Wednesday, August 18, 2021

ಜಾತಿ ವ್ಯವಸ್ಥೆ ವಿರುದ್ಧ ಹೋರಾಟ ನಿರಂತರವಾಗಿರಲಿ : ಎಂ. ಗುರುಮೂರ್ತಿ.

ಭದ್ರಾವತಿ ತಾಲೂಕಿನ ಅರಬಿಳಚಿ ಕ್ಯಾಂಪ್ ಗ್ರಾಮದ ವಿಶ್ವ ನಗರದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಗ್ರಾಮ ಶಾಖೆಯನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಎಂ. ಗುರುಮೂರ್ತಿ ಉದ್ಘಾಟಿಸಿದರು.
     ಭದ್ರಾವತಿ, ಆ.೧೮: ದೇಶದಲ್ಲಿ ನೆಲೆಯೂರಿರುವ ಜಾತಿ ವ್ಯವಸ್ಥೆಯನ್ನು ಸುಲಭವಾಗಿ ಕಿತ್ತು ಹಾಕಲು ಸಾಧ್ಯವಿಲ್ಲ. ಇದರ ವಿರುದ್ಧ ನಿರಂತರ ಹೋರಾಟ ಅನಿವಾರ್ಯವಾಗಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಎಂ. ಗುರುಮೂರ್ತಿ ಹೇಳಿದರು.
   ಅವರು ತಾಲೂಕಿನ ಅರಬಿಳಚಿ ಕ್ಯಾಂಪ್ ಗ್ರಾಮದ ವಿಶ್ವ ನಗರದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಗ್ರಾಮ ಶಾಖೆ ಉದ್ಘಾಟಿಸಿ ಮಾತನಾಡಿದರು.
     ಜಾತಿ ವ್ಯವಸ್ಥೆ ಎಂಬುದು ಮಣ್ಣು, ಇಟ್ಟಿಗೆಗಳಿಂದ ಕಟ್ಟಿದ ಗೋಡೆಯಲ್ಲ ಅಥವಾ ಮುಳ್ಳುತಂತಿಗಳಿಂದ ನಿರ್ಮಿಸಿದ ಬೇಲಿಯೂ ಅಲ್ಲ. ಈ ಹಿನ್ನಲೆಯಲ್ಲಿ ಈ ವ್ಯವಸ್ಥೆಯನ್ನು ಕಿತ್ತು ಹಾಕುವುದು ಸುಲಭದ ಕೆಲಸವಲ್ಲ. ಈ ವ್ಯವಸ್ಥೆಯನ್ನು ರೂಪಿಸಿರುವವರ ಮನಸ್ಥಿತಿ ಬದಲಾಗಬೇಕಾಗಿದೆ. ದಲಿತರು ಸಹ ಸಮಾಜದ ಮುಖ್ಯ ವಾಹಿನಿಗೆ ಬರಬೇಕಾಗಿದೆ. ಅಲ್ಲದೆ ಈ ದೇಶದ ಅಧಿಕಾರದ ಚುಕ್ಕಾಣಿ ಹಿಡಿಯಬೇಕಾಗಿದೆ. ಈ ನಿಟ್ಟಿನಲ್ಲಿ ನಿರಂತರ ಹೋರಾಟ ನಡೆಸಬೇಕಾಗಿದೆ ಎಂದರು.  
     ಕಾರ್ಯಕ್ರಮ ಅಧ್ಯಕ್ಷತೆ ಮಧುಸೂಧನ್ ವಹಿಸಿದ್ದರು. ತಾಲೂಕು ಪಂಚಾಯಿತಿ ಸದಸ್ಯ  ಅಣ್ಣಾಮಲೈ, ಗ್ರಾಮ ಪಂಚಾಯಿತಿ ಅಧ್ಯಕ್ಷ ಕಿರಣ್, ಸದಸ್ಯ ರಾಜಣ್ಯ, ಸಮಿತಿ ಜಿಲ್ಲಾ ಸಂಚಾಲಕ ಎ. ಅರ್ಜುನ್, ಜಿಲ್ಲಾ ಸಂಘಟನಾ ಸಂಚಾಲಕ ಎಂ. ಏಳುಕೋಟಿ, ಶಿವಬಸಪ್ಪ, ತಾಲೂಕು ಸಂಚಾಲಕ ರವಿನಾಯ್ಕ್, ಮುಖಂಡರಾದ ಬೊಮ್ಮನಕಟ್ಟೆ ಕೃಷ್ಣ, ಹೊಳೆಹೊನ್ನೂರು ಹರೀಶ್, ವೆಂಕಟೇಶ್, ತಮ್ಮಯ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ತಾಲೂಕು ಆಡಳಿತದಿಂದ ಕಡತ ವಿಲೇವಾರಿ ವಿಳಂಬ : ರೈತರ ಸಂಘದಿಂದ ಪ್ರತಿಭಟನೆ

ಭದ್ರಾವತಿ ತಾಲೂಕು ಕಛೇರಿ ಆಡಳಿತ ಕಡತ ವಿಲೇವಾರಿಯಲ್ಲಿ ವಿಳಂಬ ಮಾಡುತ್ತಿದ್ದು, ಇದರಿಂದಾಗಿ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ. ತಕ್ಷಣ ಕ್ರಮ ಕೈಗೊಳ್ಳುವಂತೆ  ಆಗ್ರಹಿಸಿ ಬುಧವಾರ ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ವತಿಯಿಂದ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಆರ್. ಪ್ರದೀಪ್‌ಗೆ ಮನವಿ ಸಲ್ಲಿಸಲಾಯಿತು.
   ಭದ್ರಾವತಿ, ಆ. ೧೮: ತಾಲೂಕು ಕಛೇರಿ ಆಡಳಿತ ಕಡತ ವಿಲೇವಾರಿಯಲ್ಲಿ ವಿಳಂಬ ಮಾಡುತ್ತಿದ್ದು, ಇದರಿಂದಾಗಿ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ. ತಕ್ಷಣ ಕ್ರಮ ಕೈಗೊಳ್ಳುವಂತೆ  ಆಗ್ರಹಿಸಿ ಬುಧವಾರ ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
   ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ.ವಿ ವೀರೇಶ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ರೈತರು, ಗ್ರಾಮಸ್ಥರು ಕಡತ ವಿಲೇವಾರಿಯಿಂದಾಗಿ ಗ್ರಾಮೀಣಾ ಭಾಗದ ರೈತರು ಹಾಗು ನಿವಾಸಿಗಳು ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ. ಅಲ್ಲದೆ ವಿಕಲಚೇತನ, ವೃದ್ಧಾಪ್ಯ ಹಾಗು ವಿಧವಾ ವೇತನ ಸಹ ವಿಳಂಬವಾಗುತ್ತಿದ್ದು, ವಿಕಲಚೇತನರು, ಮಹಿಳೆಯರು ಮತ್ತು ವೃದ್ಧರು ತಾಲೂಕು ಕಛೇರಿ ಅಲೆದಾಡುವಂತಾಗಿದೆ. ಕಛೇರಿಯಲ್ಲಿ ಅಧಿಕಾರಿಗಳನ್ನು ವಿಚಾರಿಸಿದರೆ ಪ್ರತಿ ಬಾರಿ ವಿದ್ಯುತ್ ಸಮಸ್ಯೆ ಇರುವುದಾಗಿ ಉತ್ತರ ನೀಡುತ್ತಾರೆ. ಅಲ್ಲದೆ ಕಛೇರಿಯಲ್ಲಿ ಅಧಿಕಾರಿಗಳು, ಸಿಬ್ಬಂದಿಗಳು ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
   ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಆರ್. ಪ್ರದೀಪ್, ಮನವಿ ಸ್ವೀಕರಿಸಿ ಕಡತ ವಿಲೇವಾರಿಯಲ್ಲಿ ಉಂಟಾಗಿರುವ ಸಮಸ್ಯೆಯನ್ನು ತಕ್ಷಣ ಬಗೆಹರಿಸುವುದಾಗಿ ಭರವಸೆ ನೀಡಿದರು.
    ಸಂಘದ ತಾಲೂಕು ಅಧ್ಯಕ್ಷ ಹಿರಿಯಣ್ಣಯ್ಯ, ಪ್ರಮುಖರಾದ ಶರತ್ಚಂದ್ರ, ರುದ್ರೇಶ್, ಹನುಮಂತಪ್ಪ, ಮಹಂತೇಶ್ ಸೇರಿದಂತೆ ಇನ್ನಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ನ್ಯಾಯಾಲಯದ ಆದೇಶದಂತೆ ಹೆದ್ದಾರಿ ಪಕ್ಕದಲ್ಲಿರುವ ಮದ್ಯದಂಗಡಿಗಳನ್ನು ತೆರವುಗೊಳಿಸಿ

ಜೆಡಿಯು ರಾಜ್ಯ ಕಾರ್ಯದರ್ಶಿ ಶಶಿಕುಮಾರ್ ಎಸ್. ಗೌಡ ಪ್ರತಿಭಟನೆ ನಡೆಸಿ ಮನವಿ

   ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ಹೆದ್ದಾರಿ ಪಕ್ಕದಲ್ಲಿರುವ ಮದ್ಯದಂಗಡಿಗಳನ್ನು ತೆರವುಗೊಳಿಸುವಂತೆ ಆಗ್ರಹಿಸಿ ಜನತಾದಳ (ಸಂಯುಕ್ತ) ಕರ್ನಾಟಕ ರಾಜ್ಯ ಕಾರ್ಯದರ್ಶಿ ಶಶಿಕುಮಾರ್ ಎಸ್. ಗೌಡ ಬುಧವಾರ ಭದ್ರಾವತಿ ಹೊಸ ಸೇತುವೆ ರಸ್ತೆಯಲ್ಲಿರುವ ಅಬಕಾರಿ ಇಲಾಖೆ ಕಛೇರಿ ಮುಂಭಾಗ ಪ್ರತಿಭಟನೆ ನಡೆಸಿ ಅಬಕಾರಿ ಇನ್ಸ್‌ಪೆಕ್ಟರ್ ಸುನಿಲ್ ಕಲ್ಲಾಪುರ್ ಅವರಿಗೆ ಮನವಿ ಸಲ್ಲಿಸಿದರು.
   ಭದ್ರಾವತಿ, ಆ. ೧೮: ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ಹೆದ್ದಾರಿ ಪಕ್ಕದಲ್ಲಿರುವ ಮದ್ಯದಂಗಡಿಗಳನ್ನು ತೆರವುಗೊಳಿಸುವಂತೆ ಆಗ್ರಹಿಸಿ ಜನತಾದಳ (ಸಂಯುಕ್ತ) ಕರ್ನಾಟಕ ರಾಜ್ಯ ಕಾರ್ಯದರ್ಶಿ ಶಶಿಕುಮಾರ್ ಎಸ್. ಗೌಡ ಬುಧವಾರ ಹೊಸ ಸೇತುವೆ ರಸ್ತೆಯಲ್ಲಿರುವ ಅಬಕಾರಿ ಇಲಾಖೆ ಕಛೇರಿ ಮುಂಭಾಗ ಪ್ರತಿಭಟನೆ ನಡೆಸಿ ಅಬಕಾರಿ ಇನ್ಸ್‌ಪೆಕ್ಟರ್ ಸುನಿಲ್ ಕಲ್ಲಾಪುರ್ ಅವರಿಗೆ ಮನವಿ ಸಲ್ಲಿಸಿದರು.
   ಸರ್ವೋಚ್ಛ ನ್ಯಾಯಾಲಯ ೨೦೧೬ರಲ್ಲಿ ಹೆದ್ದಾರಿ ಪಕ್ಕದ ೫೦೦ ಮೀಟರ್ ವ್ಯಾಪ್ತಿಯಲ್ಲಿರುವ ಮದ್ಯದಂಗಡಿಗಳನ್ನು ತೆರವುಗೊಳಿಸುವಂತೆ ಆದೇಶ ಹೊರಡಿಸಿದ್ದು, ಇದೀಗ ಪುನಃ ಇದೆ ಆದೇಶವನ್ನು ಹೊರಡಿಸಿದೆ. ಆದರೆ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲದಿರುವುದು ವಿಷಾದನೀಯ ಬೆಳವಣಿಗೆಯಾಗಿದೆ.
    ಹೆದ್ದಾರಿ ಸಚಿವಾಲಯದ ಮಾಹಿತಿ ಪ್ರಕಾರ ದೇಶದಲ್ಲಿ ೨೦೧೯ ರಿಂದ ಇಲ್ಲಿಯವರೆಗೂ ಸುಮಾರು ೪.೫ ಲಕ್ಷ ಅಪಘಾತಗಳು ನಡೆದಿದ್ದು,  ಈ ಪೈಕಿ ೧.೫ ಲಕ್ಷ ಜನರು ಮೃತಪಟ್ಟಿದ್ದಾರೆ.  ಮದ್ಯಪಾನ ಮಾಡಿ ವಾಹನ ಚಲಾಯಿಸಿ ಸುಮಾರು ೧ ಲಕ್ಷ ಜನರು ಮೃತಪಟ್ಟಿದ್ದಾರೆ. ಸುಮಾರು ೨ ಲಕ್ಷ ಜನರು ಅಂಗವೈಕಲ್ಯಕ್ಕೆ ಒಳಗಾಗಿದ್ದಾರೆ. ಈ ವಿಚಾರವನ್ನು ಅಬಕಾರಿ ಇಲಾಖೆ ಗಂಭೀರವಾಗಿ ಪರಿಗಣಿಸಿ ತಕ್ಷಣ ತಾಲೂಕಿನಾದ್ಯಂತ ಹೆದ್ದಾರಿ ಪಕ್ಕದಲ್ಲಿ ೫೦೦ ಮೀಟರ್ ವ್ಯಾಪ್ತಿಯಲ್ಲಿರುವ ಮದ್ಯದಂಗಡಿಗಳನ್ನು ತೆರವುಗೊಳಿಸಬೇಕು. ಇಲ್ಲವಾದಲ್ಲಿ ಸೆ.೧ರಿಂದ ನ್ಯಾಯ ಸಿಗುವವರೆಗೂ ಏಕಾಂಗಿಯಾಗಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಸಿದರು.

Tuesday, August 17, 2021

ಸರ್ಕಾರಿ ಶಾಲೆಗೆ ಮುದ್ರಣ ಯಂತ್ರ, ಮಕ್ಕಳಿಗೆ ಲೇಖನ ಸಾಮಗ್ರಿ ವಿತರಣೆ

ಕರ್ನಾಟಕ ಸ್ಟೇಟ್ ಕನ್‌ಸ್ಟ್ರಕ್ಷನ್ ವರ್ಕರ್‍ಸ್ ಸೆಂಟ್ರಲ್ ಯೂನಿಯನ್ ವತಿಯಿಂದ ಭದ್ರಾವತಿ ಬಿ.ಎಚ್ ರಸ್ತೆ ಹಾಲಪ್ಪ ವೃತ್ತದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಒಂದು ಮುದ್ರಣ ಯಂತ್ರ ಹಾಗು ವಿದ್ಯಾರ್ಥಿಗಳಿಗೆ ಲೇಖನ ಸಾಮಗ್ರಿಗಳನ್ನು ವಿತರಿಸಲಾಯಿತು.
    ಭದ್ರಾವತಿ, ಆ. ೧೬: ಕರ್ನಾಟಕ ಸ್ಟೇಟ್ ಕನ್‌ಸ್ಟ್ರಕ್ಷನ್ ವರ್ಕರ್‍ಸ್ ಸೆಂಟ್ರಲ್ ಯೂನಿಯನ್ ವತಿಯಿಂದ ನಗರದ ಬಿ.ಎಚ್ ರಸ್ತೆ ಹಾಲಪ್ಪ ವೃತ್ತದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಒಂದು ಮುದ್ರಣ ಯಂತ್ರ ಹಾಗು ವಿದ್ಯಾರ್ಥಿಗಳಿಗೆ ಲೇಖನ ಸಾಮಗ್ರಿಗಳನ್ನು ವಿತರಿಸಲಾಯಿತು.
    ನಗರಸಭೆ ವಾರ್ಡ್ ನಂ.೩ರ ವ್ಯಾಪ್ತಿಯಲ್ಲಿರುವ ಈ ಶಾಲೆಗೆ ಕಟ್ಟಡ ಕಾರ್ಮಿಕರಾಗಿರುವ ನಗರಸಭಾ ಸದಸ್ಯ ಮೇಸ್ತ್ರಿ ಜಾರ್ಜ್ ತಮ್ಮ ಸ್ವಂತ ಹಣದಲ್ಲಿ ಒಂದು ಮುದ್ರಣ ಯಂತ್ರ (ಪ್ರಿಂಟರ್) ಖರೀದಿಸಿ ಶಾಲೆಗೆ ಕೊಡುಗೆಯಾಗಿ ನೀಡಿದ್ದಾರೆ.
ಯೂನಿಯನ್ ವತಿಯಿಂದ ಶಾಲೆಯ ಸುಮಾರು ೮೦ ಮಕ್ಕಳಿಗೆ ನೋಟ್ ಬುಕ್ ಸೇರಿದಂತೆ ತಲಾ ೨೫೦ ರು. ಮೌಲ್ಯದ ಲೇಖನ ಸಾಮಗ್ರಿಗಳನ್ನು ವಿತರಿಸಲಾಯಿತು.  
     ನಗರಸಭಾ ಸದಸ್ಯರಾದ ಜಾರ್ಜ್, ಮಣಿ ಎಎನ್‌ಎಸ್, ಸಂಘದ ಅಧ್ಯಕ್ಷ ಚಂದ್ರಶೇಖರ್, ಕಾರ್ಯದರ್ಶಿ ನಾರಾಯಣಸ್ವಾಮಿ, ಕಾರ್ಯಾಧ್ಯಕ್ಷ ಅಭಿಲಾಷ್, ಜಿಲ್ಲಾ ಕಾರ್ಯಾಧ್ಯಕ್ಷ ಸುಂದರ್‌ಬಾಬು, ಗೌರವಾಧ್ಯಕ್ಷ ಅಂತೋಣಿ ಕ್ರೂಸ್, ಸಲಹೆಗಾರ ಅಂತೋಣಿ, ಜಿ. ಸುರೇಶ್, ತಾಂತ್ರಿಕ ಸಲಹೆಗಾರ ಮನೋಹರ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಸುಧಾ, ಸದಸ್ಯರಾದ ಕೃಷ್ಣಪ್ಪ, ಅಜಯ್, ಮುನ್ನ, ಮುಖಂಡರಾದ ಮಹಮ್ಮದ್ ಸೈಪುಲ್ಲಾ, ವಿನಯ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ವೈ.ಸಿ ಲಕ್ಷ್ಮಣ ನಿರೂಪಿಸಿದರು. ಎಸ್.ಬಿ ಶಿವಕುಮಾರ್ ಸ್ವಾಗತಿಸಿದರು. ಶಾಲೆಯ ಮುಖ್ಯ ಶಿಕ್ಷಕ ಇ. ಶಿವರುದ್ರಯ್ಯ ಪ್ರಾಸ್ತಾವಿಕ ನುಡಿಗಳಾಡಿದರು. ಆರ್. ಕಲ್ಪನಾ ವಂದಿಸಿದರು.



ವೈದ್ಯರು, ಸಿಬ್ಬಂದಿಗಳ ಕರ್ತವ್ಯಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ : ಶಾಸಕ ಬಿ.ಕೆ ಸಂಗಮೇಶ್ವರ್

ಭದ್ರಾವತಿ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಅಭಿನಂದನೆ ಹಾಗು ದಿನಸಿ ಸಾಮಗ್ರಿ ವಿತರಣೆ ಸಿಬ್ಬಂದಿಗಳಿಗೆ ಪಾಲ್ಗೊಂಡು ಮಾತನಾಡಿದರು.
    ಭದ್ರಾವತಿ, ಆ. ೧೭: ಕೋವಿಡ್-೧೯ ಸಂಕಷ್ಟದ ಸಮಯದಲ್ಲೂ ತಾಲೂಕು ಸರ್ಕಾರಿ ಆಸ್ಪತ್ರೆ ವೈದ್ಯರು ಹಾಗು ಸಿಬ್ಬಂದಿಗಳು ಉತ್ತಮವಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ವೈದ್ಯರು ಹಾಗು ಸಿಬ್ಬಂದಿಗಳ ಕರ್ತವ್ಯಕ್ಕೆ ಯಾರಿಂದಲೂ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ಬಿ.ಕೆ ಸಂಗಮೇಶ್ವರ್ ಪ್ರಶಂಸೆ ವ್ಯಕ್ತಪಡಿಸಿದರು.
     ಅವರು ಮಂಗಳವಾರ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಅಭಿನಂದನೆ ಹಾಗು ದಿನಸಿ ಸಾಮಗ್ರಿ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
     ಜೀವದ ಹಂಗನ್ನು ತೊರೆದು ಕರ್ತವ್ಯ ನಿರ್ವಹಿಸುವ ಜೊತೆಗೆ ಆರೈಕೆಯ ವಾತ್ಸಲ್ಯದೊಂದಿಗೆ ರೋಗಿಗಳ ಜೊತೆ ತಾಳ್ಮೆ, ಸಹನೆಯಿಂದ ವರ್ತಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ. ನಿಮ್ಮ ಕರ್ತವ್ಯವನ್ನು ಸಮಾಜದ ಎಲ್ಲರೂ ಅಭಿನಂದಿಸಬೇಕಾಗಿದೆ ಎಂದರು.
    ಪ್ರತಿಯೊಬ್ಬರಿಗೂ ಆರೋಗ್ಯ ಬಹಳ ಮುಖ್ಯವಾಗಿದೆ. ಆರೋಗ್ಯವಿಲ್ಲದೆ ಏನನ್ನು ಸಹ ಸಾಧಿಸಲು ಸಾಧ್ಯವಿಲ್ಲ.  ಇದೀಗ ಕೋವಿಡ್ ೨ನೇ ಅಲೆ ಮುಗಿವಷ್ಟರಲ್ಲಿ ೩ನೇ ಅಲೆ ಕಾಣಿಸಿಕೊಳ್ಳುತ್ತಿದ್ದು, ಈ ಹಿನ್ನಲೆಯಲ್ಲಿ ಈ ಕುರಿತು ಸಾರ್ವಜನಿಕರಿಗೆ ಹೆಚ್ಚಿನ ಜಾಗೃತಿ ಮೂಡಿಸುವ ಕಾರ್ಯ ನಡೆಯಬೇಕಾಗಿದೆ. ಇದಕ್ಕೆ ಪೂರಕವಾಗಿ ಆರೋಗ್ಯ ಇಲಾಖೆ ಸಹ ಎಲ್ಲಾ ಸಿದ್ದತೆಗಳನ್ನು ಮಾಡಿಕೊಳ್ಳಬೇಕು. ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನ ನಡೆಸುತ್ತಿದ್ದು, ಮುಂದಿನ ದಿನಗಳಲ್ಲಿ ನಮ್ಮ ಪ್ರಯತ್ನಕ್ಕೆ ಫಲ ಸಿಗುವ ವಿಶ್ವಾಸವಿದೆ ಎಂದರು.
    ಆರೋಗ್ಯ ರಕ್ಷಾ ಸಮಿತಿ ಸದಸ್ಯ ಸುಂದರ್‌ಬಾಬು ಮಾತನಾಡಿ, ಕೊರೋನಾ ಸಂಕಷ್ಟದ ಸಮಯದಲ್ಲಿ ಶಾಸಕರು ಕ್ಷೇತ್ರದಲ್ಲಿ ಎಲ್ಲಾ ವರ್ಗದ ಶ್ರಮ ಜೀವಿಗಳನ್ನು ಗುರುತಿಸಿ ಅವರ ನೆರವಿಗೆ ಧಾವಿಸುತ್ತಿದ್ದಾರೆ. ಅಲ್ಲದೆ ಸರ್ಕಾರದಿಂದ ಸಾಕಷ್ಟು ಅನುದಾನ ಬಿಡುಗಡೆಗೊಳಿಸಿಕೊಡುವಲ್ಲಿ ಶಕ್ತಿಮೀರಿ ಶ್ರಮಿಸುತ್ತಿದ್ದಾರೆ ಎಂದರು.
    ಆಸ್ಪತ್ರೆಯ ವೈದ್ಯರು ಹಾಗು ಅಧಿಕಾರಿಗಳಿಗೆ ಪುಸ್ತಕ ನೀಡಿ ಹಾಗು ಸಿಬ್ಬಂದಿಗಳಿಗೆ ದಿನಸಿ ಸಾಮಗ್ರಿ ವಿತರಿಸಿ ಅಭಿನಂದಿಸಲಾಯಿತು. ವೈದ್ಯರ ದಿನಾಚರಣೆ ಅಂಗವಾಗಿ  ಭಾರತೀಯ ವೈದ್ಯಕೀಯ ಸಂಘದ ವತಿಯಿಂದ ನೀಡಲಾದ ಕೋವಿಡ್ ವಾರಿಯರ್ಸ್ ಅವಾರ್ಡ್ ಆಸ್ಪತ್ರೆಯ ವೈದ್ಯೆ ಡಾ. ಎ. ಕವಿತಾ ಅವರಿಗೆ ಶಾಸಕ ಬಿ.ಕೆ ಸಂಗಮೇಶ್ವರ್ ವಿತರಿಸಿ ಅಭಿನಂದಿಸಿದರು.
    ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ವಿ ಅಶೋಕ್, ಆಸ್ಪತ್ರೆ ಮುಖ್ಯ ವ್ಯದ್ಯಾಧಿಕಾರಿ ಡಾ. ಶಂಕರಪ್ಪ, ಸರ್ಜನ್ ಶಿವಪ್ರಸಾದ್, ಕಾಂಗ್ರೆಸ್ ಮುಖಂಡ ಮೋಹನ್, ಆರೋಗ್ಯ ರಕ್ಷಾ ಸಮಿತಿ ಸದಸ್ಯ ನಾಗೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


ವೈದ್ಯರ ದಿನಾಚರಣೆ ಅಂಗವಾಗಿ  ಭಾರತೀಯ ವೈದ್ಯಕೀಯ ಸಂಘದ ವತಿಯಿಂದ ನೀಡಲಾದ ಕೋವಿಡ್ ವಾರಿಯರ್ಸ್ ಅವಾರ್ಡ್ ಭದ್ರಾವತಿ ತಾಲೂಕು ಸರ್ಕಾರಿ ಆಸ್ಪತ್ರೆಯ ವೈದ್ಯೆ ಡಾ. ಎ. ಕವಿತಾ ಅವರಿಗೆ ಶಾಸಕ ಬಿ.ಕೆ ಸಂಗಮೇಶ್ವರ್ ವಿತರಿಸಿ ಅಭಿನಂದಿಸಿದರು.

Monday, August 16, 2021

ಸಂಸದ ಬಿ.ವೈ ರಾಘವೇಂದ್ರ ಹುಟ್ಟುಹಬ್ಬ ವಿಶೇಷ ಆಚರಣೆ

ಭದ್ರಾವತಿ ವೀರಾಪುರ ಗ್ರಾಮದಲ್ಲಿ ಸಂಸದ ಬಿ.ವೈ ರಾಘವೇಂದ್ರ ಹುಟ್ಟುಹಬ್ಬದ ಅಂಗವಾಗಿ ರೈತರಿಗೆ ತೆಂಗಿನ ಸಸಿಗಳನ್ನು ವಿತರಿಸಲಾಯಿತು.
   ಭದ್ರಾವತಿ, ಆ. ೧೬: ನಗರದ ಬಿ.ವೈ ರಾಘವೇಂದ್ರ ಅಭಿಮಾನಿಗಳ ಬಳಗದ ವತಿಯಿಂದ ಕಳೆದ ೧೨ ವರ್ಷಗಳಿಂದ ಶಿವಮೊಗ್ಗ ಲೋಕಸಭಾ, ಯುವ ನಾಯಕ ಬಿ.ವೈ ರಾಘವೇಂದ್ರ ಅವರ ಜನ್ಮದಿನ ವಿಶೇಷವಾಗಿ ಆಚರಿಸಿಕೊಂಡು ಬರಲಾಗುತ್ತಿದೆ.
    ತಾಲೂಕು ಪಂಚಾಯಿತಿ ಸದಸ್ಯ, ಬಿಜೆಪಿ ಪಕ್ಷದ ಯುವ ಮುಖಂಡ ಕೆ. ಮಂಜುನಾಥ್ ನೇತೃತ್ವದಲ್ಲಿ ಅಭಿಮಾನಿಗಳ ಬಳಗದಿಂದ ತಾಲೂಕು ಸರ್ಕಾರಿ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣು ಹಂಪಲು ವಿತರಣೆ, ರೈತರಿಗೆ  ತೆಂಗಿನ ಸಸಿ ವಿತರಣೆ, ನಿರ್ಗತಿಕರು, ಅಸಹಾಯಕರು, ವಿಕಲಚೇತನರಿಗೆ ನೆರವು, ವಿದ್ಯಾರ್ಥಿಗಳಿಗೆ ನೋಟ್ ಬುಕ್ ಹಾಗು ಲೇಖನ ಸಾಮಾಗ್ರಿಗಳ ವಿತರಣೆ ಸೇರಿದಂತೆ ಹಲವಾರು ರೀತಿಯ ವಿಭಿನ್ನವಾದ ಸಾಮಾಜಿಕ ಕಾರ್ಯಗಳನ್ನು ಹುಟ್ಟುಹಬ್ಬದಂದು ಕೈಗೊಳ್ಳಲಾಗುತ್ತಿದೆ.
ಈ ಬಾರಿ ಸಹ ತಾಲೂಕಿನ ವೀರಪುರ ಗ್ರಾಮದಲ್ಲಿ ಒಟ್ಟು ಸುಮಾರು ೧ ಸಾವಿರ ತೆಂಗಿನ ಸಸಿಗಳನ್ನು ರೈತರಿಗೆ ವಿತರಿಸಲಾಯಿತು. ಸಂಸದ ಬಿ.ವೈ ರಾಘವೇಂದ್ರ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಅಲ್ಲದೆ ಹೊಸಮನೆ ಭಾಗದಲ್ಲಿ ಕರ್ತವ್ಯ ನಿರ್ವಹಿಸುವ ಮೆಸ್ಕಾಂ ಲೈನ್‌ಮೆನ್‌ಗಳಿಗೆ ಹಾಗು ನಗರಸಭೆ ಪೌರಕಾರ್ಮಿಕರಿಗೆ ದಿನಸಿ ಸಾಮಗ್ರಿಗಳನ್ನು ವಿತರಿಸಲಾಯಿತು.
    ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಎಸ್ ಜ್ಯೋತಿ ಪ್ರಕಾಶ್, ಸದಸ್ಯರಾದ ವಿ. ಕದಿರೇಶ್, ರಾಮಲಿಂಗಯ್ಯ, ಹಟ್ಟಿ ಚಿನ್ನದ ಗಣಿ ಕಂಪನಿ ಆಡಳಿತ ಮಂಡಳಿ ನಿರ್ದೇಶಕ ಕೂಡ್ಲಿಗೆರೆ ಹಾಲೇಶ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಬಿ.ಕೆ ಶ್ರೀನಾಥ್, ಜಿ. ಧರ್ಮಪ್ರಸಾದ್, ತಾಲೂಕು ಅಧ್ಯಕ್ಷ ಎಂ. ಪ್ರಭಾಕರ್, ಅರಳಿಹಳ್ಳಿ ಪ್ರಕಾಶ್, ಗಣಪತಿಭಟ್, ಗ್ರಾಮ ಪಂಚಾಯಿತಿ ಸದಸ್ಯರಾದ ಸರಸ್ವತಿ, ಲೋಲಾಕ್ಷಿ, ರಂಗಸ್ವಾಮಿ, ನಗರಸಭಾ ಸದಸ್ಯರಾದ ಅನಿತಾ ಮಲ್ಲೇಶ್, ಶಶಿಕಲಾ ನಾರಾಯಣಪ್ಪ, ಮಣಿ ಎಎನ್‌ಎಸ್, ಯುವ ಕಾಂಗ್ರೆಸ್ ಅಧ್ಯಕ್ಷ ಜಿ. ವಿನೋದ್, ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷೆ ಶೋಭಾ ಪಾಟೀಲ್ ಹಾಗು ಹಿಂದೂ ಮಹಾಸಭಾ ಹಿಂದೂ ರಾಷ್ಟ್ರಸೇನಾ ವಿನಾಯಕ ಸೇವಾ ಸಮಿತಿ ಪ್ರಮುಖರು, ಸ್ಥಳಿಯ ಮುಖಂಡರು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.



ಭದ್ರಾವತಿಯಲ್ಲಿ ಬಿ.ವೈ ರಾಘವಂದ್ರ ಹುಟ್ಟುಹಬ್ಬದ ಹಿನ್ನಲೆಯಲ್ಲಿ ಹೊಸಮನೆ ಭಾಗದಲ್ಲಿ ಕರ್ತವ್ಯ ನಿರ್ವಹಿಸುವ ಮೆಸ್ಕಾಂ ಲೈನ್‌ಮೆನ್‌ಗಳಿಗೆ ಹಾಗು ಪೌರಕಾರ್ಮಿಕರಿಗೆ ದಿನಸಿ ಸಾಮಗ್ರಿಗಳನ್ನು ವಿತರಿಸಲಾಯಿತು.

ಆ.೧೮ರಂದು ವಿದ್ಯುತ್ ವ್ಯತ್ಯಯ

ಭದ್ರಾವತಿ, ಆ. ೧೬: ಮೆಸ್ಕಾಂ ನಗರ ಉಪವಿಭಾಗ ಘಟಕ-೪ರ ಶಾಖಾ ವ್ಯಾಪ್ತಿಯಲ್ಲಿ ವಿದ್ಯುತ್ ಮಾರ್ಗಗಳ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಆ.೧೮ರಂದು ಬೆಳಿಗ್ಗೆ ೧೦.೩೦ ರಿಂದ ಸಂಜೆ ೫.೩೦ರ ವರೆಗೆ ವಿದ್ಯುತ್ ನಿಲುಗಡೆಯಾಗಲಿದೆ.
ಹೊಳೆಹೊನ್ನೂರು ವೃತ್ತ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಸಂತೆ ಮೈದಾನ, ಭೋವಿ ಕಾಲೋನಿ, ಎನ್‌ಎಂಸಿ ರಸ್ತೆ, ಹೊಸಮನೆ, ಸುಭಾಷ್‌ನಗರ, ಹನುಮಂತನಗರ, ವಿಜಯನಗರ, ಶಿವಾಜಿ ವೃತ್ತ, ತಮ್ಮಣ್ಣ ಕಾಲೋನಿ, ಕೇಶವಪುರ, ಕಬಳಿಕಟ್ಟೆ, ಅಶ್ವಸ್ಥನಗರ ಮತ್ತು ಕುವೆಂಪು ನಗರ ಮತ್ತು ಕಣಕಟ್ಟೆ ಸೇರಿದಂತೆ ಸುತ್ತಮುತ್ತಲ ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದ್ದು, ಗ್ರಾಹಕರು ಸಹಕರಿಸಬೇಕೆಂದು ಸಹಾಯಕ ಕಾರ್ಯಪಾಲಕ ಅಭಿಯಂತರರು ಕೋರಿದ್ದಾರೆ.