Thursday, October 28, 2021

ಅ.೩೧ರಂದು ಅಗಮುಡಿ ಮೊದಲಿಯರ್ ಸಂಘದ ಬೆಳ್ಳಿ ಮಹೋತ್ಸವ, ಸಮುದಾಯ ಭವನ ಲೋಕಾರ್ಪಣೆ

ಭದ್ರಾವತಿ ಗಾಂಧಿನಗರದಲ್ಲಿ ನಿರ್ಮಿಸಲಾಗಿರುವ ಲೋಕರ್ಪಣೆಗೊಳ್ಳಲಿರುವ ಅಗಮುಡಿ ಮೊದಲಿಯರ್ ಸಮುದಾಯ ಭವನ.
    ಭದ್ರಾವತಿ, ಅ. ೨೮: ಗಾಂಧಿನಗರದ ಅಗಮುಡಿ ಮೊದಲಿಯರ್ ಸಂಘದ ಬೆಳ್ಳಿ ಮಹೋತ್ಸವ ಹಾಗು ಅಗಮುಡಿ ಸಮುದಾಯ ಭವನದ ಲೋಕಾರ್ಪಣೆ ಸಮಾರಂಭ ಶ್ರೀ ಭದ್ರಗಿರಿ ದವತ್ತಿರು ಸ್ವಾಮೀಜಿಯವರ ಕೃಪಾಶೀರ್ವಾದಗಳೊಂದಿಗೆ ಅ.೩೧ರ ಭಾನುವಾರ ಬೆಳಿಗ್ಗೆ ೧೦.೩೦ಕ್ಕೆ ನಡೆಯಲಿದೆ.
    ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಕಾರ್ಯಕ್ರಮ ಉದ್ಘಾಟಿಸಲಿದ್ದು, ಸಂಸದ ಬಿ.ವೈ ರಾಘವೇಂದ್ರ, ಶಾಸಕ ಬಿ.ಕೆ ಸಂಗಮೇಶ್ವರ್ ಮತ್ತು ಬೆಂಗಳೂರಿನ ಐಎಂಪಿಎ ಸಂಸ್ಥಾಪಕ ಅಧ್ಯಕ್ಷ ಡಾ. ಆರ್. ಅರುಣಾಚಲಂ ಹಾಗು ತರೀಕೆರೆ ಎಂ.ಸಿ ಹಳ್ಳಿ ಶ್ರೀ ಭದ್ರಗಿರಿ ದೇವಸ್ಥಾನ ಟ್ರಸ್ಟ್ ಕಾರ್ಯದರ್ಶಿ ಚಂದ್ರಘೋಷನ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
    ಸಂಘದ ಅಧ್ಯಕ್ಷ ಕಣ್ಣಪ್ಪ ಅಧ್ಯಕ್ಷತೆ ವಹಿಸಲಿದ್ದು, ದಾನಿಗಳಾದ ಪಿ. ನೀಲಮೇಗಂ, ಡಾ. ಆರ್. ಅರುಣಾಚಲಂ, ಕೆ. ವಿಶ್ವನಾಥ್, ಆರ್.ಜಿ ಜ್ಯೋತಿ ಮೊದಲಿಯರ್ ಮತ್ತು ಜಿ. ಸುರೇಶ್‌ಕುಮಾರ್ ಹಾಗು ನೂತನ ನಗರಸಭಾ ಸದಸ್ಯರಾದ ಅಗಮುಡಿ ಸಮಾಜದ ಆರ್. ಕರುಣಾಮೂರ್ತಿ, ವಿ. ಕದಿರೇಶ್, ವಿಜಯ ಮತ್ತು ಸುದೀಪ್‌ಕುಮಾರ್ ಅವರಿಗೆ ಸನ್ಮಾನ ನಡೆಯಲಿದೆ.
    ಸಮಾಜ ಬಂಧುಗಳು, ಗಣ್ಯರು ಸೇರಿದಂತೆ ನಾಗರೀಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಮಾರಂಭ ಯಶಸ್ವಿಗೊಳಿಸುವಂತೆ ಸಂಘದ ಕಾರ್ಯದರ್ಶಿ ಪಿ. ದೊರೈ ಮತ್ತು ಖಜಾಂಚಿ ಎಂ. ಸುಬ್ರಮಣಿ ಕೋರಿದ್ದಾರೆ.

ಲಂಚ ಪಡೆಯುವುದು, ಕೊಡುವುದು ಎರಡು ಸಹ ಅಪರಾಧ : ಆರ್. ವಾಸುದೇವ್


ಭದ್ರಾವತಿ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಭ್ರಷ್ಟಾಚಾರ ವಿರುಧ್ಧ ಜಾಗೃತಿ ಅರಿವು ಸಪ್ತಾಹ ಕಾರ್ಯಕ್ರಮದಲ್ಲಿ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.
    ಭದ್ರಾವತಿ, ಅ. ೨೮: ಲಂಚ ಪಡೆಯುವುದು ಮಾತ್ರ ತಪ್ಪಲ್ಲ. ಕೊಡುವುದು ಸಹ ತಪ್ಪು ಎಂದು ಶಿವಮೊಗ್ಗ, ಚಿತ್ರದುರ್ಗ ವಿಭಾಗದ ಲೋಕಾಯುಕ್ತ ಅಧೀಕ್ಷಕ ಆರ್.ವಾಸುದೇವ್ ರಾವ್ ಹೇಳಿದರು.
    ಅವರು ಗುರುವಾರ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಕರ್ನಾಟಕ ಲೋಕಾಯುಕ್ತ ಇಲಾಖೆ, ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಭ್ರಷ್ಟಾಚಾರ ವಿರುಧ್ಧ ಜಾಗೃತಿ ಅರಿವು ಸಪ್ತಾಹ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
    ಲಂಚ ಕೊಡುವವರು ಇರುವತನಕ ಪಡೆಯುವವರು ಸಹ ಇರುತ್ತಾರೆ. ಭ್ರಷ್ಟಾಚಾರದಲ್ಲಿ ಇಬ್ಬರ ಪಾತ್ರವೂ ಪ್ರಮುಖವಾಗಿರುತ್ತದೆ. ಲಂಚ ನೀಡಿ ಒತ್ತಡ ಹಾಕುವ ಮೂಲಕ ಕೆಲಸ ಮಾಡಿಸಿಕೊಳ್ಳುವುದು ಸಹ ಅಪರಾಧವಾಗಿರುತ್ತದೆ. ಈ ಹಿನ್ನಲೆಯಲ್ಲಿ ಇವರ ಮೇಲೂ ಸಹ ಪ್ರಕರಣ ದಾಖಲಿಸಿಕೊಳ್ಳಬಹುದಾಗಿದೆ ಎಂದರು.
ಸರ್ಕಾರಿ ಅಧಿಕಾರಿಗಳು ಹಾಗು ಸಿಬ್ಬಂದಿಗಳು ಭ್ರಷ್ಟಾಚಾರ ಮುಕ್ತರಾಗಿ ಕರ್ತವ್ಯ ನಿರ್ವಹಿಸಬೇಕು. ಪ್ರತಿಜ್ಞಾ ವಿಧಿ ಬೋಧನೆ ಹಾಗು ಸ್ವೀಕಾರದಿಂದ ಭ್ರಷ್ಟಾಚಾರ ನಿರ್ಮೂಲನೆ ಸಾಧ್ಯವಿಲ್ಲ. ಬದಲಿಗೆ ಕರ್ತವ್ಯದಲ್ಲಿ ಅವುಗಳನ್ನು ಅಳವಡಿಸಿಕೊಂಡಾಗ ಮಾತ್ರ ಈ ನಿಟ್ಟಿನಲ್ಲಿ ಯಶಸ್ವಿ ಕಾಣಲು ಸಾಧ್ಯ ಎಂದರು.  
    ಸಾರ್ವಜನಿಕರಿಗೆ ಸರ್ಕಾರದ ಸೌಲಭ್ಯಗಳನ್ನು ಪಡೆಯುವಲ್ಲಿ ಹೆಚ್ಚಿನ ಮಾಹಿತಿ ಇರುವುದಿಲ್ಲ. ಸರ್ಕಾರದ ಸೇವೆಯಲ್ಲಿರುವ ನಾವುಗಳು ಜನರ ಸೇವಕರು ಎಂಬುದನ್ನು ಅರಿತು ಅವರ ಕೆಲಸ ಕಾರ್ಯಗಳನ್ನು ಸುಗಮವಾಗಿ ಮಾಡಿ ಕೊಡಲು ಮುಂದಾಗಬೇಕೆಂದರು.
    ಲೋಕಾಯುಕ್ತ ಉಪಪೊಲೀಸ್ ಅಧೀಕ್ಷಕ ಮೃತ್ಯುಂಜಯ ಭ್ರ್ರಷ್ಟಾಚಾರ ನಿರ್ಮೂಲನಾ ಪ್ರತಿಜ್ಞಾವಿಧಿ ಭೋದಿಸಿದರು.
ತಹಸೀಲ್ದಾರ್ ಆರ್. ಪ್ರದೀಪ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಮೇಶ್, ಪೌರಾಯುಕ್ತ ಕೆ. ಪರಮೇಶ್, ಲೋಕಾಯುಕ್ತ ಇಲಾಖೆಯ ರಾಧಕೃಷ್ಣ, ಜಗನ್ನಾಥ್, ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಭಾಗವಹಿಸಿದ್ದರು.

ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ, ಹಲ್ಲೆಗೆ ಖಂಡನೆ

ಕಠಿಣ ಕ್ರಮ ಕೈಗೊಳ್ಳಲು ವಿಶ್ವ ಹಿಂದೂ ಪರಿಷದ್ ಆಗ್ರಹ


ಬಾಂಗ್ಲಾ ದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ, ಹಲ್ಲೆ ಹಾಗು ಹೆಣ್ಣು ಮಕ್ಕಳ ಮೇಲಿನ ಅತ್ಯಾಚಾರ ಪ್ರಕರಣಗಳನ್ನು ಖಂಡಿಸಿ ಗುರುವಾರ ಭದ್ರಾವತಿಯಲ್ಲಿ ವಿಶ್ವ ಹಿಂದೂ ಪರಿಷದ್ ವತಿಯಿಂದ ರಂಗಪ್ಪ ವೃತ್ತದಿಂದ ತಾಲೂಕು ಕಛೇರಿವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿ ತಹಸೀಲ್ದಾರ್ ಮೂಲಕ ಮನವಿ ಸಲ್ಲಿಸಲಾಯಿತು.
    ಭದ್ರಾವತಿ, ಅ. ೨೮: ಬಾಂಗ್ಲಾ ದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ, ಹಲ್ಲೆ ಹಾಗು ಅತ್ಯಾಚಾರ ಪ್ರಕರಣಗಳಿಗೆ ತಕ್ಷಣ ಕಡಿವಾಣ ಹಾಕಬೇಕು. ಭಾರತ ದೇಶದಲ್ಲಿ ಹೆಚ್ಚಾಗುತ್ತಿರುವ ಹಿಂದೂ ವಿರೋಧಿ ಕೃತ್ಯಗಳನ್ನು ತಡೆಗಟ್ಟಲು ಕೇಂದ್ರ ಹಾಗು ರಾಜ್ಯ ಸರ್ಕಾರಗಳು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕೆಂದು ವಿಶ್ವ ಹಿಂದೂ ಪರಿಷದ್ ಪ್ರಾಂತ್ಯ ಉಪಾಧ್ಯಕ್ಷ ಹಾ. ರಾಮಪ್ಪ ಆಗ್ರಹಿಸಿದರು.
    ಬಾಂಗ್ಲಾ ದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ, ಹಲ್ಲೆ ಹಾಗು ಹೆಣ್ಣು ಮಕ್ಕಳ ಮೇಲಿನ ಅತ್ಯಾಚಾರ ಪ್ರಕರಣಗಳನ್ನು ಖಂಡಿಸಿ ಗುರುವಾರ ನಗರದ ರಂಗಪ್ಪ ವೃತ್ತದಿಂದ ತಾಲೂಕು ಕಛೇರಿವರೆಗೂ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನಾ ಮೆರವಣಿಗೆ ನೇತೃತ್ವ ವಹಿಸಿ ಅವರು ಮಾತನಾಡಿದರು.
    ಹಿಂದೂಗಳ ರಕ್ಷಣೆಗೆ ಕೇವಲ ಕಾನೂನು ರೂಪಿಸಿದರೆ ಸಾಲದು ಅವುಗಳನ್ನು ಅನುಷ್ಠಾನಕ್ಕೆ ತರುವ ಜವಾಬ್ದಾರಿ ಸಹ ಸರ್ಕಾರದ್ದಾಗಿದೆ. ಇದನ್ನು ಅರ್ಥ ಮಾಡಿಕೊಂಡು ಹಿಂದೂಗಳ ರಕ್ಷಣೆಗೆ ಮುಂದಾಗುವಂತೆ ಒತ್ತಾಯಿಸಿದರು.
    ಸರ್ಕಾರ ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಮಾಡಿದೆ. ಆದರೆ ನಗರದಲ್ಲಿ ಇಂದಿಗೂ ಕಸಾಯಿಖಾನೆಗಳು ಸಕ್ರಿಯವಾಗಿದ್ದು, ಈ ಸಂಬಂಧ ನಗರಸಭೆ ದಾಖಲೆ ಪರಿಶೀಲನೆ ನಡೆಸಿದರೆ ಶೂನ್ಯ ಎಂದು ದಾಖಲಾಗಿದೆ. ನೆಪ ಮಾತ್ರಕ್ಕೆ ಕಾನೂನು ಎಂಬಂತಾಗಿದೆ. ತಕ್ಷಣ . ಅಲ್ಲದೆ ದೇವಸ್ಥಾನ, ಮಠಮಂದಿರಗಳ ಬಳಿ ಗಾಂಜಾ ಹಾವಳಿ ಹೆಚ್ಚಾಗುತ್ತಿದ್ದು, ಯುವ ಸಮುದಾಯ ದಾರಿ ತಪ್ಪುತ್ತಿದೆ. ಈ ಸಂಬಂಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
    ಬಿಜೆಪಿ ತಾಲೂಕು ಮಂಡಲ ಅಧ್ಯಕ್ಷ ಎಂ. ಪ್ರಭಾಕರ್ ಮಾತನಾಡಿ, ಬಾಂಗ್ಲಾ ದೇಶದಲ್ಲಿ ನಡೆಯುತ್ತಿರುವ ಘಟನೆಗಳು ಪ್ರಪಂಚದ ಯಾವುದೇ ದೇಶದಲ್ಲಿ ಕಂಡು ಬರುತ್ತಿಲ್ಲ. ಬಹುತೇಕ ರಾಷ್ಟ್ರಗಳು ಸಮಾನತೆ ಪರಿಕಲ್ಪನೆಯಲ್ಲಿ ಸಾಗುತ್ತಿವೆ. ಇದನ್ನು ಅರ್ಥ ಮಾಡಿಕೊಂಡು ಅಲ್ಲಿನ ಸರ್ಕಾರ ತಕ್ಷಣ ಹಿಂದೂಗಳ ರಕ್ಷಣೆಗೆ ಮುಂದಾಗಬೇಕು. ದೇಶಾದ್ಯಂತ ಏಕರೂಪದ ಕಾನೂನು ಜಾರಿಗೊಳಿಸುವುದು. ಬಲವಂತದ ಮತಾಂತರ ತಡೆಯಲು ಕಠಿಣ ಕಾನೂನು ಕ್ರಮ ಕೈಗೊಳ್ಳುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.
    ಪ್ರಮುಖರಾದ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಬಿ.ಕೆ ಶ್ರೀನಾಥ್, ಜಿ. ಧರ್ಮಪ್ರಸಾದ್, ಟಿ. ವೆಂಕಟೇಶ್, ಸುಬ್ರಮಣಿ, ಕೆ.ಆರ್ ಸತೀಶ್, ರಾಮನಾಥ್ ಬರ್ಗೆ, ನಾಗರಾಜರಾವ್ ಅಂಬೋರೆ, ಮಹಿಳಾ ಪ್ರಮುಖರಾದ ತಾಲೂಕು ಅಧ್ಯಕ್ಷೆ ಶೋಭಾ ಪಾಟೀಲ್, ಆರ್.ಎಸ್ ಶೋಭಾ, ಮಂಜುಳಾ, ಶ್ಯಾಮಲ, ಕವಿತ,  ವಿಶ್ವ ಹಿಂದೂ ಪರಿಷದ್ ಪ್ರಮುಖರಾದ ಪಿ. ವೆಂಕಟರಮಣಶೇಟ್, ಶ್ಯಾಮ ಅಯ್ಯಂಗಾರ್, ಮಹೇಶ್ವರಪ್ಪ, ಜಯರಾಮ್, ಚನ್ನಪ್ಪ, ಬಜರಂಗದಳದ ಪ್ರಮುಖರಾದ ರಾಘವನ್ ವಡಿವೇಲು, ಕೃಷ್ಣ, ಸಂಜಯ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
    ರಂಗಪ್ಪ ವೃತ್ತದಿಂದ  ತಾಲೂಕು ಕಚೇರಿವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿ ಪ್ರಧಾನ ಮಂತ್ರಿಗಳಿಗೆ, ಮುಖ್ಯಮಂತ್ರಿಗಳಿಗೆ ಹಾಗು ಗೃಹ ಸಚಿವರಿಗೆ ತಹಸೀಲ್ದಾರ್ ಮೂಲಕ ಮನವಿ ಸಲ್ಲಿಸಲಾಯಿತು.

ಕನ್ನಡ ವಿಶ್ವಮಟ್ಟದಲ್ಲಿ ವಿಜೃಂಭಿಸುವಂತಾಗಲಿ : ಆರ್. ಪ್ರದೀಪ್

ಯಶಸ್ವಿಯಾಗಿ ನಡೆದ ಕನ್ನಡ ಗೀತ ಗಾಯನ ಕಾರ್ಯಕ್ರಮ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಮಾತಾಡ್ ಮಾತಾಡ್ ಕನ್ನಡ ಕನ್ನಡಕ್ಕಾಗಿ ನಾವು ಕರ್ನಾಟಕ ರಾಜ್ಯೋತ್ಸವ ಅಭಿಯಾನದ ಅಂಗವಾಗಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ವಿಶ್ವದಾದ್ಯಂತ ಏಕ ಕಾಲದಲ್ಲಿ ಲಕ್ಷ ಲಕ್ಷ ಕಂಠಗಳಲ್ಲಿ ಕನ್ನಡ ಗೀತ ಗಾಯನ ಹಳೇನಗರದ ಪುರಾಣ ಪ್ರಸಿದ್ದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದಲ್ಲಿ ಯಶಸ್ವಿಯಾಗಿ ಜರುಗಿತು.
    ಭದ್ರಾವತಿ, ಅ. ೨೮: ಸರಳ ಹಾಗು ಸುಂದರವಾದ ಭಾಷೆ ಕನ್ನಡ ವಿಶ್ವಮಟ್ಟದಲ್ಲಿ ವಿಜೃಂಭಿಸುವಂತಾಗಬೇಕು. ಈ ನಿಟ್ಟಿನಲ್ಲಿ ನಾವೆಲ್ಲರೂ ಕನ್ನಡಕ್ಕೆ ಮೊದಲ ಆದ್ಯತೆ ನೀಡುವ ಮೂಲಕ ನಾಡು ಕಟ್ಟುವ ಕಾರ್ಯದಲ್ಲಿ ಮುನ್ನಡೆಯೋಣ ಎಂದು ತಹಸೀಲ್ದಾರ್ ಆರ್. ಪ್ರದೀಪ್ ಹೇಳಿದರು.
    ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ 'ಮಾತಾಡ್ ಮಾತಾಡ್ ಕನ್ನಡ, ಕನ್ನಡಕ್ಕಾಗಿ ನಾವು' ಕರ್ನಾಟಕ ರಾಜ್ಯೋತ್ಸವ ಅಭಿಯಾನದ ಅಂಗವಾಗಿ ಗುರುವಾರ ಹಳೇನಗರದ ಪುರಾಣ ಪ್ರಸಿದ್ದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವದಾದ್ಯಂತ ಏಕ ಕಾಲದಲ್ಲಿ ಲಕ್ಷ ಲಕ್ಷ ಕಂಠಗಳಲ್ಲಿ ಕನ್ನಡ ಗೀತ ಗಾಯನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.  
    ಕನ್ನಡ ಭಾಷೆಗೆ ತನ್ನದೇ ಆದ ಭವ್ಯ ಪರಂಪರೆ ಇದೆ. ಆನೇಕ ಮಹಾನ್ ವ್ಯಕ್ತಿಗಳ ಪರಿಶ್ರಮದಿಂದ ಕನ್ನಡ ನಾಡು ಉದಯಿಸಿದೆ. ಅನೇಕ ಕವಿಗಳು, ಸಾಹಿತಿಗಳು ಕನ್ನಡ ಭಾಷೆಗೆ ವಿಶಿಷ್ಟವಾದ ಕೊಡುಗೆಗಳನ್ನು ನೀಡಿದ್ದಾರೆ. ಸಮೃದ್ಧವಾದ ಭಾಷೆ ಕನ್ನಡವಾಗಿದ್ದು, ಅತಿಹೆಚ್ಚು ಜ್ಞಾನಪೀಠ ಪ್ರಶಸ್ತಿಗಳು ಲಭಿಸಿವೆ. ದೇಶದಲ್ಲಿ ಭಾಷಾವಾರು ಪ್ರಾಂತ್ಯಗಳು ಉದಯವಾದ ನಂತರ ಕನ್ನಡ ನಾಡಿಗೆ ೧೯೭೩ರಲ್ಲಿ ಕರ್ನಾಟಕ ಎಂಬ ಹೆಸರನ್ನು ನಾಮಕರಣಗೊಳಿಸಲಾಯಿತು. ಅಂದಿನಿಂದ ನವಂಬರ್ ೧ ರಂದು ಪ್ರತಿ ವರ್ಷ ರಾಜ್ಯೋತ್ಸವ ಆಚರಿಸಿಕೊಂಡು ಬರಲಾಗುತ್ತಿದೆ. ರಾಜ್ಯೋತ್ಸವ ಸಂದರ್ಭದಲ್ಲಿ ವಿಶಿಷ್ಟ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ನಾಡು, ನುಡಿ, ಸಂಸ್ಕೃತಿಯನ್ನು ಬಿಂಬಿಸುವ ಕಾರ್ಯ ಕೈಗೊಳ್ಳಲಾಗುತ್ತಿದೆ. ಈ ನಿಟ್ಟಿನಲ್ಲಿ 'ಮಾತಾಡ್ ಮಾತಾಡ್ ಕನ್ನಡ, ಕನ್ನಡಕ್ಕಾಗಿ ನಾವು' ಅಭಿಯಾನ ಅತಿ ಮಹತ್ವದ ಕಾರ್ಯಕ್ರಮವಾಗಿದೆ ಎಂದರು.
ಮೊದಲಿಗೆ ನಾಡಗೀತೆ ಗಾಯನ, ನಂತರ ನಿತ್ಯೋತ್ಸವ, ಬಾರಿಸು ಕನ್ನಡ ಡಿಂಡಿಮವ ಸೇರಿದಂತೆ ಇನ್ನಿತರ ಕನ್ನಡ ಗೀತೆಗಳ ಗಾಯನ ನಡೆಯಿತು. ನಾಡು, ಭಾಷೆ ಉಳಿಸಿಬೆಳೆಸುವ ನಿಟ್ಟಿನಲ್ಲಿ ಸಂಕಲ್ಪ ಸ್ವೀಕರಿಸಲಾಯಿತು.
    ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್, ಉಪಾಧ್ಯಕ್ಷ ಚನ್ನಪ್ಪ, ಪೌರಾಯುಕ್ತ ಕೆ. ಪರಮೇಶ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಮೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್ ಸೋಮಶೇಖರಯ್ಯ, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದ ಅಧ್ಯಕ್ಷ ಅಪೇಕ್ಷ ಮಂಜುನಾಥ್, ನಗರಸಭೆ ಸದಸ್ಯರು, ತಾಲೂಕು ಆಡಳಿತ, ನಗರಸಭೆ ಹಾಗು ತಾಲೂಕು ಪಂಚಾಯಿತಿ ಸಿಬ್ಬಂದಿಗಳು, ವಿವಿಧ ಕಲಾ ತಂಡಗಳ ಕಲಾವಿದರು, ಮಹಿಳಾ ಸಂಘಟನೆಗಳ ಪ್ರಮುಖರು, ಶಾಲಾ ಮಕ್ಕಳು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

Wednesday, October 27, 2021

ಸಂಕಷ್ಟಕ್ಕೆ ಒಳಗಾಗಿರುವ ಕಾರ್ಮಿಕರ ನೋವಿಗೆ ಮಿಡಿದ ಹೃದಯ

ಹುಟ್ಟುಹಬ್ಬ ಆಚರಣೆಯಿಂದ ಹಿಂದೆ ಸರಿದ ಶಾಸಕ ಸಂಗಮೇಶ್ವರ್

ಬಿ.ಕೆ ಸಂಗಮೇಶ್ವರ್
    ಭದ್ರಾವತಿ, ಅ. ೨೭: ಕ್ಷೇತ್ರದ ಪ್ರತಿಷ್ಠಿತ ಕೈಗಾರಿಕೆಗಳಾದ ಕೇಂದ್ರ ಉಕ್ಕು ಪ್ರಾಧಿಕಾರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಹಾಗು ರಾಜ್ಯ ಸರ್ಕಾರಿ ಸ್ವಾಮ್ಯದ ಮೈಸೂರು ಕಾರ್ಖಾನೆಗಳು ಪ್ರಸ್ತುತ ಅವನತಿ ದಾರಿಯಲ್ಲಿ ಸಾಗುತ್ತಿದ್ದು, ಎರಡು ಕಾರ್ಖಾನೆಗಳ ಕಾರ್ಮಿಕರ ಸ್ಥಿತಿ ಚಿಂತಾಜನಕವಾಗಿದೆ. ಇಂತಹ ಸಂದರ್ಭದಲ್ಲಿ ಜನ್ಮದಿನ ಆಚರಿಸಿಕೊಳ್ಳುವ ಮನಸ್ಥಿತಿ ನನ್ನದಲ್ಲ. ಈ ಹಿನ್ನಲೆಯಲ್ಲಿ ಈ ಬಾರಿ ಅ.೨೮ರ ಗುರುವಾರ ನನ್ನ ಹುಟ್ಟುಹಬ್ಬ ಆಚರಿಸಿಕೊಳ್ಳುವುದಿಲ್ಲ ಎಂದು ಶಾಸಕ ಬಿ.ಕೆ ಸಂಗಮೇಶ್ವರ್ ತಿಳಿಸಿದ್ದಾರೆ.
    ಕೇಂದ್ರ ಹಾಗು ರಾಜ್ಯ ಸರ್ಕಾರಗಳ ನಿರ್ಲಕ್ಷ್ಯ ಧೋರಣೆಯಿಂದಾಗಿ ಎರಡು ಕಾರ್ಖಾನೆಗಳು ಅವನತಿ ದಾರಿಯಲ್ಲಿ ಸಾಗುವಂತಾಗಿದೆ. ಎರಡು ಕಾರ್ಖಾನೆಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ನಾನು ಶಕ್ತಿ ಮೀರಿ ಪ್ರಯತ್ನಿಸಿದ್ದು, ಅಲ್ಲದೆ ಕ್ಷೇತ್ರದಲ್ಲಿ ನಿರಂತರವಾಗಿ ಹೋರಾಟಗಳು ನಡೆದರೂ ಸಹ ಕೇಂದ್ರ ಹಾಗು ರಾಜ್ಯ ಸರ್ಕಾರಗಳು ಇಚ್ಛಾ ಶಕ್ತಿ ತೋರಿಸದಿರುವುದು ಮನಸ್ಸಿಗೆ ನೋವುಂಟು ಮಾಡಿದೆ.
    ಎರಡು ಕಾರ್ಖಾನೆಗಳನ್ನು ನಂಬಿ ಬದುಕು ಸಾಗುತ್ತಿದ್ದ, ಸಾವಿರಾರು ಕಾರ್ಮಿಕರು, ಕುಟುಂಬ ವರ್ಗದವರು, ಕೃಷಿಕರು, ವ್ಯಾಪಾರಸ್ಥರು ಪ್ರಸ್ತುತ ಬೀದಿ ಪಾಲಾಗಿದ್ದು, ಚಿಂತಾಜನಕ ಸ್ಥಿತಿಯಲ್ಲಿ ಬದುಕು ಸಾಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಳಲು ಮನಸ್ಸು ಒಪ್ಪುತ್ತಿಲ್ಲ. ಈ ಹಿನ್ನಲೆಯಲ್ಲಿ ಕ್ಷೇತ್ರದ ಅಭಿಮಾನಿಗಳು, ಕಾರ್ಯಕರ್ತರು, ಹಿತೈಷಿಗಳು ಸೇರಿದಂತೆ ಸಮಸ್ತ ನಾಗರಿಕರು ನನ್ನ ಹುಟ್ಟುಹಬ್ಬದ ಸಂದರ್ಭದಲ್ಲಿ ಸಂಕಷ್ಟದಲ್ಲಿರುವ ಬಡಜನರ ಕಷ್ಟಗಳಿಗೆ ಸ್ಪಂದಿಸಿ ಅವರಿಗೆ ಕೈಲಾದಷ್ಟು ನೆರವು ನೀಡುವ ಮೂಲಕ ನನಗೆ ಶುಭ ಹಾರೈಸುವಂತೆ ಕೋರಿದ್ದಾರೆ.

ಪ್ರಯೋಗಾಲಯ ತಂತ್ರಜ್ಞರು ಮುಂಚೂಣಿ ಯೋಧರು : ಡಾ. ಎಂ.ವಿ ಅಶೋಕ್

ಭದ್ರಾವತಿಯಲ್ಲಿ ಯುವ ಚೈತನ್ಯ ವೇದಿಕೆ ವತಿಯಿಂದ ತಾಲೂಕು ಸರ್ಕಾರಿ ಆಸ್ಪತ್ರೆ ಸಭಾಂಗಣದಲ್ಲಿ ಪ್ರಯೋಗಾಯ ತಂತ್ರಜ್ಞರಿಗೆ ಅಭಿನಂದನೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
    ಭದ್ರಾವತಿ, ಅ. ೨೭: ಕೊರೋನ ಮಹಾಮಾರಿ ಉಲ್ಬಣಗೊಂಡಿದ್ದ ಸಂದರ್ಭದಲ್ಲಿ ತಮ್ಮ ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸಿರುವ ಪ್ರಯೋಗಾಲಯ ತಂತ್ರಜ್ಞರು ಮುಂಚೂಣಿ ಯೋಧರಾಗಿದ್ದು, ಇವರನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ವಿ ಅಶೋಕ್ ಹೇಳಿದರು.
    ನಗರದ ಯುವ ಚೈತನ್ಯ ವೇದಿಕೆ ವತಿಯಿಂದ ತಾಲೂಕು ಸರ್ಕಾರಿ ಆಸ್ಪತ್ರೆ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರಯೋಗಾಯ ತಂತ್ರಜ್ಞರಿಗೆ ಅಭಿನಂದನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.  
       ಕೊರೋನ ಮಹಾಮಾರಿ ರೂಪಾಂತರ ಹೊಂದಿ ಕಾಲಿಡುತ್ತಿರುವ ಕಾರಣ ಆರೋಗ್ಯ ಸಿಬ್ಬಂದಿ ಸೇರಿದಂತೆ ಎಲ್ಲಾ ವರ್ಗದ ಜನರು ಮೈಮರೆಯದೆ ಸಾಮಾಜಿಕ ಅಂತರ ಕಾಪಾಡಿಕೊಂಡು, ಮಾಸ್ಕ್ ಧರಿಸಬೇಕು. ಲಸಿಕೆ ಹಾಕಿಸಿಕೊಳ್ಳದಿರುವವರು ನಿಗದಿತ ಕೇಂದ್ರಗಳಲ್ಲಿ ಕೂಡಲೇ ಲಸಿಕೆ ಹಾಕಿಸಿಕೊಳ್ಳಬೇಕೆಂದು ಮನವಿ ಮಾಡಿದರು.
      ಯುವ ಚೈತನ್ಯ ವೇದಿಕೆಯ ಪ್ರಮುಖರಾದ ಎಸ್.ಆರ್ ಜಗದೀಶ್ ಮಾತನಾಡಿ, ವೇದಿಕೆ ಸಾಮಾಜಿಕ ಕಳಕಳಿಯೊಂದಿಗೆ ಮುನ್ನಡೆಯುತ್ತಿದೆ. ಯುವ ಸಮುದಾಯದವರು ವೇದಿಕೆಗೆ ಹೆಚ್ಚಿನ ಸಹಕಾರ ನೀಡುತ್ತಿದ್ದು,  ಬಸ್ ನಿಲ್ದಾಣ, ಸಾರ್ವಜನಿಕ ಗ್ರಂಥಾಲಯ, ಶಾಲಾ-ಕಾಲೇಜುಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತಾ ಕಾರ್ಯ, ಸಸಿ ನೆಡುವ ಮೂಲಕ ವನಮಹೋತ್ಸವ ಸೇರಿದಂತೆ ಹಲವಾರು ಸೇವಾ ಕಾರ್ಯಗಳನ್ನು ಕೈಗೊಳ್ಳುವ ಜೊತೆಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದರು.
    ವೇದಿಕೆಯಲ್ಲಿ ಪ್ರಯೋಗಾಲಯ ತಂತ್ರಜ್ಞರ ಸಂಘದ ಜಿಲ್ಲಾ ಉಪಾಧ್ಯಕ್ಷ ಖಾನ್, ಸರ್ಕಾರಿ ಆಸ್ಪತ್ರೆಯ ಜಿ.ಐ ಗಣಪತಿ, ಹಿರಿಯ ಪ್ರಯೋಗಾಲಯ ತಂತ್ರಜ್ಞ ಮೋಹನ್, ಯುವ ಚೈತನ್ಯ ವೇದಿಕೆಯ ವೃಷಭ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಒಟ್ಟು ೩೫ ಪ್ರಯೋಗಾಲಯ ತಂತ್ರಜ್ಞರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ನಿರ್ಮಲ ಪ್ರಾರ್ಥಿಸಿ, ಎಸ್.ಆರ್ ಜಗದೀಶ್ ಸ್ವಾಗತಿಸಿದರು. ಸರ್ಕಾರಿ ಆಸ್ಪತ್ರೆ ಪ್ರಯೋಗಾಲಯ ತಂತ್ರಜ್ಞೆ  ಶಮಾ ಬಾನು ವಂದಿಸಿದರು.

Tuesday, October 26, 2021

ಅ.೨೭ರಂದು ಪೂರ್ವಭಾವಿ ಸಭೆ

    ಭದ್ರಾವತಿ, ಅ. ೨೬: ಹಿಂದುಳಿದ ಜಾತಿಗಳ ಒಕ್ಕೂಟದ ವತಿಯಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಜಾತಿವಾರು ಸಮೀಕ್ಷೆ ವರದಿಯನ್ನು ತಕ್ಷಣ ಜಾರಿಗೊಳಿಸಲು ಒತ್ತಾಯಿಸಿ ಅ.೩೦ರಂದು ಬೃಹತ್ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದ್ದು, ಈ ಹಿನ್ನಲೆಯಲ್ಲಿ ಚರ್ಚಿಸಲು ಅ.೨೭ರ ಸಂಜೆ ೫ ಗಂಟೆಗೆ ಪೂರ್ವಭಾವಿ ಸಭೆ ಹಮ್ಮಿಕೊಳ್ಳಲಾಗಿದೆ.
    ಹಳೇನಗರದ ಬಸವೇಶ್ವರ ವೃತ್ತದ ಸಮೀಪದ ಶ್ರೀ ಮಾಚಿದೇವ ಕಲ್ಯಾಣ ಮಂಟಪದಲ್ಲಿ ತಾಲೂಕು ಹಿಂದುಳಿದ ಜಾತಿಗಳ ಒಕ್ಕೂಟದ ಪೂರ್ವಭಾವಿ ಸಭೆ ನಡೆಯಲಿದ್ದು,  ಸಭೆಯಲ್ಲಿ ರಾಜ್ಯ ಮತ್ತು ಜಿಲ್ಲಾ ಹಿಂದುಳಿದ ಜಾತಿಗಳ ಒಕ್ಕೂಟದ ಪದಾಧಿಕಾರಿಗಳು, ಜಿಲ್ಲಾ ಸಂಚಾಲಕರಾದ ಶ್ರೀಕಾಂತ್, ಆರ್. ಪ್ರಸನ್ನ ಕುಮಾರ್ ಸೇರಿದಂತೆ ಇನ್ನಿತರರು ಪಾಲ್ಗೊಳ್ಳಲಿದ್ದಾರೆ.  
ತಾಲೂಕಿನ ಎಲ್ಲಾ ಹಿಂದುಳಿದ ಜಾತಿಗಳ ಸಂಘದ ಪದಾಧಿಕಾರಿಗಳು, ಸದಸ್ಯರುಗಳು, ಚುನಾಯಿತ ಪ್ರತಿನಿಧಿಗಳು ಹಾಗೂ ಸಮಾಜದ ಬಂಧುಗಳು ಭಾಗವಹಿಸಬೇಕೆಂದು ಕೋರಲಾಗಿದೆ.