಮ ಹನುಮಂತಪ್ಪ, ಎಸ್.ಬಿ ಜಂಗಮಪ್ಪ, ಪ್ರಧಾನ ಕಾರ್ಯದರ್ಶಿ ಪಿ. ಸತೀಶ್, ಸಹ ಕಾರ್ಯದರ್ಶಿ ಟಿ. ರಮೇಶ್, ಮುಖಂಡರಾದ ಬಿ. ಗಂಗಾಧರ್, ಟಿ.ಡಿ ಶಶಿಕುಮಾರ್, ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಬಿ.ಕೆ ಶಿವಕುಮಾರ್ ಸೇರಿದಂತೆ  ಇನ್ನಿತರರು ಉಪಸ್ಥಿತರಿದ್ದರು.