Sunday, May 31, 2020

ಹೆಬ್ಬಾವು ಸೆರೆ ಹಿಡಿದ ಆಂಜನೇಯ ಆಗ್ರಹಾರದ ಯುವಕರು

ಭದ್ರಾವತಿ ತಾಲೂಕಿನ ಅಂತರಗಂಗೆ ಕ್ಯಾಂಪ್ ಮನೆಯೊಂದರಲ್ಲಿ ಸೇರಿಕೊಂಡಿದ್ದ ಸುಮಾರು ೫ ಅಡಿ ಉದ್ದದ, ೨೦ ಕೆ.ಜಿ ತೂಕದ ಹೆಬ್ಬಾವು ಸೆರೆ ಹಿಡಿದು ಅರಣ್ಯಕ್ಕೆ ಬಿಡುವಲ್ಲಿ ನಗರಸಭೆ ವ್ಯಾಪ್ತಿಯ ಆಂಜನೇಯ ಅಗ್ರಹಾರದ ಯುವಕರು ಯಶಸ್ವಿಯಾಗಿದ್ದಾರೆ.
ಭದ್ರಾವತಿ, ಮೇ. ೩೧: ತಾಲೂಕಿನ ಅಂತರಗಂಗೆ ಕ್ಯಾಂಪ್ ಮನೆಯೊಂದರಲ್ಲಿ ಸೇರಿಕೊಂಡಿದ್ದ ಸುಮಾರು ೫ ಅಡಿ ಉದ್ದದ, ೨೦ ಕೆ.ಜಿ ತೂಕದ ಹೆಬ್ಬಾವು ಸೆರೆ ಹಿಡಿದು ಅರಣ್ಯಕ್ಕೆ ಬಿಡುವಲ್ಲಿ ನಗರಸಭೆ ವ್ಯಾಪ್ತಿಯ ಆಂಜನೇಯ ಅಗ್ರಹಾರದ ಯುವಕರು ಯಶಸ್ವಿಯಾಗಿದ್ದಾರೆ. 
ಹೆಬ್ಬಾವು ಇರುವ ಮಾಹಿತಿ ತಿಳಿದ ತಕ್ಷಣ ಅಂತರಗಂಗೆ ಕ್ಯಾಂಪ್‌ಗೆ ತೆರಳಿದ ಮಂಜ(ಕುಯ್), ಶರತ್, ಮದನ್ ಸೇರಿದಂತೆ ಇನ್ನಿತರ ಯುವಕರು ಹೆಬ್ಬಾವು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಇದುವರೆಗೂ ವಿವಿಧ ಜಾತಿಯ ಸುಮಾರು ೨೫೦ಕ್ಕೂ ಹೆಚ್ಚು ಹಾವುಗಳನ್ನು ಹಿಡಿದು ಅರಣ್ಯಕ್ಕೆ ಬಿಡಲಾಗಿದೆ ಎಂದು ಮಂಜ ಪತ್ರಿಕೆಗೆ ತಿಳಿಸಿದರು. 

೧೦೦ ಹಾಸಿಗೆಯುಳ್ಳ ಸರ್ಕಾರಿ ಆಸ್ಪತ್ರೆಗೆ ಕಾಯಕಲ್ಪ ಪ್ರಶಸ್ತಿ

ಕಾರಣಕರ್ತರಾದ ಸಿಬ್ಬಂದಿಗಳಿಗೆ ಸನ್ಮಾನ 

ಭದ್ರಾವತಿ ಹಳೇನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಸ್ವಚ್ಛತೆ ಹಾಗೂ ನಿರ್ವಹಣೆಯಲ್ಲಿ ಉತ್ತಮ ಸಾಧನೆ ಮಾಡಿದ ಹಿನ್ನಲೆಯಲ್ಲಿ ಕಾಯಕಲ್ಪ ಪ್ರಶಸ್ತಿ ಲಭಿಸಿದ್ದು, ಈ ಹಿನ್ನಲೆಯಲ್ಲಿ ಕಾರಣಕರ್ತರಾದ ಆಸ್ಪತ್ರೆ ಸಿಬ್ಬಂದಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. 

ಕನ್ನಡಪ್ರಭ ವಾರ್ತೆ, ಭದ್ರಾವತಿ: ಸ್ವಚ್ಛತೆ ಹಾಗೂ ನಿರ್ವಹಣೆಯಲ್ಲಿ ಉತ್ತಮ ಸಾಧನೆ ಮಾಡಿದ ಹಿನ್ನಲೆಯಲ್ಲಿ ಹಳೇನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ಈ ಬಾರಿ ಕಾಯಕಲ್ಪ ಪ್ರಶಸ್ತಿ ಲಭಿಸಿದ್ದು, ಈ ಹಿನ್ನಲೆಯಲ್ಲಿ ಪ್ರಶಸ್ತಿಗೆ ಕಾರಣಕರ್ತರಾದ ಆಸ್ಪತ್ರೆಯ ಸಿಬ್ಬಂದಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ನಗರಸಭೆ ವ್ಯಾಪ್ತಿಯಲ್ಲಿರುವ ೧೦೦ ಹಾಸಿಗೆಯುಳ್ಳ ಏಕೈಕ ಸರ್ಕಾರಿ ಆಸ್ಪತ್ರೆ ಇದಾಗಿದ್ದು, ಪ್ರತಿದಿನ ಸಾವಿರಾರು ಮಂದಿ ಆಸ್ಪತ್ರೆಗೆ ಬಂದು ಹೋಗುತ್ತಾರೆ. ಸಾಮಾನ್ಯವಾಗಿ ಸರ್ಕಾರಿ ಆಸ್ಪತ್ರೆ ಎಂದರೆ ಸ್ವಚ್ಛತೆ ಹಾಗೂ ನಿರ್ವಹಣೆಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಕೇಳಿ ಬರುತ್ತವೆ. ಈ ನಡುವೆಯೂ ಇಲ್ಲಿನ ಸಿಬ್ಬಂದಿಗಳು ಸ್ವಚ್ಛತೆ ಹಾಗೂ ನಿರ್ವಹಣೆಯಲ್ಲಿ ಉತ್ತಮ ಸಾಧನೆ ಮಾಡಿರುವುದು ಎಲ್ಲರನ್ನು ಬೆರಗುಗೊಳಿಸುವಂತೆ ಮಾಡಿದೆ.
ಕಾಯಕಲ್ಪ ಪ್ರಶಸ್ತಿ ೨೫ ಸಾವಿರ ರು. ನಗದು ಹಾಗು ಪ್ರಶಸ್ತಿ ಪತ್ರ ಒಳಗೊಂಡಿದೆ. ಪ್ರಶಸ್ತಿಗೆ ಕಾರಣಕರ್ತರಾದ ಆಸ್ಪತ್ರೆಯ ಸುಮಾರು ೨೧  ಡಿ’ ಗ್ರೂಪ್ ಗುತ್ತಿಗೆ ಸಿಬ್ಬಂದಿಗಳು, ೨೧ ಕಾಯಂ ಸಿಬ್ಬಂದಿಗಳು ಹಾಗೂ ೧೫ ಜನ ದಾದಿಯರು, ಆರೋಗ್ಯ ಸಹಾಯಕರು ಸೇರಿದಂತೆ ಇನ್ನಿತರರನ್ನು ಸನ್ಮಾನಿಸಿ ಗೌರವಿಸಲಾಯಿತು.
ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಓ. ಮಲ್ಲಪ್ಪ ಅಧ್ಯಕ್ಷತೆ ವಹಿಸಿದ್ದರು.  ಹಿರಿಯ ವೈದ್ಯ ಡಾ. ರವೀಂದ್ರನಾಥ ಕೋಠಿ, ಡಾ. ವೀರಭದ್ರಪ್ಪ, ಡಾ. ಮಯೂರಿ, ಆರೋಗ್ಯ ರಕ್ಷಾ ಸಮಿತಿಯ ಸುಂದರ್ ಬಾಬು, ನಾಗೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

Saturday, May 30, 2020

ಯಾವುದೇ ತಪ್ಪು ನಡೆದಿಲ್ಲ : ಆನ್‌ಲೈನ್ ಟೆಂಡರ್ ಪ್ರಕ್ರಿಯೆಯಿಂದ ಸಮಸ್ಯೆ

ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕೆ.ಜೆ ತಮ್ಮಣ್ಣಗೌಡ ಸ್ಪಷ್ಟನೆ 

ಕೆ.ಜೆ ತಮ್ಮಣ್ಣಗೌಡ 
ಭದ್ರಾವತಿ, ಮೇ. ೩೦: ತಾಲೂಕು ಪಂಚಾಯಿತಿಯಲ್ಲಿ ಅಂಗವಿಕಲರು, ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಸೌಲಭ್ಯಗಳನ್ನು ಕಲ್ಪಿಸಲುಮೀಸಲಿಡಲಾಗಿದ್ದ ಹಣ ಸರ್ಕಾರಕ್ಕೆ ಹಿಂದಿರುಗಿರುವುದರಲ್ಲಿ ನಮ್ಮಿಂದ ಯಾವುದೇ ತಪ್ಪು ನಡೆದಿಲ್ಲ ಎಂದು ಕಾರ್ಯನಿರ್ವಹಣಾಧಿಕಾರಿ ಕೆ.ಜೆ ತಮ್ಮಣ್ಣಗೌಡ ಸ್ಪಷ್ಟಪಡಿಸಿದ್ದಾರೆ.
ಅವರು ಪತ್ರಿಕೆಯೊಂದಿಗೆ ಮಾತನಾಡಿ, ಸೌಲಭ್ಯಗಳನ್ನು ಕಲ್ಪಿಸಲು ಆನ್‌ಲೈನ್‌ನಲ್ಲಿ ಟೆಂಡರ್ ನಡೆದಿದೆ. ಈ ಪ್ರಕ್ರಿಯೆಯಲ್ಲಿ ನಾವು ಏನನ್ನು ಸಹ ಮಾಡಲು ಸಾಧ್ಯವಿಲ್ಲ. ೩ ಬಾರಿ ಟೆಂಡರ್ ಕರೆಯಲಾಗಿದ್ದು, ಯಾರು ಸಹ ಭಾಗವಹಿಸದ ಕಾರಣ ಹಣ ಬಳಕೆ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಈ ಹಣ ಬೇರೆ ಬಳಕೆಗೆ ಬರುವುದಿಲ್ಲ. ಈ ಹಿನ್ನಲೆಯಲ್ಲಿ ಸರ್ಕಾರಕ್ಕೆ ಹಿಂದಿರುಗಿದೆ. ಸದಸ್ಯರು ನಮ್ಮ ವಿರುದ್ಧ ಮಾಡಿರುವ ಆರೋಪಗಳಲ್ಲಿ ಯಾವುದೇ ಸ್ಪಷ್ಟತೆ ಇಲ್ಲ ಎಂದು ತಿಳಿಸಿದ್ದಾರೆ. 

ರೈತ ವಿರೋಧಿ ಕಾಯ್ದೆ ಹಿಂಪಡೆಯಲು ಒತ್ತಾಯಿಸಿ ಮನವಿ

ಭದ್ರಾವತಿ, ಮೇ. ೩೦: ರಾಜ್ಯ ಸರ್ಕಾರ ಭೂ ಸುಧಾರಣಾ ಕಾಯ್ದೆಯನ್ನು ತಿದ್ದುಪಡಿ ಮಾಡಿ ಹೊಸ ಕಾಯ್ದೆ ಜಾರಿಗೆ ತಂದಿರುವುದು ರೈತ ವಿರೋಧಿಯಾಗಿದೆ. ತಕ್ಷಣ ಈ ಕಾಯ್ದೆಯನ್ನು ಹಿಂಪಡೆಯಬೇಕೆಂದು ಒತ್ತಾಯಿಸಿ ಶನಿವಾರ ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರರ ಸಂಘದ ಶಿವಮೊಗ್ಗ ಜಿಲ್ಲಾ ಕಬ್ಬು ಬೆಳೆಗಾರರ ಸಂಘ ತಾಲೂಕು ಘಟಕ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದೆ.
ಕೃಷಿ ಭೂಮಿ ಹೊಂದಿರುವವರೇ ಬೇರೊಂದು ಕೃಷಿ ಭೂಮಿ ಖರೀದಿಸಬಹುದು ಎಂಬ ಈ ಹಿಂದಿನ ನಿಯಮವನ್ನು ಬದಲಿಸಿ ನೂತನ ಕಾಯ್ದೆಯಲ್ಲಿ ಯಾರು ಬೇಕಾದರೂ ಕೈಗಾರಿಕೋದ್ಯಮಿಗಳು, ರಿಯಲ್ ಎಸ್ಟೇಟ್ ಉದ್ಯಮಿಗಳು ಕೃಷಿ ಭೂಮಿಯನ್ನು ಎಷ್ಟು ಬೇಕಾದರೂ ಖರೀದಿ ಮಾಡಬಹುದು ಎಂಬ ನಿಯಮ ಜಾರಿಗೆ ತಂದಿರುವುದು ರೈತ ವಿರೋಧಿಯಾಗಿದೆ. ನೂತನ ಕಾಯ್ದೆ ಪ್ರಕಾರ ಫಲವತ್ತಾದ ಕೃಷಿ ಭೂಮಿ ದೊಡ್ಡ ದೊಡ್ಡ ಉದ್ಯಮಿಗಳ ಪಾಲಾಗಿ ರೈತರು ಕೃಷಿಯಿಂದ ವಿಮುಖರಾಗುವ ಸಾಧ್ಯತೆ ಹೆಚ್ಚಾಗಿದ್ದು, ಅಲ್ಲದೆ ಕೃಷಿ ಭೂಮಿ ಖರೀದಿಸುವಾಗ ರೈತರಿಗೆ ನ್ಯಾಯಯುತ ಬೆಲೆ ನೀಡದೆ ವಂಚಿಸುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಲಾಗಿದೆ.
ರಾಜ್ಯ ಸರ್ಕಾರ ಎಪಿಎಂಸಿ  ತಿದ್ದುಪಡಿ ಕಾಯ್ದೆ ಜಾರಿಗೆ ತರಲು ಮುಂದಾಗಿದ್ದು, ಈ ಕಾಯ್ದೆ ಸಹ ರೈತರಿಗೆ ಮಾರಕವಾಗಿ ಪರಿಣಮಿಸಿದೆ. ತಿದ್ದುಪಡಿ ಕಾಯ್ದೆಯಲ್ಲಿ ರೈತರು ಬೆಳೆದ ಉತ್ಪನ್ನಗಳನ್ನು ಖರೀದಿದಾರರು ಹಾಗೂ ಮಾರುವ ಮಾಲೀಕರು ನೇರವಾಗಿ  ರೈತರಿಂದ ಖರೀದಿಸುವ ನಿಯಮ ರೂಪಿಸಲಾಗುತ್ತಿದೆ. ಇದರಿಂದ ರೈತರಿಗೆ ನ್ಯಾಯಯುತ ಬೆಲೆ ಸಿಗುವ ಬದಲು ಹೆಚ್ಚು ಶೋಷಣೆಯಾಗುವ ಸಾಧ್ಯತೆ ಹೆಚ್ಚಾಗಿದೆ. ತೂಕದಲ್ಲೂ ವಂಚನೆ ನಡೆಯುವ ಸಂಭವವಿದೆ. ಅಲ್ಲದೆ ಇಡೀ ಎಪಿಎಂಸಿ ವ್ಯವಸ್ಥೆ ನಾಶವಾಗಲಿದೆ ಎಂದು ಎಚ್ಚರಿಸಲಾಗಿದೆ.
ಕೇಂದ್ರ ಸರ್ಕಾರ ವಿದ್ಯುತ್ ತಿದ್ದುಪಡಿ ಮಸೂದೆ ೨೦೨೦ ಜಾರಿಗೆ ತರುವುದು ಬೇಡ. ವಿದ್ಯುತ್ ಕ್ಷೇತ್ರವನ್ನು ಖಾಸಗಿಕರಣ ಮಾಡುವ ಹುನ್ನಾರ ಇದಾಗಿದ್ದು, ಇದನ್ನು ಸಂಘ ವಿರೋಧಿಸುತ್ತದೆ. ಸರ್ಕಾರ ಮನವಿಗೆ ಪೂರಕವಾಗಿ ಸ್ಪಂದಿಸದಿದ್ದಲ್ಲಿ ಹೋರಾಟ ನಡೆಸುವುದು ಅನಿವಾರ್ಯ ಎಂದು ಎಚ್ಚರಿಸಲಾಗಿದೆ.
ಸಂಘದ ತಾಲೂಕು ಶಾಖೆ ಅಧ್ಯಕ್ಷ ಕೆ. ಈರಣ್ಣ, ಪ್ರಧಾನ ಕಾರ್ಯದರ್ಶಿ ಸಣ್ಣಯ್ಯ, ಜಿಲ್ಲಾ ಸಂಚಾಲಕ ಎನ್.ಎಚ್ ದೇವಕುಮಾರ್, ಉಪಾಧ್ಯಕ್ಷ ಎನ್. ನಾಗರಾಜ್, ಬಿ. ಆನಂದ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ನಗರಸಭೆ ವ್ಯಾಪ್ತಿಯ ಕೆರೆಗಳನ್ನು ಅಭಿವೃದ್ಧಿಗೊಳಿಸಿ : ತಕ್ಷಣ ಸಭೆ ಕರೆಯಲು ತಹಸೀಲ್ದಾರ್‌ಗೆ ಮನವಿ

ಭದ್ರಾವತಿ ನಗರಸಭೆ ವ್ಯಾಪ್ತಿಯ ಕೆರೆಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ತಕ್ಷಣ ಸಭೆ ಕರೆದು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬೇಕೆಂದು ಒತ್ತಾಯಿಸಿ ಶನಿವಾರ ಭಾರತರತ್ನ ಸರ್.ಎಂ ವಿಶ್ವೇಶ್ವರಯ್ಯ ಚಾರಿಟಬಲ್ ಟ್ರಸ್ಟ್, ಡಿ. ದೇವರಾಜ ಅರಸು ಜನಸ್ಪಂದನ ವೇದಿಕೆ, ಸುವರ್ಣ ಮಹಿಳಾ ವೇದಿಕೆ ವತಿಯಿಂದ ತಹಸೀಲ್ದಾರ್ ಶಿವಕುಮಾರ್‌ರವರಿಗೆ ಮನವಿ ಸಲ್ಲಿಸಲಾಯಿತು. 
ಭದ್ರಾವತಿ, ಮೇ. ೩೦: ನಗರಸಭೆ ವ್ಯಾಪ್ತಿಯ ಕೆರೆಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ತಕ್ಷಣ ಸಭೆ ಕರೆದು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬೇಕೆಂದು ಒತ್ತಾಯಿಸಿ ಶನಿವಾರ ಭಾರತರತ್ನ ಸರ್.ಎಂ ವಿಶ್ವೇಶ್ವರಯ್ಯ ಚಾರಿಟಬಲ್ ಟ್ರಸ್ಟ್, ಡಿ. ದೇವರಾಜ ಅರಸು ಜನಸ್ಪಂದನ ವೇದಿಕೆ, ಸುವರ್ಣ ಮಹಿಳಾ ವೇದಿಕೆ ವತಿಯಿಂದ ತಹಸೀಲ್ದಾರ್ ಶಿವಕುಮಾರ್‌ರವರಿಗೆ ಮನವಿ ಸಲ್ಲಿಸಲಾಯಿತು. 
ಕಳೆದ ೪೦ ವರ್ಷಗಳಿಂದ ನಿರಂತರವಾಗಿ ತಾಲೂಕಿನ ಸಮಗ್ರ ಅಭಿವೃದ್ಧಿಗಾಗಿ ಹೋರಾಟ ನಡೆಸಿಕೊಂಡು ಬರುತ್ತಿದ್ದು, ತಾಲೂಕಿನ ಕೆರೆಗಳನ್ನು ಅಭಿವೃದ್ಧಿಗೊಳಿಸಿ ಮಾದರಿ ಕ್ಷೇತ್ರವನ್ನಾಗಿಸುವ ನಿಟ್ಟಿನಲ್ಲಿ ಸಹ ಹೋರಾಟ ನಡೆಸಲಾಗುತ್ತಿದೆ. ನಗರಸಭೆ ವ್ಯಾಪ್ತಿಯಲ್ಲಿ ಸುಮಾರು ೨೫ಕ್ಕೂ ಅಧಿಕ ಕೆರೆಗಳಿದ್ದು, ಇದುವರೆಗೂ ಯಾವುದೇ ಕೆರೆಗಳನ್ನು ಅಭಿವೃದ್ಧಿಗೊಳಿಸಿರುವುದಿಲ್ಲ. 
ಕೆರೆಗಳನ್ನು ಅಭಿವೃದ್ಧಿಗೊಳಿಸುವುದರಿಂದ ನಗರಸಭೆ ವ್ಯಾಪ್ತಿಯಲ್ಲಿ ಅಂತರ್ಜಲ ಮಟ್ಟ ಹೆಚ್ಚಾಗಲಿದ್ದು, ದನಗಾಹಿಗಳಿಗೆ, ರೈತರಿಗೆ, ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ. ಈ ಹಿನ್ನಲೆಯಲ್ಲಿ ಕೆರೆಗಳನ್ನು ಅಭಿವೃದ್ಧಿಗೊಳಿಸುವ ಸಂಬಂಧ ನಗರಸಭೆ ಪೌರಾಯುಕ್ತರು, ಭದ್ರಾವತಿ-ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರು ಹಾಗೂ ತಾಲೂಕು ಸರ್ವೆಯರುಗಳು, ನಗರ ವೃತ್ತ ನಿರೀಕ್ಷಕರು, ನೀರಾವರಿ ನಿಗಮದ ಅಧಿಕಾರಿಗಳೊನ್ನೊಳಗೊಂಡ ಸಭೆಯನ್ನು ನಡೆಸಿ ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. 
ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಆರ್. ವೇಣುಗೋಪಾಲ್, ಮುಕುಂದಯ್ಯ, ಗ್ಸೇವಿಯರ್, ಜಯದೇವ ಹಾಗೂ ಭವಾನಿಶಂಕರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ಸರ್ಕಾರಿ ಶಾಲೆಗಳ ೪ ಶಿಕ್ಷಕರು ನಿವೃತ್ತಿ

ಭದ್ರಾವತಿ ಬೋವಿ ಕಾಲೋನಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ದೈಹಿಕ ಶಿಕ್ಷಕ ಸೂರಯ್ಯ ಶನಿವಾರ ನಿವೃತ್ತಿ ಹೊಂದಿದರು. 
ಭದ್ರಾವತಿ, ಮೇ. ೩೦: ತಾಲೂಕಿನ ಸರ್ಕಾರಿ ಕಿರಿಯ ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳ ಒಟ್ಟು ೪ ಶಿಕ್ಷಕರು ಶನಿವಾರ ನಿವೃತ್ತಿ ಹೊಂದಿದ್ದಾರೆ. 
ಬೋವಿ ಕಾಲೋನಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ದೈಹಿಕ ಶಿಕ್ಷಕ ಸೂರಯ್ಯ, ಕೋಡಿ ಹೊಸೂರು ಕಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ಎಸ್.ಎಂ ಓಂಕಾರಯ್ಯ, ದೊಣಬಘಟ್ಟ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕಿ ಶಾಹೀನ್ ಪವೀನ್ ಮತ್ತು ಕೂಡ್ಲಿಗೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕಿ ಜಯಶ್ರೀ ಎಂ. ಬೈಲೂರು ನಿವೃತ್ತಿ ಹೊಂದಿದ್ದಾರೆ. 

ಪರಿಶಿಷ್ಟ ಜಾತಿ/ಪಂಗಡ, ಅಂಗವಿಕಲರ ಅನುದಾನ ಸದ್ಬಳಕೆ ಮಾಡಿಕೊಳ್ಳುವಲ್ಲಿ ವಿಫಲ

ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳ ನಿರ್ಲಕ್ಷ್ಯತನಕ್ಕೆ ಸದಸ್ಯರು ಆಕ್ರೋಶ

ಭದ್ರಾವತಿ ಶನಿವಾರ ತಾಲೂಕು ಪಂಚಾಯಿತಿ ಸದಸ್ಯರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. 
ಭದ್ರಾವತಿ, ಮೇ. ೩೦: ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳ ನಿರ್ಲಕ್ಷ್ಯತನದಿಂದ ಪರಿಶಿಷ್ಟ ಜಾತಿ/ಪಂಗಡದವರಿಗಾಗಿ ಮೀಸಲಿಡಲಾಗಿದ್ದ ಹಣ ಸರ್ಕಾರಕ್ಕೆ ಹಿಂದಿರುಗಿದ್ದು, ಇದರಿಂದಾಗಿ ಫಲಾನುಭವಿಗಳು ಸಂಕಷ್ಟ ಅನುಭವಿಸುವಂತಾಗಿದೆ ಎಂದು ತಾಲೂಕು ಪಂಚಾಯಿತಿ ಸದಸ್ಯರು ಆರೋಪಿಸಿದರು. 
ಅವರು ಶನಿವಾರ ಹಳೇನಗರದ ಪತ್ರಿಕಾಭವನದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ತಾಲೂಕು ಪಂಚಾಯಿತಿಗೆ ವಿವಿಧ ಯೋಜನೆಯಡಿ ಬಿಡುಗಡೆಯಾಗುವ ಅನುದಾನದಲ್ಲಿ ಅಂಗವಿಕಲರು, ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಸೌಲಭ್ಯಗಳನ್ನು ಕಲ್ಪಿಸಿಕೊಡಲು ಶೇ.೩, ಮತ್ತು ಶೇ.೫ರಷ್ಟು ಅನುದಾನ ಮೀಸಲಿಡಲಾಗುತ್ತಿದೆ. ಈ ಸಂಬಂಧ ಪ್ರಸಕ್ತ ಸಾಲಿನಲ್ಲಿ ಸದಸ್ಯರು ತಮ್ಮ ತಮ್ಮ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡಿ ಪಟ್ಟಿ ಸಲ್ಲಿಸಿದ್ದು, ಆದರೆ ಕಾರ್ಯನಿರ್ವಹಣಾಧಿಕಾರಿಗಳ ನಿರ್ಲಕ್ಷ್ಯತನದಿಂದ ಸರ್ಕಾರಕ್ಕೆ ಹಣ ಹಿಂದಿರುಗಿದೆ. 
ಮೀಸಲಿಡಲಾದ ಹಣ ಸದ್ಬಳಕೆ ಮಾಡಿಕೊಳ್ಳುವಲ್ಲಿ ಅಧಿಕಾರಿ ವರ್ಗ ವಿಫಲವಾಗಿದ್ದು, ಈ ಸಂಬಂಧ ಈ ಹಿಂದೆ ಸದಸ್ಯರು ಅಧಿಕಾರಿಗಳ ಗಮನಕ್ಕೆ ತಂದು ಎಚ್ಚರಿಸಿದ್ದರು. ಆದರೆ ಅಧಿಕಾರ ವರ್ಗ ನಿರ್ಲಕ್ಷ್ಯತನ ವಹಿಸಿದೆ. ಅಂಗವಿಕಲರು, ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಸೌಲಭ್ಯಗಳನ್ನು ಕಲ್ಪಿಸಿಕೊಡಲು ಟೆಂಡರ್ ಕರೆಯುವಲ್ಲಿ ವಿಫಲವಾಗಿದೆ. ಅಲ್ಲದೆ ಸದಸ್ಯರಿಗೆ ಗೌರವ ನೀಡದೆ ನಡೆದುಕೊಳ್ಳುತ್ತಿದೆ. ತಕ್ಷಣ ಕಾರ್ಯನಿರ್ವಹಣಾಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. 
ಪತ್ರಿಕಾಗೋಷ್ಠಿಯಲ್ಲಿ ತಾಲೂಕು ಪಂಚಾಯಿತಿ ಅಧ್ಯಕ್ಷೆ ಆಶಾ ಶ್ರೀಧರ್, ಸದಸ್ಯರಾದ ಅಣ್ಣಾಮಲೈ, ಧರ್ಮೇಗೌಡ, ಕೆ. ಮಂಜುನಾಥ್, ಕೆ.ವಿ ರುದ್ರಪ್ಪ, ಎಂ.ಜಿ ದಿನೇಶ್, ಆರ್. ತಿಪ್ಪೇಶ್‌ರಾವ್, ಗೀತಾ ಜಗದೀಶ್, ಉಷಾಕಿರಣ, ಸಿ. ಮಂಜುಳ, ಯಶೋದಮ್ಮ, ಲಕ್ಷ್ಮೀದೇವಿ, ತುಂಗಮ್ಮ ಜಯಪ್ಪ, ಎಸ್. ರಮೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.