Tuesday, December 15, 2020

ಸಿದ್ದಾರ್ಥ ಅಂಧರ ಕೇಂದ್ರದಲ್ಲಿ ಶಾಸಕರ ಪುತ್ರನ ಹುಟ್ಟುಹಬ್ಬ

ಭದ್ರಾವತಿ ಶಾಸಕ ಬಿ.ಕೆ ಸಂಗಮೇಶ್ವರ್ ಕಿರಿಯ ಪುತ್ರ ಬಿ.ಎಸ್ ಬಸವೇಶ್ ತಮ್ಮ ಹುಟ್ಟುಹಬ್ಬ ನ್ಯೂಟೌನ್ ಸಿದ್ದಾರ್ಥ ಅಂಧರ ಕೇಂದ್ರದಲ್ಲಿ ಮಂಗಳವಾರ ಸರಳವಾಗಿ ಆಚರಿಸಿಕೊಂಡರು.
ಭದ್ರಾವತಿ, ಡಿ. ೧೫ : ಶಾಸಕ ಬಿ.ಕೆ ಸಂಗಮೇಶ್ವರ್ ಕಿರಿಯ ಪುತ್ರ ಬಿ.ಎಸ್ ಬಸವೇಶ್ ತಮ್ಮ ಹುಟ್ಟುಹಬ್ಬ ನ್ಯೂಟೌನ್ ಸಿದ್ದಾರ್ಥ ಅಂಧರ ಕೇಂದ್ರದಲ್ಲಿ ಮಂಗಳವಾರ ಸರಳವಾಗಿ ಆಚರಿಸಿಕೊಂಡರು.
    ಜಯಕರ್ನಾಟಕ ಜನಪರ ವೇದಿಕೆ ಜಿಲ್ಲಾ ಕಾರ್ಯಾಧ್ಯಕ್ಷ  ಸುದೀಪ್ ಕುಮಾರ್, ಫ್ರಾನ್ಸಿಸ್ ತಾಲೂಕು ಅಧ್ಯಕ್ಷ ಎಸ್‌ಎಸ್ ಭೈರಪ್ಪ ಮುಖಂಡರಾದ ಮುಕುಂದಪ್ಪ, ಸಿದ್ದಯ್ಯ, ಸೆಲ್ವರಾಜ್, ಪ್ರಸನ್ನಕುಮಾರ್, ಸುನಿಲ್, ಅಂಧರ ಕೇಂದ್ರದ ಅಧ್ಯಕ್ಷ ಶಿವಬಸಪ್ಪ, ಅಂಧ ವಿಕಲಚೇತನರು ಸೇರಿದಂತೆ ಇನ್ನಿತರರಿದ್ದರು.

ತರಬೇತಿ ಸ್ಥಳಕ್ಕೆ ಆಗಮಿಸಿ ಯುವಕರಿಗೆ ಸ್ಪೂರ್ತಿ ನೀಡಲು ಪೊಲೀಸ್ ಉಪಾಧೀಕ್ಷಕರಿಗೆ ಮನವಿ

ಭದ್ರಾವತಿ ತಾಲೂಕು ಮಾಜಿ ಸೈನಿಕರ ಸಂಘದ ವತಿಯಿಂದ ನಗರ ಹಾಗು ಗ್ರಾಮಾಂತರ ಭಾಗದ ಯುವಕರಿಗೆ ಉಚಿತವಾಗಿ ನೀಡಲಾಗುತ್ತಿರುವ ದೈಹಿಕ ಹಾಗೂ ಲಿಖಿತ ಪರೀಕ್ಷೆ ತರಬೇತಿ ಸ್ಥಳಕ್ಕೆ ಆಗಮಿಸಿ ಯುವಕರಿಗೆ ಸ್ಪೂರ್ತಿ ನೀಡಬೇಕೆಂದು ಪೊಲೀಸ್ ಉಪಾಧೀಕ್ಷಕ ಕೃಷ್ಣಮೂರ್ತಿಗೆ ಮಂಗಳವಾರ ಮನವಿ ಸಲ್ಲಿಸಲಾಯಿತು.
ಭದ್ರಾವತಿ, ಡಿ. ೧೫: ತಾಲೂಕು ಮಾಜಿ ಸೈನಿಕರ ಸಂಘದ ವತಿಯಿಂದ ನಗರ ಹಾಗು ಗ್ರಾಮಾಂತರ ಭಾಗದ ಯುವಕರಿಗೆ ಉಚಿತವಾಗಿ ನೀಡಲಾಗುತ್ತಿರುವ ದೈಹಿಕ ಹಾಗೂ ಲಿಖಿತ ಪರೀಕ್ಷೆ ತರಬೇತಿ ಸ್ಥಳಕ್ಕೆ ಆಗಮಿಸಿ ಯುವಕರಿಗೆ ಸ್ಪೂರ್ತಿ ನೀಡಬೇಕೆಂದು ಪೊಲೀಸ್ ಉಪಾಧೀಕ್ಷಕ ಕೃಷ್ಣಮೂರ್ತಿಗೆ ಮಂಗಳವಾರ ಮನವಿ ಸಲ್ಲಿಸಲಾಯಿತು.
    ಭಾರತೀಯ ಸೇನೆ, ಅರೆ ಸೇನಾಪಡೆ, ಪೊಲೀಸ್ ಇಲಾಖೆ ಸೇರಿದಂತೆ ಇತರೆ ಭದ್ರತಾ ಇಲಾಖೆಗಳಿಗೆ ಅಗತ್ಯವಿರುವ ತರಬೇತಿಯನ್ನು ನಗರದ ವಿಐಎಸ್‌ಎಲ್ ಕ್ರೀಡಾಂಗಣದಲ್ಲಿ ಉಚಿತವಾಗಿ ನೀಡಲಾಗುತ್ತಿದೆ. ಈ ತರಬೇತಿಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಜೊತೆಗೆ ತರಬೇತಿ ನಡೆಸಲಾಗುತ್ತಿರುವ
ಸ್ಥಳಕ್ಕೆ ಡಿ.೧೬ರ ಬುಧವಾರ ಬೆಳಿಗ್ಗೆ ೬.೩೦ಕ್ಕೆ ಆಗಮಿಸಬೇಕೆಂದು ಕೋರಲಾಯಿತು. ಸಂಘದ ಕಾರ್ಯದರ್ಶಿ ವೆಂಕಟ್ ಗಿರಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಅಧ್ಯಕ್ಷರಾಗಿ ಡಿ.ಕೆ ರಾಘವೇಂದ್ರರಾವ್

ಡಿ.ಕೆ ರಾಘವೇಂದ್ರರಾವ್
ಭದ್ರಾವತಿ, ಡಿ. ೧೫: ತಾಲ್ಲೂಕು ಭಾವಸಾರ ಕ್ಷತ್ರೀಯ ಸಮಾಜದ  ನೂತನ ಅಧ್ಯಕ್ಷರಾಗಿ ಡಿ.ಕೆ ರಾಘವೇಂದ್ರರಾವ್ ಮಂಗಳವಾರ ನಡೆದ ಸರ್ವ ಸದಸ್ಯರ ವಾರ್ಷಿಕ ಸಭೆಯಲ್ಲಿ ಆಯ್ಕೆಯಾದರು.
ಇದುವರೆಗೂ ಸತೀಶ್ ಕುಮಾರ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಸಮಾಜದ ಮುಖಂಡರಾದ ಡಿ.ಟಿ ಶ್ರೀಧರ್, ಶಿವಮೊಗ್ಗ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ  ಟಿ.ಎಸ್ ದುಗ್ಗೇಶ್, ಅಮಿತ್ ಕುಮಾರ್ ಯೋಗೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಯಾವುದೇ ಚುನಾವಣೆಗೂ ಕಡಿಮೆ ಇಲ್ಲದಂತೆ ನಡೆದ ಪ್ರಾಥಮಿಕ ಶಾಲಾ ಶಿಕ್ಷಕರ ಚುನವಣೆ

ಭದ್ರಾವತಿಯಲ್ಲಿ ಮಂಗಳವಾರ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯಕಾರಿ ಸಮಿತಿ ಚುನಾವಣೆ ಮತದಾನದಲ್ಲಿ ಅಭ್ಯರ್ಥಿಗಳು ಸಾಲುಗಟ್ಟಿ ನಿಂತು ಮತಯಾಚಿಸಿದರು.
ಭದ್ರಾವತಿ, ಡಿ. ೧೫: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯಕಾರಿ ಸಮಿತಿ ಚುನಾವಣೆ ಮತದಾನ ಮಂಗಳವಾರ ಹಳೇನಗರದ ಸರ್ಕಾರಿ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು. ಯಾವುದೇ ಚುನಾವಣೆಗೂ ಕಡಿಮೆಯಿಲ್ಲದಂತೆ ಶಿಕ್ಷಕರು ಸಹ ಮತಯಾಚನೆ ಕಾರ್ಯದಲ್ಲಿ ತೊಡಗಿದ್ದರು.
    ಬೆಳಿಗ್ಗೆ ೮.೩೦ರಿಂದ ಆರಂಭಗೊಂಡ ಮತದಾನ ಸಂಜೆ ೪ ಗಂಟೆಗೆ ಮುಕ್ತಾಯಗೊಂಡಿತು. ತಾಲ್ಲೂಕಿನ ವಿವಿಧ ಭಾಗಗಳಿಂದ ಆಗಮಿಸಿದ್ದ ಶಿಕ್ಷಕರು ಮತದಾನದಲ್ಲಿ ಭಾಗವಹಿಸಿದ್ದರು.  ಸಿ.ಎಸ್ ಷಡಾಕ್ಷರಿ ಸಮಾನ ಮನಸ್ಕರ ಶಿಕ್ಷಕರ ಬಳಗ (ಸ್ಪಂದನ ತಂಡ) ಹಾಗು ಸಿ.ಎಸ್ ಷಡಾಕ್ಷರಿ ಅಭಿಮಾನಿ ಸಮಸ್ತ ಶಿಕ್ಷಕರ ಬಳಗ ಈ ಎರಡು ಬಣಗಳ ಶಿಕ್ಷಕರು ಮತಗಟ್ಟೆ ಮುಂಭಾಗದ ರಸ್ತೆಯಲ್ಲಿ ಎರಡು ಕಡೆ ಸಾಲುಗಟ್ಟಿನಿಂತು ಮತಯಾಚಿಸುವ ಮೂಲಕ ಗಮನ ಸೆಳೆದಿದರು. ಕೋವಿಡ್-೧೯ರ ಹಿನ್ನಲೆಯಲ್ಲಿ ಮತಗಟ್ಟೆಗೆ ಮತದಾನ ಮಾಡಲು ಬರುವವರ ಥರ್ಮೋ ಸ್ಕ್ಯಾನಿಂಗ್ ನಡೆಸಲಾಯಿತು ಅಲ್ಲದೆ ಮಾಸ್ಕ್ ಬಳಕೆ ಕಡ್ಡಾಯಗೊಳಿಸಲಾಗಿತ್ತು.

Monday, December 14, 2020

ಡಿ.೧೬ರಂದು ಚುನಾವಣಾ ತರಬೇತಿ

ಜಿ. ಸಂತೋಷ್‌ಕುಮಾರ್
ಭದ್ರಾವತಿ, ಡಿ. ೧೪: ತಾಲ್ಲೂಕಿನಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಗೆ ನಿಯೋಜಿಸಲಾಗಿರುವ ಮತಗಟ್ಟೆ ಅಧಿಕಾರಿ(ಪಿಆರ್‌ಓ, ಎಪಿಆರ್‌ಓ), ಸಿಬ್ಬಂದಿಗಳಿಗೆ ಡಿ.೧೬ರಂದು ತರಬೇತಿ ಹಮ್ಮಿಕೊಳ್ಳಲಾಗಿದೆ.
     ಹಳೇನಗರದ ಸಂಚಿಯ ಹೊನ್ನಮ್ಮ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಬೆಳಿಗ್ಗೆ ೧೦.೩೦ಕ್ಕೆ ತರಬೇತಿ ಆರಂಭಗೊಳ್ಳಲಿದ್ದು, ಮತಗಟ್ಟೆ ಅಧಿಕಾರಿ(ಪಿಆರ್‌ಓ, ಎಪಿಆರ್‌ಓ), ಸಿಬ್ಬಂದಿಗಳು ತಪ್ಪದೇ ಪಾಲ್ಗೊಂಡು ಈ ಬಾರಿ ಗ್ರಾಮ ಪಂಚಾಯಿತಿ ಚುನಾವಣೆ ಯಶಸ್ವಿಗೊಳಿಸಲು ಸಹಕರಿಸುವಂತೆ  ತಹಸೀಲ್ದಾರ್ ಜಿ. ಸಂತೋಷ್‌ಕುಮಾರ್ ಕೋರಿದ್ದಾರೆ.

ವಚನ ಸಾಹಿತ್ಯ ಸಾಮಾಜಿಕ ಹೋರಾಟದ ಪರಿಕಲ್ಪನೆ : ಎಂ. ದಿವಾಕರ್

ಭದ್ರಾವತಿಯಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಿವೃತ್ತ ಪಶು ವೈದ್ಯ ಡಾ. ಜಿ.ಎಂ. ನಟರಾಜ್‌ರವರ ಸಹಕಾರದೊಂದಿಗೆ ನ್ಯೂಟೌನ್ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಸೊಮವಾರ ಹಮ್ಮಿಕೊಳ್ಳಲಾಗಿದ್ದ ಶಿವಲಿಂಗಮ್ಮ ಡಾ. ಜಿ.ಎಂ ಮುರುಗೇಂದ್ರಯ್ಯ ದತ್ತಿ ಕಾರ್ಯಕ್ರಮವನ್ನು ಪ್ರಾಂಶುಪಾಲ ಡಾ. ಜಿ.ಎಫ್ ಕುಟ್ರಿ ಉದ್ಘಾಟಿಸಿದರು.  
   ಭದ್ರಾವತಿ, ಡಿ. ೧೪: ೧೨ನೇ ಶತಮಾನದ ವಚನ ಸಾಹಿತ್ಯ ಧರ್ಮ, ಜಾತಿ, ಲಿಂಗಬೇಧ ಸೇರಿದಂತೆ ಸಮಾಜದಲ್ಲಿನ ಎಲ್ಲಾ ರೀತಿಯ ಅಸಮಾನತೆಗಳ ವಿರುದ್ಧದ ಹೋರಾಟದ ಪರಿಕಲ್ಪನೆಯಾಗಿದೆ ಎಂದು ಹಳೇನಗರದ ಸಂಚಿಯ ಹೊನ್ನಮ್ಮ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಅಧ್ಯಾಪಕ ಎಂ. ದಿವಾಕರ್ ಹೇಳಿದರು.
   ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಿವೃತ್ತ ಪಶು ವೈದ್ಯ ಡಾ. ಜಿ.ಎಂ. ನಟರಾಜ್‌ರವರ ಸಹಕಾರದೊಂದಿಗೆ ನ್ಯೂಟೌನ್ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಸೊಮವಾರ ಹಮ್ಮಿಕೊಳ್ಳಲಾಗಿದ್ದ ಶಿವಲಿಂಗಮ್ಮ ಡಾ. ಜಿ.ಎಂ ಮುರುಗೇಂದ್ರಯ್ಯ ದತ್ತಿ ಕಾರ್ಯಕ್ರಮದಲ್ಲಿ ಅವರು ಸಾಹಿತ್ಯ ಮತ್ತು ಸಾಮಾಜಿಕ ನ್ಯಾಯ ಕುರಿತು ಉಪನ್ಯಾಸ ನೀಡಿದರು.
೧೨ನೇ ಶತಮಾನದಲ್ಲಿ ಜಗಜ್ಯೋತಿ ಬಸವಣ್ಣ, ಅಕ್ಕಮಹಾದೇವಿ ಸೇರಿದಂತೆ ಅನೇಕ ವಚನಗಾರರು ಅಂದಿನ ವಾಸ್ತವಿಕ ಬದುಕನ್ನು ತಮ್ಮ ವಚನಗಳಲ್ಲಿ ತಿಳಿಸಿದ್ದಾರೆ. ಅನುಭವ ಮಂಟಪದ ಮೂಲಕ ಸಾಮಾಜಿಕ ನ್ಯಾಯದ ಪರಿಕಲ್ಪನೆಗಳನ್ನು ತೋರಿಸಿ ಕೊಟ್ಟಿದ್ದಾರೆ ಎಂದರು.
   ಕಾರ್ಯಕ್ರಮ ಉದ್ಘಾಟಿಸಿದ ಕಾಲೇಜಿನ ಪ್ರಾಂಶುಪಾಲ ಡಾ. ಜಿ.ಎಫ್ ಕುಟ್ರಿ ಮಾತನಾಡಿ, ನಾಡಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ಹೆಚ್ಚು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿದೆ. ಕನ್ನಡ ಸಾಹಿತ್ಯ, ಭಾಷೆ , ಸಂಸ್ಕೃತಿ ಉಳಿಯಬೇಕಾಗಿದೆ. ಪ್ರಸ್ತುತ ನಾವುಗಳು ಕನ್ನಡದಲ್ಲಿ ಮಾತನಾಡಲು ನಿರಾಸಕ್ತಿ ತೋರಿಸುತ್ತಿದ್ದೇವೆ.  ಸಾಹಿತ್ಯದಿಂದ ಭಾಷೆಯ ಬೆಳವಣಿಗೆ ಸಾಧ್ಯ. ಸಾಹಿತ್ಯಕ್ಕೆ ಅಪಾರವಾದ ಶಕ್ತಿ ಇದೆ ಎಂದರು.
    ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಅಪೇಕ್ಷ ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು.  ನಿವೃತ್ತ ಪಶುವೈದ್ಯ ಡಾ. ಜಿ.ಎಂ ನಟರಾಜ್, ಉಪ ಪ್ರಾಂಶುಪಾಲರಾದ ಟಿ.ಎಸ್ ಸುಮನ, ಅಧ್ಯಾಪಕ ಎಂ.ಬಿ ಮಂಜುನಾಥ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
   ಕಸಾಪ ಕಾರ್ಯದರ್ಶಿ ಚನ್ನಪ್ಪ ಆಶಯ ನುಡಿಗಳನ್ನಾಡಿದರು., ಕಾರ್ಯದರ್ಶಿ ವೈ.ಕೆ ಹನುಮಂತಯ್ಯ, ಎ. ತಿಪ್ಪೇಸ್ವಾಮಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Sunday, December 13, 2020

ಡಿ.೧೫ರ ಮತಗಟ್ಟೆ ಅಧಿಕಾರಿ, ಸಿಬ್ಬಂದಿಗಳ ಕಾರ್ಯಾಗಾರ ಮುಂದೂಡಿಕೆ

ಭದ್ರಾವತಿ : ತಾಲ್ಲೂಕಿನಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಗೆ ನಿಯೋಜಿಸಲಾಗಿರುವ ಮತಗಟ್ಟೆ ಅಧಿಕಾರಿ(ಪಿಆರ್‌ಓ, ಎಪಿಆರ್‌ಓ), ಸಿಬ್ಬಂದಿಗಳಿಗೆ ಡಿ.೧೫ ರಂದು ಹಮ್ಮಿಕೊಳ್ಳಲಾಗಿದ್ದ ತರಬೇತಿ ಕಾರ್ಯಾಗಾರ ಮುಂದೂಡಲಾಗಿದೆ ಎಂದು ತಹಸೀಲ್ದಾರ್ ಜೆ. ಸಂತೋಷ್‌ಕುಮಾರ್ ತಿಳಿಸಿದ್ದಾರೆ.
    ರಾಜ್ಯದ ಎಲ್ಲೆಡೆ ಡಿ.೧೫ರಂದು  ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆ ಏಕಕಾಲದಲ್ಲಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ನಿರ್ದೇಶನದ ಮೇರೆಗೆ ತರಬೇತಿ ಕಾರ್ಯಾಗಾರ ಮುಂದೂಡಲಾಗಿದೆ ಎಂದು ತಿಳಿಸಿದ್ದಾರೆ