Wednesday, December 30, 2020

ಭದ್ರಾವತಿ ಗ್ರಾ.ಪಂ. ಚುನಾವಣೆ : ಬಹುತೇಕ ಹಿಂದಿನ ಸದಸ್ಯರೇ ಪುನಃ ಆಯ್ಕೆ

ಭದ್ರಾವತಿ ಹಳೇನಗರದ ಸಂಚಿ ಹೊನ್ನಮ್ಮ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮತ ಎಣಿಕೆ ಕೇಂದ್ರದ ಮುಂಭಾಗದಲ್ಲಿರುವ ಕನಕಮಂಟಪ ಮೈದಾನದಲ್ಲಿ ಅಭ್ಯರ್ಥಿಗಳ ಬೆಂಬಲಿಗರು ಗುಂಪು ಸೇರಿರುವುದು.
     ಭದ್ರಾವತಿ, ಡಿ. ೩೦: ತಾಲೂಕಿನ ೩೫ ಗ್ರಾಮ ಪಂಚಾಯಿತಿಗಳ ೩೭೫ ಸ್ಥಾನಗಳಿಗೆ ನಡೆದ ಚುನಾವಣಾ ಫಲಿತಾಂಶ ಬುಧವಾರ ಪ್ರಕಟಗೊಂಡಿದ್ದು, ಮಧ್ಯಾಹ್ನ ೧ ಗಂಟೆ ವೇಳೆಗೆ ಶೇ.೫೦ರಷ್ಟು ಫಲಿತಾಂಶ ಹೊರಬಿದ್ದಿದೆ.
      ಹಳೇನಗರದ ಸಂಚಿ ಹೊನ್ನಮ್ಮ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಮತ ಎಣಿಕೆ ನಡೆಯಿತು.  ಫಲಿತಾಂಶದ ಪ್ರಕಾರ ಕೆಲವು ಕ್ಷೇತ್ರಗಳಲ್ಲಿ ಈ ಹಿಂದಿನ ಸದಸ್ಯರೇ ಪುನಃ ಆಯ್ಕೆಯಾಗಿದ್ದಾರೆ. ಯರೇಹಳ್ಳಿ ಗ್ರಾ.ಪಂ. ಕೊರಲಕೊಪ್ಪ ಕ್ಷೇತ್ರ-೨ರಿಂದ ಸಿ.ಆರ್ ಶಿವರಾಮ್ ಮತ್ತು ಮಾವಿನಕೆರೆ ಗ್ರಾ.ಪಂ. ಕೆಂಚೇನಹಳ್ಳಿ ಕ್ಷೇತ್ರ-೫ರಿಂದ ಸುರೇಶ್ ತಲಾ ೪ನೇ ಬಾರಿಗೆ, ಅಂತರಗಂಗೆ ಗ್ರಾ.ಪಂ. ಕ್ಷೇತ್ರ-೧ರಿಂದ ಬಿ. ನಾಗೇಶ್ ಮತ್ತು ಯರೇಹಳ್ಳಿ ಗ್ರಾ.ಪಂ. ಕ್ಷೇತ್ರ-೧ರಿಂದ ಈ ಚಂದ್ರಶೇಖರ್ ಹಾಗು ಕ್ಷೇತ್ರ-೩ರಿಂದ ಎನ್. ಉಮೇಶ್ ತಲಾ ೩ನೇ ಬಾರಿಗೆ ಆಯ್ಕೆಯಾಗಿದ್ದಾರೆ. ಹಿರಿಯೂರು ಗ್ರಾ.ಪಂ.ಯಲ್ಲಿ ಗಂಗಮ್ಮ ೪ನೇ ಬಾರಿಗೆ ಮತ್ತು ಪವಿತ್ರ ಜಿ. ಮಂಜುನಾಥ್ ೨ನೇ ಬಾರಿಗೆ, ಸಿಂಗನಮನೆ ಗ್ರಾ.ಪಂ.ಯಲ್ಲಿ ಗಿರೀಶ್ ಮತ್ತು ಪ್ರವೀಣ್ ಮರು ಆಯ್ಕೆಯಾಗಿದ್ದಾರೆ. ಇದೆ ರೀತಿ ಬಹುತೇಕ ಕ್ಷೇತ್ರಗಳಲ್ಲಿ ಈ ಹಿಂದಿನ ಸದಸ್ಯರೇ ಪುನಃ ಆಯ್ಕೆಯಾಗಿರುವುದು ಅಚ್ಚರಿಗೆ ಕಾರಣವಾಗಿದೆ.
ಗಮನ ಸೆಳೆದ ಗ್ರಾಮ ಪಂಚಾಯಿತಿ:
    ಈ ಬಾರಿ ಚುನಾವಣೆಯಲ್ಲಿ ಯರೇಹಳ್ಳಿ ಪಂಚಾಯಿತಿ ಹಲವು ವಿಶೇಷತೆಗಳಿಂದ ಎಲ್ಲರ ಗಮನ ಸೆಳೆದಿದೆ. ಮುಖ್ಯವಾಗಿ ಕುಟುಂಬ ಸದಸ್ಯರ ಸ್ಪರ್ಧೆಯಲ್ಲಿ ಒಂದು ಕ್ಷೇತ್ರದಲ್ಲಿ ಅಪ್ಪ ಸಿ.ಆರ್ ಶಿವರಾಂ ಗೆಲುವು ಸಾಧಿಸಿದರೇ, ಮತ್ತೊಂದು ಕ್ಷೇತ್ರದಲ್ಲಿ ಮಗ ರಘು ಸೋಲು ಕಂಡಿದ್ದಾರೆ. ಇದೆ ರೀತಿ ಎಪಿಎಂಸಿ ನಿರ್ದೇಶಕ ಎನ್. ಉಮೇಶ್ ಒಂದು ಕ್ಷೇತ್ರದಲ್ಲಿ ಗೆಲುವು ಸಾಧಿಸಿದರೇ, ಮತ್ತೊಂದು ಕ್ಷೇತ್ರದಲ್ಲಿ ಇವರ ನಾದಿನಿ(ತಮ್ಮನ ಪತ್ನಿ) ಗೆಲುವು ಸಾಧಿಸಿದ್ದಾರೆ. ಅಲ್ಲದೆ ಈ ಗ್ರಾಮ ಪಂಚಾಯಿತಿ ಹಿಂದಿನ ಅವಧಿಯ ೩ ಸದಸ್ಯರು ಮರು ಆಯ್ಕೆಯಾಗಿದ್ದಾರೆ.
     ಬಹತೇಕ ಕ್ಷೇತ್ರಗಳಲ್ಲಿ ಕಾಂಗ್ರೆಸ್-ಜೆಡಿಎಸ್ ಬೆಂಬಲಗರ ಗೆಲುವು:
   ನಿರೀಕ್ಷೆಯಂತೆ ಈ ಬಾರಿ ಚುನಾವಣೆಯಲ್ಲೂ ಶಾಸಕ ಬಿ.ಕೆ ಸಂಗಮೇಶ್ವರ್ ಪ್ರತಿಷ್ಠೆ ಹಾಗು ಮಾಜಿ ಶಾಸಕ ದಿವಂಗತ ಎಂ.ಜೆ ಅಪ್ಪಾಜಿಯವರ ಅನುಕಂಪದ ಅಲೆ ಕಂಡು ಬಂದಿದ್ದು, ಕೂಡ್ಲಿಗೆರೆ, ಹಿರಿಯೂರು ಮತ್ತು ಸಿಂಗನಮನೆ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ವ್ಯಾಪ್ತಿಯ ಬಹುತೇಕ ಕ್ಷೇತ್ರಗಳಲ್ಲಿ ಕಾಂಗ್ರೆಸ್-ಜೆಡಿಎಸ್ ಪಕ್ಷಗಳ ಬೆಂಬಲಿಗರು ಗೆಲುವು ಸಾಧಿಸಿದ್ದಾರೆ.  ಬಿಜೆಪಿ ಈ ಬಾರಿ ಚುನಾವಣೆಯಲ್ಲಿ ಹೆಚ್ಚಿನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಕಳೆದ ಬಾರಿಗಿಂತ ಫಲಿತಾಂಶದಲ್ಲಿ ಸ್ವಲ್ಪ ಸುಧಾರಣೆ ಕಾಯ್ದುಕೊಂಡಿದೆ ಎನ್ನಲಾಗಿದೆ.
    ೨ ಮತ ಅಂತರದಿಂದ ಗೆಲುವು : ಮರು ಮತದಾನಕ್ಕೆ ಮನವಿ    
ತಡಸ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಭ್ಯರ್ಥಿಯೊಬ್ಬರು ೨ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದು, ಈ ಹಿನ್ನಲೆಯಲ್ಲಿ ಎದುರಾಳಿ ಅಭ್ಯರ್ಥಿ ಮರು ಎಣಿಕೆ ಮಾಡುವಂತೆ ಒತ್ತಾಯಿಸಿ ಚುನಾವಣಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಅರಹತೊಳಲು ಗ್ರಾ.ಪಂ. ವ್ಯಾಪ್ತಿಯಲ್ಲಿ ಪತ್ರಕರ್ತ ರಂಗನಾಥ್ ಚುನಾವಣೆಗೆ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. ತಾಲೂಕಿನ ಸಿಂಗನ ಮನೆ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಗುತ್ತಿಗೆ ಕೆಲಸ ಮಾಡುವ ವ್ಯಕ್ತಿಯೋರ್ವನ ಪತ್ನಿ ಲಕ್ಷ್ಮಿ ಎಂಬುವರು ಇದೆ ಗ್ರಾ.ಪಂ. ಚುನಾವಣೆಗೆ ಸ್ಪರ್ಧಿಸಿ ಗೆಲುವು ಸಾಧಿಸಿ ಗಮನ ಸೆಳೆದಿದ್ದಾರೆ. ಇದೆ ಮೊದಲ ಬಾರಿಗೆ ಪೊಲೀಸ್ ಉಮೇಶ್ ನೇತೃತ್ವದ ಸ್ನೇಹ ಜೀವಿ ಬಳಗದಿಂದ ಒಟ್ಟು ೧೬ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿತ್ತು. ಈ ಪೈಕಿ ಕಲ್ಲಹಳ್ಳಿ ಕ್ಷೇತ್ರದಿಂದ ಕೆ.ವಿ ಧನಂಜಯ, ನಾಗತಿ ಬೆಳಗಲು ಕ್ಷೇತ್ರದಿಂದ ಲಕ್ಷ್ಮಮ್ಮ ಮತ್ತು ಮಂಜುಳ ಹಾಗು ಬಿಆರ್‌ಪಿಯಲ್ಲಿ ಲತಾ ಒಟ್ಟು ೪ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಉಳಿದಂತೆ ೧೦ ಕ್ಷೇತ್ರಗಳಲ್ಲಿ ೨ನೇ ಸ್ಥಾನ ಕಾಯ್ದುಕೊಂಡು ಗಮನೆ ಸೆಳೆದಿದೆ.
   ತಾಲೂಕಿನ ೩೫ ಗ್ರಾ.ಪಂ. ವ್ಯಾಪ್ತಿಯ ಒಟ್ಟು ೧೬೫ ಕ್ಷೇತ್ರಗಳ ೪೧೯ ಸ್ಥಾನಗಳ ಪೈಕಿ ೪೪ ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.  ಉಳಿದಂತೆ ೩೭೫ ಅಭ್ಯರ್ಥಿಗಳು ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ಆಯ್ಕೆಯಾಗಿದ್ದಾರೆ. ಒಟ್ಟು ೧೦೭೦ ಅಭ್ಯರ್ಥಿಗಳು ಕಣದಲ್ಲಿದ್ದರು.  
     ಒಟ್ಟು ೭೫ ಟೇಬಲ್‌ಗಳ ಎಣಿಕೆ ನಡೆದಿದ್ದು, ಒಂದು ಟೇಬಲ್‌ನಲ್ಲಿ ತಲಾ ಇಬ್ಬರು ಎಣಿಕೆಗಾರರಂತೆ ಒಟ್ಟು ೧೫೦ ಎಣಿಕೆಗಾರರು, ೭೫ ಮಂದಿ ಮೇಲ್ವಿಚಾರಕರು ಸೇರಿದಂತೆ ೨೨೫ ಮಂದಿ ಹಾಗು ಉಪವಿಭಾಗಾಧಿಕಾರಿ ಟಿ.ವಿ ಪ್ರಕಾಶ್ ನೋಡಲ್ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು. ತಹಸೀಲ್ದಾರ್ ಜಿ. ಸಂತೋಷ್‌ಕುಮಾರ್ ಸೇರಿದಂತೆ ತಾಲೂಕು ಕಚೇರಿ ಸಿಬ್ಬಂದಿಗಳು ಹಾಗು ಭದ್ರತೆಗಾಗಿ ಸುಮಾರು ೧೨೦ ಮಂದಿ ಪೊಲೀಸ್ ಸಿಬ್ಬಂದಿಗಳು ಸಹ ಕರ್ತವ್ಯದಲ್ಲಿ ಪಾಲ್ಗೊಂಡಿದ್ದರು. ಅಭ್ಯರ್ಥಿಗಳು ಗೆಲುವು ಸಾಧಿಸುತ್ತಿದ್ದಂತೆ ಮತ ಎಣಿಕೆ ಕೇಂದ್ರದ ಮುಂಭಾಗದಲ್ಲಿರುವ ಕನಕಮಂಟಪ ಮೈದಾನದಲ್ಲಿ ಬೆಂಬಲಿಗರು ಸಂಭ್ರಮಿಸಿದರು.


ಭದ್ರಾವತಿ ಯರೇಹಳ್ಳಿ ಗ್ರಾ.ಪಂ. ಕೊರಲಕೊಪ್ಪ ಕ್ಷೇತ್ರ-೨ರಿಂದ ೪ನೇ ಬಾರಿಗೆ ಆಯ್ಕೆಯಾಗಿ ಗಮನ ಸೆಳೆದಿರುವ ಅಭ್ಯರ್ಥಿ ಸಿ.ಆರ್ ಶಿವರಾಮ್.






Tuesday, December 29, 2020

ಗ್ರಾ.ಪಂ. ಚುನಾವಣೆ : ೭೫ ಟೇಬಲ್, ೨೨೫ ಮಂದಿ ಸಿಬ್ಬಂದಿ, ೧೨೦ ಪೊಲೀಸರು

ಭದ್ರಾವತಿ: ತಾಲೂಕಿನ ೩೫ ಗ್ರಾಮ ಪಂಚಾಯಿತಿಗಳ ೩೭೫ ಸ್ಥಾನಗಳಿಗೆ ನಡೆದ ಚುನಾವಣಾ ಫಲಿತಾಂಶ ಇಂದು ಪ್ರಕಟಗೊಳ್ಳಲಿದ್ದು, ೧೦೭೦ ಅಭ್ಯರ್ಥಿಗಳ ಹಣೆ ಬರಹ ಹೊರಬೀಳಲಿದೆ.
    ಹಳೇನಗರದ ಸಂಚಿಯ ಹೊನ್ನಮ್ಮ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಮತ ಎಣಿಕೆಗೆ ಸಕಲ ಸಿದ್ದತೆಗಳನ್ನು ಕೈಗೊಳ್ಳಲಾಗಿದೆ. ಡಿ.೨೨ರಂದು ನಡೆದ ಚುನಾವಣೆಯ ಮತದಾನದಲ್ಲಿ ಒಟ್ಟು ೧,೧೯,೩೫೯ ಮತದಾರರ ಪೈಕಿ ೯೮,೬೧೪ ಮಂದಿ ಮತ ಚಲಾಯಿಸುವ ಮೂಲಕ ಶೇ.೮೨.೬೨ ಮತದಾನ ನಡೆದಿದೆ. ಈ ಪೈಕಿ ೪೯,೪೩೯ ಮಹಿಳೆಯರು, ೪೯,೧೭೫ ಪುರುಷರು ಒಳಗೊಂಡಿದ್ದಾರೆ. 
    ತಾಲೂಕಿನ ನಿಂಬೆಗೊಂದಿ ಗ್ರಾಮ ಪಂಚಾಯಿತಿಯ ಇಂದಿರಾನಗರದ ಮತಗಟ್ಟೆ ನಂ. ೯ರಲ್ಲಿ ಅತಿಹೆಚ್ಚಿನ ಮತದಾನ ನಡೆದಿದೆ. ಒಟ್ಟು ೪೫೯ ಮತದಾರರಲ್ಲಿ ೪೩೭ ಮತದಾರರು ಮತ ಚಲಾಯಿಸಿದ್ದು, ಶೇ. ೯೫.೨೧ ರಷ್ಟು ಮತದಾನ ನಡೆದಿದೆ. ಇದೆ ರೀತಿ ಅರಳಿಬಿಳಚಿ ಗ್ರಾಮ ಪಂಚಾಯಿತಿಯ ಅರಬಿಳಚಿ ಕ್ಯಾಂಪ್-೧ರ ಮತಗಟ್ಟೆ ನಂ.೭೫ಎ ಒಟ್ಟು ೫೧೭ ಮತದಾರರಿದ್ದು, ಈ ಪೈಕಿ ಅತಿ ಕಡಿಮೆ ೩೧೦ ಮತದಾರರು ಮತ ಚಲಾಯಿಸಿದ್ದು, ಶೇ. ೫೯.೯೬ರಷ್ಟು ಮತದಾನ ನಡೆದಿದೆ.
    ತಾಲೂಕಿನ ೩೫ ಗ್ರಾ.ಪಂ. ವ್ಯಾಪ್ತಿಯ ಒಟ್ಟು ೧೬೫ ಕ್ಷೇತ್ರಗಳ ೪೧೯ ಸ್ಥಾನಗಳ ಪೈಕಿ ೪೪ ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದು, ಉಳಿದಂತೆ ೩೭೫ ಸ್ಥಾನಗಳಿಗೆ ಮತದಾನ ನಡೆದಿದೆ. ಒಟ್ಟು ೧೦೭೦ ಮಂದಿ ಕಣದಲ್ಲಿದ್ದು, ಕೂಡ್ಲಿಗೆರೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಅತಿ ಹೆಚ್ಚು ೧೯ ಅಭ್ಯರ್ಥಿಗಳು ಕಣದಲ್ಲಿರುವುದು ಗಮನ ಸೆಳೆದಿದೆ.
       ೭೫ ಟೇಬಲ್‌ಗಳಲ್ಲಿ ಮತ ಎಣಿಕೆ :
   ಈ ಬಾರಿ ೭೫ ಟೇಬಲ್‌ಗಳಲ್ಲಿ ಮತ ಎಣಿಕೆ ನಡೆಯುತ್ತಿದ್ದು, ಟೇಬಲ್‌ಗಳ ಸಂಖ್ಯೆ ಹೆಚ್ಚಳ ಮಾಡಿರುವುದರಿಂದ ಸಂಜೆ ಸುಮಾರು ೬ಕ್ಕೆ ಸಂಪೂರ್ಣ ಫಲಿತಾಂಶ ಹೊರಬೀಳುವ ಸಾಧ್ಯತೆ ಹೆಚ್ಚಾಗಿದೆ. ಒಂದು ಟೇಬಲ್‌ನಲ್ಲಿ ತಲಾ ಇಬ್ಬರು ಎಣಿಕೆಗಾರರಂತೆ ಒಟ್ಟು ೧೫೦ ಎಣಿಕೆಗಾರರು, ೭೫ ಮಂದಿ ಮೇಲ್ವಿಚಾರಕರು ಸೇರಿದಂತೆ ೨೨೫ ಮಂದಿ ಕರ್ತವ್ಯ ನಿರ್ವಹಿಸಲಿದ್ದಾರೆ. ಉಪವಿಭಾಗಾಧಿಕಾರಿ ಟಿ.ವಿ ಪ್ರಕಾಶ್ ನೋಡಲ್ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಲಿದ್ದು, ತಹಸೀಲ್ದಾರ್ ಜಿ. ಸಂತೋಷ್‌ಕುಮಾರ್ ಸೇರಿದಂತೆ ತಾಲೂಕು ಕಚೇರಿ ಸಿಬ್ಬಂದಿಗಳು ಹಾಗು ಭದ್ರತೆಗಾಗಿ ಸುಮಾರು ೧೨೦ ಮಂದಿ ಪೊಲೀಸ್ ಸಿಬ್ಬಂದಿಗಳು ಸಹ ಕರ್ತವ್ಯದಲ್ಲಿ ಪಾಲ್ಗೊಳ್ಳಲಿದ್ದಾರೆ. ಮತ ಎಣಿಕೆ ಕೇಂದ್ರದ ಸುತ್ತಾಮುತ್ತಾ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.




vivo ಸ್ಮಾರ್ಟ್‌ಫೋನ್‌ನಿಂದ ಕಳುಹಿಸಲಾಗಿದೆ

೪೦೦೦ ಜಿ+೩ ಗುಂಪು ಮನೆ ಯೋಜನೆ : ಉಳಿತಾಯ ಖಾತೆ ತೆರೆಯಲು ತಾಂತ್ರಿಕ ಸಮಸ್ಯೆ

ಭದ್ರಾವತಿ, ಡಿ. ೨೯: ನಗರಸಭೆ ವತಿಯಿಂದ ಅನುಷ್ಠಾನಗೊಳ್ಳುತ್ತಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಹಾತ್ವಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಪ್ರಧಾನ ಮಂತ್ರಿ ಆವಾಜ್ ಯೋಜನೆಯಡಿ ೪೦೦೦ ಜಿ+೩ ಗುಂಪು ಮನೆಗಳಿಗೆ ಆಯ್ಕೆಯಾಗಿರುವ ಫಲಾನುಭವಿಗಳು ಮೊದಲನೇ ಕಂತಿನ ಮೊತ್ತ ಜಮಾ ಮಾಡಲು ನಗರಸಭೆ ಕಛೇರಿಯ ಪ್ರತ್ಯೇಕ ಕೌಂಟರ್‌ನಲ್ಲಿ ಉಳಿತಾಯ ಖಾತೆ ತೆರೆಯಲು ತಾಂತ್ರಿಕ ತೊಂದರೆ ಎದುರಾಗಿದೆ.
    ಯೋಜನೆಯಡಿ ಆಯ್ಕೆಯಾದ ಅರ್ಹ ಫಲಾನುಭವಿಗಳಿಗೆ ಡಿ.೨೮ರೊಳಗೆ ಮೊದಲನೇ ಕಂತಿನ ವಂತಿಕೆ ರು.೧೦,೦೦೦ ಜಮಾ ಮಾಡಲು  ನಗರಸಭೆ ಕಛೇರಿಯ ಯೂನಿಯನ್ ಬ್ಯಾಂಕ್ ಪ್ರತ್ಯೇಕ ಕೌಂಟರ್‌ನಲ್ಲಿ ಉಳಿತಾಯ ಖಾತೆ ತೆರೆಯಲು ಈ ಹಿಂದೆ ಆಶ್ರಯ ಸಮಿತಿ ತೀರ್ಮಾನದಂತೆ ಸೂಚಿಸಲಾಗಿತ್ತು. ಪ್ರಸ್ತುತ ತಾಂತ್ರಿಕ ಕಾರಣಗಳಿಂದ ಖಾತೆ ತೆರೆಯಲು ಸಾಧ್ಯವಾಗುತ್ತಿಲ್ಲ. ಈ ಹಿನ್ನಲೆಯಲ್ಲಿ ಈ ಕಾರ್ಯವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದ್ದು, ಮುಂದಿನ ದಿನಾಂಕ ತಿಳಿಸುವುದಾಗಿ ಪೌರಾಯುಕ್ತರು ಮನೋಹರ್ ತಿಳಿಸಿದ್ದಾರೆ.

ಕುವೆಂಪು ಹುಟ್ಟುಹಬ್ಬದ ಅಂಗವಾಗಿ ‘ಬ್ಯಾಂಕ್‌ಗಳಲ್ಲಿ ಕನ್ನಡ ಬಳಕೆ ಹಕ್ಕೊತ್ತಾಯ ಅಭಿಯಾನ’ಕ್ಕೆ ಚಾಲನೆ

ಕನ್ನಡ ಕಾಯಕಪಡೆ ಜಿಲ್ಲಾ ಸದಸ್ಯ ಅಪರಂಜಿ ಶಿವರಾಜ್ ನೇತೃತ್ವದಲ್ಲಿ ಜಾಗೃತಿ ಜಾಥಾ

ಭದ್ರಾವತಿ ಬಿ.ಎಚ್ ರಸ್ತೆ, ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದ ಸಮೀಪದಲ್ಲಿರುವ ಕೆನರಾ ಬ್ಯಾಂಕ್ ಮುಂಭಾಗ ಘೋಷ ವಾಕ್ಯ ಪ್ರದರ್ಶಿಸುವ ಜೊತೆಗೆ ಬ್ಯಾಂಕಿನ ಶಾಖಾ ವ್ಯವಸ್ಥಾಪಕರಿಗೆ ಹಾಗು ಗ್ರಾಹಕರಿಗೆ ಕರಪತ್ರ ವಿತರಿಸಿ ಕನ್ನಡದಲ್ಲಿಯೇ ವ್ಯವಹರಿಸುವಂತೆ ಜಾಗೃತಿ ಮೂಡಿಸಲಾಯಿತು.
ಭದ್ರಾವತಿ, ಡಿ. ೨೯: ಕನ್ನಡ ಕಾಯಕ ವರ್ಷ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಮೊದಲ ಹಂತದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ವಿಶ್ವ ಮಾನವ, ರಾಷ್ಟ್ರಕವಿ ಕುವೆಂಪುರವರ ಜನ್ಮದಿನಾಚರಣೆ ಹಿನ್ನಲೆಯಲ್ಲಿ ಕೈಗೊಂಡಿರುವ 'ಬ್ಯಾಂಕ್‌ಗಳಲ್ಲಿ ಕನ್ನಡ ಬಳಕೆ ಹಕ್ಕೊತ್ತಾಯ ಅಭಿಯಾನ'ಕ್ಕೆ ನಗರದಲ್ಲಿ ಮಂಗಳವಾರ ಚಾಲನೆ ನೀಡಲಾಯಿತು.
   ಬಿ.ಎಚ್ ರಸ್ತೆ, ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದ ಸಮೀಪದಲ್ಲಿರುವ ಕೆನರಾ ಬ್ಯಾಂಕ್ ಮುಂಭಾಗ ಘೋಷ ವಾಕ್ಯ ಪ್ರದರ್ಶಿಸುವ ಜೊತೆಗೆ ಬ್ಯಾಂಕಿನ ಶಾಖಾ ವ್ಯವಸ್ಥಾಪಕರಿಗೆ ಹಾಗು ಗ್ರಾಹಕರಿಗೆ ಕರಪತ್ರ ವಿತರಿಸಿ ಕನ್ನಡದಲ್ಲಿಯೇ ವ್ಯವಹರಿಸುವಂತೆ ಜಾಗೃತಿ ಮೂಡಿಸಲಾಯಿತು.
    ಅಲ್ಲದೆ ಬಿ.ಎಚ್ ರಸ್ತೆಯಲ್ಲಿ ಜಾಥಾ ನಡೆಸುವ ಮೂಲಕ ಚಿತ್ರಮಂದಿರಗಳು, ಪೆಟ್ರೋಲ್ ಬಂಕ್‌ಗಳು, ಹೋಟೆಲ್‌ಗಳು ಸೇರಿದಂತೆ ವಾಣಿಜ್ಯ ಮಳಿಗೆಗಳು, ಬ್ಯಾಂಕುಗಳು ಸೇರಿದಂತೆ ಸರ್ಕಾರಿ ಹಾಗು ಖಾಸಗಿ ಹಣಕಾಸು ಸಂಸ್ಥೆಗಳು, ಸರ್ಕಾರಿ ಹಾಗು ಖಾಸಗಿ ಆಸ್ಪತ್ರೆಗಳು ಸೇರಿದಂತೆ ಎಲ್ಲಾ ಕ್ಲಿನಿಕ್‌ಗಳು, ಎಲ್ಲಾ ಸಂಘ-ಸಂಸ್ಥೆಗಳು ಶುದ್ಧ ಕನ್ನಡ ನಾಮಫಲಕ ಅನಾವರಣಗೊಳಿಸುವಂತೆ ಜಾಗೃತಿ ಮೂಡಿಸಲಾಯಿತು.
    ಕನ್ನಡ ಕಾಯಕ ಪಡೆ ಜಿಲ್ಲಾ ಸದಸ್ಯ, ರಂಗಕರ್ಮಿ, ಕಿರುತೆರೆ ನಟ ಅಪರಂಜಿ ಶಿವರಾಜ್ ಅಭಿಯಾನದ ನೇತೃತ್ವ ವಹಿಸಿದ್ದರು. ಸುನಿತಾ, ಶಿಮಮೂರ್ತಿ, ಕುಂಚ ಕಲಾವಿದ ರಾಜು, ರಾಜಶೇಖರ್, ನಂಜುಂಡಪ್ಪ, ಶಿವಣ್ಣ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ನಗರಸಭೆ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮೇಲ್ದರ್ಜೆಗೇರಿಸಲು ಸಚಿವರಿಗೆ ಮನವಿ

ಭದ್ರಾವತಿ ನಗರಸಭಾ ವ್ಯಾಪ್ತಿಯಲ್ಲಿನ ನೀರು ಸರಬರಾಜು ವ್ಯವಸ್ಥೆಯನ್ನು ಮೇಲ್ದರ್ಜೆಗೇರಿಸುವಂತೆ ಒತ್ತಾಯಿಸಿ ಭಾರತರತ್ನ ಸರ್.ಎಂ ವಿಶ್ವೇಶ್ವರಯ್ಯ ಚಾರಿಟಬಲ್ ಟ್ರಸ್ಟ್ ಹಾಗು ಶ್ರೀ ಡಿ. ದೇವರಾಜ ಅರಸು ಜನಸ್ಪಂದನ ವೇದಿಕೆ, ಸುವರ್ಣ ಮಹಿಳಾ ವೇದಿಕೆ ವತಿಯಿಂದ ನಗರಾಭಿವೃದ್ಧಿ ಖಾತೆ ಸಚಿವ ಭೈರತಿ ಬಸವರಾಜ್‌ಗೆ ಮನವಿ ಸಲ್ಲಿಸಲಾಯಿತು
    ಭದ್ರಾವತಿ, ಡಿ. ೨೯: ಪ್ರಸ್ತುತ ನಗರಸಭಾ ವ್ಯಾಪ್ತಿಯಲ್ಲಿನ ನೀರು ಸರಬರಾಜು ವ್ಯವಸ್ಥೆಯನ್ನು ಮೇಲ್ದರ್ಜೆಗೇರಿಸುವಂತೆ ಒತ್ತಾಯಿಸಿ ಭಾರತರತ್ನ ಸರ್.ಎಂ ವಿಶ್ವೇಶ್ವರಯ್ಯ ಚಾರಿಟಬಲ್ ಟ್ರಸ್ಟ್ ಹಾಗು ಶ್ರೀ ಡಿ. ದೇವರಾಜ ಅರಸು ಜನಸ್ಪಂದನ ವೇದಿಕೆ, ಸುವರ್ಣ ಮಹಿಳಾ ವೇದಿಕೆ ವತಿಯಿಂದ ನಗರಾಭಿವೃದ್ಧಿ ಖಾತೆ ಸಚಿವ ಭೈರತಿ ಬಸವರಾಜ್‌ಗೆ ಮನವಿ ಸಲ್ಲಿಸಲಾಯಿತು.
     ನಗರಸಭೆ ಎಲ್ಲಾ ೩೫ ವಾರ್ಡ್‌ಗಳ ವ್ಯಾಪ್ತಿಯಲ್ಲಿ ಮುಂದಿನ ೫೦ ವರ್ಷಗಳಿಗೆ ಪರಿಶುದ್ಧ ಹಾಗು ಸಮರ್ಪಕವಾಗಿ ಕುಡಿಯುವ ನೀರು ಸರಬರಾಜು ಮಾಡುವ ನಿಟ್ಟಿನಲ್ಲಿ ಹೆಚ್ಚುವರಿ ಕುಡಿಯುವ ನೀರಿನ ಟ್ಯಾಂಕ್‌ಗಳ ನಿರ್ಮಾಣ, ಹಳೇಯ ಟ್ಯಾಂಕ್‌ಗಳನ್ನು ದುರಸ್ತಿಗೊಳಿಸುವುದು, ವಿತರಣಾ ಕೊಳವೆಗಳನ್ನು ಬದಲಿಸುವುದು, ಹಳೇನಗರ ಮತ್ತು ನ್ಯೂಟೌನ್ ಭಾಗದ ತಲಾ ಒಂದೊಂದು ಪಂಪ್‌ಹೌಸ್‌ಗಳಲ್ಲಿ ವಿದೇಶಿ ಜಪಾನ್ ತಂತ್ರಜ್ಞಾನದ ಮೈಕ್ರೋ ಫೈಬರ್ ಫಿಲ್ಟರ್ ಅಳವಡಿಕೆ ಸ್ಕ್ಯಾಡಾ ಸ್ಕೀಂ ವ್ಯವಸ್ಥೆ ಸೇರಿದಂತೆ ಇನ್ನಿತರ ಕಾರ್ಯಗಳನ್ನು ಕೈಗೊಳ್ಳುವುದು.
     ನ್ಯೂಟೌನ್ ಭಾಗದ ಜನ್ನಾಪುರ ಎನ್‌ಟಿಬಿ ಮತ್ತು ಸಂಪಿಗೆ ಲೇಔಟ್, ಬೊಮ್ಮನಕಟ್ಟೆ, ಕಡದಕಟ್ಟೆ, ಸಿದ್ದಾಪುರ ಸೇರಿದಂತೆ ಒಳಚರಂಡಿ ಕಾಮಗಾರಿ ನಡೆಯದಿರುವ ಪ್ರದೇಶಗಳಲ್ಲಿ ತಕ್ಷಣ ಕಾಮಗಾರಿ ಕೈಗೆತ್ತಿಕೊಳ್ಳಲು ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧಿಕಾರಿಗಳಿಗೆ ಸೂಚಿಸುವಂತೆ ಭಾರತರತ್ನ ಸರ್.ಎಂ ವಿಶ್ವೇಶ್ವರಯ್ಯ ಚಾರಿಟಬಲ್ ಟ್ರಸ್ಟ್ ಛೇರ‍್ಮನ್, ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಆರ್. ವೇಣುಗೋಪಾಲ್ ಸಚಿವರಿಗೆ ಸಲ್ಲಿಸಿರುವ ಮನವಿಯಲ್ಲಿ ಕೋರಲಾಗಿದೆ.
    ಸಂಸದ ಬಿ.ವೈ ರಾಘವೇಂದ್ರ, ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಎಸ್ ಜ್ಯೋತಿ ಪ್ರಕಾಶ್, ಪ್ರಮುಖರಾದ ಎಸ್. ದತ್ತಾತ್ರಿ, ಚನ್ನಬಸಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Monday, December 28, 2020

ಬಿಪಿಎಲ್ ಕ್ರಿಕೆಟ್ ಪಂದ್ಯಾವಳಿ : ಪ್ರೈಮ್ ಪ್ಯಾಂಟಮ್ಸ್ ತಂಡಕ್ಕೆ ಮೊದಲನೇ ಬಹುಮಾನ

ಯೂತ್ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ ಶ್ರೀನಿವಾಸ್ ಮತ್ತು ಶಾಸಕ ಬಿ.ಕೆ ಸಂಗಮೇಶ್ವರ್ ಸಹಯೋಗದೊಂದಿಗೆ ದಿ ವಾಲ್ ಸಿಸಿ ಕ್ರಿಕೆಟ್ ಕ್ಲಬ್ ತಂಡದ ಮೈಕಲ್ ಮತ್ತು ಬಾಬುರವರು ನ್ಯೂಟೌನ್ ವಿಐಎಸ್‌ಎಲ್ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಲೆದರ್ ಬಾಲ್ ಕ್ರಿಕೆಟ್ ಭದ್ರಾವತಿ ಪ್ರೀಮಿಯರ್ ಲೀಗ್(ಬಿಪಿಎಲ್) ಸೀಸನ್-೧ರ ಪಂದ್ಯಾವಳಿಯಲ್ಲಿ  ಪ್ರೈಮ್ ಪ್ಯಾಂಟಮ್ಸ್ ತಂಡ ಮೊದಲನೇ ಬಹುಮಾನ ಪಡೆದುಕೊಂಡಿದೆ.
    ಭದ್ರಾವತಿ, ಡಿ. ೨೮: ಯೂತ್ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ ಶ್ರೀನಿವಾಸ್ ಮತ್ತು ಶಾಸಕ ಬಿ.ಕೆ ಸಂಗಮೇಶ್ವರ್ ಸಹಯೋಗದೊಂದಿಗೆ ದಿ ವಾಲ್ ಸಿಸಿ ಕ್ರಿಕೆಟ್ ಕ್ಲಬ್ ತಂಡದ ಮೈಕಲ್ ಮತ್ತು ಬಾಬುರವರು ನ್ಯೂಟೌನ್ ವಿಐಎಸ್‌ಎಲ್ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಲೆದರ್ ಬಾಲ್ ಕ್ರಿಕೆಟ್ ಭದ್ರಾವತಿ ಪ್ರೀಮಿಯರ್ ಲೀಗ್(ಬಿಪಿಎಲ್) ಸೀಸನ್-೧ರ ಪಂದ್ಯಾವಳಿಯಲ್ಲಿ  ಪ್ರೈಮ್ ಪ್ಯಾಂಟಮ್ಸ್ ತಂಡ ಮೊದಲನೇ ಬಹುಮಾನ ಪಡೆದುಕೊಂಡಿದೆ.
    ಪಂದ್ಯಾವಳಿಯಲ್ಲಿ ದಿ ವಾಲ್ ಸಿಸಿ, ವೆಂಕಿ ಇಲೆವೆನ್, ಪ್ರೈಮ್ ಪ್ಯಾಂಟಮ್ಸ್, ರೈಸಿಂಗ್ ಪೋನಿಕ್ಸ್ ಮತ್ತು ಸ್ನೇಹ ಜೀವಿ ಕ್ರಿಕೆಟರ‍್ಸ್ ಒಟ್ಟು ೫ ತಂಡಗಳು ಭಾಗವಹಿಸಿದ್ದವು. ಈ ಪೈಕಿ ಪ್ರೈಮ್ ಪ್ಯಾಂಟಮ್ಸ್ ಮೊದಲನೇ ಬಹುಮಾನದೊಂದಿಗೆ ೩೦,೦೦೦ ರು. ನಗದು ಹಾಗು ಟ್ರೋಫಿ ತನ್ನದಾಗಿಸಿಕೊಂಡಿತು.
ಪಂದ್ಯಾವಳಿಯಲ್ಲಿ ಸ್ನೇಹ ಜೀವಿ ಕ್ರಿಕೆಟರ‍್ಸ್ ತಂಡದ ಅಭ್ಯುದಯ ಉಪಾಧ್ಯಾಯ ಉತ್ತಮ ಆಲ್ ರೌಂಡರ್ ಆಟಗಾರ, ಪ್ರೈಮ್ ಪ್ಯಾಂಟಮ್ಸ್ ತಂಡದ ಅಬು ತಲೀಬ್ ಮತ್ತು ವೆಂಕಿ ಇಲೆವೆನ್ ತಂಡದ ಅದೇಶ್ ಆರ್ ಗೌಡ  ಉತ್ತಮ ಬ್ಯಾಟ್ಸ್‌ಮೆನ್ ಪ್ರಶಸ್ತಿಗೆ ಭಾಜನರಾದರು.
   ಶಾಸಕ ಬಿ.ಕೆ ಸಂಗಮೇಶ್ವರ ವಿಜೇತ ತಂಡಕ್ಕೆ ಬಹುಮಾನ ವಿತರಿಸಿದರು. ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ ಎಲ್ ದೇವರಾಜ್, ನಿವೃತ್ತ ಕ್ರೀಡಾ ತರಬೇತಿ ಅಧಿಕಾರಿ ವೆಂಕಟೇಶ್, ಕೇಸರಿ ಪಡೆ ಅಧ್ಯಕ್ಷ ಗಿರೀಶ್, ಯುವ ಮುಖಂಡ ಬಿ.ಎಸ್ ಗಣೇಶ್, ಆಯೋಜಕರಾದ ಮೈಕಲ್ ಮತ್ತು ಬಾಬು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.



ವಿಐಎಸ್‌ಎಲ್ ನಿವೃತ್ತ ನೌಕರರ ಕಲ್ಯಾಣ ಕೇಂದ್ರಕ್ಕೆ ನೂತನ ಪದಾಧಿಕಾರಿಗಳು

ಅಧ್ಯಕ್ಷರಾಗಿ ಸೂಡಾ ಸದಸ್ಯ, ಬಿಜೆಪಿ ಮುಖಂಡ ಬಿ.ಜೆ ರಾಮಲಿಂಗಯ್ಯ

ಭದ್ರಾವತಿ ನ್ಯೂಟೌನ್ ವಿಐಎಸ್‌ಎಲ್ ನಿವೃತ್ತ ನೌಕರರ ಕಲ್ಯಾಣ ಕೇಂದ್ರಕ್ಕೆ ನೂತನವಾಗಿ ಆಯ್ಕೆಯಾಗಿರುವ ೧೫ ಮಂದಿ ಪದಾಧಿಕಾರಿಗಳು.
     ಭದ್ರಾವತಿ, ಡಿ. ೨೮: ನಗರದ ನ್ಯೂಟೌನ್ ವಿಐಎಸ್‌ಎಲ್ ನಿವೃತ್ತ ನೌಕರರ ಕಲ್ಯಾಣ ಕೇಂದ್ರಕ್ಕೆ ೧೫ ಮಂದಿ ನೂತನ ಪದಾಧಿಕಾರಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
     ಕಲ್ಯಾಣ ಕೇಂದ್ರದ ಸರ್ವ ಸದಸ್ಯರ ಸಭೆಯಲ್ಲಿ ಚುನಾವಣಾಧಿಕಾರಿಯಾದ ಹಿರಿಯ ನ್ಯಾಯವಾದಿ ಕೆ.ಎಂ ಸತೀಶ್ ೧೫ ಮಂದಿ ನೂತನ ಪದಾಧಿಕಾರಿಗಳ ಹೆಸರನ್ನು ಘೋಷಿಸಿದರು. ಅಧ್ಯಕ್ಷರಾಗಿ ಬಿ.ಜಿ ರಾಮಲಿಂಗಯ್ಯ, ಉಪಾಧ್ಯಕ್ಷರಾಗಿ ಎಸ್. ಅಡವೀಶಯ್ಯ, ಪ್ರಧಾನ ಕಾರ್ಯದರ್ಶಿಯಾಗಿ ಬಿ.ಆರ್ ನಾಗರಾಜ್, ಕಾರ್ಯದರ್ಶಿಗಳಾಗಿ ಎಸ್.ಎಚ್ ಹನುಮಂತರಾವ್ ಮತ್ತು ಡಿ. ನಂಜಪ್ಪ ಹಾಗೂ ಖಜಾಂಚಿಯಾಗಿ ಎಲ್. ಬಸವರಾಜಪ್ಪ, ಗೌರವಾಧ್ಯಕ್ಷರಾಗಿ ಜೆ.ಎಸ್ ನಾಗಭೂಷಣ್ ಹಾಗು ಸದಸ್ಯರಾಗಿ ನರಸಿಂಹಯ್ಯ ಎಚ್. ರಾಮಪ್ಪ, ಕೆಂಪಯ್ಯ, ಜಿ. ಶಂಕರ್, ಎಸ್.ಎಸ್ ಭೈರಪ್ಪ, ಗಂಗಾಧರ, ಮಹೇಶ್ವರಪ್ಪ ಮತ್ತು  ಎಸ್. ನರಸಿಂಹಚಾರ್ ಆಯ್ಕೆಯಾಗಿದ್ದಾರೆ.