Sunday, January 17, 2021

ಗೃಹ ಸಚಿವ ಅಮಿತ್ ಷಾ ವಿರುದ್ಧ ಎಎಪಿ ಆಕ್ರೋಶ :

ಕಾಂಗ್ರೆಸ್ ಮುಖಂಡರ ಬಂಧನ, ಮನವಿ ಪತ್ರದೊಂದಿಗೆ ಹಿಂದಿರುಗಿದ ಸಂಘಟನೆಗಳು

ಭದ್ರಾವತಿಯಲ್ಲಿ ಶನಿವಾರ ನಡೆದ ಆರ್‌ಎಎಫ್ ಘಟಕದ ಶಿಲಾನ್ಯಾಸ ಕಾರ್ಯಕ್ರಮದ ವೇದಿಕೆಯಲ್ಲಿ ಶಾಸಕರಿಗೆ ಅವಕಾಶ ಕಲ್ಪಿಸಿಕೊಡಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಪಕ್ಷದ ಮುಖಂಡರನ್ನು ಕಾಗದ ನಗರ ಠಾಣೆ ಪೊಲೀಸರು ಬಂಧಿಸಿರುವುದು.
ಭದ್ರಾವತಿ, ಜ. ೧೭: ಆರ್‌ಎಎಫ್ ಘಟಕ ಶಿಲಾನ್ಯಾಸ ನೆರವೇರಿಸಲು ಶನಿವಾರ ನಗರಕ್ಕೆ ಆಗಮಿಸಿದ್ದ ಕೇಂದ್ರ ಗೃಹ ಸಚಿವ ಅಮಿತ್ ಷಾ ವಿರುದ್ಧ ಆಮ್ ಆದ್ಮಿ ಪಾರ್ಟಿ ಆಕ್ರೋಶ ವ್ಯಕ್ತಪಡಿಸಿದೆ.
    ಪಕ್ಷದ ಜಿಲ್ಲಾಧ್ಯಕ್ಷ ಎಚ್. ರವಿಕುಮಾರ್ ಮಾತನಾಡಿ, ಕೇಂದ್ರದ ಪ್ರಭಾವಿ ನಾಯಕರು ಹಾಗು ಪ್ರಮುಖ ಸಚಿವರುಗಳಲ್ಲಿ ಒಬ್ಬರಾಗಿರುವ ಗೃಹ ಸಚಿವ ಅಮಿತ್ ಷಾ ಅವರಿಂದ ಕ್ಷೇತ್ರದ ಜನರು ಹಲವು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದರು. ಆದರೆ ಎಲ್ಲಾ ನಿರೀಕ್ಷೆಗಳು ಹುಸಿಯಾಗಿವೆ. ವಿಐಎಸ್‌ಎಲ್ ಕಾರ್ಖಾನೆ ಅಭಿವೃದ್ಧಿ ಸೇರಿದಂತೆ ಕ್ಷೇತ್ರದ ಯಾವುದೇ ಅಭಿವೃದ್ಧಿ ವಿಚಾರಗಳ ಬಗ್ಗೆ ಪ್ರಸ್ತಾಪಿಸದೆ ಇರುವುದು ದುರಾದೃಷ್ಟಕರ ಸಂಗತಿಯಾಗಿದೆ. ಅಲ್ಲದೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಅಧ್ಯಕ್ಷತೆವಹಿಸಿದ್ದ ಕ್ಷೇತ್ರದ ಶಾಸಕ ಬಿ.ಕೆ ಸಂಗಮೇಶ್ವರ್‌ಗೆ ವೇದಿಕೆಯಲ್ಲಿ ಮಾತನಾಡಲು ಅವಕಾಶ ನೀಡದಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
        ಕಾಂಗ್ರೆಸ್ ಮುಖಂಡರ ಬಂಧನ:
   ಈ ನಡುವೆ ಸಮಾರಂಭಕ್ಕೂ ಮೊದಲು ಶಾಸಕ ಬಿ.ಕೆ ಸಂಗಮೇಶ್ವರ್‌ಗೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಮುಖಂಡರನ್ನು ಕಾಗದನಗರ ಠಾಣೆ ಪೊಲೀಸರು ಬಂಧಿಸಿ ಬಿಡುಗಡೆಗೊಳಿಸಿರುವ ವಿಚಾರ ಬಹಿರಂಗಗೊಂಡಿದೆ.
ಪಕ್ಷದ ನಗರ ಘಟಕದ ಅಧ್ಯಕ್ಷ ಟಿ. ಚಂದ್ರೇಗೌಡ, ಮಹಿಳಾ ಘಟಕದ ಅಧ್ಯಕ್ಷೆ ಮಂಜುಳ ರಾಮಚಂದ್ರ, ಮುಖಂಡರಾದ ಎಂ. ಶಿವಕುಮಾರ್, ರಾಘವೇಂದ್ರ ಸರಾಟೆ, ರೂಪನಾರಾಯಣರವರನ್ನು ಬಂಧಿಸಿ ಬಿಡುಗಡೆಗೊಳಿಸಲಾಗಿದೆ.
     ಮನವಿ ಪತ್ರದೊಂದಿಗೆ ಹಿಂದಿರುಗಿದ ವಿವಿಧ ಸಂಘಟನೆ :
ಎಂಪಿಎಂ, ವಿಐಎಸ್‌ಎಲ್ ಕಾರ್ಖಾನೆಗಳ ಅಭಿವೃದ್ಧಿ ವಿಚಾರ,  ಸಮುದಾಯಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಹಲವು ಬೇಡಿಕೆಗಳನ್ನು ಒಳಗೊಂಡ ಮನವಿ ಪತ್ರಗಳನ್ನು ಕೇಂದ್ರ ಗೃಹ ಸಚಿವ ಅಮಿತ್ ಷಾ, ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಹಾಗು ಉಪಮುಖ್ಯಮಂತ್ರಿಗಳಾದ ಡಾ. ಅಶ್ವತ್ಥ್ ನಾರಾಯಣ, ಗೋವಿಂದ ಕಾರಜೋಳ, ಗೃಹ ಸಚಿವ ಬಸವರಾಜ ಬೊಮ್ಮಾಯಿ ಸೇರಿದಂತೆ ಇನ್ನಿತರರಿಗೆ ಸಲ್ಲಿಸಲು ವಿವಿಧ ಸಂಘಟನೆಗಳು ಸಮಾರಂಭದ ವೇದಿಕೆ ಬಳಿ ಎದುರು ನೋಡುತ್ತಿದ್ದವು. ಆದರೆ ಮನವಿ ಸಲ್ಲಿಸಲು ಅವಕಾಶ ಕಲ್ಪಿಸಿಕೊಡಲಿಲ್ಲ.

ಅಂತರಾಷ್ಟ್ರೀಯ ಯೋಗ ಪಟು ಡಿ. ನಾಗರಾಜ್‌ಗೆ ಚಿನ್ನದ ಪದಕ

ಅಂತರಾಷ್ಟ್ರೀಯ ಯೋಗ ಪಟು ಡಿ. ನಾಗರಾಜ್
ಭದ್ರಾವತಿ, ಜ. ೧೭: ಅಂತರಾಷ್ಟ್ರೀಯ ಯೋಗ ಪಟು, ನಗರದ ವಿವೇಕಾನಂದ ಯೋಗ ಟ್ರಸ್ಟ್‌ನ ಡಿ. ನಾಗರಾಜ್ ಆನ್‌ಲೈನ್ ಇಂಟರ್‌ನ್ಯಾಷನಲ್ ಯೂನಿಕ್ ಯೋಗ ಕಂಟೆಸ್ಟ್ ಪಂದ್ಯಾವಳಿಯಲ್ಲಿ ಭಾಗವಹಿಸಿ ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದಾರೆ.
     ಪಶ್ಚಿಮ ಬಂಗಾಳ ಕೊಲ್ಕತಾದ ಯೋಗ ಎರ ವತಿಯಿಂದ ಸ್ವಾತಿ ಯೋಗ ಅಂಡ್ ಫಿಟ್ ಪಾಯಿಂಟ್ ಮತ್ತು ಯೋಗ ಆಬ್ಜೇಕ್ಟಿವ್ ಗ್ವೈಡ್ಲೇನ್ಸ್ ಅಸೋಸಿಯೇಷನ್ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ಪಂದ್ಯಾವಳಿಯಲ್ಲಿ ೪೦ ವರ್ಷ ಮೇಲ್ಪಟ್ಟ ವಯೋಮಾನದವರ ವಿಭಾಗದಲ್ಲಿ ಚಿನ್ನದ ಪದಕ ಪಡೆದುಕೊಂಡಿಕೊಂಡಿದ್ದು, ಪಂದ್ಯಾವಳಿಯಲ್ಲಿ ಇರಾನ್, ಥೈಲಾಂಡ್, ಶ್ರೀಲಂಕಾ, ಸಿಂಗಾಪುರ, ಮಲೇಷಿಯಾ, ವಿಯೆಟ್ನಾಮ್ ಸೇರಿದಂತೆ ವಿವಿಧ ದೇಶಗಳ ಸುಮಾರು ೬೩೦ಕ್ಕೂ ಹೆಚ್ಚು ಯೋಗ ಪಟುಗಳು ಭಾಗವಹಿಸಿದ್ದರು.
     ಡಿ. ನಾಗರಾಜ್‌ರವರು ಸುಮಾರು ೩೫ ವರ್ಷಗಳಿಂದ ರಾಷ್ಟ್ರೀಯ, ಅಂತರಾಷ್ಟ್ರೀಯ ಮತ್ತು ರಾಜ್ಯಮಟ್ಟದ ವಿವಿಧ ಯೋಗ ಸ್ಪರ್ಧೆಗಳಲ್ಲಿ ಭಾಗವಹಿಸಿ ಸುಮಾರು ೩೦೦ಕ್ಕೂ ಹೆಚ್ಚು ಪದಕಗಳನ್ನು ಪಡೆದುಕೊಂಡಿದ್ದು, ಇವರನ್ನು ಕರ್ನಾಟಕ ಯೋಗ ಸಂಸ್ಥೆ ಅಧ್ಯಕ್ಷ ಡಾ. ಆರ್. ರಾಮಮೂರ್ತಿ, ಪ್ರಧಾನ ಕಾರ್ಯದರ್ಶಿ ಡಿ. ಪುಟ್ಟೇಗೌಡ ಸೇರಿದಂತೆ ಇನ್ನಿತರರು ಅಭಿನಂದಿಸಿದ್ದಾರೆ.

೧೫ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷೆ ಡಾ. ಎಸ್.ಎಸ್ ವಿಜಯದೇವಿಗೆ ಕರಾವೇ ಅಭಿನಂದನೆ

ವಿಜಯದೇವಿಯವರ ಆಯ್ಕೆ ಭದ್ರಾವತಿ ನಗರದ ಹಿರಿಮೆ ಮತ್ತಷ್ಟು ಹೆಚ್ಚಿಸಿದೆ : ಎಂ. ಪರಮೇಶ್

ವಿಜಯಪುರ ಕರ್ನಾಟಕ ಮಹಿಳಾ ವಿಶ್ವವಿದ್ಯಾನಿಲಯದ ಕನ್ನಡದ ಮೊದಲ ಮಹಿಳಾ ಪ್ರಾಧ್ಯಾಪಕಿಯಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿರುವ ಭದ್ರಾವತಿ ನಗರದ ನಿವಾಸಿ, ಸಾಹಿತಿ ಡಾ. ಎಸ್.ಎಸ್ ವಿಜಯದೇವಿಯವರನ್ನು ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು.
ಭದ್ರಾವತಿ, ಜ. ೧೭: ವಿಜಯಪುರ ಕರ್ನಾಟಕ ಮಹಿಳಾ ವಿಶ್ವವಿದ್ಯಾನಿಲಯದ ಕನ್ನಡದ ಮೊದಲ ಮಹಿಳಾ ಪ್ರಾಧ್ಯಾಪಕಿಯಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿರುವ ನಗರದ ನಿವಾಸಿ, ಸಾಹಿತಿ ಡಾ. ಎಸ್.ಎಸ್ ವಿಜಯದೇವಿಯವರನ್ನು ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು.
  ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಈ ಬಾರಿ ಆಯೋಜಿಸಲಾಗಿರುವ ೧೫ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ವಿಜಯದೇವಿಯವರನ್ನು ಆಯ್ಕೆ ಮಾಡಿರುವುದು ಹೆಮ್ಮೆಯ ಸಂಗತಿಯಾಗಿದೆ.  ಸಂಶೋಧಕರು, ಲೇಖಕರು ಮತ್ತು ಸಾಹಿತಿಯಾಗಿರುವ ವಿಜಯದೇವಿಯವರು ಕನ್ನಡ ಭಾಷೆ ಹಾಗು ಸಾಹಿತ್ಯ ಕ್ಷೇತ್ರಕ್ಕೆ ಸಲ್ಲಿಸಿರುವ ಸೇವೆ ಅನನ್ಯವಾಗಿದೆ. ಅವರನ್ನು ಆಯ್ಕೆ ಮಾಡಿರುವುದು ಭದ್ರಾವತಿ ನಗರದ ಹಿರಿಮೆಯನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ವೇದಿಕೆ ತಾಲೂಕು ಅಧ್ಯಕ್ಷ ಎಂ. ಪರಮೇಶ್ ಪ್ರಶಂಸೆ ವ್ಯಕ್ತಪಡಿಸಿದರು.
ಮಮತ ವಿಜಯದೇವಿಯವರ ಕಿರುಪರಿಚಯ ಮಾಡಿಕೊಟ್ಟರು. ಅಭಿನಂದನೆ ಸ್ವೀಕರಿಸಿದ ವಿಜಯದೇವಿಯವರು ವೇದಿಕೆ ಪದಾಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿ ಕನ್ನಡ ನಾಡಿಗೆ ವಚನ ಸಾಹಿತ್ಯದ ಕೊಡುಗೆಯನ್ನು ವಿವರಿಸಿದರು.
ವೇದಿಕೆ ಪ್ರದಾನ ಕಾರ್ಯದರ್ಶಿ ಅಶೋಕ್‌ರಾವ್ ಘೋರ್ಪಡೆ, ಯುವ ಘಟಕದ ಅಧ್ಯಕ್ಷ ರವಿಕುಮಾರ್, ಸಂಘಟನಾ ಕಾರ್ಯದರ್ಶಿ ರಾಮಕೃಷ್ಣ ಹಾಗೂ ರಮೇಶ್, ಸದಸ್ಯರುಗಳಾದ ಪಿ. ನಾಗರಾಜ್, ಮಲ್ಲಿಕಾರ್ಜುನ್, ಪ್ರಾಣೇಶ್, ದಿಲೀಪ್  ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಹಾಗೂ ಇತರೆ ಕರವೇ ಸದಸ್ಯರು ಉಪಸ್ಥಿತರಿದ್ದರು.

Friday, January 15, 2021

ಜ.೧೬ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮನ :

ಹಲವು ನಿರೀಕ್ಷೆಗಳೊಂದಿಗೆ ಎದುರು ನೋಡುತ್ತಿದೆ ಕೈಗಾರಿಕಾ ನಗರ

* ಅನಂತಕುಮಾರ್
    ಭದ್ರಾವತಿ, ಜ. ೧೫; ಸುಮಾರು ಮೂರು ದಶಕಗಳಿಂದ ಅಭಿವೃದ್ಧಿ ಕಾಣದ ಕೈಗಾರಿಕಾ ನಗರದಲ್ಲಿ ಇದೀಗ ಚೈತನ್ಯದ ಚಿಲುಮೆ ಕಂಡು ಬರುತ್ತಿದ್ದು, ಇದಕ್ಕೆ ಪ್ರಮುಖ ಕಾರಣ ಕೇಂದ್ರ ಮೀಸಲು ಪೊಲೀಸ್ ಪಡೆಯ ವಿಶೇಷ ವಿಭಾಗವಾಗಿರುವ ಕ್ಷಿಪ್ರ ಕಾರ್ಯ ಪಡೆ(ಆರ್‌ಎಎಫ್) ಘಟಕ ನಗರದಲ್ಲಿ ಆರಂಭಗೊಳ್ಳುತ್ತಿರುವುದು. ಇದಕ್ಕಿಂತ ಮುಖ್ಯವಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ೨ನೇ ಬಾರಿಗೆ ನಗರಕ್ಕೆ ಆಗಮಿಸುತ್ತಿರುವ ಹಿನ್ನಲೆಯಲ್ಲಿ ಕ್ಷೇತ್ರದ ಜನರು ಹಲವು ನಿರೀಕ್ಷೆಗಳೊಂದಿಗೆ ಮುಂದಿನ ಭವಿಷ್ಯವನ್ನು ಎದುರು ನೋಡುತ್ತಿದ್ದಾರೆ.
    ಸಾಮಾನ್ಯ ಜನರಲ್ಲಿ ಆರ್‌ಎಎಫ್ ಘಟಕ ಆರಂಭಗೊಳ್ಳುತ್ತಿದೆ ಎಂದರೆ ನಗರದಲ್ಲಿ ಶಾಂತಿ ಸುವ್ಯವಸ್ಥೆ ಹದಗೆಟ್ಟಿರಬಹುದೆಂಬ ಎಂಬ ಭಾವನೆ ಮೂಡುವುದು ಸಹಜ.  ಬದಲಾಗಿ ಹೊಸ ಉದ್ಯೋಗ ಅವಕಾಶಗಳು ಈ ಮೂಲಕ ಇಲ್ಲಿನ ಜನರಿಗೆ ಲಭಿಸುತ್ತದೆ ಎಂಬ ಪರಿಕಲ್ಪನೆ ಬಾರದಿರುವುದು ಸಹ ಸಹಜ ಎಂದರೆ ತಪ್ಪಾಗಲಾರದು.  
    ಜ.೧೬ರಂದು ನಗರದ ಮಿಲ್ಟ್ರಿಕ್ಯಾಂಪ್ ಬುಳ್ಳಾಪುರದಲ್ಲಿ ಆರ್‌ಎಎಫ್ ಘಟಕದ ಶಂಕುಸ್ಥಾಪನೆ ನೆರವೇರುತ್ತಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಕಾರ್ಯಕ್ರಮದ ಕೇಂದ್ರ ಬಿಂದುವಾಗಿದ್ದು, ಈ ಹಿಂದೆ ಲೋಕಸಭಾ ಚುನಾವಣೆಯಲ್ಲಿ ಸಂಸದ ಬಿ.ವೈ ರಾಘವೇಂದ್ರ ಪರ ಪ್ರಚಾರಗಾಗಿ ನಗರಕ್ಕೆ ಆಗಮಿಸಿದ್ದರು. ನಗರದ ರಂಗಪ್ಪ ವೃತ್ತದಿಂದ ಬಿ.ಎಚ್ ರಸ್ತೆ ಅಂಬೇಡ್ಕರ್ ವೃತ್ತದ ವರೆಗೆ ಬೃಹತ್ ಜಾಥಾ ನಡೆಸಿದ್ದರು. ಇದೀಗ ೨ನೇ ಬಾರಿಗೆ ಆಗಮಿಸುತ್ತಿದ್ದು, ಕ್ಷೇತ್ರದ ಜನರು ಹಲವು ನಿರೀಕ್ಷೆಗಳೊಂದಿಗೆ ಆಮಿತ್ ಶಾ ಆಗಮನವನ್ನು ಎದುರು ನೋಡುತ್ತಿದ್ದಾರೆ.
     ಕ್ಷೇತ್ರದಲ್ಲಿ ಒಂದೆಡೆ ರಾಜ್ಯ ಸರ್ಕಾರಿ ಸ್ವಾಮ್ಯದ ಮೈಸೂರು ಕಾಗದ ಕಾರ್ಖಾನೆ ಸ್ಥಗಿತಗೊಂಡು ಸುಮಾರು ೫ ವರ್ಷಗಳು ಕಳೆದಿವೆ. ಮತ್ತೊಂದೆಡೆ ಕೇಂದ್ರ ಉಕ್ಕು ಪ್ರಾಧಿಕಾರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಮುಳುಗುವ ಹಂತಕ್ಕೆ ಬಂದು ತಲುಪಿದೆ. ಈ ನಡುವೆ ಎಂಪಿಎಂ ಸಕ್ಕರೆ ಘಟಕ ಸಹ ಸ್ಥಗಿತಗೊಂಡಿರುವ ಕಾರಣ ಕಬ್ಬು ಬೆಳೆಗಾರರು ಪರ್ಯಾಯ ಬೆಳೆಗಳ ಕಡೆ ಗಮನ ಹರಿಸಿದ್ದಾರೆ. ಭೂಮಿ ನಂಬಿ ಬದುಕು ಕಟ್ಟಿಕೊಂಡಿದ್ದ ಕೆಲವು ರೈತರು ಕೃಷಿಯಿಂದ ವಿಮುಖರಾಗಿದ್ದಾರೆ. ಒಂದೆಡೆ ಕೃಷಿ ಚಟುವಟಿಕೆಗಳು ಸಹ ಇಲ್ಲದೆ, ಕೈಗಾರಿಕೆಗಳು ಸಹ ಅವನತಿ ದಾರಿ ಹಿಡಿದಿರುವುದು. ಆರ್ಥಿಕ ಬೆಳವಣಿಗೆಯನ್ನು ಕುಂಠಿತಗೊಳಿಸಿದೆ, ಮತ್ತೊಂದೆಡೆ ನಿರುದ್ಯೋಗ ಹೆಚ್ಚಾಗಿದೆ. ಉದ್ಯೋಗ ಹುಡುಕಿಕೊಂಡು ಬೇರೆಡೆಗೆ ವಲಸೆ ಹೋಗುವವರ ಸಂಖ್ಯೆ ದಿನದ ದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ನಡುವೆ ಅಮಿತ್ ಶಾ ಆಗಮನ ಕೆಲವು ನಿರೀಕ್ಷೆಗಳೊಂದಿಗೆ ಇತಿಹಾಸದಲ್ಲಿ ಸುವರ್ಣ ಅಕ್ಷರಗಳಲ್ಲಿ ಬರೆಯುವ ಹೊಸ ಭವಿಷ್ಯವನ್ನು ಸೃಷ್ಟಿಸುವ ಆಶಾಭಾವನೆ ಎದುರು ನೋಡುವಂತಾಗಿದೆ ಎಂದರೆ ತಪ್ಪಾಗಲಾರದು.

ಮೀನುಗಳ ಮಾರಾಣ ಹೋಮ : ದೂರು ದಾಖಲು

ಭದ್ರಾವತಿ ತಾಲೂಕಿನ ಶೆಟ್ಟಿಹಳ್ಳಿ ವ್ಯಾಪ್ತಿಯ ಹಾತಿಕಟ್ಟೆ ಗ್ರಾಮದ ಹೊಸಕೆರೆಯಲ್ಲಿ ಮೀನುಗಳ ಮಾರಾಣ ಹೋಮ 
   ಭದ್ರಾವತಿ, ಜ. ೧೫: ತಾಲೂಕಿನ ಶೆಟ್ಟಿಹಳ್ಳಿ ವ್ಯಾಪ್ತಿಯ ಹಾತಿಕಟ್ಟೆ ಗ್ರಾಮದ ಹೊಸಕೆರೆಯಲ್ಲಿ ಮೀನುಗಳ ಮಾರಾಣ ಹೋಮ ನಡೆದಿದ್ದು, ಈ ಸಂಬಂಧ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
  ಹಾತಿಕಟ್ಟೆ ಗ್ರಾಮದ ಸರ್ವೆ ನಂ.೫ರ ಹೊಸಕೆರೆಯಲ್ಲಿ ಶಿಲ್ಪ ಕೋಂ ಕೃಷ್ಣಮೂರ್ತಿ ಎಂಬುವರು ತಡಸ ಗ್ರಾಮ ಪಂಚಾಯಿತಿ ಮೂಲಕ ಮೀನು ಕೃಷಿ ನಡೆಸಲು ಹರಾಜಿನ ಮೂಲಕ ೫ ವರ್ಷ ಗುತ್ತಿಗೆ ಪಡೆತ್ತಿದ್ದು,  ಲಕ್ಷಾಂತರ ರು. ಖರ್ಚು ಮಾಡಿ ಸುಮಾರು ೪ ರಿಂದ ೫ ಟನ್‌ಗಳಷ್ಟು ಮೀನು ಕೃಷಿ ನಡೆಸಿದ್ದಾರೆ. ಜ.೧೪ರ ಸಂಜೆ ಕಿಡಿಗೇಡಿಗಳು ಕೆರೆಗೆ ವಿಷ ಬೆರಸಿರುವುದರಿಂದ ಮೀನುಗಳು ಸಾವನ್ನಪ್ಪಿವೆ ಎನ್ನಲಾಗಿದೆ.  ಶಿಲ್ಪರವರ ತಮ್ಮ ಮೋಹನ್ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ೪ ಮಂದಿ ವಿರುದ್ಧ ದೂರು ದಾಖಲಿಸಿದ್ದಾರೆ.

ಭಾರತೀಯ ಸೇನಾ ದಿನಾಚರಣೆ : ಮಾಜಿ ಸೈನಿಕರಿಂದ ಸ್ವಚ್ಛತಾ ಕಾರ್ಯದ ಮೂಲಕ ಶ್ರಮದಾನ

ಭದ್ರಾವತಿಯಲ್ಲಿ ತಾಲೂಕು ಮಾಜಿ ಸೈನಿಕರ ಸಂಘದ ವತಿಯಿಂದ ಭಾರತೀಯ ಸೇನಾ ದಿನಾಚರಣೆ ಅಂಗವಾಗಿ ಶುಕ್ರವಾರ ಹೊಸ ಸೇತುವೆ ಸುತ್ತಮುತ್ತ ಸ್ವಚ್ಛತಾ ಕಾರ್ಯದ ಮೂಲಕ ಶ್ರಮದಾನ ನಡೆಸಲಾಯಿತು.
   ಭದ್ರಾವತಿ, ಜ. ೧೫: ತಾಲೂಕು ಮಾಜಿ ಸೈನಿಕರ ಸಂಘದ ವತಿಯಿಂದ ಭಾರತೀಯ ಸೇನಾ ದಿನಾಚರಣೆ ಅಂಗವಾಗಿ ಶುಕ್ರವಾರ ಹೊಸ ಸೇತುವೆ ಸುತ್ತಮುತ್ತ ಸ್ವಚ್ಛತಾ ಕಾರ್ಯದ ಮೂಲಕ ಶ್ರಮದಾನ ನಡೆಸಲಾಯಿತು.
    ಸಂಘದ ಅಧ್ಯಕ್ಷ ಎಲ್ ಅಶೋಕ್, ನಗರಸಭೆ ಪೌರಾಯುಕ್ತ ಮನೋಹರ್ ನೇತೃತ್ವದಲ್ಲಿ ಖಾಸಗಿ ಬಸ್ ನಿಲ್ದಾಣ, ಇಂದಿರಾ ಕ್ಯಾಂಟೀನ್ ಆವರಣ, ಸೇತುವೆ ಪಕ್ಕದಲ್ಲಿರುವ ಶೌಚಾಲಯದ ಸುತ್ತಮುತ್ತ, ಸೇತುವೆ ಎರಡು ಇಕ್ಕೆಲಗಳಲ್ಲಿ ಹಾಗು ನದಿ ತೀರದಲ್ಲಿ  ಸ್ವಚ್ಛತಾ ಕಾರ್ಯ ನಡೆಸುವ ಮೂಲಕ ಮಾಜಿ ಸೈನಿಕರು ಗಮನ ಸೆಳೆದರು.
    ಸ್ವಚ್ಛತಾ ಕಾರ್ಯದಲ್ಲಿ ಮಾಜಿ ಸೈನಿಕರ ಪತ್ನಿಯರ ಕ್ಷೇಮಾಭಿವೃದ್ಧಿ ಸಂಘ ಪದಾಧಿಕಾರಿಗಳು, ನಗರಸಭೆ ಪರಿಸರ ಅಭಿಯಂತರ ಪ್ರಭಾಕರ್, ಹಿರಿಯ ಆರೋಗ್ಯ ನಿರೀಕ್ಷಕ ಆರ್.ಬಿ ಸತೀಶ್, ಲತಾ ಮಣಿ, ಸೂಪರ್ ವೈಸರ್ ಗೋವಿಂದ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು. ನಗರಸಭೆ ವತಿಯಿಂದ ಸೇತುವೆ ಎರಡು ಬದಿ ನದಿಗೆ ತ್ಯಾಜ್ಯ ಎಸೆಯುವವರಿಗೆ ದಂಡ ವಿಧಿಸುವ ಹಾಗು ಸಿಸಿ ಕ್ಯಾಮೇರಾ ಅಳವಡಿಸಿರುವ ಬಗ್ಗೆ ಎಚ್ಚರಿಕೆ ಫಲಕ ಅಳವಡಿಸಲಾಯಿತು.
   ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಕಾರ್ಯದರ್ಶಿ ವೆಂಕಟಗಿರಿ, ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಯೊಬ್ಬರು ಸ್ವಚ್ಛತೆ ಕಾಪಾಡಿಕೊಳ್ಳಬೇಕು. ನಮ್ಮ ಮನೆಯನ್ನು ಸ್ವಚ್ಛವಾಗಿಟ್ಟುಕೊಂಡಂತೆ ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸಹ ಸ್ವಚ್ಛವಾಗಿಟ್ಟುಕೊಳ್ಳಬೇಕು. ಸಂಘದ ವತಿಯಿಂದ ಕೈಗೊಂಡ ಶ್ರಮದಾನ ಸಾರ್ಥಕ ಕಾರ್ಯವಾಗಿದೆ ಪ್ರಶಂಸೆ ವ್ಯಕ್ತಪಡಿಸಿದರು.

ಆರ್‌ಎಎಫ್ ಘಟಕ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಸಕಲ ಸಿದ್ದತೆ : ಸುಮಾರು ೮ ಸಾವಿರ ಮಂದಿ ಪಾಲ್ಗೊಳ್ಳುವ ನಿರೀಕ್ಷೆ

ಭದ್ರಾವತಿ ಮಿಲ್ಟ್ರಿಕ್ಯಾಂಪ್ ಬುಳ್ಳಾಪುರದಲ್ಲಿ ಜ.೧೬ರಿಂದ ಕಾರ್ಯಾರಂಭಗೊಳ್ಳಲಿರುವ ಆರ್‌ಎಎಫ್ ಘಟಕ ಶಿಲಾನ್ಯಾಸ ಕಾರ್ಯಕಮಕ್ಕೆ ಸಿದ್ದತೆಗಳನ್ನು ಕೈಗೊಂಡಿರುವುದು.
ಭದ್ರಾವತಿ, ಜ. ೧೫: ಲೋಕಸಭಾ ಸದಸ್ಯ ಬಿ.ವೈ ರಾಘವೇಂದ್ರರವರ ಅವಿರತ ಪರಿಶ್ರಮದಿಂದಾಗಿ ನಗರದಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆಯ ವಿಶೇಷ ವಿಭಾಗವಾಗಿರುವ ಕ್ಷಿಪ್ರ ಕಾರ್ಯ ಪಡೆ(ಆರ್‌ಎಎಫ್) ಘಟಕ ನಗರದಲ್ಲಿ ಜ.೧೬ರಂದು ಶಂಕುಸ್ಥಾಪನೆಗೊಳ್ಳುತ್ತಿದ್ದು, ಜಿಲ್ಲೆಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಡಿ.ಟಿ ಮೇಘರಾಜ್ ಮಾತನಾಡಿದರು.
   ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಗೃಹ ಸಚಿವರು ಘಟಕದ ಶಂಕುಸ್ಥಾಪನೆ ನೆರವೇರಿಸಲಿದ್ದು, ಕಾರ್ಯಕ್ರಮ ಯಾವುದೇ ರಾಜಕೀಯವಿಲ್ಲ ಉದ್ದೇಶ ಹೊಂದಿರುವುದಿಲ್ಲ. ಇದೊಂದು ಜಿಲ್ಲೆಯಲ್ಲಿ ನಡೆಯುತ್ತಿರುವ ಐತಿಹಾಸಿಕ ಕಾರ್ಯಕ್ರಮವಾಗಿದೆ. ಎಲ್ಲೆಡೆ ಸಂಭ್ರಮ ಮನೆ ಮಾಡಿದ್ದು, ಕಾರ್ಯಕ್ರಮ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಸ್ವತಃ ಸಂಸದರು ಶಕ್ತಿಮೀರಿ ಶ್ರಮಿಸುತ್ತಿದ್ದಾರೆ. ಜಿಲ್ಲೆಯ ಎಲ್ಲಾ ತಾಲೂಕುಗಳಿಂದ ಗಣ್ಯರು, ವಿವಿಧ ಸಂಘ-ಸಂಸ್ಥೆಗಳ ಮುಖಂಡರು, ಮಹಿಳಾ ಮುಖಂಡರು ಸೇರಿದಂತೆ ಸುಮಾರು ೮ ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸುವ ನಿರೀಕ್ಷೆ ಇದೆ. ಇದಕ್ಕೆ ತಕ್ಕಂತೆ ಬೃಹತ್ ವೇದಿಕೆ ಸಹ ನಿರ್ಮಿಸಲಾಗಿದೆ ಎಂದರು.
    ಕಾರ್ಯಕ್ರಮಕ್ಕೆ ಆಗಮಿಸುವ ಸಾರ್ವಜನಿಕರು ಅಲ್ಲಿನ ಶಿಷ್ಟಾಚಾರಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಕೇಂದ್ರ ಸರ್ಕಾರ ಗೃಹ ಸಚಿವರ ಭದ್ರತೆಗೆ ಹೆಚ್ಚಿನ ಆದ್ಯತೆ ನೀಡಿರುವ ಹಿನ್ನಲೆಯಲ್ಲಿ ಪ್ರತಿಯೊಬ್ಬರು ಭದ್ರತೆ ವಿಭಾಗದ ತಪಾಸಣೆಗೆ ಒಳಪಟ್ಟು ಕಾರ್ಯಕ್ರಮಕ್ಕೆ ಆಗಮಿಸಬೇಕೆಂದು ಮನವಿ ಮಾಡಿದರು.
    ಎಲ್ಲಾ ರಾಜಕೀಯ ಪಕ್ಷದ ಮುಖಂಡರು, ಕಾರ್ಮಿಕ ಸಂಘಟನೆಗಳು ವಿಐಎಸ್‌ಎಲ್ ಮತ್ತು ಎಂಪಿಎಂ ಕಾರ್ಖಾನೆಗಳ ಅಭಿವೃದ್ಧಿ ವಿಚಾರಗಳು ಸೇರಿದಂತೆ ಯಾವುದೇ ರೀತಿಯ ವಿಚಾರಗಳಿದ್ದರೂ ಸಹ ಅವುಗಳನ್ನು ಬದಿಗಿಟ್ಟು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೂಲಕ ಯಶಸ್ವಿಗೊಳಿಸಬೇಕೆಂದು ಕೋರಿದರು.
   ಜಿಲ್ಲಾ ಕಾರ್ಯದರ್ಶಿಗಳಾದ ಶಿವರಾಜ್, ಬಿ.ಕೆ ಶ್ರೀನಾಥ್, ತಾಲೂಕು ಮಂಡಲ ಅಧ್ಯಕ್ಷ ಎಂ. ಪ್ರಭಾಕರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.