Friday, July 24, 2020

ಭದ್ರಾವತಿ : ನಗರ ವ್ಯಾಪ್ತಿಯಲ್ಲಿ ೪, ಗ್ರಾಮಾಂತರದಲ್ಲಿ ೩ ಸೋಂಕು ಪತ್ತೆ

ಭದ್ರಾವತಿ, ಜು. ೨೪: ತಾಲೂಕಿನಲ್ಲಿ ಕೊರೋನಾ ಸೋಂಕು ಪ್ರಕರಣಗಳು ಕಡಿಮೆಯಾಗಿಲ್ಲ. ಪ್ರತಿ ದಿನ  ಪ್ರಕರಣಗಳು ದಾಖಲಾಗುತ್ತಿದ್ದು, ಶುಕ್ರವಾರ ಸಹ ೭ ಪ್ರಕರಣಗಳು ಪತ್ತೆಯಾಗಿವೆ. 
ನಗರಸಭೆ ವ್ಯಾಪ್ತಿಯಲ್ಲಿ ಹೊಸಮನೆ ೪ನೇ ತಿರುವಿನಲ್ಲಿ ೮ ವರ್ಷದ ಬಾಲಕ, ಎನ್‌ಎಂಸಿ ಬಡಾವಣೆಯಲ್ಲಿ ೪೬ ವರ್ಷದ ವ್ಯಕ್ತಿ, ವಿಜಯನಗರದ ಮೊದಲನೇ ತಿರುವಿನಲ್ಲಿ ೭೩ ವರ್ಷದ ವೃದ್ಧ, ಕಾಗದನಗರದ ೬ನೇ ತಿರುವಿನಲ್ಲಿ ೩೨ ವರ್ಷದ ವ್ಯಕ್ತಿ ಹಾಗೂ ಗ್ರಾಮಾಂತರ ಭಾಗದಲ್ಲಿ ಕಾರೇಹಳ್ಳಿ ಗ್ರಾಮದಲ್ಲಿ ೩೬ ವರ್ಷದ ಮಹಿಳೆ, ಬೆಳ್ಳಿಗೆರೆ ಬೈರು ಕ್ಯಾಂಪ್‌ನಲ್ಲಿ ೨೬ ವರ್ಷದ ಮತ್ತು ತಮ್ಮಡ್ಡಿಹಳ್ಳಿಯಲ್ಲಿ ೨೪ ವರ್ಷದ ಯುವಕರು ಸೋಂಕಿಗೆ ಒಳಗಾಗಿದ್ದಾರೆ. 
ನಗರಸಭೆ ಪೌರಾಯುಕ್ತ ಮನೋಹರ್, ಪರಿಸರ ಅಭಿಯಂತರ ರುದ್ರೇಗೌಡ,  ಆರೋಗ್ಯ ನಿರೀಕ್ಷಕಿ ಲತಾಮಣಿ, ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ಆರ್ ಗಾಯತ್ರಿ, ಹಿರಿಯ ಆರೋಗ್ಯ ಸಹಾಯಕ ನೀಲೇಶ್‌ರಾಜ್ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳನ್ನೊಳಗೊಂಡ ತಂಡ ಸೋಂಕು ಪತ್ತೆಯಾದ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು,  ಸ್ಯಾನಿಟೈಜರ್ ಕೈಗೊಂಡು ೧೦೦ ಹಾಗೂ ೨೦೦ ಮೀಟರ್ ವ್ಯಾಪ್ತಿಯಲ್ಲಿ ಕಂಟೈನ್ಮೆಂಟ್ ವಲಯವನ್ನಾಗಿಸಿದೆ. 

ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಜು.೨೯ರಂದು ಜಿಲ್ಲಾಮಟ್ಟದಲ್ಲಿ ಬೃಹತ್ ಹೋರಾಟ

ಆಶಾ ಕಾರ್ಯಕರ್ತೆಯರಿಂದ ಮುಖ್ಯಮಂತ್ರಿಗಳಿಗೆ ಮನವಿ 

ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ವತಿಯಿಂದ ರಾಜ್ಯಾದ್ಯಂತ ಆಶಾ ಕಾರ್ಯಕರ್ತೆಯರು ಆರೋಗ್ಯ ಸೇವೆ ಸ್ಥಗಿತಗೊಳಿಸಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಹೋರಾಟ ೧೫ನೇ ದಿನಕ್ಕೆ ಕಾಲಿಟ್ಟ ಹಿನ್ನಲೆಯಲ್ಲಿ ಹಾಗೂ ಜು.೨೯ರಂದು ಜಿಲ್ಲಾ ಮಟ್ಟದಲ್ಲಿ ಬೃಹತ್ ಹೋರಾಟ ನಡೆಸುವ ಸಂಬಂಧ ಶುಕ್ರವಾರ ಭದ್ರಾವತಿಯಲ್ಲಿ ತಹಸೀಲ್ದಾರ್ ಶಿವಕುಮಾರ್ ಮೂಲಕ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರಿಗೆ ಮನವಿ ಸಲ್ಲಿಸಲಾಯಿತು. 
ಭದ್ರಾವತಿ, ಜು. ೨೪:  ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ವತಿಯಿಂದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಜ್ಯಾದ್ಯಂತ ಆಶಾ ಕಾರ್ಯಕರ್ತೆಯರು ಆರೋಗ್ಯ ಸೇವೆ ಸ್ಥಗಿತಗೊಳಿಸಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಹೋರಾಟ ೧೫ನೇ ದಿನಕ್ಕೆ ಕಾಲಿಟ್ಟ ಹಿನ್ನಲೆಯಲ್ಲಿ ಹಾಗೂ ಜು.೨೯ರಂದು ಜಿಲ್ಲಾ ಮಟ್ಟದಲ್ಲಿ ಬೃಹತ್ ಹೋರಾಟ ನಡೆಸುವ ಸಂಬಂಧ ಶುಕ್ರವಾರ ತಹಸೀಲ್ದಾರ್ ಶಿವಕುಮಾರ್ ಮೂಲಕ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರಿಗೆ ಮನವಿ ಸಲ್ಲಿಸಲಾಯಿತು. 
ಆಶಾ ಕಾರ್ಯಕರ್ತೆಯರಿಗೆ ಮಾಸಿಕ ೧೨ ಸಾವಿರ ರು. ಗೌರವ ಧನ, ಕೋವಿಡ್-೧೯ರ ವಿರುದ್ಧ ಹೋರಾಟ ನಡೆಸಲು ಅಗತ್ಯವಿರುವಷ್ಟು ಸುರಕ್ಷತಾ ಸಾಮಗ್ರಿಗಳು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕಾರ್ಯಕರ್ತೆಯರು ಆಗ್ರಹಿಸಿದರು. 
ಕಳೆದ ಸುಮಾರು ೨ ತಿಂಗಳಿನಿಂದ ನಿರಂತರವಾಗಿ ರಾಜ್ಯ, ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಹೋರಾಟ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರೂ ಸಹ ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಈ ಹಿನ್ನಲೆಯಲ್ಲಿ ಅನಿರ್ಧಿಷ್ಟಾವಧಿ ಹೋರಾಟ ನಡೆಸಲಾಗುತ್ತಿದೆ. ತಕ್ಷಣ ಬೇಡಿಕೆ ಈಡೇರಿಸಬೇಕೆಂದು ಒತ್ತಾಯಿಸಿದರು. 
ಜಿಲ್ಲಾಧ್ಯಕ್ಷೆ ರಾಜೇಶ್ವರಿ ನಂದೀಶ್, ತಾಲೂಕು ಅಧ್ಯಕ್ಷೆ ಚಂದ್ರಕಲಾ, ಕಾರ್ಯದರ್ಶಿ ಎಸ್. ಆಶಾ, ವಿ. ಲಕ್ಷ್ಮಿ, ಕೆ.ಸಿ ಕಲ್ಪನಾ, ಕವಿತ, ನೀಲಾಂಬಿಕ, ಬಿ. ಮಂಜುಳ, ಎಸ್. ಶಾಂತಿ, ಆರ್. ನಾಗರತ್ನಬಾಯಿ, ಶಕೀಲಬಾನು, ಮಂಗಳಮ್ಮ, ಯಶಸ್ವಿನಿ, ಎಚ್. ನೇತ್ರಾವತಿ,  ಪಿ. ಶೃತಿ, ಕೆ. ಹೇಮಾವತಿ, ಆರ್. ಮಂಜುಳ, ಫಜಲುನ್ನಿಸಾ, ಎಸ್. ಮಮತ, ರಮೀಜಾ, ಎಂ. ಮಂಜುಳ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ಮನೆ ಹಿಂಭಾಗ ನರ್ಸರಿ ಮಾದರಿ ಅಕ್ರಮ ಗಾಂಜಾ ಬೆಳೆ : ಗ್ರಾಮಾಂತರ ಪೊಲೀಸರ ಕಾರ್ಯಾಚರಣೆ

೧೦ ಕೆ.ಜಿ, ೩೦೦ ಗ್ರಾಂ. ಗಾಂಜಾ ಬೆಳೆ, ಓರ್ವ ವ್ಯಕ್ತಿ ವಶಕ್ಕೆ 

ಭದ್ರಾವತಿ ತಾಲೂಕಿನ ಕೂಡ್ಲಿಗೆರೆ ಗ್ರಾಮದ ಮನೆಯೊಂದರ ಮೇಲೆ ಗ್ರಾಮಾಂತರ ಠಾಣೆ  ಪೊಲೀಸರು ದಾಳಿ ನಡೆಸಿ ನರ್ಸರಿ ಮಾದರಿಯಲ್ಲಿ ಅಕ್ರಮವಾಗಿ ಬೆಳೆಯಲಾಗಿದ್ದ ಗಾಂಜಾ ಬೆಳೆ ವಶಪಡಿಸಿಕೊಂಡಿರುವುದು. 
ಭದ್ರಾವತಿ, ಜು. ೨೪ : ತಾಲೂಕಿನ ಕೂಡ್ಲಿಗೆರೆ ಗ್ರಾಮದ ಮನೆಯೊಂದರ ಮೇಲೆ ಗ್ರಾಮಾಂತರ ಠಾಣೆ  ಪೊಲೀಸರು ದಾಳಿ ನಡೆಸಿ ನರ್ಸರಿ ಮಾದರಿಯಲ್ಲಿ ಅಕ್ರಮವಾಗಿ ಬೆಳೆಯಲಾಗಿದ್ದ ಗಾಂಜಾ ಬೆಳೆ ವಶಪಡಿಸಿಕೊಂಡಿರುವ ಘಟನೆ ಶುಕ್ರವಾರ ನಡೆದಿದೆ. 
ಖಚಿತ ಮಾಹಿತಿ ಹಿನ್ನಲೆಯಲ್ಲಿ ಪೊಲೀಸ್ ಉಪಾಧೀಕ್ಷಕ ಸುಧಾಕರನಾಯ್ಕ್ ಮಾರ್ಗದರ್ಶನದಲ್ಲಿ ಗ್ರಾಮಾಂತರ ವೃತ್ತ ನಿರೀಕ್ಷಕ ಇ.ಓ ಮಂಜುನಾಥ್ ನೇತೃತ್ವದಲ್ಲಿ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ದೇವರಾಜ್ ಹಾಗೂ ಸಿಬ್ಬಂದಿಗಳನ್ನೊಳಗೊಂಡ ಕೂಡ್ಲಿಗೆರೆ ಗ್ರಾಮದ ಶ್ರೀ ಸುಬ್ರಮಣ್ಯ ಸ್ವಾಮಿ ದೇವಸ್ಥಾನ ಹಿಂಭಾಗ ವಾಸವಿರುವ ಯುವರಾಜ್ ಎಂಬುವರ ಮನೆ ಮೇಲೆ ದಾಳಿ ನಡೆಸಿದ್ದು, ಮನೆಯ ಹಿಂಭಾಗದಲ್ಲಿ ಬೆಳೆಯಲಾಗಿದ್ದ ಸುಮಾರು ೧೦ ಕೆ.ಜಿ ೩೦೦ ಗ್ರಾಂ. ತೂಕದ ಗಾಂಜಾ ಬೆಳೆ ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಯುವರಾಜ್(೩೮)ನನ್ನು ವಶಕ್ಕೆ ಪಡೆದು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ. 

ಮದ್ಯದಂಗಡಿಯಿಂದ ನಿವಾಸಿಗಳಿಗೆ ಕಿರಿಕಿರಿ : ಕ್ರಮಕ್ಕೆ ಒತ್ತಾಯಿಸಿ ಪ್ರತಿಭಟನೆ

ಭದ್ರಾವತಿ ನಗರಸಭೆ ಉಜ್ಜನಿಪುರ ವಾರ್ಡ್ ವ್ಯಾಪ್ತಿಗೆ ಒಳಪಡುವ ಹೊಸ ಆನೆಕೊಪ್ಪ ಗ್ರಾಮದಲ್ಲಿ ತೆರೆಯಲಾಗಿರುವ ಎಂಎಸ್‌ಐಎಲ್ ಮದ್ಯಂಗಡಿಯಿಂದ ನಿವಾಸಿಗಳಿಗೆ ತೊಂದರೆಯಾಗುತ್ತಿದ್ದು, ತಕ್ಷಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಶುಕ್ರವಾರ ಅಲ್ಲಿನ ನಿವಾಸಿಗಳು ಪ್ರತಿಭಟನೆ ನಡೆಸಿದರು. 
ಭದ್ರಾವತಿ, ಜು. ೨೪: ನಗರಸಭೆ ಉಜ್ಜನಿಪುರ ವಾರ್ಡ್ ವ್ಯಾಪ್ತಿಗೆ ಒಳಪಡುವ ಹೊಸ ಆನೆಕೊಪ್ಪ ಗ್ರಾಮದಲ್ಲಿ ತೆರೆಯಲಾಗಿರುವ ಎಂಎಸ್‌ಐಎಲ್ ಮದ್ಯಂಗಡಿಯಿಂದ ನಿವಾಸಿಗಳಿಗೆ ತೊಂದರೆಯಾಗುತ್ತಿದ್ದು, ತಕ್ಷಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಶುಕ್ರವಾರ ಅಲ್ಲಿನ ನಿವಾಸಿಗಳು ಪ್ರತಿಭಟನೆ ನಡೆಸಿದರು. 
ಗ್ರಾಮದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಬಡ ಕುಟುಂಬದವರು ವಾಸಿಸುತ್ತಿದ್ದು, ಮದ್ಯಂಗಡಿಯಿಂದ ನಿವಾಸಿಗಳಿಗೆ ತೊಂದರೆಯಾಗುತ್ತಿದೆ. ಅದರಲ್ಲೂ ಮಹಿಳೆಯರು ರಸ್ತೆಯಲ್ಲಿ ಸಂಚರಿಸಲು ಭಯಪಡುವ ವಾತಾವರಣ ನಿರ್ಮಾಣವಾಗಿದೆ. ಸಮೀಪದಲ್ಲಿಯೇ ದೇವಸ್ಥಾನವಿದ್ದು, ಮದ್ಯವ್ಯಸನಿಗಳು ಎಲ್ಲಿಬೇಕೆಂದರಲ್ಲಿ ಗುಂಪು ಗುಂಪಾಗಿ ಸೇರಿಕೊಂಡು ಮದ್ಯ ಸೇವನೆ ಮಾಡುತ್ತಿದ್ದಾರೆ. ಮದ್ಯ ಸೇವನೆ ನಂತರ ರಸ್ತೆಗಳಲ್ಲಿ ಬಾಯಿಗೆ ಬಂದಂತೆ ಅವಾಚ್ಯ ಶಬ್ದಗಳಿಂದ ಕೂಗಾಡುವುದು, ಮನೆಗಳಿಗೆ ನುಗ್ಗುವುದು ಹಾಗೂ ಅಸಹ್ಯವಾಗಿ ವರ್ತಿಸುತ್ತಿದ್ದಾರೆ. ಮದ್ಯದ ಖಾಲಿ ಬಾಟಲಿ, ಪ್ಯಾಕೇಟ್, ಕುಡಿದ ಪ್ಲಾಸ್ಟಿಕ್ ಲೋಟಗಳನ್ನು ಎಲ್ಲಿಬೇಕೆಂದರಲ್ಲಿ ಎಸೆಯುತ್ತಿದ್ದು, ಇವುಗಳನ್ನು ಚಿಕ್ಕ ಮಕ್ಕಳು  ಆಟವಾಡಲು ತೆಗೆದುಕೊಳ್ಳುತ್ತಿದ್ದಾರೆ. ಅಲ್ಲದೆ ಮದ್ಯ ಕುಡಿದ ಪ್ಲಾಸ್ಟಿಕ್ ಲೋಟವನ್ನು ನೀರು ಕುಡಿಯಲು ಬಳಕೆ ಮಾಡುತ್ತಿದ್ದಾರೆಂದು ನಿವಾಸಿಗಳು ಆರೋಪಿಸಿದರು. 
ಈಗಾಗಲೇ ಅತಿಯಾದ ಮದ್ಯಸೇವನೆಯಿಂದ ಜಗದೀಶ್ ಎಂಬ ವ್ಯಕ್ತಿ ಮೃತಪಟ್ಟಿದ್ದಾನೆ. ತಕ್ಷಣ ಈ ಮದ್ಯದಂಗಡಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. 
ಸ್ಥಳಕ್ಕೆ ಆಗಮಿಸಿದ ನಗರಸಭೆ ಪೌರಾಯುಕ್ತ ಮನೋಹರ್, ಕಾಗದನಗರ ಪೊಲೀಸ್ ಠಾಣಾಧಿಕಾರಿ ಭಾರತಿ ನಿವಾಸಿಗಳ ಸಮಸ್ಯೆ ಆಲಿಸಿ ಅಬಕಾರಿ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿದರು. ನಗರಸಭಾ ಸದಸ್ಯ ವೆಂಕಟಯ್ಯ ಉಪಸ್ಥಿತರಿದ್ದರು. 
       ಜಿಲ್ಲಾಧಿಕಾರಿಗಳಿಗೆ ವರದಿ: 
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಅಬಕಾರಿ ನಿರೀಕ್ಷಕ ಧರ್ಮಪ್ಪ, ಮದ್ಯಂಗಡಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು ಎಂದು ಭರವಸೆ ನೀಡಿದರು. 

Thursday, July 23, 2020

ಆಕಸ್ಮಿಕ ಅಗ್ನಿ ದುರಂತ: ಇಬ್ಬರಿಗೆ ಸುಟ್ಟ ಗಾಯ

ಭದ್ರಾವತಿ, ಜು. ೨೩: ತಾಲೂಕಿನ ಹಳೇ ಕೂಡ್ಲಿಗೆರೆ ಗ್ರಾಮದ ಮನೆಯೊಂದರಲ್ಲಿ ಗುರುವಾರ ಆಕಸ್ಮಿಕ ಅಗ್ನಿ ದುರಂತ ಸಂಭವಿಸಿದ್ದು, ತಹಸೀಲ್ದಾರ್ ಶಿವಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. 
ಭದ್ರಾವತಿ, ಜು. ೨೩: ತಾಲೂಕಿನ ಹಳೇ ಕೂಡ್ಲಿಗೆರೆ ಗ್ರಾಮದ ಮನೆಯೊಂದರಲ್ಲಿ ಗುರುವಾರ ಆಕಸ್ಮಿಕ ಅಗ್ನಿ ದುರಂತ ಸಂಭವಿಸಿದ್ದು, ಮನೆಯಲ್ಲಿದ್ದ ಮಹಿಳೆಯೊಬ್ಬರಿಗೆ ಶೇ.೮೦ರಷ್ಟು ಹಾಗೂ ವ್ಯಕ್ತಿಯೊಬ್ಬರಿಗೆ ಶೇ.೫೦ರಷ್ಟು ಸುಟ್ಟ ಗಾಯಗಳಾಗಿವೆ. 
ಘಟನಾ ಸ್ಥಳಕ್ಕೆ ಭೇಟಿ ನೀಡಿದ ತಹಸೀಲ್ದಾರ್ ಶಿವಕುಮಾರ್ ಪರಿಶೀಲನೆ ನಡೆಸಿದರು. ಗಾಯಾಳುಗಳನ್ನು ಶಿವಮೊಗ್ಗ ಮೆಗ್ಗಾನ್  ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. 
ಜಿಲ್ಲಾ ಪಂಚಾಯಿತಿ ಸದಸ್ಯ ಎಸ್. ಮಣಿಶೇಖರ್, ಗ್ರಾಮ ಲೆಕ್ಕಿಗ ನಾರಾಯಣ ಗೌಡ ತಹಸೀಲ್ದಾರ್ ಭೇಟಿ ಸಂದರ್ಭದಲ್ಲಿ ಉಪಸ್ಥಿತರಿದ್ದರು. 

ಉಕ್ಕಿನ ನಗರದಲ್ಲಿ ಪುನಃ ಸೋಂಕು ಹೆಚ್ಚಳ : ಒಂದೇ ದಿನ 19 ಪ್ರಕರಣ ಪತ್ತೆ

ಭದ್ರಾವತಿ, ಜು. ೨೩: ತಾಲೂಕಿನಲ್ಲಿ ಕೊರೋನಾ ಸೋಂಕು ಮತ್ತಷ್ಟು ಹೆಚ್ಚಾಗಿದ್ದು, ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಗುರುವಾರ ಒಂದೇ ದಿನ 19 ಪ್ರಕರಣ ದಾಖಲಾಗಿವೆ. 
ನಗರಸಭೆ ವ್ಯಾಪ್ತಿಯ ನ್ಯೂಟೌನ್ ಭಾಗದಲ್ಲಿ 42 ವರ್ಷದ ಮಹಿಳೆ, ಹುಡ್ಕೋ ಕಾಲೋನಿಯಲ್ಲಿ 22 ವರ್ಷ ಯುವತಿ, 48 ವರ್ಷದ ಮಹಿಳೆ, ಬೋವಿ ಕಾಲೋನಿಯಲ್ಲಿ 65 ವರ್ಷದ ವ್ಯಕ್ತಿ, ಬಿ.ಎಚ್ ರಸ್ತೆ ವಿಜಯ ಬ್ಯಾಂಕ್  ಬಳಿ 29 ವರ್ಷದ ಯುವಕ, ಹೊಸಮನೆ ಎನ್‌ಎಂಸಿ ಬಡಾವಣೆಯಲ್ಲಿ 58 ವರ್ಷದ ವ್ಯಕ್ತಿ, ಹೊಸಮನೆ ಮುಖ್ಯರಸ್ತೆಯಲ್ಲಿ 75 ವರ್ಷ ವೃದ್ಧ, ಶಿವರಾಮ ನಗರದಲ್ಲಿ 17 ವರ್ಷದ ಯುವತಿ, 19 ವರ್ಷದ ಯುವಕ, ೫೮ ಮತ್ತು ೩೮ ವರ್ಷದ ಮಹಿಳೆ ಮತ್ತು ಖಲಂದರ್ ನಗರದಲ್ಲಿ 66 ವರ್ಷದ ಮಹಿಳೆ ಹಾಗೂ 74 ವರ್ಷದ ವೃದ್ಧ ಸೋಂಕಿಗೆ ಒಳಗಾಗಿದ್ದಾರೆ. 
ಉಳಿದಂತೆ ಗ್ರಾಮಾಂತರ ಭಾಗದಲ್ಲಿ ದೇವರನರಸೀಪುರ ಗ್ರಾಮದ 6 ವರ್ಷದ ಹೆಣ್ಣು ಮಗು, 32 ವರ್ಷದ ಮಹಿಳೆ ಹಾಗೂ ಬಾರಂದೂರು ಗ್ರಾಮದಲ್ಲಿ 44 ವರ್ಷದ ಮಹಿಳೆಯಲ್ಲಿ ಸೋಂಕು ಪತ್ತೆಯಾಗಿದೆ.  ಒಟ್ಟು  ತಾಲೂಕಿನಲ್ಲಿ 19  ಸೋಂಕು ಕಂಡುಬಂದಿದೆ.
   ಕಳೆದ 2 ದಿನಗಳ ಹಿಂದೆ ಒಂದೇ ದಿನ 10 ಪ್ರಕರಣ ಪತ್ತೆಯಾಗಿತ್ತು. ಇದೀಗ ಏಕಾಏಕಿ 19ಕ್ಕೆ ಏರಿಕೆಯಾಗಿದೆ. ಇದರಿಂದಾಗಿನಗರ ಹಾಗೂ ಗ್ರಾಮಾಂತರ ಭಾಗದ ನಿವಾಸಿಗಳಲ್ಲಿ ಆತಂಕ ಹೆಚ್ಚಾಗಿದೆ.
ನಗರಸಭೆ ಪೌರಾಯುಕ್ತ ಮನೋಹರ್, ಪರಿಸರ ಅಭಿಯಂತರ ರುದ್ರೇಗೌಡ,  ಆರೋಗ್ಯ ನಿರೀಕ್ಷಕಿ ಲತಾಮಣಿ, ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ಆರ್ ಗಾಯತ್ರಿ, ಹಿರಿಯ ಆರೋಗ್ಯ ಸಹಾಯಕ ನೀಲೇಶ್‌ರಾಜ್ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳನ್ನೊಳಗೊಂಡ ತಂಡ ಸೋಂಕು ಪತ್ತೆಯಾದ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು,  ಸ್ಯಾನಿಟೈಜರ್ ಕೈಗೊಂಡು ೧೦೦ ಹಾಗೂ ೨೦೦ ಮೀಟರ್ ವ್ಯಾಪ್ತಿಯಲ್ಲಿ ಕಂಟೈನ್ಮೆಂಟ್ ವಲಯವನ್ನಾಗಿಸಿದೆ.

ನೂತನ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಡಾ. ಜಿ. ಮಂಜುನಾಥ್

ಡಾ. ಜಿ. ಮಂಜುನಾಥ್ 
ಭದ್ರಾವತಿ, ಜು. ೨೩: ತಾಲೂಕು ಪಂಚಾಯಿತಿ ನೂತನ ಕಾರ್ಯನಿರ್ವಹಣಾಧಿಕಾರಿಯಾಗಿ ಡಾ. ಜಿ. ಮಂಜುನಾಥ್ ಅಧಿಕಾರ ವಹಿಸಿಕೊಂಡಿದ್ದಾರೆ.
ಡಾ. ಜಿ. ಮಂಜುನಾಥ್ ಗ್ರೇಡ್-೧ ಅಧಿಕಾರಿಯಾಗಿದ್ದು, ಸಾಕಷ್ಟು ವೃತ್ತಿ ಸೇವಾನುಭವ ಹೊಂದಿದ್ದಾರೆ. ಸುಮಾರು 2 ತಿಂಗಳಿನಿಂದ ಖಾಲಿ ಇದ್ದ ಹುದ್ದೆಗೆ ಸರ್ಕಾರ ನೇಮಕಗೊಳಿಸಿ ಆದೇಶ ಹೊರಡಿಸಿದೆ.  ಇದುವರೆಗೂ ಪ್ರಭಾರ ಅಧಿಕಾರಿಯಾಗಿದ್ದ   ಡಾ. ಕೊಟ್ರೇಶಪ್ಪ ಅವರಿಂದ  ಅಧಿಕಾರ ಸ್ವೀಕರಿಸಿದರು.