ಟಿ.ಜಿ ಬಸವರಾಜಯ್ಯ
ಹಿರಿಯ ಕಾರ್ಮಿಕ ಟಿ.ಜಿ ಬಸವರಾಜಯ್ಯನವರಿಗೆ ಆಹ್ವಾನ
ಭದ್ರಾವತಿ, ಆ. ೧೩: ರಾಜ್ಯ ಸರ್ಕಾರಿ ಸ್ವಾಮ್ಯದ ನಗರದ ಮೈಸೂರು ಕಾಗದ ಕಾರ್ಖಾನೆ ವತಿಯಿಂದ ಈ ಬಾರಿ ಕಾರ್ಖಾನೆಯ ಮುಖ್ಯ ದ್ವಾರದಲ್ಲಿ ಹಮ್ಮಿಕೊಳ್ಳಲಾಗಿರುವ ೭೪ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಹಿರಿಯ ಕಾರ್ಮಿಕ ಟಿ.ಜಿ ಬಸವರಾಜಯ್ಯ ಅವರಿಗೆ ಧ್ವಜಾರೋಹಣ ನೆರವೇರಿಸಲು ಆಹ್ವಾನಿಸಲಾಗಿದೆ.
ಪ್ರಸ್ತುತ ಕಾರ್ಖಾನೆಯಲ್ಲಿ ನಿವೃತ್ತಿ ಪಡೆಯದೆ ಉಳಿದು ಕೊಂಡಿರುವ ಖಾಯಂ ಕಾರ್ಮಿಕರ ಪೈಕಿ ಬಸವರಾಜಯ್ಯ ಹಿರಿಯರಾಗಿದ್ದು, ಪ್ರಸ್ತುತ ಮೈಸೂರು ಕಾಗದ ಕಾರ್ಖಾನೆ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷರಾಗಿದ್ದಾರೆ. ಕಾರ್ಯಕ್ರಮ ಬೆಳಿಗ್ಗೆ ಸರಳವಾಗಿ ೯ ಗಂಟೆಗೆ ನಡೆಯಲಿದ್ದು, ಧ್ವಜಾರೋಹಣ ನೆರವೇರಿಸಲು ಆಹ್ವಾನಿಸಿರುವುದಕ್ಕೆ ಎಂಪಿಎಂ ಆಡಳಿತ ಮಂಡಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ವಿಐಎಸ್‌ಎಲ್ ವತಿಯಿಂದ ಸ್ವಾತಂತ್ರ್ಯೋತ್ಸವ :
ಪ್ರತಿ ವರ್ಷದಂತೆ ಈ ಬಾರಿ ಸಹ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ವತಿಯಿಂದ ೭೪ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಆ.೧೫ರಂದು ಬೆಳಿಗ್ಗೆ ೮.೩೦ಕ್ಕೆ ವಿಐಎಸ್‌ಎಲ್ ರಜತ ಮಹೋತ್ಸವ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಕಾರ್ಖಾನೆಯ ಕಾರ್ಯಪಾಲಕ ನಿರ್ದೇಶಕ ಕೆಎಲ್‌ಎಸ್ ರಾವ್ ಧ್ವಜಾರೋಹಣ ನೆರವೇರಿಸಲಿದ್ದು, ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುವುದಿಲ್ಲ. ಸರಳವಾಗಿ ನಡೆಯಲಿದ್ದು, ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರು ಸಾಮಾಜಿಕ ಅಂತರ ಕಾಯ್ದುಕೊಂಡು ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಸಾರ್ವಜನಿಕ ಸಂಪರ್ಕ ಇಲಾಖೆ ಮುಖ್ಯ ವ್ಯವಸ್ಥಾಪಕ ಎಲ್ ಪ್ರವೀಣ್‌ಕುಮಾರ್ ಕೋರಿದ್ದಾರೆ.
ತಾಲೂಕು ಆಡಳಿತದಿಂದ ೭೪ನೇ ಸ್ವಾತಂತ್ರ್ಯೋತ್ಸವ :
ಪ್ರತಿ ವರ್ಷದಂತೆ ಈ ಬಾರಿ ಸಹ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ೭೪ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಹಳೇನಗರದ ಕನಕಮಂಟಪ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ. ಶಾಸಕ ಬಿ.ಕೆ ಸಂಗಮೇಶ್ವರ್ ಅಧ್ಯಕ್ಷತೆ ವಹಿಸಲಿದ್ದು, ತಹಸೀಲ್ದಾರ್ ಎಚ್.ಸಿ ಶಿವಕುಮಾರ್ ಧ್ವಜಾರೋಹಣ ನೆರವೇರಿಸುವರು.
ತಾಲೂಕು ಪಂಚಾಯಿತಿ ಅಧ್ಯಕ್ಷೆ ಡಿ. ಲಕ್ಷ್ಮೀದೇವಿ, ಉಪಾಧ್ಯಕ್ಷೆ ನೇತ್ರಾಬಾಯಿ, ಸಾಮಾಜಿಕ ನ್ಯಾಯಸಮಿತಿ ಅಧ್ಯಕ್ಷ ಎಸ್. ರಮೇಶ್, ಜಿ.ಪಂ. ಸದಸ್ಯರಾದ ಜೆ.ಪಿ. ಯೋಗೇಶ್, ಎಸ್. ಮಣಿಶೇಖರ್, ಡಿ.ಆರ್ ರೇಖಾಉಮೇಶ್, ವೀರಭದ್ರಪ್ಪ ಪೂಜಾರಿ, ಎಪಿಎಂಸಿ ಅಧ್ಯಕ್ಷ ಐ.ಈ ಲವೇಶ್‌ಗೌಡ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಎನ್. ಕೃಷ್ಣಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್ ಸೋಮಶೇಖರಯ್ಯ, ಪೊಲೀಸ್ ಉಪಾಧೀಕ್ಷಕ ಸುಧಾಕರ ಎಸ್. ನಾಯ್ಕ, ಉಪ ಅರಣ್ಯ ಸಂರಕ್ಷನಾಧಿಕಾರಿ ಕೆ.ಎಂ. ಗಮನಗಟ್ಟಿ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಡಾ. ಜಿ. ಮಂಜುನಾಥ್ ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು.