ಶಿಮುಲ್ ಮಾಜಿ ಅಧ್ಯಕ್ಷ ಆನಂದ್, ಎಎಪಿ ಜಿಲ್ಲಾಧ್ಯಕ್ಷ ರವಿಕುಮಾರ್, ಬಿಜೆಪಿ ಯುವ ಮುಖಂಡ ಸುನೀಲ್ ಗಾಯಕ್ವಾಡ್ ಸರ್ಕಾರಕ್ಕೆ ಕೃತಜ್ಞತೆ
ಡಿ. ಆನಂದ್, ಶಿಮುಲ್ ಮಾಜಿ ಅಧ್ಯಕ್ಷರು, ಭದ್ರಾವತಿ
ಭದ್ರಾವತಿ, ಮಾ. ೬: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಈ ಬಾರಿ ಮಂಡಿಸಿರುವ ಬಜೆಟ್‌ನಲ್ಲಿ ಶಿವಮೊಗ್ಗ ಹಾಲು ಒಕ್ಕೂಟವನ್ನು ಪ್ರತ್ಯೇಕಿಸುವ ಕುರಿತು ಪ್ರಸ್ತಾಪ ಮಾಡಿರುವುದು ಒಳ್ಳೆಯ ಬೆಳೆವಣಿಗೆಯಾಗಿದ್ದು, ಇದು ಅನುಷ್ಠಾನಗೊಂಡಲ್ಲಿ ಶಿವಮೊಗ್ಗ ಜಿಲ್ಲೆಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಒಕ್ಕೂಟದ ಮಾಜಿ ಅಧ್ಯಕ್ಷ ಡಿ. ಆನಂದ್ ತಿಳಿಸಿದ್ದಾರೆ.
ಒಕ್ಕೂಟ ಪ್ರತ್ಯೇಕಿಸುವ ವಿಚಾರ ಹಲವಾರು ವರ್ಷಗಳಿಂದ ಉಳಿದುಕೊಂಡಿದ್ದು, ಪ್ರಸ್ತುತ ಒಕ್ಕೂಟ ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳನ್ನು ಒಳಗೊಂಡಿರುವ ಹಿನ್ನಲೆಯಲ್ಲಿ ಒಂದು ಜಿಲ್ಲೆಯವರು ಗಳಿಸುವ ಲಾಭ ೩ ಜಿಲ್ಲೆಗಳಿಗೆ ಹಂಚಿಕೆಯಾಗುತ್ತಿದೆ. ಇದರಿಂದಾಗಿ ಒಕ್ಕೂಟ ಬೆಳವಣಿಗೆ ಕಾಣಲು ಸಾಧ್ಯವಾಗುತ್ತಿಲ್ಲ. ಶಿವಮೊಗ್ಗ ಜಿಲ್ಲೆಯಲ್ಲಿ ಪ್ರತಿದಿನ ಸುಮಾರು ೨.೫ ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದ್ದು, ಈ ಪೈಕಿ ಸುಮಾರು ೧.೫ ಲಕ್ಷ ಲೀಟರ್ ಹಾಲು ಮಾರಾಟವಾಗುತ್ತಿದೆ. ದಾವಣಗೆರೆ ಮತ್ತು ಚಿತ್ರದುರ್ಗ ಎರಡು ಜಿಲ್ಲೆಗಳು ಸೇರಿ ಪ್ರತಿದಿನ ಒಟ್ಟು ಸುಮಾರು ೩ ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದ್ದು, ಆದರೆ ಸುಮಾರು ೧.೫ ಲಕ್ಷ ಲೀಟರ್ ಹಾಲು ಮಾತ್ರ ಮಾರಾಟವಾಗುತ್ತಿದೆ. ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳ ವ್ಯಾಪ್ತಿಯಲ್ಲಿ ಆರೋಗ್ಯ ದೊದ್ಲಾ ಸೇರಿದಂತೆ ಖಾಸಗಿ ಕಂಪನಿಗಳ ಹಾಲು ಹೆಚ್ಚಾಗಿ ಮಾರಾಟವಾಗುತ್ತಿದ್ದು, ಇದರಿಂದಾಗಿ ಒಕ್ಕೂಟದ ಹಾಲು ಉಳಿಯುತ್ತಿದೆ. ಈ ಹಿನ್ನಲೆಯಲ್ಲಿ ಶಿವಮೊಗ್ಗ ಒಕ್ಕೂಟ ರಚನೆಯಾದಲ್ಲಿ ಜಿಲ್ಲೆಯಲ್ಲಿರುವ ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದರು.
ಎಚ್. ರವಿಕುಮಾರ್, ಆಮ್ ಆದ್ಮಿ ಜಿಲ್ಲಾಧ್ಯಕ್ಷರು, ಭದ್ರಾವತಿ.
ಪ್ರತಿ ವಾರ್ಡ್‌ಗಳಲ್ಲಿ ಕ್ಲಿನಿಕ್ ಪ್ರಸ್ತಾವನೆಗೆ ಅಭಿನಂದನೆ :
ಈ ಬಾರಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಮಂಡಿಸಿರುವ ಬಜೆಟ್ ಸಮಾಧಾನಕರವಾಗಿದೆ ಎಂದು ಆಮ್ ಆದ್ಮಿ ಪಾರ್ಟಿ ಜಿಲ್ಲಾಧ್ಯಕ್ಷ ಎಚ್. ರವಿಕುಮಾರ್ ತಿಳಿಸಿದ್ದಾರೆ.
ಆಮ್ ಆದ್ಮಿ ಪಕ್ಷದ ದೆಹಲಿ ಸರ್ಕಾರ ಬಡ ವರ್ಗದವರಿಗೆ ಗುಣಮಟ್ಟದ ಆರೋಗ್ಯ ನೀಡುವ ಹಿನ್ನಲೆಯಲ್ಲಿ ಮೊಹಲ್ಲಾ ಕ್ಲಿನಿಕ್‌ಗಳನ್ನು ಆರಂಭಿಸಿದೆ. ಇದೆ ರೀತಿ ಇದೀಗ ರಾಜ್ಯದಲ್ಲಿ ಪ್ರತಿ ವಾರ್ಡ್‌ಗಳಲ್ಲಿ ಕ್ಲಿನಿಕ್ ಆರಂಭಿಸುವ ಕುರಿತು ಬಜೆಟ್‌ನಲ್ಲಿ ಪ್ರಸ್ತಾಪಿಸಿರುವುದು ಸ್ವಾಗತಾರ್ಹ ವಿಚಾರವಾಗಿದೆ. ಈ ಹಿನ್ನಲೆಯಲ್ಲಿ ಸರ್ಕಾರಕ್ಕೆ ಪಕ್ಷದ ವತಿಯಿಂದ ಕೃತಜ್ಞತೆ ಸಲ್ಲಿಸುತ್ತೇನೆ. ಜೊತೆಗೆ ತಕ್ಷಣ ಕ್ಲಿನಿಕ್‌ಗಳನ್ನು ಆರಂಭಿಸುವಂತೆ ಮನವಿ ಮಾಡಿದ್ದಾರೆ.
ಸುನೀಲ್ ಗಾಯಕ್ವಾಡ್, ಯುವ ಮುಖಂಡರು, ಬಿಜೆಪಿ, ಭದ್ರಾವತಿ.
ಯಶಸ್ವಿನಿ ಯೋಜನೆಯಿಂದ ಮಲೆನಾಡಿನ ಭಾಗದ ರೈತರಿಗೆ ಹೆಚ್ಚಿನ ಅನುಕೂಲ:
ರೈತ ನಾಯಕ, ಬಡವರ ಬಂಧು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ಈ ಹಿಂದೆ ಆರಂಭಿಸಿದ್ದ ಯಶಸ್ವಿನಿ ಆರೋಗ್ಯ ಯೋಜನೆಗೆ ಈ ಬಾರಿ ಮಂಡಿಸಿರುವ ಬಜೆಟ್‌ನಲ್ಲಿ ಮರುಜೀವ ತುಂಬಲು ಮುಂದಾಗಿರುವುದು ಒಳ್ಳೆಯ ಬೆಳೆವಣಿಗೆಯಾಗಿದೆ ಎಂದು ಬಿಜೆಪಿ ಯುವ ಮುಖಂಡ ಸುನೀಲ್ ಗಾಯಕ್ವಾಡ್ ತಿಳಿಸಿದ್ದಾರೆ.
ರೈತರಿಗೆ ಪ್ರಸ್ತುತ ಕೆಲವು ಆರೋಗ್ಯ ಯೋಜನೆಗಳು ಜಾರಿಯಲ್ಲಿದ್ದರೂ ಸಹ ಇವುಗಳಿಂದ ಯಾವುದೇ ಪ್ರಯೋಜನವಾಗುತ್ತಿಲ್ಲ. ಯಡಿಯೂರಪ್ಪನವರು ಆರಂಭಿಸಿದ ಯಶಸ್ವಿನಿ ಯೋಜನೆಯಿಂದ ಈ ಹಿಂದೆ ಸಾಕಷ್ಟು ರೈತರಿಗೆ ಹೆಚ್ಚಿನ ಅನುಕೂಲವಾಗಿತ್ತು. ಇದೀಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಹಲವಾರು ಮಾರ್ಪಾಡುಗಳೊಂದಿಗೆ ಪುನಃ ಯಶಸ್ವಿನಿ ಯೋಜನೆ ಆರಂಭಿಸುವುದಾಗಿ ಪ್ರಸ್ತಾಪಿಸುವ ಜೊತೆಗೆ ರು. ೩೦೦ ಕೋ. ಮೀಸಲಿಟ್ಟಿರುವುದು ಸಂತೋಷದ ವಿಚಾರವಾಗಿದೆ. ಯಶಸ್ವಿಯೋಜನೆಯಿಂದ ಮಲೆನಾಡಿನ ಭಾಗದ ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ. ಈ ಹಿನ್ನಲೆಯಲ್ಲಿ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದ್ದಾರೆ.