Wednesday, June 3, 2020

ಜೂ.೫ರಂದು ಡಿಎಸ್‌ಎಸ್ ವತಿಯಿಂದ ಪ್ರತಿಭಟನೆ

ಭದ್ರಾವತಿ, ಜೂ. ೩: ಕೂಡ್ಲಿಗೆರೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಮಾನತ್ತಿಗೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ತಾಲೂಕು ಶಾಖೆ ವತಿಯಿಂದ ಜೂ.೫ರಂದು ಬೆಳಿಗ್ಗೆ ೧೧ ಗಂಟೆಗೆ ತಾಲೂಕು ಪಂಚಾಯಿತಿ ಕಛೇರಿ ಆವರಣದಲ್ಲಿ ಪ್ರತಿಭಟನಾ ಧರಣಿ ಹಮ್ಮಿಕೊಳ್ಳಲಾಗಿದೆ.
ತಾಲೂಕಿನ ಕೂಡ್ಲಿಗೆರೆ ಹೋಬಳಿ ಕಲ್ಪನಹಳ್ಳಿ ಗ್ರಾಮದಲ್ಲಿ ಸುಮಾರು ೫-೬ ದಲಿತ ಕುಟುಂಬಗಳು ಸುಮಾರು ೫೦ ವರ್ಷಗಳಿಂದ ವಾಸಿಸುತ್ತಿದ್ದು, ದಲಿತ ಕುಟುಂಬದವರು ಓಡಾಡುವ ರಸ್ತೆಗೆ ಅಕ್ರಮವಾಗಿ ಬೇಲಿ ಹಾಕಲಾಗಿದೆ. ಇದಕ್ಕೆ ಪಿಡಿಓ ಕರ್ತವ್ಯ ಲೋಪ ಕಾರಣವಾಗಿದ್ದು, ಈ ಹಿನ್ನಲೆಯಲ್ಲಿ ಅಮಾನತ್ತುಗೊಳಿಸುವಂತೆ ಒತ್ತಾಯಿಸಿ ಹೋರಾಟ ಹಮ್ಮಿಕೊಳ್ಳಲಾಗಿದೆ.
ದಲಿತ ಮುಖಂಡರು, ವಿವಿಧ ಸಂಘ-ಸಂಸ್ಥೆಗಳು ಸೇರಿದಂತೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಹೋರಾಟ ಯಶಸ್ವಿಗೊಳಿಸುವಂತೆ ತಾಲೂಕು ಸಂಚಾಲಕ ಎಂ. ಕುಬೇಂದ್ರಪ್ಪ ಕೋರಿದ್ದಾರೆ.

ತಾ.ಪಂ. ಕಾರ್ಯನಿರ್ವಹಣಾಧಿಕಾರಿ ವಿರುದ್ಧ ಹಲವು ಆರೋಪಗಳು : ಕರ್ತವ್ಯದಿಂದ ಬಿಡುಗಡೆಗೊಳ್ಳಲು ಆಗ್ರಹಿಸಿ ಪ್ರತಿಭಟನೆ

ಭದ್ರಾವತಿ ತಾಲೂಕು ಪಂಚಾಯಿತಿಯಲ್ಲಿ ಬುಧವಾರ ನಡೆದ ಸಭೆಯಲ್ಲಿ ಸದಸ್ಯರು ಕಾರ್ಯನಿರ್ವಹಣಾಧಿಕಾರಿಗಳ ವಿರುದ್ಧ ಹಲವು ಆರೋಪಗಳನ್ನು ಮಾಡುವ ಮೂಲಕ ಕರ್ತವ್ಯದಿಂದ ಬಿಡುಗಡೆಗೊಳ್ಳುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು. 
ಸಭೆಯಲ್ಲಿ ಕೇಳಿ ಬಂದ ಪ್ರಮುಖ ಆರೋಪಗಳು :
- ಕಾನೂನು ಉಲ್ಲಂಘಿಸಿ ಗ್ರಾ.ಪಂ. ಪಿಡಿಓ ವರ್ಗಾವಣೆ
- ಯಾವುದೇ ಆದೇಶವಿಲ್ಲದೆ ಚಾಲಕನ ನೇಮಕ
- ನಿರ್ಲಕ್ಷ್ಯತನದಿಂದ ಅಂಗವಿಕಲ, ಎಸ್.ಸಿ/ಎಸ್.ಟಿ ಅನುದಾನ ಹಿಂದಕ್ಕೆ
ಭದ್ರಾವತಿ, ಜೂ. ೩: ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳ ವಿರುದ್ಧ ಸದಸ್ಯರು ಬುಧವಾರ ಹಲವು ಆರೋಪಗಳನ್ನು ಮಾಡುವುದರೊಂದಿಗೆ ಕರ್ತವ್ಯದಿಂದ ಬಿಡುಗಡೆಗೊಳ್ಳುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.
ಬೆಳಿಗ್ಗೆ ೧೧.೩೦ಕ್ಕೆ ಸಭೆ ಆರಂಭಗೊಳ್ಳುತ್ತಿದ್ದಂತೆ ಸದಸ್ಯರು ಮಾತನಾಡಿ, ಕಾರ್ಯನಿರ್ವಹಣಾಧಿಕಾರಿ ಕೆ.ಜೆ ತಮ್ಮಣ್ಣಗೌಡರವರು ಸರ್ವಾಧಿಕಾರಿಯಂತೆ ನಡೆದುಕೊಳ್ಳುತ್ತಿದ್ದಾರೆ. ಸದಸ್ಯರ ಯಾವ ಮಾತಿಗೂ ಬೆಲೆ ಕೊಡುತ್ತಿಲ್ಲ. ಕರ್ತವ್ಯದಲ್ಲಿ ನಿರ್ಲಕ್ಷ್ಯತನ ತೋರಿಸುತ್ತಿದ್ದು, ಕಾನೂನಿನ ನಿಯಮಗಳನ್ನು ಉಲ್ಲಂಘಿಸಿ ಅಧಿಕಾರ ಚಲಾಯಿಸುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರದ ಆದೇಶದ ಪ್ರಕಾರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯನ್ನು ವರ್ಗಾವಣೆ ಮಾಡುವ ಅಥವಾ ಅವರ ಸ್ಥಳಕ್ಕೆ ಮತ್ತೊಬ್ಬರನ್ನು ನೇಮಕಗೊಳಿಸುವ ಅಧಿಕಾರ ಕಾರ್ಯನಿರ್ವಹಣಾಧಿಕಾರಿಗಳು ಹೊಂದಿಲ್ಲ. ಆದರೂ ಸಹ ಅಭಿವೃದ್ಧಿ ಅಧಿಕಾರಿಯನ್ನು ವರ್ಗಾವಣೆಗೊಳಿಸಿ ಆ ಜಾಗಕ್ಕೆ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಗ್ರೇಡ್-೨ ನೇಮಕಗೊಳಿಸಿದ್ದಾರೆ. ಅಲ್ಲದೆ ತಾಲೂಕು ಪಂಚಾಯಿತಿಗೆ ಬಿಡುಗಡೆಯಾಗುವ ವಿವಿಧ ಅನುದಾನಗಳಲ್ಲಿ ಪರಿಶಿಷ್ಟ ಜಾತಿ, ಪಂಗಡಗಳಿಗೆ, ಅಂಗವಿಕಲರಿಗೆ ವಿವಿಧ ಸೌಲಭ್ಯಗಳನ್ನು ಕಲ್ಪಿಸಲು ಮೀಸಲಿಡಬೇಕಾದ ಅನುದಾನ ಕಾರ್ಯನಿರ್ವಹಣಾಧಿಕಾರಿಗಳ ನಿರ್ಲಕ್ಷ್ಯತನದಿಂದ ಸರ್ಕಾರಕ್ಕೆ ಹಿಂದಿರುಗಿದೆ. ತಾಲೂಕು ಪಂಚಾಯಿತಿಯಲ್ಲಿ ಖಾಲಿ ಇರುವ ಚಾಲಕರ ಹುದ್ದೆಗೆ ಯಾವುದೇ ಟೆಂಡರ್ ಕರೆಯದೆ ಹಾಗೂ ಸರ್ಕಾರದ ಆದೇಶವಿಲ್ಲದೆ ಸುಮಾರು ೧ ಒಂದು ವಾರದಿಂದ ಅಪರಿಚಿತ ವ್ಯಕ್ತಿಯನ್ನು ಅಕ್ರಮವಾಗಿ ನೇಮಕ ಮಾಡಿಕೊಳ್ಳಲಾಗಿದೆ. ಇದು ಕ್ರಿಮಿನಲ್ ಅಪರಾಧವಾಗಿದ್ದು, ಈ ರೀತಿ ಹಲವು ಅಕ್ರಮಗಳು ನಿಮ್ಮಿಂದ ನಡೆದಿವೆ ಎಂದು ಆರೋಪಿಸಿದ ಸದಸ್ಯರು ಈ ಬಗ್ಗೆ ಸ್ಪಷ್ಟನೆ ನೀಡುವಂತೆ ಆಗ್ರಹಿಸಿದರು.
ಸುಮಾರು ಮಧ್ಯಾಹ್ನ ೧ ಗಂಟೆವರೆಗೂ ಸದಸ್ಯರು ನಡೆದಿರುವ ಒಂದೊಂದೇ ಅಕ್ರಮಗಳನ್ನು ಸಭೆಯಲ್ಲಿ ಬಿಡಿ ಬಿಡಿಯಾಗಿ ವಿವರಿಸಿದರು. ಕಾರ್ಯನಿರ್ವಹಣಾಧಿಕಾರಿಗಳು ತಪ್ಪನ್ನು ಸರಿಪಡಿಸಿಕೊಳ್ಳುವುದಾಗಿ ತಿಳಿಸಿದರೂ ಸದಸ್ಯರು ಒಪ್ಪದ ಸದಸ್ಯರು ತಕ್ಷಣ ಕರ್ತವ್ಯದಿಂದ ಬಿಡುಗಡೆಗೊಳ್ಳುವಂತೆ ಆಗ್ರಹಿಸಿ ಧಿಕ್ಕಾರಗಳನ್ನು ಕೂಗಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಸಭಾಂಗಣದಲ್ಲಿಯೇ ಕೆಲ ಹೊತ್ತು ಪ್ರತಿಭಟನೆ ನಡೆಸಿದರು.  ನಂತರ ಕಛೇರಿಗೆ ಬಂದ್ ಮಾಡಿ ಪ್ರತಿಭಟನೆ ತೀವ್ರಗೊಳಿಸಿದರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ದೂರವಾಣಿ ಮೂಲಕ ಸದಸ್ಯರೊಂದಿಗೆ ಮಾತನಾಡಿ, ಕಾರ್ಯನಿರ್ವಹಣಾಧಿಕಾರಿ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಈ ಹಿನ್ನಲೆಯಲ್ಲಿ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಹಿಂಪಡೆದರು.
ತಾಲೂಕು ಕಾರ್ಯನಿರ್ವಹಣಾಧಿಕಾರಿ ಆಶಾ ಶ್ರೀಧರ್, ಉಪಾಧ್ಯಕ್ಷೆ ಸರೋಜಯಮ್ಮ ಹಾಜ್ಯನಾಯ್ಕ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಎಸ್. ರಮೇಶ್, ಸದಸ್ಯರಾದ ಧರ್ಮೇಗೌಡ, ಕೆ. ಮಂಜುನಾಥ್, ರುದ್ರಪ್ಪ, ತಿಪ್ಪೇಶ್‌ರಾವ್, ಎಂ.ಜಿ ದಿನೇಶ್, ಅಣ್ಣಾ ಮಲೈ, ಡಿ. ಲಕ್ಷ್ಮಿದೇವಿ, ನೇತ್ರಾಬಾಯಿ, ತುಂಗಮ್ಮ, ಸಿ. ಮಂಜುಳ, ಗೀತಾ ಜಗದೀಶ್, ಎಂ. ನಾಗರಾಜ, ಉಷಾಕಿರಣ, ಶಮಾಬಾನು, ಪ್ರೇಮ್‌ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Tuesday, June 2, 2020

ನ್ಯಾಯಾಲಯದಲ್ಲಿ ಕಲಾಪಗಳು ಆರಂಭ : ದಿನಕ್ಕೆ ೨೦ ಪ್ರಕರಣ ವಿಚಾರಣೆ

ಭದ್ರಾವತಿ ಜೆಎಂಎಫ್‌ಸಿ ನ್ಯಾಯಾಲಯದ ಆವರಣದಲ್ಲಿ ವಾಹನಗಳನ್ನು ನಿಷೇಧಿಸಿರುವ ಹಿನ್ನಲೆಯಲ್ಲಿ ತಾಲೂಕು ಕಛೇರಿ ರಸ್ತೆಯಲ್ಲಿ ವಾಹನ ದಟ್ಟಣೆ ಉಂಟಾಗಿರುವುದು.
ಭದ್ರಾವತಿ, ಜೂ. ೨: ನಗರದ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಸೋಮವಾರದಿಂದ ಕಲಾಪಗಳು ನಡೆಯುತ್ತಿದ್ದು, ದಿನಕ್ಕೆ ೨೦ ಪ್ರಕರಣಗಳ ವಿಚಾರಣೆ ಮಾತ್ರ ನಡೆಯುತ್ತಿದೆ. 
ಸರ್ವೋಚ್ಛ ನ್ಯಾಯಾಲಯದ ಮಾರ್ಗಸೂಚಿಯಂತೆ ಕಲಾಪಗಳು ನಡೆಯುತ್ತಿದ್ದು, ಬೆಳಿಗ್ಗೆ ೧೧ ಗಂಟೆಯಿಂದ ಮಧ್ಯಾಹ್ನ ೨ ಗಂಟೆವರೆಗೆ ಹಾಗೂ ೨.೪೫ ರಿಂದ ಸಂಜೆ ೫ ಗಂಟೆವರೆಗೆ ಕಲಾಪಗಳು ನಡೆಯುತ್ತಿವೆ. ಕೇವಲ ನ್ಯಾಯಾಧೀಶರು, ನ್ಯಾಯವಾದಿಗಳು ಹಾಗೂ ಸಿಬ್ಬಂದಿಗಳಿಗೆ ಮಾತ್ರ ಪ್ರವೇಶ ನೀಡಲಾಗಿದೆ.  ಬೆಳಿಗ್ಗೆ ೧೦ ಪ್ರಕರಣಗಳು ಹಾಗೂ ಮಧ್ಯಾಹ್ನ ೧೦ ಪ್ರಕರಣಗಳು ಒಟ್ಟು ದಿನಕ್ಕೆ ೨೦ ಪ್ರಕರಣಗಳ ವಿಚಾರಣೆ ಮಾತ್ರ ನಡೆಸಲಾಗುತ್ತಿದೆ. ಉಳಿದ ಪ್ರಕರಣಗಳ ವಿಚಾರಣೆಗಳನ್ನು ಮುಂದೂಡಲಾಗುತ್ತಿದೆ. 
ಸಾರ್ವಜನಿಕರ ಪ್ರವೇಶ ಸಂಪೂರ್ಣ ನಿಷೇಧಿಸಲಾಗಿದೆ. ಕಕ್ಷಿದಾರರು ಸಹ ನೇರವಾಗಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಿಕೊಟ್ಟಿಲ್ಲ. ಅಲ್ಲದೆ ನ್ಯಾಯಾಲಯದ ಆವರಣದಲ್ಲಿ ವಾಹನಗಳ ನಿಲುಗಡೆ ನಿಷೇಧಿಸಲಾಗಿದೆ. ಇದರಿಂದಾಗಿ ತಾಲೂಕು ಕಛೇರಿ ರಸ್ತೆಯಲ್ಲಿ ವಾಹನ ದಟ್ಟಣೆ ಅಧಿಕವಾಗಿದ್ದು, ರಸ್ತೆಯ ಎರಡು ಬದಿ ವಾಹನಗಳ ನಿಲುಗಡೆ ಕಂಡು ಬರುತ್ತಿದೆ. ತಾಲೂಕು ಕಛೇರಿ ರಸ್ತೆ ಕಾಮಗಾರಿ ಕಳೆದ ಸುಮಾರು ೫-೬ ತಿಂಗಳಿನಿಂದ ನಡೆಯುತ್ತಿದ್ದು, ಇದರಿಂದಾಗಿ ಈ ರಸ್ತೆಯಲ್ಲಿ ವಾಹನಗಳ ಸಂಚಾರ ಅಸ್ತವ್ಯಸ್ತಗೊಂಡಿದೆ. ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ. 

ಅಧಿಕಾರಿಗಳು, ಗುತ್ತಿಗೆದಾರರ ನಿರ್ಲಕ್ಷ್ಯತನದಿಂದ ಕಳಪೆ ಕಾಮಗಾರಿ

ಗುಣಮಟ್ಟದ ಕಾಮಗಾರಿ ನಡೆಸಲು ಸ್ಥಳೀಯರಿಂದ ಆಗ್ರಹ 

ಭದ್ರಾವತಿ ನಗರದ ಜೆಪಿಎಸ್ ಕಾಲೋನಿ ಮೆಸ್ಕಾಂ ಕಛೇರಿ ಬಳಿ ನೂತನವಾಗಿ ನಿರ್ಮಾಣಗೊಂಡಿರುವ ಸರ್.ಎಂ ವಿಶ್ವೇಶ್ವರಯ್ಯ ಉದ್ಯಾನವನದ ಪಕ್ಕದಲ್ಲಿ ನಿರ್ಮಿಸಲಾಗಿರುವ ಬಾಕ್ಸ್ ಟೈಪ್ ಚರಂಡಿ ಕಾಮಗಾರಿ ಕಳಪೆ ಗುಣಮಟ್ಟದಿಂದ ಕೂಡಿರುವುದು. 
ಭದ್ರಾವತಿ, ಜೂ. ೨: ನಗರದ ಜೆಪಿಎಸ್ ಕಾಲೋನಿ ಮೆಸ್ಕಾಂ ಕಛೇರಿ ಬಳಿ ನೂತನವಾಗಿ ನಿರ್ಮಾಣಗೊಂಡಿರುವ ಸರ್.ಎಂ ವಿಶ್ವೇಶ್ವರಯ್ಯ ಉದ್ಯಾನವನದ ಪಕ್ಕದಲ್ಲಿ ನಿರ್ಮಿಸಲಾಗಿರುವ ಬಾಕ್ಸ್ ಟೈಪ್ ಚರಂಡಿ ಕಾಮಗಾರಿ ಕಳಪೆ ಗುಣಮಟ್ಟದಿಂದ ಕೂಡಿದ್ದು, ಚರಂಡಿಯಲ್ಲಿ ನೀರು ಸರಾಗವಾಗಿ ಹರಿಯದೆ ನಿಂತುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. 
ಕಳೆದ ೨-೩ ತಿಂಗಳಿನಿಂದ ಚರಂಡಿ ಕಾಮಗಾರಿ ನಡೆಯುತ್ತಿದ್ದು, ಅಧಿಕಾರಿಗಳು ಹಾಗೂ ಗುತ್ತಿಗೆದಾರರ ನಿರ್ಲಕ್ಷ್ಯತನದಿಂದ ಕಾಮಗಾರಿ ಗುಣಮಟ್ಟ ಕಳೆದುಕೊಂಡಿದೆ. ಚರಂಡಿಯ ಕಾಂಕ್ರೀಟ್ ಈಗಾಗಲೇ ಕಿತ್ತು ಹೋಗುವ ಸ್ಥಿತಿಯಲ್ಲಿದ್ದು, ಅಲ್ಲದೆ ರಸ್ತೆಯ ಒಂದು ಬದಿಯಿಂದ ಮತ್ತೊಂದು ಬದಿಗೆ ನೀರು ಸರಾಗವಾಗಿ ಹರಿದು ಹೋಗದೆ ನಿಂತುಕೊಳ್ಳುತ್ತಿದೆ. ರಸ್ತೆಯ ಮಧ್ಯಭಾಗದಲ್ಲಿ ಹಾಕಲಾಗಿರುವ ಕಾಂಕ್ರೀಟ್ ಕುಸಿದು ಬೀಳುವ ಸ್ಥಿತಿಯಲ್ಲಿದೆ.
 ಈ ರಸ್ತೆಯಲ್ಲಿ ಪ್ರತಿದಿನ ನೂರಾರು ಮಂದಿ ಸಂಚರಿಸುತ್ತಾರೆ. ಕಾಗದನಗರ ಮತ್ತು ಜೆಪಿಎಸ್ ಕಾಲೋನಿಗೆ ಸಂರ್ಪಕ ಕಲ್ಪಿಸುವ ರಸ್ತೆ ಇದಾಗಿದೆ. ಅಲ್ಲದೆ ಈ ರಸ್ತೆಯಲ್ಲಿ ಸರ್ಕಾರಿ ಶಾಲೆ ಹಾಗೂ ದೇವಸ್ಥಾನವಿದ್ದು, ತಕ್ಷಣ ಕಾಮಗಾರಿಯಲ್ಲಿನ ಲೋಪದೋಷ ಸರಿಪಡಿಸಿಕೊಂಡು ಗುಣಮಟ್ಟದ ಕಾಮಗಾರಿ ನಡೆಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ. 

ಎರಡು ದಿನಗಳ ಅಂತರರಾಷ್ಟ್ರೀಯ ವೆಬಿನಾರ್

ಭದ್ರಾವತಿ, ಜೂ. : ನಗರ ನ್ಯೂಟೌನ್ ಸರ್.ಎಂ.ವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ಅರ್ಥಶಾಸ್ತ್ರ ವಿಭಾಗ ಮತ್ತು ಐಕ್ಯೂಎಸಿ ವತಿಯಿಂದ ದಿ ಇಂಡಿಯನ್ ಎಕಾನೊಮಿಕ್ ಅಸೋಸಿಯೇಷನ್ ಸಹಕಾರದೊಂದಿಗೆ ಎರಡು ದಿನಗಳ ಅಂತರರಾಷ್ಟ್ರೀಯ ವೆಬಿನಾರ್(ಆನ್ ಲೈನ್ ವಿಚಾರ ಸಂಕಿರಣ) ಆಯೋಜಿಸಲಾಗಿದೆ.

                ಜೂ. ಮತ್ತು ರಂದು ಬೆಳಿಗ್ಗೆ ೧೧ ಗಂಟೆಯಿಂದಕೋವಿಡ್-೧೯ಫಿಸ್ಕಲ್ ಮ್ಯಾನೇಜ್ಮೆಂಟ್, ವೇಸ್ ಅಂಡ್ ಚಾಲೆಂಚೆಸ್ ಅಹೆಡ್ (Covid-19 Fiscal Management Ways & Challenges ahead) ವಿಷಯ ಕುರಿತ ವಿಚಾರ ಸಂಕಿರಣದಲ್ಲಿ ಅಂತರರಾಷ್ಟ್ರೀಯ ಮಟ್ಟದ ಅರ್ಥಶಾಸ್ತ್ರಜ್ಞರಾದ ಪ್ರೊ. ಎನ್.ಆರ್ ಭಾನುಮೂರ್ತಿ, ಬಾಂಗ್ಲಾದೇಶದ ಪ್ರೊ. ನಜುರುಲ್ ಇಸ್ಲಾಂ, ಜಮ್ಮು ಮತ್ತು ಕಾಶ್ಮೀರದ ಪ್ರೊ. ಸುಪ್ರಾನ್ ಶರ್ಮ, ಚೈನ್ನೈನ ಪ್ರೊ. ಚಂದ್ರಮೋಹನ್ ಭಾಗವಹಿಸಲಿದ್ದಾರೆ.

                ದೇಶ-ವಿದೇಶಗಳಿಂದ ಸುಮಾರು ೧೨೦ ಪ್ರಬಂಧಗಳು ಆನ್ಲೈನ್ ಮೂಲಕ ಮಂಡನೆಯಾಗಲಿವೆ. ಕುವೆಂಪು ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ. ಬಿ.ಪಿ ವೀರಭದ್ರಪ್ಪ ವೆಬಿನಾರ್ ಉದ್ಘಾಟಿಸಲಿದ್ದಾರೆ.

                ಶಾಸಕ ಬಿ.ಕೆ ಸಂಗಮೇಶ್ವರ್ ಉಪಸ್ಥಿತರಿರುವರು. ಕಾಲೇಜಿನ ಪ್ರಾಂಶುಪಾಲ ಡಾ. ಎಂ.ಜಿ ಉಮಾಶಂಕರ್, ಪ್ರಾಧ್ಯಾಪಕರಾದ ಡಾ. ಬಿ.ಎಂ ನಾಸಿರ್ಖಾನ್, ಪ್ರೊ. ಮೊಹಮ್ಮದ್ ನಜೀಬ್, ಡಾ. ಧನಂಜಯ, ಡಾ. ಆರ್. ಸೀಮಾ, ಡಾ. ದಾಕ್ಷಾಯಣಿ ಎಂ. ಡೋಂಗ್ರೆ, ಪ್ರೊ. ಎಸ್. ವರದರಾಜ ಸೇರಿದಂತೆ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಭಾಗವಹಿಸಲಿದ್ದಾರೆ.

Monday, June 1, 2020

ಪೊಲೀಸ್ ಸಿಬ್ಬಂದಿಗಳಿಗೆ ಕೊರೋನಾ ವೈರಸ್ ಸೋಂಕಿನ ಭೀತಿ

ಹಳೇನಗರ ಠಾಣೆಗೆ ಸ್ಯಾನಿಟೈಸರ್, ಜಿಲ್ಲಾ ರಕ್ಷಣಾಧಿಕಾರಿ ಭೇಟಿ 

ಭದ್ರಾವತಿ, ಜೂ. ೧: ಜಿಲ್ಲೆಯಲ್ಲಿ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಈ ನಡುವೆ ಇದೀಗ ಹಳೇನಗರ ಪೊಲೀಸ್ ಠಾಣೆ ಸಿಬ್ಬಂದಿಗಳಿಗೂ ಸೋಂಕಿನ ಭೀತಿ ಎದುರಾಗಿದೆ.
ಬೆಂಗಳೂರಿನ ಪಾದರಾಯನಪುರದಲ್ಲಿ ನಡೆದಿದ್ದ ಘರ್ಷಣೆ ಹಿನ್ನಲೆಯಲ್ಲಿ ಬಂದೋಬಸ್ತ್‌ಗೆ ನಿಯೋಜನೆಗೊಂಡಿದ್ದ ಶಿವಮೊಗ್ಗ ಸಶಸ್ತ್ರ ಮೀಸಲು ಪಡೆ ಸಿಬ್ಬಂದಿಗಳಿಗೆ ಸೋಮವಾರ ಕೊರೋನಾ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದರಿಂದಾಗಿ ಹಳೇನಗರ ಪೊಲೀಸ್ ಠಾಣೆ ಸಿಬ್ಬಂದಿಗಳಲ್ಲಿ ಆತಂಕ ಎದುರಾಗಿದೆ.
ಸೋಂಕಿಗೆ ಒಳಗಾಗಿರುವ ಓರ್ವ ಸಿಬ್ಬಂದಿ ಎರಡು ದಿನ ಹಳೇನಗರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿದ್ದು, ಇದರಿಂದಾಗಿ ಇಲ್ಲಿನ ಸಿಬ್ಬಂದಿಗಳಿಗೂ ಸೋಂಕಿನ ಭೀತಿ ಉಂಟಾಗಿದೆ. ಮುಂಜಾಗ್ರತೆ ಕ್ರಮವಾಗಿ ಠಾಣೆಗೆ ಭಾನುವಾರ ರಾತ್ರಿ ಸ್ಯಾನಿಟೈಸರ್ ಮಾಡಿಸಿದ್ದು, ಸ್ವಚ್ಛತೆ ಕೈಗೊಳ್ಳಲಾಗಿದೆ. ಸೋಮವಾರ ಜಿಲ್ಲಾ ರಕ್ಷಣಾಧಿಕಾರಿಗಳು ಠಾಣೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಿಬ್ಬಂದಿಗಳು ಠಾಣೆ ಹೊರ ಭಾಗದಲ್ಲೇ ಇದ್ದು, ಠಾಣೆಯೊಳಗೆ ಪ್ರವೇಶಿಸಿಲ್ಲ.


ಕೊರೋನಾ ವೈರಸ್ ಭೀತಿ : ಗ್ರಾಹಕರನ್ನು ಒಳಬಿಡದ ಎಸ್‌ಬಿಐ

ಮಳೆಯಲ್ಲಿಯೇ ವ್ಯವಹರಿಸಿದ ಗ್ರಾಹಕರು : ಎಎಪಿ ಮುಖಂಡರಿಂದ ತರಾಟೆ 

ಭದ್ರಾವತಿ ಕಾಗದನಗರ ಸ್ಟೇಟ್ ಆಫ್ ಇಂಡಿಯಾ(ಎಸ್‌ಬಿಐ) ಶಾಖೆಯಲ್ಲಿ ಬ್ಯಾಂಕಿನ ಹೊರಭಾಗ ಕಿಟಕಿ ಪಕ್ಕದಲ್ಲಿಯೇ ನಿಂತು ವ್ಯವಹರಿಸುತ್ತಿರುವ ಗ್ರಾಹಕರು. 
ಭದ್ರಾವತಿ, ಜೂ. ೧: ಕೊರೋನಾ ವೈರಸ್ ಹಿನ್ನಲೆಯಲ್ಲಿ ಲಾಕ್‌ಡೌನ್ ಘೋಷಿಸಿದ ಪರಿಣಾಮ ಕಳೆದ ೨ ತಿಂಗಳಿನಿಂದ ಸಂಕಷ್ಟಕ್ಕೆ ಒಳಗಾಗಿರುವ ಶ್ರೀಸಾಮಾನ್ಯರು ಹಂತ ಹಂತವಾಗಿ ಲಾಕ್‌ಡೌನ್ ಸಡಿಲಿಕೆಯಾಗುತ್ತಿದ್ದರೂ ಸಹ ಕೆಲವೆಡೆ ವಿನಾಕಾರಣ ತೊಂದರೆ ಅನುಭವಿಸುವಂತಾಗಿದೆ. 
ಇಲ್ಲಿನ ಕಾಗದನಗರದಲ್ಲಿರುವ ಸ್ಟೇಟ್ ಆಫ್ ಇಂಡಿಯಾ(ಎಸ್‌ಬಿಐ) ಶಾಖೆಯಲ್ಲಿ ಅಧಿಕಾರಿಗಳು ಕೊರೋನಾ ವೈರಸ್ ಹರಡುವ ಭೀತಿ ಉಂಟುಮಾಡಿ ಗ್ರಾಹಕರನ್ನು ಬ್ಯಾಂಕಿನ ಒಳಗೆ ಬಿಡದೆ ಹೊರಭಾಗದಿಂದಲೇ ವ್ಯವಹರಿಸುತ್ತಿದ್ದು, ಹೊರಭಾಗದಲ್ಲಿ ಯಾವುದೇ ಸೌಲಭ್ಯಗಳಲ್ಲದೆ ಗ್ರಾಹಕರು ತೊಂದರೆ ಅನುಭವಿಸುವಂತಾಗಿದೆ. 
ಮೇಲ್ಛಾವಣಿ ಇಲ್ಲ, ಕುಳಿತುಕೊಳ್ಳಲು ಆಸನಗಳ ವ್ಯವಸ್ಥೆ ಇಲ್ಲ. ಕಿಟಕಿ ಪಕ್ಕದಲ್ಲಿ ನಿಂತುಕೊಂಡೇ ವ್ಯವಹರಿಸಬೇಕಾಗಿದೆ. ಸೋಮವಾರ ಗ್ರಾಹಕರು ಮಳೆಯಲ್ಲಿಯೇ ನಿಂತುಕೊಂಡು ವ್ಯವಹಿಸಿದರು. 
ಎಎಪಿ ಮುಖಂಡರಿಂದ ತರಾಟೆ: 
ಗ್ರಾಹಕರ ಪರದಾಟ ಮನಕಂಡ ಆಮ್ ಆದ್ಮಿ ಪಾರ್ಟಿ ಮುಖಂಡರು ಜಿಲ್ಲಾಧ್ಯಕ್ಷ ಎಚ್. ರವಿಕುಮಾರ್ ನೇತೃತ್ವದಲ್ಲಿ ಬ್ಯಾಂಕಿನ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ನಂತರ ಎಚ್ಚೆತ್ತುಕೊಂಡ ಬ್ಯಾಂಕಿನ ಅಧಿಕಾರಿಗಳು ಗ್ರಾಹಕರಿಗೆ ಒಳ ಭಾಗದಲ್ಲಿ ವ್ಯವಹರಿಸಲು ಅವಕಾಶ ಕಲ್ಪಿಸಿಕೊಟ್ಟರು. 
ಸರ್ಕಾರ ಸಾರ್ವಜನಿಕರಿಗೆ ಮಾಸ್ಕ್ ಬಳಸುವ ಜೊತೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸೂಚಿಸಿದೆ.  ಇದನ್ನು ಪಾಲಿಸುವ ಗ್ರಾಹಕರಿಗೆ ಬ್ಯಾಂಕಿನ ಒಳಗೆ ಅವಕಾಶ ಕಲ್ಪಿಸಿಕೊಡಬೇಕು. ಆದರೆ ಅಧಿಕಾರಿಗಳು ಕೊರೋನಾ ವೈರಸ್ ನೆಪದಲ್ಲಿ ವಿನಾಕಾರಣ ತೊಂದರೆ ಕೊಡುವುದು ಸರಿಯಲ್ಲ ಎಂದು ಎಎಪಿ ಪಕ್ಷದ ಮುಖಂಡರು ಅಸಮಧಾನ ವ್ಯಕ್ತಪಡಿಸಿದರು. 
ಭದ್ರಾವತಿಯಲ್ಲಿ ಸೋಮವಾರ ಮಧ್ಯಾಹ್ನ ಎಡಬಿಡದೆ ಸುರಿದ ಮಳೆಯಿಂದಾಗಿ ರಸ್ತೆಯೊಂದರಲ್ಲಿ ನೀರು ನಿಂತುಕೊಂಡಿರುವುದು. 
ಎಡಬಿಡದೆ ಸುರಿದ ಮಳೆ: 
ಸೋಮವಾರ ಮಧ್ಯಾಹ್ನ ಸುಮಾರು ೨ ಗಂಟೆ ಸಮಯ ಎಡಬಿಡದೆ ಮಳೆಯಾಗಿದ್ದು, ನಗರದ ಬಹುತೇಕ ಕಡೆ ತಗ್ಗು ಪ್ರದೇಶಗಳು ಜಲಾವೃತ್ತಗೊಂಡಿವೆ. ರಸ್ತೆಗಳ ಗುಂಡಿಗೊಟರುಗಳಲ್ಲಿ ನೀರು ತುಂಬಿಕೊಂಡಿದ್ದು, ಕೆಲವು ಕಡೆ ರಸ್ತೆ ಇಕ್ಕೆಲಗಳ ಚರಂಡಿಗಳು ತುಂಬಿಕೊಂಡು ರಸ್ತೆಯಲ್ಲಿ ಆಳೆತ್ತರಕ್ಕೆ ನೀರು ನಿಂತುಕೊಂಡಿರುವುದು ಕಂಡು ಬಂದಿತು. ನಗರ ಭಾಗದಲ್ಲಿ ಮಳೆಯಿಂದ ಯಾವುದೇ ಹಾನಿ ಸಂಭವಿಸಿಲ್ಲ.