Tuesday, July 6, 2021

ಆಶ್ರಯ ಯೋಜನೆಯಡಿ ಬಡವರಿಗೆ ಸೂರು : ಖಾಲಿ ಜಾಗ ಗುರುತಿಸುವಲ್ಲಿ ನಿರ್ಲಕ್ಷ್ಯ

ಶಾಸಕ ಬಿ.ಕೆ ಸಂಗಮೇಶ್ವರ್ ತಹಸೀಲ್ದಾರ್ ಕಚೇರಿ ಅಧಿಕಾರಿಗಳ ವಿರುದ್ಧ ಅಸಮಾಧಾನ

ಭದ್ರಾವತಿ ನಗರಸಭೆ ಸಭಾಂಗಣದಲ್ಲಿ ಮಂಗಳವಾರ ವಸತಿ ರಹಿತ ಬಡವರಿಗೆ ಮನೆ ನಿರ್ಮಿಸಿಕೊಡುವ ಹಾಗು ಸರ್ಕಾರಿ ಜಾಗದಲ್ಲಿ ಮನೆ ನಿರ್ಮಿಸಿಕೊಂಡಿರುವವರಿಗೆ ೯೪ಸಿ ಮತ್ತು ೯೪ಸಿಸಿ ಯೋಜನೆಯಡಿ ಹಕ್ಕು ಪತ್ರ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಶಾಸಕ ಬಿ.ಕೆ ಸಂಗಮೇಶ್ವರ್ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.
     ಭದ್ರಾವತಿ, ಜು. ೬: ಬಡವರಿಗೆ ಮನೆ ನಿರ್ಮಿಸಿಕೊಡುವ ಸಂಬಂಧ ಖಾಲಿ ಜಾಗ ಸರ್ವೆ ಮಾಡಿ ಆಶ್ರಯ ಸಮಿತಿಗೆ ವರದಿ  ನೀಡುವಂತೆ ಹಲವು ಬಾರಿ ತಿಳಿಸಿದ್ದರೂ ಸಹ ತಹಸೀಲ್ದಾರ್ ಕಚೇರಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಇದರಿಂದಾಗಿ ಜನಪ್ರತಿನಿಧಿಗಳು ಕ್ಷೇತ್ರದ ಜನರ ವಿಶ್ವಾಸ ಕಳೆದುಕೊಳ್ಳುವಂತಾಗಿದೆ ಎಂದು ಶಾಸಕ ಬಿ.ಕೆ ಸಂಗಮೇಶ್ವರ್ ಅಸಮಾಧಾನ ವ್ಯಕ್ತಪಡಿಸಿದರು.
     ಮಂಗಳವಾರ ನಗರಸಭೆ ಕಛೇರಿ ಸಭಾಂಗಣದಲ್ಲಿ ವಸತಿ ರಹಿತ ಬಡವರಿಗೆ ಮನೆ ನಿರ್ಮಿಸಿಕೊಡುವ ಹಾಗು ಸರ್ಕಾರಿ ಜಾಗದಲ್ಲಿ ಮನೆ ನಿರ್ಮಿಸಿಕೊಂಡಿರುವವರಿಗೆ ೯೪ಸಿ ಮತ್ತು ೯೪ಸಿಸಿ ಯೋಜನೆಯಡಿ ಹಕ್ಕು ಪತ್ರ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಹಮ್ಮಿಕೊಳ್ಳಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
    ನಗರಸಭೆ ವ್ಯಾಪ್ತಿಯ ಬಹುತೇಕ ಕೊಳಚೆ ಪ್ರದೇಶಗಳ ನಿವಾಸಿಗಳಿಗೆ ಹಕ್ಕು ಪತ್ರಗಳನ್ನು ನೀಡಲಾಗಿದೆ. ಕೆಲವು ಕೊಳಚೆ ಪ್ರದೇಶಗಳಿಗೆ ಇನ್ನೂ ನೀಡಲು ಸಾಧ್ಯವಾಗಿಲ್ಲ. ಕೊಳಚೆ ಪ್ರದೇಶ ಹೊರತುಪಡಿಸಿ ಸರ್ಕಾರಿ ಜಾಗಗಳಲ್ಲಿ ಮನೆ ನಿರ್ಮಿಸಿಕೊಂಡಿರುವವರಿಗೆ ೯೪ಸಿ ಯೋಜನೆಯಡಿ ಹಾಗು ಗ್ರಾಮಾಂತರ ಪ್ರದೇಶದಲ್ಲಿ ೯೪ಸಿಸಿ ಯೋಜನೆಯಡಿ ಹಕ್ಕು ಪತ್ರ ನೀಡಲಾಗುವುದು. ಈ ಸಂಬಂಧ ಸರ್ವೆ ಮಾಡಿ ವರದಿ ಸಿದ್ದಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
     ನಗರ ವ್ಯಾಪ್ತಿಯಲ್ಲಿ ಆಶಯ ಯೋಜನೆಯಡಿ ಮನೆ ನಿರ್ಮಾಣಕ್ಕೆ ಖಾಲಿ ಜಾಗ ಗುರುತಿಸುವಲ್ಲಿ ತಹಸೀಲ್ದಾರ್ ಕಚೇರಿ ಅಧಿಕಾರಿಗಳು ನಿರ್ಲಕ್ಷ್ಯತನ ವಹಿಸುತ್ತಿರುವುದು ಸರಿಯಲ್ಲ. ಹಲವಾರು ಬಾರಿ ಸಭೆಯಲ್ಲಿ ಈ ಕುರಿತು ಸೂಚಿಸಿದ್ದರೂ ಸಹ ಯಾವುದೇ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ತಕ್ಷಣ ಜಾಗ ಗುರುತಿಸಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಎಚ್ಚರಿಸಿದರು.
    ಉಪತಹಸೀಲ್ದಾರ್ ಮಲ್ಲಿಕಾರ್ಜುನಯ್ಯ ಹಾಗು ಕಂದಾಯಾಧಿಕಾರಿ ಪ್ರಶಾಂತ್ ಜಾಗ ಗುರುತಿಸುವಲ್ಲಿ ಉಂಟಾಗಿರುವ ಸಮಸ್ಯೆಗಳನ್ನು ಸಭೆ ಗಮನಕ್ಕೆ ತಂದರೂ ಸಹ ಸಭೆಯಲ್ಲಿ ಪಾಲ್ಗೊಂಡಿದ್ದ ನಗರಸಭಾ ಸದಸ್ಯರು ಸಹ ಸಮಾಧಾನಗೊಳ್ಳದೆ ಅಸಮಾಧಾನ ವ್ಯಕ್ತಪಡಿಸಿದರು.
     ನಗರಸಭೆ ವತಿಯಿಂದ ನಿರ್ಮಾಣ ಮಾಡಲಾಗುತ್ತಿರುವ ೪೦೦೦ ಗುಂಪು ಮನೆಗಳಿಗೆ ೪೪೦೦ ಅರ್ಜಿಗಳು ಬಂದಿದ್ದು, ಈ ಪೈಕಿ ೨೦೫೦ ಅರ್ಜಿದಾರರು ಆಯ್ಕೆಯಾಗಿ ಶುಲ್ಕ ಪಾವತಿಸಿದ್ದಾರೆ. ಇವರು ಬ್ಯಾಂಕಿನವರೊಂದಿಗೆ ಚರ್ಚಿಸಿ ಮುಂದಿನ ಪ್ರಕ್ರಿಯೆಯನ್ನು ಪ್ರಾರಂಭಿಸಬೇಕೆಂದರು. ಉಳಿದಂತೆ ೧೯೫೦ ಅರ್ಜಿದಾರರು ಹೊಸದಾಗಿ ಅರ್ಜಿ ಸಲ್ಲಿಸಲು ಇದೀಗ ಅವಕಾಶ ಕಲ್ಪಿಸಲಾಗಿದೆ. ಈ ನಡುವೆ ಈ ಹಿಂದೆ ಅರ್ಜಿ ಸಲ್ಲಿಸದವರು ಸಹ ಅರ್ಜಿ ಸಲ್ಲಿಸಬಹುದಾಗಿದೆ. ಈ ಕುರಿತು ತಕ್ಷಣ ಎಲ್ಲೆಡೆ ವ್ಯಾಪಕ ಪ್ರಚಾರಕ್ಕೆ ಕ್ರಮ ಕೈಗೊಳ್ಳುವಂತೆ ಶಾಸಕರು ಪೌರಾಯುಕ್ತರಿಗೆ ಸೂಚಿಸಿದರು.
   ಸಭೆಯಲ್ಲಿ ಪೌರಾಯುಕ್ತ ಕೆ. ಪರಮೇಶ್, ಇಂಜಿನಿಯರ್ ಪ್ರಸನ್ನಕುಮಾರ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಮೇಶ್, ಸಮುದಾಯ ಸಂಘಟನಾ ಅಧಿಕಾರಿ ಸುವಾಸಿನಿ, ನಗರಸಭೆ ಇಂಜಿನಿಯರ್ ರಂಗರಾಜಪುರೆ, ನಗರಸಭಾ ಸದಸ್ಯರಾದ ಬಿ.ಟಿ ನಾಗರಾಜ್, ಬಿ.ಕೆ ಮೋಹನ್‌ಕುಮಾರ್, ವಿ. ಕದಿರೇಶ್, ಟಿಪ್ಪುಸುಲ್ತಾನ್, ಸುದೀಪ್‌ಕುಮಾರ್, ಮಣಿ, ಚನ್ನಪ್ಪ, ಜಯಶೀಲ, ಲತಾ ಚಂದ್ರಶೇಖರ್, ಉದಯ್‌ಕುಮಾರ್, ಕಾಂತರಾಜ್, ಜಾರ್ಜ್, ಆರ್. ಮೋಹನ್‌ಕುಮಾರ್, ರಾಜ್‌ಕುಮಾರ್, ಗಂಗಾಧರ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

Monday, July 5, 2021

ಬೆಲೆ ಏರಿಕೆ ಖಂಡಿಸಿ ಜೆಡಿಎಸ್ ಪ್ರತಿಭಟನೆ

ಭದ್ರಾವತಿಯಲ್ಲಿ ಕೇಂದ್ರ ಹಾಗು ರಾಜ್ಯ ಸರ್ಕಾರಗಳ ಬೆಲೆ ಏರಿಕೆ ನೀತಿ ಖಂಡಿಸಿ  ಜಾತ್ಯಾತೀತ ಜನತಾದಳ ವತಿಯಿಂದ ಶಾರದ ಅಪ್ಪಾಜಿ ನೇತೃತ್ವದಲ್ಲಿ ತಾಲೂಕು ಕಛೇರಿ ಮಿನಿ ವಿಧಾನಸೌಧದ ಮುಂಭಾಗ ಸೋಮವಾರ ಪ್ರತಿಭಟನೆ ನಡೆಸಲಾಯಿತು.
    ಭದ್ರಾವತಿ, ಜು. ೫: ಕೇಂದ್ರ ಹಾಗು ರಾಜ್ಯ ಸರ್ಕಾರಗಳ ಬೆಲೆ ಏರಿಕೆ ನೀತಿ ಖಂಡಿಸಿ  ಜಾತ್ಯಾತೀತ ಜನತಾದಳ ವತಿಯಿಂದ ಶಾರದ ಅಪ್ಪಾಜಿ ನೇತೃತ್ವದಲ್ಲಿ ತಾಲೂಕು ಕಛೇರಿ ಮಿನಿ ವಿಧಾನಸೌಧದ ಮುಂಭಾಗ ಸೋಮವಾರ ಪ್ರತಿಭಟನೆ ನಡೆಸಲಾಯಿತು.
    ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಪ್ರಮುಖರು, ಕೊರೋನಾ ಪರಿಣಾಮ ಜನರ ಬದುಕು ಅತಂತ್ರವಾಗಿದೆ. ಈ ನಡುವೆ ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲ ಹಾಗು ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಬದುಕು ಮತ್ತಷ್ಟು ಸಂಕಷ್ಟದಿಂದ ಸಾಗಿಸುವಂತಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬೆಲೆ ಏರಿಕೆಗೆ ಕಡಿವಾಣ ಹಾಕುವಲ್ಲಿ ವಿಫಲವಾಗಿವೆ ಎಂದು ಆರೋಪಿಸಲಾಯಿತು.
   ತಕ್ಷಣ ಬೆಲೆ ಏರಿಕೆಗೆ ಕಡಿವಾಣ ಹಾಕುವ ಮೂಲಕ ಜನ ಸಾಮಾನ್ಯರು ನೆಮ್ಮದಿಯಾಗಿ ಬದುಕು ಸಾಗಿಸಲು ಅವಕಾಶ ಕಲ್ಪಿಸಿಕೊಡುವಂತೆ ಆಗ್ರಹಿಸುವ ಜೊತೆಗೆ  ಪ್ರಧಾನ ಮಂತ್ರಿಗಳಿಗೆ ಮತ್ತು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
    ಪಕ್ಷದ ತಾಲೂಕು ಅಧ್ಯಕ್ಷ ಆರ್. ಕರುಣಾಮೂರ್ತಿ, ಜಿಲ್ಲಾ ಪಂಚಾಯಿತಿ ಸದಸ್ಯ ಎಸ್. ಮಣಿಶೇಖರ್, ಜೆ.ಪಿ ಯೋಗೇಶ್, ಮಾಜಿ ಸದಸ್ಯ ಎಸ್. ಕುಮಾರ್, ನಗರಸಭಾ ಸದಸ್ಯರಾದ ಬಸವರಾಜ ಆನೆಕೊಪ್ಪ, ಜಯಶೀಲ, ವಿಜಯ, ಸವಿತ, ಮುಖಂಡರಾದ ಡಿ.ಟಿ ಶ್ರೀಧರ್, ಅಶೋಕ್‌ಕುಮಾರ್, ನಂಜುಂಡೇಗೌಡ, ಗೊಂದಿ ಜಯರಾಂ, ಡಾರ್ವಿನ್, ಬದರಿನಾರಾಯಣ, ಗುಣಶೇಖರ್, ಶಿವರಾಜ್, ವೆಂಕಟೇಶ್ ಉಜ್ಜನಿಪುರ, ಉಮೇಶ್ ಸೇರಿದಂತೆ, ಪಕ್ಷದ ಮುಖಂಡರು, ಕಾರ್ಯಕರ್ತರು, ವಿವಿಧ ಸಂಘ-ಸಂಸ್ಥೆಗಳ  ಪ್ರಮುಖರು ಇನ್ನಿತರರು ಪಾಲ್ಗೊಂಡಿದ್ದರು.

ಪ್ರೀತಿಯಿಂದ ಸಾಕಿದ ಶ್ವಾನ ಅರಣ್ಯ ಇಲಾಖೆಗೆ ನೀಡಿದ ಮಾಲೀಕರು

ಭದ್ರಾವತಿಯಲ್ಲಿ ಪ್ರೀತಿಯಿಂದ ಸಾಕಿದ ೧೬ ತಿಂಗಳ ಲಾಬ್ ಜಾತಿಯ ಶ್ವಾನವನ್ನು ಮಾಲೀಕರು ಉಚಿತವಾಗಿ ಅರಣ್ಯ ಇಲಾಖೆಗೆ ನೀಡುವ ಮೂಲಕ ಮಾನವೀಯತೆ ಮೆರೆದರು.  
    ಭದ್ರಾವತಿ, ಜು. ೫: ಪ್ರೀತಿಯಿಂದ ಸಾಕಿದ ೧೬ ತಿಂಗಳ ಲಾಬ್ ಜಾತಿಯ ಶ್ವಾನವನ್ನು ಮಾಲೀಕರು ಉಚಿತವಾಗಿ ಅರಣ್ಯ ಇಲಾಖೆಗೆ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
    ಆಮ್ ಆದ್ಮಿ ಪಾರ್ಟಿ ಪ್ರಮುಖರಾದ ಎಚ್. ರವಿಕುಮಾರ್ ಮತ್ತು ರಮೇಶ್‌ರವರು ಜೊತೆಗೂಡಿ ಸುಮಾರು ೧ ವರ್ಷದ ಶ್ವಾನವನ್ನು ಖರೀದಿಸಿ ಪಾಲನೆ ಮಾಡುತ್ತಿದ್ದರು. ಆದರೆ ಈ ಶ್ವಾನದ ನಿರ್ವಹಣೆ ಕಷ್ಟಕರವಾಗಿರುವ ಹಿನ್ನಲೆಯಲ್ಲಿ ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ.  
   ಶ್ವಾನ ಪಡೆದಿರುವ ಉಪ ವಲಯ ಅರಣ್ಯಾಧಿಕಾರಿ ಬಿ.ಆರ್ ದಿನೇಶ್‌ಕುಮಾರ್ ಪತ್ರಿಕೆಗೆ ಮಾಹಿತಿ ನೀಡಿ, ಈ ಶ್ವಾನವನ್ನು ಪೊಲೀಸ್ ಇಲಾಖೆಯ ಶ್ವಾನ ದಳದಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ಅರಣ್ಯ ಇಲಾಖೆ ಸಹ ಈ ಶ್ವಾನಕ್ಕೆ ಅಗತ್ಯ ತರಬೇತಿ ನೀಡಿ ಸದ್ಬಳಕೆ ಮಾಡಿಕೊಳ್ಳಲಿದೆ ಎಂದರು.

‘ಡಿ’ ಗ್ರೂಪ್ ನೌಕರರ ಸಂಘದ ಅಧ್ಯಕ್ಷ ಎಸ್.ಜೆ ಮಹೇಶ್ವರ ನಿಧನ

ಎಸ್.ಜೆ ಮಹೇಶ್ವರ
ಭದ್ರಾವತಿ, ಜು. ೫: ತಾಲೂಕು ಸರ್ಕಾರಿ 'ಡಿ' ಗ್ರೂಪ್ ನೌಕರರ ಸಂಘದ ಅಧ್ಯಕ್ಷ ಎಸ್.ಜೆ ಮಹೇಶ್ವರ(೪೩) ಸೋಮವಾರ ನಿಧನ ಹೊಂದಿದರು.
    ಅನಾರೋಗ್ಯದಿಂದ ಬಳಲುತ್ತಿದ್ದ ಇವರು ಮಲ್ನಾಡ್ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ನಿಧನ ಹೊಂದಿದರು. ಪತ್ನಿ, ಇಬ್ಬರು ಮಕ್ಕಳು ಇದ್ದರು. ಮಹೇಶ್ವರ ತಾಲೂಕಿನ ಅರಬಿಳಚಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 'ಡಿ' ಗ್ರೂಪ್ ನೌಕರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇವರ ಅಂತ್ಯಕ್ರಿಯೆ ಮಂಗಳವಾರ ನಡೆಯಲಿದೆ.
    ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿದ್ದಬಸಪ್ಪ, ಮಾಜಿ ಅಧ್ಯಕ್ಷ ಎನ್. ಕೃಷ್ಣಪ್ಪ, ನಿಲೇಶ್‌ರಾಜ್ ಹಾಗು ಸರ್ಕಾರಿ ಆಸ್ಪತ್ರೆ 'ಡಿ' ಗ್ರೂಪ್ ನೌಕರರು ಸೇರಿದಂತೆ ಇನ್ನಿತರರು ಸಂತಾಪ ಸೂಚಿಸಿದ್ದಾರೆ.

ನಗರಸಭೆ ನೌಕರ ಶ್ರೀನಿವಾಸ್ ನಿಧನ

ಶ್ರೀನಿವಾಸ್
   ಭದ್ರಾವತಿ, ಜು. ೫: ನಗರಸಭೆ ಕಂದಾಯ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ನೌಕರ ಶ್ರೀನಿವಾಸ್(೪೬) ಹೃದಯಾಘಾತದಿಂದ ಸೋಮವಾರ ನಿಧನ ಹೊಂದಿದರು.
    ಪತ್ನಿ, ಇಬ್ಬರು ಪುತ್ರಿಯರು ಇದ್ದರು. ಇವರ ಅಂತ್ಯಕ್ರಿಯೆ ಶಿವಮೊಗ್ಗ ಶರಾವತಿ ನಗರದಲ್ಲಿರುವ ರುದ್ರಭೂಮಿಯಲ್ಲಿ ನೆರವೇರಿತು. ಪೌರಾಯುಕ್ತ ಕೆ. ಪರಮೇಶ್, ಕಂದಾಯಾಧಿಕಾರಿ ರಾಜ್‌ಕುಮಾರ್, ಪರಿಸರ ಅಭಿಯಂತರ ಪ್ರಭಾಕರ್ ಹಾಗು ಕಚೇರಿ ಸಿಬ್ಬಂದಿ ವರ್ಗದವರು ಸಂತಾಪ ಸೂಚಿಸಿದ್ದಾರೆ.

ಹೆಣ್ಣು ಚುಕ್ಕೆ ಜಿಂಕೆ ಬೇಟೆಯಾಡಿ ಸಾಗಾಣಿಕೆ : ಓರ್ವನ ಸೆರೆ

ಭದ್ರಾವತಿ ವಲಯ ಅರಣ್ಯ ಇಲಾಖೆ ಸಿಬ್ಬಂದಿಗಳ ಕಾರ್ಯಾಚರಣೆ


ಹೆಣ್ಣು ಚುಕ್ಕೆ ಜಿಂಕೆ ಬೇಟೆಯಾಡಿ ಸಾಗಾಣಿಕೆ ಮಾಡುತ್ತಿದ್ದ ಓರ್ವನನ್ನು ಭದ್ರಾವತಿ ವಲಯ ಅರಣ್ಯ ಇಲಾಖೆ ಸಿಬ್ಬಂದಿಗಳು ಬಂಧಿಸಿರುವುದು.   
    ಭದ್ರಾವತಿ, ಜು. ೫:  ಹೆಣ್ಣು ಚುಕ್ಕೆ ಜಿಂಕೆ ಬೇಟೆಯಾಡಿ ಸಾಗಾಣಿಕೆ ಮಾಡುತ್ತಿದ್ದ ಓರ್ವನನ್ನು ಅರಣ್ಯ ಇಲಾಖೆ ಸಿಬ್ಬಂದಿಗಳು ಬಂಧಿಸಿರುವ ಘಟನೆ ನಡೆದಿದೆ.
   ತಾಲೂಕಿನ ತಿಮ್ಲಾಪುರ ಗ್ರಾಮದ ನಿವಾಸಿ ಯೋಗೀಶ್ ನಾಯ್ಕ (೩೪) ಎಂಬಾತನನ್ನು ಬಂಧಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ವ್ಯಕ್ತಿ ರಬ್ಬರ್‌ಕಾಡು ನಿವಾಸಿ ಷಣ್ಮುಗ(೬೦) ತಲೆಮರೆಸಿಕೊಂಡಿದ್ದಾನೆ.
    ಖಚಿತ ಮಾಹಿತಿ ಆಧಾರದ ಮೇರೆಗೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ.ಎಂ ಗಾಮನಗಟ್ಟಿ ಮಾರ್ಗದರ್ಶನದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೆ.ವಿ ಸುಬ್ರಮಣ್ಯ ಹಾಗು ವಲಯ ಅರಣ್ಯಾಧಿಕಾರಿ ಕೆ.ಎಚ್ ಮಂಜುನಾಥ್ ನೇತೃತ್ವದಲ್ಲಿ ಸಿದ್ದಾಪುರ ಶಾಖೆಯ ಅರಣ್ಯ ವ್ಯಾಪ್ತಿಯ ಕಾಳನಕಟ್ಟೆ ಗ್ರಾಮದ ತಮ್ಮಡಿಹಳ್ಳಿ ಎಸ್.ಎಫ್ ಅರಣ್ಯ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿ ಹೆಣ್ಣು ಚುಕ್ಕೆ ಜಿಂಕೆ ಬೇಟೆಯಾಡಿ ಸಾಗಾಣಿಕೆ ಮಾಡುತ್ತಿದ್ದಾಗ ಅರಣ್ಯ ಇಲಾಖೆ ಸಿಬ್ಬಂದಿಗಳು ಬಂಧಿಸಿದ್ದಾರೆ.
    ಮೃತಪಟ್ಟಿರುವ ಹೆಣ್ಣು ಚುಕ್ಕೆ ಜಿಂಕೆ, ಒಂದು ನಾಡ ಬಂದೂಕು ಮತ್ತು ಒಂದು ದ್ವಿಚಕ್ರ ವಾಹನ ವಶಪಡಿಸಿಕೊಂಡು ವನ್ಯಜೀವಿ ಸಂರಕ್ಷಣೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
   ಉಪ ವಲಯ ಅರಣ್ಯಾಧಿಕಾರಿಗಳಾದ ವಿಜಯಕುಮಾರ್ ಮಾಳಗಿ, ಬಿ.ಆರ್ ದಿನೇಶ್‌ಕುಮಾರ್, ನವೀನ್‌ಕುಮಾರ್, ಅಣ್ಣನಾಯ್ಕ್ ಮತ್ತು ಅರಣ್ಯ ರಕ್ಷಕರಾದ ನಾಗೇಂದ್ರ, ರಶೀದ್ ಬೇಗ್, ಭಾಸ್ಕರ್, ಅರಣ್ಯ ವೀಕ್ಷಕರಾದ ಸಚಿನ್, ಶಿವು ಮತ್ತು ಸೋನು  ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ನರೇಗಾ ಯೋಜನೆ ಅನುಷ್ಠಾನ : ದೇಶದಲ್ಲಿಯೇ ಕರ್ನಾಟಕ ಮೊದಲು

ತ್ಯಾಜ್ಯ ವಿಲೇವಾರಿ ಘಟಕ ಸ್ವಚ್ಛ ಸಂಕೀರ್ಣ ಉದ್ಘಾಟನಾ ಕಾರ್ಯಕ್ರಮದಲ್ಲಿ ಕೆ.ಎಸ್ ಈಶ್ವರಪ್ಪ


ಭದ್ರಾವತಿ ತಾಲೂಕಿನ ಅಂತರಗಂಗೆ ಗ್ರಾಮ ಪಂಚಾಯಿತಿ ವತಿಯಿಂದ ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಸುಮಾರು ೯ ಲಕ್ಷ ರು. ವೆಚ್ಚದಲ್ಲಿ ಅನುಷ್ಠಾನಗೊಳಿಸಲಾಗಿರುವ ತ್ಯಾಜ್ಯ ವಿಲೇವಾರಿ ಘಟಕ ಸ್ವಚ್ಛ ಸಂಕೀರ್ಣ ಸೋಮವಾರ ಸಚಿವ ಕೆ.ಎಸ್ ಈಶ್ವರಪ್ಪ ಉದ್ಘಾಟಿಸಿದರು.
   ಭದ್ರಾವತಿ, ಜು. ೫: ಕರ್ನಾಟಕ ರಾಜ್ಯ ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುವಲ್ಲಿ ದೇಶದಲ್ಲಿಯೇ ಮುಂಚೂಣಿಯಲ್ಲಿದ್ದು, ಪ್ರಸಕ್ತ ಸಾಲಿನಲ್ಲಿ ಹೆಚ್ಚುವರಿಯಾಗಿ ೨ ಕೋ. ರು. ಅನುದಾನ ಬಿಡುಗಡೆಯಾಗಿದೆ ಎಂದು ಪಂಚಾಯತ್ ರಾಜ್ ಹಾಗು ಗ್ರಾಮೀಣಾಭಿವೃದ್ಧಿ ಖಾತೆ ಸಚಿವ ಕೆ.ಎಸ್ ಈಶ್ವರಪ್ಪ ತಿಳಿಸಿದರು.
ಅವರು ಸೋಮವಾರ ತಾಲೂಕಿನ ಅಂತರಗಂಗೆ ಗ್ರಾಮ ಪಂಚಾಯಿತಿ ವತಿಯಿಂದ ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಸುಮಾರು ೯ ಲಕ್ಷ ರು. ವೆಚ್ಚದಲ್ಲಿ ಅನುಷ್ಠಾನಗೊಳಿಸಲಾಗಿರುವ ತ್ಯಾಜ್ಯ ವಿಲೇವಾರಿ ಘಟಕ ಸ್ವಚ್ಛ ಸಂಕೀರ್ಣ ಉದ್ಘಾಟಿಸಿ ಮಾತನಾಡಿದರು.
     ಗ್ರಾಮಗಳು ಅಭಿವೃದ್ಧಿಯಾದಲ್ಲಿ ದೇಶ ಅಭಿವೃದ್ಧಿಯಾಗುತ್ತದೆ ಎಂಬ ಪರಿಕಲ್ಪನೆಯನ್ನು ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರು ಹೊಂದಿದ್ದರು. ಭವಿಷ್ಯದ ರಾಜಕಾರಣಿಗಳಿಗೆ ಇದನ್ನು ಮನದಟ್ಟು ಮಾಡಿಕೊಡುತ್ತಿದ್ದರು. ದೇಶದಲ್ಲಿ ಪ್ರತಿಯೊಬ್ಬರಿಗೂ ಉದ್ಯೋಗ ಲಭ್ಯವಾಗಬೇಕೆಂಬ ಆಶಯದೊಂದಿಗೆ, ಗ್ರಾಮೀಣ ಜನರಿಗೆ ಉದ್ಯೋಗ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಉದ್ಯೋಗ ಖಾತ್ರಿ ಯೋಜನೆಯನ್ನು ಜಾರಿಗೆ ತರಲಾಯಿತು. ಇದರಿಂದಾಗಿ ಉದ್ಯೋಗದ ಜೊತೆಗೆ ಗ್ರಾಮಗಳ ಅಭಿವೃದ್ಧಿಯಾಗುತ್ತಿದೆ ಎಂದರು.


ಭದ್ರಾವತಿ ತಾಲೂಕಿನ ಅಂತರಗಂಗೆ ಗ್ರಾಮ ಪಂಚಾಯಿತಿ ವತಿಯಿಂದ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಸುಮಾರು ೯ ಲಕ್ಷ ರು. ವೆಚ್ಚದಲ್ಲಿ ಅನುಷ್ಠಾನಗೊಳಿಸಲಾಗಿರುವ ತ್ಯಾಜ್ಯ ವಿಲೇವಾರಿ ಘಟಕ ಸ್ವಚ್ಛ ಸಂಕೀರ್ಣ ಉದ್ಘಾಟನಾ ಕಾರ್ಯಕ್ರಮದಲ್ಲಿ ಕುಡಿಯುವ ನೀರು ಹಾಗು ನೈರ್ಮಲ್ಯ ಕುರಿತು ಸಮಸ್ಯೆಗಳಿಗೆ ಸಂಬಂಧಿಸಿದಂತೆ ಪರಿಹಾರ ಸಹಾಯವಾಣಿ ಸಂಖ್ಯೆ ಬಿಡುಗಡೆಗೊಳಿಸಲಾಯಿತು.
    ಪ್ರಸ್ತುತ ರಾಜ್ಯದಲ್ಲಿ ಉದ್ಯೋಗ ಖಾತ್ರಿ ಯೋಜನೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗುತ್ತಿದೆ. ಉದ್ಯೋಗ ಬಯಸುವ ಪ್ರತಿಯೊಬ್ಬರಿಗೂ ಈ ಯೋಜನೆಯಡಿ ತಕ್ಷಣ ಉದ್ಯೋಗ ಚೀಟಿ ನೀಡಲಾಗುತ್ತಿದೆ. ಅಲ್ಲದೆ ಕೂಲಿ ಮೊತ್ತ ಹೆಚ್ಚಿಸಿ ಅನ್ಯಾಯವಾಗದಂತೆ ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ತಲುಪುವಂತೆ ಮಾಡಲಾಗಿದೆ. ಇವೆಲ್ಲದರ ಪರಿಣಾಮವಾಗಿ ಯೋಜನೆ ಬಹುತೇಕ ಯಶಸ್ವಿಯಾಗುತ್ತಿದ್ದು, ಕೇಂದ್ರ ಸರ್ಕಾರ ಪ್ರಸಕ್ತ ಸಾಲಿನಲ್ಲಿ ನಿಗದಿಪಡಿಸಿದ್ದ ೧೩ ಕೋ. ರು. ಮೊತ್ತದ ಯೋಜನೆಗಳ ಗುರಿಯನ್ನು ಈಗಾಗಲೇ ತಲುಪಲಾಗಿದೆ. ಇನ್ನೂ ಕಾಲಾವಕಾಶವಿದ್ದು, ಈ ಹಿನ್ನಲೆಯಲ್ಲಿ ಹೆಚ್ಚುವರಿಯಾಗಿ ಮೊತ್ತ ಬಿಡುಗಡೆ ಮಾಡುವಂತೆ ಕೇಂದ್ರ ಸಚಿವರಿಗೆ ಮನವಿ ಮಾಡಿದ ಪರಿಣಾಮ ಸಚಿವರು ಹೊಸದಾಗಿ ೮೦೦ ಕೋ.ರು. ಬಿಡುಗಡೆಗೊಳಿಸಿದ್ದು, ಈ ಪೈಕಿ ೨ ಕೋ. ರು. ರಾಜ್ಯಕ್ಕೆ ಲಭಿಸಿದೆ ಎಂದರು.  
    ಜಿಲ್ಲೆಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಇನ್ನೂ ಹೊಸ ಹೊಸ ಯೋಜನೆಗಳನ್ನು ಕೈಗೆತ್ತಿಕೊಳ್ಳಬೇಕಾಗಿದೆ. ಗ್ರಾಮ ಪಂಚಾಯಿತಿ ಸದಸ್ಯರೆಲ್ಲರೂ ಒಂದೆಡೆ ಸಭೆ ನಡೆಸಿ ಗ್ರಾಮದಲ್ಲಾಗಬೇಕಾಗಿರುವ ಕೆಲಸಗಳ ಬಗ್ಗೆ ಮೊದಲು ಅರಿತುಕೊಳ್ಳಬೇಕಾಗಿದೆ. ಉದ್ಯೋಗ ಖಾತ್ರಿ ಯೋಜನೆಯಡಿ ಕೈಗೊಳ್ಳಬಹುದಾದ ಕೆಲಸಗಳ ಬಗ್ಗೆ ಅಧಿಕಾರಿಗಳಿಂದ ಸೂಕ್ತ ತರಬೇತಿ ಪಡೆದುಕೊಳ್ಳಬೇಕಾಗಿದೆ. ಈ ಮೂಲಕ ಇನ್ನೂ ಹೆಚ್ಚಿನ ಅಭಿವೃದ್ಧಿ ಕಾರ್ಯಗಳನ್ನು ಗ್ರಾಮಮಟ್ಟದಲ್ಲಿ ಕೈಗೊಳ್ಳಬೇಕೆಂದರು.

ಭದ್ರಾವತಿ ತಾಲೂಕಿನ ಅಂತರಗಂಗೆ ಗ್ರಾಮ ಪಂಚಾಯಿತಿ ವತಿಯಿಂದ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಸುಮಾರು ೯ ಲಕ್ಷ ರು. ವೆಚ್ಚದಲ್ಲಿ ಅನುಷ್ಠಾನಗೊಳಿಸಲಾಗಿರುವ ತ್ಯಾಜ್ಯ ವಿಲೇವಾರಿ ಘಟಕ ಸ್ವಚ್ಛ ಸಂಕೀರ್ಣ ಉದ್ಘಾಟನಾ ಕಾರ್ಯಕ್ರಮಕ್ಕೂ ಮೊದಲು ಸಚಿವ ಕೆ.ಎಸ್ ಈಶ್ವರಪ್ಪ, ಶಾಸಕರಾದ ಬಿ.ಕೆ ಸಂಗಮೇಶ್ವರ್, ಆರ್. ಪ್ರಸನ್ನಕುಮಾರ್ ಸೇರಿದಂತೆ ಇನ್ನಿತರರು ಸಸಿಗಳನ್ನು ನೆಡುವ ಮೂಲಕ ವನಮಹೋತ್ಸವಕ್ಕೆ ಚಾಲನೆ ನೀಡಲಾಯಿತು.
    ಶಾಸಕ ಬಿ.ಕೆ ಸಂಗಮೇಶ್ವರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಎಲ್ಲಿ ಸ್ವಚ್ಛತೆ ಇರುವುದಿಲ್ಲವೋ ಅಲ್ಲಿ ಸಾಂಕ್ರಾಮಿಕ ರೋಗಗಳು ಹೆಚ್ಚಾಗುತ್ತವೆ. ಈ ಹಿನ್ನಲೆಯಲ್ಲಿ ಗ್ರಾಮಸ್ಥರು ಸ್ವಚ್ಛತೆಗೆ ಹೆಚ್ಚಿನ ಗಮನ ಹರಿಸಬೇಕೆಂದರು.
    ತಾಲೂಕಿನ ೨೨ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು, ಶಾಸಕರ ನಿಧಿಯಲ್ಲಿ ಯಾವುದೇ ಅನುದಾನವಿಲ್ಲವಾಗಿದೆ. ಈ ಹಿನ್ನಲೆಯಲ್ಲಿ ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳು ಪ್ರತಿ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಪರಿಶೀಲನೆ ನಡೆಸುವ ಮೂಲಕ ತುರ್ತು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.
     ವಿಧಾನಪರಿಷತ್ ಸದಸ್ಯ ಆರ್. ಪ್ರಸನ್ನಕುಮಾರ್ ಮಾತನಾಡಿ, ಗ್ರಾಮಗಳಲ್ಲೂ ಸ್ವಚ್ಛತೆ ಬಹಳ ಮುಖ್ಯ. ಗ್ರಾಮಸ್ಥರು ಈ ಬಗ್ಗೆ ಜಾಗೃತಿ ಹೊಂದಬೇಕು. ತ್ಯಾಜ್ಯ ವಿಲೇವಾರಿ ಹೆಚ್ಚಿನ ತಿಳುವಳಿಕೆ ಹೊಂದಬೇಕೆಂದರು.

ಜಮೀನ್ದಾರ್ ಚನ್ನೇಗೌಡರ ನನೆಪು ಮಾಡಿಕೊಂಡ ಕೆ.ಎಸ್ ಈಶ್ವರಪ್ಪ :
ಅಂತರಗಂಗೆ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಹಿರಿಯ ಮಾರ್ಗದರ್ಶಕರಾಗಿದ್ದ ದಿವಂಗತ ಚನ್ನೇಗೌಡರನ್ನು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್ ಈಶ್ವರಪ್ಪ ನೆನಪು ಮಾಡಿಕೊಂಡರು. ಚನ್ನೇಗೌಡರ ಶಿಷ್ಯರಲ್ಲಿ ತಾವೂ ಸಹ ಒಬ್ಬರಾಗಿದ್ದು, ಅವರ ಮಾರ್ಗದರ್ಶನದಲ್ಲಿ ನಾವೆಲ್ಲರೂ ಇಂದು ಈ ಮಟ್ಟದಲ್ಲಿ ಬೆಳೆದಿದ್ದೇವೆ. ಗ್ರಾಮದ ಅಭಿವೃದ್ಧಿಗೆ ಚನ್ನೇಗೌಡರ ಪಾತ್ರ ಸಹ ಪ್ರಮುಖವಾಗಿದೆ. ಗ್ರಾಮಸ್ಥರು ಪ್ರಸ್ತುತ ರಾಜ್ಯಕ್ಕೆ ಮಾದರಿಯಾಗುವಂತಹ ಕಾರ್ಯ ಕೈಗೊಳ್ಳುವ ಮೂಲಕ ಅವರ ಹೆಸರನ್ನು ಚಿರಸ್ಥಾಯಿಯನ್ನಾಗಿಸಿದ್ದಾರೆಂದು ಪ್ರಶಂಸೆ ವ್ಯಕ್ತಪಡಿಸಿದರು.

    ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಂ.ಎಲ್ ವೈಶಾಲಿ, ತಾಲೂಕು ಪಂಚಾಯಿತಿ ಅಧ್ಯಕ್ಷೆ ಸವಿತಾ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಮೇಶ್, ಜಿ.ಪಂ. ಅಧಿಕಾರಿಗಳಾದ ನಂದಿನಿ, ರಾಮಕೃಷ್ಣ ಪುರಾಣಿಕ್, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ವೆಂಕಟೇಶ್, ಸದಸ್ಯರಾದ ಗೀತಾ, ಬಿ. ನಾಗೇಶ್, ಮಂಜುಳ, ಸಿ. ಶ್ರೀಧರ್, ಜಿ. ಮಂಜಪ್ಪ, ಟಿ.ಆರ್ ಶೋಭ, ದೇವಿಕಾ, ಎಸ್. ಅನು, ಗಂಗಮ್ಮ, ರವಿ, ಎಸ್.ಎನ್ ಆನಂದಕುಮಾರ್, ಎಚ್. ಶಾಂತ, ಜಿ. ಆನಂದಪ್ಪ ಮತ್ತು ಬಿ. ಮೋನಿಷಾ ಹಾಗು ಸುತ್ತಮುತ್ತಲ ಗ್ರಾ.ಪಂ.ಗಳ ಸದಸ್ಯರು, ಗ್ರಾಮದ ಮುಖಂಡರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
        ಇದಕ್ಕೂ ಮೊದಲು ಸಸಿಗಳನ್ನು ನೆಡುವ ಮೂಲಕ ವನ ಮಹೋತ್ಸವ ಆಚರಿಸಲಾಯಿತು. ಶಾಸಕ ಬಿ.ಕೆ ಸಂಗಮೇಶ್ವರ್ ತ್ಯಾಜ್ಯ ವಿಲೇವಾರಿ ವಾಹನವನ್ನು ಗ್ರಾ.ಪಂ. ಅಧ್ಯಕ್ಷರಿಗೆ ಹಸ್ತಾಂತರಿಸಿದರು. ಕುಡಿಯುವ ನೀರು ಹಾಗು ನೈರ್ಮಲ್ಯ ಕುರಿತು ಸಮಸ್ಯೆಗಳಿಗೆ ಸಂಬಂಧಿಸಿದಂತೆ ಪರಿಹಾರ ಸಹಾಯವಾಣಿ ಸಂಖ್ಯೆ ಬಿಡುಗಡೆಗೊಳಿಸಲಾಯಿತು.