Thursday, September 2, 2021

ಪಂಚಮಸಾಲಿ ಸಮಾಜದ ಮೀಸಲಾತಿ ಹೋರಾಟಕ್ಕೆ ಬೆಂಬಲ : ಬಿ.ಕೆ ಸಂಗಮೇಶ್ವರ್

ಭದ್ರಾವತಿ ನಗರಕ್ಕೆ ಆಗಮಿಸಿದ ಶ್ರೀ ಜಗದ್ಗುರು ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿಯವರಿಗೆ ಗೌರವ ಸಮರ್ಪಣೆ ಸಲ್ಲಿಸಲಾಯಿತು.  
    ಭದ್ರಾವತಿ, ಸೆ. ೨: ವೀರಶೈವ ಲಿಂಗಾಯಿತ ಪಂಚಮಸಾಲಿ ಸಮಾಜದ ಪರವಾಗಿ ಮೀಸಲಾತಿಗಾಗಿ ಹೋರಾಟ ನಡೆಸುತ್ತಿರುವ ಕೂಡಲ ಸಂಗಮದ ಶ್ರೀ ಜಗದ್ಗುರು ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿಯವರಿಗೆ ಬೆಂಬಲ ನೀಡುವುದಾಗಿ ಶಾಸಕ ಬಿ.ಕೆ ಸಂಗಮೇಶ್ವರ್ ಹೇಳಿದರು.
    ಅವರು ಗುರುವಾರ ನಗರಕ್ಕೆ ಆಗಮಿಸಿದ ಶ್ರೀ ಜಗದ್ಗುರು ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿಯವರಿಗೆ ಗೌರವ ಸಮರ್ಪಣೆ ಸಲ್ಲಿಸಿ ಮಾತನಾಡಿದರು.
    ಸ್ವಾಮೀಜಿಯವರು ಯಾವುದೇ ಸ್ವಾರ್ಥಕ್ಕಾಗಿ ಹೋರಾಟ ನಡೆಸುತ್ತಿಲ್ಲ. ಪಂಚಮಸಾಲಿ ಸಮಾಜದ ಏಳಿಗಾಗಿ ಹೋರಾಟ ನಡೆಸುತ್ತಿದ್ದಾರೆ. ಸಮಾಜದ ಮುಖ್ಯ ವಾಹಿನಿಯಲ್ಲಿ ಎಲ್ಲರೂ ಸಮಾನವಾಗಿ ಗುರುತಿಸಿಕೊಳ್ಳಬೇಕೆಂಬುದು ಹೋರಾಟದ ಉದ್ದೇಶವಾಗಿದೆ. ಇದನ್ನು ಎಲ್ಲರೂ ಸರಿಯಾಗಿ ಅರ್ಥಮಾಡಿಕೊಳ್ಳಬೇಕು. ನ್ಯಾಯಬದ್ಧವಾದ ಹೋರಾಟಕ್ಕೆ ಸದಾ ಕಾಲ ಬೆಂಬಲ ನೀಡುತ್ತೇನೆ. ಸ್ವಾಮೀಜಿಯವರ ಹೋರಾಟಕ್ಕೆ ಕೈ ಜೋಡಿಸುತ್ತೇನೆ ಎಂದರು.
    ಶ್ರೀ ಜಗದ್ಗುರು ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ನಮ್ಮ ಹೋರಾಟಕ್ಕೆ ಎಲ್ಲೆಡೆ ವ್ಯಾಪಕವಾಗಿ ಬೆಂಬಲ ಲಭಿಸುತ್ತಿರುವುದು ಸಂತೋಷದ ವಿಚಾರವಾಗಿದೆ. ಶಾಸಕ ಸಂಗಮೇಶ್ವರ್ ಸಹ ಬೆಂಬಲ ಸೂಚಿಸಿರುವುದು ಹೋರಾಟಕ್ಕೆ ಮತ್ತಷ್ಟು ಶಕ್ತಿ ತುಂಬಿದಂತಾಗಿದೆ. ಎಲ್ಲರೂ ನಮ್ಮ ಹೋರಾಟಕ್ಕೆ ಕೈಜೋಡಿಸಬೇಕೆಂದರು.
    ಪಂಚಮಸಾಲಿ ಸಮಾಜದ ಚಾಮರಾಜನಗರ ಜಿಲ್ಲಾಧ್ಯಕ್ಷ ಮಲ್ಲೇಶ್, ಹಳೇನಗರದ ವೀರಶೈವ ಸೇವಾ ಸಮಿತಿ ಅಧ್ಯಕ್ಷ ಆರ್.
ಮಹೇಶ್‌ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಸಮಾಜದ ತಾಲೂಕು ಅಧ್ಯಕ್ಷ ಎಸ್. ಸತೀಶ್ ಅಧ್ಯಕ್ಷತೆ ವಹಿಸಿದ್ದರು.

ವಿವಿಧೆಡೆ ಅಭಿಮಾನಿಗಳು, ಕಾರ್ಯಕರ್ತರಿಂದ ಮಾಜಿ ಶಾಸಕ ಎಂ.ಜೆ ಅಪ್ಪಾಜಿ ಮೊದಲ ಪುಣ್ಯಸ್ಮರಣೆ ಆಚರಣೆ

ಉಚಿತ ಆರೋಗ್ಯ ತಪಾಸಣಾ ಶಿಬಿರ, ವಿಕಲಚೇತನರು, ನಿರಾಶ್ರಿತರಿಗೆ ಉಚಿತ ಕ್ಷೌರ, ಅನ್ನ ಸಂತರ್ಪಣೆ


ಮಾಜಿ ಶಾಸಕ ಎಂ.ಜೆ ಅಪ್ಪಾಜಿ ಮೊದಲ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಭದ್ರಾವತಿ ನಗರಸಭೆ ವಾರ್ಡ್ ನಂ.೩೧ರ ಜಿಂಕ್‌ಲೈನ್ ಸಮುದಾಯ ಭವನದಲ್ಲಿ ವಾರ್ಡ್ ನಗರಸಭಾ ಸದಸ್ಯೆ ಪಲ್ಲವಿ ಎಸ್ ದಿಲೀಪ್ ನೇತೃತ್ವದಲ್ಲಿ ಶಿವಮೊಗ್ಗ ಸುಬ್ಬಯ್ಯ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಹಾಗು ತಾಲೂಕು ಸರ್ಕಾರಿ ಆಸ್ಪತ್ರೆ ಸಹಕಾರದೊಂದಿಗೆ ಆಯೋಜಿಸಲಾಗಿತ್ತು.  
    ಭದ್ರಾವತಿ, ಸೆ. ೨: ಮಾಜಿ ಶಾಸಕ ಎಂ.ಜೆ ಅಪ್ಪಾಜಿ ಅವರ ಮೊದಲ ವರ್ಷದ ಪುಣ್ಯ ಸ್ಮರಣೆಯನ್ನು ಗುರುವಾರ ನಗರದ ವಿವಿಧೆಡೆ ಅಭಿಮಾನಿಗಳು, ಕಾರ್ಯಕರ್ತರು ಆಚರಿಸಿದರು.
    ಉಚಿತ ಆರೋಗ್ಯ ತಪಾಸಣಾ ಶಿಬಿರ ನಗರಸಭೆ ವಾರ್ಡ್ ನಂ.೩೧ರ ಜಿಂಕ್‌ಲೈನ್ ಸಮುದಾಯ ಭವನದಲ್ಲಿ ವಾರ್ಡ್ ನಗರಸಭಾ ಸದಸ್ಯೆ ಪಲ್ಲವಿ ಎಸ್ ದಿಲೀಪ್ ನೇತೃತ್ವದಲ್ಲಿ ಶಿವಮೊಗ್ಗ ಸುಬ್ಬಯ್ಯ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಹಾಗು ತಾಲೂಕು ಸರ್ಕಾರಿ ಆಸ್ಪತ್ರೆ ಸಹಕಾರದೊಂದಿಗೆ ಆಯೋಜಿಸಲಾಗಿತ್ತು.  
    ಚರ್ಮ ವೈದ್ಯರು, ದಂತ ತಜ್ಞರು, ಸರ್ಜನ್, ಕಿವಿ, ಮೂಗು, ಗಂಟಲು, ಮಕ್ಕಳ ತಜ್ಞರು ಮತ್ತು ಕಣ್ಣಿನ ತಜ್ಞರು ಶಿಬಿರದಲ್ಲಿ ತಪಾಸಣೆ ನಡೆಸಿದರು. ಜೊತೆಗೆ ಉಚಿತವಾಗಿ ಇಸಿಜಿ, ರಕ್ತದೊತ್ತಡ ಮತ್ತು ಮಧುಮೇಹ ಪರೀಕ್ಷೆ ನಡೆಸಲಾಯಿತು. ಸುಮಾರು ೪೫೦ಕ್ಕೂ ಹೆಚ್ಚು ಮಂದಿ ಶಿಬಿರದಲ್ಲಿ ಪಾಲ್ಗೊಂಡು ಸದುಪಯೋಗ ಪಡೆದುಕೊಂಡರು.
    ಜೆಡಿಎಸ್ ಪಕ್ಷದ ವರಿಷ್ಠರಾದ ಶಾರದ ಅಪ್ಪಾಜಿ ಶಿಬಿರಕ್ಕೆ ಚಾಲನೆ ನೀಡಿದರು. ಸದಸ್ಯೆ ಪಲ್ಲವಿ ಎಸ್ ದಿಲೀಪ್, ಜೆಡಿಎಸ್ ತಾಲೂಕು ಅಧ್ಯಕ್ಷ ಆರ್. ಕರುಣಾಮೂರ್ತಿ, ಜಿ.ಪಂ. ಮಾಜಿ ಸದಸ್ಯ ಎಸ್. ಕುಮಾರ್, ಮುಖಂಡರಾದ ಕ್ಲಬ್ ಸುರೇಶ್, ಶ್ರೀನಿವಾಸ್, ಯೋಗೇಶ್‌ಕುಮಾರ್ ಹಾಗು ಅಪ್ಪಾಜಿ ಅಭಿಮಾನಿ ಬಳಗದವರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
       ವಿಕಲಚೇತನರು, ನಿರಾಶ್ರಿತರಿಗೆ ಉಚಿತ ಕ್ಷೌರ:
    ತಾಲೂಕು ಸವಿತಾ ಸಮಾಜ ಹಾಗು ನ್ಯೂಟೌನ್ ದಯಾಸಾಗರ್ ಟ್ರಸ್ಟ್ ವತಿಯಿಂದ ಎಂ.ಜೆ ಅಪ್ಪಾಜಿ ಸ್ಮರಣಾರ್ಥ ವಿಕಲಚೇತನರು, ನಿರಾಶ್ರಿತರಿಗೆ ಉಚಿತ ಕ್ಷೌರ ನೆರವೇರಿಸಲಾಯಿತು.
    ದಯಾಸಾಗರ್ ಟ್ರಸ್ಟ್ ಅಧ್ಯಕ್ಷ ಮೋಸಸ್ ರೋಸಯ್ಯ, ಸವಿತಾ ಸಮಾಜದ ಶಿವಶಂಕರ್, ಕೆ. ಗೋಪಾಲಕೃಷ್ಣ, ನರಸಿಂಹಮೂರ್ತಿ, ಬಿ.ಎನ್ ಮಹೇಶ್‌ಕುಮಾರ್, ರವಿಕುಮಾರ್, ಚಂದ್ರು, ಶಿವರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ಗೋಣಿಬೀಡಿನ ಅಪ್ಪಾಜಿ ಸಮಾದಿಗೆ ಪೂಜೆ :
    ಅಪ್ಪಾಜಿ ಕುಟುಂಬ ಅಧಿಕೃತವಾಗಿ ಸೆ.೨೧ರಂದು ಮೊದಲ ಪುಣ್ಯ ಸ್ಮರಣೆ ಆಚರಿಸಲಿದ್ದು, ಗುರುವಾರ ಅಭಿಮಾನಿಗಳು ಹಾಗು ಕಾರ್ಯಕರ್ತರೊಂದಿಗೆ ಗೋಣಿಬೀಡಿನ ಅಪ್ಪಾಜಿ ಸಮಾದಿಗೆ ವಿಶೇಷ ಪೂಜೆ ಸಲ್ಲಿಸುವ ಜೊತೆಗೆ ಅನ್ನಸಂತರ್ಪಣೆ ನೆರವೇರಿಸಿದರು. ಶಾರದ ಅಪ್ಪಾಜಿ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.


ಭದ್ರಾವತಿ ತಾಲೂಕು ಸವಿತಾ ಸಮಾಜ ಹಾಗು ನ್ಯೂಟೌನ್ ದಯಾಸಾಗರ್ ಟ್ರಸ್ಟ್ ವತಿಯಿಂದ ಮಾಜಿ ಶಾಸಕ ಎಂ.ಜೆ ಅಪ್ಪಾಜಿ ಮೊದಲ ಪುಣ್ಯಸ್ಮರಣೆ ನಡೆಯಿತು.

ನಗರಸಭೆ ವಾರ್ಡ್ ನಂ.೨೯ರ ಚುನಾವಣೆ ಮತದಾನಕ್ಕೆ ಸಕಲ ಸಿದ್ದತೆ

ಒಟ್ಟು ೩೪೨೩ ಮತದಾರರು, ೪ ಮತಗಟ್ಟೆಗಳು, ೩ ಅಭ್ಯರ್ಥಿಗಳು


ಭದ್ರಾವತಿ, ಸೆ. ೨: ನಗರಸಭೆ ವಾರ್ಡ್ ನಂ.೨೯ರ ಚುನಾವಣೆಯ ಮತದಾನ ಸೆ.೩ರಂದು ಬೆಳಿಗ್ಗೆ ೭ ಗಂಟೆಯಿಂದ ಸಂಜೆ ೫ ಗಂಟೆವರೆಗೆ ನಡೆಯಲಿದ್ದು, ಚುನಾವಣಾ ಆಯೋಗ ಈಗಾಗಲೇ ಮತದಾನಕ್ಕೆ ಅಗತ್ಯವಿರುವ ಎಲ್ಲಾ ಸಿದ್ದತೆಗಳನ್ನು ಕೈಗೊಂಡಿದೆ.
    ೧೭೦೭ ಪುರುಷ ಹಾಗು ೧೭೧೬ ಮಹಿಳಾ ಮತದಾರರು ಸೇರಿ ಒಟ್ಟು ೩೪೨೩ ಮತದಾರನ್ನು ಒಳಗೊಂಡಿದೆ. ಜಯಶ್ರೀ ವೃತ್ತದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಉರ್ದು ಸರ್ಕಾರಿ ಶಾಲೆ, ನ್ಯೂಟೌನ್ ನಗರಸಭೆ ಶಾಖಾ ಕಛೇರಿ ಹಾಗು ಸಿದ್ದಾಪುರ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಮತದಾನ ಕೇಂದ್ರಗಳನ್ನು ತೆರೆಯಲಾಗಿದ್ದು, ಒಂದು ಮತದಾನ ಕೇಂದ್ರದಲ್ಲಿ ೪ ಸಿಬ್ಬಂದಿಗಳು, ಇಬ್ಬರು ಪೊಲೀಸರು ಕರ್ತವ್ಯ ನಿರ್ವಹಿಸಲಿದ್ದಾರೆ.
    ಹೆಚ್ಚಿನ ಪ್ರಮಾಣದಲ್ಲಿ ಶ್ರೀಮಂತ ವರ್ಗದವರು ವಾಸಿಸುತ್ತಿರುವ ಈ ವಾರ್ಡ್ ಜನ್ನಾಪುರ ಭಾಗದಲ್ಲಿದ್ದು, ಕಿತ್ತೂರು ರಾಣಿ ಚನ್ನಮ್ಮ ಬಡಾವಣೆ(ಕೆ.ಸಿ ಬ್ಲಾಕ್), ರಾಜಪ್ಪ ಬಡಾವಣೆ ಹಾಗು ಸಿದ್ದಾಪುರ ಎನ್‌ಟಿಬಿ ಬಡಾವಣೆಯನ್ನು ಈ ವಾರ್ಡ್ ಒಳಗೊಂಡಿದೆ. ಮೂಲ ನಿವಾಸಿಗಳು ಕಡಿಮೆ ಸಂಖ್ಯೆಯಲ್ಲಿದ್ದು, ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿರುವವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.
    ಕಾಂಗ್ರೆಸ್ ಅಭ್ಯರ್ಥಿಯಾಗಿ ಬಿ.ಜಿ ಲೋಹಿತಾ ನಂಜಪ್ಪ, ಜೆಡಿಎಸ್ ಅಭ್ಯರ್ಥಿಯಾಗಿ ಆರ್. ನಾಗರತ್ನ ಮತ್ತು ಬಿಜೆಪಿ ಅಭ್ಯರ್ಥಿಯಾಗಿ ರಮಾ ವೆಂಕಟೇಶ್ ಕಣದಲ್ಲಿದ್ದು, ಸೆ.೬ರಂದು ಎಣಿಕೆ ನಡೆದು ಫಲಿತಾಂಶ ಪ್ರಕಟಗೊಳ್ಳಲಿದೆ. ಈಗಾಗಲೇ ಒಟ್ಟು ೩೫ ವಾರ್ಡ್‌ಗಳ ಪೈಕಿ ೧ ಪಕ್ಷೇತರ, ೧೮ ಕಾಂಗ್ರೆಸ್, ೧೧ ಜೆಡಿಎಸ್ ಮತ್ತು ೪ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.

ಸೆ.೪ರಂದು ವಿದ್ಯುತ್ ನಿಲುಗಡೆ

ಭದ್ರಾವತಿ, ಸೆ. ೨: ಮೆಸ್ಕಾಂ ನಗರ ಉಪವಿಭಾಗದ ಘಟಕ-೨ರ ಶಾಖಾ ವ್ಯಾಪ್ತಿಯಲ್ಲಿ ವಿದ್ಯುತ್ ಮಾರ್ಗ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಸೆ.೪ರಂದು ಬೆಳಿಗ್ಗೆ ೯ ಗಂಟೆಯಿಂದ ಸಂಜೆ ೬ ಗಂಟೆವರೆಗೆ ವಿದ್ಯುತ್ ನಿಲುಗಡೆಯಾಗಲಿದೆ.
    ಹೊಳೆಹೊನ್ನೂರು ವೃತ್ತ, ಚನ್ನಗಿರಿ ರಸ್ತೆ, ಸತ್ಯ ಚಿತ್ರ ಮಂದಿರ ಸುತ್ತಮುತ್ತಲಿನ ಪ್ರದೇಶ, ಜೈ ಭೀಮ ನಗರ, ತಾಲೂಕು ಕಚೇರಿ ಸುತ್ತಮುತ್ತಲಿನ ಪ್ರದೇಶ, ಅನ್ವರ್ ಕಾಲೋನಿ, ಇಂದಿರಾ ನಗರ, ದುರ್ಗಿ ನಗರ, ಸರ್ಕಾರಿ ಆಸ್ಪತ್ರೆ ಸುತ್ತಮುತ್ತಲಿನ ಪ್ರದೇಶ, ಭೂತನಗುಡಿ, ಗಾಂಧಿನಗರ, ನಗರಸಭಾ ಕಚೇರಿ ಪ್ರದೇಶ, ಮಾಧವ ನಗರ, ಕೋಡಿಹಳ್ಳಿ, ಗೌರಾಪುರ ಸೇರಿದಂತೆ ಇನ್ನಿತರ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ. ಗ್ರಾಹಕರು ಸಹಕರಿಸುವಂತೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಕೋರಿದ್ದಾರೆ.

Wednesday, September 1, 2021

ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣಕ್ಕೆ ಅಪ್ಪಾಜಿ ಹೆಸರಿಡಿ : ಸಚಿವರಿಗೆ ಮನವಿ

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಭದ್ರಾವತಿ ಮುಖ್ಯ ಬಸ್ ನಿಲ್ದಾಣಕ್ಕೆ ಮಾಜಿ ಶಾಸಕ ದಿವಂಗತ ಎಂ.ಜೆ ಅಪ್ಪಾಜಿಯವರ ಹೆಸರನ್ನು ನಾಮಕರಣಗೊಳಿಸುವುದು, ಡಾ. ಬಿ.ಆರ್ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಅಗತ್ಯವಿರುವ ಅನುದಾನ ಬಿಡುಗಡೆಗೊಳಿಸಲು ಸರ್ಕಾರಕ್ಕೆ ಒತ್ತಾಯಿಸುವಂತೆ ಜಿಲ್ಲಾ ಉಸ್ತುವಾರಿ ಹಾಗು ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಖಾತೆ ಸಚಿವ ಕೆ.ಎಸ್  ಈಶ್ವರಪ್ಪ ಅವರಿಗೆ ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ಮನವಿ ಸಲ್ಲಿಸಲಾಯಿತು.
    ಭದ್ರಾವತಿ, ಸೆ. ೧: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನಗರದ ಮುಖ್ಯ ಬಸ್ ನಿಲ್ದಾಣಕ್ಕೆ ಮಾಜಿ ಶಾಸಕ ದಿವಂಗತ ಎಂ.ಜೆ ಅಪ್ಪಾಜಿಯವರ ಹೆಸರನ್ನು ನಾಮಕರಣಗೊಳಿಸುವುದು, ಡಾ. ಬಿ.ಆರ್ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಅಗತ್ಯವಿರುವ ಅನುದಾನ ಬಿಡುಗಡೆಗೊಳಿಸಲು ಸರ್ಕಾರಕ್ಕೆ ಒತ್ತಾಯಿಸುವಂತೆ ಜಿಲ್ಲಾ ಉಸ್ತುವಾರಿ ಹಾಗು ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಖಾತೆ ಸಚಿವ ಕೆ.ಎಸ್  ಈಶ್ವರಪ್ಪ ಅವರಿಗೆ ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ಮನವಿ ಸಲ್ಲಿಸಲಾಯಿತು.
    ೩ ಬಾರಿ ಶಾಸಕರಾಗಿ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗಾಗಿ, ಬಡ, ಮಧ್ಯಮ ಹಾಗು ಎಲ್ಲಾ ವರ್ಗದ ಜನರ ಏಳಿಗೆಗಾಗಿ ಹಗಲಿರುಳು ಶ್ರಮಿಸಿರುವ ದಿವಂಗತ ಎಂ.ಜೆ ಅಪ್ಪಾಜಿ ಅವರ ಹೆಸರನ್ನು ನಗರದ ಕೆಎಸ್‌ಆರ್‌ಟಿಸಿ ಮುಖ್ಯ ಬಸ್‌ನಿಲ್ದಾಣಕ್ಕೆ ನಾಮಕರಣಗೊಳಿಸುವಂತೆ ಕೋರಲಾಗಿದೆ.
    ನಗರದ ಹೃದಯ ಭಾಗದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಹಿಂಭಾಗದಲ್ಲಿ ೨೦೧೭ರಲ್ಲಿ ಆರಂಭಗೊಂಡಿರುವ ಡಾ.ಬಿ.ಆರ್ ಅಂಬೇಡ್ಕರ್ ಭವನ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದ್ದು, ಸರ್ಕಾರದಿಂದ ಬಿಡುಗಡೆಯಾಗಿರುವ ೨ ಕೋ. ರು. ಹಾಗು ನಗರಸಭೆ ವತಿಯಿಂದ ಬಿಡುಗಡೆಯಾಗಿರುವ ೫೦ ಲಕ್ಷ ರು. ಅನುದಾನದಲ್ಲಿ ಇದುವರೆಗೂ ಕಾಮಗಾರಿ ನಡೆದಿದ್ದು, ಇದೀಗ ಅರ್ಧಕ್ಕೆ ಸ್ಥಗಿತಗೊಂಡಿದೆ. ಪೂರ್ಣಗೊಳ್ಳಲು ಇನ್ನೂ ೫.೫ ಕೋ. ರು. ಅವಶ್ಯಕತೆ ಇದ್ದು, ತಕ್ಷಣ ಈ ಸಂಬಂಧ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಅನುದಾನ ಬಿಡುಗಡೆ ಮಾಡಿಸಿಕೊಡುವಂತೆ ಮನವಿ ಮಾಡಲಾಗಿದೆ.
    ಸಮಿತಿ ಅಧ್ಯಕ್ಷ ಬಿ.ಎನ್ ರಾಜು, ಕಾರ್ಯಾಧ್ಯಕ್ಷ ಐ.ಎಲ್ ಅರುಣ್‌ಕುಮಾರ್, ಪ್ರಧಾನ ಕಾರ್ಯದರ್ಶಿ ಅಕ್ರಮ್‌ಖಾನ್, ಉಪಾಧ್ಯಕ್ಷರಾದ ಬ್ರಹ್ಮಲಿಂಗಯ್ಯ, ಎಂ.ವಿ ಚಂದ್ರಶೇಖರ್  ಹಾಗು ಪದಾಧಿಕಾರಿಗಳು ಮನವಿ ಸಲ್ಲಿಸುವ ಜೊತೆಗೆ ಸಚಿವ ಈಶ್ವರಪ್ಪ ಅವರನ್ನು ಸನ್ಮಾನಿಸಿ ಅಭಿನಂದಿಸಿದರು.

ವರ್ಷ ಕಳೆದರೂ ಜನಮಾನಸದಲ್ಲಿ ಅಚ್ಚಳಿಯದಂತೆ ಉಳಿದಿರುವ ಮಾಜಿ ಶಾಸಕ ಎಂ.ಜೆ ಅಪ್ಪಾಜಿ

ಮಾಜಿ ಶಾಸಕ ಎಂ.ಜೆ ಅಪ್ಪಾಜಿ
* ಅನಂತಕುಮಾರ್
    ಭದ್ರಾವತಿ: ಕ್ಷೇತ್ರದ ೩ ದಶಕಗಳ ರಾಜಕೀಯ ಕೊಂಡಿಯೊಂದು ಕಳಚಿ ಹೋಗಿ ಇದೀಗ ಒಂದು ವರ್ಷ ಕಳೆದಿದ್ದು, ಆದರೂ ಸಹ ಜನಮಾನಸದಲ್ಲಿ ಮಾಜಿ ಶಾಸಕ ಎಂ.ಜಿ ಅಪ್ಪಾಜಿ ಅಚ್ಚಳಿಯದಂತೆ ಉಳಿದುಕೊಂಡಿದ್ದಾರೆ. ಕಳೆದ ವರ್ಷ ಸೆ.೨ರಂದು ನಡುರಾತ್ರಿ ಅಪ್ಪಾಜಿ ಇಹಲೋಕ ತ್ಯಜಿಸುತ್ತಾರೆಂಬ ಕನಸು ಸಹ ಯಾರಿಗೂ ಇರಲಿಲ್ಲ. ಅವರ ನಿಧನದ ಸುದ್ದಿ ಕ್ಷೇತ್ರದ ಜನತೆಯನ್ನು ಒಮ್ಮೆ ತಲ್ಲಣಗೊಳಿಸಿತ್ತು.
    ಕೇಂದ್ರ ಉಕ್ಕು ಪ್ರಾಧಿಕಾರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯಲ್ಲಿ ಸಾಮಾನ್ಯ ಕಾರ್ಮಿಕನಾಗಿ ೨೦ ರು. ಸಂಬಳಕ್ಕೆ ದುಡಿಯುತ್ತಿದ್ದ ಅಪ್ಪಾಜಿ ಆರಂಭದಲ್ಲಿ ಕಾರ್ಮಿಕ ಹೋರಾಟಗಾರನಾಗಿ ಗುರುತಿಸಿ ಕೊಂಡಿದ್ದರು. ತಿಂಗಳ ಸಂಬಳದಲ್ಲಿ ಜೀವನ ನಡೆಸುವುದೇ ಕಷ್ಟವಿರುವ ಸಂದರ್ಭದಲ್ಲಿ ಜನರು ನೀಡಿದ ದೇಣಿಗೆ ಹಣದಿಂದಲೇ ಚುನಾವಣೆಗೆ ಸ್ಪರ್ಧಿಸುವ ಮೂಲಕ ರಾಜಕೀಯ ಅಸ್ತಿತ್ವ ಕಂಡು ಕೊಂಡರು. ನಂತರ ಅವರು ೩ ಬಾರಿ ಶಾಸಕರಾದರು ಸಾಮಾನ್ಯರಂತೆ ಬದುಕಿ ಕ್ಷೇತ್ರದ ಜನರೊಂದಿಗೆ ಗುರುತಿಸಿಕೊಂಡಿದ್ದರು. ಈ ಹಿನ್ನಲೆಯಲ್ಲಿ ಅವರು ಇಂದಿಗೂ ಜನಮಾನಸದಲ್ಲಿ ಉಳಿದುಕೊಂಡಿದ್ದಾರೆ.
    ಅಧಿಕಾರ ಇರಲಿ, ಇಲ್ಲದಿರಲಿ ಕ್ಷೇತ್ರದಲ್ಲಿ ಅಪ್ಪಾಜಿ ತಮ್ಮದೇ ಆದ ವರ್ಚಸ್ಸು, ಮತ ಬ್ಯಾಂಕ್ ಹೊಂದಿದ್ದರು. ಈ ನಡುವೆ ಸ್ಥಳೀಯ ಸಂಸ್ಥೆಗಳ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದರು. ಅಲ್ಲದೆ ಹಲವು ಮುಖಂಡರು ರಾಜಕೀಯವಾಗಿ ಮುಂಚೂಣಿಗೆ ಬರಲು ಕಾರಣಕರ್ತರಾಗಿದ್ದರು. ಇದೀಗ ಅಪ್ಪಾಜಿ ಇಲ್ಲದೆ ೧ ವರ್ಷ ಕಳೆದಿದ್ದು, ಈ ನಡುವೆ ಎದುರಾದ ಗ್ರಾಮ ಪಂಚಾಯಿತಿ, ನಗರಸಭೆ ಚುನಾವಣೆಗಳನ್ನು ಅಪ್ಪಾಜಿ ಹಿಂಬಾಲಕರು ಸ್ವಲ್ಪ ಮಟ್ಟಿಗೆ ಯಶಸ್ವಿಯಾಗಿ ಎದುರಿಸಿದ್ದಾರೆ. ಒಂದು ಹಂತದಲ್ಲಿ ಹಿನ್ನಡೆಯಾಗಿರಬಹುದು. ಆದರೆ ಭವಿಷ್ಯದಲ್ಲಿ ಪೂರ್ಣ ಗುರಿ ಸಾಧಿಸುವ ವಿಶ್ವಾಸ ಹೆಚ್ಚಿಸಿಕೊಂಡಿರುವುದು ಮಾತ್ರ ನೂರಕ್ಕೆ ನೂರರಷ್ಟು ಸತ್ಯ ಎಂಬುದು ಎಲ್ಲರಿಗೂ ಮನವರಿಕೆಯಾಗಿದೆ.
    ಅಪ್ಪಾಜಿ ಕುಟುಂಬ ಸಹ ಅಗಲಿಕೆ ನೋವಿನಿಂದ ಹಂತ ಹಂತವಾಗಿ ಹೊರಬರುತ್ತಿದ್ದು, ಅಪ್ಪಾಜಿಯವರ ಆದರ್ಶಗಳನ್ನು ಮೈಗೂಡಿಸಿಕೊಂಡು ಭವಿಷ್ಯದಲ್ಲಿ ರಾಜಕೀಯ ಅಸ್ತಿತ್ವ ಕಂಡುಕೊಳ್ಳುವ ನಿಟ್ಟಿನಲ್ಲಿ ಗಮನ ಹರಿಸುತ್ತಿದೆ. ಪ್ರಸ್ತುತ ಅಪ್ಪಾಜಿ ಹಿಂಬಾಲಕರು ಶಾರದ ಅಪ್ಪಾಜಿ ಮಾರ್ಗದರ್ಶನದಲ್ಲಿಯೇ ಮುನ್ನಡೆಯುತ್ತಿದ್ದು, ಹೊಸ ನಾಯಕನ ಆಯ್ಕೆಗಾಗಿ ಹುಡುಕಾಟ ನಡೆಯುತ್ತಿದೆ. ಈ ನಡುವೆ ಕ್ಷೇತ್ರದಲ್ಲಿ ಪ್ರಬಲ ಸಮುದಾಯಗಳಲ್ಲಿ ಒಂದಾಗಿರುವ ಒಕ್ಕಲಿಗ ಸಮುದಾಯ ಸಹ ಸಮರ್ಥ ನಾಯಕನಿಗಾಗಿ ಎದುರು ನೋಡುತ್ತಿದೆ. ಅಪ್ಪಾಜಿ ಸ್ಥಾನ ತುಂಬುವಂತಹ ನಾಯಕ ಯಾರಾಗಲಿದ್ದಾರೆಂಬುದು ಇದೀಗ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.  
    ಮುಂಬರುವ ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಚುನಾವಣೆಗಳನ್ನು ಸಮರ್ಥವಾಗಿ ಎದುರಿಸಲು ಈಗಾಗಲೇ ಸಿದ್ದತೆಗಳನ್ನು ರೂಪಿಸಿಕೊಂಡಿರುವ ಬೆಂಬಲಿಗರಿಗೆ ಅಪ್ಪಾಜಿಯವರ ಒಂದು ವರ್ಷದ ನೆನಪು ಮತ್ತಷ್ಟು ಚೈತನ್ಯವನ್ನುಂಟು ಮಾಡಲಿದೆ ಎನ್ನುವ ವಿಶ್ವಾಸ ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು ಹೊಂದಿದ್ದಾರೆ.

ಬಿಜೆಪಿ ಅಭ್ಯರ್ಥಿ ರಮಾ ವೆಂಕಟೇಶ್ ಪರವಾಗಿ ಪಾದಯಾತ್ರೆ

ಭದ್ರಾವತಿ ನಗರಸಭೆ ವಾರ್ಡ್ ನಂ.೨೯ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿರುವ ಬಿಜೆಪಿ ಸಹ ಅಭ್ಯರ್ಥಿ ಪರವಾಗಿ ವ್ಯಾಪಕ ಪ್ರಚಾರ ನಡೆಸುವ ಜೊತೆಗೆ ಬಹಿರಂಗ ಪ್ರಚಾರಕ್ಕೆ ಕೊನೆಯ ದಿನವಾದ ಬುಧವಾರ ವಾರ್ಡ್ ವ್ಯಾಪ್ತಿಯಲ್ಲಿ ಪಾದಯಾತ್ರೆ ನಡೆಸಿತು.
    ಭದ್ರಾವತಿ, ಸೆ. ೧: ನಗರಸಭೆ ವಾರ್ಡ್ ನಂ.೨೯ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿರುವ ಬಿಜೆಪಿ ಸಹ ಅಭ್ಯರ್ಥಿ ಪರವಾಗಿ ವ್ಯಾಪಕ ಪ್ರಚಾರ ನಡೆಸುವ ಜೊತೆಗೆ ಬಹಿರಂಗ ಪ್ರಚಾರಕ್ಕೆ ಕೊನೆಯ ದಿನವಾದ ಬುಧವಾರ ವಾರ್ಡ್ ವ್ಯಾಪ್ತಿಯಲ್ಲಿ ಪಾದಯಾತ್ರೆ ನಡೆಸಿತು.
    ಜನ್ನಾಪುರ ಮಹಾಗಣಪತಿ ದೇವಸ್ಥಾನದಿಂದ ಆರಂಭಗೊಂಡ ಪಾದ ಯಾತ್ರೆ ನಂದಿನಿ ವೃತ್ತದ ಮೂಲಕ ವಾರ್ಡ್ ಪ್ರವೇಶಿಸಿ ಅಭ್ಯರ್ಥಿ ರಮಾ ವೆಂಕಟೇಶ್ ಅವರಿಗೆ ಮತ ನೀಡುವಂತೆ ವಿವಿಧೆಡೆ ಮತಯಾಚನೆ ನಡೆಸಲಾಯಿತು.
    ಬಿಜೆಪಿ ತಾಲೂಕು ಮಂಡಲ ಅಧ್ಯಕ್ಷ ಎಂ. ಪ್ರಭಾಕರ್ ಹಾಗು ಜನ್ನಾಪುರ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ನವೀನ್‌ಕುಮಾರ್ ನೇತೃತ್ವದಲ್ಲಿ ನಡೆದ ಪಾದಯಾತ್ರೆಯಲ್ಲಿ ಜಿಲ್ಲಾ ಕಾರ್ಯದರ್ಶಿ ಜಿ. ಧರ್ಮಪ್ರಸಾದ್, ಮಹಿಳಾ ಮೋರ್ಚಾ ಅಧ್ಯಕ್ಷೆ ಶೋಭಾ ಪಾಟೀಲ್, ಯುವ ಘಟಕದ ಅಧ್ಯಕ್ಷ ವಿಜಯ್‌ರಾಜ್, ಎಸ್.ಸಿ ಮೋರ್ಚಾ ಅಧ್ಯಕ್ಷ ಪಿ. ಗಣೇಶ್‌ರಾವ್, ಕರ್ನಾಟಕ ನೀರು ಸರಬರಾಜು, ಒಳಚರಂಡಿ ಮಂಡಳಿ ನಿರ್ದೇಶಕ ಮಂಗೋಟೆ ರುದ್ರೇಶ್, ನಗರಸಭಾ ಸದಸ್ಯೆ ಶಶಿಕಲಾ, ಅನ್ನಪೂರ್ಣ ಸಾವಂತ್, ಹೇಮಾವತಿ ವಿಶ್ವನಾಥ್, ಸುಲೋಚನಾ ಪ್ರಕಾಶ್, ಮಂಜುಳ, ಶೈಲಜಾ ರಾಮಕೃಷ್ಣ, ಕೆ. ಮಂಜಪ್ಪ, ಎಂ.ಎಸ್ ಸುರೇಶಪ್ಪ, ಧನುಷ್ ಬೋಸ್ಲೆ, ಬಿ.ಎಸ್ ನಾರಾಯಣಪ್ಪ, ಸುಬ್ರಮಣ್ಯ ಪಕ್ಷದ ವಿವಿಧ ಮೋರ್ಚಾಗಳ ಪದಾಧಿಕಾರಿಗಳು, ಮುಖಂಡರು, ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.