Sunday, January 10, 2021

ಮೀನು ವಿತರಣೆ ಸ್ಥಳ ಅಭಿವೃದ್ಧಿಗೆ ಒತ್ತಾಯಿಸಿ ಜ.೧೧ರಂದು ಪ್ರತಿಭಟನೆ

ಭದ್ರಾವತಿ, ಜ. ೧೦; ಹಲವು ವರ್ಷಗಳಿಂದ ಮೀನು ವಿತರಣೆ ನಡೆಸುತ್ತಿರುವ ನಗರದ ಬಿ.ಎಚ್ ರಸ್ತೆ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಛೇರಿ ಮುಂಭಾಗದ ಖಾಲಿ ಜಾಗವನ್ನು ಅಭಿವೃದ್ಧಿಪಡಿಸುವಂತೆ ಅಥವಾ ಸ್ಥಳಾಂತರಿಸುವಂತೆ ಒತ್ತಾಯಿಸಿ ಜ. ೧೧ರಂದು ಬೆಳಿಗ್ಗೆ ೧೦ ಗಂಟೆಗೆ ಆಮ್ ಆದ್ಮಿ ಪಾರ್ಟಿ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
    ಮೀನು ವಿತರಣೆ ಸ್ಥಳದಲ್ಲಿ ಸ್ವಚ್ಛತೆ ಇಲ್ಲದೆ ದುರ್ವಾಸನೆ ಬೀರುತ್ತಿದ್ದು, ಅಲ್ಲದೆ ಮೀನಿನ ತ್ಯಾಜ್ಯಗಳಿಂದ ರೋಗರುಚಿನಗಳು ಹರಡುವ ಭೀತಿ ಎದುರಾಗಿದೆ. ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರಿಗೆ, ಪಾದಚಾರಿಗಳಿಗೆ ದುವಾರ್ಸನೆಯಿಂದ ತೊಂದರೆಯಾಗುತ್ತಿದೆ. ಈ ಕುರಿತು ಹಲವಾರು ಬಾರಿ ನಗರಸಭೆ ಆಡಳಿತಕ್ಕೆ ಮನವಿ ಸಲ್ಲಿಸಿ ಒತ್ತಾಯಿಸಲಾಗಿದೆಯಾದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಹಿನ್ನಲೆಯಲ್ಲಿ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗಿದೆ. ವಿವಿಧ ಸಂಘಟನೆಗಳು ಸೇರಿದಂತೆ ಸಾರ್ವಜನಿಕರು ಹೆಚ್ಚಿನ ಸಹಕಾರ ನೀಡುವ ಮೂಲಕ ಸಹಕರಿಸುವಂತೆ ಕೋರಲಾಗಿದೆ.  


ರಾಮ ಸೇನಾ ಕರ್ನಾಟಕ ಸಂಘಟನೆಯಿಂದ ವಿಶಿಷ್ಟವಾಗಿ ಕನ್ನಡ ರಾಜ್ಯೋತ್ಸವ

ಭದ್ರಾವತಿ ನಗರಸಭೆ ವ್ಯಾಪ್ತಿಯ ಶಿವರಾಮನಗರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯನ್ನು ರಾಮ ಸೇನಾ ಕರ್ನಾಟಕ ಸಂಘಟನೆಯ ಜಿಲ್ಲಾಧ್ಯಕ್ಷ ಉಮೇಶ್ ನೇತೃತ್ವದ ತಂಡ ನಗರದ ಯುವ ಪ್ರತಿಭೆ, ಕುಂಚ ಕಲಾವಿದ ನಾಗಪ್ರಸಾದ್‌ರವರ ಸಹಕಾರದೊಂದಿಗೆ ಯಾವುದೇ ಖಾಸಗಿ ಶಾಲೆಗಳಿಗೂ ಕಡಿಮೆ ಇಲ್ಲದಂತೆ ಆಕರ್ಷಕವಾಗಿ ಕಂಗೊಳಿಸುವಂತೆ ರೂಪಿಸಿದೆ.
ಭದ್ರಾವತಿ, ಜ. ೧೦:  ಹಿಂದೂ ಧರ್ಮ ಸಂಸ್ಕೃತಿ ಜೊತೆಗೆ ಕನ್ನಡ ನೆಲ, ಜಲ, ಭಾಷೆ ಉಳಿವಿಗಾಗಿ ನಿರಂತರವಾಗಿ ಹೋರಾಟ ನಡೆಸಿಕೊಂಡು ಬರುತ್ತಿರುವ ರಾಮ ಸೇನಾ ಕರ್ನಾಟಕ ಸಂಘಟನೆ ಈ ಬಾರಿ ಕನ್ನಡ ರಾಜ್ಯೋತ್ಸವ ವಿಭಿನ್ನವಾಗಿ ಆಚರಿಸಿ ಸರ್ಕಾರಿ ಶಾಲೆಯ ವೈಭವ ಮತ್ತಷ್ಟು ಹೆಚ್ಚಿಸುವ ಮೂಲಕ ಗಮನ ಸೆಳೆದಿದೆ.
     ಸರ್ಕಾರಿ ಶಾಲೆ ಎಂದರೆ ಮೂಗು ಮುರಿಯುವ ಮಂದಿ ಹೆಚ್ಚು. ಸರ್ಕಾರಿ ಶಾಲೆ ಅಭಿವೃದ್ಧಿಪಡಿಸುವ ಬದಲು ಖಾಸಗಿ ಶಾಲೆಗಳ ಅಭಿವೃದ್ಧಿಗೆ ಮುಂದಾಗುವವರೇ ಹೆಚ್ಚು. ಸರ್ಕಾರಿ ಉದ್ಯೋಗ ಬೇಕು ಸರ್ಕಾರಿ ಶಾಲೆ ಬೇಡ ಎನ್ನುವ ಜನರ ನಡುವೆ. ಕರ್ನಾಟಕ ರಾಮ್ ಸೇನಾ ವಿಶಿಷ್ಟವಾಗಿ ಇದೀಗ ಗಮನ ಸೆಳೆದಿದೆ.
    ನಗರಸಭೆ ವ್ಯಾಪ್ತಿಯ ಶಿವರಾಮನಗರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯನ್ನು ರಾಮ ಸೇನಾ ಕರ್ನಾಟಕ ಸಂಘಟನೆಯ ಜಿಲ್ಲಾಧ್ಯಕ್ಷ ಉಮೇಶ್ ನೇತೃತ್ವದ ತಂಡ ನಗರದ ಯುವ ಪ್ರತಿಭೆ, ಕುಂಚ ಕಲಾವಿದ ನಾಗಪ್ರಸಾದ್‌ರವರ ಸಹಕಾರದೊಂದಿಗೆ ಯಾವುದೇ ಖಾಸಗಿ ಶಾಲೆಗಳಿಗೂ ಕಡಿಮೆ ಇಲ್ಲದಂತೆ ಆಕರ್ಷಕವಾಗಿ ಕಂಗೊಳಿಸುವಂತೆ ರೂಪಿಸಿದೆ.


   ಭದ್ರಾವತಿ ನಗರಸಭೆ ವ್ಯಾಪ್ತಿಯ ಶಿವರಾಮನಗರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯನ್ನು ನಗರದ ಯುವ ಪ್ರತಿಭೆ, ಕುಂಚ ಕಲಾವಿದ ನಾಗಪ್ರಸಾದ್‌ರವರ ಸಹಕಾರದೊಂದಿಗೆ ಯಾವುದೇ ಖಾಸಗಿ ಶಾಲೆಗಳಿಗೂ ಕಡಿಮೆ ಇಲ್ಲದಂತೆ ಆಕರ್ಷಕವಾಗಿ ಕಂಗೊಳಿಸುವಂತೆ ರೂಪಿಸಿರುವ ರಾಮ ಸೇನಾ ಕರ್ನಾಟಕ ಸಂಘಟನೆಯ ಜಿಲ್ಲಾಧ್ಯಕ್ಷ ಉಮೇಶ್ ನೇತೃತ್ವದ ತಂಡ.
   ಒಂದೆಡೆ ಖಾಸಗಿ ಬಸ್‌ಗಳ ನಡುವೆ ಸರ್ಕಾರಿ ಬಸ್‌ಗಳು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಹೆಣಗಾಡುತ್ತಿವೆ. ಇಂತಹ ಸಂದರ್ಭದಲ್ಲಿ ಸರ್ಕಾರಿ ಬಸ್‌ಗಳ ಕುರಿತು ಜಾಗೃತಿ ಮೂಡಿಸಲು ಶಾಲೆಯ ಕೊಠಡಿಯನ್ನು ಸರ್ಕಾರಿ ಬಸ್ ಮಾದರಿಯಂತೆ ನಾಗಪ್ರಸಾದ್ ತಮ್ಮ ಕೈಚಳಕದಲ್ಲಿ ಅನಾವರಣಗೊಳಿಸಿದ್ದಾರೆ.
     ಇದೆ ರೀತಿ ಪರಿಸರ ಪ್ರಜ್ಞೆ, ಮಹಾನ್ ಸಾಧಕರು ಕುರಿತು ತಿಳಿಸಿಕೊಡುವ ಪ್ರಯತ್ನ ಮಾಡಲಾಗಿದೆ. ಜೊತೆಗೆ ಕನ್ನಡ ಅಕ್ಷರಗಳಿಂದ ಹಾಗು ಆಕರ್ಷಕ ಚಿತ್ತಾರಗಳಿಂದ ಶಾಲೆಯನ್ನು ಮಕ್ಕಳ ಆಕರ್ಷಕ ತಾಣವನ್ನಾಗಿಸಲಾಗಿದೆ.  
    ಪತ್ರಿಕೆಯೊಂದಿಗೆ ಮಾತನಾಡಿದ ಉಮೇಶ್, ಕೊರೋನಾ ಸಂದರ್ಭದಲ್ಲಿ ಈ ಬಾರಿ ಕನ್ನಡ ರಾಜ್ಯೋತ್ಸವ ವಿಭಿನ್ನವಾಗಿ ಅಚರಿಸಬೇಕೆಂಬ ಉದ್ದೇಶ ಹೊಂದಲಾಗಿತ್ತು. ಅದರಂತೆ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಆಕರ್ಷಿಸುವ ನಿಟ್ಟಿನಲ್ಲಿ  ಸಣ್ಣ ಪ್ರಯತ್ನ ಕೈಗೊಳ್ಳಲಾಗಿದೆ. ಈ ರೀತಿಯ ಪ್ರಯತ್ನ ಎಲ್ಲೆಡೆ ನಡೆಯಬೇಕೆಂಬುದು ನಮ್ಮ ಆಶಯವಾಗಿದೆ ಎಂದರು.  

Saturday, January 9, 2021

ಕಾಮಗಾರಿ ವಿಳಂಬ ಧೋರಣೆ ಖಂಡಿಸಿ ಜ.೧೧ರಂದು ಪ್ರತಿಭಟನಾ ಸತ್ಯಾಗ್ರಹ

ಭದ್ರಾವತಿ, ಜ. ೯: ಹಳೇನಗರದ ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿ ಹಿಂಭಾಗದಲ್ಲಿ ನಿರ್ಮಾಣಗೊಳ್ಳುತ್ತಿರುವ ಡಾ. ಬಿ.ಆರ್ ಅಂಬೇಡ್ಕರ್ ಭವನ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿರುವುದನ್ನು ಖಂಡಿಸಿ ಹಾಗು ಬಗರ್ ಹುಕುಂ ರೈತರ ಮತ್ತು ನಿವೇಶನ ರಹಿತ ಬಡವರ ಸಮಸ್ಯೆಗಳನ್ನು ಬಗೆಹರಿಸುವಂತೆ ಆಗ್ರಹಿಸಿ ಮಾನವ ಹಕ್ಕುಗಳ ಹೋರಟ ಸಮಿತಿ ವತಿಯಿಂದ ಜ.೧೧ರಂದು ಬೆಳಿಗ್ಗೆ ೧೧ ಗಂಟೆಗೆ ತಾಲೂಕು ಕಛೇರಿ ಮುಂಭಾಗ ಪ್ರತಿಭಟನಾ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ.
   ೨೦೧೭ರಲ್ಲಿ ಆರಂಭಗೊಂಡಿರುವ ಅಂಬೇಡ್ಕರ್ ಭವನ ಕಾಮಗಾರಿ ಇಂದಿಗೂ ಮುಕ್ತಾಯಗೊಂಡಿಲ್ಲ. ತಕ್ಷಣ ಸರ್ಕಾರ ೫.೫೦ ಕೋ.ರು. ಹಣ ಬಿಡುಗಡೆಗೊಳಿಸಿ ಕಾಮಗಾರಿಯನ್ನು ಶೀಘ್ರವಾಗಿ ಮುಕ್ತಾಯಗೊಳಿಸುವಂತೆ ಹಾಗು ತಾಲೂಕಿನಲ್ಲಿ ಬಗರ್ ಹುಕುಂ ರೈತರು, ನಿವೇಶನ ರಹಿತ ಬಡವರು ಸಾಕಷ್ಟು ಸಂಕಷ್ಟಕ್ಕೆ ಒಳಗಾಗಿದ್ದು, ಈ ಸಂಬಂಧ ಹಲವಾರು ಬಾರಿ ಹೋರಾಟ ನಡೆಸಿ ಮನವಿ ಸಹ ಸಲ್ಲಿಸಲಾಗಿದೆ. ಆದರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ಈ ಹಿನ್ನಲೆಯಲ್ಲಿ ಪ್ರತಿಭಟನಾ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದ್ದು, ವಿವಿಧ ಸಂಘ-ಸಂಸ್ಥೆಗಳು, ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಸಮಿತಿ ಅಧ್ಯಕ್ಷ ಬಿ.ಎನ್ ರಾಜು ಕೋರಿದ್ದಾರೆ.


ಜಯಕರ್ನಾಟಕ ತಾಲೂಕು ಅಧ್ಯಕ್ಷರಾಗಿ ಆರ್. ಅರುಣ್

ಭದ್ರಾವತಿ ಮಿಲ್ಟ್ರಿಕ್ಯಾಂಪ್‌ನಲ್ಲಿರುವ ಲೋಕೋಪಯೋಗಿ ಇಲಾಖೆ ಪ್ರವಾಸಿ ಮಂದಿರದಲ್ಲಿ ಜಯಕರ್ನಾಟಕ ಸಂಘಟನೆ ಪದಾಧಿಕಾರಿಗಳ ಸಭೆ ನಡೆಯಿತು.
ಭದ್ರಾವತಿ, ಜ. ೯: ಜಯಕರ್ನಾಟಕ ತಾಲೂಕು ಶಾಖೆ ಅಧ್ಯಕ್ಷರಾಗಿ ಕಾಗದನಗರದ ನಿವಾಸಿ, ಕಾಂಗ್ರೆಸ್ ಮುಖಂಡ ಆರ್. ಅರುಣ್ ನೇಮಕಗೊಂಡಿದ್ದಾರೆ.
    ನಗರದ ಮಿಲ್ಟ್ರಿಕ್ಯಾಂಪ್‌ನಲ್ಲಿರುವ ಲೋಕೋಪಯೋಗಿ ಇಲಾಖೆ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ನೂತನ ಪದಾಧಿಕಾರಿಗಳು ಆಯ್ಕೆಯಾಗಿದ್ದು, ಗೌರವಾಧ್ಯಕ್ಷರಾಗಿ ಪಿ. ಶರವಣ, ಕಾರ್ಯಾಧ್ಯಕ್ಷರಾಗಿ ವೈ. ಚೇತನ್, ಉಪಾಧ್ಯಕ್ಷರಾಗಿ ಜೀವನ್, ದಿವ್ಯರಾಜ್, ಪ್ರಧಾನ ಕಾರ್ಯದರ್ಶಿಯಾಗಿ ವಿನಯ್ ಮತ್ತು ವಿಧಾನಪರಿಷತ್ ಸದಸ್ಯ ಸಿ.ಎಂ ಇಬ್ರಾಹಿಂ ಸಹೋದರ ಸಿ.ಎಂ ಖಾದರ್ ನೇಮಕಗೊಂಡಿದ್ದಾರೆ.




ಜ.೧೭ರಂದು ಕ್ಷಿಪ್ರ ಕಾರ್ಯ ಪಡೆ ಘಟಕ ಉದ್ಘಾಟನೆ : ನಗರಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ

ಖುದ್ದು ಸ್ಥಳ ಪರಿಶೀಲನೆ ನಡೆಸಿದ ಸಂಸದ ಬಿ.ವೈ ರಾಘವೇಂದ್ರ

ಸಂಸದ ಬಿ.ವೈ ರಾಘವೇಂದ್ರ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಶನಿವಾರ ಬೆಳಿಗ್ಗೆ ಭದ್ರಾವತಿಯಲ್ಲಿ ಕಾರ್ಯಾರಂಭಗೊಳ್ಳಲಿರುವ ಆರ್‌ಎಎಫ್ ಘಟಕದ ಸ್ಥಳ ಪರಿಶೀಲನೆ ನಡೆಸಿತು.
ಭದ್ರಾವತಿ, ಜ. ೯: ರಾಜ್ಯದಲ್ಲಿ ಶಿವಮೊಗ್ಗ ಜಿಲ್ಲೆಗೆ ಮಂಜೂರಾತಿಯಾಗಿರುವ ಕೇಂದ್ರ ಮೀಸಲು ಪೊಲೀಸ್ ಪಡೆ ವಲಯದ ಕ್ಷಿಪ್ರ ಕಾರ್ಯ ಪಡೆ (ರ‍್ಯಾಪಿಡ್ ಆಕ್ಷನ್ ಪೋರ್ಸ್-ಆರ್‌ಎಎಫ್) ಘಟಕ ನಗರದ ಮಿಲ್ಟ್ರಿಕ್ಯಾಂಪ್ ಹೊಸ ಬುಳ್ಳಾಪುರದಲ್ಲಿ  ಕಾರ್ಯಾರಂಭಗೊಳ್ಳುತ್ತಿದ್ದು, ಜ.೧೭ರಂದು ಘಟಕದ ಶಿಲಾನ್ಯಾಸ ನೆರವೇರಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ನಗರಕ್ಕೆ ಆಗಮಿಸುವುದು ಬಹುತೇಕ ಖಚಿತವಾಗಿರುವ ಹಿನ್ನಲೆಯಲ್ಲಿ ಶನಿವಾರ ಬೆಳಿಗ್ಗೆ ಸಂಸದ ಬಿ.ವೈ ರಾಘವೇಂದ್ರ ಶಿಲಾನ್ಯಾಸ ಸ್ಥಳಕ್ಕೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ರಾಜ್ಯ ಗೃಹ ಸಚಿವ ಬಸವರಾಜ ಬೊಮ್ಮಾಯಿಯವರು ಅಮಿತ್ ಶಾರವರ ೨ ದಿನಗಳ ಕಾರ್ಯಕ್ರಮ ಪಟ್ಟಿ ಬೆಂಗಳೂರಿನಲ್ಲಿ ಶುಕ್ರವಾರ ಪ್ರಕಟಿಸಿದ ಹಿನ್ನಲೆಯಲ್ಲಿ ಸಂಸದ ಬಿ.ವೈ ರಾಘವೇಂದ್ರ ಖುದ್ದಾಗಿ ಹೆಲಿಪ್ಯಾಡ್ ಹಾಗು ಸಮಾರಂಭ ನಡೆಯಲಿರುವ ಸ್ಥಳಗಳನ್ನು ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕೆ.ಬಿ ಶಿವಕುಮಾರ್, ಜಿಲ್ಲಾ ರಕ್ಷಣಾಧಿಕಾರಿ ಕೆ.ಎಂ ಶಾಂತರಾಜು, ಪೊಲೀಸ್ ಉಪಾಧೀಕ್ಷಕ ಕೃಷ್ಣಮೂರ್ತಿ, ನಗರಸಭೆ ಪೌರಾಯುಕ್ತ ಮನೋಹರ್, ಶಿವಮೊಗ್ಗ ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಎಸ್ ಜ್ಯೋತಿ ಪ್ರಕಾಶ್, ಕರ್ನಾಟಕ ರಾಜ್ಯ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಿರ್ದೇಶಕ ಮಂಗೋಟೆ ರುದ್ರೇಶ್, ಮುಖಂಡ ಎಸ್. ದತ್ತಾತ್ರಿ, ಆರ್‌ಎಎಫ್ ಸ್ಥಳೀಯ ಅಧಿಕಾರಿಗಳು, ಇಂಜಿನಿಯರ್‌ಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.  
ಈ ಹಿಂದೆ ಜ.೩ರಂದು ಕೇಂದ್ರ ಮೀಸಲು ಪೊಲೀಸ್ ಪಡೆ ಮಹಾನಿರ್ದೇಶಕರು, ರಾಜ್ಯ ಪೊಲೀಸ್ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಮಹಾನಿರ್ದೇಶಕರು, ಗುಪ್ತದಳ ಇಲಾಖೆ ಮಹಾನಿರ್ದೇಶಕರು, ದಾವಣಗೆರೆ ಪೂರ್ವವಲಯ ಪೊಲೀಸ್ ಮಹಾನಿರ್ದೇಶಕರನ್ನೊಳಗೊಂಡ ತಂಡದೊಂದಿಗೆ ಸಹ ಭೇಟಿ ಸಹ ಪರಿಶೀಲನೆ ನಡೆಸಿದ್ದರು.



Friday, January 8, 2021

ಸರ್ಕಾರ ತಕ್ಷಣ ಪಡಿತರ ವಿತರಕರ ಬಾಕಿ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಲಿ : ಸಿದ್ದಲಿಂಗಯ್ಯ

ಭದ್ರಾವತಿ ಬಿ.ಎಚ್ ರಸ್ತೆ ನಂದಿನಿ ಹೋಟೆಲ್ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘದ ವತಿಯಿಂದ ನೂತನ ಪದಾಧಿಕಾರಿಗಳಿಗೆ ಹಾಗು ಇತ್ತೀಚೆಗೆ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಿ ಆಯ್ಕೆಯಾಗಿರುವ ಸದಸ್ಯರುಗಳಿಗೆ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.
    ಭದ್ರಾವತಿ, ಜ. ೮: ನ್ಯಾಯಬೆಲೆ ಅಂಗಡಿ ವಿತರಕರಿಗೆ ನೀಡಬೇಕಾಗಿರುವ ಕಮಿಷನ್ ಬಾಕಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಸರ್ಕಾರ ತಕ್ಷಣ ಈಡೇರಿಸುವ ಮೂಲಕ ಹಿತ ಕಾಪಾಡಬೇಕೆಂದು ಕರ್ನಾಟಕ ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘದ ರಾಜ್ಯ ಸಹ ಕಾರ್ಯದರ್ಶಿ ಸಿದ್ದಲಿಂಗಯ್ಯ ಮನವಿ ಮಾಡಿದರು.
     ಅವರು ನಗರದ ಬಿ.ಎಚ್ ರಸ್ತೆ ನಂದಿನಿ ಹೋಟೆಲ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ನೂತನ ಪದಾಧಿಕಾರಿಗಳಿಗೆ ಹಾಗು ಇತ್ತೀಚೆಗೆ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಿ ಆಯ್ಕೆಯಾಗಿರುವ ಸದಸ್ಯರುಗಳಿಗೆ ಸನ್ಮಾನ ಸಮಾರಂಭ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
   ಕೋವಿಡ್-೧೯ರ ನಡುವೆಯೂ ಪಡಿತರ ವಿತರಕರು ತಮ್ಮ ಜೀವದ ಹಂಗನ್ನು ತೊರೆದು ಪಡಿತರ ವಿತರಣೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೂ ಸಹ ಪಡಿತರ ವಿತರಕರ ಸಂಕಷ್ಟಗಳಿಗೆ ಕೇಂದ್ರ ಹಾಗು ರಾಜ್ಯ ಸರ್ಕಾರಗಳು ಪೂರಕವಾಗಿ ಸ್ಪಂದಿಸದಿರುವುದು ವಿಷಾದನೀಯ ಸಂಗತಿಯಾಗಿದೆ ಎಂದರು.
   ಕೇಂದ್ರ ಸರ್ಕಾರದಿಂದ ೫ ತಿಂಗಳು ಹಾಗು ರಾಜ್ಯ ಸರ್ಕಾರದಿಂದ ೩ ತಿಂಗಳು ಕಮಿಷನ್ ಬಾಕಿ ಬರಬೇಕಾಗಿದೆ. ಅಲ್ಲದೆ ಕೋವಿಡ್ ಸಂದರ್ಭದಲ್ಲಿ ಮೃತಪಟ್ಟಿರುವ ವಿತಕರಿಗೆ ಯಾವುದೇ ಪರಿಹಾರ ಸಹ ಲಭಿಸಿರುವುದಿಲ್ಲ. ಈ ಕುರಿತು ಜ.೫ರಂದು ಬೆಂಗಳೂರಿನಲ್ಲಿ ನಡೆದ ಸಂಘದ ಕ್ಯಾಲೆಂಡರ್ ಹಾಗು ಸಮ್ಮೇಳನದ ಸಂಚಿಕೆ ಬಿಡುಗಡೆ ಸಮಾರಂಭದಲ್ಲಿ ಸಚಿವ ಕೆ. ಗೋಪಾಲಯ್ಯನವರ ಗಮನಕ್ಕೂ ಸಹ ತರಲಾಗಿದೆ ಎಂದರು.
 ಪ್ರಸ್ತುತ ಪಡಿತರ ಇಲಾಖೆಯ ಸಹ ನಿರ್ದೇಶಕರು ಜನವರಿ ತಿಂಗಳಿನಿಂದ ಕೆ.ವೈ.ಸಿ ಕಡ್ಡಾಯಗೊಳಿಸಿದ್ದಾರೆ. ಆದರೆ ಸರ್ವರ್ ಸಮಸ್ಯೆ ಇರುವುದರಿಂದ ಪಡಿತರ ವಿತರಣೆ ಮಾಡಲು ಸಾಧ್ಯವಾಗುತ್ತಿಲ್ಲ. ಅಲ್ಲದೆ ಈ ಹಿಂದಿನ ಕೆ.ವೈ.ಸಿ ಬಾಕಿ ಸಹ ಬಂದಿರುವುದಿಲ್ಲ. ಇದರಿಂದಾಗಿ ಪಡಿತರ ವಿತರಕರು ಸಂಕಷ್ಟ ಎದುರಿಸುವಂತಾಗಿದೆ. ಈ ಹಿನ್ನಲೆಯಲ್ಲಿ ಪಡಿತರ ವಿತರಕರಿಗೆ ಬರಬೇಕಾಗಿರುವ ಬಾಕಿ ಬಿಡುಗಡೆಯಾದ ನಂತರ ಕೆ.ವೈ.ಸಿ ಪ್ರಾರಂಭಿಸಬೇಕು. ಸರ್ಕಾರ ಮುಕ್ತ ಮಾರುಕಟ್ಟೆಯ ದಿನಬಳಕೆ ವಸ್ತುಗಳನ್ನು ನ್ಯಾಯಬೆಲೆ ಅಂಗಡಿಗಳಲ್ಲಿ ಮಾರಾಟ ಮಾಡಲು ಅವಕಾಶ ಕಲ್ಪಿಸಿಕೊಟ್ಟಿದೆ. ಈ ಹಿನ್ನಲೆಯಲ್ಲಿ ಸೋಪು, ಉಪ್ಪು, ಸಕ್ಕರೆ, ರವೆ, ಮೈದಾಹಿಟ್ಟು, ಅಗರಬತ್ತಿ ಇತ್ಯಾದಿ ವಸ್ತುಗಳನ್ನು ಮಾರಾಟ ಮಾಡಲು ತೀರ್ಮಾನಿಸಲಾಗಿದೆ. ಈ ಹಿನ್ನಲೆಯಲ್ಲಿ ಪಡಿತರದಾರರು ಸಹ ಸಹಕರಿಸುವಂತೆ ಮನವಿ ಮಾಡಿದರು.  
     ಸಮಾರಂಭದಲ್ಲಿ ಜಿಲ್ಲಾಧ್ಯಕ್ಷರಾದ ಪರಮೇಶ್ವರಪ್ಪ ಹಾಗೂ ಕೆ. ಈಶ್ವರಚಾರಿ ಹಾಗೂ ೪ ಬಾರಿ ಗ್ರಾಮ ಪಂಚಾಯತಿ ಸದಸ್ಯರಾಗಿ ಆಯ್ಕೆಯಾಗಿರುವ ಸಿ.ಆರ್ ಶಿವರಾಮ್ ಹಾಗು ಭದ್ರಾವತಿ ನಗರ ಘಟಕದ ನೂತನ ಅಧ್ಯಕ್ಷ ಎಸ್.ಆರ್ ನಾಗರಾಜ್ ಹಾಗೂ ಶಿವಮೊಗ್ಗ ನಗರ ಅಧ್ಯಕ್ಷ ನಾಗರಾಜ್‌ರವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.   ವೈ.ವಿ. ಮೋಹನ್‌ಕುಮಾರ್ ಸ್ವಾಗತಿಸಿದರು. ಎಸ್. ವಾಗೀಶ್ ನಿರೂಪಿಸಿದರು.

ಜೈನ ಮುನಿಗಳ ಆಗಮನಕ್ಕೆ ಸಂಭ್ರಮ : ಭಕ್ತರಿಗೆ ಪ್ರಸಾದ ವಿತರಣೆ

ಭದ್ರಾವತಿ, ಜ. ೮: ಶ್ರೀ ರುಷಿಪಾಲ್ ವಿಜಯಜೀ ಹಾಗೂ ಶ್ರೀ ಬಿಮಾ ರತನವಿಜಯಜೀಯವರು ಜೈನ ಧರ್ಮದ ದೀಕ್ಷೆ ಪಡೆದು ೫ ವರ್ಷಗಳ ನಂತರ ನಗರಕ್ಕೆ ಆಗಮಿಸಿರುವ ಸಂಭ್ರಮದ ಹಿನ್ನಲೆಯಲ್ಲಿ ಹಾಗು ಜೈನರ ೨೩ನೇ ತೀರ್ಥಂಕರರಾದ ಪ್ರಭು ಪಾರ್ಶ್ವನಾಥ ಭಗವಾನರ ಜನ್ಮದಿನ ಮತ್ತು ದೀಕ್ಷಾ ಮಹೋತ್ಸವದ ಅಂಗವಾಗಿ ಜೈನ ಸಮಾಜದ ವತಿಯಿಂದ ಭಕ್ತಾಧಿಗಳಿಗೆ ಪ್ರಸಾದ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
     ನಗರದ ಚನ್ನಗಿರಿ ರಸ್ತೆಯ ಸಪ್ನ ಪಾನ್ ಬ್ರೋಕರ‍್ಸ್ ಹಾಗು ಶ್ರೀ ಭೇರು ಕ್ಲಾತ್ ಸೆಂಟರ್ ಮಾಲೀಕರಾದ ದಿನೇಶ್‌ಕುಮಾರ್ ಜೈನ್ ಹಾಗು ರಾಜುಲ್ ಜೈನ್ ದಂಪತಿ ಪುತ್ರರಾದ ರಿಷಬ್‌ಕುಮಾರ್ ಜೈನ್ ತಮ್ಮ ೨೫ನೇ ವಯಸ್ಸಿನಲ್ಲಿ ಮತ್ತು ಜಿನೇಶ್ ಕುಮಾರ್ ಜೈನ್ ೨೩ನೇ ವಯಸ್ಸಿನಲ್ಲಿ ಆಚಾರ್ಯವರ್ಯರಾದ ಶ್ರೀ ಹೀರಚಂದ್ರಸುರೀಶ್ವರಜಿ ಮಹಾರಾಜ್‌ರವರ ಧಾರ್ಮಿಕ ಪ್ರವಚನಗಳಿಂದ ಪ್ರಭಾವಿತರಾಗಿ ೫ ವರ್ಷಗಳ ಹಿಂದೆ ಜೈನ ಧರ್ಮದ ದೀಕ್ಷೆ ಪಡೆದು ಕೊಂಡಿದ್ದರು. ನಂತರ ದೇಶಾದ್ಯಂತ ಪಾದಯಾತ್ರೆ ಮೂಲಕ ಸಂಚರಿಸಿ ಧರ್ಮ ಜಾಗೃತಿ ಕಾರ್ಯದಲ್ಲಿ ತೊಡಗಿಸಿಕೊಂಡು ಕಳೆದ ೫ ದಿನಗಳ ಹಿಂದೆ ನಗರಕ್ಕೆ ಆಗಮಿಸಿದ್ದು, ಭಕ್ತರಿಗೆ ಸಿಹಿ ವಿತರಿಸುವ ಮೂಲಕ ಜೈನ ಸಮಾಜ ಈ ಸಂಭ್ರಮವನ್ನು ವಿಶೇಷವಾಗಿ ಹಂಚಿಕೊಳ್ಳುತ್ತಿದೆ.