Friday, June 4, 2021

ಸಾರಿಗೆ ಸಂಸ್ಥೆಗೆ ‘ಶ್ರೀ ದೇವರ ದಾಸಿಮಯ್ಯ’ ಹೆಸರು ನಾಮಕರಣಗೊಳಿಸಿ : ಎಚ್.ಎಸ್ ಕುಮಾರಸ್ವಾಮಿ ಮನವಿ

ಎಚ್.ಎಸ್ ಕುಮಾರಸ್ವಾಮಿ
     ಭದ್ರಾವತಿ, ಜೂ. ೪: ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಹೊಂದಿದ್ದ ಲೊಗೋ ಮತ್ತು ಟ್ರೇಡ್ ಮಾರ್ಕ್ ಕೇರಳ ರಾಜ್ಯದ ಪಾಲಾದ ಹಿನ್ನೆಲೆಯಲ್ಲಿ ಸಂಸ್ಥೆಗೆ ಹೊಸದಾಗಿ ಪ್ರಪ್ರಥಮ ಆದ್ಯ ವಚನಕಾರ, ನೇಕಾರರ ಸಂತ 'ಶ್ರೀ ದೇವರ ದಾಸಿಮಯ್ಯ' ನವರ ಹೆಸರನ್ನು ನಾಮಕರಣ ಮಾಡುವಂತೆ ಕರ್ನಾಟಕ ನೇಕಾರರ ರಕ್ಷಣಾ ವೇದಿಕೆ ಹಾಗು ದೇವಾಂಗ ಪರಿಷತ್ ಸಂಘದ ರಾಜ್ಯಾಧ್ಯಕ್ಷ ಎಚ್.ಎಸ್ ಕುಮಾರಸ್ವಾಮಿ ಮನವಿ ಮಾಡಿದ್ದಾರೆ.
   ಟ್ರೇಡ್ ಮಾರ್ಕ್ ರಿಜಿಸ್ಟ್ರಾರ್ ನೀಡಿರುವ ತೀರ್ಪು ಕುರಿತು ರಾಜ್ಯ ಸರ್ಕಾರ ಇನ್ನೂ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಒಂದು ವೇಳೆ ಈ ನಿಟ್ಟಿನಲ್ಲಿ ಸರ್ಕಾರ ಮುಂದಿನ ದಿನಗಳಲ್ಲಿ ಯಾವುದೇ ರೀತಿ ಹೋರಾಟ ನಡೆಸದೆ ತಟಸ್ಥವಾಗಿ ಉಳಿದ್ದಲ್ಲಿ ಹಾಗು ಸಂಸ್ಥೆಗೆ ಹೊಸದಾಗಿ ಹೆಸರನ್ನು ನಾಮಕರಣ ಮಾಡುವುದಾದರೆ 'ಶ್ರೀ ದೇವರ ದಾಸಿಮಯ್ಯ'ನವರ ಹೆಸರನ್ನು ಪರಿಗಣಗೆ ತೆಗೆದುಕೊಳ್ಳಬೇಕು.
   ಶ್ರೀ ದೇವರ ದಾಸಿಮಯ್ಯನವರು ಆದ್ಯ ವಚನಕಾರರಾಗಿ ಸಮಾಜಕ್ಕೆ ನೀಡಿರುವ ಕೊಡುಗೆ ಅಪಾರವಾಗಿದ್ದು, ಈ ಹಿನ್ನಲೆಯಲ್ಲಿ ನಾಡಿನ ಸಮಸ್ತ ನೇಕಾರರ ಪರವಾಗಿ ಅವರ ಹೆಸರನ್ನು ಸಂಸ್ಥೆಗೆ ನಾಮಕರಣ ಮಾಡಬೇಕೆಂದು ಸಾರಿಗೆ ಸಚಿವರಾದ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರಿಗೆ ಸಲ್ಲಿಸಿರುವ ಪತ್ರದಲ್ಲಿ ಕುಮಾರಸ್ವಾಮಿ ಮನವಿ ಮಾಡಿದ್ದಾರೆ.    


ಲಸಿಕಾ ಕೇಂದ್ರದ ಬಳಿ ಮಧ್ಯವರ್ತಿಗಳ ಹಾವಳಿ : ಹೆಚ್ಚಿನ ಬೆಲೆಗೆ ಲಸಿಕೆ ಮಾರಾಟ ಆರೋಪ

ಭದ್ರಾವತಿ ಕಾಗದನಗರದ ಸರ್ಕಾರಿ ಪಶ್ಚಿಮ ಮಾದರಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ತೆರೆಯಲಾಗಿರುವ ಕೊರೋನಾ ಲಸಿಕಾ ಕೇಂದ್ರದಲ್ಲಿ ಜನಸಂದಣಿ ಉಂಟಾಗಿರುವುದು.
   ಭದ್ರಾವತಿ, ಜೂ. ೪: ಕಾಗದ ನಗರದ ಸರ್ಕಾರಿ ಪಶ್ಚಿಮ ಮಾದರಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ತೆರೆಯಲಾಗಿರುವ ಕೊರೋನಾ ಲಸಿಕಾ ಕೇಂದ್ರದಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದ್ದು, ಅರ್ಹ ಫಲಾನುಭವಿಗಳಿಗೆ ಲಭಿಸಬೇಕಾದ ಲಸಿಕೆ ಅಕ್ರಮವಾಗಿ ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿದೆ.
    ವಾರ್ಡ್ ೧೯, ೨೦, ೨೧ ಮತ್ತು ೨೨ರ ವ್ಯಾಪ್ತಿಯ ಸುರಗಿತೋಪು, ಕಾಗದನಗರ, ಜೆಪಿಎಸ್ ಕಾಲೋನಿ, ಆನೇಕೊಪ್ಪ ಮತ್ತು ಉಜ್ಜನಿಪುರ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳ ನಿವಾಸಿಗಳಿಗೆ ಅನುಕೂಲವಾಗುವಂತೆ ಇತ್ತೀಚೆಗೆ ಸರ್ಕಾರಿ ಪಶ್ಚಿಮ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಲಸಿಕಾ ಕೇಂದ್ರ ತೆರೆಯಲಾಗಿದೆ. ಆದರೆ ಈ ಲಸಿಕಾ ಕೇಂದ್ರದಲ್ಲಿ ಅರ್ಹ ಫಲಾನುಭವಿಗಳಿಗೆ ಲಸಿಕೆ ಲಭ್ಯವಾಗುತ್ತಿಲ್ಲ. ಲಸಿಕಾ ಕೇಂದ್ರದ ಬಳಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದ್ದು, ಲಸಿಕೆ ಹಾಕಿಸಿಕೊಳ್ಳಲು ಬರುವವರನ್ನು ಹೊರಭಾಗದಲ್ಲಿಯೇ ತಡೆದು ಲಸಿಕೆಗೆ ಸಂಬಂಧಿಸಿದಂತೆ ಟೋಕನ್ ನೀಡಿ ವಾಪಾಸು ಕಳುಹಿಸಲಾಗುತ್ತಿದೆ. ನಿಗದಿಯಾದ ದಿನದಂದು ಬೆಳಿಗ್ಗೆಯಿಂದ ಸಂಜೆವರೆಗೂ ಸಾಲುಗಟ್ಟಿ ನಿಂತರೂ ಸಹ ಲಸಿಕೆ ಮುಗಿದು ಹೋಗಿದೆ ಎಂದು ವಾಪಾಸು ಕಳುಹಿಸಲಾಗುತ್ತಿದೆ. ಮಂಜೂರಾದ ಲಸಿಕೆಗಳಲ್ಲಿ ಅರ್ಧದಷ್ಟು ಲಸಿಕೆಗಳನ್ನು ಮಧ್ಯವರ್ತಿಗಳು ತಮಗೆ ಬೇಕಾದವರಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಿಕೊಳ್ಳುತ್ತಿದ್ದಾರೆಂಬ ಆರೋಪಗಳು ಕೇಳಿ ಬರುತ್ತಿವೆ.
    ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿದ ಯುವ ಮುಖಂಡ ಅಶೋಕ್‌ಕುಮಾರ್, ಲಸಿಕಾ ಕೇಂದ್ರದಲ್ಲಿ ಅರ್ಹ ಫಲಾನುಭವಿಗಳಿಗೆ ಲಸಿಕೆ ಲಭ್ಯವಾಗದಿರುವುದು ವಿಷಾದನೀಯ ಸಂಗತಿಯಾಗಿದೆ. ಲಸಿಕೆ ಸಿಗದೆ ವಯೋವೃದ್ಧರು, ಬಡವರ್ಗದವರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಸಿಬ್ಬಂದಿಗಳು ಮಾಡಬೇಕಾದ ಕೆಲಸಗಳನ್ನು ಪಕ್ಷವೊಂದರ ಕಾರ್ಯಕರ್ತರು ಮಧ್ಯವರ್ತಿಗಳಾಗಿ ಮಾಡುತ್ತಿದ್ದಾರೆ. ಹೆಚ್ಚು ಹಣ ನೀಡುವವರಿಗೆ ಹಾಗು ಈ ವ್ಯಾಪ್ತಿಯ ಹೊರತಾದ ಹೊರಗಿನಿಂದ ಬಂದವರಿಗೆ ಮತ್ತು ಪ್ರಭಾವಿಗಳಿಗೆ ಮಾರಾಟ ಮಾಡುತ್ತಿದ್ದಾರೆ. ಈ ಸಂಬಂಧ ಸಾಕಷ್ಟು ಜನರಿಂದ ದೂರುಗಳು ಬಂದಿವೆ.
    ಈ ಲಸಿಕಾ ಕೇಂದ್ರದಲ್ಲಿ ಜನ ಸಂದಣಿ ಅಧಿಕವಾಗುತ್ತಿದೆ. ನೂಕು, ತಳ್ಳಾಟ ಹೆಚ್ಚಾಗುತ್ತಿದೆ. ಇದರಿಂದಾಗಿ ಕೊರೋನಾ ಸೋಂಕು ಈ ವ್ಯಾಪ್ತಿಯಲಿ ಇನ್ನೂ ಹೆಚ್ಚಾಗಿ ಹರಡುವ ಭೀತಿ ಎದುರಾಗಿದೆ. ಈ ಭಾಗದ ಎಲ್ಲಾ ನಿವಾಸಿಗಳಿಗೂ ಅನುಕೂಲವಾಗಬೇಕಾದರೆ ಈ ಕೇಂದ್ರವನ್ನು ಎಂಪಿಎಂ ಆಸ್ಪತ್ರೆಗೆ ಸ್ಥಳಾಂತರಿಸುವುದು ಸೂಕ್ತ. ಎಂಪಿಎಂ ಆಸ್ಪತ್ರೆ ಪಕ್ಕದಲ್ಲಿಯೇ ಪೊಲೀಸ್ ಠಾಣೆ ಇರುವ ಕಾರಣ ಯಾವುದೇ ಅಕ್ರಮಗಳು, ಗಲಾಟೆಗಳು ನಡೆಯುವ ಸಾಧ್ಯತೆ ಕಡಿಮೆ. ಅಲ್ಲದೆ ಜನಸಂದಣಿ ಉಂಟಾದ್ದಲ್ಲಿ ತಕ್ಷಣ ಪೊಲೀಸರು ಸ್ಥಳಕ್ಕೆ ಆಗಮಿಸಿ ನಿಯಂತ್ರಣಕ್ಕೆ ತರಲು ಸಾಧ್ಯ. ಈ ಎಲ್ಲಾ ವಿಚಾರಗಳನ್ನು ತಾಲೂಕು ಆಡಳಿತ ಹಾಗು ಆರೋಗ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದರು.
    ಜಿಲ್ಲಾಡಳಿತ ತಕ್ಷಣ ಈ ಸಂಬಂಧ ಉಂಟಾಗುತ್ತಿರುವ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಗಮನ ಹರಿಸಬೇಕು. ಎಲ್ಲಾ ಅರ್ಹ ಫಲಾನುಭವಿಗಳಿಗೂ ಲಸಿಕೆ ಲಭ್ಯವಾಗುವಂತೆ ಅಗತ್ಯ ಕ್ರಮ ಕೈಗೊಳ್ಳಬೇಕೆಂಬುದು ಈ ಭಾಗದ ನಿವಾಸಿಗಳ ಒತ್ತಾಯವಾಗಿದೆ.

ಭದ್ರಾವತಿಯಲ್ಲಿ ೧೧೭ ಸೋಂಕು ಪತ್ತೆ : ೪ ಬಲಿ

     ಭದ್ರಾವತಿ, ಜೂ. ೪: ತಾಲೂಕಿನಲ್ಲಿ ಶುಕ್ರವಾರ ಒಟ್ಟು ೧೧೭ ಕೊರೋನಾ ಸೋಂಕು ಪತ್ತೆಯಾಗಿದ್ದು, ಒಂದೇ ದಿನ ೪ ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.
   ಒಟ್ಟು ೫೩೯ ಮಂದಿಯ ಮಾದರಿ ಸಂಗ್ರಹಿಸಲಾಗಿದ್ದು, ೧೧೭ ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಕೇವಲ ೯೦ ಮಂದಿ ಗುಣಮುಖರಾಗಿ ಆಸ್ಪತ್ರೆಗಳಿಂದ ತೆರಳಿದ್ದಾರೆ. ಇದುವರೆಗೂ ಒಟ್ಟು ೫೬೩೨ ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, ಪೈಕಿ ೪೬೨೭ ಮಂದಿ ಗುಣಮುಖರಾಗಿದ್ದಾರೆ. ಪ್ರಸ್ತುತ ೧೦೦೫ ಸಕ್ರಿಯ ಪ್ರಕರಣಗಳು ಬಾಕಿ ಉಳಿದಿದ್ದು, ಇದುವರೆಗೂ ೧೩೮ ಮಂದಿ ಮೃತಪಟ್ಟಿದ್ದಾರೆ.
    ಒಟ್ಟು ೪೮೬ ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ನಗರ ಭಾಗದಲ್ಲಿ ಒಟ್ಟು ೫೨ ಕಂಟೈನ್‌ಮೆಂಟ್ ಜೋನ್‌ಗಳಿವೆ. ಈ ಪೈಕಿ ೩೯ ತೆರವುಗೊಳಿಸಲಾಗಿದೆ. ಉಳಿದಂತೆ ಗ್ರಾಮಾಂತರ ಭಾಗದಲ್ಲಿ ೨೯ ಕಂಟೈನ್‌ಮೆಂಟ್ ಜೋನಗಳಿದ್ದು, ಪೈಕಿ ೮ ಜೋನ್ ತೆರವುಗೊಳಿಸಲಾಗಿದೆ.

ಸಂಚಾರಿ ಪೊಲೀಸ್ ಠಾಣಾಧಿಕಾರಿ ರಮೇಶ್ ನಿಧನ

ಸಂಚಾರಿ ಪೊಲೀಸ್ ಠಾಣಾಧಿಕಾರಿ ಕೆ.ಬಿ ರಮೇಶ್
ಭದ್ರಾವತಿ, ಜೂ. ೪: ನಗರದ ಸಂಚಾರಿ ಪೊಲೀಸ್ ಠಾಣಾಧಿಕಾರಿ-೨ ಕೆ.ಬಿ ರಮೇಶ್(೫೯) ಶುಕ್ರವಾರ ಮಧ್ಯಾಹ್ನ ನಿಧನ ಹೊಂದಿದರು.
   ಪತ್ನಿ, ಓರ್ವ ಪುತ್ರ ಹೊಂದಿದ್ದರು.  ರಮೇಶ್ ಮೇ.೧೪ರಂದು ಅನಾರೋಗ್ಯಕ್ಕೆ ತುತ್ತಾಗಿ ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದರು. ಇವರಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡ ಹಿನ್ನಲೆಯಲ್ಲಿ ಶಿವಮೊಗ್ಗ ಮೆಗ್ಗಾನ್  ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ರಮೇಶ್ ಕರ್ತವ್ಯದಿಂದ ನಿವೃತ್ತಿ ಹೊಂದಲು ೧ ತಿಂಗಳು ಬಾಕಿ ಇತ್ತು. ಇವರ ನಿಧನಕ್ಕೆ ಸಂಚಾರಿ ಪೊಲೀಸ್ ಠಾಣಾಧಿಕಾರಿ ಕವಿತಾ ಹಾಗು ಸಿಬ್ಬಂದಿಗಳು ಸಂತಾಪ ಸೂಚಿಸಿದ್ದಾರೆ.

ಅಕ್ರಮ ಗಾಂಜಾ ಸಾಗಾಟ : ಭದ್ರಾವತಿ ಅನ್ವರ್ ಕಾಲೋನಿಯ ೩ ಯುವಕರು ಸೆರೆ

ಬಳ್ಳಾರಿ ಜಿಲ್ಲಾ ಪೊಲೀಸರ ಕಾರ್ಯಾಚರಣೆ : ೨.೮೦ ಲಕ್ಷ ರು. ಮೌಲ್ಯದ ೨೮ ಕೆ.ಜಿ ಗಾಂಜಾ ವಶ


ಆಂಧ್ರ ಪ್ರದೇಶದಿಂದ ಶಿವಮೊಗ್ಗಕ್ಕೆ ಅಕ್ರಮ ಗಾಂಜಾ ಸಾಗಾಟದಲ್ಲಿ ತೊಡಗಿದ್ದ ಭದ್ರಾವತಿ ಅನ್ವರ್‌ಕಾಲೋನಿಯ ೩ ಯುವಕರನ್ನು ಬಳ್ಳಾರಿ ಜಿಲ್ಲಾ ಪೊಲೀಸರು ಬಂಧಿಸಿರುವುದು.
    ಭದ್ರಾವತಿ, ಜೂ. ೪: ಇತ್ತೀಚೆಗೆ ಜೈ ಭೀಮಾ ನಗರದ ನಿವಾಸಿ, ನಗರಸಭೆ ಗುತ್ತಿಗೆ ಪೌರನೌಕರ ಸುನಿಲ್ ಎಂಬಾತನನ್ನು ಕ್ಷುಲ್ಲಕ ಕಾರಣಕ್ಕೆ ಯುವಕರ ಗುಂಪೊಂದು ಹತ್ಯೆ ಮಾಡಿತ್ತು. ಈ ಹತ್ಯೆಗೆ ಅಕ್ರಮ ಗಾಂಜಾ ಸೇವನೆಯೇ ಕಾರಣ ಎಂಬ ಆರೋಪಗಳು ವ್ಯಾಪಕವಾಗಿ ಕೇಳಿ ಬರುತ್ತಿತ್ತು. ಇದಕ್ಕೆ ಪುಷ್ಟಿ ನೀಡುವಂತೆ ಇದೀಗ ಅಕ್ರಮ ಗಾಂಜಾ ಸಾಗಾಟದಲ್ಲಿ ತೊಡಗಿದ್ದ ೩ ಯುವಕರನ್ನು ಬಳ್ಳಾರಿ ಜಿಲ್ಲಾ ಪೊಲೀಸರು ಬಂಧಿಸಿರುವ ಘಟನೆ ಬೆಳಕಿಗೆ ಬಂದಿದೆ.
    ನಗರಸಭೆ ವಾರ್ಡ್ ನಂ.೭ರ ಅನ್ವರ್ ಕಾಲೋನಿ ನಿವಾಸಿಗಳಾದ ಅಶ್ಫಕ್ ಖಾನ್(೨೩), ತೌಸೀಪ್ ಖಾನ್(೨೧) ಮತ್ತು ಸೈಯದ್ ಅಕ್ಸರ್(೨೨) ೩ ಯುವಕರನ್ನು ಬಂಧಿಸಿ ೨.೮೦ ಲಕ್ಷ ರು. ಮೌಲ್ಯದ ೨೮ ಕೆ.ಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಕಾರಿನಲ್ಲಿ ಆಂಧ್ರ ಪ್ರದೇಶದಿಂದ ಶಿವಮೊಗ್ಗಕ್ಕೆ ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದಾಗ ಸಿಕ್ಕಿ ಬಿದ್ದಿದ್ದಾರೆ.
    ನಗರಸಭೆ ಗುತ್ತಿಗೆ ಪೌರ ನೌಕರ ಸುನಿಲ್ ಸೆಮಿ ಲಾಕ್‌ಡೌನ್ ಹಿನ್ನಲೆಯಲ್ಲಿ ಹಾಗು ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಅನವಶ್ಯಕವಾಗಿ ತಿರುಗಾಡುತ್ತಿದ್ದ ಅನ್ವರ್ ಕಾಲೋನಿ ಭಾಗದ ಯುವಕರಿಬ್ಬರಿಗೆ ಮಾಸ್ಕ್ ಧರಿಸುವಂತೆ ಸೂಚಿಸಿದ್ದು, ಈ ಹಿನ್ನಲೆಯಲ್ಲಿ ಉಂಟಾದ ಜಗಳ ಕೊನೆಗೆ ಸುನಿಲ್ ಹತ್ಯೆಗೆ ಕಾರಣವಾಗಿತ್ತು. ಈ ಸಂಬಂಧ ಪೊಲೀಸರು ತನಿಖೆ ಕೈಗೊಂಡು ೫ ಯುವಕರನ್ನು ಬಂಧಿಸಿದ್ದರು. ಈ ನಡುವೆ ಅಂಜುಮಾನ್ ಇಸ್ಲಾವುಲ್ ಮುಸ್ಲಿಮೀನ್ ಅಧ್ಯಕ್ಷ, ಕಾಂಗ್ರೆಸ್ ಮುಖಂಡ ಸಿ.ಎಂ ಖಾದರ್ ಸೇರಿದಂತೆ ಇನ್ನಿತರರು ಹತ್ಯೆಗೆ ಅಕ್ರಮ ಗಾಂಜಾ ಸೇವನೆಯೇ ಕಾರಣವಾಗಿದೆ. ಅನ್ವರ್ ಕಾಲೋನಿ ಸೇರಿದಂತೆ ಸುತ್ತಮುತ್ತಲ ವ್ಯಾಪ್ತಿಯಲ್ಲಿ ಕಾನೂನು ಬಾಹಿರ ಚಟುವಟಿಕೆಗಳು ಹೆಚ್ಚಾಗಿವೆ. ಈ ಭಾಗದ ಸ್ಥಳೀಯ ಪೊಲೀಸರು ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕುವಲ್ಲಿ ವಿಫಲರಾಗಿದ್ದಾರೆಂದು ಆರೋಪಿಸಿದ್ದರು.
    ಈ ಎಲ್ಲಾ ಬೆಳವಣಿಗೆಗಳ ನಡುವೆ ಇದೀಗ ಅನ್ವರ್‌ಕಾಲೋನಿಯ ೩ ಯುವಕರು ಸಿಕ್ಕಿಬಿದ್ದಿರುವುದು ಆರೋಪಗಳಿಗೆ ಪುಷ್ಟಿ ನೀಡಿದೆ. ಈಗಲಾದರೂ ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡು ಈ ಭಾಗದಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕಾಗಿದೆ.

ರಾಜ್ಯದಲ್ಲೇ ಲಸಿಕೆ ಉತ್ಪಾದನೆಗೆ ಅನುಮತಿ ನೀಡಿ : ೧೮ ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಲಸಿಕೆ ಹಾಕಿಸಿ

ನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ತಹಸೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ


ರಾಜ್ಯದಲ್ಲೇ ಕೋವಿಡ್ ಲಸಿಕೆ ಉತ್ಪಾದನೆಗೆ ಅನುಮತಿ ನೀಡುವ ಜೊತೆಗೆ ೧೮ ವರ್ಷ ಮೇಲ್ಪಟ್ಟ ಎಲ್ಲಾ ಜನರಿಗೂ ಉಚಿತವಾಗಿ ಲಸಿಕೆ ಹಾಕುವಂತೆ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡಬೇಕೆಂದು ಆಗ್ರಹಿಸಿ ನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಶುಕ್ರವಾರ ತಹಸೀಲ್ದಾರ್ ಗ್ರೇಡ್-೨ ರಂಗಮ್ಮ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
    ಭದ್ರಾವತಿ, ಜೂ. ೪: ರಾಜ್ಯದಲ್ಲೇ ಕೋವಿಡ್ ಲಸಿಕೆ ಉತ್ಪಾದನೆಗೆ ಅನುಮತಿ ನೀಡುವ ಜೊತೆಗೆ ೧೮ ವರ್ಷ ಮೇಲ್ಪಟ್ಟ ಎಲ್ಲಾ ಜನರಿಗೂ ಉಚಿತವಾಗಿ ಲಸಿಕೆ ಹಾಕುವಂತೆ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡಬೇಕೆಂದು ಆಗ್ರಹಿಸಿ ನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಶುಕ್ರವಾರ ತಹಸೀಲ್ದಾರ್ ಗ್ರೇಡ್-೨ ರಂಗಮ್ಮ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
     ಕರ್ನಾಟಕ ಸೇರಿದಂತೆ ದೇಶಾದ್ಯಂತ ಲಸಿಕೆ ಕೊರತೆ ಕಂಡು ಬರುತ್ತಿದ್ದು, ಇದರಿಂದಾಗಿ ಕೊರೋನಾ ಸೋಂಕಿಗೆ ಒಳಗಾದವರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಅಲ್ಲದೆ ರಾಜ್ಯದಲ್ಲಿ ಸಮರ್ಪಕವಾಗಿ ಆಮ್ಲಜನಕ ಪೂರೈಕೆಯಾಗದಿರುವುದು, ವೆಂಟಿಲೇಟರ್ ವ್ಯವಸ್ಥೆ ಇಲ್ಲದಿರುವುದು ಸಹ ಸಾವಿಗೆ ಕಾರಣವಾಗುತ್ತಿದೆ. ಕೊರೋನಾ ಸೋಂಕು ನಿಯಂತ್ರಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಫಲವಾಗಿವೆ.
    ರಾಜ್ಯದಲ್ಲಿಯೇ ಲಸಿಕೆ ಉತ್ಪಾದನೆಗೆ ಅನುಮತಿ ನೀಡುವುದರಿಂದ ಹೆಚ್ಚಿನ ಲಸಿಕೆ ಉತ್ಪಾದಿಸಲು ಸಾಧ್ಯವಾಗುತ್ತದೆ. ಜೊತೆಗೆ ಎಲ್ಲರಿಗೂ ಉಚಿತವಾಗಿ ಲಸಿಕೆ ಪೂರೈಸ ಬಹುದಾಗಿದೆ. ಈ ಹಿನ್ನಲೆಯಲ್ಲಿ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡುವ ಜೊತೆಗೆ ಕೋವಿಡ್-೧೯ ನಿಯಂತ್ರಣಕ್ಕೆ ಮುಂದಾಗುವಂತೆ ಮನವಿ ಮಾಡಲಾಗಿದೆ.
    ನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಟಿ. ಚಂದ್ರೇಗೌಡ, ಗ್ರಾಮಾಂತರ ಅಧ್ಯಕ್ಷ ಎಚ್.ಎಲ್ ಷಡಾಕ್ಷರಿ, ಎಂ. ಶಿವಕುಮಾರ್, ಪ್ರಕಾಶ್, ಶ್ರೀನಿವಾಸ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


Thursday, June 3, 2021

೧೦ ಸಾವಿರ ಬಡವರಿಗೆ ದಿನಸಿ ಸಾಮಗ್ರಿ ವಿತರಿಸುವ ಬೃಹತ್ ಸೇವಾ ಕಾರ್ಯ

ಕೊರೋನಾ ಸಂಕಷ್ಟದಲ್ಲಿ ನೆರವಿಗೆ ಧಾವಿಸಿದ ಮಾರುತಿ ಮೆಡಿಕಲ್ ಆನಂದ್


ಭದ್ರಾವತಿ ರಂಗಪ್ಪ ವೃತ್ತದಲ್ಲಿರುವ ಮಾರುತಿ ಮೆಡಿಕಲ್ ಆನಂದ್‌ರವರು ಬೃಹತ್ ಸೇವಾ ಕಾರ್ಯಕ್ಕೆ ಮುಂದಾಗಿದ್ದು, ಕೊರೋನಾ ಲಾಕ್‌ಡೌನ್ ಹಿನ್ನಲೆಯಲ್ಲಿ ತೀರ ಸಂಕಷ್ಟಕ್ಕೆ ಒಳಗಾಗಿರುವ ತಾಲೂಕಿನ ಸುಮಾರು ೧೦ ಸಾವಿರ ಮಂದಿಗೆ ದಿನಸಿ ಸಾಮಗ್ರಿಗಳನ್ನು ವಿತರಿಸಲಿದ್ದಾರೆ. ಈ ಸೇವಾ ಕಾರ್ಯಕ್ಕೆ ಗುರುವಾರ ಚಾಲನೆ ನೀಡಲಾಯಿತು.
    ಭದ್ರಾವತಿ, ಜೂ. ೩: ನಗರದ ರಂಗಪ್ಪ ವೃತ್ತದಲ್ಲಿರುವ ಮಾರುತಿ ಮೆಡಿಕಲ್ ಆನಂದ್‌ರವರು ಬೃಹತ್ ಸೇವಾ ಕಾರ್ಯಕ್ಕೆ ಮುಂದಾಗಿದ್ದು, ಕೊರೋನಾ ಲಾಕ್‌ಡೌನ್ ಹಿನ್ನಲೆಯಲ್ಲಿ ತೀರ ಸಂಕಷ್ಟಕ್ಕೆ ಒಳಗಾಗಿರುವ ತಾಲೂಕಿನ ಸುಮಾರು ೧೦ ಸಾವಿರ ಮಂದಿಗೆ ದಿನಸಿ ಸಾಮಗ್ರಿಗಳನ್ನು ವಿತರಿಸಲಿದ್ದಾರೆ.
ಈ ಸೇವಾ ಕಾರ್ಯಕ್ಕೆ ಸಿದ್ದರೂಢ ನಗರದ ೧ನೇ ತಿರುವಿನಲ್ಲಿರುವ ಅವರ ನಿವಾಸದ ಬಳಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಚಾಲನೆ ನೀಡಲಾಯಿತು.
    ಈ ಕುರಿತು ಮಾತನಾಡಿದ ಆನಂದ್, ತೀರ ಸಂಕಷ್ಟದಲ್ಲಿರುವವರ ನೆರವಿಗೆ ಮುಂದಾಗಬೇಕೆಂಬ ಮನೋಭಾವನೆಯೊಂದಿಗೆ ಈ ಕಾರ್ಯ ಕೈಗೊಳ್ಳುತ್ತಿದ್ದೇನೆ. ನಗರಸಭೆ ೩೫ ವಾರ್ಡ್‌ಗಳಲ್ಲಿ ತಲಾ ಒಂದೊಂದು ವಾರ್ಡ್‌ನಲ್ಲಿ ೨೦೦ ಜನರನ್ನು ಹಾಗು ೩ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ತಲಾ ಒಂದೊಂದು ಪಂಚಾಯಿತಿಯಲ್ಲೂ ೧೦೦೦ ಜನರನ್ನು ಗುರುತಿಸಿ ದಿನಸಿ ಸಾಮಗ್ರಿಗಳನ್ನು ಪ್ರಾಮಾಣಿಕವಾಗಿ ತಲುಪಿಸುವ ಪ್ರಯತ್ನ ಮಾಡಲಾಗುವುದು ಎಂದರು.
   ಉಪವಿಭಾಗಾಧಿಕಾರಿ ಟಿ.ವಿ ಪ್ರಕಾಶ್, ತಹಸೀಲ್ದಾರ್ ಜಿ. ಸಂತೋಷ್‌ಕುಮಾರ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಮೇಶ್, ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ವಿ ಅಶೋಕ್, ತಾಲೂಕು ಸರ್ಕಾರಿ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ. ಓ. ಮಲ್ಲಪ್ಪ, ಸಮಾಜ ಕಲ್ಯಾಣ ಇಲಾಖೆ ನಿವೃತ್ತ ಅಧಿಕಾರಿ ಎನ್. ಕೃಷ್ಣಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಎಸ್ ಬಸವರಾಜ್, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎನ್ ಶ್ರೀಹರ್ಷ ಸೇರಿದಂತೆ ಇನ್ನಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ನಗರದ ಪತ್ರಿಕಾ ವಿತರಿಕರಿಗೆ ಸಾಂಕೇತಿಕವಾಗಿ ದಿನಸಿ ಸಾಮಗ್ರಿಗಳನ್ನು ವಿತರಿಸಲಾಯಿತು.