ಭದ್ರಾವತಿ ನಗರಸಭೆ ವ್ಯಾಪ್ತಿಯ ಸೀಗೆಬಾಗಿ, ಅಣ್ಣಾನಗರ ಮತ್ತು ಕೆಎಸ್‌ಆರ್‌ಟಿಸಿ ಘಟಕ ಹಿಂಭಾಗ ಶುಕ್ರವಾರ ಕೊರೋನಾ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ಈ ಸ್ಥಳಗಳಿಗೆ ಪೌರಾಯುಕ್ತ ಮನೋಹರ್, ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ಆರ್ ಗಾಯತ್ರಿ, ನಗರಸಭೆ ಪರಿಸರ ಅಭಿಯಂತರ ರುದ್ರೇಗೌಡ, ಹಿರಿಯ ಆರೋಗ್ಯ ನಿರೀಕ್ಷಕ ನೀಲೇಶ್‌ರಾಜ್ ಮತ್ತು ಪೊಲೀಸ್ ಸಿಬ್ಬಂದಿಗಳನ್ನೊಳಗೊಂಡ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಭದ್ರಾವತಿ, ಜು. ೧೭: ತಾಲೂಕಿನಲ್ಲಿ ಗುರುವಾರ ೩ ಕೊರೋನಾ ಸೋಂಕು ಪ್ರಕರಣ ಪತ್ತೆಯಾಗಿತ್ತು. ಇದೀಗ ಪುನಃ ಏರಿಕೆಯಾಗಿದ್ದು, ಶುಕ್ರವಾರ ಒಂದೇ ದಿನ ೫ ಪ್ರಕರಣಗಳು ಪತ್ತೆಯಾಗಿವೆ.
ದೇವರನರಸೀಪುರದಲ್ಲಿ ೩೮ ವರ್ಷದ ಪುರುಷ, ಸೀಗೆಬಾಗಿಯಲ್ಲಿ ೨೭ ವರ್ಷದ ಪುರುಷ, ಅಣ್ಣಾನಗರದಲ್ಲಿ ೬೫ ವರ್ಷದ ವೃದ್ಧ ಹಾಗೂ ಕೆಎಸ್‌ಆರ್‌ಟಿಸಿ ಘಟಕ ಹಿಂಭಾಗ ೪೯ ವರ್ಷದ ವ್ಯಕ್ತಿಗೆ ಸೋಂಕು ತಗುಲಿದೆ. ಅಲ್ಲದೆ ಹಳೇನಗರದ ತಾಲೂಕು ಕಛೇರಿ ರಸ್ತೆಯಲ್ಲಿರುವ ನಿರ್ಮಲ ಖಾಸಗಿ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಹಿಳೆಯೊಬ್ಬರಿಗೆ ಸೋಂಕು ತಗುಲಿದೆ ಎನ್ನಲಾಗಿದೆ. ಆದರೆ ಈ ಬಗ್ಗೆ ತಾಲೂಕು ಆರೋಗ್ಯ ಇಲಾಖೆಗೆ ಸರಿಯಾದ ಮಾಹಿತಿ ಲಭ್ಯವಾಗಿಲ್ಲ.
ನಗರಸಭೆ ವ್ಯಾಪ್ತಿಯಲ್ಲಿ ಸೋಂಕು ಪತ್ತೆಯಾದ ಎಲ್ಲಾ ಸ್ಥಳಗಳಿಗೂ ಖುದ್ದಾಗಿ ತಹಸೀಲ್ದಾರ್ ಶಿವಕುಮಾರ್, ಪೌರಾಯುಕ್ತ ಮನೋಹರ್, ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ಆರ್ ಗಾಯತ್ರಿ, ನಗರಸಭೆ ಪರಿಸರ ಅಭಿಯಂತರ ರುದ್ರೇಗೌಡ, ಹಿರಿಯ ಆರೋಗ್ಯ ನಿರೀಕ್ಷಕ ನೀಲೇಶ್‌ರಾಜ್ ಮತ್ತು ಪೊಲೀಸ್ ಸಿಬ್ಬಂದಿಗಳನ್ನೊಳಗೊಂಡ ತಂಡ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದೆ. ಅಲ್ಲದೆ ಕಂಟೈನ್ಮೆಂಟ್ ವಲಯವನ್ನಾಗಿಸಿ ಸೋಂಕು ಹರಡದಂತೆ ಮುನ್ನಚ್ಚರಿಕೆ ಕ್ರಮಗಳನ್ನು ಕೈಗೊಳ್ಳುತ್ತಿದೆ.