Saturday, October 31, 2020

ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ದುಶ್ಚಟಗಳಿಂದ ದೂರವಿರಿಸಿ : ಬಿ.ಕೆ ಸಂಗಮೇಶ್ವರ್

ಭದ್ರಾವತಿ ತಾಲೂಕಿನ ಅಂತರಗಂಗೆ ಗ್ರಾಮದ ರಸ್ತೆಯಲ್ಲಿರುವ ಗೌರಾಪುರದ ಶ್ರೀ ಕೆಂಚಮ್ಮ ದೇವಾಲಯದ ಸಮುದಾಯ ಭವನದಲ್ಲಿ ಸಂಸದರ ನಿಧಿಯಿಂದ ೧೫ ಲಕ್ಷ ರು. ವೆಚ್ಚದ ಮುಂದುವರೆದ ಅಭಿವೃದ್ದಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದ ಶಾಸಕ ಬಿ ಕೆ.ಸಂಗಮೇಶ್ವರನ್ನು ದೇವಸ್ಥಾನ ಸಮಿತಿ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು.
ಭದ್ರಾವತಿ, ಅ. ೩೧: ಪೋಷಕರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಜೊತೆಗೆ ದುಶ್ಚಟಗಳಿಂದ ದೂರವಿರುವಂತೆ ಎಚ್ಚರ ವಹಿಸಬೇಕು. ಆಗ ಮಾತ್ರ ಮಕ್ಕಳು ಕುಟುಂಬ ಮತ್ತು ಸಮಾಜದಲ್ಲಿ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಾಧ್ಯ ಎಂದು ಶಾಸಕ ಬಿ.ಕೆ.ಸಂಗಮೇಶ್ವರ್ ಹೇಳಿದರು.
      ಅವರು ಶನಿವಾರ ತಾಲೂಕಿನ ಅಂತರಗಂಗೆ ಗ್ರಾಮದ ರಸ್ತೆಯಲ್ಲಿರುವ ಗೌರಾಪುರದ ಶ್ರೀ ಕೆಂಚಮ್ಮ ದೇವಾಲಯದ ಸಮುದಾಯ ಭವನದಲ್ಲಿ ಸಂಸದರ ನಿಧಿಯಿಂದ ೧೫ ಲಕ್ಷ ರು. ವೆಚ್ಚದ ಮುಂದುವರೆದ ಅಭಿವೃದ್ದಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.
      ಗೌರಾಪುರ ಗ್ರಾಮದ ಅಭಿವೃದ್ಧಿಗೆ ಬದ್ಧನಾಗಿದ್ದು, ಈ ಸಮುದಾಯ ಭವನದಿಂದ ಸುತ್ತಮುತ್ತಲ ೫-೬ ಗ್ರಾಮಗಳ ಗ್ರಾಮಸ್ಥರಿಗೆ, ಬಡವರಿಗೆ ಹೆಚ್ಚಿನ ಅನುಕೂಲವಾಗುತ್ತಿರುವುದು ಸಂತಸದ ವಿಚಾರವಾಗಿದೆ. ಮುಂದಿನ ದಿನಗಳಲ್ಲಿ ಸಮುದಾಯ ಭವನದ ಅಭಿವೃದ್ಧಿ ಇನ್ನೂ ಹೆಚ್ಚಿನ ಗಮನ ನೀಡಲಾಗುವುದು. ಶ್ರೀ ಕೆಂಚಮ್ಮ ದೇವಿ ದೇವಸ್ಥಾನದ ಗೋಪುರ ನಿರ್ಮಾಣಕ್ಕೆ ರು. ೧೦ ಲಕ್ಷ ಅನುದಾನ ನೀಡುವುದಾಗಿ ಭರವಸೆ ನೀಡಿದರು.
      ಇದೆ ರೀತಿ ಬಸವನಗುಡಿ ಗ್ರಾಮದ ಸರ್ಕಾರಿ ಭೂಮಿಯಲ್ಲಿ ಸುಮಾರು ರು. ೧ ಕೋ. ವೆಚ್ಚದಲ್ಲಿ ಸುತ್ತಮುತ್ತಲ ಹತ್ತಾರು ಗ್ರಾಮಗಳ ಗ್ರಾಮಸ್ಥರಿಗೆ ಅನುಕೂಲವಾಗುವಂತೆ ಸುಸಜ್ಜಿತ ಕಲ್ಯಾಣ ಮಂಟಪ ನಿರ್ಮಾಣ ಮಾಡಬೇಕೆಂಬ ಬೇಡಿಕೆ ಇದ್ದು, ಈ ಬಗ್ಗೆ ಎಲ್ಲರೂ ಜವಾಬ್ದಾರಿವಹಿಸಿ ಮುಂದಿನ ಸಿದ್ದತೆಗಳನ್ನು ಕೈಗೊಳ್ಳುವ ಬಗ್ಗೆ ಗಮನ ವಹಿಸಬೇಕೆಂದರು.
   ಮುಖಂಡ ಸಿ.ಆರ್.ಶಿವರಾಮ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಮುಖಂಡರಾದ ಎ. ಮಂಜಪ್ಪ, ಎಲ್ಲಪ್ಪ, ಬಿ.ಆರ್ ಹಾಲೇಶಪ್ಪ, ತಾ.ಪಂ. ಉಪಾಧ್ಯಕ್ಷ ಎನ್. ಶ್ರೀನಿವಾಸ್, ಅಶೋಕ್, ಸೂರಪ್ಪನಾಯ್ಕ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಶಿಥಿಲಗೊಂಡ ಸರ್ಕಾರಿ ಶಾಲೆಗಳು : ದುರಸ್ತಿಗೊಳಿಸುವಲ್ಲಿ ನಿರ್ಲಕ್ಷ್ಯ

ಶಿಕ್ಷಕರಿಗೆ ಭಯದ ವಾತಾವರಣದಲ್ಲಿ ಕರ್ತವ್ಯ ನಿರ್ವಹಿಸುವ ಆತಂಕ

ಭದ್ರಾವತಿ ತಾಲೂಕಿನ ದೊಬಣಘಟ್ಟ ಗ್ರಾಮದ ಪಂಚಾಯಿತಿ ಕಛೇರಿ ಹಿಂಭಾಗದಲ್ಲಿರುವ ಕನ್ನಡ ಸರ್ಕಾರಿ ಶಾಲೆಯ ಶಿಥಿಲಗೊಂಡ ಮೇಲ್ಛಾವಣಿ ಹಿಡಿದು ಆಟವಾಡುತ್ತಿರುವ ವಿದ್ಯಾರ್ಥಿ.
ಭದ್ರಾವತಿ, ಅ. ೩೧: ಕೊರೋನಾ ಹಿನ್ನಲೆಯಲ್ಲಿ ಕಳೆದ ೫-೬ ತಿಂಗಳಿನಿಂದ ಮುಚ್ಚಲ್ಪಟ್ಟಿರುವ ತಾಲೂಕಿನ ಬಹಳಷ್ಟು ಸರ್ಕಾರಿ ಶಾಲೆಗಳು ಶಿಥಿಲಗೊಂಡು ಹಾಳಾಗಿದ್ದು, ಶಾಲೆಗಳನ್ನು ದುರಸ್ತಿಗೊಳಿಸುವಲ್ಲಿ ನಿರ್ಲಕ್ಷ್ಯ ವಹಿಸಲಾಗಿದೆ.
       ಶಾಲೆಗಳು ಪುನಃ ಯಾವಾಗ ಆರಂಭಗೊಳ್ಳುತ್ತವೆಯೋ ಗೊತ್ತಿಲ್ಲ. ಆದರೆ ಶಾಲೆಗಳ ಸ್ಥಿತಿಗತಿಗಳನ್ನು ಪರಿಶೀಲಿಸಿ ಅಗತ್ಯವಿರುವ ಕಡೆ ದುರಸ್ತಿ ಕಾರ್ಯಗಳನ್ನು ಕೈಗೊಳ್ಳುವಂತೆ ಶಿಕ್ಷಣ ಇಲಾಖೆ ಸುಮಾರು ೨-೩ ತಿಂಗಳ ಹಿಂದೆಯೇ ಎಲ್ಲಾ ಜಿಲ್ಲೆಗಳ ಉಪನಿರ್ದೇಶಕರಿಗೆ, ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಹಾಗು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದೆ. ಆದರೆ ತಾಲೂಕಿನ ಬಹುತೇಕ ಶಾಲೆಗಳಲ್ಲಿ ಸರಿಯಾಗಿ ಪರಿಶೀಲನೆ ನಡೆಸಿಲ್ಲ. ಅಲ್ಲದೆ ಪರಿಶೀಲನೆ ನಡೆಸಿದ್ದರೂ ಸಹ ಕ್ರಮ ಕೈಗೊಂಡಿಲ್ಲ ಎಂಬ ದೂರುಗಳು ಕೇಳಿ ಬರುತ್ತಿವೆ.
       ದೊಣಬಘಟ್ಟ ಗ್ರಾಮದ ಪಂಚಾಯಿತಿ ಕಛೇರಿ ಹಿಂಭಾಗದಲ್ಲಿರುವ ಕನ್ನಡ ಸರ್ಕಾರಿ ಶಾಲೆಯಲ್ಲಿ  ಶಾಲೆಯ ಗೋಡೆ ಶಿಥಿಲಗೊಂಡು ಹಲವಾರು ವರ್ಷಗಳು ಕಳೆದಿವೆ. ಗೋಡೆಗಳು ಬೀಳುವ ಸ್ಥಿತಿಯಲ್ಲಿವೆ. ಆದರೂ ಸಹ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಈ ನಡುವೆ ನ.೨ ರಿಂದ ಶಿಕ್ಷಕರು ಕಡ್ಡಾಯವಾಗಿ ಶಾಲೆಗಳಲ್ಲಿ ಹಾಜರಿರುವಂತೆ ಸೂಚಿಸಲಾಗಿದೆ. ಇದರಿಂದಾಗಿ ಭಯದ ವಾತಾವರಣದಲ್ಲಿ ಕರ್ತವ್ಯ ನಿರ್ವಹಿಸುವಂತಾಗಿದೆ ಎಂದು ಶಿಕ್ಷಕಿ ಅನಿತಾ ಮೇರಿ ಆತಂಕ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಶಾಲೆಯಲ್ಲಿ ಸಮರ್ಪಕವಾಗಿ ಕುಡಿಯುವ ನೀರಿನ ವ್ಯವಸ್ಥೆ ಸಹ ಇಲ್ಲದಂತಾಗಿದೆ. ಈ ಕುರಿತು ಗ್ರಾಮ ಪಂಚಾಯಿತಿ ಆಡಳಿತಕ್ಕೆ ಹಲವು ಬಾರಿ ಮನವಿ ಸಲ್ಲಿಸಿ ಒತ್ತಾಯಿಸಲಾಗಿದ್ದು, ಆದರೂ ಸಹ ಇದುವರೆಗೂ ಕ್ರಮ ಕೈಗೊಂಡಿಲ್ಲ ಎಂದು ದೂರಿದ್ದಾರೆ.

ರೈತರಿಂದ ಭೂಮಿ ಹುಣ್ಣಿಮೆ ಪೂಜೆ

ಭದ್ರಾವತಿ ತಾಲೂಕಿನ ವಿವಿಧೆಡೆ ಆಶ್ವಿಜ ಮಾಸದ ಪೌರ್ಣಿಮೆ ದಿನ ಶನಿವಾರ ರೈತರು ಸಾಂಪ್ರದಾಯಿಕವಾಗಿ ಭೂಮಿ ಹುಣ್ಣಿಮೆ ಪೂಜೆ ನೆರವೇರಿಸಿದರು.
ಭದ್ರಾವತಿ, ಅ. ೩೧: ತಾಲೂಕಿನ ವಿವಿಧೆಡೆ ಆಶ್ವಿಜ ಮಾಸದ ಪೌರ್ಣಿಮೆ ದಿನ ಶನಿವಾರ ರೈತರು ಸಾಂಪ್ರದಾಯಿಕವಾಗಿ ಭೂಮಿ ಹುಣ್ಣಿಮೆ ಪೂಜೆ ನೆರವೇರಿಸಿದರು.
      ಮುಂಜಾನೆ ಹೊಲ, ಗದ್ದೆ, ತೋಟಗಳಲ್ಲಿ ಬೆಳೆಗಳ ನಡುವೆ ಚಪ್ಪರ ಹಾಕಿ ಭೂಮಿಯನ್ನು ಸಾರಿಸಿ, ಬಣ್ಣ ಬಣ್ಣದ ರಂಗೋಲಿ ಚಿತ್ತಾರಗಳ ನಡುವೆ ಕಳಸವಿಟ್ಟು, ವಿವಿಧ ಪುಷ್ಪಗಳಿಂದ ಅಲಂಕರಿಸಿ, ಬಾಳೆಕಂದು, ತಳಿರುತೋರಣಗಳಿಂದ ಸಿಂಗರಸಿ ಭೂ ಮಾತೆಯನ್ನು ಪೂಜೆಸಲಾಯಿತು. ಕೆಲವು ಭಾಗಗಳಲ್ಲಿ ತೋಟದಲ್ಲಿನ ಅಡಕೆ, ತೆಂಗಿನ ಮರಗಳಿಗೆ ಬಣ ಬಣ್ಣದ ಸೀರೆಗಳಿಂದ ಸಿಂಗರಿಸಿ ಭೂ ಮಾತೆಯನ್ನು ಪ್ರತಿಷ್ಠಾಪಿಸಿ ಆರಾಧಿಸಲಾಯಿತು.

ಮುಂದಿನ ಒಂದು ವರ್ಷದೊಳಗೆ ಶ್ರೀ ಮಹರ್ಷಿ ವಾಲ್ಮೀಕಿ ಸಮುದಾಯ ಭವನ ಪೂರ್ಣ : ಬಿ.ಕೆ ಸಂಗಮೇಶ್ವರ್

ಭದ್ರಾವತಿಯಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಸಮಾಜ ಕಲ್ಯಾಣ ಇಲಾಖೆ ಹಾಗು ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಸಮಾಜದ ಸಹಕಾರದೊಂದಿಗೆ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಹಮ್ಮಿಕೊಳ್ಳಲಾಗಿತ್ತು.
ಭದ್ರಾವತಿ, ಅ. ೩೧:  ನಗರದಲ್ಲಿ ನೆನೆಗುದಿಗೆ ಬಿದ್ದಿರುವ ಶ್ರೀ ಮಹರ್ಷಿ ವಾಲ್ಮೀಕಿ ಸಮುದಾಯ ಭವನ ಮುಂದಿನ ಒಂದು ವರ್ಷದೊಳಗೆ ಪೂರ್ಣಗೊಳಿಸುವ ನಿಟ್ಟಿನಲ್ಲಿ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಶಾಸಕ ಬಿ.ಕೆ ಸಂಗಮೇಶ್ವರ್ ಭರವಸೆ ನೀಡಿದರು.
    ಅವರು ಶನಿವಾರ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಸಮಾಜ ಕಲ್ಯಾಣ ಇಲಾಖೆ ಹಾಗು ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಸಮಾಜದ ಸಹಕಾರದೊಂದಿಗೆ ಹಮ್ಮಿಕೊಳ್ಳಲಾಗಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ಹಣದ ಕೊರತೆಯಿಂದ ವಾಲ್ಮೀಕಿ ಭವನ ಕಾಮಗಾರಿ ಸ್ಥಗಿತಗೊಂಡಿದ್ದು, ಈ ಹಿನ್ನಲೆಯಲ್ಲಿ ಕಾಮಗಾರಿ ಪೂರ್ಣಗೊಳಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಇನ್ನೂ ಹೆಚ್ಚಿನ ನೆರವು ಕೋರಬೇಕಾಗಿದೆ. ಅಲ್ಲದೆ ಸಮಾಜದ ಬಂಧುಗಳು ಸಹ  ತಮ್ಮ ಕೈಯಲ್ಲಿ ಸಾಧ್ಯವಾದಷ್ಟು ನೆರವು ನೀಡಲು ಮುಂದಾಗಬೇಕು. ಮುಂದಿನ ವಾಲ್ಮೀಕಿ ಜಯಂತಿಯನ್ನು ನೂತನ ಭವನದಲ್ಲಿ ಆಚರಿಸುವಂತಾಗಬೇಕೆಂದರು.


ಭದ್ರಾವತಿಯಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಸಮುದಾಯ ಭವನ ಕಾಮಗಾರಿ ಪೂರ್ಣಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಶಾಸಕ ಬಿ.ಕೆ ಸಂಗಮೇಶ್ವರ್ ಹಾಗು ತಹಸೀಲ್ದಾರ್ ಗ್ರೇಡ್-೨ ರಂಗಮ್ಮ ಅವರಿಗೆ ಮನವಿ ಸಲ್ಲಿಸಲಾಯಿತು.
     ಪ್ರಸ್ತುತ ಸಮಾಜಕ್ಕೆ ಶ್ರೀ ಮಹರ್ಷಿ ವಾಲ್ಮೀಕಿಯವರ ಆದರ್ಶತನಗಳು ಅವಶ್ಯಕವಾಗಿದ್ದು, ಅವರ ಜಯಂತಿ ಕೇವಲ ಆಚರಣೆಗೆ ಸೀಮಿತವಾಗಬಾರದು. ಪ್ರತಿಯೊಬ್ಬರೂ ಪ್ರೀತಿ, ಸಹೋದರತ್ವ, ಸಹಬಾಳ್ವೆ, ಸಮಾನತೆ, ಆದರ್ಶತನಗಳನ್ನು ಮೈಗೂಡಿಸಿಕೊಳ್ಳಬೇಕು. ಇದು ಮಹರ್ಷಿ ವಾಲ್ಮೀಕಿಯವರು ಈ ಜಗತ್ತಿಗೆ ನೀಡಿರುವ ದೊಡ್ಡ ಸಂದೇಶವಾಗಿದೆ. ಇದನ್ನು ಅರಿತು ಎಲ್ಲರೂ ಮುನ್ನಡೆಯಬೇಕೆಂದರು.
     ತಾಲೂಕು ಪಂಚಾಯಿತಿ ಅಧ್ಯಕ್ಷ ಡಿ. ಲಕ್ಷ್ಮೀದೇವಿ, ತಹಸೀಲ್ದಾರ್ ಗ್ರೇಡ್-೨ ರಂಗಮ್ಮ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಡಾ. ಜಿ. ಮಂಜುನಾಥ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ದೂದ್‌ಪೀರ್, ನಗರಸಭೆ ಪೌರಾಯುಕ್ತ ಮನೋಹರ್, ಪೊಲೀಸ್ ನಗರ ವೃತ್ತ ನಿರೀಕ್ಷ ರಾಘವೇಂದ್ರ ಕಾಂಡಿಕೆ, ಗ್ರಾಮಾಂತರ ವೃತ್ತ ನಿರೀಕ್ಷಕ ಇ.ಓ ಮಂಜುನಾಥ್, ಠಾಣಾಧಿಕಾರಿ ದೇವರಾಜ್, ಶಿರಸ್ತೇದಾರ್ ಮಂಜಾನಾಯ್ಕ, ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ಆರ್ ಗಾಯತ್ರಿ, ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
     ಸಮುದಾಯ ಭವನ ಕಾಮಗಾರಿ ಪೂರ್ಣಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಶಾಸಕ ಬಿ.ಕೆ ಸಂಗಮೇಶ್ವರ್ ಹಾಗು ತಹಸೀಲ್ದಾರ್ ಗ್ರೇಡ್-೨ ರಂಗಮ್ಮ ಅವರಿಗೆ ಮನವಿ ಸಲ್ಲಿಸಲಾಯಿತು.
     ಸಮಾಜದ ಗೌರವಾಧ್ಯಕ್ಷ ಬಸವರಾಜಪ್ಪ ಉಪನ್ಯಾಸ ನೀಡಿದರು. ಅಧ್ಯಕ್ಷ ಬಸವರಾಜ ಬಿ. ಆನೆಕೊಪ್ಪ ಅಧ್ಯಕ್ಷತೆ ವಹಿಸಿದ್ದರು. ಭಾಸ್ಕರ್, ನಾಗಣ್ಣ, ಪುಟ್ಟಸ್ವಾಮಿ ನಾಯಕ, ಪಾಲಯ್ಯ, ಜಯಮ್ಮ ಸೇರಿದಂತೆ ಇನ್ನಿತರನ್ನು ಸನ್ಮಾನಿಸಿ ಗೌರವಿಸಲಾಯಿತು.  
    ಸಮಾಜದ ಪ್ರಮುಖರಾದ ಪ್ರಧಾನ ಕಾರ್ಯದರ್ಶಿ ಶಿವಾನಂದ, ಕಾರ್ಯದಶಿ ಮಂಜುನಾಥ್ ಸೇರಿದಂತೆ, ನಿರ್ದೇಶಕರಾದ ಕಡದಕಟ್ಟೆ ಬಸವರಾಜ್, ಸದಾನಂದ, ಸದಾಶಿವಪ್ಪ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ವಿಐಎಸ್‌ಎಲ್‌ನಲ್ಲಿ ರಾಷ್ಟ್ರೀಯ ಏಕತಾ ದಿನಾಚರಣೆ

ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭ್‌ಭಾಯಿ ಪಟೇಲರ ಹುಟ್ಟುಹಬ್ಬದ ಅಂಗವಾಗಿ ಭದ್ರಾವತಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯ ಆಡಳಿತ ಕಛೇರಿ ಸಮೀಪದ ಇಸ್ಪಾತ್ ಭವನದ ಮುಂಭಾಗ ಶನಿವಾರ ರಾಷ್ಟ್ರೀಯ ಏಕತಾ ದಿನ ಆಚರಿಸಲಾಯಿತು.
ಭದ್ರಾವತಿ, ಅ. ೩೧: ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭ್‌ಭಾಯಿ ಪಟೇಲರ ಹುಟ್ಟುಹಬ್ಬದ ಅಂಗವಾಗಿ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯ ಆಡಳಿತ ಕಛೇರಿ ಸಮೀಪದ ಇಸ್ಪಾತ್ ಭವನದ ಮುಂಭಾಗ ಶನಿವಾರ ರಾಷ್ಟ್ರೀಯ ಏಕತಾ ದಿನ ಆಚರಿಸಲಾಯಿತು.
      ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಡಾ. ಎಂ.ವೈ. ಸುರೇಶ್ ಕನ್ನಡದಲ್ಲಿ, ಡಾ. ಸುಜೀತ್‌ಕುಮಾರ್ ಹಿಂದಿಯಲ್ಲಿ ಮತ್ತು ಡಾ. ರಾಜು ಆಂಗ್ಲ ಭಾಷೆಯಲ್ಲಿ ಪ್ರತಿಙ ವಿಧಿ ಬೋಧಿಸಿದರು. ವಿಶೇಷವಾಗಿ ಕೊರೋನಾ ಯೋಧರಿಗೆ ಗೌರವ ಸೂಚಿಸಲಾಯಿತು.
     ಕಾರ್ಖಾನೆಯ ಕಾರ್ಯಪಾಲಕ ನಿರ್ದೇಶಕ ಕೆ.ಎಲ್.ಎಸ್ ರಾವ್, ಸುರಜೀತ್‌ಮಿಶ್ರ, ಕಾರ್ಮಿಕರ ಸಂಘ ಮತ್ತು ಅಧಿಕಾರಿಗಳ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಕಾರ್ಯಕಾರಿ ಸಮಿತಿ ಸದಸ್ಯರುಗಳು, ವಿವಿಧ ಇಲಾಖೆಗಳ ಅಧಿಕಾರಿಗಳು, ಕಾಯಂ ಹಾಗು ಗುತ್ತಿಗೆ ಕಾರ್ಮಿಕರು ಪಾಲ್ಗೊಂಡಿದ್ದರು. ಪ್ರವೀಣ್‌ಕುಮಾರ್‌ದೇವಾಂಗಮಠ ನಿರೂಪಿಸಿದರು.

Friday, October 30, 2020

ನಾಯ್ಡು ಸಮಾಜದ ಸಮುದಾಯಭವನದ ಮುಂದುವರೆದ ಕಾಮಗಾರಿಗೆ ಭೂಮಿಪೂಜೆ

ಭದ್ರಾವತಿಯಲ್ಲಿ ನಾಯ್ಡು ಸಮಾಜದ ಸಮುದಾಯಭವನದ ಮುಂದುವರೆದ ಕಾಮಗಾರಿಗೆ ಶಾಸಕ ಬಿ.ಕೆ ಸಂಗಮೇಶ್ವರ್ ಭೂಮಿಪೂಜೆ ನೆರವೇರಿಸಿದರು.
ಭದ್ರಾವತಿ, ಅ. ೩೦: ನಗರದ ಬಿ.ಹೆಚ್ ರಸ್ತೆ ಗೌಳಿಗರ ಬೀದಿ ಶ್ರೀರಾಮ ಮಂದಿರ ಆವರಣದಲ್ಲಿ ನಾಯ್ಡು ಸಮಾಜದ ವತಿಯಿಂದ ನಿರ್ಮಿಸಲಾಗುತ್ತಿರುವ ಸಮುದಾಯ ಭವನದ ಮುಂದುವರೆದ ಕಾಮಗಾರಿಗೆ ಶಿವಮೊಗ್ಗ ಲೋಕಸಭಾ ಸದಸ್ಯರ ನಿಧಿsಯಿಂದ ರು. ೨೫ ಲಕ್ಷ ಬಿಡುಗಡೆಯಾಗಿದ್ದು,  ಶಾಸಕ ಬಿ.ಕೆ. ಸಂಗಮೇಶ್ವರ್ ಭೂಮಿಪೂಜೆ ನೆರವೇರಿಸಿದರು.
     ಬಿಜೆಪಿ ಪಕ್ಷದ ಮುಖಂಡರಾದ ವಿ. ಕದಿರೇಶ್, ಟಿ. ವೆಂಕಟೇಶ್, ಆನಂದ್, ಮಂಗೋಟೆ ರುದ್ರೇಶ್, ನಾಯ್ಡು ಸಮಾಜದ ಗೌರವಾಧ್ಯಕ್ಷರಾದ ಎಸ್. ಮೋಹನ್‌ನಾಯ್ಡು, ಅಧ್ಯಕ್ಷ ವಿ. ಗೋವಿಂದ್‌ರಾಜ್, ಕಾರ್ಯದರ್ಶಿ ಬಿ.ವಿ ಗಿರಿನಾಯ್ಡು, ಉಪಾಧ್ಯಕ್ಷರಾದ ಪ್ರಭಾಕರ್. ಖಜಾಂಚಿ ಇಂದು ಶೇಖರ್, ಮೋಹನ್, ಜಯಕುಮಾರ್, ಚಲುವರಾಜ್, ವಾಸು, ಪಿ.ಎಸ್ ಬಾಬು, ಮುನಿಸ್ವಾಮಿ, ಬಾಲಚಂದ್ರ ಮುಂತಾದವರು ಉಪಸ್ಥಿತರಿದ್ದರು.


ನಗರಸಭೆ ಕಾರ್ಯಾಚರಣೆ : ಬೀದಿಬದಿ ಮೀನು ವ್ಯಾಪಾರಿಗಳ ತೆರವು

ಭದ್ರಾವತಿಯಲ್ಲಿ ಪ್ರಮುಖ ರಸ್ತೆಗಳ ಬೀದಿಬದಿ ಮೀನು ವ್ಯಾಪಾರಿಗಳನ್ನು ಶುಕ್ರವಾರ ನಗರಸಭೆ ವತಿಯಿಂದ ಕಾರ್ಯಾಚರಣೆ ನಡೆಸಿ ತೆರವುಗೊಳಿಸಿರುವ ಘಟನೆ ನಡೆಯಿತು.
ಭದ್ರಾವತಿ, ಅ. ೩೦: ನಗರದ ಪ್ರಮುಖ ರಸ್ತೆಗಳ ಬೀದಿಬದಿ ಮೀನು ವ್ಯಾಪಾರಿಗಳನ್ನು ಶುಕ್ರವಾರ ನಗರಸಭೆ ವತಿಯಿಂದ ಕಾರ್ಯಾಚರಣೆ ನಡೆಸಿ ತೆರವುಗೊಳಿಸಿರುವ ಘಟನೆ ನಡೆಯಿತು.
     ಮೀನುಗಾರರ ಬೀದಿ ಬಿ.ಎಚ್ ರಸ್ತೆ ದುರ್ಗಾ ನರ್ಸಿಂಗ್ ಹೋಂ ಬಳಿ ಹಾಗು  ಉಂಬ್ಳೆಬೈಲು ರಸ್ತೆ ಮೆಸ್ಕಾಂ ಕಛೇರಿ ಸಮೀಪದಲ್ಲಿ ಪ್ರತಿ ದಿನ ಬೀದಿ ಬದಿ ಹಸಿ ಮೀನು ಮಾರಾಟ ನಡೆಸಲಾಗುತ್ತಿತ್ತು. ಇದರಿಂದ ರಸ್ತೆಯಲ್ಲಿ ಸಂಚರಿಸುವವರು, ಸಮೀಪದ ಅಂಗಡಿ ಮುಂಗಟ್ಟುಗಳ ವ್ಯಾಪಾರಸ್ಥರು, ಮೆಸ್ಕಾಂ ಸಿಬ್ಬಂದಿಗಳು ಹಾಗು ಸಮೀಪದ ನಿವಾಸಿಗಳು ತೊಂದರೆ ಅನುಭವಿಸುವಂತಾಗಿತ್ತು. ಅಲ್ಲದೆ ಸುತ್ತಮುತ್ತಲ ಪರಿಸರದಲ್ಲಿ ಸ್ವಚ್ಛತೆ ಇಲ್ಲದೆ ಇರುವುದು ಕಂಡು ಬರುತ್ತಿತ್ತು. 


       ಈ ಹಿನ್ನಲೆಯಲ್ಲಿ ನಗರಸಭೆ ಇಂಜಿನಿಯರ್ ಪ್ರಸಾದ್, ಹಿರಿಯ ಆರೋಗ್ಯ ನಿರೀಕ್ಷಕ ಆರ್.ಬಿ ಸತೀಶ್ ಹಾಗು ಸೂಪರ್ ವೈಸರ್ ಎನ್. ಗೋವಿಂದ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ತೆರವುಗೊಳಿಸುವಲ್ಲಿ ಯಶಸ್ವಿಯಾಯಿತು.