‘ಸಾಂತ್ವನ’ ಮಹಿಳಾ ಕೇಂದ್ರಕ್ಕೆ ಹಣ್ಣು, ಬಟ್ಟೆ ಸೇರಿದಂತೆ ಅಗತ್ಯ ವಸ್ತುಗಳ ವಿತರಣೆ
ಭದ್ರಾವತಿ ಬಿ.ಎಚ್ ರಸ್ತೆ ಶ್ರೀ ಭದ್ರೇಶ್ವರ ಸಮುದಾಯ ಭವನದ ಬಳಿ ಇರುವ ಸ್ವಾಧರ ಗೃಹ ‘ಸಾಂತ್ವನ’ ಮಹಿಳಾ ಕೇಂದ್ರದಕ್ಕೆ ಉಸ್ಮಾನಿಯಾ ಚಾರಿಟಬಲ್ ಟ್ರಸ್ಟ್ನ ಮಾಜಿ ಅಧ್ಯಕ್ಷ ಜೆಬಿಟಿ ಬಾಬು ನೇತೃತ್ವದಲ್ಲಿ ಹಣ್ಣು, ಬಟ್ಟೆ ಸೇರಿದಂತೆ ಇನ್ನಿತರ ಅಗತ್ಯ ವಸ್ತುಗಳನ್ನು ವಿತರಿಸಲಾಯಿತು.ಭದ್ರಾವತಿ, ಮೇ. ೨೧: ಸಂಕಷ್ಟದ ಸಮಯದಲ್ಲಿ ಅಸಹಾಯಕರಿಗೆ ನೆರವಾಗುವುದು ಪ್ರತಿಯೊಬ್ಬರ ಕರ್ತವ್ಯವಾಗಿದ್ದು, ಬಾಬಾ ಸಾಹೇಬ್ ಅಂಬೇಡ್ಕರ್ರವರು ತಮ್ಮ ಜೀವನದ ಕೊನೆಯವರೆಗೂ ಈ ನಿಟ್ಟಿನಲ್ಲಿ ತಮ್ಮ ಹೋರಾಟವನ್ನು ಮುಂದುವರೆಸಿದ್ದರು. ಆದರೂ ಸಹ ದೇಶದಲ್ಲಿ ಇಂದಿಗೂ ಶ್ರೀಮಂತರು ಮತ್ತು ಬಡವರ ನಡುವೆ ತಾರತಮ್ಯ ದೂರವಾಗಿಲ್ಲ ಎಂದು ಪ್ರಗತಿಪರ ಸಂಘಟನೆಗಳ ಮುಖಂಡ ಸುರೇಶ್ ವಿಷಾದ ವ್ಯಕ್ತಪಡಿಸಿದರು.
ಅವರು ಗುರುವಾರ ನಗರದ ಬಿ.ಎಚ್ ರಸ್ತೆ ಶ್ರೀ ಭದ್ರೇಶ್ವರ ಸಮುದಾಯ ಭವನದ ಬಳಿ ಇರುವ ಸ್ವಾಧರ ಗೃಹ ‘ಸಾಂತ್ವನ’ ಮಹಿಳಾ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದ್ದ ಹಣ್ಣು, ಬಟ್ಟೆ ಸೇರಿದಂತೆ ಇನ್ನಿತರ ಅಗತ್ಯ ವಸ್ತುಗಳ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಅಂಬೇಡ್ಕರ್ರವರು ಸಮಾಜದ ಎಲ್ಲಾ ವರ್ಗದ ಜನರು ಸಹ ಸಮಾನತೆಯಿಂದ ಬದುಕಬೇಕೆಂಬ ಆಶಯ ಹೊಂದಿದ್ದರು. ಈ ನಿಟ್ಟಿನಲ್ಲಿ ಸಂವಿಧಾನವನ್ನು ರಚಿಸಿ ದಲಿತರು, ಮಹಿಳೆಯರು, ಅಸಹಾಯಕರ ಹಿತರಕ್ಷಣೆಗೆ ಮುಂದಾಗಿದ್ದರು. ಆದರೂ ಸಹ ದೇಶದಲ್ಲಿ ಬದಲಾಗದ ಜನರ ಸ್ಥಿತಿಯನ್ನು ಕಂಡು ನೊಂದಿದ್ದರು ಎಂದರು.
ಕೊರೋನಾ ವೈರಸ್ ಪರಿಣಾಮದಿಂದಾಗಿ ಪ್ರಸ್ತುತ ಎಲ್ಲೆಡೆ ಎದುರಾಗಿರುವ ಸಂಕಷ್ಟಕ್ಕೆ ಪ್ರತಿಯೊಬ್ಬರು ಸ್ಪಂದಿಸಬೇಕು. ಅದರಲ್ಲೂ ಅಸಹಾಯಕ ಮಹಿಳೆಯರ ನೆರವಿಗೆ ಮುಂದಾಗುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಯಾರಿಗೆ ಅಗತ್ಯವಿದೆಯೋ ಅವರಿಗೆ ಸೇವೆ ತಲುಪಬೇಕೆಂದರು.
ಉಸ್ಮಾನಿಯಾ ಚಾರಿಟಬಲ್ ಟ್ರಸ್ಟ್ನ ಮಾಜಿ ಅಧ್ಯಕ್ಷ ಜೆಬಿಟಿ ಬಾಬು ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಪೌರಾಯುಕ್ತ ಮನೋಹರ್, ಯುವ ಮುಖಂಡ ಬಿ.ಎಸ್ ಗಣೇಶ್, ಪ್ರಮುಖರಾದ ಬಿ.ಟಿ ನಾಗರಾಜ್, ಟಿಪ್ಪುಸುಲ್ತಾನ್, ಪರಮೇಶ್ವರಚಾರ್, ಮುಸ್ವೀರ್ ಬಾಷಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.