Saturday, April 24, 2021

ವೀಕ್ ಎಂಡ್ ಲಾಕ್‌ಡೌನ್ ನಡುವೆಯೂ ಅಭ್ಯರ್ಥಿಗಳಿಂದ ಮತಯಾಚನೆ

ಭದ್ರಾವತಿ ನಗರಸಭೆ ಚುನಾವಣೆ ಹಿನ್ನೆಲೆಯಲ್ಲಿ ೪ನೇ ವಾರ್ಡಿನ ಬಿಜೆಪಿ ಅಭ್ಯರ್ಥಿ ಅನುಪಮಾ  ಚನ್ನೇಶ್ ಶನಿವಾರ ಹೊಸದುರ್ಗದ  ಭಗೀರಥ ಗುರುಪೀಠದ ಪುರುಷೋತ್ತಮಾನಂದಪುರಿ ಸ್ವಾಮೀಜಿಯವರ ಆಶೀರ್ವಾದ ಪಡೆದರು.
     ಭದ್ರಾವತಿ, ಏ. ೨೪: ರಾಜ್ಯ ಸರ್ಕಾರ ಒಂದೆಡೆ ಶನಿವಾರ ಮತ್ತು ಭಾನುವಾರ ವೀಕ್ ಎಂಡ್ ಲಾಕ್‌ಡೌನ್ ಘೋಷಿಸಿದ್ದು, ಈ ನಡುವೆಯೂ ನಗರಸಭೆ ೩೫ ವಾರ್ಡ್‌ಗಳಲ್ಲಿ ಅಭ್ಯರ್ಥಿಗಳು ಮನೆ ಮನೆಗೆ ತರಳಿ ಮತಯಾಚನೆ ನಡೆಸಿದರು.
    ಬಹುತೇಕ ಗ್ರಾಮೀಣ ಪರಿಸರ ಹೊಂದಿರುವ ಭಂಡಾರಹಳ್ಳಿ ವ್ಯಾಪ್ತಿಯನ್ನು ಒಳಗೊಂಡಿರುವ ವಾರ್ಡ್ ನಂ.೩೫ರಲ್ಲಿ ಒಟ್ಟು ೩೦೩೨ ಮತದಾರರಿದ್ದು, ೫ ಜನ ಕಣದಲ್ಲಿದ್ದಾರೆ. ಬಹುತೇಕ ಒಕ್ಕಲಿಗ ಸಮುದಾಯದವರು ಹೆಚ್ಚಾಗಿರುವ ಈ ವಾರ್ಡ್‌ನಲ್ಲಿ ಹಿರಿಯ ಕಾಂಗ್ರೆಸ್ ಮುಖಂಡ, ನಗರಸಭೆ ಮಾಜಿ ಸದಸ್ಯ ಗಂಗಾಧರ್‌ರವರು ತಮ್ಮ ಸೊಸೆ ಶೃತಿ ವಸಂತ್‌ಕುಮಾರನ್ನು ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿಸಿದ್ದಾರೆ. ಜೆಡಿಎಸ್ ಪಕ್ಷದಿಂದ ಹಿರಿಯ ಮಹಿಳೆ ನಿಂಗಮ್ಮರನ್ನು ಕಣಕ್ಕಿಳಿಸಲಾಗಿದೆ. ಇದೆ ರೀತಿ ಬಿಜೆಪಿ ಪಕ್ಷದಿಂದ ಲಕ್ಷ್ಮಮ್ಮ ನರಸಿಂಹಗೌಡರನ್ನು ಕಣಕ್ಕಿಳಿಸಲಾಗಿದೆ. ಈ ಇಬ್ಬರು ರಾಜಕೀಯಕ್ಕೆ ಹೊಸಬರಾಗಿದ್ದಾರೆ. ಪಕ್ಷೇತರ ಅಭ್ಯರ್ಥಿಯಾಗಿ ಸ್ನೇಹಜೀವಿ ಬಳಗದ ಸದಸ್ಯೆ ಸುಧಾ ಶಿವಪ್ಪ ಸೇರಿದಂತೆ ಇಬ್ಬರು ಸ್ಪರ್ಧಿಗಳಿದ್ದಾರೆ.
     ಈ ವಾರ್ಡ್‌ನಲ್ಲಿ ಕಳೆದ ಬಾರಿ ಜೆಡಿಎಸ್ ಪಕ್ಷದಿಂದ ಜೆ. ಭಾಗ್ಯ ಆಯ್ಕೆಯಾಗಿದ್ದರು. ಈ ಬಾರಿ ಸಹ ಅಭ್ಯರ್ಥಿಗಳ ನಡುವೆ ತೀವ್ರ ಪೈಪೋಟಿ ಕಂಡು ಬರುತ್ತಿದ್ದು, ಬಿರುಸಿನ ಮತಯಾಚನೆ ನಡೆಸುತ್ತಿದ್ದಾರೆ.
ವಿಐಎಸ್‌ಎಲ್ ಕಾರ್ಖಾನೆ ವಸತಿ ಗೃಹಗಳನ್ನು ಹೊಂದಿರುವ ಒಕ್ಕಲಿಗರು ಹೆಚ್ಚಾಗಿರುವ ಅಪ್ಪರ್ ಹುತ್ತಾ ವ್ಯಾಪ್ತಿಯನ್ನು ಒಳಗೊಂಡಿರುವ ವಾರ್ಡ್ ೩೪ರಲ್ಲಿ ಒಟ್ಟು ೩೦೩೨ ಮತದಾರರಿದ್ದು, ೪ ಜನ ಕಣದಲ್ಲಿದ್ದಾರೆ. ಮೂಲತಃ ಜೆಡಿಎಸ್‌ನವರಾದ ವಾರ್ಡ್‌ನಲ್ಲಿ ಚಿರಪರಿಚಿತರಾಗಿರುವ ಭಾಗ್ಯಮ್ಮ ಮಂಜುನಾಥ್‌ರನ್ನು ಜೆಡಿಎಸ್ ಪಕ್ಷದಿಂದ ಕಣಕ್ಕಿಳಿಸಲಾಗಿದೆ. ಹಿಂದೂಪರ ಹಾಗು ವಿವಿಧ ಮಹಿಳಾ ಸಂಘಟನೆಗಳಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿರುವ ಲತಾ ಚಂದ್ರಶೇಖರ್ ಅವರನ್ನು ಕಾಂಗ್ರೆಸ್ ಪಕ್ಷದಿಂದ ಹಾಗು ಬಿಜೆಪಿ ಪಕ್ಷದಲ್ಲಿ ಸಕ್ರಿಯ ಕಾರ್ಯಕರ್ತರಾಗಿ ವಿವಿಧ ಹುದ್ದೆಗಳನ್ನು ಅಲಂಕರಿಸಿರುವ ಶ್ಯಾಮಲ ಸತ್ಯಣ್ಣರನ್ನು ಬಿಜೆಪಿ ಪಕ್ಷದ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲಾಗಿದೆ.  ಒಬ್ಬರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆಯಲ್ಲಿದ್ದಾರೆ.
        ಈ ವಾರ್ಡ್‌ನಲ್ಲಿ ಕಳೆದ ೨ ಬಾರಿ ಜೆಡಿಎಸ್ ಪಕ್ಷದಿಂದ ಎಚ್.ಬಿ ರವಿಕುಮಾರ್ ಆಯ್ಕೆಯಾಗಿದ್ದರು.  ೩ ಪಕ್ಷಗಳ ಅಭ್ಯರ್ಥಿಗಳ ನಡೆವೆಯೂ ಪ್ರಬಲ ಪೈಪೋಟಿ ನಡೆಯುತ್ತಿರುವುದು ಕಂಡು ಬರುತ್ತಿದ್ದು, ಅಭ್ಯರ್ಥಿಗಳು ಬಿರುಸಿನ ಮತಯಾಚನೆಯಲ್ಲಿ ತೊಡಗಿಸಿಕೊಂಡಿದ್ದಾರೆ.
      ವಿಐಎಸ್‌ಎಲ್ ಕಾರ್ಖಾನೆ ವಸತಿ ಗೃಹಗಳನ್ನು ಹೊಂದಿರುವ ಇಲ್ಲೂ ಸಹ ಒಕ್ಕಲಿಗರು ಹೆಚ್ಚಾಗಿರುವ ಹುತ್ತಾಕಾಲೋನಿ ವ್ಯಾಪ್ತಿಯನ್ನು ಹೊಂದಿರುವ ವಾರ್ಡ್ ನಂ.೩೩ರಲ್ಲಿ ಒಟ್ಟು ೪,೩೨೦ ಮತದಾರರಿದ್ದು, ೬ ಜನ ಕಣದಲ್ಲಿದ್ದಾರೆ.  ಹಲವಾರು ವರ್ಷಗಳಿಂದ ಜೆಡಿಎಸ್ ಪಕ್ಷದಲ್ಲಿ ಗುರುತಿಸಿಕೊಂಡು ಇತ್ತೀಚೆಗೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿರುವ ಸಮಾಜ ಸೇವಕ ಬಿ.ವಿ ಕೃಷ್ಣರಾಜ್ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ. ಹಾಲಿ ನಗರಸಭಾ ಸದಸ್ಯ ಎಚ್.ಬಿ ರವಿಕುಮಾರ್ ಜೆಡಿಎಸ್ ಅಭ್ಯರ್ಥಿಯಾಗಿದ್ದಾರೆ. ಶ್ರೀಧರ ಗೌಡ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿದ್ದಾರೆ. ಪಕ್ಷೇತರ ಅಭ್ಯರ್ಥಿಗಳಾಗಿ ಸ್ನೇಹ ಜೀವಿ ಬಳಗದ ಸದಸ್ಯೆ ಶಶಿಕಲಾ ಸೇರಿದಂತೆ ೩ ಮಂದಿ ಸ್ಪರ್ಧೆಯಲ್ಲಿದ್ದಾರೆ.
    ಈ ವಾರ್ಡ್‌ನಲ್ಲಿ ಕಳೆದ ಬಾರಿ ಜೆಡಿಎಸ್ ಪಕ್ಷದಿಂದ ಎಂ.ಎಸ್ ಸುಧಾಮಣಿ ಆಯ್ಕೆಯಾಗಿದ್ದರು. ಈ ವಾರ್ಡ್‌ನಲ್ಲೂ ಅಭ್ಯರ್ಥಿಗಳು ಬಿರುಸಿನ ಮತಯಾಚನೆಯಲ್ಲಿ ತೊಡಗಿಸಿಕೊಂಡಿದ್ದಾರೆ.
      ಭಗೀರಥ ಗುರುಪೀಠದ ಶ್ರೀಗಳಿಂದ ಆಶೀರ್ವಾದ:
   ನಗರಸಭೆ ಚುನಾವಣೆ ಹಿನ್ನೆಲೆಯಲ್ಲಿ ೪ನೇ ವಾರ್ಡಿನ ಬಿಜೆಪಿ ಅಭ್ಯರ್ಥಿ ಅನುಪಮಾ  ಚನ್ನೇಶ್ ಶನಿವಾರ ಹೊಸದುರ್ಗದ  ಭಗೀರಥ ಗುರುಪೀಠದ ಪುರುಷೋತ್ತಮಾನಂದಪುರಿ ಸ್ವಾಮೀಜಿಯವರ ಆಶೀರ್ವಾದ ಪಡೆದರು.
   ನಗರಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ಉಪ್ಪಾರ ಸಮಾಜ ಅಧಿಕೃತವಾಗಿ ಬೆಂಬಲ ಸೂಚಿಸಿರುವ ಹಿನ್ನೆಲೆಯಲ್ಲಿ  ಕರ್ನಾಟಕ ಉಪ್ಪಾರ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ. ಕೆ ಗಿರೀಶ್ ಉಪ್ಪಾರ ಅವರ ನೇತೃತ್ವದಲ್ಲಿ ಹೊಸದುರ್ಗಕ್ಕೆ ತೆರಳಿ ಶ್ರೀಗಳ ದರ್ಶನ ಪಡೆದರು.


ನಗರಸಭೆ ಇಂಜಿನಿಯರ್ ಮೇಲೆ ಗುತ್ತಿಗೆದಾರ ಹಲ್ಲೆ

    ಭದ್ರಾವತಿ, ಏ. ೨೪: ಕಾಮಗಾರಿ ಗುಣಮಟ್ಟ ಕುರಿತು ಪ್ರಶ್ನಿಸಿದ ನಗರಸಭೆ ಇಂಜಿನಿಯರ್ ಮತ್ತು ಸಿಬ್ಬಂದಿ ಮೇಲೆ ಗುತ್ತಿಗೆದಾರನೋರ್ವ ಹಲ್ಲೆ ನಡೆಸಿರುವ ಘಟನೆ ನಡೆದಿದೆ.
    ಇಂಜಿನಿಯರ್ ಎಸ್.ಆರ್ ಸತೀಶ್ ಮತ್ತು ನೀರು ಸರಬರಾಜು ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುವ ದೊಡ್ಡಯ್ಯರವರ ಮೇಲೆ ಚೌಡಪ್ಪ ಎಂಬ ಗುತ್ತಿಗೆದಾರ ಬೆಂಬಲಿಗರೊಂದಿಗೆ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.
    ನಗರಸಭೆ ೧ನೇ ವಾರ್ಡ್ ವ್ಯಾಪ್ತಿಯ ಹೆಬ್ಬಂಡಿ ಗ್ರಾಮದ ರಸ್ತೆಯೊಂದರ ಕಾಮಗಾರಿ ಗುಣಮಟ್ಟಕ್ಕೆ  ಸಂಬಂಧಿಸಿದಂತೆ ಚೌಡಪ್ಪರನ್ನು ಪ್ರಶ್ನಿಸಿದಾಗ ಈ ಘಟನೆ ನಡೆದಿದ್ದು, ಈ ಸಂಬಂಧ ನ್ಯೂಟೌನ್ ಪೊಲೀಸ್  ಠಾಣೆಯಲ್ಲಿ ದೂರು ದಾಖಲಿಸಲಾಗಿದೆ ಎಂದು ಪೌರಾಯುಕ್ತ ಮನೋಹರ್ ತಿಳಿಸಿದ್ದಾರೆ.

ವೀಕ್ ಎಂಡ್ ಲಾಕ್‌ಡೌನ್ : ನಗರ ಪ್ರದೇಶ ಸಂಪೂರ್ಣ ಬಂದ್

ಕೊರೋನಾ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಜಾರಿಗೊಳಿಸಿರುವ ವೀಕ್ ಎಂಡ್ ಲಾಕ್‌ಡೌನ್ ಪರಿಣಾಮ ಭದ್ರಾವತಿ ನಗರ ಪ್ರದೇಶದಲ್ಲಿ ಸಂಪೂರ್ಣ ಬಂದ್ ವಾತಾವರಣ ಕಂಡು ಬಂದಿತು.
     ಭದ್ರಾವತಿ, ಏ. ೨೪: ಕೊರೋನಾ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಜಾರಿಗೊಳಿಸಿರುವ ವೀಕ್ ಎಂಡ್ ಲಾಕ್‌ಡೌನ್ ಪರಿಣಾಮ ನಗರ ಪ್ರದೇಶದಲ್ಲಿ ಸಂಪೂರ್ಣ ಬಂದ್ ವಾತಾವರಣ ಕಂಡು ಬಂದಿತು.
     ಬಿ.ಎಚ್ ರಸ್ತೆ, ಸಿ.ಎನ್ ರಸ್ತೆ, ಟಿ.ಕೆ ರಸ್ತೆ, ಹೊಸಸೇತುವೆ ರಸ್ತೆ ಹಾಗು ಹೊಸಮನೆ ರಸ್ತೆ ಸೇರಿದಂತೆ ನಗರದ ಪ್ರಮುಖ ವಾಣಿಜ್ಯ ರಸ್ತೆಗಳನ್ನು ಬ್ಯಾರಿಗೇಡ್‌ಗಳಿಂದ ಬಂದ್ ಮಾಡಲಾಗಿತ್ತು.  ಅಲ್ಲಲ್ಲಿ ಪೊಲೀಸರು ವಿನಾಕಾರಣ ಸಂಚರಿಸುವ ವಾಹನ ಸವಾರರನ್ನು ತಡೆದು ಎಚ್ಚರಿಕೆ ನೀಡಿದರು.
     ಕೆಎಸ್‌ಆರ್‌ಟಿಸಿ, ಖಾಸಗಿ ಬಸ್, ಆಟೋ, ಟ್ಯಾಕ್ಸಿ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಔಷಧಿ, ದಿನಸಿ ಅಂಗಡಿ, ಹಣ್ಣು ವ್ಯಾಪಾರಸ್ಥರು ಹೊರತು ಪಡಿಸಿ ಬಹುತೇಕ ಅಂಗಡಿ ಮುಂಗಟ್ಟುಗಳು ಸಂಪೂರ್ಣವಾಗಿ ಮುಚ್ಚಿದ್ದವು. ಹಳೇನಗರದ ಬಸವೇಶ್ವರ ವೃತ್ತದಲ್ಲಿರುವ ತರಕಾರಿ, ಹೂ-ಹಣ್ಣು ಮಾರುಕಟ್ಟೆ, ರೈಲ್ವೆ ನಿಲ್ದಾಣ ಬಳಿ ಇರುವ ಮಾರುಕಟ್ಟೆಗಳನ್ನು ಸಹ ಬಂದ್ ಮಾಡಲಾಗಿತ್ತು.  ಪ್ರಮುಖ ರಸ್ತೆಗಳು ವಾಹನ ಸಂಚಾರವಿಲ್ಲದೆ ಬಿಕೋ ಎನ್ನುತ್ತಿದ್ದವು.
    ಬಹುತೇಕ ಅಂಗಡಿಮುಂಗಟ್ಟುಗಳ ವ್ಯಾಪಾರಸ್ಥರು ಸ್ವಯಂ ಪ್ರೇರಣೆಯಿಂದ ಲಾಕ್‌ಡೌನ್‌ಗೆ ಸಹಕರಿಸಿರುವುದು ಕಂಡು ಬಂದಿತು. ಕೆಲವು ವ್ಯಾಪಾರಸ್ಥರು ಸರ್ಕಾರದ ದಿಢೀರ್ ನಿರ್ಧಾರಕ್ಕೆ ಆಕ್ರೋಶ ವ್ಯಕ್ತಪಡಿಸಿದರು.
      ೨ ದಿನಗಳ ಬಹಿರಂಗ ಪ್ರಚಾರ ಲಾಕ್‌ಡೌನ್‌ಗೆ ಬಲಿ:
ನಗರಸಭೆ ೩೫ ವಾರ್ಡ್‌ಗಳ ಚುನಾವಣೆ ಮತದಾನ ಏ.೨೭ರಂದು ನಡೆಯಲಿದ್ದು,  ಬಹುತೇಕ ವಾರ್ಡ್‌ಗಳು ವಾಣಿಜ್ಯ ಪ್ರದೇಶಗಳ ವ್ಯಾಪ್ತಿಯಲ್ಲಿವೆ. ಈ ವಾರ್ಡ್‌ಗಳ ಅಭ್ಯರ್ಥಿಗಳಿಗೆ ಪ್ರಚಾರ ನಡೆಸುವುದು ಬಹುತೇಕ ಕಷ್ಟವಾಗಿದೆ. ಈ ಹಿನ್ನಲೆಯಲ್ಲಿ ಪ್ರಚಾರಕ್ಕೆ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಳ್ಳುವುದು ಅನಿವಾರ್ಯವಾಗಿದೆ. ಆದರೆ ಬಹುತೇಕ ಅಭ್ಯರ್ಥಿಗಳಿಗೆ ಸಾಮಾಜಿಕ ಜಾಲತಾಣಗಳ ಬಳಕೆ ಇನ್ನೂ ಸರಿಯಾಗಿ ಗೊತ್ತಿಲ್ಲ. ಇದರಿಂದಾಗಿ ಸಂಕಷ್ಟಕ್ಕೆ ಒಳಗಾಗಿದ್ದು, ಸಾಮಾಜಿಕ ಜಾಲತಾಣಗಳ ಬಳಕೆ ತಿಳಿದವರ ನೆರವು ಪಡೆಯುವಂತಾಗಿದೆ.
ಉಳಿದ ವಾರ್ಡ್‌ಗಳಲ್ಲಿ ಅಭ್ಯರ್ಥಿಗಳು ಮನೆ ಮನೆಗೆ ತೆರಳಿ ಮತಯಾಚನೆ ನಡೆಸುತ್ತಿದ್ದು, ಈಗಾಗಲೇ ೨-೩ ಸುತ್ತಿನ ಮತಯಾಚನೆ ನಡೆಸಿದ್ದಾರೆ. ಆದರೂ ಸಹ ಕೆಲವು ವಾರ್ಡ್‌ಗಳಲ್ಲಿ ಅಭ್ಯರ್ಥಿಗಳು ಸರಿಯಾಗಿ ಮತದಾರರನ್ನು ತಲುಪಲು ಸಾಧ್ಯವಾಗುತ್ತಿಲ್ಲ.
       ಸರ್ಕಾರದ ಆದೇಶ ದಡ್ಡತನದ ಪರಮಾವಧಿ: ಖಂಡನೆ
   ರಾಜ್ಯ ಸರ್ಕಾರ ದಿಢೀರನೆ ಎಲ್ಲಾ ಅಂಗಡಿ-ಮುಂಗಟ್ಟುಗಳನ್ನು ಮುಚ್ಚಲು ಆದೇಶಿಸಿರುವುದು ನಿಜಕ್ಕೂ ದಡ್ಡತನದ ಮರಮಾವಧಿಯಾಗಿದೆ. ರಾಜ್ಯದ ತೆರಿಗೆ ಸಂಗ್ರಹಣೆಯಲ್ಲಿ ವ್ಯಾಪಾರಸ್ಥರು ಬಹುಪಾಲನ್ನು ಹೊಂದಿದ್ದಾರೆ. ಸರ್ಕಾರ ವ್ಯಾಪಾರಸ್ಥರ ಸಂಘಟನೆಗಳೊಂದಿಗೆ ಚರ್ಚಿಸದೆ ಏಕಾಏಕಿ ಆದೇಶ ಹೊರಡಿಸಿರುವುದು ಸರಿಯಲ್ಲ. ಈಗಾಗಲೇ ವ್ಯಾಪಾರಸ್ಥರು ಕೊರೋನಾ ಹಿನ್ನಲೆಯಲ್ಲಿ ದೀರ್ಘ ಕಾಲದ ಸಂಕಷ್ಟ ಎದುರಿಸುತ್ತಿದ್ದಾರೆ. ಈ ನಡುವೆ ಇದೀಗ ಏಕಾ ಏಕಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಲು ಆದೇಶಿಸಿರುವುದು ಮತ್ತಷ್ಟು ಸಂಕಷ್ಟಕ್ಕೆ ಒಳಗಾಗುವಂತೆ ಮಾಡಿದೆ. ಅಲ್ಲದೆ ಸರ್ಕಾರ ಅಂಗಡಿ-ಮುಂಗಟ್ಟುಗಳನ್ನು ಮುಚ್ಚಿಸಲು ಪೊಲೀಸ್ ಇಲಾಖೆಯನ್ನು ಬಳಸಿಕೊಳ್ಳುತ್ತಿರುವುದು ಖಂಡನೀಯ ಎಂದ ಆಮ್ ಆದ್ಮಿ ಪಾರ್ಟಿ ಜಿಲ್ಲಾಧ್ಯಕ್ಷ ಎಚ್. ರವಿಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
      ಪ್ರಚಾರಕ್ಕೆ ಅವಕಾಶ ನೀಡಲು ಮನವಿ :
ನಗರಸಭೆ ಚುನಾವಣೆ ಹಿನ್ನಲೆಯಲ್ಲಿ ಮನೆ ಮನೆಗೆ ತೆರಳಿ ಪ್ರಚಾರ ನಡೆಸಲು ಜಿಲ್ಲಾಧಿಕಾರಿಗಳು  ಅವಕಾಶ ಕಲ್ಪಿಸಿಕೊಡಬೇಕು. ಬಹಿರಂಗ ಪ್ರಚಾರಕ್ಕೆ ಉಳಿದಿರುವುದು ಒಂದು ದಿನ ಮಾತ್ರ ಬಾಕಿ ಈ ಹಿನ್ನಲೆಯಲ್ಲಿ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ೩ನೇ ವಾರ್ಡಿನ ಕಾಂಗ್ರೆಸ್ ಅಭ್ಯರ್ಥಿ ಬೆಂಬಲಿಗರಾದ ವೆಂಕಟೇಶ್ ಮನವಿ ಮಾಡಿದ್ದಾರೆ.



ಉಪ್ಪಾರ ಸಮಾಜದವರು ಬಿಜೆಪಿ ಅಭ್ಯರ್ಥಿಗಳನ್ನು ಬೆಂಬಲಿಸಲು ಮನವಿ

ಭದ್ರಾವತಿ ನಗರಸಭೆ ಚುನಾವಣೆ ಹಿನ್ನಲೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಉಪ್ಪಾರ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಕೆ ಗಿರೀಶ್ ಉಪ್ಪಾರ ಮಾತನಾಡಿದರು.
   ಭದ್ರಾವತಿ, ಏ. ೨೪: ಈ ಬಾರಿ ನಗರಸಭೆ ಚುನಾವಣೆಯಲ್ಲಿ ಉಪ್ಪಾರ ಸಮಾಜದವರು ಬಿಜೆಪಿ ಅಭ್ಯರ್ಥಿಗಳನ್ನು ಬೆಂಬಲಿಸುವಂತೆ ಕರ್ನಾಟಕ ಉಪ್ಪಾರ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಕೆ ಗಿರೀಶ್ ಉಪ್ಪಾರ ಮನವಿ ಮಾಡಿದರು.
   ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶುಕ್ರವಾರ ಸಂಜೆ ಮನೆ ಮನೆಗೆ ತೆರಳಿ ಮತಯಾಚನೆ ನಡೆಸುವ ಸಂದರ್ಭದಲ್ಲಿ ಸಮಾಜದ ಮುಖಂಡರೆಲ್ಲರೂ ಸೇರಿ ಈ ಬಾರಿ ನಗರಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಬೆಂಬಲಿಸುವ ನಿಟ್ಟಿನಲ್ಲಿ  ಒಮ್ಮತದ ತೀರ್ಮಾನ ಕೈಗೊಳ್ಳಲಾಗಿದೆ ಎಂದರು.  
   ಬಿಜೆಪಿ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರ ಉಪ್ಪಾರ ಸಮಾಜದ ಸಾಕಷ್ಟು ಅಭಿವೃದ್ಧಿ ಕೆಲಸಗಳು ನಡೆದಿವೆ. ಪ್ರಸ್ತುತ ಸಮಾಜವನ್ನು ಗುರುತಿಸಿ ಎಲ್ಲಾ ರೀತಿಯಿಂದಲೂ ಪ್ರೋತ್ಸಾಹಿಸುತ್ತಿರುವ ಬಿಜೆಪಿ ಪಕ್ಷ ಬೆಂಬಲಿಸುವುದು ಸೂಕ್ತವಾಗಿದೆ.  ಸಮಾಜದಲ್ಲಿ ಶಾಂತಿ, ಸೌಹಾರ್ದತೆಯನ್ನು ಉಪ್ಪಾರ ಸಮಾಜ ಬಯಸುತ್ತದೆ. ಸಮಾಜದವರನ್ನು ಬೆದರಿಸಿ ಅಥವಾ ಅಮಿಷಗಳ ಮೂಲಕ ಮತ ಪಡೆಯಲು ಯತ್ನಿಸುವುದನ್ನು ಖಂಡಿಸುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರಿಗೂ ತಮ್ಮ ಹಕ್ಕನ್ನು ಚಲಾಹಿಸುವ ಅಧಿಕಾರವಿದೆ. ಮತ ಚಲಾಯಿಸುವ ಹಕ್ಕಿಗೆ ಯಾವುದೇ ರೀತಿ ಚ್ಯುತಿ ಬರಬಾರದು ಎಂದರು.
   ಸುದ್ದಿಗೋಷ್ಠಿಯಲ್ಲಿ ಉಪ್ಪಾರ ಸಮಾಜದ  ಜಿಲ್ಲಾಧ್ಯಕ್ಷ ಸತ್ಯನಾರಾಯಣ, ತಾಲೂಕು ಪ್ರಧಾನ ಕಾರ್ಯದರ್ಶಿ ಅವಿನಾಶ್, ಭಗೀರಥ ಯುವಕರ ಸಂಘದ ಜಿಲ್ಲಾಧ್ಯಕ್ಷ ಮುರುಳಿ, ನಿಗಮದ ನಿರ್ದೇಶಕ ಓಂಕಾರಪ್ಪ, ಮುಖಂಡರಾದ ಅಣ್ಣಪ್ಪ, ಅವಿನಾಶ್, ಕೆ.ಟಿ ಶ್ರೀನಿವಾಸ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Friday, April 23, 2021

ಯುವ ಕಾಂಗ್ರೆಸ್ ಕಾರ್ಯದರ್ಶಿಯಾಗಿ ಜಿ. ಸದಾಶಿವಮೂರ್ತಿ ನೇಮಕ


ಜಿ. ಸದಾಶಿವಮೂರ್ತಿ
ಭದ್ರಾವತಿ, ಏ. ೨೩:  ಯುವ ಕಾಂಗ್ರೆಸ್ ನಗರ ಘಟಕದ ಕಾರ್ಯದರ್ಶಿಯಾಗಿ ಜಿ. ಸದಾಶಿವಮೂರ್ತಿ ಅವರನ್ನು ನೇಮಕಗೊಳಿಸಲಾಗಿದೆ. ಯುವ ಘಟಕದ ನಗರ ಅಧ್ಯಕ್ಷ ಜಿ. ವಿನೋದ್‌ಕುಮಾರ್ ಮನವಿ ಮೇರೆಗೆ ಜಿಲ್ಲಾಧ್ಯಕ್ಷ ಎಚ್.ಪಿ ಗಿರೀಶ್ ನೇಮಕಗೊಳಿಸಿ ಆದೇಶ ಹೊರಡಿಸಿದ್ದು, ಪಕ್ಷದ ತತ್ವ, ಸಿದ್ದಾಂತಗಳಿಗೆ ಬದ್ಧರಾಗಿ ಪಕ್ಷವನ್ನು ಮತ್ತಷ್ಟು ಬಲಪಡಿಸುವಂತೆ ಸೂಚಿಸಲಾಗಿದೆ.
     ನಗರ ಕಾರ್ಯದರ್ಶಿಯಾಗಿ ನೇಮಕಗೊಳ್ಳಲು ಕಾರಣಕರ್ತರಾದ  ಶಾಸಕ ಬಿ.ಕೆ ಸಂಗಮೇಶ್ವರ್ ಹಾಗು ಪಕ್ಷದ ಸ್ಥಳೀಯ ಮುಖಂಡರಿಗೆ ಸದಾಶಿವಮೂರ್ತಿ ಕೃತಜ್ಞತೆ ಸಲ್ಲಿಸಿದ್ದಾರೆ. 

ಪ್ರಮುಖ ರಾಜಕೀಯ ಪಕ್ಷಗಳ ಅಭ್ಯರ್ಥಿಗಳಿಂದ ಬಿರುಸಿನ ಮತಯಾಚನೆ

ಭದ್ರಾವತಿ ನಗರಸಭೆ ವಾರ್ಡ್ ನಂ.೨೩ರಲ್ಲಿ ಹಾಲಿ ನಗರಸಭಾ ಸದಸ್ಯ ವೆಂಕಟಯ್ಯ ಶಾಸಕ ಬಿ.ಕೆ ಸಂಗಮೇಶ್ವರ್ ಸಹೋದರ ಕಾಂಗ್ರೆಸ್ ಅಭ್ಯರ್ಥಿ ಬಿ.ಕೆ ಮೋಹನ್ ಪರವಾಗಿ ಮತಯಾಚನೆ ನಡೆಸಿದರು.

    ಭದ್ರಾವತಿ, ಏ. ೨೩: ನಗರಸಭೆ ೩೫ ವಾರ್ಡ್‌ಗಳಲ್ಲಿ ಅಭ್ಯರ್ಥಿಗಳಿಂದ ಚುನಾವಣಾ ಪ್ರಚಾರ ಭರದಿಂದ ಸಾಗುತ್ತಿದ್ದು, ಪ್ರಮುಖ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಪಕ್ಷದ ಪ್ರಮುಖರೊಂದಿಗೆ ಮನೆ ಮನೆಗೆ ತೆರಳಿ ಮತಯಾಚನೆ ನಡೆಸುತ್ತಿದ್ದಾರೆ.
     ನಗರ ಪ್ರದೇಶಕ್ಕೆ ಹೊಂದಿಕೊಂಡಿರುವ ಇಂದಿಗೂ ಗ್ರಾಮೀಣ ಪರಿಸರ ಕಂಡು ಬರುವ ತಿಮ್ಲಾಪುರ ಮತ್ತು ಡಿ.ಜಿ ಹಳ್ಳಿ, ಬುಳ್ಳಾಪುರ ೨ನೇ ಡಿವಿಜನ್  ವ್ಯಾಪ್ತಿಯನ್ನು ಒಳಗೊಂಡಿರುವ ವಾರ್ಡ್ ನಂ.೨೩ರಲ್ಲಿ ಒಟ್ಟು ೩೬೮೭ ಮತದಾರರಿದ್ದಾರೆ. ಲಂಬಾಣಿ, ಒಕ್ಕಲಿಗ, ಲಿಂಗಾಯಿತ, ಕುರುಬ ಸಮುದಾಯದವರು ಹೆಚ್ಚಾಗಿದ್ದು, ಈ ವಾರ್ಡ್‌ನಲ್ಲಿ ಈ ಬಾರಿ ಒಟ್ಟು ೫ ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ತಾಲೂಕು ಛಲವಾದಿಗಳ(ಪರಿಶಿಷ್ಟ) ಸಮಾಜದ ಮಾಜಿ ಅಧ್ಯಕ್ಷ, ಹಾಲಿ ನಗರಸಭಾ ಸದಸ್ಯ ಬದರಿನಾರಾಯಣ ಅವರ ಪತ್ನಿ ಪ್ರೇಮಾರನ್ನು ಕಣಕ್ಕಿಳಿಸಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಮುಖಂಡ ಉಮೇಶ್‌ನಾಯ್ಕ್‌ರವರು ಪತ್ನಿ ಎಚ್. ಯಶೋಧಬಾಯಿ ಅವರನ್ನು, ಬಿಜೆಪಿ ಪಕ್ಷದಿಂದ ಮಾಜಿ ನಗರಸಭಾ ಸದಸ್ಯ ಕೆ. ರಮೇಶ್‌ರವರು ಪತ್ನಿ ಸುಮಾರನ್ನು ಕಣಕ್ಕಿಳಿಸಿದ್ದಾರೆ. ಸ್ನೇಹ ಜೀವಿ ಬಳಗದ ಸದಸ್ಯೆ ಎಂ.ಬಿ ಶಾಲಿನಿ ಸೇರಿದಂತೆ ಇಬ್ಬರು ಪಕ್ಷೇತರರು ಸ್ಪರ್ಧೆಯಲ್ಲಿದ್ದಾರೆ. ಈ ವಾರ್ಡ್‌ನಲ್ಲಿ ಕಳೆದ ಬಾರಿ ಜೆಡಿಎಸ್ ಪಕ್ಷದಿಂದ ಮಹಾದೇವಿ ಆಯ್ಕೆಯಾಗಿದ್ದರು.  ಈ ವಾರ್ಡ್‌ನಲ್ಲೂ ಅಭ್ಯರ್ಥಿಗಳಿಂದ ಬಿರುಸಿನ ಪ್ರಚಾರ ನಡೆಯುತ್ತಿದ್ದು, ಬೆಳಿಗ್ಗೆಯಿಂದ ಸಂಜೆವರೆಗೂ ಮನೆ ಮನೆಗೆ ತೆರಳಿ ಮತಯಾಚನೆ ನಡೆಸುತ್ತಿದ್ದಾರೆ.
    ದಲಿತರು, ಕೂಲಿಕಾರ್ಮಿಕರು, ಶ್ರಮಜೀವಿಗಳು ಹೆಚ್ಚಾಗಿರುವ ಉಜ್ಜನಿಪುರ ವ್ಯಾಪ್ತಿಯನ್ನು ಹೊಂದಿರುವ ವಾರ್ಡ್ ನಂ.೨೨ರಲ್ಲಿ ಒಟ್ಟು ೨೮೭೭ ಮತದಾರರಿದ್ದಾರೆ. ಈ ವಾರ್ಡ್‌ನಲ್ಲಿ ಈ ಬಾರಿ ಒಟ್ಟು ೪ ಅಭ್ಯರ್ಥಿಗಳು ಕಣದಲ್ಲಿದ್ದಾರೆ.
     ಕಾಂಗ್ರೆಸ್ ಅಭ್ಯರ್ಥಿಯಾಗಿ ಶಾಸಕ ಬಿ.ಕೆ ಸಂಗಮೇಶ್ವರ್ ಸಹೋದರ, ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್ ಸ್ಪರ್ಧಿಸಿರುವ ಕಾರಣ ಈ ವಾರ್ಡ್ ಹೆಚ್ಚು ಗಮನ ಸೆಳೆಯುತ್ತಿದೆ. ಉಳಿದಂತೆ ಮರಾಠ ಸಮುದಾಯಕ್ಕೆ ಸೇರಿದ ಬಿಜೆಪಿ ಪಕ್ಷದ ಸಾಮಾನ್ಯ ಕಾರ್ಯಕರ್ತ ಭರತ್‌ರಾವ್ ಬಿಜೆಪಿ ಅಭ್ಯರ್ಥಿಯಾಗಿದ್ದು, ಬೋರೇಗೌಡ ಜೆಡಿಎಸ್ ಅಭ್ಯರ್ಥಿಯಾಗಿದ್ದಾರೆ. ಆನಂದರಾವ್ ಪಕ್ಷೇತರ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಈ ವಾರ್ಡ್‌ನಲ್ಲಿ ಕಳೆದ ೨ ಬಾರಿ ಕಾಂಗ್ರೆಸ್ ಪಕ್ಷದಿಂದ ವೆಂಕಟಯ್ಯ ಆಯ್ಕೆಯಾಗಿದ್ದರು. ಈ ವಾರ್ಡ್‌ನಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದಾರೆ. ಈ ಬಾರಿ ಬಿ.ಕೆ ಮೋಹನ್‌ರವರಿಗೆ ಸ್ಪರ್ಧೆಗೆ ಅವಕಾಶ ಮಾಡಿಕೊಟ್ಟಿದ್ದಾರೆ.   ಈ ವಾರ್ಡ್‌ನಲ್ಲೂ ಅಭ್ಯರ್ಥಿಗಳಿಂದ ಬಿರುಸಿನ ಪ್ರಚಾರ ನಡೆಯುತ್ತಿದ್ದು, ಬೆಳಿಗ್ಗೆಯಿಂದ ಸಂಜೆವರೆಗೂ ಮನೆ ಮನೆಗೆ ತೆರಳಿ ಮತಯಾಚನೆ ನಡೆಸುತ್ತಿದ್ದಾರೆ.


ಭದ್ರಾವತಿ ನಗರಸಭೆ ವಾರ್ಡ್ ನಂ.೩ರ ಕಾಂಗ್ರೆಸ್ ಅಭ್ಯರ್ಥಿ ಜಾರ್ಜ್ ಶುಕ್ರವಾರ ತಮ್ಮ ವಾರ್ಡ್ ವ್ಯಾಪ್ತಿಯ ಚಾಮೇಗೌಡ ಏರಿಯಾದಲ್ಲಿ ಮತಯಾಚನೆ ನಡೆಸಿದರು.

    ಕೂಲಿ ಕಾರ್ಮಿಕರು ಹೆಚ್ಚಾಗಿ ವಾಸಿಸುತ್ತಿರುವ ಎಂಪಿಎಂ ಕಾರ್ಖಾನೆ ವಸತಿಗೃಹಗಳ ನಡುವಿನ ೬ ಮತ್ತು ೮ನೇ ವಾರ್ಡ್ ಒಳಗೊಂಡಿರುವ ವಾರ್ಡ್ ನಂ.೨೧ರಲ್ಲಿ  ಒಟ್ಟು ೨೫೯೦ ಮತದಾರರಿದ್ದಾರೆ. ಈ ವಾರ್ಡ್‌ನಲ್ಲಿ ಈ ಬಾರಿ ಒಟ್ಟು ೩ ಮಂದಿ ಕಣದಲ್ಲಿದ್ದಾರೆ.
    ಈ ಬಾರಿ ವಿಶೇಷತೆ ಎಂದರೆ ಪ್ರಮುಖ ಪಕ್ಷಗಳಾದ ಜೆಡಿಎಸ್ ಮತ್ತು ಬಿಜೆಪಿ ಅತ್ತೆ-ಸೊಸೆಯನ್ನು ಕಣಕ್ಕಿಳಿಸಿವೆ. ಸಮಾಜ ಸೇವಕ, ಜೆಡಿಎಸ್ ಮುಖಂಡ ಅಶೋಕ್‌ಕುಮಾರ್‌ರವರು ತಮ್ಮ ತಾಯಿ ವಿಜಯ ಅವರನ್ನು ಕಣಕ್ಕಿಳಿಸಿದ್ದಾರೆ. ಇವರ ಎದುರಾಳಿಯಾಗಿ ೨ನೇ ಮಗ ಮಧುಸೂದನ್ ತಮ್ಮ ಪತ್ನಿ ಅನುಷಾ ಅವರನ್ನು ಬಿಜೆಪಿ ಪಕ್ಷದಿಂದ ಕಣಕ್ಕಿಳಿಸಿದ್ದಾರೆ. ಇವರಿಬ್ಬರ ಮಧ್ಯೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಜೆ. ರಮ್ಯ ಸ್ಪರ್ಧಿಸಿದ್ದಾರೆ.  ಈ ವಾರ್ಡ್‌ನಲ್ಲಿ ಕಳೆದ ೨ ಬಾರಿ ಜೆಡಿಎಸ್ ಪಕ್ಷದಿಂದ ಬದರಿನಾರಾಯಣ ಆಯ್ಕೆಯಾಗಿದ್ದರು. ಈ ವಾರ್ಡ್‌ನಲ್ಲೂ ಅಭ್ಯರ್ಥಿಗಳಿಂದ ಬಿರುಸಿನ ಪ್ರಚಾರ ನಡೆಯುತ್ತಿದ್ದು, ಬೆಳಿಗ್ಗೆಯಿಂದ ಸಂಜೆವರೆಗೂ ಮನೆ ಮನೆಗೆ ತೆರಳಿ ಮತಯಾಚನೆ ನಡೆಸುತ್ತಿದ್ದಾರೆ.

ಸಮಾಜವಾದಿ ರಾಜಕಾರಣ ಬೆಂಬಲಿಸಿ : ಮಹಿಮಾ ಜೆ. ಪಟೇಲ್

ಜನತಾದಳ(ಸಂಯುಕ್ತ) ಕರ್ನಾಟಕ ಪಕ್ಷದ ರಾಜ್ಯಾಧ್ಯಕ್ಷ, ಮಾಜಿ ಶಾಸಕ ಮಹಿಮಾ ಜೆ. ಪಟೇಲ್ ಭದ್ರಾವತಿ ನಗರಸಭೆ  ೩೨ನೇ ವಾರ್ಡಿನ ಜೆಡಿಯು ಬೆಂಬಲಿತ ಅಭ್ಯರ್ಥಿ ದಿವ್ಯಶ್ರೀ ಶಶಿಕುಮಾರ್ ಗೌಡ ಪರವಾಗಿ ಮತಯಾಚನೆ ನಡೆಸಿದರು.
ಭದ್ರಾವತಿ, ಏ. ೨೩: ಸಮಾಜವಾದಿ ರಾಜಕಾರಣ ಹುಟ್ಟಿದ ಜಿಲ್ಲೆಯಲ್ಲಿ ಸಮಾಜ ವಾದಕ್ಕೆ ನೆಲೆ ಕಲ್ಪಿಸಿಕೊಟ್ಟ ನಗರ ಭದ್ರಾವತಿಯಾಗಿದ್ದು, ಇಂತಹ ನೆಲದಲ್ಲಿ ಪ್ರಸ್ತುತ ರಾಜಕಾರಣದಲ್ಲಿ ಸಮಾಜವಾದವನ್ನು ಎತ್ತಿ ಹಿಡಿಯಬೇಕೆಂಬ ಮನೋಭಾವನೆಯೊಂದಿಗೆ ನಗರಸಭೆ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಜನತಾದಳ(ಸಂಯುಕ್ತ) ಕರ್ನಾಟಕ ಪಕ್ಷದ ರಾಜ್ಯಾಧ್ಯಕ್ಷ, ಮಾಜಿ ಶಾಸಕ ಮಹಿಮಾ ಜೆ. ಪಟೇಲ್ ಮನವಿ ಮಾಡಿದರು.
    ಅವರು ಶುಕ್ರವಾರ ನಗರಸಭೆ  ೩೨ನೇ ವಾರ್ಡಿನ ಜೆಡಿಯು ಬೆಂಬಲಿತ ಅಭ್ಯರ್ಥಿ ದಿವ್ಯಶ್ರೀ ಶಶಿಕುಮಾರ್ ಗೌಡ ಪರವಾಗಿ ಮತಯಾಚನೆಯಲ್ಲಿ ಪಾಲ್ಗೊಂಡು ಮಾತನಾಡಿದರು.
    ರಾಜಕಾರಣದಲ್ಲಿ ಸಮಾಜವಾದ ಉಳಿಯಬೇಕು. ಎಲ್ಲರೂ ಸಮಾನರು, ಎಲ್ಲರೂ ಸರ್ಕಾರದಲ್ಲಿ ಸಮಾನ ಭಾಗಿಗಳು, ಈ ನಿಟ್ಟಿನ ಪರಿಕಲ್ಪನೆಯಲ್ಲಿ ಪ್ರಾಮಾಣಿಕ, ಪರಿಶುದ್ಧ ರಾಜಕಾರಣಕ್ಕೆ ಮುನ್ನುಡಿ ಬರೆದ ಜಿಲ್ಲೆಯಲ್ಲಿ ಅಂದು ಭದ್ರಾವತಿ ವಿಧಾನಸಭಾ ಕ್ಷೇತ್ರದಿಂದ ಖುದ್ದೂಸ್ ಅನ್ವರ್‌ರವರು ಸ್ಪರ್ಧಿಸಿ ಆಯ್ಕೆಯಾಗಿ ಬಂದಿದ್ದರು. ಈ ಹಿನ್ನಲೆಯಲ್ಲಿ ಈ ನಗರದಲ್ಲಿ ಸಮಾಜವಾದ ರಾಜಕಾರಣದ ಪರಿಕಲ್ಪನೆ ಇಂದಿಗೂ ಜೀವಂತವಾಗಿ ಉಳಿದುಕೊಂಡಿದೆ ಎಂಬುದು ನನ್ನ ಆಶಯವಾಗಿದೆ.  ಸಮಾಜವಾದಿ ಗುಣಗಳನ್ನು ರೂಢಿಸಿಕೊಂಡಿರುವ ಪಕ್ಷದ ಶಶಿಕುಮಾರ್ ಗೌಡರವರು ಇದೀಗ ನಗರಸಭೆಗೆ ಪತ್ನಿ ದಿವ್ಯಶ್ರೀಯವರನ್ನು ಕಣಕ್ಕಿಳಿಸಿದ್ದು, ಇವರನ್ನು ಬೆಂಬಲಿಸುವಂತೆ ಮನವಿ ಮಾಡಿದರು.
     ವಾರ್ಡಿನ ಪ್ರಮುಖ ರಸ್ತೆಗಳಲ್ಲಿ ಪಟೇಲ್‌ರವರು ಕರಪತ್ರಗಳನ್ನು ವಿತರಿಸಿ ಮತಯಾಚನೆ ನಡೆಸಿದರು. ಅಭ್ಯರ್ಥಿ ದಿವ್ಯಶ್ರೀ, ಮುಖಂಡ ಶಶಿಕುಮಾರ್ ಗೌಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.