2019-2020ನೇ ಸಾಲಿನ ತರಬೇತಿ ಉದ್ಘಾಟನೆ
ಭದ್ರಾವತಿ ನ್ಯೂಟೌನ್ ಜೆಟಿಎಸ್ ಶಾಲೆ ಸಮೀಪದಲ್ಲಿರುವ ಶುಗರ್‌ಟೌನ್ ಲಯನ್ಸ್ ಕ್ಲಬ್ ಕಣ್ಣಿನ ಆಸ್ಪತ್ರೆ ಸಭಾಂಗಣದಲ್ಲಿ ನಗರಸಭೆ ಡೇ ನಲ್ಮ್ ವಿಭಾಗದ ವತಿಯಿಂದ ಫೇಸ್ ಕಂಪ್ಯೂಟರ್ ತರಬೇತಿ ಕೇಂದ್ರದ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ 2019-2020ನೇ ಸಾಲಿನ ಡೇ ನಲ್ಮ್ ಯೋಜನೆ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ನಡೆಯಿತು.
ಭದ್ರಾವತಿ, ಅ. ೭: ನಗರಸಭೆ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಮಧ್ಯಮ ಹಾಗು ಕಡು ಬಡ ಕುಟುಂಬದ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸಿಕೊಡುವ ನಿಟ್ಟಿನಲ್ಲಿ ನೆರವಾಗುವ ಉದ್ದೇಶದೊಂದಿಗೆ ಕೇಂದ್ರ ಸರ್ಕಾರ ಡೇ ನಲ್ಮ್ ಯೋಜನೆ ಜಾರಿಗೆ ತಂದಿದ್ದು, ಈ ಯೋಜನೆ ಮೂಲಕ ಕೌಶಲ್ಯ ತರಬೇತಿ, ಸಮುದಾಯ ಸಂಘಟನೆಗಳ ಬಲವರ್ಧನೆಗೆ ಅಗತ್ಯವಿರುವ ಕಾರ್ಯಕ್ರಮಗಳನ್ನು ರೂಪಿಸಿಕೊಂಡು ಬರಲಾಗುತ್ತಿದೆ. ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ನಗರಸಭೆ ಸಮುದಾಯ ಸಂಘಟನಾ ಅಧಿಕಾರಿ ಈಶ್ವರಪ್ಪ ತಿಳಿಸಿದರು.
ಅವರು ನ್ಯೂಟೌನ್ ಜೆಟಿಎಸ್ ಶಾಲೆ ಸಮೀಪದಲ್ಲಿರುವ ಶುಗರ್‌ಟೌನ್ ಲಯನ್ಸ್ ಕ್ಲಬ್ ಕಣ್ಣಿನ ಆಸ್ಪತ್ರೆ ಸಭಾಂಗಣದಲ್ಲಿ ನಗರಸಭೆ ಡೇ ನಲ್ಮ್ ವಿಭಾಗದ ವತಿಯಿಂದ ಫೇಸ್ ಕಂಪ್ಯೂಟರ್ ತರಬೇತಿ ಕೇಂದ್ರದ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ 2019-2020ನೇ ಸಾಲಿನ ಡೇ ನಲ್ಮ್ ಯೋಜನೆ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಈ ಹಿಂದೆ ಗ್ರಾಮೀಣ ಭಾಗದಲ್ಲಿ ಹಲವು ಸಮಸ್ಯೆಗಳ ಪರಿಣಾಮ ನಿರುದ್ಯೋಗ ಹೆಚ್ಚಾಗಿ ಕಂಡು ಬರುತ್ತಿತ್ತು. ಈ ಹಿನ್ನಲೆಯಲ್ಲಿ ಉದ್ಯೋಗ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಹೆಚ್ಚಿನ ಗಮನ ಹರಿಸಿ ಹಲವು ಯೋಜನೆಗಳನ್ನು ಜಾರಿಗೆತರಲಾಗಿತ್ತು. ನಂತರದ ದಿನಗಳಲ್ಲಿ ನಗರ ವ್ಯಾಪ್ತಿಯಲ್ಲೂ ಉದ್ಯೋಗ ಸಮಸ್ಯೆಗಳು ಹೆಚ್ಚಾದ ಹಿನ್ನಲೆಯಲ್ಲಿ ನಲ್ಮ್ ಯೋಜನೆ ಜಾರಿಗೆ ತರಲಾಗಿದೆ. ಈ ಯೋಜನೆಯ ಮೂಲ ಉದ್ದೇಶವನ್ನು ಅರಿತುಕೊಂಡು ಇದರ ಸದುಪಯೋಗಪಡೆದುಕೊಂಡವರು ಇತರರಿಗೂ ತಿಳಿಸಬೇಕೆಂದು ಮನವಿ ಮಾಡಿದರು.
ಹಿರಿಯ ಸಮುದಾಯ ಸಂಘಟನಾ ಅಧಿಕಾರಿ ಸುವಾಸಿನಿ ಮಾತನಾಡಿ, ಪ್ರಸ್ತುತ ಪ್ರತಿಯೊಬ್ಬರಿಗೂ ಉದ್ಯೋಗದ ಅವಶ್ಯಕತೆ ಇದೆ. ಇದಕ್ಕೆ ಪೂರಕವಾಗಿ ನಮ್ಮಲ್ಲಿನ ಕೌಶಲ್ಯಗಳನ್ನು ಅರಿತುಕೊಂಡು ಮುನ್ನಡೆಯಬೇಕು. ಈ ನಿಟ್ಟಿನಲ್ಲಿ ನೆರವಾಗಲು ಈ ರೀತಿಯ ಯೋಜನೆಗಳು ಸಹಕಾರಿಯಾಗಿವೆ. ಮಧ್ಯಮ ಹಾಗು ಬಡ ವರ್ಗದ ಕುಟುಂಬದ ನಿರುದ್ಯೋಗಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಕರೆ ನೀಡಿದರು.
ಫೇಸ್ ಕಂಪ್ಯೂಟರ್ ಮುಖ್ಯಸ್ಥ ಅಬಿದಾಲಿ ಮಾತನಾಡಿ, ಪ್ರಸ್ತುತ ಎಲ್ಲಾ ಕ್ಷೇತ್ರಗಳಲ್ಲೂ ಕಂಪ್ಯೂಟರ್ ಜ್ಞಾನ ಅಗತ್ಯವಾಗಿದೆ. ಕಂಪ್ಯೂಟರ್ ತರಬೇತಿ ಪಡೆದವರು ಯಾವುದೇ ಕೆಲಸವನ್ನು ಸಮರ್ಥವಾಗಿ ನಿಭಾಯಿಸಬಹುದಾಗಿದೆ. ಈ ಹಿನ್ನಲೆಯಲ್ಲಿ ಕಂಪ್ಯೂಟರ್ ತರಬೇತಿಯನ್ನು ಪ್ರತಿಯೊಬ್ಬರು ಪಡೆಯಬೇಕೆಂದರು.
ವೇದಿಕೆಯಲ್ಲಿ ಸಮುದಾಯ ಸಂಘಟನಾ ಅಧಿಕಾರಿ ಸುಮಿತ್ರ ಎಚ್. ಹರಪನಹಳ್ಳಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.