Wednesday, December 8, 2021

ನಿರ್ಮಲ ಆಸ್ಪತ್ರೆ ೨೪ ನರ್ಸಿಂಗ್ ವಿದ್ಯಾರ್ಥಿಗಳಲ್ಲಿ ಕೊರೋನಾ ಸೋಂಕು ಪತ್ತೆ : ಆಸ್ಪತ್ರೆ ಸೀಲ್‌ಡೌನ್

ಭದ್ರಾವತಿ ಹಳೇನಗರದ ನಿರ್ಮಲ ಆಸ್ಪತ್ರೆ ೨೪ ನರ್ಸಿಂಗ್ ವಿದ್ಯಾರ್ಥಿಗಳಲ್ಲಿ ಸೋಂಕು ಕಾಣಿಸಿಕೊಂಡಿರುವ ಹಿನ್ನಲೆಯಲ್ಲಿ ಆಸ್ಪತ್ರೆಯನ್ನು ಸೀಲ್‌ಡೌನ್ ಮಾಡಿರುವುದು.
    ಭದ್ರಾವತಿ, ಡಿ. ೯: ಶಿವಮೊಗ್ಗ ನಂಜಪ್ಪ ಲೈಫ್‌ಕೇರ್ ಆಸ್ಪತ್ರೆಯಲ್ಲಿ ಪರೀಕ್ಷೆ ಬರೆದ ಹಳೇನಗರದ ನಿರ್ಮಲ ಆಸ್ಪತ್ರೆಯ ೨೪ ನರ್ಸಿಂಗ್ ವಿದ್ಯಾರ್ಥಿಗಳಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿದ್ದು, ಇದರಿಂದಾಗಿ ಗುರುವಾರ ಆಸ್ಪತ್ರೆಯನ್ನು ಸೀಲ್‌ಡೌನ್ ಮಾಡಲಾಗಿದೆ.
    ಪರೀಕ್ಷೆಗೆ ತೆರಳಿದ್ದ ವಿದ್ಯಾರ್ಥಿಗಳ ಪೈಕಿ ಓರ್ವ ವಿದ್ಯಾರ್ಥಿಯಲ್ಲಿ ಸೋಂಕು ಪತ್ತೆಯಾಗಿದ್ದು, ಈ ಹಿನ್ನಲೆಯಲ್ಲಿ ತಾಲೂಕು ಆರೋಗ್ಯ ಇಲಾಖೆ ವತಿಯಿಂದ ನರ್ಸಿಂಗ್ ವ್ಯಾಸಂಗ ನಡೆಸುತ್ತಿರುವ ಎಲ್ಲಾ  ಒಟ್ಟು ೧೭೯ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಒಳಪಡಿಸಿದಾಗ ೨೫ ವಿದ್ಯಾರ್ಥಿಗಳಲ್ಲಿ ಸೋಂಕು ಪತ್ತೆಯಾಗಿದೆ. ವಿದ್ಯಾರ್ಥಿಗಳು ಹೊರಗೆ ಎಲ್ಲೂ ಸಹ ಹೋಗಿಲ್ಲ. ಆದರೂ ಸಹ ಸೋಂಕು ಪತ್ತೆಯಾಗಿದ್ದು, ಈ ಹಿನ್ನಲೆಯಲ್ಲಿ ಪರೀಕ್ಷಾ ಕೇಂದ್ರದಿಂದಲೇ ಸೋಂಕು ಹರಡಿರುವ ಸಾಧ್ಯತೆ ಹೆಚ್ಚಾಗಿದೆ ಎನ್ನಲಾಗಿದೆ.
ಮುನ್ನಚ್ಚರಿಕೆ ಕ್ರಮವಾಗಿ ಆಸ್ಪತ್ರೆಯನ್ನು ಸೀಲ್‌ಡೌನ್ ಮಾಡಲಾಗಿದ್ದು, ಆಸ್ಪತ್ರೆಯನ್ನು ಸಂಪೂರ್ಣವಾಗಿ ಸ್ಯಾನಿಟೈಜರ್ ಮಾಡಲಾಗಿದೆ. ಅಲ್ಲದೆ ಆಸ್ಪತ್ರೆಗೆ ಸಾರ್ವಜನಿಕ ಪ್ರವೇಶ ನಿರ್ಬಂಧಿಸಲಾಗಿದ್ದು, ಮುಖ್ಯದ್ವಾರವನ್ನು ಟೇಪ್ ಮಾಡುವ ಮೂಲಕ ಬಂದ್ ಮಾಡಲಾಗಿದೆ.
    ಆಸ್ಪತ್ರೆಯಲ್ಲಿ ಈ ಹಿಂದೆ ಕೊರೋನಾ ಸೋಂಕಿತರಿಗೂ ಪ್ರತ್ಯೇಕವಾಗಿ ಚಿಕಿತ್ಸೆ ನೀಡಲಾಗುತ್ತಿತ್ತು. ಈ ಸಂದರ್ಭದಲ್ಲಿ ಹೆಚ್ಚಿನ ಕಟ್ಟುನಿಟ್ಟಿನ ಎಚ್ಚರಿಕೆ ಕ್ರಮಗಳನ್ನು ಅನುಸರಿಸಲಾಗುತ್ತಿತ್ತು. ಇದರಿಂದ ಯಾವುದೇ ಸೋಂಕು ಪ್ರಕರಣಗಳು ಆಸ್ಪತ್ರೆಯಲ್ಲಿ ಕಂಡು ಬಂದಿರಲಿಲ್ಲ.

ಅಮಲೋದ್ಭವಿ ಮಾತೆಯ ದೇವಾಲಯದ ೮೩ನೇ ವರ್ಷದ ವಾರ್ಷಿಕೋತ್ಸವಕ್ಕೆ ತೆರೆ


ಭದ್ರಾವತಿ ನ್ಯೂಟೌನ್ ಅಮಲೋದ್ಭವಿ ಮಾತೆಯ ದೇವಾಲಯದ ೮೩ನೇ ವರ್ಷದ ವಾರ್ಷಿಕೋತ್ಸವದಲ್ಲಿ ದೇವಾಲಯದ ಧರ್ಮಗುರು ಫಾದರ್ ಲಾನ್ಸಿ ಡಿಸೋಜ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
    ಭದ್ರಾವತಿ, ಡಿ.೮: ನಗರದ ನ್ಯೂಟೌನ್ ಅಮಲೋದ್ಭವಿ ಮಾತೆಯ ದೇವಾಲಯದ ೮೩ನೇ ವರ್ಷದ ವಾರ್ಷಿಕೋತ್ಸವ ಬುಧವಾರ ಆಡಂಬರದ ಬಲಿ ಪೂಜೆ, ವಿಶೇಷ ದಾನಿಗಳ ಸರಣೆ ಮತ್ತು ಸನ್ಮಾನ ಕಾರ್ಯಕ್ರಮಗಳೊಂದಿಗೆ ಮುಕ್ತಾಯಗೊಂಡಿತು.
    ಜಗದ್ಗುರು ಪೋಪ್‌ರವರ ಕರೆಯೋಲೆಯಂತೆ ೨೦೨೩ರಲ್ಲಿ ನಡೆಯುವ ವಿಶ್ವ ಸಿನೋದ್ ಸಭೆಯ ಸಿದ್ದತಾ ಪ್ರಕ್ರಿಯೆಗಳಿಗೆ ಪೂರಕವಾಗಿರುವಂತೆ  'ಅಮಲೋದ್ಭವಿ ಮಾತೆಯೊಡನೆ ಅನ್ಯೋನ್ಯತೆ, ಸಹಭಾಗಿತ್ವ ಮತ್ತು ಸುವಾರ್ತಾ ಸೇವೆಯೆಡೆಗೆ ಜೊತೆಯಾಗಿ ನಮ್ಮ ಪಯಣ' ಎಂಬ ಶೀರ್ಷಿಕೆಯೊಂದಿಗೆ ನ.೨೮ ಆರಂಭಗೊಂಡಿದ್ದ ವಾರ್ಷಿಕೋತ್ಸವದಲ್ಲಿ ಪ್ರತಿದಿನ ಸಂಜೆ ಜಪಸರ ಪ್ರಾರ್ಥನೆ, ಪೂಜೆ ಮತ್ತು ಪ್ರಬೋಧನೆಗಳು ಜರುಗಿದವು.
    ಶಿವಮೊಗ್ಗ ಗುಡ್ ಶೆಪರ್ಡ್ ಧರ್ಮಕೇಂದ್ರದ ಗುರು ಫಾದರ್ ವಿರೇಶ್ ಮೋರಾಸ್, ಮಾವಿನಕೆರೆ ಕಿರಿಯ ಪುಷ್ಪ ಸಂತ ತೆರೇಸಮ್ಮನವರ ಸುವಾರ್ತ ಕೇಂದ್ರದ ಧರ್ಮಗುರು ಫಾದರ್ ವೀನಸ್ ಪ್ರವೀಣ್, ಶಿವಮೊಗ್ಗ ಸೇಕೆರ್ಡ್ ಆರ್ಟ್ ಶಾಲೆ ಪ್ರಾಂಶುಪಾಲ ಫಾದರ್ ಲಾರೆನ್ಸ್, ಹಿರಿಯೂರು ವಿಯಾನ್ನಿ ಪ್ರೇಷಿತರ ಗೃಹದ ನಿರ್ದೇಶಕ ಫಾದರ್ ಸಂತೋಷ್, ಕಾಗದನಗರ ಸಂತ ಜೋಸೆಫ್‌ರ ದೇವಾಲಯದ ಎಸ್‌ಡಿಬಿ ಫಾದರ್ ಡೋಮಿನಿಕ್, ಉಜ್ಜನಿಪುರ ಡಾನ್ ಬೋಸ್ಕೋ ಐಟಿಐ ನಿರ್ದೇಶಕ ಎಸ್‌ಡಿಬಿ ಫಾದರ್ ಆರೋಗ್ಯರಾಜ್ ಮತ್ತು ಹಿರಿಯೂರು ಸ್ವರ್ಗ ಸ್ವೀಕೃತ ಮಾತೆಯ ದೇವಾಲಯದ ಧರ್ಮಗುರು ಫಾದರ್ ಫ್ರಾಂಕ್ಲಿನ್ ಡಿಸೋಜ ಮಾತನಾಡಲಿದ್ದಾರೆ. ಜೇಡಿಕಟ್ಟೆ ಆಶಾಕಿರಣ ನಿರ್ದೇಶಕ ಫಾದರ್ ಪ್ರಕಾಶ್, ಕಡೂರಿನ ನಿತ್ಯಾಧಾರ ಮಾತೆ ದೇವಾಲಯದ ಧರ್ಮಗುರು ಫಾದರ್ ರಾಜೇಂದ್ರ, ಹಾಸನ ಸಂತ ಅಂತೋಣಿಯವರ ದೇವಾಲಯದ ಧರ್ಮಗುರು ಫಾದರ್ ಜೋನಾಸ್ ಪ್ಯಾಟ್ರಿಕ್ ರಾವ್ ಸೇರಿದಂತೆ ಇನ್ನಿತರ ಧರ್ಮಗುರುಗಳು ಭಾಗವಹಿಸಿದ್ದರು.
    ವಾರ್ಷಿಕೋತ್ಸವದ ಅಂಗವಾಗಿ ರೋಗಿಗಳಿಗೆ ವಿಶೇಷ ಪ್ರಾರ್ಥನೆ, ಅಲೋದ್ಭವಿ ಮಾತೆಯ ಭವ್ಯ ತೇರಿನ ಮೆರವಣಿಗೆ, ಭಕ್ತರಿಗೆ ಆಶೀರ್ವಾದ ಹಾಗು ಅನ್ನಸಂತರ್ಪಣೆ, ಆಡಂಬರದ ಬಲಿ ಪೂಜೆ, ವಿಶೇಷ ದಾನಿಗಳ ಸರಣೆ ಮತ್ತು ಸನ್ಮಾನ ಕಾರ್ಯಕ್ರಮಗಳು ಜರುಗಿದವು.
    ದಾನಿಗಳಾದ ಉದ್ಯಮಿ ಎ. ಮಾಧು, ನಗರಸಭಾ ಸದಸ್ಯ ಜಾರ್ಜ್, ದೇವಾಲಯದ ಧರ್ಮಗುರು ಫಾದರ್ ಲಾನ್ಸಿ ಡಿಸೋಜ ಸೇರಿದಂತೆ ಇನ್ನಿತರರನ್ನು ಸನ್ಮಾನಿಸಿ ಗೌರವಿಸಲಾಯಿತು.  ಪಾಲನ ಪರಿಷತ್ ಕಾರ್ಯದರ್ಶಿ ಅಂತೋಣಿ ವಿಲ್ಸನ್ ವಂದಿಸಿದರು. ನಗರದ ವಿವಿಧೆಡೆ ಭಕ್ತಾಧಿಗಳು ಪಾಲ್ಗೊಂಡಿದ್ದರು.

ನಿರ್ದೇಶಕರಾಗಿ ನಟರಾಜ್, ಹರೀಶ್ ಬಾಬು ಆಯ್ಕೆ

ಎ.ಎನ್ ನಟರಾಜ್
    ಭದ್ರಾವತಿ. ಡಿ, ೮ :  ಹಳೇನಗರದ ಶ್ರೀ ಕನ್ಯಕಾಪರಮೇಶ್ವರಿ ವಿವಿಧೋದ್ದೇಶ ಸಹಕಾರ ಸಂಘದ ನಿರ್ದೇಶಕರಾಗಿ ಎ.ಎನ್ ನಟರಾಜ್ ಮತ್ತು ಕೆ.ವಿ ಹರೀಶ್ ಬಾಬು ಆಯ್ಕೆಯಾಗಿದ್ದಾರೆ.
    ಸಂಘದಲ್ಲಿ ತೆರವಾಗಿದ್ದ ಎರಡು ನಿರ್ದೇಶಕ ಸ್ಥಾನಗಳಿಗೆ ಬುಧವಾರ ಚುನಾವಣೆ ನಡೆದು ಇಬ್ಬರು ಹೆಚ್ಚಿನ ಮತಗಳೊಂದಿಗೆ ಆಯ್ಕೆಯಾಗಿದ್ದಾರೆ.
    ಚುನಾವಣಾಧಿಕಾರಿಯಾಗಿ ಸಹಕಾರ ಸಂಘಗಳ ಸಹಾಯಕ ನಿಬಂಧಕ ಟಿ.ವಿ. ಪ್ರಕಾಶ್ ಮತ್ತು ಸಿಬ್ಬಂದಿಗಳು ಕಾರ್ಯನಿರ್ವಹಿಸಿದರು. ಒಟ್ಟು ೩೫೫ ಮತದಾರರಲ್ಲಿ ೨೬೨ ಮತ ಚಲಾವಣೆಯಾಗಿದ್ದು, ಈ ಪೈಕಿ ೩೫ ಮತಗಳು ಅಸಿಂಧುಗೊಂಡಿವೆ.


 ಕೆ.ವಿ ಹರೀಶ್ ಬಾಬು

ಡಿ.೧೨ರಂದು ವಿಶೇಷ ಬೀದಿ ನಾಟಕ

    ಭದ್ರಾವತಿ, ಡಿ. ೮: ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು ಸಹಯೋಗದೊಂದಿಗೆ ನಗರದ ಜನ್ನಾಪುರ ಅಪರಂಜಿ ಅಭಿನಯ ಶಾಲೆ ವತಿಯಿಂದ  ಡಿ.೧೨ರಂದು ಬೆಳಿಗ್ಗೆ ೧೦ ಗಂಟೆಗೆ ಹಳೇನಗರದ ಬಸವೇಶ್ವರ ವೃತ್ತದಲ್ಲಿ 'ಬಾರಿಸು ಕನ್ನಡ ಡಿಂಡಿಮವ' ವಿಶೇಷ ಬೀದಿ ನಾಟಕ ಹಮ್ಮಿಕೊಳ್ಳಲಾಗಿದೆ.
    ರಂಗಕರ್ಮಿ, ಕಿರುತೆರೆ ನಟ ಅಪರಂಜಿ ಶಿವರಾಜ್ ರಚನೆ, ನಿರ್ದೇಶನದ ಬೀದಿ ನಾಟಕವನ್ನು ಪತ್ರಕರ್ತ ಹೊನ್ನಾಳಿ ಚಂದ್ರಶೇಖರ್ ಉದ್ಘಾಟಿಸಲಿದ್ದು, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎನ್ ಶ್ರೀಹರ್ಷ ಮತ್ತು ಗ್ರಂಥಾಲಯ ಇಲಾಖೆಯ ರಾಜ್‌ಕುಮಾರ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಕೋರಿದ್ದಾರೆ.

ಡಿ.೧೬ರಂದು ಶ್ರೀ ವೀರಾಂಜನೇಯ ಸ್ವಾಮಿ ರಥೋತ್ಸವ


    ಭದ್ರಾವತಿ, ಡಿ. ೮: ನಗರಸಭೆ ವ್ಯಾಪ್ತಿಯ ಹುತ್ತಾ ಕಾಲೋನಿ ಶ್ರೀ ವೀರಾಂಜನೇಯ ಸ್ವಾಮಿ ರಥೋತ್ಸವ ಡಿ.೧೬ರಂದು ನಡೆಯಲಿದ್ದು, ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಕೋರಲಾಗಿದೆ.
    ರಥೋತ್ಸವದ ಅಂಗವಾಗಿ ಡಿ.೧೫ರ ಬುಧವಾರ ಬೆಳಗ್ಗೆ ಶ್ರೀ ದೇವತಾ ಪ್ರಾರ್ಥನೆ, ಗುರು ಗಣಪತಿ ಪೂಜೆ, ಪುಣ್ಯಾಹ, ಬಿಂಬಶುದ್ಧಿ, ಪ್ರಾಕಾರ ಶುದ್ಧಿ, ಶ್ರೀ ಗಣಪತಿ ಹೋಮ, ಮಹಾಮಂಗಳಾರತಿ, ಸಂಜೆ ವಾಸ್ತು ಪೂಜೆ, ವಾಸ್ತು ಹೋಮ, ರಾಕ್ಷೆಘ್ನ ಹೋಮ, ದಿಗ್ಬಲಿದಾನ ಮತ್ತು ಮಹಾಪೂಜೆ ಜರುಗಲಿವೆ.
    ಡಿ.೧೬ರಂದು ಬೆಳಗ್ಗೆ ಗಣಪತಿ ಪೂಜೆ, ಪುಣ್ಯಾಹ ಪ್ರಧಾನ ಹೋಮ, ರಥಶುದ್ಧಿ, ಬಲಿಪೂರ್ವಕ ಶ್ರೀ ಸ್ವಾಮಿಯ ರಥೋತ್ಸವ, ಸಂಜೆ ರಥೋತ್ಸವ, ಅಷ್ಟಾವಧಾನ ಸೇವಾ, ಮಹಾಪೂಜೆ ಮತ್ತು ಮಹಾಮಂಗಳಾರತಿ ಹಾಗು ಡಿ.೧೭ರಂದು ಬೆಳಿಗ್ಗೆ ಪುಣ್ಯಾಹ, ಕಲಾ ಹೋಮ, ತತ್ವ ಹೋಮ, ಶಾಂತಿ ಹೋಮ, ಕುಂಭಾಭಿಷೇಕ, ಮಹಾಪೂಜೆ, ಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಮತ್ತು ಶುಭಾಶೀರ್ವಾದ ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳು ಜರುಗಲಿವೆ.
    ರಥೋತ್ಸವದಂದು ಕಾಂಗ್ರೆಸ್ ಮುಖಂಡ, ದಾನಿ ಎಚ್.ಸಿ ದಾಸೇಗೌಡ ಅವರಿಂದ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಕೋರಲಾಗಿದೆ.  

ಬಜರಂಗದಳ ಕಾರ್ಯಕರ್ತರಿಂದ ದತ್ತ ಮಾಲೆ ಅಭಿಯಾನಕ್ಕೆ ಚಾಲನೆ

ಹಿಂದೂ ಧರ್ಮ ಸಂಸ್ಕೃತಿ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಬಜರಂಗಳ ಕಾರ್ಯಕರ್ತರು ಭದ್ರಾವತಿಯಲ್ಲಿ ಬುಧವಾರದಿಂದ ದತ್ತ ಮಾಲೆ ಅಭಿಯಾನ ಆರಂಭಿಸಿದ್ದಾರೆ.
    ಭದ್ರಾವತಿ, ಡಿ. ೮: ಹಿಂದೂ ಧರ್ಮ ಸಂಸ್ಕೃತಿ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಬಜರಂಗಳ ಕಾರ್ಯಕರ್ತರು ಬುಧವಾರದಿಂದ ದತ್ತ ಮಾಲೆ ಅಭಿಯಾನ ಆರಂಭಿಸಿದ್ದಾರೆ.
    ರಾಜ್ಯಾದ್ಯಂತ ದತ್ತ ಮಾಲೆ ಅಭಿಯಾನ ಅಭಿಯಾನ ಆರಂಭಗೊಂಡಿದ್ದು, ಹಳೇನಗರದ ತಾಲೂಕು ಕಚೇರಿ ರಸ್ತೆಯಲ್ಲಿರುವ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಸುಮಾರು ೫೦ಕ್ಕೂ ಹೆಚ್ಚು ಮಂದಿ ದತ್ತ ಮಾಲೆ ಧಾರಣೆ ಕೈಗೊಂಡರು. ಪ್ರಮುಖರಾದ ಜಿಲ್ಲಾ ಸಹ ಸಂಚಾಲಕ ರಾಘವನ್ ವಡಿವೇಲು, ಶ್ರೀಕಾಂತ್, ಧನುಷ್ ಬೋಸ್ಲೆ, ನಗರ ಸಂಚಾಲಕ ಕೃಷ್ಣ, ಸುನಿಲ್‌ಕುಮಾರ್, ಅಪ್ಪು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ಅಭಿಯಾನದ ಅಂಗವಾಗಿ ಡಿ.೧೭ರಂದು ಸಂಕೀರ್ತನೆ ಶೋಭಾ ಯಾತ್ರೆ ನಡೆಯಲಿದ್ದು, ದತ್ತ ಮಾಲೆ ಧಾರಣೆ ಕೈಗೊಂಡಿರುವ ಕಾರ್ಯಕರ್ತರು ಡಿ. ೧೯ರಂದು ಚಿಕ್ಕಮಗಳೂರಿನ ದತ್ತ ಪೀಠಕ್ಕೆ ತೆರಳಲಿದ್ದಾರೆ.
    ಬಜರಂಗದಳ ಕಾರ್ಯಕರ್ತರು ಕೊರೋನಾ ಸೋಂಕು ತೀವ್ರಗೊಂಡ ಸಂದರ್ಭದಲ್ಲಿ ಕೋವಿಡ್-೧೯ ಸೋಂಕಿನಿಂದ ಮೃತಪಟ್ಟವರ ಅಂತ್ಯ ಸಂಸ್ಕಾರ ನೆರವೇರಿಸುವ ಮೂಲಕ ಗಮನ ಸೆಳೆದಿದ್ದರು.

Tuesday, December 7, 2021

ಅಮಲೋದ್ಭವಿ ಮಾತೆ ದೇವಲಯದಲ್ಲಿ ಯಶಸ್ವಿಯಾಗಿ ನಡೆದ ಲಸಿಕಾ ಅಭಿಯಾನ


ಭದ್ರಾವತಿಯಲ್ಲಿ ಅಮಲೋದ್ಭವಿ ಮಾತೆಯ ದೇವಾಲಯ ಹಾಗೂ ಉಜ್ಜನಿಪುರ ನಗರ ಆರೋಗ್ಯ ಕೇಂದ್ರ ವತಿಯಿಂದ ಕೋವಿಡ್ ಲಸಿಕೆ ನೀಡುವ ಅಭಿಯಾನ ಹಮ್ಮಿಕೊಳ್ಳಲಾಗಿತ್ತು.
    ಭದ್ರಾವತಿ, ಡಿ. ೭: ಅಮಲೋದ್ಭವಿ ಮಾತೆಯ ದೇವಾಲಯ ಹಾಗೂ ಉಜ್ಜನಿಪುರ ನಗರ ಆರೋಗ್ಯ ಕೇಂದ್ರ ವತಿಯಿಂದ ಕೋವಿಡ್ ಲಸಿಕೆ ನೀಡುವ ಅಭಿಯಾನ ಹಮ್ಮಿಕೊಳ್ಳಲಾಗಿತ್ತು.
    ನ್ಯೂಟೌನ್ ಅಮಲೋದ್ಭವಿ ಮಾತೆಯ ದೇವಾಲಯದ ಆವರಣದಲ್ಲಿ ನಡೆದ ಅಭಿಯಾನದಲ್ಲಿ ಇದುವರೆಗೂ ಲಸಿಕೆ ಪಡೆಯದವರಿಗೆ ಹಾಗೂ ಮೊದಲನೇ ಡೋಸ್ ಪಡೆದವರಿಗೆ ೨ನೇ ಡೋಸ್ ನೀಡಲಾಯಿತು.
    ಶಿಬಿರದಲ್ಲಿ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಎರಡೂ ಬಗೆಯ ಲಸಿಕೆಗಳನ್ನು ಲಸಿಕೆ ಪಡೆಯುವವರ ಅಪೇಕ್ಷೆಯಂತೆ ನೀಡಲಾಯಿತು.
    ಫಾದರ್ ಲಾನ್ಸಿ  ಡಿಸೋಜಾ ಮತ್ತು ಪಾಲನಾ ಪರಿಷತ್ ಕಾರ್ಯದರ್ಶಿ ಅಂತೋಣಿ ವಿಲ್ಸನ್, ಉಜ್ಜನಿಪುರ ನಗರ ಆರೋಗ್ಯ ಕೇಂದ್ರದ ಸಿಬ್ಬಂದಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.