Friday, December 3, 2021

ನಿವೃತ್ತಿಹೊಂದಿದ ಶಿಕ್ಷಕರಿಗೆ ಬೀಳ್ಕೊಡುಗೆ

ಭದ್ರಾವತಿ ತರುಣ ಭಾರತಿ ವಿದ್ಯಾಕೇಂದ್ರದಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಶಿಕ್ಷಕಿಯರಿಗೆ ಹಾಗು ಸಹಾಯಕ ಸಿಬ್ಬಂದಿಯವರಿಗೆ ಶುಕ್ರವಾರ ಆಡಳಿತ ಮಂಡಳಿ ವತಿಯಿಂದ ಬೀಳ್ಕೊಡುಗೆ ನೀಡಲಾಯಿತು.
    ಭದ್ರಾವತಿ, ಡಿ. ೩: ನಗರ ತರುಣ ಭಾರತಿ ವಿದ್ಯಾಕೇಂದ್ರದಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಶಿಕ್ಷಕಿಯರಿಗೆ ಹಾಗು ಸಹಾಯಕ ಸಿಬ್ಬಂದಿಯವರಿಗೆ ಶುಕ್ರವಾರ ಆಡಳಿತ ಮಂಡಳಿ ವತಿಯಿಂದ ಬೀಳ್ಕೊಡುಗೆ ನೀಡಲಾಯಿತು.
    ಆಡಳಿತ ಮಂಡಳಿಯ ಹಿರಿಯ ಸದಸ್ಯ ಡಾ. ಮಹಾಬಲೇಶ್ವರ್, ಮುಖ್ಯ ಶಿಕ್ಷಕಿ ಶಕುಂತಲ ಹಾಗು ಸಹದ್ಯೋಗಿಗಳು ಶಿಕ್ಷಕಿಯರು ಹಾಗು ಸಹಾಯಕ ಸಿಬ್ಬಂದಿಯವರ ವೃತ್ತಿ ಸೇವೆಯನ್ನು ಸ್ಮರಿಸಿದರು.
    ಶಿಕ್ಷಕಿಯರಾಗಿ ವೃತ್ತಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಶಾಂತಮ್ಮ, ಉಮಾದೇವಿ ಹಾಗು ಸಹಾಯಕ ಸಿಬ್ಬಂದಿ ಅನಸೂಯಮ್ಮ ಅವರನ್ನು ಸನ್ಮಾನಿಸಿ ಬೀಳ್ಕೊಡುಗೆ ನೀಡಲಾಯಿತು.
    ಆಡಳಿತ ಮಂಡಳಿ ಅಧ್ಯಕ್ಷ ಬಿ.ಎಚ್ ಶಿವಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಡಾ. ಎಂ.ಎಚ್ ವಿದ್ಯಾಶಂಕರ್, ಖಜಾಂಚಿ ಎಚ್. ವಿಶ್ವನಾಥ್, ವಿಶ್ವಸ್ಥ ಮಂಡಳಿಯ ಮಧುಕರ್ ಕಾನಿಟ್ಕರ್, ಸುಭಾಷ್, ಶಿಕ್ಷಕಿಯರಾದ ಸುಜಾತ, ಸವಿತಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


ಪಡಿತರ ವಿತರಕರ ಸಭೆ : ತಕ್ಷಣ ಕಮೀಷನ್ ಬಿಡುಗಡೆಗೆ ಮನವಿ


ರಾಜ್ಯದಲ್ಲಿರುವ ಪಡಿತರ ನ್ಯಾಯಬೆಲೆ ಅಂಗಡಿಗಳ ಸಮಸ್ಯೆ ಕುರಿತು ಸರ್ಕಾರಿ ಪಡಿತರ ವಿತರಕರ ಸಂಘದ ರಾಜ್ಯಾಧ್ಯಕ್ಷ ಟಿ. ಕೃಷ್ಣಪ್ಪ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಚರ್ಚಿಸಲಾಯಿತು.
    ಭದ್ರಾವತಿ, ಡಿ. ೩: ರಾಜ್ಯದಲ್ಲಿರುವ ಪಡಿತರ ನ್ಯಾಯಬೆಲೆ ಅಂಗಡಿಗಳ ಸಮಸ್ಯೆ ಕುರಿತು ಸರ್ಕಾರಿ ಪಡಿತರ ವಿತರಕರ ಸಂಘದ ರಾಜ್ಯಾಧ್ಯಕ್ಷ ಟಿ. ಕೃಷ್ಣಪ್ಪ ನೇತೃತ್ವದಲ್ಲಿ ಚರ್ಚಿಸಲಾಯಿತು.
    ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಡೆದ ತುರ್ತು ಸಭೆಯಲ್ಲಿ ನ್ಯಾಯಬೆಲೆ ಅಂಗಡಿಗಳಲ್ಲಿ ಸರ್ವರ್ ಸಮಸ್ಯೆ, ಕೆವೈಸಿಹಾಗು ರಾಜ್ಯ ಮತ್ತು ಕೇಂದ್ರ ಸರ್ಕಾರದ ಕಮೀಷನ್ ವಿಚಾರಗಳ ಕುರಿತು ಚರ್ಚಿಸಲಾಯಿತು.
    ರಾಜ್ಯ ಮತ್ತು ಕೇಂದ್ರ ಸರ್ಕಾರದ ಕಮೀಷನ್ ಈಗಾಗಲೇ ಬಿಡುಗಡೆಗೊಂಡಿದ್ದು, ಆದರೂ ಸಹ ಇದುವರೆಗೂ ಖಾತೆಗಳಿಗೆ ಜಮಾ ಆಗಿಲ್ಲ. ತಕ್ಷಣ ಕ್ರಮ ಕೈಗೊಳ್ಳುವಂತೆ ಆಹಾರ ಇಲಾಖೆ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು. ರಾಜ್ಯ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಅರಬಿಳಚಿ ಕ್ಯಾಂಪ್‌ನಲ್ಲಿ ಕನ್ನಡ ರಾಜ್ಯೋತ್ಸವ


ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಭದ್ರಾವತಿ ತಾಲೂಕಿನ ಅರಬಿಳಚಿ ಕ್ಯಾಂಪ್ ವಿಶ್ವನಗರದಲ್ಲಿ ಗ್ರಾಮಸ್ಥರ ಸಹಕಾರದೊಂದಿಗೆ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.
    ಭದ್ರಾವತಿ, ಡಿ. ೩: ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ  ತಾಲೂಕಿನ ಅರಬಿಳಚಿ ಕ್ಯಾಂಪ್ ವಿಶ್ವನಗರದಲ್ಲಿ ಗ್ರಾಮಸ್ಥರ ಸಹಕಾರದೊಂದಿಗೆ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.
    ಸಾಹಿತಿ ಜೆ.ಎನ್ ಬಸವರಾಜಪ್ಪ ಮಾತನಾಡಿ, ಕರ್ನಾಟಕದ ಇತಿಹಾಸದಲ್ಲಿ ಶಿವಮೊಗ್ಗ ಜಿಲ್ಲೆಯ  ವೈಶಿಷ್ಟತೆಗಳನ್ನು, ಕೊಡುಗೆಗಳನ್ನುವಿವರಿಸಿದರು.
    ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ಎಂ. ಪರಮೇಶ್ ಮಾತನಾಡಿ, ನಾವೆಲ್ಲರೂ ಜಾತಿ, ಬೇಧಭಾವವಿಲ್ಲದೆ ಒಗ್ಗಟ್ಟಾಗಿ ಕನ್ನಡ ನಾಡು-ನುಡಿ ಕಟ್ಟಿ ಬೆಳೆಸುವ ಕಾರ್ಯದಲ್ಲಿ ಮುನ್ನಡೆಯೋಣ ಎಂದು ಕರೆ ನೀಡಿದರು.
    ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಅಣ್ಣಾಮಲೈ, ಕರವೇ ಜಿಲ್ಲಾಧ್ಯಕ್ಷ ಪಿ. ಪ್ರಶಾಂತ್,  ತಾಲೂಕು ಕಾರ್ಯದರ್ಶಿ ಅಶೋಕ ಘೋರ್ಪಡೆ, ಸಂಘಟನಾ ಕಾರ್ಯದರ್ಶಿ ರಾಮಕೃಷ್ಣ, ಘಟಕ ಉಪಾಧ್ಯಕ್ಷ ಗೋಪಿನಾಥ್, ವಿಶ್ವ ನಗರ ಘಟಕದ ಅಧ್ಯಕ್ಷ ಪ್ರವೀಣ್ ಹಾಗೂ ಉಪಾಧ್ಯಕ್ಷರು, ಕಾರ್ಯದರ್ಶಿ, ಸದಸ್ಯರು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು. ಡಿಎಸ್‌ಎಸ್ ಮುಖಂಡ ಪಳನಿರಾಜ್ ನಿರೂಪಿಸಿದರು.

ಮೂಲ ಆಕಾರ ಗ್ರಂಥಗಳನ್ನು ಅಧ್ಯಯನ ನಡೆಸಿ : ಡಾ. ಬಿ.ಜಿ ಧನಂಜಯ

ಭದ್ರಾವತಿ ಹೊಸಮನೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗ್ರಂಥಾಲಯ ಮತ್ತು ಮಾಹಿತಿ ವಿಭಾಗದ ವತಿಯಿಂದ ವಿದ್ಯಾರ್ಥಿಗಳಿಗೆ ಮತ್ತು ಅಧ್ಯಾಪಕರಿಗೆ ಹಮ್ಮಿಕೊಳ್ಳಲಾಗಿದ್ದ ಪುಸ್ತಕ ಪ್ರದರ್ಶನ ಮತ್ತು ಮಾಹಿತಿ ನೀಡುವ ಕಾರ್ಯಕ್ರಮ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಜಿ ಧನಂಜಯ ಉದ್ಘಾಟಿಸಿದರು.
    ಭದ್ರಾವತಿ, ಡಿ. ೩: ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ಕ್ರಮಬದ್ಧವಾಗಿ ಮತ್ತು ಯೋಜಿತವಾಗಿ ಮೂಲ ಪಠ್ಯ ಪುಸ್ತಕಗಳನ್ನು ಅಧ್ಯಯನ ನಡೆಸಬೇಕು. ಎಲ್ಲವನ್ನು ಅಂತರ್ಜಾಲದ ಮೂಲಕ ಪಡೆಯುವುದನ್ನು ನಿಲ್ಲಿಸಿ, ನೋಟ್ಸ್ ಮತ್ತು ಗೈಡ್‌ಗಳ ಬದಲಾಗಿ ಮೂಲ ಆಕಾರ ಗ್ರಂಥಗಳನ್ನು ಅಧ್ಯಯನ ನಡೆಸಿ ಎಂದು ಹೊಸಮನೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಜಿ ಧನಂಜಯ ಸಲಹೆ ನೀಡಿದರು.
    ಅವರು ಶುಕ್ರವಾರ ಕಾಲೇಜಿನಲ್ಲಿ ಗ್ರಂಥಾಲಯ ಮತ್ತು ಮಾಹಿತಿ ವಿಭಾಗದ ವತಿಯಿಂದ ವಿದ್ಯಾರ್ಥಿಗಳಿಗೆ ಮತ್ತು ಅಧ್ಯಾಪಕರಿಗೆ ಪುಸ್ತಕ ಪ್ರದರ್ಶನ ಮತ್ತು ಮಾಹಿತಿ ನೀಡುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ಗ್ರಂಥಾಲಯಗಳು ಜ್ಞಾನದ ದೇಗುಲಗಳಿದಂತೆ, ಪುಸ್ತಕಗಳ ಅಧ್ಯಯನದಿಂದ ಜ್ಞಾನ ಸಂಪಾದನೆ ಮತ್ತು ವ್ಯಕ್ತಿತ್ವ ನಿರ್ಮಾಣವಾಗುತ್ತದೆ. ಜಗತ್ತಿನ ಶ್ರೇಷ್ಠ ಮತ್ತು ಮಹಾನ್ ವ್ಯಕ್ತಿಗಳ ವ್ಯಕ್ತಿತ್ವ ರೂಪುಗೊಂಡದ್ದು ಗ್ರಂಥಾಲಯಗಳಿಂದ ಎನ್ನುವುದು ಸರ್ವಕಾಲಿಕ ಸತ್ಯ ಎಂದರು.
    ಗ್ರಂಥಗಳ ಅಧ್ಯಯನ ಹೊಸ ಪ್ರಪಂಚಕ್ಕೆ ಕೊಂಡೊಯ್ಯುತ್ತದೆ. ಡಾ. ಬಿ.ಆರ್ ಅಂಬೇಡ್ಕರ್‌ರವರು ನಿರಂತರವಾಗಿ ಅಧ್ಯಯನ ನಡೆಸುವ ಮೂಲಕ ಜಗತ್ತು ಮೆಚ್ಚುವ ವಿದ್ವಾಂಸರಾದರು. ಈ ದಾರಿಯಲ್ಲಿ ನಾವುಗಳು ಸಹ ಸಾಗಬೇಕಾಗಿದೆ ಎಂದರು.
    ಗ್ರಂಥಾಲಯ ವಿಭಾಗದ ಮುಖ್ಯಸ್ಥ ಡಾ. ಜಿ.ಆರ್ ರಾಜಶೇಖರ್ ಪ್ರಾಸ್ತಾವಿಕವಾಗಿ ಮಾತನಾಡಿ, ಪುಸ್ತಕ ಪ್ರದರ್ಶನದ ಮುಖ್ಯ ಉದ್ದೇಶಗಳನ್ನು ವಿವರಿಸಿದರು. ಡಾ. ಬಸವರಾಜ್, ಮಲ್ಲಪ್ಪ, ಡಾ. ತಿಪ್ಪೇಶ್, ಅಜಯ್, ಸತೀಶ್, ಚಂದ್ರಪ್ಪ ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ರೇವಣ ಸಿದ್ದಪ್ಪ ಸ್ವಾಗತಿಸಿದರು. ಉಮೇಶ್ ವಂದಿಸಿದರು.

ಭದ್ರಾ ಸುಗಮ ಸಂಗೀತ ವೇದಿಕೆ ವತಿಯಿಂದ ಕನ್ನಡ ರಾಜ್ಯೋತ್ಸವ

ಭದ್ರಾ ಸುಗಮ ಸಂಗೀತ ವೇದಿಕೆ ವತಿಯಿಂದ ಭದ್ರಾವತಿ ಹಳೇನಗರದ ಶ್ರೀ ವೀರಭದ್ರೇಶ್ವರ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಕನ್ನಡ ರಾಜ್ಯೋತ್ಸವದಲ್ಲಿ ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್ ಮಾತನಾಡಿದರು.
    ಭದ್ರಾವತಿ, ಡಿ. ೩: ಭದ್ರಾ ಸುಗಮ ಸಂಗೀತ ವೇದಿಕೆ ವತಿಯಿಂದ ಹಳೇನಗರದ ಶ್ರೀ ವೀರಭದ್ರೇಶ್ವರ ಸಮುದಾಯ ಭವನದಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.
    ನಗರಸಭೆ ಅಧ್ಯಕ್ಷೆ ಗೀತಾ ರಾಜಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು.  ಸಮೂಹ ಗಾಯನ ಹಾಗು ನಾಡು-ನುಡಿ ಕುರಿತು ಭಾಷಣ ಸ್ಪರ್ಧೆ ಮತ್ತು ಕ್ರೀಡಾ ಸ್ಪರ್ಧೆಗಳು ಜರುಗಿದವು.
    ವಿಜೇತರಿಗೆ ಪುಸ್ತಕಗಳನ್ನು ಬಹುಮಾನವಾಗಿ ವಿತರಿಸಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ ವೇದಿಕೆಯ ಸದಸ್ಯರಾದ ಬಿ. ಕಾಂತಪ್ಪ, ನಂದಿನಿ ಮಲ್ಲಿಕಾರ್ಜುನ,  ಅನ್ನಪೂಣ೯ ಸತೀಶ್ ಸೇರಿದಂತೆ ಇನ್ನಿತರರನ್ನು ಸನ್ಮಾನಿಸಿ ಗೌರವಿಸಲಾಯಿತು.
    ವೇದಿಕೆ ಅಧ್ಯಕ್ಷ  ಕಾ.ರಾ.ನಾಗರಾಜ್ ಅಧ್ಯಕ್ಷತೆ ವಹಿಸಿದ್ದರು. ಗೌರವಧ್ಯಕ್ಷ ಎಂ.ಎಸ್ ಜನಾರ್ಧನಾ ಅಯ್ಯಂಗಾರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾಯ೯ದಶಿ೯ ಜ್ಯೋತಿ ರಾಜಶೇಖರ್ ಸ್ವಾಗತಿಸಿದರು. ಅಡವೀಶಯ್ಯ  ನಿರೂಪಿಸಿ ಶೋಭಾ ಗಂಗರಾಜ್ ವಂದಿಸಿದರು.

Thursday, December 2, 2021

ವಿಧಾನ ಪರಿಷತ್ : ಜೆಡಿಯು ಅಭ್ಯರ್ಥಿಗೆ ರೈತಸಂಘ-ಕೆಆರ್‌ಎಸ್ ಬೆಂಬಲ


ವಿಧಾನಪರಿಷತ್ ಜೆಡಿಯು ಅಭ್ಯರ್ಥಿ ಶಶಿಕುಮಾರ್ ಎಸ್ ಗೌಡರವರಿಗೆ ಮತ ನೀಡುವಂತೆ ಪಕ್ಷದ ರಾಜ್ಯಾಧ್ಯಕ್ಷ ಮಹಿಮಾ ಜೆ. ಪಟೇಲ್ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮನವಿ ಮಾಡಿದರು.
    ಭದ್ರಾವತಿ, ಡಿ. ೨ : ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷರಾದ ಲಕ್ಷ್ಮೀನಾರಾಯಣಗೌಡ ಹಾಗೂ ಕರ್ನಾಟಕ ರಾಷ್ಟ್ರ ಸಮಿತಿಯ (ಕೆಆರ್‌ಎಸ್) ರಾಜ್ಯಾಧ್ಯಕ್ಷರಾದ ರವಿಕೃಷ್ಣ ರೆಡ್ಡಿ ಮತ್ತು ಅವರ ಬೆಂಬಲಿಗರು ಸಂಯುಕ್ತ ಜನತಾದಳದ ರಾಜ್ಯಾಧ್ಯಕ್ಷರಾದ ಮಹಿಮ ಜೆ. ಪಟೇಲ್‌ರವರ ಗ್ರಾಮ ಸ್ವರಾಜ್ಯ, ಗ್ರಾಮೀಣಾಭಿವೃದ್ಧಿ ಯೋಜನೆಗಳು ಹಾಗೂ ಅವರ ನಾಯಕತ್ವದಲ್ಲಿ ವಿಶ್ವಾಸವಿಟ್ಟು ಮುಂದಿನ ದಿನಗಳಲ್ಲಿ ಒಗ್ಗಟ್ಟಾಗಿ ಸಾಮಾಜಿಕ ಬದಲಾವಣೆಗಾಗಿ ಚುನಾವಣೆಗಳನ್ನು ಎದುರಿಸುವ ನಿಟ್ಟಿನಲ್ಲಿ ವಿಧಾನ ಪರಿಷತ್ ಅಭ್ಯರ್ಥಿ ಶಶಿಕುಮಾರ್‌ಗೌಡ ರವರಿಗೆ ಬೇಷರತ್ ಬೆಂಬಲ ನೀಡಿರುತ್ತಾರೆಂದು ಪಕ್ಷದ ಜಿಲ್ಲಾ ಸಂಚಾಲಕ ಎಂ.ಡಿ ದೇವರಾಜ ಶಿಂಧೆ ತಿಳಿಸಿದರು.
    ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಡಿ.೧೦ರಂದು ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್‌ಗೆ ನಡೆಯಲಿರುವ ಚುನಾವಣೆಯಲ್ಲಿ ಸಂಯುಕ್ತ ಜನತಾದಳದ ಅಭ್ಯರ್ಥಿಯಾಗಿ ಶಶಿಕುಮಾರ್‌ಗೌಡ ಸ್ಪರ್ಧಿಸಿದ್ದು, ಸಂಯುಕ್ತ ಜನತಾದಳದ ಸಮಾಜವಾದಿ ನಿಲುವು, ಸಾವಯವ ಕೃಷಿ ಹಾಗೂ ನೈಸರ್ಗಿಕ ಪರಿಸರಕ್ಕೆ ಕೊಡುತ್ತಿರುವ ಕಾರ್ಯಕ್ರಮಗಳು ಹಾಗೂ ಮೌಲ್ಯಾಧಾರಿತ ರಾಜಕಾರಣದ ರೂವಾರಿಗಳಾದ ರಾಮಕೃಷ್ಣ ಹೆಗಡೆ, ಜೆ.ಹೆಚ್ ಪಟೇಲ್‌ರವರ ಆಡಳಿತ ವೈಖರಿಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಹಿನ್ನಲೆಯಲ್ಲಿ ಪಕ್ಷದ ಅಭ್ಯರ್ಥಿ ಪರವಾಗಿ ವ್ಯಾಪಕ ಬೆಂಬಲ ಕಂಡು ಬರುತ್ತಿದೆ ಎಂದರು.
ಜೆಡಿಯು ರಾಜ್ಯಾಧ್ಯಕ್ಷ ಮಹಿಮ ಜೆ. ಪಟೇಲ್ ಮಾತನಾಡಿ, ವಿಧಾನ ಪರಿಷತ್ ಚುನಾವಣೆಯಲ್ಲಿ ಗ್ರಾಮ ಪಂಚಾಯತಿ ಸದಸ್ಯರೇ ಶೇ ೯೦ರಷ್ಟು ಮತದಾರರಾಗಿದ್ದು, ಚುನಾವಣೆಯಲ್ಲಿ ಬಂಡವಾಳ ಹೂಡದೆ ಗ್ರಾಮದ ಹಿತವನ್ನು ಸದನದಲ್ಲಿ ಕಾಪಾಡುವ ಸಮರ್ಥ ಅಭ್ಯರ್ಥಿಯನ್ನು ಆರಿಸಬೇಕಾಗಿದೆ ಎಂದರು.
    ಹಣ-ಹೆಂಡ ಹಂಚದೆ ವಿಧಾನಸಭಾ ಚುನಾವಣೆಯಲ್ಲಿ ಈ ಹಿಂದೆ ಆರಿಸಿಹೋಗಿರುವ ಬಗ್ಗೆ ನಾನೇ ತಾಜಾ ಉದಾಹರಣೆ ಎಂದರು. ಮುಂದಿನ ಬಾರಿ ಚನ್ನಗಿರಿ ಕ್ಷೇತ್ರದಿಂದ ಸ್ಪರ್ಧಿಸುವಂತೆ ಮತದಾರರು ಬೇಡಿಕೆಯಿಟ್ಟಿದ್ದು, ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ನಿತೀಶ್ ಕುಮಾರ್‌ರವರ ಬಿಹಾರ್ ಮಾದರಿಯಲ್ಲಿ ರಾಜ್ಯದಲ್ಲೂ ಪಕ್ಷವನ್ನು ಮುನ್ನಡೆಸಿಕೊಂಡು ಹೋಗುವ ಬಗ್ಗೆ ಆಲೋಚಿಸಲಾಗುತ್ತಿದೆ ಎಂದರು.
    ರವಿಕೃಷ್ಣ ರೆಡ್ಡಿ ಮಾತನಾಡಿ, ರಾಜಕೀಯ ಪಕ್ಷಗಳ ಸ್ಥಳೀಯ ಚುನಾಯಿತ ಪ್ರತಿನಿಧಿಗಳು ಹಣಕ್ಕೆ ಮಾರಿಕೊಳ್ಳದೆ ಮೊದಲ ಪ್ರಾಶಸ್ತ್ಯ ಮತವನ್ನು ತಮ್ಮ ಪಕ್ಷದ ಅಭ್ಯರ್ಥಿಗಳಿಗೆ ಹಾಗು ೨ನೇ ಪ್ರಾಶಸ್ತದ ಮತವನ್ನು ಜೆಡಿಯು ಅಭ್ಯರ್ಥಿಗೆ ಹಾಗು ಸ್ವತಂತ್ರವಾಗಿ ಆಯ್ಕೆಯಾಗಿರುವ ಗ್ರಾಮ ಪಂಚಾಯಿತಿ ಸದಸ್ಯರು ಪ್ರಥಮ ಪ್ರಾಶಸ್ತ್ಯ ಮತವನ್ನು ನೀಡುವಂತೆ ಮನವಿ ಮಾಡಿಕೊಂಡರು.
    ಲಕ್ಷ್ಮೀನಾರಾಯಣಗೌಡ, ಲಿಂಗೇಗೌಡ, ಅಭ್ಯರ್ಥಿ ಶಶಿಕುಮಾರ ಎಸ್ ಗೌಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಬಿಎಸ್‌ಪಿ ತಾಲೂಕು ಅಧ್ಯಕ್ಷರಾಗಿ ರಹಮತುಲ್ಲಾಖಾನ್ ನೇಮಕ


ಬಿಎಸ್‌ಪಿ ಭದ್ರಾವತಿ ತಾಲೂಕು ಅಧ್ಯಕ್ಷ ರಹಮತುಲ್ಲಾಖಾನ್(ಸರದಾರ್)

    ಭದ್ರಾವತಿ, ಡಿ. ೨: ಬಹುಜನ ಸಮಾಜ ಪಕ್ಷದ ತಾಲ್ಲೂಕು ಸಮಿತಿಯ ಅಧ್ಯಕ್ಷರಾಗಿ  ಹೊಳೆಹೊನ್ನೂರು ರಸ್ತೆಯ ಖಲಂದರಿಯ ನಗರ ನಿವಾಸಿ  ರಹಮತುಲ್ಲಾಖಾನ್(ಸರದಾರ್) ರವರನ್ನು ನೇಮಕ ಮಾಡಿರುವುದಾಗಿ  ಪಕ್ಷದ ಜಿಲ್ಲಾಧ್ಯಕ್ಷರಾದ ಎ.ಡಿ.ಶಿವಪ್ಪ ತಿಳಿಸಿದರು.
    ಅವರು ಗುರುವಾರ ಬೆಳಿಗ್ಗೆ ಸುದ್ದಿಗೋಷ್ಠಿಯಲ್ಲಿ ನೂತನ ಪದಾಧಿಕಾರಿಗಳ ಪಟ್ಟಿ ಬಿಡುಗಡೆ ಮಾಡಿ ಮಾತನಾಡಿದರು. ಸಂಯೋಜಕರಾಗಿ ಎಂ.ರಾಜೇಂದ್ರ, ಉಪಾಧ್ಯಕ್ಷರಾಗಿ ಚಂದ್ರು ವಿ, ಪ್ರಧಾನ ಕಾರ್ಯದರ್ಶಿಯಾಗಿ ನರಸಯ್ಯ ಬಿ.ವಿ., ಸಹ ಕಾರ್ಯದರ್ಶಿಯಾಗಿ ಇಮಾಮ್‌ಬಕ್ಷ್, ಖಜಾಂಚಿಯಾಗಿ ಕೈಸರ್ ಷರಿಫ್,  ಕಛೇರಿ ಕಾರ್ಯದರ್ಶಿಯಾಗಿ ಸೈಯದ್ ಶೌಕತ್ ನೇಮಕ ಗೊಂಡಿರುತ್ತಾರೆ.
    ಜಿಲ್ಲಾಧ್ಯಕ್ಷ ಎ.ಡಿ.ಶಿವಪ್ಪ ಮಾತನಾಡಿ, ರಾಷ್ಟ್ರೀಯ ಪಕ್ಷವಾದ ಬಹುಜನ ಸಮಾಜ ಪಕ್ಷ ಇತರೆ ರಾಜಕೀಯ ಪಕ್ಷಗಳಿಗೆ ಹೋಲಿಕೆ ಮಾಡಿದ್ದಲ್ಲಿ ಭಿನ್ನವಾಗಿದೆ.  ಶ್ರೀ ಸಾಮಾನ್ಯರ ಹಿತ ಕಾಪಾಡುವಲ್ಲಿ, ಬಹುಜನತೆಯ ಆಶೋತ್ತರಗಳನ್ನು ಈಡೇರಿಸುವಲ್ಲಿ, ಕನಿಷ್ಟ ಮಟ್ಟದ ಜೀವನಾವಶ್ಯಕ ಸೌಲಭ್ಯಗಳನು ಕಲ್ಪಿಸುವಲ್ಲಿ ಸುದೀರ್ಘಕಾಲ ಆಳ್ವಿಕೆ ನಡೆಸಿರುವ ಕಾಂಗ್ರೆಸ್ ಹಾಗೂ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದರು.
    ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾವುದೇ ಕಾಯ್ದೆಗಳನ್ನು ಚರ್ಚಿಸದೆ ಜಾರಿಗೊಳಿಸುವುದು ಹಾಗು ಅದೇ ರೀತಿ ಹಿಂಪಡೆಯುವುದು ಸಂವಿಧಾನದ ಆಶಯಗಳನ್ನು ಗಾಳಿಗೆ ತೂರಿದ ಸರ್ವಾಧಿಕಾರಿ ಧೋರಣೆಯಾಗಿದೆ. ಪ್ರಸ್ತುತ ದೇಶದಲ್ಲಿರುವ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಸರ್ವಾಧಿಕಾರಿ ಧೋರಣೆಗೆ ದೇಶದ ರೈತರು ತಕ್ಕ ಉತ್ತರ ನೀಡಿದ್ದಾರೆ ಎಂದರು.
ಎಂ. ರಾಜೇಂದ್ರ ಮಾತನಾಡಿ, ಅವಳಿ ಕಾರ್ಖಾನೆಗಳ ಅವನತಿ ಸೇರಿದಂತೆ ನಗರದ ಅಭಿವೃದ್ಧಿಗೆ ಸ್ಥಳೀಯ ಶಾಸಕರ ಹಾಗೂ ಸಂಸದರ ಕೊಡುಗೆ ಶೂನ್ಯ ಎಂದು ಆರೋಪಿಸಿದರು.
    ನೂತನ ಅಧ್ಯಕ್ಷರಾದ ರಹಮತುಲ್ಲಾಖಾನ್ (ಸರದಾರ್) ಮಾತನಾಡಿ ಕಾಂಗ್ರೆಸ್ ಪಕ್ಷದಲ್ಲಿ  ಸ್ಥಳೀಯವಾಗಿ ಅಲ್ಪ ಸಂಖ್ಯಾತರಿಗೆ ಗೌರವ ಇಲ್ಲದ ಕಾರಣ  ಜಿಲ್ಲಾ ಉಪಾಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿ ಬಹುಜನ ಸಮಾಜ ಪಾರ್ಟಿಗೆ ಸೇರಿದ್ದು, ಮುಂದಿನ ದಿನಗಳಲ್ಲಿ ಪಕ್ಷಕ್ಕೆ ಭದ್ರ ಬುನಾದಿ ಹಾಕಲಾಗುವುದು ಎಂದರು.
    ಜಿಲ್ಲಾ ಉಪಾಧ್ಯಕ್ಷರಾದ  ಎಚ್.ಎನ್ ಶ್ರೀನಿವಾಸ್ ಸೇರಿದಂತೆ ತಾಲ್ಲ್ಲೂಕು ಪದಾಧಿಕಾರಿಗಳು ಉಪಸ್ಥಿತರಿದ್ದರು.