ಮಂಗಳವಾರ, ಸೆಪ್ಟೆಂಬರ್ 2, 2025

ನಿವಾಸಿಗಳಿಗೆ ಮೂಲ ಸೌಕರ್ಯ ಕಲ್ಪಿಸಿ, ಆಸ್ಪತ್ರೆ-ಪೊಲೀಸ್ ಠಾಣೆ ನಿರ್ಮಿಸಿ

ಡಿಎಸ್‌ಎಸ್ ನೇತೃತ್ವದಲ್ಲಿ ತಾಲೂಕು ಕಛೇರಿ ಮುಂಭಾಗ ಪ್ರತಿಭಟನೆ : ಮನವಿ 

ನಿವಾಸಿಗಳಿಗೆ ಕುಡಿಯುವ ನೀರು, ರಸ್ತೆ ಸೇರಿದಂತೆ ಮೂಲ ಸೌಕರ್ಯಗಳನ್ನು ಕಲ್ಪಿಸಿ ಕೊಡುವುದು, ಸರ್ಕಾರಿ ಆಸ್ಪತ್ರೆ ಮತ್ತು ಪೊಲೀಸ್ ಠಾಣೆ ನಿರ್ಮಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ದಲಿತ ಸಂಘ ಸಮಿತಿ(ಸಂಯೋಜಕ) ನೇತೃತ್ವದಲ್ಲಿ ಭದ್ರಾವತಿ  ತಾಲೂಕು ಕಛೇರಿ ಮುಂಭಾಗ ಪ್ರತಿಭಟನೆ ನಡೆಸುವ ಮೂಲಕ ತಹಸೀಲ್ದಾರ್ ಪರುಸಪ್ಪ ಕುರುಬರ ಅವರಿಗೆ ಮನವಿ ಸಲ್ಲಿಸಲಾಯಿತು.  
    ಭದ್ರಾವತಿ : ನಿವಾಸಿಗಳಿಗೆ ಕುಡಿಯುವ ನೀರು, ರಸ್ತೆ ಸೇರಿದಂತೆ ಮೂಲ ಸೌಕರ್ಯಗಳನ್ನು ಕಲ್ಪಿಸಿ ಕೊಡುವುದು, ಸರ್ಕಾರಿ ಆಸ್ಪತ್ರೆ ಮತ್ತು ಪೊಲೀಸ್ ಠಾಣೆ ನಿರ್ಮಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ದಲಿತ ಸಂಘ ಸಮಿತಿ(ಸಂಯೋಜಕ) ನೇತೃತ್ವದಲ್ಲಿ ತಾಲೂಕು ಕಛೇರಿ ಮುಂಭಾಗ ಪ್ರತಿಭಟನೆ ನಡೆಸುವ ಮೂಲಕ ತಹಸೀಲ್ದಾರ್ ಪರುಸಪ್ಪ ಕುರುಬರ ಅವರಿಗೆ ಮನವಿ ಸಲ್ಲಿಸಲಾಯಿತು. 
    ತಾಲೂಕಿನ ಕಸಬಾ-೨ನೇ ಹೋಬಳಿ, ಹುಣಸೆಕಟ್ಟೆ ಬಿ.ಬಿ ಮೈನ್ಸ್ ಸರ್ವೆ ನಂ.೮ ಮತ್ತು ೧೪ರಲ್ಲಿನ ಸರ್ಕಾರಿ ಜಮೀನಿನಲ್ಲಿ ಸುಮಾರು ೧೦೦ ಮನೆಗಳಿದ್ದು, ಈ ಪೈಕಿ ಕೆಲವರಿಗೆ ಮಾತ್ರ ಹಕ್ಕು ಪತ್ರ ನೀಡಿದ್ದು, ಇನ್ನೂ ಕೆಲವರಿಗೆ ಹಕ್ಕು ಪತ್ರ ವಿತರಣೆ ಬಾಕಿ ಇರುತ್ತದೆ. ಹಕ್ಕು ಪತ್ರ ನೀಡಿರುವ ಮನೆಗಳಿಗೆ ಕುಡಿಯುವ ನೀರು, ವಿದ್ಯುತ್ ಮತ್ತು ರಸ್ತೆ ನಿರ್ಮಾಣ ಸೇರಿದಂತೆ ಇನ್ನಿತರ ಮೂಲ ಸೌಕರ್ಯಗಳನ್ನು ತಕ್ಷಣ ಕಲ್ಪಿಸಿಕೊಡುವಂತೆ ಆಗ್ರಹಿಸಲಾಯಿತು. 
    ಗ್ರಾಮದಲ್ಲಿ ಸರ್ಕಾರಿ ಆಸ್ಪತ್ರೆ ಮತ್ತು ಪೊಲೀಸ್ ಠಾಣೆ ಅಗತ್ಯತೆ ಹೆಚ್ಚಾಗಿದ್ದು, ಈಗಾಗಲೇ ಮೀಸಲಿರಿಸಿರುವ ಜಾಗದಲ್ಲಿ ತಕ್ಷಣ ಗ್ರಾಮ ಪಂಚಾಯಿತಿ ವತಿಯಿಂದ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಯಿತು. 
    ತಾಲೂಕು ಕಸಬಾ ಹೋಬಳಿ ಕಾಳಿಂಗನಹಳ್ಳಿ ಸರ್ವೆ ನಂ.೧ರಲ್ಲಿ ಒಟ್ಟು ೯೭ ಎಕರೆ ಜಮೀನಿದ್ದು, ಈ ಪೈಕಿ ೬೦ ಎಕರೆ ಜಮೀನಿಗೆ ಸಾಗುವಳಿ ಚೀಟಿ ಸರ್ಕಾರದಿಂದ ನೀಡಲಾಗಿದೆ. ಆದರೆ ಇದುವರೆಗೂ ಖಾತೆ ಪಹಣಿ ಮತ್ತು ಮ್ಯುಟೇಷನ್ ದಾಖಲೆ ಮಾಡಿರುವುದಿಲ್ಲ. ತಕ್ಷಣ ಸಾಗುವಳಿ ಚೀಟಿದಾರರಿಗೆ ಖಾತೆ ಪಹಣಿ ಮತ್ತು ಮ್ಯುಟೇಷನ್ ದಾಖಲೆ ನೀಡಬೇಕು. ಉಳಿದಿರುವ ೩೭ ಎಕರೆ ಜಮೀನು ಇತ್ತೀಚೆಗೆ ಅರಣ್ಯವೆಂದು ನಮೂದಿಸಿ ಸಾಗುವಳಿದಾರರಿಗೆ ವಂಚಿಸಲಾಗಿದೆ. ಈ ಸಂಬಂಧ ತನಿಖೆ ನಡೆಸಿ ಸಾಗುವಳಿದಾರರಿಗೆ ಅನುಕೂಲ ಕಲ್ಪಿಸಿಕೊಡುವಂತೆ ಒತ್ತಾಯಿಸಲಾಯಿತು. 
    ತಾಲೂಕಿನಲ್ಲಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಹಾಗು ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರು ಸುಮಾರು ೬೦-೭೦ ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಆದರೆ ಇವರ ಪಹಣಿಗಳನ್ನು ವಜಾ ಮಾಡಿ ವಂಚಿಸಲಾಗಿದೆ. ಈ ಹಿನ್ನಲೆಯಲ್ಲಿ ಸರ್ಕಾರ ಜಮೀನು ಸಂಬಂಧ ಪುನರ್ ಪರಿಶೀಲಿಸಿ ಖಾತೆ ಪಹಣಿ ಮತ್ತು ಮ್ಯುಟೇಷನ್ ಮಾಡಿಕೊಡುವ ಮೂಲಕ ಅವರ ಸಂಕಷ್ಟಕ್ಕೆ ಸ್ಪಂದಿಸುವಂತೆ ಕೋರಲಾಯಿತು.  
    ಒಟ್ಟಾರೆ ಜಮೀನು ಸಂಬಂಧ ತಾಲೂಕಿನಲ್ಲಿ ಇನ್ನೂ ಹಲವಾರು ಸಮಸ್ಯೆಗಳಿದ್ದು, ಅವುಗಳನ್ನು ತಕ್ಷಣ ಈಡೇರಿಸುವಂತೆ ಆಗ್ರಹಿಸಲಾಯಿತು. 
    ಪ್ರತಿಭಟನೆಯಲ್ಲಿ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಯೋಜಕರಾದ ಆರ್.ಜಗದೀಶ್, ವಿರೂಪಾಕ್ಷಪ್ಪ, ರಾಜ್ಯ ಸಮಿತಿ ಸದಸ್ಯ ಚೌಡಪ್ಪ, ಗ್ರಾಮ ಪಂಚಾಯಿತಿ ಸದಸ್ಯರಾದ ಸಂತೋಷ್, ಗಂಗಾಧರ್, ಅಣ್ಣಾದೊರೈ, ಶಿವಕುಮಾರ್, ಗಣೇಶ್ ಸೇರಿದಂತೆ ಇನ್ನಿತರ ಮುಖಂಡರು, ನಿವಾಸಿಗಳು ಪಾಲ್ಗೊಂಡಿದ್ದರು. 

ಮಕ್ಕಳನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸಿ : ಎ.ಟಿ ರವಿ

ಭದ್ರಾವತಿ ಸರ್ಕಾರಿ ಬಾಲಿಕಾ ಪ್ರೌಢಶಾಲೆಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ ಏರ್ಪಡಿಸಲಾಗಿದ್ದ ಜ್ಞಾನ ವಿಕಾಸ ಕಾರ್ಯಕ್ರಮ ನ್ಯಾಯವಾದಿ ಎ.ಟಿ ರವಿ ಉದ್ಘಾಟಿಸಿದರು. 
    ಭದ್ರಾವತಿ: ಸಮಾಜದಲ್ಲಿ ಮಕ್ಕಳನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸುವ ಹೊಣೆಗಾರಿಕೆ ಪ್ರತಿಯೊಬ್ಬ ಪೋಷಕರ ಜವಾಬ್ದಾರಿಯಾಗಿದೆ ಎಂದು ನ್ಯಾಯವಾದಿ ಎ.ಟಿ ರವಿ ಹೇಳಿದರು. 
   ಅವರು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ ಏರ್ಪಡಿಸಲಾಗಿದ್ದ ಜ್ಞಾನ ವಿಕಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಸಮಾಜವನ್ನು ಸ್ವಾಸ್ಥ್ಯವಾಗಿಡಲು ಹಾಗು ಮುಂದಿನ ಆದರ್ಶ ಪ್ರಜೆಗಳಾಗಿ ರೂಪಗೊಳ್ಳಲು ಮಕ್ಕಳು ಮಾದಕ ವಸ್ತುಗಳಿಂದ ದೂರವಿರುವುದರ ಜೊತೆಗೆ ದೇಶದ ಸಂವಿಧಾನದ ಆಶಯಗಳನ್ನು ಅರಿತು, ಮಾನವೀಯ ಮೌಲ್ಯಗಳನ್ನು ರೂಡಿಸಿಕೊಳ್ಳಬೇಕಿದೆ ಎಂದರು.
     ಜ್ಞಾನ ವಿಕಾಸ ಸಮನ್ವಯಧಿಕಾರಿ ನೇತ್ರಾವತಿ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ದೇಶದ ಪ್ರಮುಖ ಧಾರ್ಮಿಕ ಕ್ಷೇತ್ರವಾಗಿದ್ದರೂ ಸಹ ಧರ್ಮಬೇದವಿಲ್ಲದೆ ಸರ್ವಧರ್ಮಿಯರಿಗೂ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಮಧ್ಯವರ್ಜನ ಶಿಬಿರ, ಪರಿಸರ ಜಾಗೃತಿಗಳಂತಹ ಹಲವಾರು ಯೋಜನೆಗಳನ್ನು ಜಾರಿ ಮಾಡಿದ್ದು, ಅದರ ಭಾಗವಾಗಿ ಜ್ಞಾನ ವಿಕಾಸ ಕಾರ್ಯಕ್ರಮ ವನ್ನು ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದು, ಇದರ  ಸದುಪಯೋಗ ವಿದ್ಯಾರ್ಥಿಗಳು ಪಡೆದುಕೊಳ್ಳಬೇಕೆಂದರು. 
ಸರ್ಕಾರಿ ಬಾಲಿಕಾ ಫ್ರೌಡಶಾಲೆಯ ಶಿಕ್ಷಕ ರವೀಂದ್ರ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿನಿ ಜಾನ್ಸಿ ಪ್ರಾರ್ಥಿಸಿ, ಶಿಕ್ಷಕಿ ಮಂಜುಳಾ ಸ್ವಾಗತಿಸಿ, ಸೇವಾ ಪ್ರತಿನಿಧಿ ಆರ್. ಮಂಜುಳಾ ಕಾರ್ಯಕ್ರಮ ನಿರೂಪಿಸಿದರು. 

ಸೋಮವಾರ, ಸೆಪ್ಟೆಂಬರ್ 1, 2025

ಸೆ.೩ರಂದು ಸರ್ವಸದಸ್ಯರ ವಾರ್ಷಿಕ ಮಹಾಸಭೆ

    ಭದ್ರಾವತಿ : ಮೈಸೂರು ಕಾಗದ ಕಾರ್ಖಾನೆ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ೩೬ನೇ ಸರ್ವಸದಸ್ಯರ ವಾರ್ಷಿಕ ಮಹಾಸಭೆ ಸೆ.೩ರ ಬುಧವಾರ ಬೆಳಿಗ್ಗೆ ೧೦ ಗಂಟೆಗೆ ಕಾಗದನಗರದ ಸೀತಾರಾಮ ಸಮುದಾಯ ಭವನದಲ್ಲಿ ನಡೆಯಲಿದೆ. 
    ಸಂಘದ ಅಧ್ಯಕ್ಷ ಟಿ.ಜಿ ಬಸವರಾಜಯ್ಯ ಅಧ್ಯಕ್ಷತೆ ವಹಿಸಲಿದ್ದು, ನಗರಸಭೆ ಸದಸ್ಯ ಬಿ.ಕೆ ಮೋಹನ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಸಂಘದ ಲೆಕ್ಕಪತ್ರ ಮಂಡನೆ, ಲೆಕ್ಕ ಪರಿಶೋಧಕರ ನೇಮಕ ಮಾಡಿಕೊಳ್ಳುವುದು, ಹಿಂದಿನ ಅಭಿವೃದ್ಧಿ ಶುಲ್ಕವನ್ನು ಪಾವತಿಸದಿರುವವರಿಗೆ ದಂಡ ಶುಲ್ಕ ವಿಧಿಸುವುದು ಸೇರಿದಂತೆ ಇತ್ಯಾದಿ ವಿಷಯಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಯಲಿವೆ. ಸಭೆಗೆ ಸದಸ್ಯರು ತಪ್ಪದೇ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಕೋರಲಾಗಿದೆ. 

ಭಾರತೀಯ ಉಕ್ಕು ಪ್ರಾಧಿಕಾರಕ್ಕೆ ಸ್ಕೋಪ್ ಶ್ರೇಷ್ಠತಾ ಪ್ರಶಸ್ತಿ : ವಿಐಎಸ್‌ಎಲ್ ಸಂತಸ

ಭಾರತೀಯ ಉಕ್ಕು ಪ್ರಾಧಿಕಾರ(ಸೈಲ್)ಕ್ಕೆ ೨೦೨೨-೨೩ನೇ ಸಾಲಿನ ಸಂಶೋಧನೆ ಮತ್ತು ಅಭಿವೃದ್ಧಿ, ತಂತ್ರಜ್ಞಾನ ಅಭಿವೃದ್ಧಿ ಮತ್ತು ನಾವೀನ್ಯತೆಗಾಗಿ ಪ್ರತಿಷ್ಠಿತ ಸ್ಕೋಪ್(ಎಸ್‌ಸಿಓಪಿಈ) ಶ್ರೇಷ್ಠತಾ ಪ್ರಶಸ್ತಿಯನ್ನು ನವದೆಹಲಿಯಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮುರವರು ಪ್ರದಾನ ಮಾಡಿದರು. 
    ಭದ್ರಾವತಿ : ಭಾರತೀಯ ಉಕ್ಕು ಪ್ರಾಧಿಕಾರ(ಸೈಲ್)ಕ್ಕೆ ೨೦೨೨-೨೩ನೇ ಸಾಲಿನ ಸಂಶೋಧನೆ ಮತ್ತು ಅಭಿವೃದ್ಧಿ, ತಂತ್ರಜ್ಞಾನ ಅಭಿವೃದ್ಧಿ ಮತ್ತು ನಾವೀನ್ಯತೆಗಾಗಿ ಪ್ರತಿಷ್ಠಿತ ಸ್ಕೋಪ್(ಎಸ್‌ಸಿಓಪಿಈ) ಶ್ರೇಷ್ಠತಾ ಪ್ರಶಸ್ತಿಯನ್ನು ನೀಡಲಾಗಿದೆ. ಈ ಹಿನ್ನಲೆಯಲ್ಲಿ ಉಕ್ಕು ಪ್ರಾಧಿಕಾರದ ಘಟಕವಾಗಿರುವ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ(ವಿಐಎಸ್‌ಎಲ್)ಸಂತಸ ವ್ಯಕ್ತಪಡಿಸಿದೆ.
    ನವದೆಹಲಿಯಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಪ್ರಶಸ್ತಿಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮುರವರು ಪ್ರಧಾನ ಮಾಡಿದ್ದು, ಉಕ್ಕು ಪ್ರಾಧಿಕಾರದ ನಿರ್ದೇಶಕ (ತಾಂತ್ರಿಕ, ಯೋಜನೆಗಳು ಮತ್ತು ಕಚ್ಚಾವಸ್ತುಗಳು) ಮನೀಶ್‌ರಾಜ್ ಗುಪ್ತಾ ಪ್ರಶಸ್ತಿ ಸ್ವೀಕರಿಸಿದ್ದಾರೆ. ಈ ಪ್ರಶಸ್ತಿ ಸ್ಥಳೀಯ ಸಂಶೋಧನೆ, ಪ್ರಕ್ರಿಯೆ ನಾವೀನ್ಯತೆ ಮತ್ತು ಸುಸ್ಥಿರ ತಾಂತ್ರಿಕ ಪ್ರಗತಿಗೆ ಉಕ್ಕು ಪ್ರಾಧಿಕಾರದ ಅಚಲ ಬದ್ಧತೆಯನ್ನು ಒತ್ತಿಹೇಳುತ್ತದೆ.
    `ಆತ್ಮನಿರ್ಭರ ಭಾರತ್ ಮತ್ತು ಮೇಕ್ ಇನ್ ಇಂಡಿಯಾ'ದ ದೃಷ್ಟಿಕೋನಕ್ಕೆ ಅನುಗುಣವಾಗಿ, ಸೈಲ್ ಮೌಲ್ಯಾಧಾರಿತ ಉಕ್ಕಿನ ಉತ್ಪಾದನೆಯ ಸರಪಳಿಯಲ್ಲಿ ನಾವೀನ್ಯತೆಯನ್ನು ಮುಂದುವರೆಸಿದೆ ಮತ್ತು ನಿರ್ಣಾಯಕ ಅನ್ವಯಿಕೆಗಳಿಗಾಗಿ ಸುಧಾರಿತ ಉಕ್ಕಿನ ಶ್ರೇಣಿಗಳು ಮತ್ತು ತಂತ್ರಜ್ಞಾನಗಳ ಸ್ಥಳೀಯ ಅಭಿವೃದ್ಧಿಯ ಮೇಲೆ ಕೇಂದ್ರೀಕರಿಸಿದೆ, ಇದರಿಂದಾಗಿ ಆಮದು ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ. ರೈಲ್ವೆ, ರಕ್ಷಣೆ ಮತ್ತು ಮೂಲಸೌಕರ್ಯದಂತಹ ಕಾರ್ಯತಂತ್ರದ ವಲಯಗಳಿಗೆ ಉತ್ತಮ ಗುಣಮಟ್ಟದ ಉಕ್ಕನ್ನು ಪೂರೈಸುವ ಮೂಲಕ, ರಾಷ್ಟ್ರೀಯ ಪ್ರಾಮುಖ್ಯತೆಯ ಯೋಜನೆಗಳು ಮತ್ತು ಕೈಗಾರಿಕಾ ಬೆಳವಣೆಗೆಗೆ ಅನುವುಮಾಡಿಕೊಡುವ ಮೂಲಕ ಉಕ್ಕು ಪ್ರಾಧಿಕಾರ ರಾಷ್ಟ್ರ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. 
    ಸುಧಾರಿತ ಆರೋಗ್ಯ ಮೇಲ್ವಿಚಾರಣಾ ವ್ಯವಸ್ಥೆಗಳು ಮತ್ತು ಕಾಯಿಲ್ ಯಾರ್ಡ್ ನಿರ್ವಹಣಾ ವ್ಯವಸ್ಥೆಗಳು ಸೇರಿದಂತೆ ಮುಂದಿನ ಪೀಳಿಗೆಯ ಪರಿಹಾರಗಳನ್ನು ಅಳವಡಿಸಿಕೊಂಡಿದೆ. ಅಲ್ಲದೆ ತ್ಯಾಜ್ಯ ಮರುಬಳಕೆ, ವೃತ್ತಾಕಾರದ ಆರ್ಥಿಕ ಉಪಕ್ರಮಗಳನ್ನು ಮತ್ತು ನವೀಕರಿಸಬಹುದಾದ ಇಂಧನ ಮೂಲಗಳ ಏಕೀಕರಣದ ಮೂಲಕ ಸುಸ್ಥಿರತೆಯ ಮೇಲೆ ಬಲವಾದ ಗಮನವನ್ನು ಹೊಂದಿದೆ ಎಂದು ಪ್ರಾಧಿಕಾರದ ಕಾರ್ಯ ವೈಖರಿ ವಿವರಿಸುವ ಮೂಲಕ ವಿಐಎಸ್‌ಎಲ್ ಕಾರ್ಖಾನೆ ಮೆಚ್ಚುಗೆ ವ್ಯಕ್ತಪಡಿಸಿದೆ. 
    `ಈ ಪ್ರಶಸ್ತಿಯು ನಮ್ಮ ಸಂಶೋಧನೆ ಮತ್ತು ಅಭಿವೃದ್ಧಿ ತಂಡಗಳ ನಿರಂತರ ಶ್ರೇಷ್ಠತೆಯ ಅನ್ವೇಷಣೆ ಮತ್ತು ಪ್ರಾಧಿಕಾರದ ಎಲ್ಲಾ ಘಟಕಗಳಲ್ಲಿನ ನಾವೀನ್ಯತೆ ಮತ್ತು ಕಾರ್ಯಾಚರಣೆಗಳ ನಡುವಿನ ಆಳವಾದ ಸಹಶಕ್ತಿಯನ್ನು ಪ್ರತಿಬಿಂಬಿಸುತ್ತದೆ. ಇದು ದೇಶಕ್ಕೆ ಸೇವೆ ಸಲ್ಲಿಸುವ ಮತ್ತು ಜಾಗತಿಕವಾಗಿ ಸ್ಪರ್ಧಿಸುವ ಭವಿಷ್ಯಕ್ಕೆ ಸಿದ್ಧವಾಗಿರುವ ಉಕ್ಕಿನ ಉದ್ಯಮವನ್ನು ನಿರ್ಮಿಸುವ ನಮ್ಮ ಬದ್ಧತೆಯನ್ನು ಪುನರುಚ್ಛರಿಸುತ್ತದೆ' ಎಂದು ಪ್ರಾಧಿಕಾರದ ಅಧ್ಯಕ್ಷರಾದ ಅಮರೇಂದು ಪ್ರಕಾಶ್‌ರವರು ಪ್ರಶಸ್ತಿ ಕುರಿತು ಪ್ರತಿಕ್ರಿಯಿಸಿರುವುದು ಪ್ರಾಧಿಕಾರದ ಎಲ್ಲಾ ಘಟಕಗಳಿಗೆ ಮತ್ತಷ್ಟು ಚೈತನ್ಯ ತಂದಿದೆ ಎಂದು ವಿಐಎಸ್‌ಎಲ್ ಕಾರ್ಖಾನೆ ತನ್ನ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ. 

ಧರ್ಮಸ್ಥಳ ಸತ್ಯಯಾತ್ರೆಯಲ್ಲಿ ಉಕ್ಕಿನ ನಗರದ ಜೆಡಿಎಸ್ ಮುಖಂಡರು ಭಾಗಿ

ಧರ್ಮಸ್ಥಳ ಗ್ರಾಮದಲ್ಲಿ ಕೊಲೆ ಹಾಗು ಅತ್ಯಾಚಾರಕ್ಕೆ ಒಳಗಾದ ನೂರಾರು ಶವ ಹೂಳಲಾಗಿದೆ ಎಂಬ ದೂರಿನ ನೆಪದಲ್ಲಿ ಕ್ಷೇತ್ರದ ಅಪಪ್ರಚಾರ ನಡೆದಿದೆ ಎಂದು ಆರೋಪಿಸಿ ಜಾತ್ಯಾತೀತ ಜನತಾ ದಳ ವತಿಯಿಂದ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಸತ್ಯಯಾತ್ರೆಯಲ್ಲಿ ಭದ್ರಾವತಿ ವಿಧಾನಸಭಾ ಕ್ಷೇತ್ರದ ಪಕ್ಷದ ಪ್ರಮುಖರು ಪಾಲ್ಗೊಂಡಿದ್ದರು. 
    ಭದ್ರಾವತಿ : ಧರ್ಮಸ್ಥಳ ಗ್ರಾಮದಲ್ಲಿ ಕೊಲೆ ಹಾಗು ಅತ್ಯಾಚಾರಕ್ಕೆ ಒಳಗಾದ ನೂರಾರು ಶವ ಹೂಳಲಾಗಿದೆ ಎಂಬ ದೂರಿನ ನೆಪದಲ್ಲಿ ಕ್ಷೇತ್ರದ ಅಪಪ್ರಚಾರ ನಡೆದಿದೆ ಎಂದು ಆರೋಪಿಸಿ ಜಾತ್ಯಾತೀತ ಜನತಾ ದಳ ವತಿಯಿಂದ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಸತ್ಯಯಾತ್ರೆಯಲ್ಲಿ ವಿಧಾನಸಭಾ ಕ್ಷೇತ್ರದ ಪಕ್ಷದ ಪ್ರಮುಖರು ಪಾಲ್ಗೊಂಡಿದ್ದರು. 
    ಪಕ್ಷದ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಪಾಲ್ಗೊಂಡಿದ್ದ ಪಕ್ಷದ ಸ್ಥಳೀಯ ಮುಖಂಡರಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಶಾರದ ಅಪ್ಪಾಜಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ, ಪಕ್ಷದ ನಗರ ಘಟಕದ ಅಧ್ಯಕ್ಷ ಆರ್. ಕುರುಣಾಮೂರ್ತಿ, ನ್ಯಾಯವಾದಿ ಟಿ. ಚಂದ್ರೇಗೌಡ, ನಗರಸಭೆ ಮಾಜಿ ಅಧ್ಯಕ್ಷೆ ವಿಶಾಲಾಕ್ಷಿ, ಶಿಮುಲ್ ಮಾಜಿ ಅಧ್ಯಕ್ಷ ಡಿ. ಆನಂದ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಧರ್ಮೇಗೌಡ, ಭಾಗ್ಯಮ್ಮ, ಗ್ರಾಮ ಪಂಚಾಯಿತಿ, ನಗರಸಭೆ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಪಕ್ಷದ ಜನಪ್ರತಿನಿಧಿಗಳು, ಇನ್ನಿತರರು ಶ್ರೀ ಮಂಜುನಾಥ ಸ್ವಾಮಿ ದರ್ಶನ ಪಡೆದು ನಂತರ ಶ್ರೀ ಕ್ಷೇತ್ರದ ಧರ್ಮಾಧಿಕಾರಿ, ರಾಜ್ಯಸಭಾ ಸದಸ್ಯ ಡಾ. ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿ ಸತ್ಯಯಾತ್ರೆ ಕುರಿತು ವಿವರಿಸಿದರು. 
 

ರೋಟರಿ ಕ್ಲಬ್ ೨೦೨೪-೨೫ನೇ ಸಾಲಿನ ಸಾಧನೆಗೆ ಪ್ರಶಸ್ತಿ

ಭದ್ರಾವತಿ ನಗರದ ರೋಟರಿ ಕ್ಲಬ್ ಕಳೆದ ೨೦೨೪-೨೫ನೇ ಸಾಲಿನಲ್ಲಿ ಅಂದಿನ ಅಧ್ಯಕ್ಷರಾಗಿದ್ದ ರಾಘವೇಂದ್ರ ಉಪಾಧ್ಯಾಯರವರ ನೇತೃತ್ವದಲ್ಲಿ ಉತ್ತಮ ಸಾಧನೆ ಮಾಡಿದ್ದು, ಇದನ್ನು ಗುರುತಿಸಿ ಉಡುಪಿ ಗುಂಡ್ಮಿ(ಸಾಸ್ತಾನ್)ಯಲ್ಲಿ ಜರುಗಿದ ರೋಟರಿ ಅಂತರಾಷ್ಟ್ರೀಯ ಸಮ್ಮೇಳನದಲ್ಲಿ ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು. 
    ಭದ್ರಾವತಿ : ನಗರದ ರೋಟರಿ ಕ್ಲಬ್ ಕಳೆದ ೨೦೨೪-೨೫ನೇ ಸಾಲಿನಲ್ಲಿ ಅಂದಿನ ಅಧ್ಯಕ್ಷರಾಗಿದ್ದ ರಾಘವೇಂದ್ರ ಉಪಾಧ್ಯಾಯರವರ ನೇತೃತ್ವದಲ್ಲಿ ಉತ್ತಮ ಸಾಧನೆ ಮಾಡಿದ್ದು, ಇದನ್ನು ಗುರುತಿಸಿ ಉಡುಪಿ ಗುಂಡ್ಮಿ(ಸಾಸ್ತಾನ್)ಯಲ್ಲಿ ಜರುಗಿದ ರೋಟರಿ ಅಂತರಾಷ್ಟ್ರೀಯ ಸಮ್ಮೇಳನದಲ್ಲಿ ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು. 
    ರಾಘವೇಂದ್ರ ಉಪಾಧ್ಯಾಯರವರ ನೇತೃತ್ವದ ತಂಡ ಅವರ ಅವಧಿಯಲ್ಲಿ ಉತ್ತಮ ಹಣಕಾಸಿನ ನಿರ್ವಹಣೆ ಜೊತೆಗೆ ಹಲವಾರು ಸಾಮಾಜಿಕ ಸೇವಾ ಕಾರ್ಯಗಳನ್ನು ಯಶಸ್ವಿಯಾಗಿ ಕೈಗೊಂಡಿದ್ದು, ಮಹಿಳೆಯರು ಮತ್ತು ಮಕ್ಕಳ ಆರೋಗ್ಯ, ಹಸಿರು ಜಾಗೃತಿ, ರಸ್ತೆ ಸಪ್ತಾಹ ಸುರಕ್ಷತೆ, ಪರಿಸರ ಸಂರಕ್ಷಣೆ ಸೇರಿದಂತೆ ಇನ್ನಿತರ ಸೇವಾ ಕಾರ್ಯಗಳು ಒಳಗೊಂಡಿವೆ. ಅಲ್ಲದೆ ವಿಭಿನ್ನತೆಯಿಂದ ಕೂಡಿರುವ ಕಾರ್ಯ ಯೋಜನೆಗಳನ್ನು ರೂಪಿಸುವ ಮೂಲಕ ಗಮನ ಸೆಳೆದಿತ್ತು. 
    ಪ್ರಶಸ್ತಿಯನ್ನು ರಾಘವೇಂದ್ರ ಉಪಾಧ್ಯಾಯರವರ ತಂಡ ಸ್ವೀಕರಿಸಿತು. ಪ್ರಮುಖರಾದ ಮಾಜಿ ಜಿಲ್ಲಾ ಗೌರ್‍ನರ್ ದೇವಾನಂದ್, ಜಿಲ್ಲಾ ಗೌರ್‍ನರ್ ಪಾಲಾಕ್ಷ, ನಾಗರಾಜ್, ವಸಂತ ಹೋಬಳಿದಾರ್ ಮತ್ತು ಅಭಿನಂದನ್ ಶೆಟ್ಟಿ ಉಪಸ್ಥಿತರಿದ್ದರು. 
    ನಗರದ ರೋಟರಿ ಕ್ಲಬ್ ಪ್ರಮುಖರಾದ ಪ್ರಸಕ್ತ ಸಾಲಿನ ಅಧ್ಯಕ್ಷ ಶಿವಕುಮಾರ್, ಕೆ.ಎಚ್ ತೀರ್ಥಯ್ಯ, ಕೂಡ್ಲಿಗೆರೆ ಹಾಲೇಶ್, ದುಷ್ಯಂತ್ ರಾಜ್ ಮತ್ತು ನಿರಂಜನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ಭಾನುವಾರ, ಆಗಸ್ಟ್ 31, 2025

ಬಲಿಜ ಸಮುದಾಯದವರು ಸಂಘಟಿತಗೊಂಡಲ್ಲಿ ಮಾತ್ರ ಭವಿಷ್ಯದಲ್ಲಿ ಬಲಾಢ್ಯಗೊಳ್ಳಲು ಸಾಧ್ಯ : ಎಂ.ಆರ್ ಸೀತಾರಾಮು

ಭದ್ರಾವತಿ ಹಳೇನಗರದ ಬಸವೇಶ್ವರವೃತ್ತದ ಬಲಿಜ ಸಮುದಾಯ ಭವನದಲ್ಲಿ ತಾಲೂಕು ಬಲಿಜ ಸಂಘ ವತಿಯಿಂದ ಭಾನುವಾರ ಆಯೋಜಿಸಲಾಗಿದ್ದ ಕೈವಾರ ಸದ್ಗುರು ಯೋಗಿನಾರೇಯಣ ತಾತಯ್ಯನವರ ೧೯೦ನೇ ಜಯಂತ್ಯೋತ್ಸವ ಕಾರ್ಯಕ್ರಮ ಮಾಜಿ ಸಚಿವ, ವಿಧಾನ ಪರಿಷತ್ ಸದಸ್ಯ ಎಂ.ಆರ್ ಸೀತಾರಾಮು ಉದ್ಘಾಟಿಸಿ ಮಾತನಾಡಿದರು. 
    ಭದ್ರಾವತಿ : ಬಲಿಜ ಸಮುದಾಯದವರು ಸಂಘಟಿತಗೊಂಡಲ್ಲಿ ಮಾತ್ರ ಭವಿಷ್ಯದಲ್ಲಿ ಬಲಾಢ್ಯಗೊಳ್ಳಲು ಸಾಧ್ಯ. ಇದನ್ನು ಪ್ರತಿಯೊಬ್ಬರು ಅರ್ಥಮಾಡಿಕೊಂಡು ಸಂಘಟನೆಯಲ್ಲಿ ಮುನ್ನಡೆಯಬೇಕೆಂದು ಮಾಜಿ ಸಚಿವ, ವಿಧಾನ ಪರಿಷತ್ ಸದಸ್ಯ ಎಂ.ಆರ್ ಸೀತಾರಾಮು ಹೇಳಿದರು. 
    ಹಳೇನಗರದ ಬಸವೇಶ್ವರವೃತ್ತದ ಬಲಿಜ ಸಮುದಾಯ ಭವನದಲ್ಲಿ ತಾಲೂಕು ಬಲಿಜ ಸಂಘ ವತಿಯಿಂದ ಭಾನುವಾರ ಆಯೋಜಿಸಲಾಗಿದ್ದ ಕೈವಾರ ಸದ್ಗುರು ಯೋಗಿನಾರೇಯಣ ತಾತಯ್ಯನವರ ೧೯೦ನೇ ಜಯಂತ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 
    ಪ್ರತಿಭಾವಂತರು, ಬುದ್ದಿವಂತರು ಇರುವ ಬಲಿಜ ಸಮುದಾಯದಲ್ಲಿ ಒಗ್ಗಟ್ಟಿನ ಕೊರತೆ ಇದೆ. ಇದನ್ನು ಸರಿಪಡಿಸಿಕೊಂಡಲ್ಲಿ ಮಾತ್ರ ಸಮಾಜ ಬಲಾಢ್ಯವಾಗಿ ಬೆಳೆಯಲು ಸಾಧ್ಯ. ಬಲಿಜ ಸಮುದಾಯದವರು ಯಾವುದೇ ಪಕ್ಷದಲ್ಲಿರಲಿ, ಯಾವುದೇ ಕ್ಷೇತ್ರದಲ್ಲಿರಲಿ, ಯಾವುದೇ ಹುದ್ದೆಯಲ್ಲಿರಲಿ  ಅವರನ್ನು ಸಂಘಟನೆ ಮೂಲಕ ಪ್ರೋತ್ಸಾಹಿಸಿ ಬೆಂಬಲಿಸುವ ಮೂಲಕ ಒಗ್ಗಟ್ಟು ಪ್ರದರ್ಶಿಸಬೇಕು. ಆ ಮೂಲಕ ಸಮುದಾಯಕ್ಕೆ ಉತ್ತಮ ಸಂದೇಶ ನೀಡಬೇಕೆಂದರು. 
    ರಾಜಕಾರಣದಲ್ಲಿ ಹಲವಾರು ಜಾತಿಯವರಿದ್ದಾರೆ. ಆಯಾ ಜಾತಿಯ ರಾಜಕಾರಣಿಗಳು ಆಯಾ ಸಮಾಜದ ಮೇಲೆ ಪ್ರೀತಿ, ವಿಶ್ವಾಸದ ಮೂಲಕ ಅಭಿವೃದ್ದಿಗೆ ಸಾಕಷ್ಟು ಕೊಡುಗೆಗಳನ್ನು ನೀಡುತ್ತಾ ಬಂದಿದ್ದಾರೆ. ಈ ನಿಟ್ಟಿನಲ್ಲಿ ನಮ್ಮ ಸಮುದಾಯದ ನಾಯಕರು ರಾಜಕೀಯವಾಗಿ ಹೆಚ್ಚು ಹೆಚ್ಚಾಗಿ ಬೆಳೆಯಬೇಕು. ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ನಗರಸಭೆ, ಪಟ್ಟಣ ಪಂಚಾಯಿತಿ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ನಮ್ಮ ಸಮುದಾಯದವರು ಪ್ರತಿನಿಧಿಸಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಮ್ಮನ್ನು ಪ್ರತಿನಿಧಿಸುವ ವ್ಯಕ್ತಿ ಇದ್ದಾಗ ಮಾತ್ರ ಸಮಾಜದ ಏಳಿಗೆ ಸಾಧ್ಯ ಎಂದರು. 
    ಈ ಕ್ಷೇತ್ರದಲ್ಲಿನ ಬಲಿಜ ಸಮುದಾಯದವರ ಸಮಸ್ಯೆಗಳಿಗೆ ಶಾಸಕ ಬಿ.ಕೆ ಸಂಗಮೇಶ್ವರ್ ಮತ್ತು ಅವರ ಕುಟುಂಬ ಸದಸ್ಯರು ಹೆಚ್ಚಿನ ರೀತಿಯಲ್ಲಿ ಸ್ಪಂದಿಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಭವಿಷ್ಯದಲ್ಲಿ ಸಮುದಾಯದವರು ಶಾಸಕರು ಮತ್ತು ಅವರ ಕುಟುಂಬ ಸದಸ್ಯರನ್ನು ಬೆಂಬಲಿಸಲು ಮುಂದಾಗುವುದು ಸೂಕ್ತ ಎಂದರು. 
     ನಗರಸಭೆ ಹಿರಿಯ ಸದಸ್ಯ ಬಿ.ಕೆ ಮೋಹನ್ ಮಾತನಾಡಿ, ಕ್ಷೇತ್ರದಲ್ಲಿ ಬಲಿಜ ಸಮುದಾಯದ ಅಭಿವೃದ್ದಿಗೆ ಶಾಸಕರು ಸಾಕಷ್ಟು ಶ್ರಮಿಸಿದ್ದಾರೆ. ಎಂ.ಆರ್ ಸೀತಾರಾಮು ಅವರು ಸಹ ತಮಗೆ ಲಭ್ಯವಿರುವ ಅನುದಾನ ಕ್ಷೇತ್ರಕ್ಕೆ ನೀಡಿದ್ದಾರೆ. ಶ್ರೀಕೃಷ್ಣ ದೇವರಾಯ ರಸ್ತೆ ಹೆಸರು ನಾಮಕರಣಗೊಳಿಸುವಲ್ಲಿ ಪಕ್ಷತೀತವಾಗಿ ಸಹಕರಿಸಿದ ನಗರಸಭೆ ಎಲ್ಲಾ ಸದಸ್ಯರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.  
    ಶಾಸಕ ಬಿ.ಕೆ ಸಂಗಮೇಶ್ವರ್ ಮಾತನಾಡಿ, ಕೈವಾರ ತಾತಯ್ಯನವರ ಆದರ್ಶ ಗುಣಗಳನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಬೇಕು. ಸಮುದಾಯದ ಅಭಿವೃದ್ದಿಗಾಗಿ ನಾನು ಹಾಗೂ ನನ್ನ ಕುಟುಂಬದವರು ಸದಾ ನಿಮ್ಮೊಂದಿಗಿರುವುದಾಗಿ ಭರವಸೆ ನೀಡಿದರು. 
    ಬಲಿಜ ಸಂಘದ ಅಧ್ಯಕ್ಷ ಎಚ್.ಆರ್ ರಂಗನಾಥ್ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು. ನಗರಸಭೆ ಉಪಾಧ್ಯಕ್ಷ ಮಣಿ ಎಎನ್‌ಎಸ್, ಸದಸ್ಯರಾದ ಚನ್ನಪ್ಪ, ವಿ. ಕದಿರೇಶ್, ಬಸವರಾಜ ಬಿ. ಆನೇಕೊಪ್ಪ, ಅನುಸುಧ ಮೋಹನ್ ಪಳನಿ, ಕೆ. ಸುದೀಪ್ ಕುಮಾರ್, ಅನುಪಮ ಚನ್ನೇಶ್, ಮಾಜಿ ಸದಸ್ಯ ಕರಿಯಪ್ಪ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಿ.ಕೆ ಶಿವಕುಮಾರ್, ಮಾಜಿ ಉಪ ಮೇಯರ್ ಮಹಮದ್ ಸನಾವುಲ್ಲಾ, ತಾಲೂಕು ಮಾಜಿ ಸದಸ್ಯ ಕೆ. ಮಂಜುನಾಥ್, ಬಲಿಜ ಸಮಾಜದ ತಾಲೂಕು ಗೌರವಾಧ್ಯಕ್ಷರಾದ ಜೆ.ಎಸ್ ಸಂಜೀವಮೂರ್ತಿ, ಎಸ್.ಎನ್ ಸುಬ್ರಮಣ್ಯ, ಉಪಾಧ್ಯಕ್ಷರಾದ ಪದ್ಮ ಹನುಮಂತಪ್ಪ, ಎಸ್.ಬಿ ಜಂಗಮಪ್ಪ, ಪ್ರಧಾನ ಕಾರ್ಯದರ್ಶಿ ಪಿ. ಸತೀಶ್, ಸಹ ಕಾರ್ಯದರ್ಶಿ ಟಿ. ರಮೇಶ್, ಮುಖಂಡರಾದ ಬಿ. ಗಂಗಾಧರ್, ಟಿ.ಡಿ ಶಶಿಕುಮಾರ್,  ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.