Thursday, September 10, 2020

ಕೆ.ಎಲ್ ಅಶೋಕ್ ಮೇಲೆ ಪೊಲೀಸ್ ದೌರ್ಜನ್ಯಕ್ಕೆ ಖಂಡನೆ

ಪ್ರಗತಿಪರ ಸಂಘಟನೆಗಳಿಂದ ಪ್ರತಿಭಟನೆಗೆ ನಿರ್ಧಾರ

ಭದ್ರಾವತಿ ಮಿಲ್ಟ್ರಿಕ್ಯಾಂಪ್ ಲೋಕೋಪಯೋಗಿ ಪ್ರವಾಸಿ ಮಂದಿರದ ಸಭಾಂಗಣದಲ್ಲಿ ಗುರುವಾರ ಪ್ರಗತಿಪರ ಸಂಘಟನೆಗಳ ಸಭೆ ನಡೆಯಿತು.
ಭದ್ರಾವತಿ, ಸೆ. ೧೦: ಕರ್ನಾಟಕ ಕೋಮು ಸೌಹಾರ್ದ ವೇದಿಕೆ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಲ್ ಅಶೋಕ್‌ರವರ ಮೇಲಿನ ಪೊಲೀಸ್ ದೌರ್ಜನ್ಯವನ್ನು ನಗರದ ಪ್ರಗತಿಪರ ಸಂಘಟನೆಗಳ ಮುಖಂಡರು ಖಂಡಿಸಿದ್ದಾರೆ.
       ಗುರುವಾರ ಮಿಲ್ಟ್ರಿಕ್ಯಾಂಪ್ ಲೋಕೋಪಯೋಗಿ ಇಲಾಖೆ ಪ್ರವಾಸಿ ಮಂದಿರದ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಪ್ರಮುಖರು ಅಶೋಕ್‌ರವರು ಎರಡು ದಶಕಗಳಿಗೂ ಹೆಚ್ಚು ಕಾಲ ಪ್ರಗತಿಪರ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದು, ಸೌಹಾರ್ದತೆ ನೆಲೆಗಟ್ಟಿನಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದಾರೆ. ಇವರು ಕುಟುಂಬ ಸಮೇತ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿಗೆ ತೆರಳಿದ್ದಾಗ ಅಲ್ಲಿನ ಪೊಲೀಸರು ಕ್ಷಲ್ಲಕ ಕಾರಣ ಮುಂದಿಟ್ಟುಕೊಂಡು ಅವಮಾನಿಸಿದ್ದಾರೆ. ಇದನ್ನು ಸಂಘಟನೆ ಖಂಡಿಸುತ್ತದೆ ಎಂದರು.
     ಉದ್ದೇಶಪೂರ್ವಕವಾಗಿ ಅಶೋಕ್‌ರವರನ್ನು ಅವಮಾನಿಸಿ ದರ್ಪದಿಂದ ವರ್ತಿಸಿರುವ ಪೊಲೀಸ್ ಸಿಬ್ಬಂದಿ ಹಾಗು ಠಾಣಾಧಿಕಾರಿಯನ್ನು ತಕ್ಷಣ ಅಮಾನತು ಮಾಡಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಈಗಾಗಲೇ ಈ ಸಂಬಂಧ ವಿವಿಧ ಸಂಘಟನೆಗಳಿಂದ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಗಿದ್ದು, ನಗರದಲ್ಲೂ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲು ತೀರ್ಮಾನಿಸಿದರು.
     ಪ್ರಗತಿಪರ ಸಂಘಟನೆಗಳ ಪ್ರಮುಖರಾದ ಸುರೇಶ್, ಜಿ. ರಾಜು, ಜೆಬಿಟಿ ಬಾಬು, ಎಚ್. ರವಿಕುಮಾರ್, ಇಬ್ರಾಹಿಂ ಖಾನ್, ಈ.ಪಿ ಬಸವರಾಜ್, ರಾಜೇಂದ್ರ ಸೇರಿದಂತೆ ಇನ್ನಿತರರು ಸಭೆಯಲ್ಲಿ ಪಾಲ್ಗೊಂಡಿದ್ದರು.

ರೋಟರಿ ಕ್ಲಬ್ ವತಿಯಿಂದ ಶಿಕ್ಷಕರ ದಿನಾಚರಣೆ

ಭದ್ರಾವತಿಯಲ್ಲಿ ರೋಟರಿ ಕ್ಲಬ್ ವತಿಯಿಂದ ಪ್ರತಿ ವರ್ಷದಂತೆ ಈ ಬಾರಿ ಸಹ ಶಿಕ್ಷಕರ ದಿನಾಚರಣೆ ನ್ಯೂಟೌನ್ ರೋಟರಿ ಕ್ಲಬ್ ಸಭಾಂಗಣದಲ್ಲಿ ಸರಳವಾಗಿ ಜರುಗಿತು. ೫ ಜನ ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ಭದ್ರಾವತಿ, ಸೆ. ೧೦: ನಗರದ ರೋಟರಿ ಕ್ಲಬ್ ವತಿಯಿಂದ ಪ್ರತಿ ವರ್ಷದಂತೆ ಈ ಬಾರಿ ಸಹ ಶಿಕ್ಷಕರ ದಿನಾಚರಣೆ ನ್ಯೂಟೌನ್ ರೋಟರಿ ಕ್ಲಬ್ ಸಭಾಂಗಣದಲ್ಲಿ ಸರಳವಾಗಿ ಜರುಗಿತು.
      ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಪೂರ್ವ ಪ್ರಾಥಮಿಕ ಕೇಂದ್ರದ ಶಿಕ್ಷಕಿ ಸೌಭಾಗ್ಯ, ಪ್ರಾಥಮಿಕ ಶಾಲೆ ಶಿಕ್ಷಕಿ ಮೀನಾಕ್ಷಿ, ಪ್ರೌಢಶಾಲೆ ಶಿಕ್ಷಕ ಗಣೇಶ್, ಆನಂದ ಮಾರ್ಗ ಶಾಲೆಯ ಇಬ್ಬರು ಅಚಾರ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.
      ರೋಟರಿ ಕ್ಲಬ್ ಅಧ್ಯಕ್ಷ ಬಿ.ಎಂ ಶಾಂತಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಜೋನಲ್ ಲೆಫ್ಟಿನೆಂಟ್ ಡಾ. ಕೆ ನಾಗರಾಜ್, ಪ್ರಮುಖರಾದ ಕೆ.ಬಿ ಪ್ರಭಾಕರ ಬೀರಯ್ಯ, ತೀರ್ಥಯ್ಯ, ಪಿ.ಸಿ ಜೈನ್, ಅಡವೀಶಯ್ಯ, ರಾಘವೇಂದ್ರ ಉಪಾಧ್ಯಾಯ, ಸುಂದರ್ ಬಾಬು, ದುಷ್ಯಂತ್‌ರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಶಾಂತಿಬಾಯಿ ನಿಧನ

ಶಾಂತಿಬಾಯಿ
ಭದ್ರಾವತಿ, ಸೆ. ೧೦: ನಗರದ ಹಾಲಪ್ಪ ವೃತ್ತದಲ್ಲಿರುವ ಗೌತಮ್ ಸೈಕಲ್ ಸ್ಟೋರ್ ಮಾಲೀಕ ಲಲಿತ್‌ಕುಮಾರ್ ಜೈನ್‌ರವರ ತಾಯಿ ಶಾಂತಿಬಾಯಿ(೮೦) ಗುರುವಾರ ನಿಧನ ಹೊಂದಿದರು.
      ೪ ಹೆಣ್ಣು, ೨ ಗಂಡು ಮಕ್ಕಳು, ಮೊಮ್ಮಕ್ಕಳು, ಸೊಸೆ ಹಾಗು ಅಳಿಯಂದಿರನ್ನು ಹೊಂದಿದ್ದರು. ಮಧ್ಯಾಹ್ನ ನಗರದ ಜೈನ ಸ್ಮಶಾನದಲ್ಲಿ ಅಂತ್ಯಸಂಸ್ಕಾರ ನೆರವೇರಿತು. ಹಳೇನಗರದ ಭೂತನಗುಡಿಯಲ್ಲಿ ವಾಸವಾಗಿದ್ದ ಶಾಂತಿಬಾಯಿಯವರು ಜೈನ ಧರ್ಮದ ಧಾರ್ಮಿಕ ಕಾರ್ಯಗಳಲ್ಲಿ ಹೆಚ್ಚಾಗಿ ಪಾಲ್ಗೊಳ್ಳುವ ಜೊತೆಗೆ ಚಾತುರ್ಮಾಸ ಅವಧಿಯಲ್ಲಿ ಉಪವಾಸ ವ್ರತ ಕೈಗೊಳ್ಳುತ್ತಿದ್ದರು.
     ಮೃತರ ನಿಧನಕ್ಕೆ ನಗರದ ಜೈನ ಸಮಾಜ, ರೋಟರಿ ಕ್ಲಬ್ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು, ಗಣ್ಯರು ಸಂತಾಪ ಸೂಚಿಸಿದ್ದಾರೆ.

ಗವಿರಂಗಯ್ಯ ನಿಧನ

ಗವಿರಂಗಯ್ಯ
ಭದ್ರಾವತಿ, ಸೆ. ೧೦: ಹಳೇನಗರದ ಮಹಿಳಾ ಸೇವಾ ಸಮಾಜದ ಉಪಾಧ್ಯಕ್ಷೆ ಕಮಲ ಕುಮಾರಿಯವರ ಪತಿ ಗವಿರಂಗಯ್ಯ(೬೯) ನಿಧನ ಹೊಂದಿದರು.
      ಪತ್ನಿ, ಓರ್ವ ಪುತ್ರಿ, ಇಬ್ಬರು ಪುತ್ರರು, ಸೊಸೆಯಂದಿರು, ಮೊಕ್ಕಳನ್ನು ಹೊಂದಿದ್ದರು.  ಗವಿರಂಗಯ್ಯ ಸಹಾಯಕ ಕೃಷಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿದ್ದರು. ಇವರ ಅಂತ್ಯಕ್ರಿಯೆ ಹೊಳೆಹೊನ್ನೂರು ರಸ್ತೆಯಲ್ಲಿರುವ ಹಿಂದೂ ರುದ್ರಭೂಮಿಯಲ್ಲಿ ಗುರುವಾರ ನೆರವೇರಿತು.
    ಇವರ ನಿಧನಕ್ಕೆ ಮಹಿಳಾ ಸೇವಾ ಸಮಾಜ ಸೇರಿದಂತೆ ಇನ್ನಿತರ ಸಂಘ-ಸಂಸ್ಥೆಗಳು ಸಂತಾಪ ಸೂಚಿಸಿವೆ. 

Wednesday, September 9, 2020

ಗಾಂಜಾ ಮಾರಾಟ : ನಾಲ್ವರ ಬಂಧನ

ಭದ್ರಾವತಿ, ಸೆ. ೯: ಗಾಂಜಾ ಮಾರಾಟದಲ್ಲಿ ತೊಡಗಿದ್ದ ಯುವಕರನ್ನು ಹಳೇನಗರ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿರುವ ಘಟನೆ ನಡೆದಿದೆ.
      ಹಳೇನಗರದ ಭೂತನಗುಡಿಯ ಸರ್ಕಾರಿ ಆಸ್ಪತ್ರೆ ಬಳಿ ನಿವಾಸಿ ಇಂಜಿನಿಯರ್ ವಿದ್ಯಾರ್ಥಿ ಶೇಖ್ ಅಬೂಬಕರ್ ಸಿದ್ದಿಕ್(೨೨), ವೆಲ್ಡಿಂಗ್ ಕೆಲಸ ಮಾಡುವ ಜಾಫರ್ ಸಾಧಿಕ್(೨೪), ದುರ್ಗಿ ನಗರದ ನಿವಾಸಿ ಸಾಧಿಕ್ ಪಾಷಾ(೩೧) ಮತ್ತು ಗಾರೆ ಕೆಲಸ ಮಾಡುವ ಮೊಮಿನ್ ಮೊಹಲ್ಲಾ ನಿವಾಸಿ ತೋಫಿಕ್(೨೩) ಸೇರಿದಂತೆ ಒಟ್ಟು ನಾಲ್ವರನ್ನು ಬಂಧಿಸಲಾಗಿದೆ.  
       ಈ ನಾಲ್ವರು ಹೊಳೆಹೊನ್ನೂರು ರಸ್ತೆಗೆ ಸಂಪರ್ಕಗೊಂಡಿರುವ ಹಳೇಸೀಗೆಬಾಗಿ ರಸ್ತೆಯಲ್ಲಿ ಗಾಂಜಾ ಮಾರಾಟದಲ್ಲಿ ತೊಡಗಿದ್ದಾಗ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಲಾಗಿದೆ. ಬಂಧಿತರಿಂದ ಸುಮಾರು ೨೦ ಸಾವಿರ ರು. ಮೌಲ್ಯದ ೧ ಕೆ.ಜಿ ೨೫೦ ಗ್ರಾಂ ತೂಕದ ಗಾಂಜಾ ಸೊಪ್ಪು, ಕೃತ್ಯಕ್ಕೆ ಬಳಸಿದ್ದ ಎರಡು ದ್ವಿಚಕ್ರವಾಹನಗಳು ಸೇರಿದಂತೆ ಒಟ್ಟು ೨,೦೫,೦೦೦ ರು. ಮೌಲ್ಯದ ಸ್ವತ್ತು ವಶಪಡಿಸಿಕೊಳ್ಳಲಾಗಿದೆ.


ವಿದ್ಯಾಗಮ ಯೋಜನೆ ಕುರಿತು ಪ್ರಗತಿ ಪರಿಶೀಲನೆ ಸಭೆ


ಭದ್ರಾವತಿ ನ್ಯೂಟೌನ್ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನ ಪ್ರೌಢಶಾಲೆ ವಿಭಾಗದ ಸಭಾಂಗಣದಲ್ಲಿ ಬುಧವಾರ ವಿದ್ಯಾಗಮ ಯೋಜನೆಯ ಪ್ರಗತಿ ಪರಿಶೀಲನಾ ಸಭೆ ನಡೆಯಿತು.
ಭದ್ರಾವತಿ, ಸೆ. ೯: ಶಾಲಾ-ಕಾಲೇಜುಗಳು ಪುನರ್ ಆರಂಭಗೊಳ್ಳುವವರೆಗೂ ವಿದ್ಯಾರ್ಥಿಗಳನ್ನು ಸಕ್ರಿಯವಾಗಿರಿಸುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಜಾರಿಗೆ ತಂದಿರುವ ವಿದ್ಯಾಗಮ ವಿನೂತನ ಯೋಜನೆಯ ಪ್ರಗತಿ ಕುರಿತು ಬುಧವಾರ ನ್ಯೂಟೌನ್ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನ ಪ್ರೌಢಶಾಲೆ ವಿಭಾಗದ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಚರ್ಚಿಸಲಾಯಿತು.
       ಈಗಾಗಲೇ ಈ ಯೋಜನೆ ತಾಲೂಕಿನ ಬಹುತೇಕ ಕಡೆ ಯಶಸ್ವಿಗೊಂಡಿದ್ದು, ಯೋಜನೆಯ ಸಾಧಕ-ಬಾಧಕಗಳ ಕುರಿತಂತೆ ಇಲಾಖೆಗೆ ಪತ್ರಗಳು ಬಂದಿವೆ. ಈ ಎಲ್ಲಾ ಬೆಳವಣಿಗೆಗಳನ್ನು ಕುರಿತು ಹಾಗು ಮುಂದೆ ರೂಪಿಸಿಕೊಳ್ಳಬಹುದಾದ ಕ್ರಮಗಳನ್ನು ಸಭೆಯಲ್ಲಿ ಚರ್ಚಿಸಲಾಯಿತು.
        ಸಾರ್ವಜನಿಕ ಶಿಕ್ಷಣ ಇಲಾಖೆ ಜಿಲ್ಲಾ ಉಪನಿರ್ದೇಶಕರಾದ ಆಡಳಿತ ವಿಭಾಗದ ಎನ್.ಎಂ ರಮೇಶ್, ಅಭಿವೃದ್ಧಿ ಯೋಜನೆ ವಿಭಾಗದ ಸುಮಂಗಳ ಪಿ. ಕುಚಿನಾಡ, ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್ ಸೋಮಶೇಖರಯ್ಯ, ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿಗಳ ಕಛೇರಿ ಅಧಿಕಾರಿಗಳು ಉಪಸ್ಥಿತರಿದ್ದರು.
      ತಾಲೂಕಿನ ಎಲ್ಲಾ ಸಿಆರ್‌ಪಿ, ಬಿಆರ್‌ಸಿ ಮತ್ತು ಯೋಜನೆಯಲ್ಲಿ ತೊಡಗಿಸಿಕೊಂಡಿರುವ ಎಲ್ಲಾ ಅಧಿಕಾರಿಗಳು ಪಾಲ್ಗೊಂಡಿದ್ದರು.

ಪೌರಾಯುಕ್ತರಿಗೂ ಕೊರೋನಾ : ನಗರಸಭೆ ಸೀಲ್‌ಡೌನ್


ಭದ್ರಾವತಿ ನಗರಸಭೆ ಆಡಳಿತ ಕಛೇರಿಯಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡ ಹಿನ್ನಲೆಯಲ್ಲಿ ಬುಧವಾರ ಮಧ್ಯಾಹ್ನ ಸೀಲ್‌ಡೌನ್ ಮಾಡಲಾಗಿದೆ.
ಭದ್ರಾವತಿ, ಸೆ. ೯: ತಾಲೂಕಿನಲ್ಲಿ ಕೊರೋನಾ ಸೋಂಕು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಮಹಾಮಾರಿ ಸರ್ಕಾರಿ ಕಛೇರಿಗಳನ್ನು ಸಹ ಆವರಿಸಿಕೊಳ್ಳುತ್ತಿದೆ. ಇದೀಗ ನಗರಸಭೆ ಆಡಳಿತ ಕಛೇರಿ ಸಹ ಸೀಲ್‌ಡೌನ್ ಮಾಡಲಾಗಿದೆ.
      ನಗರಸಭೆ ಪೌರಾಯುಕ್ತ ಮನೋಹರ್, ಹಿರಿಯ ಆರೋಗ್ಯ ನಿರೀಕ್ಷಕ ಆರ್.ಬಿ ಸತೀಶ್ ಸಹ ಸೋಂಕಿಗೆ ಒಳಗಾಗಿದ್ದು,  ಈ ಹಿನ್ನಲೆಯಲ್ಲಿ ನಗರಸಭೆ ಆಡಳಿತಾಧಿಕಾರಿಯಾಗಿರುವ ಉಪವಿಭಾಗಾಧಿಕಾರಿ ಟಿ.ವಿ ಪ್ರಕಾಶ್‌ರವರ ಸೂಚನೆ ಮೇರೆಗೆ ಬುಧವಾರ ಮಧ್ಯಾಹ್ನ ನಗರಸಭೆ ಕಛೇರಿಯನ್ನು ಸೀಲ್‌ಡೌನ್ ಮಾಡಲಾಗಿದೆ.
     ಕೆಲವು ದಿನಗಳ ಹಿಂದೆ ಪೌರಾಯುಕ್ತರ ಆರೋಗ್ಯದಲ್ಲಿ ಏರುಪೇರು ಕಂಡು ಬಂದಿದ್ದು, ಈ ಹಿನ್ನಲೆಯಲ್ಲಿ ಆರೋಗ್ಯ ತಪಾಸಣೆ ವೇಳೆ ಸೋಂಕು ಇರುವುದು ದೃಢಪಟ್ಟಿದೆ. ಅನಾರೋಗ್ಯದ ನಡುವೆಯೂ ಕರ್ತವ್ಯಕ್ಕೆ ಹಾಜರಾಗಿದ್ದರು. ಮಂಗಳವಾರ ಮಧ್ಯಾಹ್ನ ಶಾಸಕರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲೂ ಪಾಲ್ಗೊಂಡಿದ್ದರು.
        ಸೋಂಕು ನಿಯಂತ್ರಣಕ್ಕೆ ವ್ಯಾಪಕ ಕ್ರಮ :
      ಅಧಿಕಾರಿಯಾದರೂ ಸಹ ನಗರದಲ್ಲಿ ಸಾಮಾನ್ಯ ಜನರೊಂದಿಗೆ ಸಾಮಾನ್ಯ ವ್ಯಕ್ತಿಯಂತೆ ಗುರುತಿಸಿಕೊಂಡಿರುವ ಮನೋಹರ್‌ರವರು ಎಲ್ಲಾ ಕೆಲಸಗಳ್ನು ಅಚ್ಚುಕಟ್ಟಾಗಿ ನಿರ್ವಹಿಸಿಕೊಂಡು ಬರುತ್ತಿದ್ದಾರೆ. ಕೊರೋನಾ ಸೋಂಕು ಕಾಣಿಸಿಕೊಂಡಾಗಿನಿಂದಲೂ ನಿರಂತರವಾಗಿ ಹಗಲಿರುಳು ಕರ್ತವ್ಯ ನಿರ್ವಹಿಸುತ್ತಿದ್ದು, ಸೋಂಕು ನಿಯಂತ್ರಣಕ್ಕೆ ವ್ಯಾಪಕ ಕ್ರಮಗಳನ್ನು ಕೈಗೊಂಡಿದ್ದಾರೆ. ಬಡವರ ಬಗ್ಗೆ ಹೆಚ್ಚಿನ ಕಾಳಜಿವಹಿಸಿದ್ದ ಪೌರಾಯುಕ್ತರು ಕಂಟೈನ್ಮೆಂಟ್ ವಲಯಗಳಲ್ಲಿನ ಕಡುಬಡವರ ನೆರವಿಗೆ ಮುಂದಾಗಿದ್ದರು.  ಕೊರೋನಾ ವಾರಿರ್ಯಸ್ ರೀತಿ ಕರ್ತವ್ಯ ನಿರ್ವಹಿಸುತ್ತಿರುವ ಪೌರಾಯುಕ್ತರು ಶೀಘ್ರ ಗುಣಮುಖರಾಗಲಿ ಎಂದು ನಗರದ ನಾಗರೀಕರು ದೇವರಲ್ಲಿ ಪ್ರಾರ್ಥಿಸಿದ್ದಾರೆ.
      ನಗರಸಭೆ ಕಂದಾಯಾಧಿಕಾರಿ ರಾಜ್‌ಕುಮಾರ್ ಸಹ ಈಗಾಗಲೇ ಸೋಂಕಿಗೆ ಒಳಗಾಗಿ ಚಿಕಿತ್ಸೆ ಪಡೆದು ಕೊಳ್ಳುತ್ತಿದ್ದಾರೆ. ಈ ಹಿಂದೆ ತಾಲೂಕು ಕಛೇರಿಯಲ್ಲೂ ಮಹಾಮಾರಿ ಕಾಣಿಸಿಕೊಂಡಿದ್ದು, ಸುಮಾರು ೧೦ಕ್ಕೂ ಹೆಚ್ಚು ಮಂದಿ ಸೋಂಕಿಗೆ ಒಳಗಾಗಿದ್ದರು. ಈ ಹಿನ್ನಲೆಯಲ್ಲಿ ಮಿನಿ ವಿಧಾನಸೌಧ ಸಹ ಸೀಲ್‌ಡೌನ್ ಮಾಡಲಾಗಿತ್ತು.  ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಕಛೇರಿಗಳಲ್ಲೂ ಸಹ ಸೋಂಕು ಕಾಣಿಸಿಕೊಳ್ಳುತ್ತಿರುವುದು ನಗರದ ನಾಗರೀಕರನ್ನು ಆತಂಕಕ್ಕೆ ಒಳಗಾಗುವಂತೆ ಮಾಡಿದೆ.