Wednesday, September 8, 2021

ವಿನಾಯಕ ಮೂರ್ತಿ ತಯಾರಕರ ಬದುಕಿಗೆ ಕತ್ತರಿ : ವಿವಿಧೆಡೆ ಸಾರ್ವಜನಿಕ ಸ್ಥಳಗಳಲ್ಲಿ ಪೆಂಡಾಲ್ ನಿರ್ಮಾಣಕ್ಕೆ ಚಾಲನೆ

ಭದ್ರಾವತಿ ಹಳೇನಗರದ ಕುಂಬಾರರ ಬೀದಿ ನಿವಾಸಿ ಬಸವರಾಜ್ ವಿನಾಯಕ ಮೂರ್ತಿಗಳ ತಯಾರಿಕೆಯಲ್ಲಿ ತೊಡಗಿರುವುದು.
    ಭದ್ರಾವತಿ, ಸೆ. ೮: ಈ ಬಾರಿ ಕೊರೋನಾ ಸಂಕಷ್ಟದ ನಡುವೆಯೂ ಸರ್ಕಾರ ಸಾರ್ವಜನಿಕವಾಗಿ ವಿನಾಯಕ ಮೂರ್ತಿ ಪ್ರತಿಷ್ಠಾಪನೆಗೆ  ಅವಕಾಶ ಕಲ್ಪಿಸಿಕೊಟ್ಟಿದೆ. ಆದರೆ ಸರ್ಕಾರ ವಿಳಂಬವಾಗಿ ಕೈಗೊಂಡ ನಿರ್ಧಾರದಿಂದಾಗಿ ವಿನಾಯಕ ಮೂರ್ತಿ ತಯಾರಕರು ಅತಂತ್ರರಾಗಿದ್ದಾರೆ.
    ವಿನಾಯಕ ಮೂರ್ತಿ ಪ್ರತಿಷ್ಠಾಪನೆಯೊಂದಿಗೆ ಹಲವಾರು ಷರತ್ತುಗಳನ್ನು ವಿಧಿಸಿರುವುದು ಮೂರ್ತಿ ತಯಾರಕರ ಸಂಕಷ್ಟಕ್ಕೆ ಕಾರಣವಾಗಿದೆ. ಕೇವಲ ೩ ಅಡಿ ಮೂರ್ತಿ ಪ್ರತಿಷ್ಠಾಪನೆಗೆ ಮಾತ್ರ ಅವಕಾಶ ನೀಡಲಾಗಿದೆ. ಸರ್ಕಾರ ನಿರ್ಧಾರ ಕೈಗೊಳ್ಳುವ ಮೊದಲೇ ಗ್ರಾಹಕರ ಬೇಡಿಕೆಯಂತೆ ೬ ರಿಂದ ೫ ಅಡಿ ಎತ್ತರದ ಮೂರ್ತಿಗಳನ್ನು ತಯಾರಿಸಿದ್ದಾರೆ. ಈ ಮೂರ್ತಿಗಳ ಪ್ರತಿಷ್ಠಾಪನೆಗೆ ಸರ್ಕಾರ ಕೈಗೊಂಡಿರುವ ನಿರ್ಧಾರ ಇದೀಗ ಅಡ್ಡಿಯನ್ನುಂಟು ಮಾಡಿದೆ. ಮತ್ತೊಂದೆಡೆ ಸರ್ಕಾರದ ವಿಳಂಬ ನಿರ್ಧಾರದಿಂದಾಗಿ ಮೂರ್ತಿ ತಯಾರಕರಿಗೆ ಸೂಕ್ತ ಮಾರುಕಟ್ಟೆ ಇಲ್ಲವಾಗಿದೆ.


ಭದ್ರಾವತಿ ಹಳೇನಗರದ ಕುಂಬಾರರ ಬೀದಿ ನಿವಾಸಿ ಬಸವರಾಜ್ ಅವರ ಇಬ್ಬರು ಸಹೋದರರು ತಯಾರಿಸಿರುವ ವಿನಾಯಕ ಮೂರ್ತಿಗಳು.
    ಹಳೇನಗರದ ಕುಂಬಾರರ ಬೀದಿಯಲ್ಲಿ ಸುಮಾರು ೬ ಕುಟುಂಬಗಳು ಮೂಲ ಕಸುಬನ್ನು ಇಂದಿಗೂ ರೂಢಿಸಿಕೊಂಡು ಬಂದಿದ್ದು, ವಿನಾಯಕ ಚತುರ್ಥಿ ಸಂದರ್ಭದಲ್ಲಿ ಮೂರ್ತಿಗಳ ತಯಾರಿಕೆಯಲ್ಲಿ ತೊಡಗಿಸಿಕೊಂಡಿವೆ. ಉಳಿದ ಅವಧಿಯಲ್ಲಿ ೬ ಕುಟುಂಬಗಳ ಪೈಕಿ ೩ ಕುಟುಂಬಗಳು ಮಾತ್ರ ಮಡಿಕೆ ತಯಾರಿಕೆಯಲ್ಲಿ ತೊಡಗಿವೆ. ಉಳಿದ ಕುಟುಂಬಗಳು ಮದುವೆ ಕಾರ್ಯಗಳಲ್ಲಿ ಬಳಸುವ ಪೇಟ, ಬೀಸಣಿಗೆ ಸೇರಿದಂತೆ ಇನ್ನಿತರ ವಸ್ತುಗಳ ತಯಾರಿಕೆಯಲ್ಲಿ ತೊಡಗಿವೆ.
    ಕಳೆದ ಕೆಲವು ವರ್ಷಗಳಿಂದ ಸರ್ಕಾರ ರೂಪಿಸುತ್ತಿರುವ ಹೊಸ ಹೊಸ ಕಾಯ್ದೆಗಳು ಸಹ ಮೂರ್ತಿ ತಯಾರಕರನ್ನು ಅತಂತ್ರರನ್ನಾಗಿಸುತ್ತಿವೆ. ಈ ನಡುವೆ ಕಳೆದ ೨ ವರ್ಷಗಳಿಂದ ಕೋವಿಡ್-೧೯ ಮಹಾಮಾರಿಯಿಂದಾಗಿ ಇವರ ವೃತ್ತಿ ಬದುಕು ಸಂಪೂರ್ಣವಾಗಿ ಅಸ್ತಿತ್ವ ಕಳೆದುಕೊಳ್ಳುವಂತಾಗಿದೆ. ಈ ನಡುವೆಯೂ ಮೂಲ ವೃತ್ತಿಯಿಂದ ಹಿಂದೆ ಸರಿಯಬಾರದೆಂಬ ಉದ್ದೇಶದೊಂದಿಗೆ ಮುನ್ನಡೆಯುತ್ತಿವೆ. ಮೂಲ ವೃತ್ತಿಯನ್ನು ನಂಬಿರುವ ಬಸವರಾಜ್ ಹಾಗು ಇವರ ಇಬ್ಬರು ಸಹೋದರರು ಪ್ರತಿವರ್ಷದಂತೆ ಈ ಬಾರಿ ಸಹ ವಿನಾಯಕ ಮೂರ್ತಿಗಳನ್ನು ತಯಾರಿಸಿದ್ದಾರೆ. ಬಸವೇಶ್ವರ ವೃತ್ತದ ಬಳಿ ಇರುವ ಭಾರತೀಯ ಸಂಚಾರ್ ನಿಗಮ್ ಲಿಮಿಟೆಡ್(ಬಿಎಸ್‌ಎನ್‌ಎಲ್) ಕಛೇರಿ ಪಕ್ಕದ ಖಾಲಿ ಜಾಗದಲ್ಲಿ ತಗಡಿನ ಶೆಡ್ ನಿರ್ಮಿಸಿಕೊಂಡು ಸುಮಾರು ೨-೩ ತಿಂಗಳಿನಿಂದ ಮೂರ್ತಿಗಳ ತಯಾರಿಕೆಯಲ್ಲಿ ಈ ಮೂರು ಸಹೋದರರು ತೊಡಗಿಸಿಕೊಂಡಿದ್ದಾರೆ.
    ಪತ್ರಿಕೆ ಜೊತೆಗೆ ಮಾತನಾಡಿದ ಬಸವರಾಜ್, ಈ ಹಿಂದೆ ಸುಮಾರು ೪೦ ಮೂರ್ತಿಗಳನ್ನು ತಯಾರಿಸಲಾಗುತ್ತಿತ್ತು. ಗ್ರಾಹಕರ ಬೇಡಿಕೆಯಂತೆ ಈ ಬಾರಿ ೫ ರಿಂದ ೬ ಅಡಿ ಎತ್ತರದ ಕೇವಲ ೮ ಮೂರ್ತಿಗಳನ್ನು ಮಾತ್ರ ತಯಾರಿಸಲಾಗಿದೆ. ಇದೀಗ ಈ ಮೂರ್ತಿಗಳ ಪ್ರತಿಷ್ಠಾಪನೆಯೇ ಆಯೋಜಕರಿಗೆ ತಲೆ ನೋವಾಗಿದೆ. ಉಳಿದಂತೆ ಇಬ್ಬರು ಸಹೋದರರು ೩ ಅಡಿ ಎತ್ತರದ ಸುಮಾರು ೩೦ ಮೂರ್ತಿಗಳನ್ನು ಹಾಗು ಉಳಿದಂತೆ ೩ ಅಡಿಗಿಂತ ಕಡಿಮೆ ಎತ್ತರದ ಸುಮಾರು ೩೦೦ ಮೂರ್ತಿಗಳನ್ನು ತಯಾರಿಸಿದ್ದಾರೆ. ಈ ನಡುವೆ ವರ್ಷದಿಂದ ವರ್ಷಕ್ಕೆ ಮೂರ್ತಿಗಳ ಬೇಡಿಕೆಗಳು ಕಡಿಮೆಯಾಗುತ್ತಿರುವುದು ಆತಂಕಕ್ಕೆ ಎಡೆಮಾಡಿಕೊಟ್ಟಿದೆ ಎಂದರು.


ಭದ್ರಾವತಿ ಹೊಸಮನೆ ಹಿಂದೂ ಮಹಾಸಭಾ-ಹಿಂದೂ ರಾಷ್ಟ್ರ ಸೇನಾ ವಿನಾಯಕ ಸೇವಾ ಸಮಿತಿ ವತಿಯಿಂದ ಪ್ರತಿ ವರ್ಷದಂತೆ ಈ ಬಾರಿ ಸಹ ವಿನಾಯಕ ಮೂರ್ತಿ ಪ್ರತಿಷ್ಠಾಪನೆ ನಡೆಯುತ್ತಿದ್ದು, ಬುಧವಾರ ಪೆಂಡಾಲ್ ನಿರ್ಮಾಣಕ್ಕೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಲಾಯಿತು.
       ಪೆಂಡಾಲ್ ನಿರ್ಮಾಣ :
    ಸರ್ಕಾರ ಸಾರ್ವಜನಿಕವಾಗಿ ವಿನಾಯಕ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ ನೀಡುತ್ತಿದ್ದಂತೆ ನಗರದ ವಿವಿಧೆಡೆ ವಿವಿಧ ಸಂಘಟನೆಗಳಿಂದ ಪೆಂಡಾಲ್‌ಗಳ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ.
    ಪ್ರತಿ ವರ್ಷದಂತೆ ಈ ಬಾರಿ ಸಹ ಹೊಸಮನೆ ಹಿಂದೂ ಮಹಾಸಭಾ-ಹಿಂದೂ ರಾಷ್ಟ್ರ ಸೇನಾ ವಿನಾಯಕ ಸೇವಾ ಸಮಿತಿ ವತಿಯಿಂದ ವಿನಾಯಕ ಮೂರ್ತಿ ಪ್ರತಿಷ್ಠಾಪನೆ ನಡೆಯುತ್ತಿದ್ದು, ಬುಧವಾರ ಪೆಂಡಾಲ್ ನಿರ್ಮಾಣಕ್ಕೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಲಾಯಿತು.
    ಸಮಿತಿ ಅಧ್ಯಕ್ಷ, ಹಿರಿಯ ನಗರಸಭಾ ಸಭಾ ಸದಸ್ಯ ವಿ. ಕದಿರೇಶ್, ಸಮಿತಿಯ ಪದಾಧಿಕಾರಿಗಳಾದ ಚನ್ನಪ್ಪ, ಮಣಿ ಎಎನ್‌ಎಸ್, ಕೆ. ಮಂಜುನಾಥ್, ಬಿಜೆಪಿ ಮಂಡಲ ಅಧ್ಯಕ್ಷ ಎಂ. ಪ್ರಭಾಕರ್, ಕೇಸರಿಪಡೆ ಗಿರೀಶ್, ಮಂಜುನಾಥ್ ಕೊಯ್ಲಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ಮಾರುಕಟ್ಟೆಗಳಲ್ಲಿ ಜನ ಸಂದಣಿ:
    ಗುರುವಾರ ಮತ್ತು ಶುಕ್ರವಾರ ಗೌರಿ-ಗಣೇಶ ಹಬ್ಬದ ಹಿನ್ನಲೆಯಲ್ಲಿ ಬುಧವಾರ ನಗರದ ವಿವಿಧೆದೆ ಮಾರುಕಟ್ಟೆಗಳಲ್ಲಿ ಜನ ಸಂದಣಿ ಹೆಚ್ಚಾಗಿರುವುದು ಕಂಡು ಬಂದಿತು. ವ್ಯಾಪಾರ ವಹಿವಾಟಿ ಭರ್ಜರಿಯಾಗಿ ನಡೆಯುತ್ತಿದ್ದು, ಈ ನಡುವೆ ಅಗತ್ಯಗಳ ವಸ್ತುಗಳ ಬೆಲೆ ಏರಿಕೆಯಿಂದಾಗಿ ಗ್ರಾಹಕರು ತತ್ತರಿಸಿದ್ದಾರೆ.
    ಈ ನಡುವೆ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ನಗರಸಭೆ ಹಾಗು ಪೊಲೀಸ್ ಇಲಾಖೆ ಸೇರಿದಂತೆ ಸರ್ಕಾರದ ವಿವಿಧ ಇಲಾಖೆ ಗೌರಿ-ಗಣೇಶ ಹಬ್ಬ ಯಶಸ್ವಿಗಾಗಿ ಈಗಾಗಲೇ ಅಗತ್ಯ ಕ್ರಮಗಳನ್ನು ಕೈಗೊಂಡಿವೆ.


ಗೌರಿ-ಗಣೇಶ ಹಬ್ಬದ ಹಿನ್ನಲೆಯಲ್ಲಿ ಬುಧವಾರ ಭದ್ರಾವತಿ ಹಳೇನಗರದ ಬಸವೇಶ್ವರ ವೃತ್ತದ ಬಳಿಇರುವ ಮಾರುಕಟ್ಟೆಯಲ್ಲಿ ಜನಸಂದಣಿ ಉಂಟಾಗಿರುವುದು.

Tuesday, September 7, 2021

ವಿದ್ಯಾರ್ಥಿಗಳ ಆರೋಗ್ಯದ ಬಗ್ಗೆ ತುರ್ತು ಕಾಳಜಿ ವಹಿಸಿದ ಜಿಲ್ಲಾಧಿಕಾರಿಗಳಿಗೆ ಮೆಚ್ಚುಗೆ ಪತ್ರ

ಭದ್ರಾವತಿ ಹುಣಸೇಕಟ್ಟೆ ಗ್ರಾಮದಲ್ಲಿರುವ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ ವಿದ್ಯಾರ್ಥಿಗಳ ಆರೋಗ್ಯದ ಬಗ್ಗೆ ಜಿಲ್ಲಾಧಿಕಾರಿ ಕೆ.ಬಿ ಶಿವಕುಮಾರ್ ತುರ್ತು ಕಾಳಜಿ ವಹಿಸಿರುವ ಹಿನ್ನಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸರ್ಕಾರದ ಅಪರ ಕಾರ್ಯದರ್ಶಿಗಳು ಬರೆದಿರುವ ಮೆಚ್ಚುಗೆ ಪತ್ರ.
    ಭದ್ರಾವತಿ, ಸೆ. ೭: ತಾಲೂಕಿನ ಹುಣಸೇಕಟ್ಟೆ ಗ್ರಾಮದಲ್ಲಿರುವ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ ವಿದ್ಯಾರ್ಥಿಗಳ ಆರೋಗ್ಯದ ಬಗ್ಗೆ ಜಿಲ್ಲಾಧಿಕಾರಿ ಕೆ.ಬಿ ಶಿವಕುಮಾರ್ ತುರ್ತು ಕಾಳಜಿ ವಹಿಸಿರುವುದು ತಿಳಿದು ಬಂದಿದ್ದು, ಅಲ್ಲದೆ ಜಿಲ್ಲಾಧಿಕಾರಿಗಳ ಕಾರ್ಯಕ್ಕೆ ಸಮಾಜ ಕಲ್ಯಾಣ ಇಲಾಖೆ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಡಾ.ಎನ್. ನಾಗಾಂಬಿಕಾ ದೇವಿಯವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
    ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ ವಿದ್ಯಾರ್ಥಿಗಳಲ್ಲಿ ಸೆ.೪ರಂದು ಮಂದಗತಿಯ ಶೀತ ಕಾಣಿಸಿಕೊಂಡಿದ್ದು,  ಸ್ಥಳೀಯರು ಜಿಲ್ಲಾಧಿಕಾರಿ ಕೆ.ಬಿ ಶಿವಕುಮಾರ್ ಅವರಿಗೆ ಮಾಹಿತಿ ನೀಡಿದ್ದಾರೆ. ಅಲ್ಲದೆ ಸುರಕ್ಷತಾ ಕ್ರಮ ಕೈಗೊಳ್ಳುವಂತೆ ಡಾ.ಎನ್. ನಾಗಾಂಬಿಕಾ ದೇವಿಯವರು ಕೋರಿದ ಹಿನ್ನಲೆಯಲ್ಲಿ ತಕ್ಷಣ ಖುದ್ದಾಗಿ ವಸತಿ ಶಾಲೆಗೆ ಭೇಟಿ ನೀಡಿದ ಕೆ.ಬಿ ಶಿವಕುಮಾರ್ ಅವರು ಎಲ್ಲಾ ವಿದ್ಯಾರ್ಥಿಗಳಿಗೆ ಕೋವಿಡ್-೧೯ ಪರೀಕ್ಷೆ ಕ್ಷಿಪ್ರಗತಿಯಲ್ಲಿ ನಡೆಸಿದ್ದು, ವಿದ್ಯಾರ್ಥಿಗಳಲ್ಲಿ ನೆಗಟಿವ್ ವರದಿ ಬಂದಿದೆ. ಈ ನಡುವೆಯೂ ವಿದ್ಯಾರ್ಥಿಗಳೊಂದಿಗೆ ವೈಯಕ್ತಿಕ ಸಮಾಲೋಚನೆ ನಡೆಸುವ ಜೊತೆಗೆ ಆತ್ಮಸ್ಥೈರ್ಯ ತುಂಬುವಲ್ಲಿ ಯಶಸ್ವಿಯಾಗಿದ್ದರು. ಈ ಹಿನ್ನಲೆಯಲ್ಲಿ ಡಾ. ಎನ್. ನಾಗಾಂಬಿಕಾ ಅವರು ಸೆ.೬ರಂದು ಮೆಚ್ಚುಗೆ ಪತ್ರವನ್ನು ಜಿಲ್ಲಾಧಿಕಾರಿಗಳಿಗೆ ಕಳುಹಿಸಿದ್ದಾರೆ. ಈ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಪ್ರಚಾರಕ್ಕೆ ಒಳಪಟ್ಟಿದೆ.
    ಜಿಲ್ಲಾಧಿಕಾರಿಗಳ ಮೆಚ್ಚುಗೆ ಪತ್ರಕ್ಕೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದು, ರಾಜ್ಯ ಸರ್ಕಾರಿ ಸ್ವಾಮ್ಯದ ನಗರದ ಮೈಸೂರು ಕಾಗದ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕರಾಗಿರುವ ಜಿಲ್ಲಾಧಿಕಾರಿ ಕೆ.ಬಿ ಶಿವಕುಮಾರ್ ಅವರು ಕಾರ್ಮಿಕರನ್ನು ಕಡೆ ಗಣಿಸಿದ್ದಾರೆ. ಕಾರ್ಖಾನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಾರ್ಮಿಕರಿಗೆ ಕಳೆದ ಸುಮಾರು ೬ ತಿಂಗಳಿನಿಂದ ವೇತನ ಇಲ್ಲವಾಗಿದೆ. ಈ ಬಗ್ಗೆ ಹಲವಾರು ಮನವಿ ಮಾಡಲಾಗಿದ್ದರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ಇಂತಹ ಜಿಲ್ಲಾಧಿಕಾರಿಗಳಿಗೆ ಮೆಚ್ಚುಗೆ ವ್ಯಕ್ತಪಡಿಸುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ನೂರಾರು ನಾಯಿಗಳನ್ನು ಜೀವಂತವಾಗಿ ಹೂತಿಟ್ಟು ಮಾರಾಣ ಹೋಮ

ಗ್ರಾಮಾಂತರ ಪೊಲೀಸ್ ಠಾಣೆ ಮೆಟ್ಟಿಲೇರಿದ ಪ್ರಕರಣ


ಭದ್ರಾವತಿ ಎಂಪಿಎಂ ಅರಣ್ಯ ವ್ಯಾಪ್ತಿಯ ತಮ್ಮಡಿ ಹಳ್ಳಿಯ ಎಸ್‌ಎಲ್ ನಂ.೮೬೩, ೮೬೪, ೮೬೫ ಮತ್ತು ೮೬೬ರ ಭೂಮಿಯಲ್ಲಿ ಸುಮಾರು ೧೫೦ಕ್ಕೂ ಹೆಚ್ಚಿನ ನಾಯಿಗಳನ್ನು ಜೀವಂತವಾಗಿ ಹೂತಿಟ್ಟಿದ್ದು, ಪ್ರಕರಣ ಬೆಳಕಿಗೆ ಬಂದ ಹಿನ್ನಲೆಯಲ್ಲಿ ಹೂತಿಟ್ಟ ನಾಯಿಗಳನ್ನು ಹೊರ ತೆಗೆಯುತ್ತಿರುವುದು.
    ಭದ್ರಾವತಿ, ಸೆ. ೭: ನಾಯಿಗಳನ್ನು ಜೀವಂತವಾಗಿ ಹೂತಿಟ್ಟು ಮಾರಾಣ ಹೋಮಕ್ಕೆ ಕಾರಣವಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
    ತಾಲೂಕಿನ ಸಿಂಗನಮನೆ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಕಂಬದಾಳಲು-ಹೊಸೂರು ಗ್ರಾಮ ಪಂಚಾಯಿತಿಗೆ ಒಳಪಡುವ ರಂಗನಾಥಪುರದಲ್ಲಿ ಕಳೆದ ಸುಮಾರು ೪ ದಿನಗಳ ಹಿಂದೆ ಘಟನೆ ನಡೆದಿರುವ ಬಗ್ಗೆ ಮಾಹಿತಿ ತಿಳಿದು ಬಂದಿದೆ.
    ಎಂಪಿಎಂ ಅರಣ್ಯ ವ್ಯಾಪ್ತಿಯ ತಮ್ಮಡಿ ಹಳ್ಳಿಯ ಎಸ್‌ಎಲ್ ನಂ.೮೬೩, ೮೬೪, ೮೬೫ ಮತ್ತು ೮೬೬ರ ಭೂಮಿಯಲ್ಲಿ ಸುಮಾರು ೧೫೦ಕ್ಕೂ ಹೆಚ್ಚಿನ ನಾಯಿಗಳನ್ನು ಜೀವಂತವಾಗಿ ಹೂತಿಟ್ಟಿದ್ದು, ನಾಯಿಗಳನ್ನು ಹೂತಿಡುವಾಗ ಈ ಭಾಗದಲ್ಲಿ ನಾಯಿಗಳು ಬೊಗಳುವ ಶಬ್ದ ಸ್ಥಳೀಯರಿಗೆ ಕೇಳಿಸಿದೆ. ನಂತರ ಈ ಭಾಗದಲ್ಲಿ ನಿಶಬ್ದ ಕಂಡು ಬಂದಿದ್ದು, ಇದರಿಂದ ಅನುಮಾನಗೊಂಡ ಸ್ಥಳೀಯರು ಮಾಹಿತಿಯನ್ನು ಶಿವಮೊಗ್ಗ ಪ್ರಾಣಿ ದಯಾ ಸಂಘದವರಿಗೆ ತಿಳಿಸಿದ್ದಾರೆ ಎನ್ನಲಾಗಿದೆ.
    ಪ್ರಾಣಿ ದಯಾ ಸಂಘದವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ನಾಯಿಗಳನ್ನು ಜೀವಂತವಾಗಿ ಹೂತಿಟ್ಟಿರುವುದು ಬೆಳಕಿಗೆ ಬಂದಿದೆ. ಇದೀಗ ಪ್ರಕರಣ ಗ್ರಾಮಾಂತರ ಪೊಲೀಸ್ ಠಾಣೆ ಮೆಟ್ಟಿಲೇರಿದೆ.
    ನಾಯಿಗಳನ್ನು ಜೀವಂತವಾಗಿ ಹೂತಿಡಲು ಕಾರಣವೇನೆಂಬುದು ಇನ್ನೂ ಸ್ಪಷ್ಟವಾಗಿ ತಿಳಿದಿಲ್ಲ. ಇದಕ್ಕೆ ಕಂಬದಾಳಲು-ಹೊಸೂರು ಗ್ರಾಮಚಾಯಿತಿ ಆಡಳಿತ ಸ್ಪಷ್ಟನೆ ನೀಡಬೇಕಾಗಿದೆ.
    ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿದ ಈ ಭಾಗದ ಜಿಲ್ಲಾ ಪಂಚಾಯಿತಿ ಸದಸ್ಯ ಜೆ.ಪಿ ಯೋಗೇಶ್ ನಾಯಿಗಳನ್ನು ಹೂತಿಟ್ಟಿರುವ ವಿಚಾರ ನಮ್ಮ ಗಮನಕ್ಕೆ ಬಂದಿಲ್ಲ. ಗ್ರಾಮ ಪಂಚಾಯಿತಿ ಮಾಹಿತಿ ಪ್ರಕಾರ ನಾಯಿಗಳನ್ನು ಜನವಸತಿ ಪ್ರದೇಶಗಳಿಂದ ಹಿಡಿದು ಅರಣ್ಯ ಪ್ರದೇಶಕ್ಕೆ ಬಿಡುವುದು ವಾಡಿಕೆಯಾಗಿದೆ. ಆದರೆ ನಾಯಿಗಳನ್ನು ಕೊಲ್ಲುವ ಬಗ್ಗೆ ಎಲ್ಲೂ ಸೂಚಿಸಲಾಗಿಲ್ಲ ಎಂದರು.
    ಮತ್ತೊಂದೆಡೆ ನಾಯಿಗಳಿಗೆ ಸಂತಾನ ಹರಣ ಶಸ್ತ್ರಚಿಕಿತ್ಸೆ ನಡೆಸಿ ಪುನಃ ಅವುಗಳನ್ನು ವಾಸಿಸುತ್ತಿದ್ದ ಸ್ಥಳದಲ್ಲಿಯೇ ಬಿಡಲಾಗುತ್ತದೆ. ಈ ಸಂಬಂಧ ಗ್ರಾಮ ಪಂಚಾಯಿತಿ ವತಿಯಿಂದ ಟೆಂಡರ್ ಸಹ ನೀಡಲಾಗಿತ್ತು ಎನ್ನಲಾಗುತ್ತಿದೆ. ಟೆಂಡರ್‌ದಾರರು ಶಸ್ತ್ರಚಿಕಿತ್ಸೆ ಹಣ ಉಳಿಸುವ ಉದ್ದೇಶದಿಂದ ಈ ರೀತಿಯ ಕೃತ್ಯ ನಡೆಸಿರಬಹುದೆಂಬ ಆರೋಪ ಸಹ ಸ್ಥಳೀಯರಿಂದ ಕೇಳಿ ಬರುತ್ತಿವೆ. ಯಾವುದಕ್ಕೂ ತನಿಖೆಯಿಂದ ಸತ್ಯಾಂಶ ಹೊರಬರಬೇಕಾಗಿದೆ.

ಸಾಲಗಾರರ ಕಾಟ ಮನನೊಂದು ತಾಯಿ, ಮಗಳು ಆತ್ಮಹತ್ಯೆ

ಸಂಗೀತಾ, ಮಧುಶ್ರೀ
    ಭದ್ರಾವತಿ, ಸೆ. ೭: ಸಾಲಬಾಧೆಯಿಂದ ಬೇಸತ್ತು ತಾಯಿ, ಮಗಳು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಹೊಸಮನೆ  ವ್ಯಾಪ್ತಿಯ ಸುಭಾಷ್ ನಗರದಲ್ಲಿ ನಡೆದಿದೆ.
    ತಾಯಿ ಸಂಗೀತಾ(೩೫), ಮಗಳು ಮಧುಶ್ರೀ(೧೧) ಒಂದೇ ಸೀರೆಯಲ್ಲಿ ಇಬ್ಬರು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಸಂಬಂಧ ಶಿವಾಜಿ ಸರ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಗೀತಾ ಅವರ ಪತಿ ಧನಶೇಖರ್ ಹೋಲ್‌ಸೇಲ್ ವ್ಯಾಪಾರಿಯಾಗಿದ್ದು, ಕೋವಿಡ್-೧೯ ಪರಿಣಾಮ ಸುಮಾರು ೨ ವರ್ಷಗಳಿಂದ ವ್ಯಾಪಾರ ವಹಿವಾಟು ಇಲ್ಲದೆ ಆರ್ಥಿಕವಾಗಿ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಈ ನಡುವೆ ಧನಶೇಖರ್ ಸುಮಾರು ೧೬ ಲಕ್ಷ ರು. ಗಳಿಗೂ ಅಧಿಕ ಬ್ಯಾಂಕ್ ಹಾಗು ಕೈ ಸಾಲ ಮಾಡಿಕೊಂಡಿದ್ದು, ಇದರಿಂದಾಗಿ ಸಾಲಗಾರರ ಕಾಟ ಹೆಚ್ಚಾಗಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಕೆಎಸ್‌ಆರ್‌ಟಿಸಿ ಚಾಲಕ ಗಂಗಾಧರ್ ಆತ್ಮಹತ್ಯೆ

ಗಂಗಾಧರ್
    ಭದ್ರಾವತಿ, ಸೆ. ೬:  ತಾಲೂಕಿನ ಹೊಸ ಸಿದ್ದಾಪುರ ಗ್ರಾಮದ ನಿವಾಸಿ, ಶಿವಮೊಗ್ಗ ಕೆಎಸ್‌ಆರ್‌ಟಿಸಿ  ಘಟಕದಲ್ಲಿ ಚಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಗಂಗಾಧರ್(೪೫) ಜೀವನದಲ್ಲಿ ಜಿಗುಪ್ಸೆಗೊಂಡು ಮನೆಯಲ್ಲಿ ಫ್ಯಾನಿಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
    ಗಂಗಾಧರ್ ಮನೆಯ ಮೇಲಿನ ಮಹಡಿಯ ಕೊಠಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಘಟನೆ ಮಂಗಳವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ. ಹಳೇನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಮೃತದೇಹದ ಶವ ಪರೀಕ್ಷೆ ನಡೆಸಲಾಗಿದೆ. ಕಳೆದ ಕೆಲವು ವರ್ಷಗಳಿಂದ ಎದೆ ನೋವಿನಿಂದ ಬಳಲುತ್ತಿದ್ದರು ಎನ್ನಲಾಗಿದ್ದು, ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
    ಗಂಗಾಧರ ಸುಮಾರು ೨೦ ವರ್ಷಗಳ ಹಿಂದೆ ಬಿಎಂಟಿಸಿ ಚಾಲಕರಾಗಿ ಕರ್ತವ್ಯಕ್ಕೆ ಸೇರ್ಪಡೆಗೊಂಡಿದ್ದರು. ನಂತರ ಧರ್ಮಸ್ಥಳ ಘಟಕದ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸಿ ನಂತರ ಕಳೆದ ಸುಮಾರು ಒಂದೂವರೆ ವರ್ಷದಿಂದ ಶಿವಮೊಗ್ಗ ಘಟಕದಲ್ಲಿ  ಬೆಂಗಳೂರು ಮತ್ತು ಶಿವಮೊಗ್ಗ ನಡುವೆ ಸಂಚರಿಸುವ ಬಸ್ಸಿನ ಚಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.

Monday, September 6, 2021

ಗಣೇಶ ಚತುರ್ಥಿ, ಸರಳ, ಶಾಂತಿಯುತ ಆಚರಣೆಗೆ ತಹಸೀಲ್ದಾರ್ ಮನವಿ

ಭದ್ರಾವತಿ ನ್ಯೂಟೌನ್ ಲಯನ್ಸ್ ಕ್ಲಬ್‌ನಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಶಾಂತಿ ಸಭೆಯಲ್ಲಿ ತಹಸೀಲ್ದಾರ್ ಆರ್. ಪ್ರದೀಪ್ ಮಾತನಾಡಿದರು.
    ಭದ್ರಾವತಿ, ಸೆ. ೬: ಕೋವಿಡ್-೧೯ರ ನಡುವೆಯೂ ಈ ಬಾರಿ ಗಣೇಶ ಚತುರ್ಥಿಯನ್ನು ಸಾರ್ವಜನಿಕವಾಗಿ ಆಚರಿಸಲು ಹಲವು ಮಾರ್ಗಸೂಚಿಗಳೊಂದಿಗೆ ಸರ್ಕಾರ ಅನುಮತಿ ನೀಡಿದ್ದು, ಸಾರ್ವಜನಿಕರು ಹೆಚ್ಚಿನ ಮುಂಜಾಗ್ರತೆವಹಿಸಿ ಹಬ್ಬವನ್ನು ಸರಳವಾಗಿ, ಶಾಂತಿಯುತವಾಗಿ ಆಚರಿಸಬೇಕೆಂದು ತಹಸೀಲ್ದಾರ್ ಆರ್. ಪ್ರದೀಪ್ ಕರೆ ನೀಡಿದರು.
    ಅವರು ಸೋಮವಾರ ನಗರದ ನ್ಯೂಟೌನ್ ಲಯನ್ಸ್ ಕ್ಲಬ್‌ನಲ್ಲಿ ಹಮ್ಮಿಕೊಳ್ಳಲಾಗಿದ್ದ ಶಾಂತಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಪ್ರತಿಯೊಬ್ಬರು ಸರ್ಕಾರದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ಮಾಡಿಕೊಡಬಾರದು. ಹಬ್ಬದ ಆಚರಣೆಗೆ ತಾಲೂಕು ಆಡಳಿತ, ಪೊಲೀಸ್ ಇಲಾಖೆ ಹಾಗು ಸ್ಥಳೀಯ ನಗರಸಭೆ ಆಡಳಿತಗಳು ಎಲ್ಲಾ ರೀತಿಯ ಸಹಕಾರ ನೀಡಲಿವೆ. ಇದೆ ರೀತಿ ಸಾರ್ವಜನಿಕರು ಸಹ ಪೂರಕವಾಗಿ ಸ್ಪಂದಿಸುವಂತೆ ಮನವಿ ಮಾಡಿದರು.
    ನಗರಸಭೆ ಪೌರಾಯುಕ್ತ ಕೆ. ಪರಮೇಶ್, ಪರಿಸರ ಅಭಿಯಂತರ ಪ್ರಭಾಕರ್, ಕಂದಾಯಾಧಿಕಾರಿ ರಾಜ್‌ಕುಮಾರ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಮೇಶ್, ಪೊಲೀಸ್ ಉಪಾಧೀಕ್ಷಕ ಸಾಹಿಲ್ ಬಾಗ್ಲಾ, ಗ್ರಾಮಾಂತರ ವೃತ್ತ ನಿರೀಕ್ಷಕ ಇ.ಓ ಮಂಜುನಾಥ್, ಹೊಸಮನೆ ಶಿವಾಜಿ ಸರ್ಕಲ್ ಪೊಲೀಸ್ ಠಾಣಾಧಿಕಾರಿ ಕೆ.ಎಚ್ ಜಯಪ್ಪ, ಅಗ್ನಿ ಶಾಮಕ ಠಾಣಾಧಿಕಾರಿ ವಸಂತಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ದೇಶದಲ್ಲಿ ಬೆಲೆ ಏರಿಕೆಯಿಂದಾಗಿ ಬಡ, ಮಧ್ಯಮ ವರ್ಗ ಸಂಕಷ್ಟಕ್ಕೆ : ಬಿ.ಕೆ ಸಂಗಮೇಶ್ವರ್

ಅಡುಗೆ ಅನಿಲ ಸಿಲಿಂಡರ್ ಬೆಲೆ ಏರಿಕೆ ಖಂಡಿಸಿ ಭದ್ರಾವತಿ ಬಿ.ಎಚ್ ರಸ್ತೆ, ಅಂಡರ್‌ಬ್ರಿಡ್ಜ್ ಬಳಿ ಯುವ ಕಾಂಗ್ರೆಸ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಪಾಲ್ಗೊಂಡು ಮಾತನಾಡಿದರು.
    ಭದ್ರಾವತಿ, ಸೆ. ೬: ದೇಶದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಬಡ ಹಾಗು ಮಧ್ಯಮ ವರ್ಗದವರು ಸಂಕಷ್ಟ ಅನುಭವಿಸುವಂತಾಗಿದೆ. ಬೆಲೆ ಏರಿಕೆ ನಿಯಂತ್ರಿಸುವಲ್ಲಿ ಕೇಂದ್ರ ಹಾಗು ರಾಜ್ಯ ಸರ್ಕಾರಗಳು ವಿಫಲವಾಗಿವೆ ಎಂದು ಶಾಸಕ ಬಿ.ಕೆ ಸಂಗಮೇಶ್ವರ್ ಆರೋಪಿಸಿದರು.
    ಅವರು ಸೋಮವಾರ ಅಡುಗೆ ಅನಿಲ ಸಿಲಿಂಡರ್ ಬೆಲೆ ಏರಿಕೆ ಖಂಡಿಸಿ ನಗರದ ಬಿ.ಎಚ್ ರಸ್ತೆ, ಅಂಡರ್‌ಬ್ರಿಡ್ಜ್ ಬಳಿ ಯುವ ಕಾಂಗ್ರೆಸ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದರು.
    ಅಡುಗೆ ಅನಿಲ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿದೆ. ಇದರ ಜೊತೆಗೆ ಇತರೆ ಅಗತ್ಯ ವಸ್ತುಗಳ ಬೆಲೆ ಸಹ ಏರಿಕೆಯಾಗುತ್ತಿದೆ. ಮತ್ತೊಂದೆಡೆ ಕಾರ್ಖಾನೆಗಳು ಅಭಿವೃದ್ಧಿಯಾಗದೆ ಕಾರ್ಮಿಕರು ಬೀದಿ ಪಾಲಾಗುತ್ತಿದ್ದಾರೆ. ಕೃಷಿಗೆ ಸಂಬಂಧಿಸಿದ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ರೈತರು ಕೃಷಿ ಚಟುವಟಿಕೆಗಳನ್ನು ನಡೆಸಲು ಅಸಾಧ್ಯವಾಗಿದೆ. ಹಲವಾರು ಜನವಿರೋಧಿ ನೀತಿಗಳನ್ನು ಜಾರಿಗೆ ತರುವ ಮೂಲಕ ದೇಶದಲ್ಲಿ ಬಡ ಹಾಗು ಮಧ್ಯಮ ವರ್ಗದವರನ್ನು ಶೋಷಿಸಲಾಗುತ್ತಿದೆ ಎಂದು ಆರೋಪಿಸಿದರು.
    ಯುವ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಜಿ. ವಿನೋದ್‌ಕುಮಾರ್ ಮಾತನಾಡಿ, ದೇಶದಲ್ಲಿ ಬಿಜೆಪಿ ಸರ್ಕಾರ ಅಧಿಕಾರ ನಡೆಸಲು ವಿಫಲವಾಗಿದೆ. ಜನವಿರೋಧಿ ನೀತಿಗಳ ಜೊತೆಗೆ ಕೃಷಿ, ಕೈಗಾರಿಕೆ ಸೇರಿದಂತೆ ಎಲ್ಲಾ ವಲಯಗಳನ್ನು ಖಾಸಗೀಕರಣಗೊಳಿಸಲು ಮುಂದಾಗಿದೆ. ಕೋವಿಡ್ ಮಹಾಮಾರಿಯನ್ನು ನಿಯಂತ್ರಿಸುವಲ್ಲಿ ವಿಫಲವಾಗಿದೆ. ಇಂತಹ ಸರ್ಕಾರ ದೇಶದ ಜನರಿಗೆ ಅಗತ್ಯವಿಲ್ಲ. ರಾಷ್ಟ್ರಪತಿಗಳು ತಕ್ಷಣ ಕೇಂದ್ರ ಸರ್ಕಾರವನ್ನು ವಜಾಗೊಳಿಸಬೇಕೆಂದು ಆಗ್ರಹಿಸಿದರು.
    ನಗರಸಭಾ ಸದಸ್ಯರಾದ ಕೆ. ಸುದೀಪ್‌ಕುಮಾರ್, ಆರ್. ಶ್ರೇಯಸ್, ಜಾರ್ಜ್, ಯುವ ಘಟಕದ ನಗರ ಉಪಾಧ್ಯಕ್ಷ ತೇಜಸ್‌ಗೌಡ, ಪ್ರಧಾನ ಕಾರ್ಯದರ್ಶಿ ಭರತ್, ಮಧುಸೂಧನ್, ಶಂಕರ್, ನವೀನ್, ಚೇತನ್, ಕಾರ್ಯದರ್ಶಿಗಳಾದ ನಂದನ್, ಸುನಿಲ್, ಸಚಿನ್, ಮನು, ಸಂಜಯ್, ಸ್ಟೀಫನ್, ರಾಜ್‌ಕ್ರಿಸ್ಟಿ, ಸುನಿಲ್, ಯೋಗೀಶ್, ಸೋಮಣ್ಣ, ರಂಜಿತ್, ಧರ್ಮೇಂದ್ರ, ರಾಜ್‌ವೀರ್, ಗಗನ್, ಶ್ರೀನಿವಾಸ್, ಮುರುಳಿ, ಮಂಜು, ಹರೀಶ್, ಐಸಾಕ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
    ಸೌದೆ ಒಲೆ ಹಚ್ಚುವ ಮೂಲಕ ವಿಶಿಷ್ಟವಾಗಿ ಪ್ರತಿಭಟನೆ ನಡೆಸಲಾಯಿತು. ಪ್ರಧಾನಿ ನರೇಂದ್ರ ಮೋದಿಯವರ ಭಾವಚಿತ್ರವನ್ನು ದಹಿಸಿ ಆಕ್ರೋಶ ವ್ಯಕ್ತಪಡಿಸಲಾಯಿತು.