Saturday, June 20, 2020

ಅಕ್ರಮ ಮದ್ಯ ಮಾರಾಟ : ದಾಳಿ

ಭದ್ರಾವತಿ, ಜೂ. ೨೦: ವಾಸದ ಮನೆಯೊಂದರ ಮುಂದೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾಗ ಹೊಸಮನೆ ಶಿವಾಜಿ ಸರ್ಕಲ್ ಠಾಣೆ ಪೊಲೀಸರು ದಾಳಿ ನಡೆಸಿ ಮದ್ಯ ವಶಪಡಿಸಿಕೊಂಡಿರುವ ಘಟನೆ ನಡೆದಿದೆ. 
ಹೊಸಮನೆ ಹನುಮಂತ ನಗರದ ನಿವಾಸಿ ಚಿನ್ನರಾಜು ಹಾಗೂ ಈತನ ಪತ್ನಿ ಮುನಿಯಮ್ಮ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದು, ಪೊಲೀಸರ ಕಾರ್ಯಾಚರಣೆ ವೇಳೆ ಪರಾರಿಯಾಗಿದ್ದಾರೆ. ಸ್ಥಳದಲ್ಲಿ  ೧೦೫೦ ರು. ಮೌಲ್ಯದ ೨ ಲೀ ೭೦೦ ಎಂ.ಎಲ್ ಪ್ರಮಾಣದ ೯೦ ಎಂ.ಎಲ್‌ನ ಹೇವರ್ಡ್ಸ್ ಚೀರ‍್ಸ್ ವಿಸ್ಕಿ ೩೦ ಪೌಚ್‌ಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 

ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್ ಹುಟ್ಟುಹಬ್ಬ

ಭದ್ರಾವತಿಯಲ್ಲಿ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಟಿ. ಚಂದ್ರೇಗೌಡ ನೇತೃತ್ವದಲ್ಲಿ ಹುಟ್ಟುಹಬ್ಬದ ಅಂಗವಾಗಿ ಬಿ.ಕೆ ಮೋಹನ್‌ರವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. 
ಭದ್ರಾವತಿ, ಜೂ. ೨೦: ಶಾಸಕ ಬಿ.ಕೆ ಸಂಗಮೇಶ್ವರ್ ಸಹೋದರ ನಗರಸಭೆ ಮಾಜಿ ಅಧ್ಯಕ್ಷ, ಬಿ.ಕೆ ಮೋಹನ್ ಹುಟ್ಟುಹಬ್ಬ ಶನಿವಾರ ನಗರದ ವಿವಿಧೆಡೆ ಆಚರಿಸಲಾಯಿತು. 
ಶಾಸಕರ ಗೃಹ ಕಛೇರಿಯಲ್ಲಿ ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು, ಅಭಿಮಾನಿಗಳು, ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ತೆರಳಿ ಹುಟ್ಟುಹಬ್ಬದ ಶುಭಾಶಯ ಕೋರಿದರು. 
ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಟಿ. ಚಂದ್ರೇಗೌಡ ನೇತೃತ್ವದಲ್ಲಿ ಬಿ.ಕೆ ಮೋಹನ್ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಪ್ರಮುಖರಾದ ಯುವ ಮುಖಂಡ ಬಿ.ಎಸ್ ಗಣೇಶ್, ದಿಲ್‌ದಾರ್, ಅಮೀರ್‌ಜಾನ್, ಎಂ. ಶಿವಕುಮಾರ್, ವೆಂಕಟಯ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ಮಾದಮ್ಮ ನಿಧನ

ಮಾದಮ್ಮ 
ಭದ್ರಾವತಿ, ಜೂ. ೨೦: ನಗರದ ರೈತರ ಅಡಿಕೆ ಮಾರಾಟ ಮತ್ತು ಪರಿಷ್ಕರಣ ಸಹಕಾರ ಸಂಘ(ರ‍್ಯಾಮ್ಕೋಸ್)ದ ಸಂಸ್ಥಾಪಕ ದಿವಂಗತ ಎಚ್. ಲೋಕೇಶಪ್ಪನವರ ಪತ್ನಿ ಮಾದಮ್ಮ(೮೦) ಶನಿವಾರ ಮಧ್ಯಾಹ್ನ ನಿಧನ ಹೊಂದಿದರು.
ಮೃತರು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ, ಸಹಕಾರಿ ಧುರೀಣ ಎಚ್.ಎಲ್ ಷಡಾಕ್ಷರಿ ಸೇರಿದಂತೆ ೩ ಗಂಡು, ೨ ಹೆಣ್ಣು ಮಕ್ಕಳು ಹಾಗೂ ಬಂಧು-ಬಳಗವನ್ನು ಬಿಟ್ಟಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಜೂ.೨೧ರಂದು ಮಧ್ಯಾಹ್ನ ೨ ಗಂಟೆಗೆ ಅರಕೆರೆ ಗ್ರಾಮದ ಅವರ ತೋಟದಲ್ಲಿ ನಡೆಯಲಿದೆ. ಇವರ ನಿಧನಕ್ಕೆ ನಗರದ ಹಲವು ಸಂಘ-ಸಂಸ್ಥೆಗಳು, ಗಣ್ಯರು ಸಂತಾಪ ಸೂಚಿಸಿದ್ದಾರೆ. 

ಯೋಗ ದಿನಾಚರಣೆ ಅಂಗವಾಗಿ ರಾಷ್ಟ್ರಮಟ್ಟದ ಇ-ಕ್ವಿಜ್

ಭದ್ರಾವತಿ, ಜೂ. ೨೦: ಅಂತರ ರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಣ ವಿಭಾಗ, ಅರ್ಥಶಾಸ್ತ್ರ ವಿಭಾಗ, ರಾಜ್ಯಶಾಸ್ತ್ರ ವಿಭಾಗ, ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗ ಹಾಗೂ ಎನ್‌ಸಿಸಿ ಘಟಕದ ವತಿಯಿಂದ ರಾಷ್ಟ್ರಮಟ್ಟದ ಇ-ಕ್ವಿಜ್(ರಸ ಪ್ರಶ್ನೆ) ಸ್ಪರ್ಧೆ ಆಯೋಜಿಸಲಾಗಿದೆ. 
ಯೋಗ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಸ್ಪರ್ಧೆ ಆಯೋಜಿಸಲಾಗಿದೆ. ಆನ್‌ಲೈನ್ ಮೂಲಕ ನಡೆಯುವ ಸ್ಪರ್ಧೆಯಲ್ಲಿ ಭಾಗವಹಿಸಿ ಶೇ.೫೦ಕ್ಕಿಂತ ಹೆಚ್ಚು ಅಂಕ ಪಡೆದವರಿಗೆ ಇ-ಸರ್ಟಿಫಿಕೇಟ್ ಬಹುಮಾನ ವಿತರಿಸಲಾಗುವುದು. 
ಹೆಚ್ಚಿನ ಮಾಹಿತಿಗೆ ಎಂ.ಡಿ ವಿಶ್ವನಾಥ್, ಮೊ: ೯೯೮೬೮೧೭೩೨೪, ಡಾ. ಜಿ.ಆರ್ ರಾಜಶೇಖರ್, ಮೊ: ೯೬೧೧೪೨೨೧೨೨, ಡಾ. ಟಿ. ಪ್ರಸನ್ನ, ಮೊ: ೯೪೮೧೯೮೯೪೯೮ ಅಥವಾ ಪ್ರೊ. ಎನ್.ಯು ಹೆಗ್ಗಡೆ, ಮೊ: ೮೦೭೩೨೧೫೭೯೨ ಸಂಖ್ಯೆಗೆ ಕರೆ ಮಾಡಬಹುದಾಗಿದೆ. ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಜಿ ಧನಂಜಯ ಕೋರಿದ್ದಾರೆ. 


ನಗರದ ವಿವಿದೆಡೆ ಮಾಜಿ ಶಾಸಕ ಎಂಜೆ ಅಪ್ಪಾಜಿ ಹುಟ್ಟುಹಬ್ಬ

ಭದ್ರಾವತಿಯಲ್ಲಿ ಕುವೆಂಪು ಪ್ರವಾಸಿ ವಾಹನ ಚಾಲಕರ ಮತ್ತು ಮಾಲಿಕರ ಸಂಘದ ವತಿಯಿಂದ ಶನಿವಾರ ನಗರದ ಖಾಸಗಿ ಬಸ್ ನಿಲ್ದಾಣದಲ್ಲಿ ಮಾಜಿ ಶಾಸಕ ಎಂ.ಜೆ ಅಪ್ಪಾಜಿ ಹುಟ್ಟುಹಬ್ಬದ ಜೊತೆಗೆ ಮುಖಂಡ ಧರ್ಮರಾಜ್‌ರವರ ಹುಟ್ಟುಹಬ್ಬ ಸಹ ಆಚರಿಸಿ ಇಬ್ಬರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. 
ಭದ್ರಾವತಿ, ಜೂ. ೨೦ : ಮಾಜಿ ಶಾಸಕ ಎಂ.ಜೆ ಅಪ್ಪಾಜಿ ೬೭ನೇ ಹುಟ್ಟುಹಬ್ಬ ವಿವಿಧ ಸಂಘಟನೆಗಳಿಂದ ಶನಿವಾರ ಆಚರಿಸಲಾಯಿತು.
      ಬೆಳಿಗ್ಗೆ ತಾಲ್ಲೂಕಿನ ನಾಗತಿಬೆಳಗಲು ಶ್ರೀ ನಂಜುಂಡೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು. ನಗರದ ಕುವೆಂಪು ಪ್ರವಾಸಿ ವಾಹನ ಚಾಲಕರ ಮತ್ತು ಮಾಲಿಕರ ಸಂಘದ ವತಿಯಿಂದ ನಗರದ ಖಾಸಗಿ ಬಸ್ ನಿಲ್ದಾಣದಲ್ಲಿ ಎಂ.ಜೆ ಅಪ್ಪಾಜಿ ಹುಟ್ಟುಹಬ್ಬದ ಜೊತೆಗೆ ಮುಖಂಡ ಧರ್ಮರಾಜ್‌ರವರ ಹುಟ್ಟುಹಬ್ಬ ಸಹ ಆಚರಿಸಿ ಇಬ್ಬರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. 
ಜಿಲ್ಲಾ ಪಂಚಾಯಿತಿ ಸದಸ್ಯ ಎಸ್. ಮಣಿಶೇಖರ್, ಮುಖಂಡ ಬಿ.ಎಸ್ ನಾರಾಯಣಪ್ಪ ಸೇರಿದಂತೆ ಪ್ರವಾಸಿ ವಾಹನ ಚಾಲಕರು, ಮಾಲಿಕರು, ಖಾಸಗಿ ಬಸ್ ಚಾಲಕರು, ನಿರ್ವಾಹಕರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 
     ವಿಐಎಸ್‌ಎಲ್ ನಿವೃತ್ತ ಕಾರ್ಮಿಕರ ಸಂಘದ ವತಿಯಿಂದ ಎಂ.ಜೆ ಅಪ್ಪಾಜಿ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಸಂಘದ ಪದಾಧಿಕಾರಿಗಳು ಹಾಗೂ ಮುಖಂಡರು ಉಪಸ್ಥಿತರಿದ್ದರು.
      ನ್ಯೂಟೌನ್ ನಗರಸಭೆ ಶಾಖಾ ಕಚೇರಿ ಆವರಣದಲ್ಲಿರುವ ನಿರ್ಗತಿಕರ ಆಶ್ರಯ ತಂಗುದಾಣದಲ್ಲಿ ಮಾದಿಗ ಸಮಾಜ ಮತ್ತು ಕರ್ನಾಟಕ ಜನಸೈನ್ಯ ಸೇರಿದಂತೆ ವಿವಿಧ ಸಂಘಟನೆಗಳಿಂದ ನಿರ್ಗತಿಕರಿಗೆ ಊಟ ಬಡಿಸುವ ಮೂಲಕ ಹುಟ್ಟುಹಬ್ಬ ಆಚರಿಸಲಾಗಿತು.
ಎಂ.ಜೆ ಅಪ್ಪಾಜಿ, ಶಾರದ ಅಪ್ಪಾಜಿ, ಮಾದಿಗ ಸಮಾಜದ ರಾಜ್ಯಾಧ್ಯಕ್ಷ ಎಸ್. ಮಂಜುನಾಥ್, ಕರ್ನಾಟಕ ಜನಸೈನ ಜಿಲ್ಲಾಧ್ಯಕ್ಷ ಕೆ. ಮಂಜುನಾಥ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಹನುಮಮ್ಮ, ಮುಖಂಡ ಅಶೋಕ್‌ಕುಮಾರ್, ಐ.ವಿ ಸಂತೋಷ್‌ಕುಮಾರ್, ಕಬ್ಬಡಿ ಸುಬ್ಬು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ನಾಗರತ್ನಮ್ಮ ನಿಧನ

ನಾಗರತ್ನಮ್ಮ 
ಭದ್ರಾವತಿ, ಜೂ. ೨೦: ದಿವಂಗತ. ಕೆ.ವಿ ನಾಗಪ್ಪ ಶೆಟ್ಟರ್ ಪತ್ನಿ, ಹಳೇನಗರದ ನಿವಾಸಿ ನಾಗರತ್ನಮ್ಮ( ೯೪)  ಶನಿವಾರ ಬೆಳಿಗ್ಗೆ ನಿಧನ ಹೊಂದಿದರು. 
ಮೃತರು ೩ ಹೆಣ್ಣು, ೫ ಗಂಡು ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳು ಸೇರಿದಂತೆ ಬಂಧು-ಬಳಗವನ್ನು ಬಿಟ್ಟಗಲಿದ್ದಾರೆ. ನಗರದ ಹೊಳೆಹೊನ್ನೂರು ರಸ್ತೆಯಲ್ಲಿರುವ ಹಿಂದೂ ರುದ್ರ ಭೂಮಿಯಲ್ಲಿ ಅಂತ್ಯ ಸಂಸ್ಕಾರ ನೆರವೇರಿತು. ಮೃತರ ನಿಧನಕ್ಕೆ ನಗರದ ಗಣ್ಯರು ಸಂತಾಪ ಸೂಚಿಸಿದ್ದಾರೆ. 

Friday, June 19, 2020

ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಎಲ್ಲಾ ರೀತಿಯ ಸಿದ್ದತೆ : ಆತಂಕವಿಲ್ಲದೆ ಆತ್ಮವಿಶ್ವಾಸದಿಂದ ಪರೀಕ್ಷೆ ಬರೆಯಿರಿ

ಪತ್ರಿಕಾಗೋಷ್ಠಿಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್ ಸೋಮಶೇಖರಯ್ಯ ವಿದ್ಯಾರ್ಥಿಗಳಿಗೆ ಕರೆ 

ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್ ಸೋಮಶೇಖರಯ್ಯ
ಭದ್ರಾವತಿ, ಜೂ. ೧೯: ಈ ಬಾರಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಯಾವುದೇ ಆತಂಕವಿಲ್ಲದೆ,  ಆತ್ಮವಿಶ್ವಾಸದಿಂದ ಪರೀಕ್ಷೆ ಬರೆಯಲು ಅನುಕೂಲವಾಗುವಂತೆ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್ ಸೋಮಶೇಖರಯ್ಯ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. 
ಜೂ.೨೫ ರಿಂದ ಜು.೩ರವರೆಗೆ ತಾಲೂಕಿನ ನಗರ ವ್ಯಾಪ್ತಿಯ ೮ ಹಾಗೂ ಗ್ರಾಮಾಂತರ ವ್ಯಾಪ್ತಿಯ ೭ ಸೇರಿದಂತೆ ಒಟ್ಟು ೧೫ ಕೇಂದ್ರಗಳಲ್ಲಿ  ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಯುತ್ತಿದ್ದು, ಒಟ್ಟು ೪೫೫೮ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಪರೀಕ್ಷಾ ಕೇಂದ್ರದ ಪ್ರತಿಯೊಂದು ಕೊಠಡಿಯಲ್ಲಿ ಒಂದು ಬೆಂಚಿನಲ್ಲಿ ತಲಾ ಇಬ್ಬರಂತೆ ಕನಿಷ್ಠ ೧೮ ರಿಂದ ೨೦ ವಿದ್ಯಾರ್ಥಿಗಳು ಸಾಮಾಜಿಕ ಅಂತರ ಕಾಪಾಡಿಕೊಂಡು ಪರೀಕ್ಷೆ ಬರೆಯಲು  ವ್ಯವಸ್ಥೆ ಮಾಡಲಾಗಿದೆ. ಯಾವುದೇ ಪರೀಕ್ಷಾ ಕೇಂದ್ರ ಕಂಟೋನ್ಮೆಂಟ್ ಝೋನ್ ಎಂದು ಘೋಷಿಸಲ್ಪಟ್ಟಲ್ಲಿ ಪರಿಸ್ಥಿತಿ ಎದುರಿಸಲು ಮೂರು ಹೆಚ್ಚುವರಿ ಪರೀಕ್ಷಾ ಕೇಂದ್ರಗಳನ್ನು ಕಾಯ್ದಿರಿಸಿಕೊಳ್ಳಲಾಗಿದೆ ಎಂದರು.
ತಾಲ್ಲ್ಲೂಕಿನ ವಿವಿಧ ಭಾಗದ ಒಟ್ಟು ೨೫೯ ವಿದ್ಯಾರ್ಥಿಗಳು ನಿಗದಿತ ಸಮಯಕ್ಕೆ ಆಯಾ ಪರೀಕ್ಷಾ ಕೇಂದ್ರಗಳಿಗೆ ತೆರಳಲು ಅನುಕೂಲವಾಗುವಂತೆ ಖಾಸಗಿ ಶಾಲೆಗಳ ೧೫ ಬಸ್ಸುಗಳನ್ನು ಸಾರಿಗೆ ಸಂಪರ್ಕಕ್ಕೆ ಬಳಸಿಕೊಳ್ಳಲಾಗುತ್ತಿದೆ. ಒಂದು ಜೊತೆ ಮಾಸ್ಕ್ ಉಚಿತವಾಗಿ ವಿತರಿಸಲಾಗುತ್ತಿದ್ದು, ಪರೀಕ್ಷಾ ಕೊಠಡಿ ಪ್ರವೇಶಿಸುವ ಮೊದಲು ನಡೆಸುವ ತಪಾಸಣೆಯಲ್ಲಿ ಕೆಮ್ಮು, ಶೀತ, ನೆಗಡಿ, ಜ್ವರ ಸೇರಿದಂತೆ ಯಾವುದೇ ರೀತಿಯ ಲಕ್ಷಣಗಳು  ಕಂಡು ಬಂದಲ್ಲಿ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆಯಲು ಪ್ರತಿಯೊಂದು ಕೇಂದ್ರಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ಈ ಬಾರಿ ಹೊರ ಜಿಲ್ಲೆಗಳ ೭೭ ವಿದ್ಯಾರ್ಥಿಗಳು ತಾಲೂಕಿನಲ್ಲಿ  ಹಾಗೂ ತಾಲೂಕಿನ ೧೨೦ ವಿದ್ಯಾರ್ಥಿಗಳು ಹೊರಜಿಲ್ಲೆಗಳಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ ಎಂದರು.
ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ಟೈಪಿಂಗ್, ಜೆರಾಕ್ಸ್ ಅಂಗಡಿಗಳು ತೆರೆಯುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದ್ದು, ಪರೀಕ್ಷಾ ಕೇಂದ್ರಗಳಿಗೆ ಪರೀಕ್ಷಾರ್ಥಿಗಳು ಹಾಗೂ ಪರೀಕ್ಷೆಗೆ ಸಂಬಂಧಪಟ್ಟ ಸಿಬ್ಬಂದಿ ಹಾಗೂ ಅಧಿಕಾರಿಗಳನ್ನು ಹೊರತುಪಡಿಸಿ ಇತರರು ಪ್ರವೇಶಿಸುವಂತಿಲ್ಲ. ಪರೀಕ್ಷಾ ಕೇಂದ್ರದಲ್ಲಿ ಮೊಬೈಲ್ ಬಳಕೆ ಮಾಡುವಂತಿಲ್ಲ. ೨೦೦ ಮೀ ವ್ಯಾಪ್ತಿಯೊಳಗೆ ೪ ಜನರಿಗಿಂತ ಹೆಚ್ಚಿನ ಜನರು ಸೇರದಂತೆ ಜಿಲ್ಲಾಧಿಕಾರಿಗಳ ನಿರ್ದೇಶನದ ಮೇರೆಗೆ ನಿಷೇಧಾಜ್ಞೆ  ಜಾರಿಗೊಳಿಸಲಾಗಿದೆ ಎಂದರು.
ಉಳಿದಂತೆ ಒಟ್ಟಾರೆ ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆಯನ್ನು ಯಶಸ್ವಿಯಾಗಿ ಬರೆಯುವ ನಿಟ್ಟಿನಲ್ಲಿ ಸಹಕಾರಿಯಾಗುವಂತೆ ಆತ್ಮವಿಶ್ವಾಸ ತುಂಬುವ, ಗೊಂದಲಗಳನ್ನು ನಿವಾರಿಸುವ, ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸುವ ಹಾಗೂ ಸುರಕ್ಷತಾ ಕ್ರಮಗಳನ್ನು ಅನುಸರಿಸುವ ಎಲ್ಲಾ ಕ್ರಮಗಳನ್ನು ಇಲಾಖೆವತಿಯಿಂದ ಮಾಡಲಾಗಿದೆ. ಈ ಹಿನ್ನಲೆಯಲ್ಲಿ ವಿದ್ಯಾರ್ಥಿಗಳು ಯಾವುದೇ ಆತಂಕವಿಲ್ಲದೆ ಪರೀಕ್ಷೆ ಬರೆಯುವ ವಿಶ್ವಾಸವಿದೆ ಎಂದರು. ಕಚೇರಿ ವ್ಯವಸ್ಥಾಪಕ ಕಾಂತ್‌ರಾಜ್, ಕ್ಷೇತ್ರ ಶಿಕ್ಷಣ ಸಂಪನ್ಮೂಲ ಸಮನ್ವಯಾಧಿಕಾರಿ ಎ.ಜಿ ರಾಜಶೇಖರ್ ಉಪಸ್ಥಿತರಿದ್ದರು.