Thursday, April 22, 2021

ನಿರ್ದೇಶಕರ ಚುನಾವಣೆ ಮುಂದೂಡಿಕೆ

    ಭದ್ರಾವತಿ, ಏ. ೨೩:  ಹಳೇನಗರದ ಶ್ರೀ ಬಸವೇಶ್ವರ ವೃತ್ತದ ಬಳಿ ಇರುವ ಶ್ರೀ ಕನ್ಯಕಾ ಪರಮೇಶ್ವರಿ ವಿವಿದೋದ್ದೇಶ ಸಹಕಾರ ಸಂಘದ ತೆರವಾಗಿದ್ದ ಒಂದು ನಿರ್ದೇಶಕರ ಸ್ಥಾನಕ್ಕೆ ಏ. ೨೪ ರಂದು ನಡೆಯಬೇಕಿದ್ದ ಚುನಾವಣೆಯನ್ನು ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಸರ್ಕಾರದ ಅದೇಶದಂತೆ ಮುಂದೂಡಲಾಗಿದೆ.
    ಮುಂದೂಡಿದ ಚುನಾವಣೆಯು ಮೇ.೩ರ ಸೋಮವಾರ ವಾಸವಿ ಮಹಲ್‌ನಲ್ಲಿ ನಡೆಯಲಿದೆ. ಸದಸ್ಯರು ತಪ್ಪದೇ ಚುನಾವಣೆಯಲ್ಲಿ ಭಾಗವಹಿಸುವ ಮೂಲಕ ಸಹಕರಿಸುವಂತೆ ಕೋರಲಾಗಿದೆ.  

ವಿವಿಧ ವಾರ್ಡ್‌ಗಳಲ್ಲಿ ಅಭ್ಯರ್ಥಿಗಳಿಂದ ಅಬ್ಬರದ ಪ್ರಚಾರ

ಭದ್ರಾವತಿ ನಗರಸಭೆ ವಾರ್ಡ್ ನಂ.೨೪ರ ಆಮ್ ಆದ್ಮಿ ಪಾರ್ಟಿ ಅಧಿಕೃತ ಅಭ್ಯರ್ಥಿ ಎ. ಮಸ್ತಾನ್ ಗುರುವಾರ ಮತದಾರರಿಗೆ ಪಕ್ಷದ ಮಾಸ್ಕ್‌ಗಳನ್ನು ವಿತರಿಸುವ ಮೂಲಕ ಮತಯಾಚನೆ ನಡೆಸಿದರು.
    ಭದ್ರಾವತಿ, ಏ. ೨೨: ಕೋವಿಡ್-೧೯ರ ನಡುವೆಯೂ ನಗರಸಭೆ ೩೫ ವಾರ್ಡ್‌ಗಳಲ್ಲಿ ಗುರುವಾರ ಸಹ ಅಭ್ಯರ್ಥಿಗಳಿಂದ ಪ್ರಚಾರದ ಭರಾಟೆ ಕಂಡು ಬಂದಿತು. ವಿಶೇಷವಾಗಿ ವಾರ್ಡ್ ನಂ.೨೪ರ ಆಮ್ ಆದ್ಮಿ ಪಾರ್ಟಿ ಅಧಿಕೃತ ಅಭ್ಯರ್ಥಿ ಎ. ಮಸ್ತಾನ್ ಮತದಾರರಿಗೆ ಪಕ್ಷದ ಮಾಸ್ಕ್‌ಗಳನ್ನು ವಿತರಿಸುವ ಮೂಲಕ ಮತಯಾಚನೆ ನಡೆಸಿದರು.
    ಬೊಮ್ಮನಕಟ್ಟೆ ವ್ಯಾಪ್ತಿಯನ್ನು ಒಳಗೊಂಡಿರುವ ವಾರ್ಡ್ ನಂ. ೨೪ರಲ್ಲಿ ಒಟ್ಟು ೩೦೬೯ ಮತದಾರರಿದ್ದು,  ಅರ್ಧದಷ್ಟು ಮುಸ್ಲಿಂ ಮತದಾರರಿದ್ದಾರೆ.  ಉಳಿದಂತೆ ಹಿಂದೂ ಹಾಗು ಕ್ರಿಶ್ಚಿಯನ್ ಮತದಾರರಿದ್ದು, ಒಟ್ಟು ೯ ಮಂದಿ ಚುನಾವಣಾ ಕಣದಲ್ಲಿದ್ದಾರೆ. ಪ್ರಮುಖವಾಗಿ ಕಾಂಗ್ರೆಸ್ ಪಕ್ಷದಿಂದ ಹಾಲಿ ನಗರಸಭಾ ಸದಸ್ಯ ದಿವಂಗತ ಮೆಹಬೂಬ್ ಸಾಬ್‌ರವರ ಪುತ್ರ ಎಸ್.ಎಂ ಅಬ್ದುಲ್ ಮಜೀದ್, ಜೆಡಿಎಸ್ ಪಕ್ಷದಿಂದ ಸಾಮಾನ್ಯ ಕಾರ್ಯಕರ್ತ ಕೋಟೇಶ್ವರರಾವ್(ಕೋಟಿ), ಬಿಜೆಪಿ ಪಕ್ಷದಿಂದ ಎಸ್.ಸಿ ಮೋರ್ಚಾ ತಾಲೂಕು ಅಧ್ಯಕ್ಷ ಪಿ. ಗಣೇಶ್‌ರಾವ್, ಆಮ್ ಆದ್ಮಿ ಪಾರ್ಟಿಯಿಂದ ಯುವ ಮುಖಂಡ ಎ. ಮಸ್ತಾನ್, ವಿಶ್ವ ಭಾರತಿ ವಿದ್ಯಾಸಂಸ್ಥೆ ಅಧ್ಯಕ್ಷ ಶೇಖ್ ಹುಸೇನ್ ಸಾಬ್, ಖಾಜಾ ಮೈನುದ್ದೀನ್ ಸೇರಿದಂತೆ ೫ ಮಂದಿ ಪಕ್ಷೇತರ ಅಭ್ಯರ್ಥಿಗಳಿದ್ದು, ಒಟ್ಟು ೯ ಮಂದಿ ಕಣದಲ್ಲಿದ್ದಾರೆ.
     ಈ ವಾರ್ಡ್‌ನಲ್ಲಿ ಮಾಜಿ ಶಾಸಕ ಎಂ.ಜೆ ಅಪ್ಪಾಜಿ ಬೆಂಬಲಿಗರಾಗಿದ್ದ ಮೆಹಬೂಬ್ ಸಾಬ್ ೩ ಬಾರಿ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿ ಆಯ್ಕೆಯಾಗಿದ್ದರು. ಅವರ ನಿಧನದ ನಂತರ  ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿದೆ. ಅಭ್ಯರ್ಥಿಗಳು ಪಕ್ಷದ ಮುಖಂಡರು, ಕಾರ್ಯಕರ್ತರೊಂದಿಗೆ ಮನೆ ಮನೆಗೆ ತೆರಳಿ ಬಿರುಸಿನಿಂದ ಮತಯಾಚನೆ ನಡೆಸುತ್ತಿದ್ದಾರೆ.
     ಹೊಸ ಬುಳ್ಳಾಪುರ, ಹುಡ್ಕೋ ಕಾಲೋನಿ ಒಳಗೊಂಡಿರುವ ವಾರ್ಡ್ ನಂ.೨೫ರಲ್ಲಿ ಒಟ್ಟು ೩೭೭೬ ಮತದಾರರಿದ್ದು, ಹಿಂದೂಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.  ಪರಿಶಿಷ್ಟ ಜಾತಿ ಸಮುದಾಯಕ್ಕೆ ಸೇರಿರುವ ಅಭ್ಯರ್ಥಿಗಳು ಈ ಬಾರಿ ಕಣದಲ್ಲಿದ್ದು, ಪ್ರಮುಖವಾಗಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಹಾಲಿ ನಗರಸಭಾ ಸದಸ್ಯ ಆಂಜನಪ್ಪ ಕಣದಲ್ಲಿದ್ದು, ಜೆಡಿಎಸ್ ಪಕ್ಷದಿಂದ ಸ್ಥಳೀಯ ಮುಖಂಡ ಉದಯ್‌ಕುಮಾರ್, ಬಿಜೆಪಿ ಪಕ್ಷದಿಂದ ತಾಲೂಕು ಬಿಜೆಪಿ ಎಸ್‌ಸಿ ಮೋರ್ಚಾ ಉಪಾಧ್ಯಕ್ಷ ಕೆ. ಚಂದ್ರು, ಪಕ್ಷೇತರ ಅಭ್ಯರ್ಥಿಯಾಗಿ ಸ್ನೇಹಜೀವಿ ಬಳಗದ ಸದಸ್ಯ, ತಾಲೂಕು ಛಲವಾದಿ ಮಹಾಸಭಾ ಅಧ್ಯಕ್ಷ ಸುರೇಶ್ ಸೇರಿದಂತೆ ಒಟ್ಟು ೫ ಮಂದಿ ಕಣದಲ್ಲಿದ್ದಾರೆ. ಈ ಪೈಕಿ ಉದಯ್‌ಕುಮಾರ್, ಕೆ. ಚಂದ್ರು ಮೊದಲ ಬಾರಿಗೆ ಚುನಾವಣೆ ಎದುರಿಸುತ್ತಿದ್ದು, ಅಭ್ಯರ್ಥಿಗಳಿಂದ ಅಬ್ಬರದ ಪ್ರಚಾರ ನಡೆಯುತ್ತಿದೆ. ಕಳೆದ ಬಾರಿ ಈ ವಾರ್ಡ್‌ನಲ್ಲಿ ಜೆಡಿಎಸ್ ಪಕ್ಷದ ಎಂ. ರಾಜು ಗೆಲುವು ಸಾಧಿಸಿದ್ದರು.
     ಸಂಪೂರ್ಣವಾಗಿ ವಿಐಎಸ್‌ಎಲ್ ಕಾರ್ಖಾನೆ ವಸತಿಗೃಹಗಳನ್ನು ಒಳಗೊಂಡಿರುವ ಬಾಲಭಾರತಿ-ಬೆಣ್ಣೆ ಕೃಷ್ಣ ಸರ್ಕಲ್ ವ್ಯಾಪ್ತಿಯ ವಾರ್ಡ್ ನಂ.೨೬ರಲ್ಲಿ ಒಟ್ಟು ೨೯೯೫ ಮತದಾರರಿದ್ದು, ಎಲ್ಲಾ ಜಾತಿಯ ಕಾರ್ಮಿಕ ಕುಟುಂಬಗಳು ಇಲ್ಲಿ ನೆಲೆನಿಂತಿವೆ. ಕಾಂಗ್ರೆಸ್ ಅಭ್ಯರ್ಥಿಯಾಗಿ ವಿಐಎಸ್‌ಎಲ್ ಕಾರ್ಖಾನೆ ನಿವೃತ್ತ ನೌಕರ, ಛಲವಾದಿ ಸಮಾಜದ ಮುಖಂಡ ಎಸ್.ಎಸ್ ಭೈರಪ್ಪನವರ ಪತ್ನಿ ಬಿ.ಪಿ ಸರ್ವಮಂಗಳ ಕಣದಲ್ಲಿದ್ದಾರೆ. ಬಿಜೆಪಿಯಿಂದ ನಾಗಲಕ್ಷ್ಮೀ, ಜೆಡಿಎಸ್ ಪಕ್ಷದಿಂದ ಪರಮೇಶ್ವರಿ, ಆಮ್ ಆದ್ಮಿ ಪಾರ್ಟಿಯಿಂದ ಎನ್. ಶಿಲ್ಪಾ , ಪಕ್ಷೇತರ ಅಭ್ಯರ್ಥಿಗಳಾಗಿ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ, ಯುವ ಮುಖಂಡ ಎಸ್.ಕೆ ಸುಧೀಂದ್ರರವರ ಪತ್ನಿ ರೇಷ್ಮಾ, ಸರಸ್ವತಮ್ಮ ಸೇರಿದಂತೆ ಒಟ್ಟು ೭ ಮಂದಿ ಕಣದಲ್ಲಿದ್ದಾರೆ. ಕಳೆದ ಬಾರಿ ಈ ವಾರ್ಡ್‌ನಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಆಂಜನಪ್ಪ ಗೆಲುವು ಸಾಧಿಸಿದ್ದರು. ಅಭ್ಯರ್ಥಿಗಳಿಂದ ಅಬ್ಬರದ ಪ್ರಚಾರ ನಡೆಯುತ್ತಿದ್ದು, ಮನೆ ಮನೆಗೆ ತೆರಳಿ ಮತಯಾಚನೆ ನಡೆಸುತ್ತಿದ್ದಾರೆ.
    ತಮಿಳು ಸಮುದಾಯದವರು, ಕೂಲಿ ಕಾರ್ಮಿಕರು ಹೆಚ್ಚಾಗಿರುವ ಆಂಜನೇಯ ಅಗ್ರಹಾರ-ಕೂಲಿಬ್ಲಾಕ್ ವ್ಯಾಪ್ತಿಯನ್ನು ಒಳಗೊಂಡಿರುವ ವಾರ್ಡ್ ನಂ.೨೭ರಲ್ಲಿ ಒಟ್ಟು ೩೭೭೯ ಮತದಾರರಿದ್ದಾರೆ. ಪ್ರಮುಖವಾಗಿ ಕಾಂಗ್ರೆಸ್ ಪಕ್ಷದಿಂದ ಯುವ ಮುಖಂಡ ದಾಸ್‌ರವರ ಸಹೋದರಿ ಲಕ್ಷ್ಮೀವೇಲು, ಬಿಜೆಪಿ ಪಕ್ಷದಿಂದ ಶೈಲಾ ರವಿಕುಮಾರ್, ಜೆಡಿಎಸ್‌ನಿಂದ ಹಾಲಿ ಸದಸ್ಯ ಗುಣಶೇಖರ್‌ರವರ ಪತ್ನಿ ರೂಪಾವತಿ ಹಾಗು ಇಬ್ಬರು ಪಕ್ಷೇತರರು ಸೇರಿದಂತೆ ೫ ಮಂದಿ ಕಣದಲ್ಲಿದ್ದಾರೆ. ಈ ವಾರ್ಡ್‌ನಲ್ಲೂ ಅಭ್ಯರ್ಥಿಗಳಿಂದ ಅಬ್ಬರದ ಪ್ರಚಾರ ನಡೆಯುತ್ತಿದೆ.
      ಸಚಿವ ಕೆ.ಎಸ್ ಈಶ್ವರಪ್ಪ ಮತಯಾಚನೆ :
    ಸಚಿವ ಕೆ.ಎಸ್ ಈಶ್ವರಪ್ಪ ಗುರುವಾರ ಬೆಳಿಗ್ಗೆ ವಾರ್ಡ್ ೧೪ರ ಬಿಜೆಪಿ ಅಭ್ಯರ್ಥಿ ಜಿ. ಆನಂದಕುಮಾರ್ ಪರವಾಗಿ ಮತಯಾಚನೆ ನಡೆಸಿದರು. ವಾರ್ಡ್ ಅಭಿವೃದ್ಧಿಗಾಗಿ ಬಿಜೆಪಿ ಬೆಂಬಲಿಸುವಂತೆ ಮನವಿ ಮಾಡಿದರು.
    ಪಕ್ಷದ ಪ್ರಮುಖರಾದ ಬಿ.ಕೆ ಶ್ರೀನಾಥ್, ನಾಗರಾಜ್, ಸುಬ್ರಮಣ್ಯ, ಶೇಖರಪ್ಪ, ಯಲ್ಲಪ್ಪ, ದುಗ್ಗೇಶ್, ಪ್ರಕಾಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಕೆ.ಎಸ್ ಈಶ್ವರಪ್ಪರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.



ಭದ್ರಾವತಿ ನಗರಸಭೆ ವಾರ್ಡ್ ನಂ.೧೪ರ ಬಿಜೆಪಿ ಅಭ್ಯರ್ಥಿಪರ ಮತಯಾಚನೆಗೆ ಆಗಮಿಸಿದ್ದ ಸಚಿವ ಕೆ.ಎಸ್ ಈಶ್ವರಪ್ಪರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.



Wednesday, April 21, 2021

ಸಂಸದ ಬಿ.ವೈ ರಾಘವೇಂದ್ರ ಮತಯಾಚನೆ :

ಭದ್ರಾವತಿ, ಏ. ೨೧: ಸಂಸದ ಬಿ.ವೈ ರಾಘವೇಂದ್ರ ಬುಧವಾರ ಸಂಜೆ ನಗರಸಭೆ ೪ನೇ ವಾರ್ಡಿನ ಬಿಜೆಪಿ ಅಭ್ಯರ್ಥಿ ಅನುಪಮ ಪರವಾಗಿ ಮತಯಾಚನೆ ನಡೆಸಿದರು.
  ಅನುಪಮ ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಚನ್ನೇಶ್ ಪತ್ನಿಯಾಗಿದ್ದು, ಶಾಸಕ ಬಿ.ಕೆ ಸಂಗಮೇಶ್ವರ್ ಕುಟುಂಬ ಸಂಬಂಧಿ ಎಚ್. ವಿದ್ಯಾ ಎದುರು ಸ್ಪರ್ಧಿಸಿದ್ದಾರೆ. ಮತಯಾಚನೆ ಸಂದರ್ಭದಲ್ಲಿ ಪಕ್ಷದ ಸ್ಥಳೀಯ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.



ನಗರಸಭೆ ಚುನಾವಣೆ : ಅಪ್ಪ-ಮಗ ಸ್ಪರ್ಧೆ ಸೇರಿದಂತೆ ಹಲವು ವಿಶೇಷತೆ

ಬಿ.ಕೆ ಮೋಹನ್ ೨೨ನೇ ವಾರ್ಡಿನ ಕಾಂಗ್ರೆಸ್ ಅಭ್ಯರ್ಥಿ


ಬಿ.ಎಂ ಮಂಜುನಾಥ್ ೭ನೇ ವಾರ್ಡಿನ ಕಾಂಗ್ರೆಸ್ ಅಭ್ಯರ್ಥಿ




ವಿ. ಕದಿರೇಶ್ ೧೬ನೇ ವಾರ್ಡಿನ ಬಿಜೆಪಿ ಅಭ್ಯರ್ಥಿ



ಕೆ. ಸುದೀಪ್‌ಕುಮಾರ್ ೧೨ನೇ ವಾರ್ಡಿನ ಕಾಂಗ್ರೆಸ್ ಅಭ್ಯರ್ಥಿ



* ಅನಂತಕುಮಾರ್
    ಭದ್ರಾವತಿ, ಏ. ೨೧: ಈ ಬಾರಿ ನಗರಸಭೆ ಚುನಾವಣೆ ಹಲವು ವಿಶೇಷತೆಯಿಂದ ಕೂಡಿದ್ದು, ಅಪ್ಪ-ಮಗ ಸ್ಪರ್ಧೆ ಒಂದೆಡೆಯಾದರೆ, ಅಲ್ಪ ಸಂಖ್ಯಾತರು, ಮಹಿಳೆಯರಿಗೆ  ಹೆಚ್ಚಿನ ಅವಕಾಶ, ನಾನಾ ತಂತ್ರಗಾರಿಕೆ ಮೂಲಕ ಹಾಲಿ ಸದಸ್ಯರಿಂದ ಪುನಃ ಪೈಪೋಟಿ ಹೀಗೆ ಹಲವು ವಿಶೇಷತೆಗಳು ಕಂಡು ಬರುತ್ತಿವೆ.
    ಈ ಬಾರಿ ನಗರಸಭೆ ೩೫ ವಾರ್ಡ್‌ಗಳ ಚುನಾವಣಾ ಕಣದಲ್ಲಿ ಒಟ್ಟು ೧೭೩ ಅಭ್ಯರ್ಥಿಗಳಿದ್ದು,   ಕಾಂಗ್ರೆಸ್ ಪಕ್ಷದ ೨೯ನೇ ವಾರ್ಡಿನ ಮಹಿಳಾ ಅಭ್ಯರ್ಥಿ ಕಳೆದ ೩ ದಿನಗಳ ಹಿಂದೆ ಹೃದಯಾಘಾತದಿಂದ ನಿಧನ ಹೊಂದಿದ್ದು,  ಈ ನಡುವೆ ೧೭ನೇ ವಾರ್ಡಿನ ಬಿಜೆಪಿ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿದ್ದ ಡಿ.ಎನ್ ರವಿಕುಮಾರ್ ನಾಮಪತ್ರ ಹಿಂಪಡೆದುಕೊಂಡಿದ್ದಾರೆ.
        ಅಪ್ಪ-ಮಕ್ಕಳ ಸ್ಪರ್ಧೆ :
    ಶಾಸಕ ಬಿ.ಕೆ ಸಂಗಮೇಶ್ವರ್ ಸಹೋದರ, ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ವಾರ್ಡ್ ನಂ.೨೨ರಿಂದ ಸ್ಪರ್ಧಿಸಿದ್ದಾರೆ. ಈ ವಾರ್ಡ್‌ನಲ್ಲಿ ಈ ಹಿಂದೆ ೨ ಬಾರಿ ನಗರಸಭೆ ಸದಸ್ಯರಾಗಿದ್ದ ವೆಂಕಟಯ್ಯ ಈ ಬಾರಿ ಬಿ.ಕೆ ಮೋಹನ್ ಸ್ಪರ್ಧೆಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಬಿ.ಕೆ ಮೋಹನ್‌ರವರ ಪುತ್ರ ಬಿ.ಎಂ ಮಂಜುನಾಥ್ ನಗರಸಭೆ ೭ನೇ ವಾರ್ಡಿನ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಬಿ.ಎಂ ಮಂಜುನಾಥ್ ಮೊದಲ ಬಾರಿಗೆ ಚುನಾವಣೆ ಎದುರಿಸುತ್ತಿದ್ದಾರೆ. ಈ ಹಿಂದೆ ಈ ವಾರ್ಡಿನ ಸದಸ್ಯರಾಗಿದ್ದ ಟಿಪ್ಪು ಸುಲ್ತಾನ್ ಮಂಜುನಾಥ್ ಸ್ಪರ್ಧೆಗೆ ಅವಕಾಶ ಮಾಡಿಕೊಟ್ಟಿದ್ದಾರೆ.
     ಬಿಜೆಪಿ ಪಕ್ಷದ ಹಿರಿಯ ಮುಖಂಡ ವಿ. ಕದಿರೇಶ್ ೭ನೇ ಬಾರಿಗೆ ಚುನಾವಣೆಗೆ ಸ್ಪರ್ಧಿಸಿದ್ದು, ೩ ಬಾರಿ ಪುರಸಭಾ ಸದಸ್ಯರಾಗಿ, ೩ ಬಾರಿ ನಗರಸಭಾ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಒಂದು ಬಾರಿ ನಗರಸಭೆ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಈ ಬಾರಿ ೧೬ನೇ ವಾರ್ಡಿನ ಬಿಜೆಪಿ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿದ್ದು, ಗೆಲುವಿಗಾಗಿ ಪೈಪೋಟಿಗೆ ಮುಂದಾಗಿದ್ದಾರೆ. ಸಂಘ ಪರಿವಾರದ ಮೂಲಕ ರಾಜಕೀಯ ಪ್ರವೇಶಿರುವ ಕದಿರೇಶ್ ಬಿಜೆಪಿ ಪಕ್ಷದ ಸಾಮಾನ್ಯ ಕಾರ್ಯಕರ್ತರಾಗಿ, ಹೊಸಮನೆ ಹಿಂದೂ ಮಹಾಸಭಾ-ಹಿಂದೂ ರಾಷ್ಟ್ರಸೇನಾ ವಿನಾಯಕ ಸೇವಾ ಸಮಿತಿ ಅಧ್ಯಕ್ಷರಾಗಿ, ಸೂಡಾ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಪುತ್ರ ಕೆ. ಸುದೀಪ್‌ಕುಮಾರ್ ಈ ಬಾರಿ ೧೨ನೇ ವಾರ್ಡಿನ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಕಳೆದ ಬಾರಿ ಪತ್ನಿ ರೇಣುಕಾರನ್ನು ಬಿಜೆಪಿ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ೧೫ನೇ ವಾರ್ಡ್‌ನಲ್ಲಿ ಕಣಕ್ಕಿಳಿಸಿ ಗೆಲುವು ಸಾಧಿಸಿದ್ದರು.
        ಜೆಡಿಎಸ್ ಮತ್ತು ಎಎಪಿಯಲ್ಲಿ ಮಹಿಳೆಯರಿಗೆ ಹೆಚ್ಚಿನ ಸ್ಥಾನ :
    ೩೫ ವಾರ್ಡ್‌ಗಳ ಪೈಕಿ ಶೇ.೫೦ಕ್ಕಿಂತ ಹೆಚ್ಚಿನ ಸ್ಥಾನಗಳನ್ನು ಜೆಡಿಎಸ್ ಮತ್ತು ಎಎಪಿ ಪಕ್ಷಗಳು ಬಿಟ್ಟುಕೊಟ್ಟಿವೆ. ಜೆಡಿಎಸ್-೧೯, ಬಿಜೆಪಿ-೧೮, ಕಾಂಗ್ರೆಸ್-೧೭(ಓರ್ವ ಮಹಿಳಾ ಅಭ್ಯರ್ಥಿ ನಿಧನ) ಹಾಗು ಎಎಪಿ-೪(ಒಟ್ಟು ೭ ಸ್ಥಾನಗಳಲ್ಲಿ ಸ್ಪರ್ಧೆ) ಸ್ಥಾನಗಳಲ್ಲಿ ಮಹಿಳೆಯರು ಸ್ಪರ್ಧಿಸಿದ್ದಾರೆ.  ಸರ್ಕಾರ ನಿಗದಿಪಡಿಸಿರುವ ಮೀಸಲಾತಿಕ್ಕಿಂತ ಹೆಚ್ಚಿನ ಸ್ಥಾನಗಳು ಮಹಿಳೆಯರಿಗೆ ಲಭಿಸಿವೆ.
      ಗಮನ ಸೆಳೆಯುತ್ತಿರುವ ಎಎಪಿ:
     ಮೊದಲ ಬಾರಿಗೆ ನಗರಸಭೆ ಚುನಾವಣೆಗೆ ಸ್ಪರ್ಧಿಸಿರುವ ಆಮ್ ಆದ್ಮಿ ಪಾರ್ಟಿ ಒಟ್ಟು ೭ ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಪೈಕಿ ೪ ಜನ ಮುಸ್ಲಿಂ ಅಭ್ಯರ್ಥಿಗಳಿದ್ದಾರೆ. ಮೊದಲ ಬಾರಿಗೆ ಖಾತೆ ತೆರೆಯುವ ನಿಟ್ಟಿನಲ್ಲಿ ಪಕ್ಷ ಹೆಚ್ಚಿನ ಗಮನ ಹರಿಸುತ್ತಿದ್ದು, ಪಕ್ಷದ ರಾಜ್ಯ ಜಂಟಿ ಕಾರ್ಯದರ್ಶಿ ದರ್ಶನ್ ಹಾಗು ಜಿಲ್ಲಾಧ್ಯಕ್ಷ ಎಚ್. ರವಿಕುಮಾರ್, ಪರಮೇಶ್ವರಚಾರ್ ಸೇರಿದಂತೆ ಇನ್ನಿತರರ ನೇತೃತ್ವದಲ್ಲಿ ಪ್ರಚಾರ ಕಾರ್ಯ ಭರದಿಂದ ಕೈಗೊಳ್ಳಲಾಗುತ್ತಿದೆ.
      ಹಾಲಿ ಸದಸ್ಯರಿಂದ ನಾನಾ ರೀತಿಯ ತಂತ್ರಗಾರಿಕೆ:
    ಕೆಲವು ವಾರ್ಡ್‌ಗಳಲ್ಲಿ ಹಿಂದಿನ ಮೀಸಲಾತಿ ಮರುಕಳುಹಿಸಿರುವ ಹಿನ್ನಲೆಯಲ್ಲಿ ಹಾಲಿ ಸದಸ್ಯರು ಪುನಃ ಸ್ಪರ್ಧಿಸಿದ್ದು, ಇನ್ನೂ ಕೆಲವು ಹಾಲಿ ಸದಸ್ಯರು ತಮಗೆ ಅನ್ವಯವಾಗುವ ಮೀಸಲಾತಿ ಇರುವ ವಾರ್ಡ್‌ಗಳಿಗೆ ವಲಸೆ ಬಂದು ಸ್ಪರ್ಧಿಸಿದ್ದಾರೆ.  ಮತ್ತೆ ಕೆಲವು ಹಾಲಿ ಸದಸ್ಯರು ಮಹಿಳಾ ಮೀಸಲಾತಿ ನಿಗದಿಯಾದ ವಾರ್ಡ್‌ಗಳಲ್ಲಿ  ತಮ್ಮ ತಮ್ಮ ಪತ್ನಿಯರು ಹಾಗು ಕುಟುಂಬ ವರ್ಗದವರನ್ನು ಕಣಕ್ಕಿಳಿಸಿದ್ದಾರೆ.
     ಕಾಂಗ್ರೆಸ್ ಪಕ್ಷದಿಂದ ಹಾಲಿ ಸದಸ್ಯರಾದ ಎಂ. ಮಣಿ ೧೧ನೇ ವಾರ್ಡ್, ಟಿಪ್ಪು ಸುಲ್ತಾನ್ ೧೭ನೇ ವಾರ್ಡ್, ಎಸ್. ಲಕ್ಷ್ಮೀದೇವಿ ೨೦ನೇ ವಾರ್ಡ್, ಆಂಜನಪ್ಪ ೨೫ನೇ ವಾರ್ಡ್, ಜೆಡಿಎಸ್ ಪಕ್ಷದಿಂದ ಹಾಲಿ ಸದಸ್ಯರಾದ ಆರ್. ಕರುಣಾಮೂರ್ತಿ, ವಿಶಾಲಾಕ್ಷಿ ಮತ್ತು ರವಿಕುಮಾರ್ ಹಾಗು ಬಿಜೆಪಿ ಪಕ್ಷದಿಂದ ಹಾಲಿ ಸದಸ್ಯರಾದ ವಿ. ಕದಿರೇಶ್ ಮತ್ತು ಜಿ. ಆನಂದಕುಮಾರ್ ಸ್ಪರ್ಧಿಸಿದ್ದಾರೆ.
      ಸ್ಪರ್ಧೆಗೆ ಅವಕಾಶ ಸಿಗದ ಹಾಲಿ ಸದಸ್ಯರಾದ ಮುರ್ತುಜಾ ಖಾನ್ ತಮ್ಮ ಪತ್ನಿ ತಬಸುಮ್ ಸುಲ್ತಾನ್, ಶಿವರಾಜ್ ತಮ್ಮ ಪತ್ನಿ ಎಂ. ರೇಣುಕಾ, ಬದರಿನಾರಾಯಣ ತಮ್ಮ ಪತ್ನಿ ಪ್ರೇಮಾ, ಗುಣಶೇಖರ್ ತಮ್ಮ ಪತ್ನಿ ರೂಪಾವತಿ, ಅನಿಲ್‌ಕುಮಾರ್ ಆರ್. ನಾಗರತ್ನ, ರೇಣುಕಾ ತಮ್ಮ ಪತಿ ಸುದೀಪ್‌ಕುಮಾರನ್ನು ಕಣಕ್ಕಿಳಿಸಿದ್ದಾರೆ.  ಬಿಜೆಪಿಯಲ್ಲಿ ಬಹುತೇಕ ಹೊಸಬರಿಗೆ ಅವಕಾಶ ನೀಡಲಾಗಿದೆ. ಕಾಂಗ್ರೆಸ್ ಮತ್ತು ಜೆಡಿಎಸ್‌ನಲ್ಲಿ ಹಾಲಿ ಮತ್ತು ಮಾಜಿ ಸದಸ್ಯರಿಗೆ ಅವಕಾಶ ನೀಡಲಾಗಿದೆ.

ನಗರಸಭೆ ಚುನಾವಣೆ : ವಿವಿಧ ಪಕ್ಷಗಳ ಪ್ರಮುಖರಿಂದ ಮತಯಾಚನೆ

ಭದ್ರಾವತಿ ನಗರಸಭೆ ೧೨ನೇ ವಾರ್ಡಿನ ಕಾಂಗ್ರೆಸ್ ಅಭ್ಯರ್ಥಿ ಕೆ. ಸುದೀಪ್‌ಕುಮಾರ್ ಬುಧವಾರ ಬೆಳಿಗ್ಗೆ ಮತಯಾಚನೆ ನಡೆಸಿದರು.
   ಭದ್ರಾವತಿ, ಏ. ೨೧: ನಗರಸಭೆ ಚುನಾವಣೆ ವಿವಿಧೆಡೆ ಅಭ್ಯರ್ಥಿಗಳಿಂದ ಪ್ರಚಾರ ಕಾರ್ಯ ಬಿರುಸಿನಿಂದ ನಡೆಯುತ್ತಿದ್ದು, ಅಭ್ಯರ್ಥಿಗಳು ಖುದ್ದಾಗಿ ಮನೆ ಮನೆಗೆ ತೆರಳಿ ಮತಯಾಚನೆ ನಡೆಸುತ್ತಿದ್ದಾರೆ. ಈ ಬಾರಿ ಪ್ರಚಾರದಲ್ಲಿ  ಧ್ವನಿವರ್ಧಕ ಮೂಲಕ ಮತಯಾಚನೆ ಹೆಚ್ಚಾಗಿ ಕಂಡು ಬರುತ್ತಿಲ್ಲ. ಅಲ್ಲದೆ ಕೋವಿಡ್ ಹಿನ್ನಲೆಯಲ್ಲಿ ಬಹುತೇಕ ಅಭ್ಯರ್ಥಿಗಳು ಯಾವುದೇ ಅಬ್ಬರದ ಪ್ರಚಾರವಿಲ್ಲದೆ ಸರಳವಾಗಿ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
     ಬುಧವಾರ ಬೆಳಿಗ್ಗೆ ನಗರಸಭೆ ೧೨ನೇ ವಾರ್ಡಿನ ಕಾಂಗ್ರೆಸ್ ಅಭ್ಯರ್ಥಿ ಕೆ. ಸುದೀಪ್‌ಕುಮಾರ್ ಪಕ್ಷದ ಕಾರ್ಯಕರ್ತರು ಹಾಗು ಬೆಂಬಲಿಗರೊಂದಿಗೆ ಮನೆ ಮನೆಗೆ ತೆರಳಿ ಮತಯಾಚನೆ ನಡೆಸಿದರು. ಸುದೀಪ್‌ಕುಮಾರ್ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಾಗಿದ್ದು, ಅಲ್ಲದೆ ಜಯಕರ್ನಾಟಕ ಜನಪರ ವೇದಿಕೆ ಜಿಲ್ಲಾ ಕಾರ್ಯಾಧ್ಯಕ್ಷರಾಗಿ ಹಾಗು ವಿವಿಧ ಸಂಘಟನೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.


      ಇದೆ ರೀತಿ ಮೊದಲ ಬಾರಿಗೆ ನಗರಸಭೆ ಚುನಾವಣೆಗೆ ೧೨ನೇ ವಾರ್ಡಿನ ಬಿಜೆಪಿ ಅಭ್ಯರ್ಥಿಯಾಗಿ ಪಕ್ಷದ ಮಂಡಲ ಅಧ್ಯಕ್ಷ ಎಂ. ಪ್ರಭಾಕರ ಸ್ಪರ್ಧಿಸಿದ್ದು, ಇವರ ಸಹ ಬುಧವಾರ ಬೆಳಿಗ್ಗೆ ಕಾರ್ಯಕರ್ತರು ಹಾಗು ಬೆಂಬಲಿಗರೊಂದಿಗೆ ಮನೆ ಮನೆಗೆ ತೆರಳಿ ಮತಯಾಚನೆ ನಡೆಸಿದರು. ಪ್ರಭಾಕರ್ ತಾಲೂಕು ದೇವಾಂಗ ಸಮಾಜ ಹಾಗು ಶ್ರೀ ಬನಶಂಕರಿ ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದು, ಆರಂಭದಿಂದಲೂ ಬಿಜೆಪಿ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ಗುರುತಿಸಿಕೊಂಡಿದ್ದಾರೆ.
       ಎ. ಪಶುಪತಿ ೧೨ನೇ ವಾರ್ಡಿನ ಜೆಡಿಎಸ್ ಅಭ್ಯರ್ಥಿಯಾಗಿದ್ದು, ಇವರು ಸಹ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಆರಂಭದಿಂದಲೂ ಜೆಡಿಎಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ಗುರುತಿಸಿಕೊಂಡಿದ್ದಾರೆ.
       ಮಂಗಳವಾರ ಸಂಜೆ ಸಂಸದ ಬಿ.ವೈ. ರಾಘವೇಂದ್ರ, ಶಿವಮೊಗ್ಗ ಗ್ರಾಮಾಂತರ ಶಾಸಕ ಕೆ.ಬಿ ಅಶೋಕ್‌ನಾಯ್ಕ ಬಿಜೆಪಿ ಪಕ್ಷದ ೩ನೇ ವಾರ್ಡ್ ಅಭ್ಯರ್ಥಿ ಜೆ. ನಕುಲ್ ಪರವಾಗಿ ಮತಯಾಚನೆ ನಡೆಸಿದರು. ವಾರ್ಡ್ ಅಭಿವೃದ್ಧಿಗೆ ಬಿಜೆಪಿ ಅಭ್ಯರ್ಥಿಗಳನ್ನು ಬೆಂಬಲಿಸುವಂತೆ ಮನವಿ ಮಾಡಿದರು. ಬುಧವಾರ ಅಭ್ಯರ್ಥಿಪರವಾಗಿ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ಎಸ್. ದತ್ತಾತ್ರಿ ಮತಯಾಚನೆ ನಡೆಸಿದರು.


     ಇದೆ ವಾರ್ಡಿನ ಕಾಂಗ್ರೆಸ್ ಅಭ್ಯರ್ಥಿ ಜಾರ್ಜ್ ಬುಧವಾರ ಬೆಳಿಗ್ಗೆಯಿಂದ ಕಾರ್ಯಕರ್ತರು ಹಾಗು ಬೆಂಬಲಿಗರೊಂದಿಗೆ ಮನೆ ಮನೆಗೆ ತೆರಳಿ ಮತಯಾಚನೆ ನಡೆಸಿದರು.

Tuesday, April 20, 2021

ನಗರಸಭೆ ಚುನಾವಣೆ ವಿವಿಧೆಡೆ ಅಭ್ಯರ್ಥಿಗಳಿಂದ ಬಿರುಸಿನಿಂದ ಮತಯಾಚನೆ

ಭದ್ರಾವತಿ ನಗರಸಭೆ ೨ನೇ ವಾರ್ಡಿನ ಜೆಡಿಎಸ್ ಅಭ್ಯರ್ಥಿ ಶಾಂತ ಮೋಹನರಾವ್ ಮಂಗಳವಾರ ಮನೆ ಮನೆಗೆ ತೆರಳಿ ಕರಪತ್ರ ವಿತರಿಸಿ ಮತಯಾಚನೆ ನಡೆಸಿದರು.
   ಭದ್ರಾವತಿ, ಏ. ೨೦: ಒಂದೆಡೆ ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಮತ್ತೊಂದೆಡೆ ನಗರಸಭೆ ಚುನಾವಣೆ ದಿನದಿಂದ ದಿನಕ್ಕೆ ರಂಗೇರುತ್ತಿದೆ. ವಿವಿಧ ವಾರ್ಡ್‌ಗಳಲ್ಲಿ ಪ್ರಚಾರ ಕಾರ್ಯ ಬಿರುಸಿನಿಂದ ನಡೆಯುತ್ತಿದೆ.
  ನಗರಸಭೆ ೨ನೇ ವಾರ್ಡಿನ ಜೆಡಿಎಸ್ ಅಭ್ಯರ್ಥಿ ಶಾಂತ ಮೋಹನ್‌ರಾವ್ ಜೆಡಿಎಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗು ಕುಟುಂಬ ಸದಸ್ಯರೊಂದಿಗೆ ಮಂಗಳವಾರ ವಾರ್ಡ್‌ನ ಪ್ರತಿ ಮನೆಗಳಿಗೆ ಭೇಟಿ ನೀಡಿ ಕರಪತ್ರಗಳನ್ನು ವಿತರಿಸಿ ಮತಯಾಚನೆ ನಡೆಸಿದರು.
     ಈ ವಾರ್ಡ್‌ನಲ್ಲಿ ಈ ಹಿಂದೆ ೨೦೦೭ರ ಚುನಾವಣೆಯಲ್ಲಿ ಎಸ್.ಬಿ ಮೋಹನ್‌ರಾವ್ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ೨೦೧೩ರಲ್ಲಿ ಪುನಃ ಸ್ಪರ್ಧಿಸಿ ಪರಾಭವಗೊಂಡಿದ್ದರು. ಇದೀಗ ಪತ್ನಿಯನ್ನು ಕಣಕ್ಕಿಳಿಸಿದ್ದು, ತಮ್ಮ ಅವಧಿಯಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊಂಡು ಮತಯಾಚನೆ ನಡೆಸುತ್ತಿದ್ದಾರೆ.
     ಇದೆ ರೀತಿ ೬ನೇ ವಾರ್ಡ್‌ನಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಸುಕನ್ಯ ಸಹ ಮನೆ ಮನೆಗೆ ಭೇಟಿ ನೀಡಿ ಮತಯಾಚನೆ ನಡೆಸುತ್ತಿದ್ದಾರೆ. ಸುಕನ್ಯ ಸುಮಾರು ೨೦ ವರ್ಷಗಳಿಂದ ಜೆಡಿಎಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದು, ತಾಲೂಕು ಮಹಿಳಾ ಘಟಕದ ಅಧ್ಯಕ್ಷರಾಗಿ ಸಹ ನೇಮಕಗೊಂಡಿದ್ದರು. ಮಾಜಿ ಶಾಸಕ ದಿವಂಗತ ಎಂ.ಜೆ ಅಪ್ಪಾಜಿ ಬೆಂಬಲಿಗರಲ್ಲಿ ಒಬ್ಬರಾಗಿದ್ದರು. ಕುವೆಂಪು ಪ್ರವಾಸಿ ವಾಹನ ಚಾಲಕರ ಹಾಗು ಮಾಲೀಕರ ಸಂಘ ಹಾಗು ವಿವಿಧ ಸಂಘಟನೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಪತಿ ಡಿ. ರಾಜು ಅವರೊಂದಿಗೆ ತಾವು ಕೈಗೊಂಡಿರುವ ಸಾಮಾಜಿಕ ಸೇವಾ ಕಾರ್ಯಗಳನ್ನು ಮುಂದಿಟ್ಟು ಮತಯಾಚನೆ ನಡೆಸುತ್ತಿದ್ದಾರೆ.


ಭದ್ರಾವತಿ ನಗರಸಭೆ ೬ನೇ ವಾರ್ಡಿನ ಪಕ್ಷೇತರ ಅಭ್ಯರ್ಥಿ ಸುಕನ್ಯ ಮನೆ ಮನೆಗೆ ತೆರಳಿ ಮತಯಾಚನೆ ನಡೆಸಿದರು.

ಮಾಸ್ಕ್ ಧರಿಸದ ವಾಹನ ಸವಾರರಿಗೆ ದಂಡ : ಒಟ್ಟು ೧೨,೮೦೦ ರು. ವಸೂಲಾತಿ


ಕೊರೋನಾ ಸೋಂಕು ೨ನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಮಂಗಳವಾರ ಭದ್ರಾವತಿ ನಗರಸಭೆ ವ್ಯಾಪ್ತಿಯಲ್ಲಿ ಮಾಸ್ಕ್ ಬಳಕೆ ಮಾಡದ ವಾಹನ ಸವಾರರಿಗೆ ದಂಡ ವಿಧಿಸಲಾಯಿತು.
   ಭದ್ರಾವತಿ, ಏ. ೨೦: ಕೊರೋನಾ ಸೋಂಕು ೨ನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಮಂಗಳವಾರ ನಗರಸಭೆ ವ್ಯಾಪ್ತಿಯಲ್ಲಿ ಮಾಸ್ಕ್ ಬಳಕೆ ಮಾಡದ ವಾಹನ ಸವಾರರಿಗೆ ದಂಡ ವಿಧಿಸಲಾಯಿತು.
   ಸ್ವತಃ ನಗರಸಭೆ ಪೌರಾಯುಕ್ತ ಮನೋಹರ್ ಬೆಳಿಗ್ಗೆ ಬಿ.ಎಚ್ ರಸ್ತೆ ಅಪ್ಪರ್ ಹುತ್ತಾದಲ್ಲಿ ಮಾಸ್ಕ್ ಧರಿಸದ ದ್ವಿಚಕ್ರ ವಾಹನ ಸವಾರರನ್ನು ತಡೆದು ದಂಡ ವಸೂಲಾತಿ ಮಾಡಿದರು. ಅಲ್ಲದೆ ಭದ್ರಾವತಿ-ಶಿವಮೊಗ್ಗ ನಡುವೆ ಸಂಚರಿಸುವ ಮ್ಯಾಕ್ಸಿಕ್ಯಾಬ್, ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಸಹ ತಡೆದು ಮಾಸ್ಕ್ ಧರಿಸದ ಪ್ರಯಾಣಿಕರನ್ನು ಪತ್ತೆ ಮಾಡಿ ಎಚ್ಚರಿಕೆ ನೀಡಲಾಯಿತು.
    ಅಂಬೇಡ್ಕರ್ ವೃತ್ತ, ಮಾಧವಚಾರ್ ವೃತ್ತ, ಗಾಂಧಿ ವೃತ್ತ ಮತ್ತು ರಂಗಪ್ಪ ವೃತ್ತಗಳಲ್ಲಿ ಪೌರಾಯುಕ್ತರ ನೇತೃತ್ವದಲ್ಲಿ ನಗರಸಭೆ ಅಧಿಕಾರಿಗಳು, ಸಿಬ್ಬಂದಿಗಳು ಬೆಳಿಗ್ಗೆಯಿಂದ ಸಂಜೆವರೆಗೂ ಕಾರ್ಯಾಚರಣೆ ನಡೆಸಿ ಒಟ್ಟು ೧೨,೮೦೦ ರು. ದಂಡ ವಸೂಲಾತಿ ಮಾಡಿದ್ದು, ಅಲ್ಲದೆ ಸರಿಯಾಗಿ ಮಾಸ್ಕ್ ಧರಿಸದ ಸವಾರರಿಗೆ ತಿಳುವಳಿಕೆ ನೀಡಿದ್ದಾರೆ.
    ಬುಧವಾರದಿಂದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ಖಾಸಗಿ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಮಾರುಕಟ್ಟೆ ಸೇರಿದಂತೆ ವಿವಿಧೆಡೆ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸದವರನ್ನು ಪತ್ತೆ ಮಾಡಿ ದಂಡ ವಸೂಲಾತಿ ಮಾಡುವ ಕಾರ್ಯಾಚರಣೆ ನಡೆಯಲಿದೆ ಎಂದು ಪೌರಾಯುಕ್ತ ಮನೋಹರ್ ತಿಳಿಸಿದ್ದಾರೆ.