![](https://blogger.googleusercontent.com/img/b/R29vZ2xl/AVvXsEi9Dps_4BE5cxtKxV8yS3OZZJU14hTzMykPLXk9c9zi9lJZ7tYRlqhpeIhuaREPMcUiIsdNsWcJUC5XAcxjQNhO_iimQjfzi3hRKV2ihxxwMiTmB6zKOkLUQ3FX11PWJUayK_AJjg6WE388/w400-h190-rw/D10-BDVT3-703055.jpg)
ಭದ್ರಾವತಿ ಅಪ್ಪರ್‌ಹುತ್ತಾದಲ್ಲಿರುವ ಶ್ರೀ ನಂದಿ ಈಶ್ವರ-ಸಂಕಷ್ಟಹರ ಗಣಪತಿ ದೇವಸ್ಥಾನದಲ್ಲಿ ಮಹಾರಾತ್ರಿ ಆಚರಣೆಗೆ ಸಕಲ ಸಿದ್ದತೆ ಕೈಗೊಂಡಿರುವುದು.
ಭದ್ರಾವತಿ, ಮಾ. ೧೦: ನಗರದ ವಿವಿಧೆಡೆ ಈಶ್ವರ ದೇವಾಲಯಗಳಲ್ಲಿ ಮಹಾಶಿವರಾತ್ರಿ ಆಚರಣೆಗೆ ಸಕಲ ಸಿದ್ದತೆಗಳನ್ನು ಕೈಗೊಳ್ಳಲಾಗಿದ್ದು, ಕೊರೋನಾ ಸಂಕಷ್ಟದ ನಡುವೆಯೂ ವೈಭವದ ಶಿವರಾತ್ರಿ ಆಚರಣೆಗೆ ದೇವಸ್ಥಾನಗಳ ಸೇವಾ ಸಮಿತಿಗಳು ಮುಂದಾಗಿವೆ.
ಶ್ರೀ ನಂದಿ ಈಶ್ವರ-ಸಂಕಷ್ಟಹರ ಗಣಪತಿ ದೇವಸ್ಥಾನ:
ಜಿಲ್ಲೆಯಲ್ಲಿಯೇ ೩೨ ಅಡಿ ಅತಿ ಎತ್ತರ ಧ್ಯಾನಾಸಕ್ತ ಶಿವನ ಪ್ರತಿಮೆ ಹೊಂದಿರುವ ದೇವಾಲಯವಾಗಿರುವ ಅಪ್ಪರ್ ಹುತ್ತಾದಲ್ಲಿರುವ ಶ್ರೀ ನಂದಿ ಈಶ್ವರ-ಸಂಕಷ್ಟಹರ ಗಣಪತಿ ದೇವಸ್ಥಾನದಲ್ಲಿ ಪ್ರತಿವರ್ಷದಂತೆ ಈ ಬಾರಿ ಸಹ ಮಹಾಶಿವರಾತ್ರಿ ಆಚರಣೆ ಹಮ್ಮಿಕೊಳ್ಳಲಾಗಿದೆ.
೧೧ರ ಬೆಳಿಗ್ಗೆ ಶ್ರೀ ಗುರು ಗಣಪತಿ ಪ್ರಾರ್ಥನೆ, ಪಂಚಾಮೃತ ಅಭಿಷೇಕ, ರುದ್ರಾಭಿಷೇಕ, ಮಹಾಪೂಜೆ, ಇಷ್ಟಪ್ರತಿಷ್ಠಾಪನೆ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ, ಸಂಜೆ ಮಹಾ ಪಂಚಾಮೃತ ಸಹಿತ ರುದ್ರಾಭಿಷೇಕ, ಹೂವಿನ ಅಲಂಕಾರ, ಅರ್ಚನೆ, ಮಹಾ ಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ. ೧೨ರಂದು ಬೆಳಿಗ್ಗೆ ನವಗ್ರಹ ಸಹಿತ ಶ್ರೀ ಶನೈಶ್ವರ ಹೋಮ, ಮಧ್ಯಾಹ್ನ ೧೨ಕ್ಕೆ ಪೂರ್ಣಾಹುತಿ, ಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಹಾಗು ೧೩ರಂದು ಅಮಾವಾಸ್ಯೆ ಪ್ರಯುಕ್ತ ಪಂಚಾಮೃತ ಸಹಿತ ರುದ್ರಾಭಿಷೇಕ, ಶಾಂತಿ ಪೂಜೆ, ಮಧ್ಯಾಹ್ನ ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಜರುಗಲಿದೆ.
ಸಂಗಮೇಶ್ವರ ದೇವಸ್ಥಾನ:
ನಗರದ ಹೃದಯ ಭಾಗದಲ್ಲಿ ಭದ್ರಾ ನದಿಯಲ್ಲಿರುವ ಶ್ರೀ ಸಂಗಮೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಪ್ರತಿವರ್ಷದಂತೆ ಈ ಬಾರಿ ಸಹ ಮಹಾಶಿವರಾತ್ರಿ ಹಮ್ಮಿಕೊಳ್ಳಲಾಗಿದೆ. ಈ ದೇವಸ್ಥಾನದಲ್ಲಿ ಶಿವರಾತ್ರಿಯಂದು ಸಾವಿರಾರು ಭಕ್ತಾಧಿಗಳು ಪಾಲ್ಗೊಳ್ಳುತ್ತಿದ್ದು, ಬೆಳಿಗ್ಗೆಯಿಂದ ರಾತ್ರಿವರೆಗೂ ಸಾಲುಗಟ್ಟಿನಿಂತು ದೇವರ ದರ್ಶನ ಪಡೆದು ಕೃಪೆಗೆ ಪಾತ್ರರಾಗುವುದು ವಿಶೇಷವಾಗಿದೆ. ವಿಶೇಷ ಅಲಂಕಾರ, ಹೋಮ-ಹವನ ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳು ಜರುಗಲಿವೆ.
ನಗರದ ವಿವಿಧ ದೇವಸ್ಥಾನಗಳಲ್ಲಿ ಮಹಾ ಶಿವರಾತ್ರಿ ಅಚರಣೆ:
ಹಳೇನಗರ ಭಾಗದ ಕೋಟೆ ಬಸವಣ್ಣ, ಶ್ರೀ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನ, ಶ್ರೀ ಶೃಂಗೇರಿ ಶಂಕರಮಠ, ಹೊಸಮನೆ ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ, ಹಳೇಸೀಗೆಬಾಗಿ ಶ್ರೀ ಈಶ್ವರ ದೇವಸ್ಥಾನ, ಬಿ.ಎಚ್ ರಸ್ತೆ ಶ್ರೀ ಭದ್ರೇಶ್ವರ ದೇವಸ್ಥಾನ, ಜಿಂಕ್‌ಲೈನ್ ಶ್ರೀ ಮಲೆಮಹಾದೇಶ್ವರ ದೇವಸ್ಥಾನ, ಜನ್ನಾಪುರ ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ, ಕಾಗದನಗರದ ಈಶ್ವರ ದೇವಸ್ಥಾನ, ಉಜ್ಜನಿಪುರ ಚಾನಲ್‌ರಸ್ತೆಯಲ್ಲಿರುವ ಶ್ರೀ ಕಾಳಿಂಗೇಶ್ವರ ದೇವಸ್ಥಾನ, ನ್ಯೂಟೌನ್ ಶ್ರೀಸತ್ಯಸಾಯಿ ಸೇವಾ ಕ್ಷೇತ್ರದ ಶ್ರೀ ಶಿವಸಾಯಿಕೃಪ ಧಾಮ ಸೇರಿದಂತೆ ಇನ್ನಿತರ ದೇವಾಲಯಗಳಲ್ಲಿ ಮಹಾ ಶಿವರಾತ್ರಿ ಆಚರಣೆ ಹಮ್ಮಿಕೊಳ್ಳಲಾಗಿದ್ದು, ಈ ಸಂಬಂಧ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಲಿವೆ.