ತಪ್ಪಿತಸ್ಥ ಇಂಜಿನಿಯರ್ ಅಮಾನತ್ತುಗೊಳಿಸಿ ತನಿಖೆ ಕೈಗೊಳ್ಳಲು ಆಗ್ರಹ
ಲೋಕೋಪಯೋಗಿ ಇಲಾಖೆ ವತಿಯಿಂದ ಎಸ್‌ಸಿಪಿ ಟಿಎಸ್‌ಪಿ ಮತ್ತು ವಾರ್ಷಿಕ ನಿರ್ವಹಣೆ(ಜಂಗಲ್ ಕಟಿಂಗ್) ಕಾಮಗಾರಿಯಲ್ಲಿ ಅವ್ಯವಹಾರ ನಡೆದಿದ್ದು, ಈ ಹಿನ್ನಲೆಯಲ್ಲಿ ತಕ್ಷಣ ತಪ್ಪಿತಸ್ಥ ಇಂಜಿನಿಯರ್ ಅಮಾನತ್ತುಗೊಳಿಸಿ ತನಿಖೆ ಕೈಗೊಳ್ಳಬೇಕೆಂದು ಒತ್ತಾಯಿಸಿ ಗುರುವಾರ ಭದ್ರಾವತಿ ತರೀಕೆರೆ ರಸ್ತೆಯಲ್ಲಿರುವ ಲೋಕೋಪಯೋಗಿ ಕಛೇರಿ ಮುಂಭಾಗ ಕರ್ನಾಟಕ ರಾಜ್ಯ ಮಾದಿಗ ಸಮಾಜ ಸೇರಿದಂತೆ ಇನ್ನಿತರ ಸಂಘಟನೆಗಳ ವತಿಯಿಂದ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಶಿವಕುಮಾರ್ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಭದ್ರಾವತಿ, ಜೂ. ೪: ಲೋಕೋಪಯೋಗಿ ಇಲಾಖೆ ವತಿಯಿಂದ ಎಸ್‌ಸಿಪಿ ಟಿಎಸ್‌ಪಿ ಮತ್ತು ವಾರ್ಷಿಕ ನಿರ್ವಹಣೆ(ಜಂಗಲ್ ಕಟಿಂಗ್) ಕಾಮಗಾರಿಯಲ್ಲಿ ಅವ್ಯವಹಾರ ನಡೆದಿದ್ದು, ಈ ಹಿನ್ನಲೆಯಲ್ಲಿ ತಕ್ಷಣ ತಪ್ಪಿತಸ್ಥ ಇಂಜಿನಿಯರ್ ಅಮಾನತ್ತುಗೊಳಿಸಿ ತನಿಖೆ ಕೈಗೊಳ್ಳಬೇಕೆಂದು ಒತ್ತಾಯಿಸಿ ಗುರುವಾರ ನಗರದ ತರೀಕೆರೆ ರಸ್ತೆಯಲ್ಲಿರುವ ಲೋಕೋಪಯೋಗಿ ಕಛೇರಿ ಮುಂಭಾಗ ಕರ್ನಾಟಕ ರಾಜ್ಯ ಮಾದಿಗ ಸಮಾಜ ಸೇರಿದಂತೆ ಇನ್ನಿತರ ಸಂಘಟನೆಗಳ ವತಿಯಿಂದ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಶಿವಕುಮಾರ್ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ನಗರ ಮತ್ತು ಗ್ರಾಮೀಣ ಭಾಗದಲ್ಲಿ ಎಸ್‌ಸಿಪಿ ಟಿಎಸ್‌ಪಿ ಯೋಜನೆಯಡಿ ೨೦೧೮-೨೦೧೯ ಮತ್ತು ೨೦೧೯-೨೦೨೦ನೇ ಸಾಲಿನಲ್ಲಿ ಸುಮಾರು ೧,೮೪,೦೦೦ ರು. ವೆಚ್ಚದಲ್ಲಿ ಕಾಮಗಾರಿಗಳು ನಡೆದಿವೆ. ಕೆಲವು ಭಾಗದಲ್ಲಿ ತಾಂತ್ರಿಕವಾಗಿ ಮಂಜೂರಾತಿ ಆಗಿರುವ ಜಾಗಗಳನ್ನು ಬಿಟ್ಟು ಬೇರೆ ಕಡೆ ಮಾಡಲಾಗಿದೆ. ಅಲ್ಲದೆ ಈ ಕಾಮಗಾರಿಗಳಿಗೆ ಸಂಬಂಧಪಟ್ಟಂತೆ ಅಳತೆ ಪುಸ್ತಕ, ಬಿಲ್ ಪ್ರತಿಗಳು ಸೇರಿದಂತೆ ಕೆಲವು ಮುಖ್ಯ ದಾಖಲೆಗಳು ಕಛೇರಿಯಲ್ಲಿ ಲಭ್ಯವಿರುವುದಿಲ್ಲ ಆರೋಪಿಸಲಾಯಿತು.
೨೦೧೯ ಮತ್ತು ೨೦೨೦ ನೇ ಸಾಲಿನ ಎನ್.ಎಂ ರಸ್ತೆ ಎಸ್‌ಎಚ್ ೬೫ರ ಸರಪಳಿ ೧೪೯.೮ ರಿಂದ ೧೮೬.೬ ಕಿ.ಮೀ ಆಯ್ದ ಭಾಗದಲ್ಲಿ ವಾರ್ಷಿಕ ನಿರ್ವಹಣೆ ಕಾಮಗಾರಿ ಮಾಡದೆ ಸುಮಾರು ೨೦ ಲಕ್ಷ ರು. ಬಿಲ್ ಸಂಬಂಧಪಟ್ಟ ಗುತ್ತಿಗೆದಾರರಿಗೆ ಪಾವತಿಸಲಾಗಿದೆ ಎಂದು ದೂರಲಾಯಿತು.
ಈ ಎಲ್ಲಾ ಅಕ್ರಮಗಳಿಗೆ ಕಾರಣರಾಗಿರುವ ಇಂಜಿನಿಯರ್ ಅಮಾನತ್ತುಗೊಳಿಸಿ ತನಿಖೆ ನಡೆಸುವ ಮೂಲಕ ಕಾನೂನು ಕ್ರಮ ಕೈಗೊಂಡು ಸರ್ಕಾರದ ಬೊಕ್ಕಸಕ್ಕೆ ಉಂಟಾಗಿರುವ ನಷ್ಟವನ್ನು ಅವರಿಂದ ಮರುಪಾವತಿಸಬೇಕೆಂದು ಆಗ್ರಹಿಸಲಾಯಿತು.
ಪ್ರತಿಭಟನೆಯಲ್ಲಿ ಕರ್ನಾಟಕ ಜನಸೈನ್ಯ ಜಿಲ್ಲಾಧ್ಯಕ್ಷ ಕೆ. ಮಂಜುನಾಥ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಹನುಮಮ್ಮ, ಮಾದಿಗ ಸಮಾಜದ ರಾಜ್ಯಾಧ್ಯಕ್ಷ ಎಸ್. ಮಂಜುನಾಥ್, ಐ.ವಿ ಸಂತೋಷ್‌ಕುಮಾರ್, ಪುಟ್ಟರಾಜು, ಕುಮಾರ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.