ಭದ್ರಾವತಿ ತರೀಕೆರೆ ರಸ್ತೆಯಲ್ಲಿರುವ ರೈಲ್ವೆ ಮೇಲ್ಸೇತುವೆ ಮೇಲೆ ಬಜರಂಗದಳ ಕಾರ್ಯಕರ್ತರು ವೀರಸಾವರ್ಕರ್ ಹೆಸರು ಬರೆಯುವ ಮೂಲಕ ಸೇತುವೆಗೆ ನಾಮಕರಣಗೊಳಿಸಲು ಒತ್ತಾಯಿಸಿರುವುದು.
ಭದ್ರಾವತಿ, ಜೂ. ೧೪: ನಗರದ ತರೀಕೆರೆ ರಸ್ತೆಯಲ್ಲಿ ಕೆಲವು ವರ್ಷಗಳ ಹಿಂದೆ ನಿರ್ಮಾಣಗೊಂಡಿರುವ ರೈಲ್ವೆ ಮೇಲ್ಸೇತುವೆಗೆ ಇದೀಗ ವೀರ ಸಾವರ್ಕರ್ ಹೆಸರಿಡಬೇಕೆಂದು ಸೇತುವೆ ಮೇಲೆ ಹೆಸರು ಬರೆಯಲಾಗಿದ್ದು, ಬಜರಂಗ ದಳ ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ಹಂಚಿ ಕೊಂಡಿದ್ದಾರೆ.
ಈಗಾಗಲೇ ರಾಜ್ಯದೆಲ್ಲೆಡೆ ವೀರ ಸಾವರ್ಕರ್ ಹೆಸರಿಡುವ ಸಂಬಂಧ ವಿವಾದಗಳು ತಲೆ ತೋರುತ್ತಿದ್ದು, ಈ ನಡುವೆ ಇಲ್ಲಿನ ರೈಲ್ವೆ ಮೇಲ್ಸೇತುವೆ ಮೇಲೆ ವೀರ ಸಾವರ್ಕರ್ ಹೆಸರು ಬರೆಯುವ ಮೂಲಕ ಮತ್ತಷ್ಟು ವಿವಾದ ಸೃಷ್ಟಿಯಾಗಿದೆ. ಈ ಸೇತುವೆ ಇದುವರೆಗೂ ಉದ್ಘಾಟಣೆಗೊಂಡಿಲ್ಲ. ಯಾವುದೇ ಹೆಸರನ್ನು ಸಹ ನಾಮಕರಣ ಮಾಡಿಲ್ಲ.
ಮಹಾತ್ಮಗಾಂಧಿ ವೃತ್ತದಿಂದ ಶಿವಾನಿ ವೃತ್ತದವರೆಗೂ ತರೀಕೆರೆ ರಸ್ತೆ ಬದಲಾಗಿ ಮಹಾತ್ಮ ಗಾಂಧಿ ರಸ್ತೆ ಎಂದು ನಾಮಕರಣ ಮಾಡಬೇಕೆಂದು ನಗರಸಭೆಗೆ ಒತ್ತಾಯಿಸಲಾಗಿತ್ತು. ಆದರೆ ಈ ಹೆಸರು ಇಂದಿಗೂ ಚಾಲ್ತಿಗೆ ಬಂದಿಲ್ಲ. ಇದೀಗ ಸೇತುವೆಗೆ ವೀರ ಸಾವರ್ಕರ್ ಹೆಸರಿಡಬೇಕೆಂದು ಬಜರಂಗದಳ ಕಾರ್ಯಕರ್ತರು ಒತ್ತಾಯಿಸುತ್ತಿರುವುದು ನಗರದಲ್ಲಿ ವಿವಾದಕ್ಕೆ ಎಡೆ ಮಾಡಿಕೊಡುತ್ತಿದೆ.