Monday, June 6, 2022

ವಿಕಲಚೇತನ ಮಕ್ಕಳಲ್ಲಿ ವಿಶೇಷ ಶಕ್ತಿ, ಯಾರಿಗೂ ಕಡಿಮೆ ಇಲ್ಲ : ಡಾ. ಟಿ. ನರೇಂದ್ರಭಟ್

ಭದ್ರಾವತಿ, ಜೂ. ೭:  ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ನ್ಯೂಟೌನ್ ತರಂಗ ಕಿವುಡು ಮಕ್ಕಳ ಶಾಲೆಯ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆದುಕೊಳ್ಳುವ ಮೂಲಕ ವಿಕಲಚೇತನರಲ್ಲೂ ವಿಶೇಷ ಶಕ್ತಿ ಇದ್ದು, ಯಾರಿಗೂ ಕಡಿಮೆ ಇಲ್ಲ ಎಂಬುದನ್ನು ಸಾಧಿಸಿ ತೋರಿಸಿದ್ದಾರೆಂದು ಶಾಲೆಯ ಅಧ್ಯಕ್ಷ ಡಾ. ಟಿ. ನರೇಂದ್ರ ಭಟ್ ಹೇಳಿದರು.
ಅವರು ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಿವಭದ್ರ ಟ್ರಸ್ಟ್ ವತಿಯಿಂದ ಆರಂಭಿಸಲಾಗಿರುವ ಈ ಶಾಲೆ ಕಳೆದ ೩ ದಶಕಗಳಿಂದ ತನ್ನದೇ ಆದ ಕೊಡುಗೆಯನ್ನು ನೀಡಿದೆ. ಮಕ್ಕಳು ತಾಯಿಯ ಗರ್ಭದಲ್ಲಿ ಬೆಳವಣಿಗೆ ಹಂತದಲ್ಲಿದ್ದಾಗ ಒಂದು ವೇಳೆ ತಾಯಿ ಅನಾರೋಗ್ಯಕ್ಕೆ ಒಳಗಾಗಿ ಸೂಕ್ತ ಚಿಕಿತ್ಸೆ ಪಡೆಯದಿದ್ದಲ್ಲಿ ಅಥವಾ ಜನನ ಸಂದರ್ಭದಲ್ಲಿ ಉಂಟಾಗುವ ಕೆಲವು ನ್ಯೂನ್ಯತೆಗಳಿಂದಾಗಿ ಅಥವಾ ನಿರ್ಲಕ್ಷ್ಯತನದಿಂದಾಗಿ ವಿಕಲಚೇತನ ಮಕ್ಕಳು ಹುಟ್ಟುವುದು ಸಹಜ. ಇದು ಮಕ್ಕಳ ಶಾಪವಲ್ಲ. ಪೋಷಕರು ಇಂತಹ ಮಕ್ಕಳ ಮೇಲೆ ವಿಶೇಷ ಕಾಳಜಿವಹಿಸಬೇಕು.  ಟ್ರಸ್ಟ್ ಇಂತಹ ಮಕ್ಕಳ ಸೇವೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡು ಮುನ್ನಡೆಯುವುದು ವಿಶೇಷವಾಗಿದೆ ಎಂದರು.
ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಒಟ್ಟು ೭ ಮಕ್ಕಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗುವ ಮೂಲಕ ಶೇ.೧೦೦ರಷ್ಟು ಫಲಿತಾಂಶ ತಂದು ಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮಕ್ಕಳ ಸಾಧನೆಯನ್ನು ಟ್ರಸ್ಟ್ ಅಭಿನಂದಿಸುತ್ತದೆ ಎಂದರು.
ಈ ಶಾಲೆಯ ಹಳೇಯ ವಿದ್ಯಾರ್ಥಿಗಳು ಹಾಗು ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರು, ಸಿಬ್ಬಂದಿಗಳು ಶಾಲೆಯ ಅಭಿವೃದ್ಧಿಗೆ ಸಂಪೂರ್ಣ ಸಹಕಾರ ನೀಡುತ್ತಿದ್ದು, ಪ್ರಸಕ್ತ ಸಾಲಿನಲ್ಲಿ ಶಾಲೆಯ ಕಟ್ಟಡಕ್ಕೆ ಸುಣ್ಣ ಬಣ್ಣ ಮಾಡಿಸಿರುವುದು ಸಂತಸವನ್ನುಂಟು ಮಾಡಿದೆ.  ಈ ಶಾಲೆಯ ಸಾಧನೆ ಬಗ್ಗೆ ಶ್ರೀ ಆದಿಚುಂಚನಗಿರಿ ಮಠದ ಪೀಠಾಧಿಪತಿಗಳಾದ ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರು ಮೆಚ್ಚುಗೆ ವ್ಯಕ್ತಪಡಿಸಿ ಶಾಲೆಯನ್ನು ದತ್ತು ಪಡೆದು ಸಂಪೂರ್ಣವಾಗಿ ಅಭಿವೃಧ್ದಿಪಡಿಸಲು ಮುಂದಾಗಿದ್ದಾರೆ. ಇದಕ್ಕೆ ಪೂರಕವೆಂಬಂತೆ ನಗರದ ಬೈಪಾಸ್ ರಸ್ತೆಯಲ್ಲಿರುವ ಮಠದ ಶಾಲಾ ಆವರಣದಲ್ಲಿ ನೂತನ ಕಟ್ಟಡವನ್ನು ನಿರ್ಮಿಸುವ ಯೋಜನೆಯನ್ನು ಹೊಂದಿದ್ದಾರೆ. ಎಸ್‌ಎಸ್‌ಎಲ್‌ಸಿ ನಂತರ ಮಕ್ಕಳಿಗೆ ಸ್ವಯಂ ಉದ್ಯೋಗ ಆರಂಭಿಸಲು ನೆರವಾಗುವಂತೆ ವೃತ್ತಿಪರ ಶಿಕ್ಷಣ ನೀಡುವ ಉದ್ದೇಶವನ್ನು ಶ್ರೀಗಳು ಹೊಂದಿದ್ದಾರೆ ಎಂದರು.
ಡಾ.ಜಿ.ಎಂ ನಟರಾಜ್ ಮಾತನಾಡಿ, ಯಾವುದೇ ವಿದ್ಯಾ ಸಂಸ್ಥೆ ಉತ್ತಮವಾಗಿ ಕಾರ್ಯನಿರ್ವಹಿಸಲು ಹಾಗು ಅಭಿವೃದ್ಧಿ ಹೊಂದಲು ಆಡಳಿತ ಮಂಡಳಿ, ಶಿಕ್ಷಕ ಹಾಗು ಸಿಬ್ಬಂದಿ ವರ್ಗದವರು ಮತ್ತು ಪೋಷಕರ ಸಹಕಾರ ಹೆಚ್ಚಿನದ್ದಾಗಿದೆ ಎಂದರು.
ಶಿವಮೊಗ್ಗ ಮೆಟ್ರೋ ಆಸ್ಪತ್ರೆ ಮುಖ್ಯಸ್ಥರಾದ ಡಾ. ತೇಜಸ್ವಿ, ಡಾ.ವೃಂದಾ ಭಟ್, ಡಾ. ಸೆಲ್ವರಾಜ್, ನಿತ್ಯಾನಂದ ಪೈ, ಅನಂತ ಕೃಷ್ಣ ನಾಯಕ್, ಸುಧಾಕರ್, ಸುಧೀಂದ್ರ, ಯುವರಾಜ್, ಮದಿಆಲಗನ್, ಎಸ್.ಎನ್ ಸುಭಾಷ್, ವೇಲು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ವೀಣಾ ಪ್ರಾರ್ಥಿಸಿ ತಾರಮಣಿ ಸ್ವಾಗತಿಸಿದರು. ಬಸವರಾಜ್ ವಂದಿಸಿದರು.



ನಗರಸಭೆ ಆಸ್ತಿ ಕಬಳಿಸುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಿ

ಕರ್ನಾಟಕ ಜನ ಸೈನ್ಯ ವತಿಯಿಂದ ನಗರಸಭೆ ಮುಂಭಾಗ ಪ್ರತಿಭಟನೆ

ಭದ್ರಾವತಿ ನಗರಸಭೆ ಆಸ್ತಿಯನ್ನು ಕಬಳಿಸಲು ಯತ್ನಿಸುತ್ತಿರುವವರ ಹಾಗು ಅಕ್ರಮವಾಗಿ ಕಟ್ಟಡ ನಿರ್ಮಿಸುತ್ತಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಸೋಮವಾರ ಕರ್ನಾಟಕ ಜನ ಸೈನ್ಯ ಸಂಘಟನೆ ನೇತೃತ್ವದಲ್ಲಿ ನಗರಸಭೆ ಮುಂಭಾಗ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.
    ಭದ್ರಾವತಿ, ಜೂ. ೬: ನಗರಸಭೆ ಆಸ್ತಿಯನ್ನು ಕಬಳಿಸಲು ಯತ್ನಿಸುತ್ತಿರುವವರ ಹಾಗು ಅಕ್ರಮವಾಗಿ ಕಟ್ಟಡ ನಿರ್ಮಿಸುತ್ತಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಸೋಮವಾರ ಕರ್ನಾಟಕ ಜನ ಸೈನ್ಯ ಸಂಘಟನೆ ನೇತೃತ್ವದಲ್ಲಿ ನಗರಸಭೆ ಮುಂಭಾಗ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.
    ನಗರಸಭೆ ವಾರ್ಡ್ ನಂ.೩೦ರ ವಿಶ್ವೇಶ್ವರಾಯ ಬಡಾವಣೆ (ಕೆಂಪೇಗೌಡ ಲೇಔಟ್)ಯಲ್ಲಿ ಆಶ್ರಯ ಯೋಜನೆ ಮನೆಗಳಿಗೆ ಮೀಸಲಿರುವ ನಗರಸಭೆಗೆ ಸೇರಿದ ಸುಮಾರು ೨ ಎಕರೆ ಜಾಗವಿದ್ದು, ಸ್ಥಳೀಯ ವ್ಯಕ್ತಿಯೊಬ್ಬರು ಈ ಜಾಗವನ್ನು ಕಬಳಿಸಲು ಯತ್ನಿಸುತ್ತಿದ್ದಾರೆ. ಇವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಇದೆ ರೀತಿ ಬಿ.ಎಚ್ ರಸ್ತೆ ವಿಶಾಲ್ ಮಾರ್ಟ್ ಪಕ್ಕದಲ್ಲಿ ನದಿ ಜಾಗವನ್ನು ಒತ್ತುವರಿ ಮಾಡಿಕೊಂಡು ಅಕ್ರಮವಾಗಿ ಕಟ್ಟಡ ನಿರ್ಮಿಸಲಾಗುತ್ತಿದ್ದು, ಇವರ ವಿರುದ್ಧ ಸಹ ಕಾನೂನು ಕೈಗೊಳ್ಳಬೇಕೆಂದು ಆಗ್ರಹಿಸಲಾಯಿತು.
    ಕರ್ನಾಟಕ ಜನ ಸೈನ್ಯ ಜಿಲ್ಲಾಧ್ಯಕ್ಷ ಕೆ. ಮಂಜುನಾಥ್ ಪ್ರತಿಭಟನೆ ನೇತೃತ್ವ ವಹಿಸಿದ್ದರು. ಪ್ರಮುಖರಾದ ಬಿಸಿಯೂಟ ನೌಕರರ ಸಂಘದ ತಾಲೂಕು ಅಧ್ಯಕ್ಷೆ ಹನುಮಮ್ಮ, ಸಾಮಾಜಿಕ ಹೋರಾಟಗಾರ ಶಿವಕುಮಾರ್, ಧನಂಜಯ, ಕಟ್ಟಡ ಕಾರ್ಮಿಕರ ಸಂಘದ ತಾಲೂಕು ಕಾರ್ಯಾಧ್ಯಕ್ಷ ಅಭಿಲಾಷ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ಅಪಘಾತದಲ್ಲಿ ಅಪರಿಚಿತ ವಯೋವೃದ್ಧ ಮೃತ

ಅಪಘಾತದಲ್ಲಿ ಮೃತಪಟ್ಟಿರುವ ಅಪರಿಚಿತ ವಯೋವೃದ್ಧ
    ಭದ್ರಾವತಿ, ಜೂ. ೬: ಅಪಘಾತದಲ್ಲಿ ಅಪರಿಚಿತ ವಯೋವೃದ್ಧರೊಬ್ಬರು ಮೃತಪಟ್ಟಿರುವ ಘಟನೆ ಪೇಪರ್ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
    ಬೈಪಾಸ್ ರಸ್ತೆ ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನ ಸಮೀಪ  ನಡೆದಿರುವ ಅಪಘಾತದಲ್ಲಿ ಸುಮಾರು ೬೫ ರಿಂದ ೭೦ ವರ್ಷದ ವಯೋವೃದ್ಧರು ಮೃತಪಟ್ಟಿದ್ದು, ಇದುವರೆಗೂ ಮೃತರ ಬಗ್ಗೆ ಯಾವುದೇ ಮಾಹಿತಿ ತಿಳಿದು ಬಂದಿಲ್ಲ. ಯಾರಿಗಾದರೂ ಮಾಹಿತಿ ತಿಳಿದು ಬಂದಲ್ಲಿ ತಕ್ಷಣ ಪೇಪರ್ ಟೌನ್ ಪೊಲೀಸರಿಗೆ ತಿಳಿಸುವಂತೆ ಸೂಚಿಸಲಾಗಿದೆ.

ಭದ್ರಾವತಿ ನಗರದ ವಿವಿಧೆಡೆ ವಿಶ್ವ ಪರಿಸರ ದಿನಾಚರಣೆ


ಭದ್ರಾವತಿ ವಿಐಎಸ್‌ಎಲ್ ಕಾರ್ಖಾನೆ ವತಿಯಿಂದ ಆಜಾದಿ ಕಾ ಅಮೃತ್ ಮಹೋತ್ಸವ ಹಿನ್ನಲೆಯಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ವಿಶೇಷವಾಗಿ ವೃಕ್ಷ ನೆಡುವ ಅಭಿಯಾನದಡಿ ಆಚರಿಸಲಾಯಿತು.
    ಭದ್ರಾವತಿ, ಜೂ. ೬ : ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ, ಅಗ್ನಿಶಾಮಕ ಠಾಣೆ ಸೇರಿದಂತೆ ವಿವಿಧೆಡೆ ಈ ಬಾರಿ ವಿಶ್ವ ಪರಿಸರ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಲಾಯಿತು.
    ವೃಕ್ಷ ನೆಡುವ ಅಭಿಯಾನದಡಿ ೬೨೫ ಸಸಿಗಳ ವಿತರಣೆ :
    ವಿಐಎಸ್‌ಎಲ್ ಕಾರ್ಖಾನೆ ವತಿಯಿಂದ ಆಜಾದಿ ಕಾ ಅಮೃತ್ ಮಹೋತ್ಸವ ಹಿನ್ನಲೆಯಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ವಿಶೇಷವಾಗಿ ವೃಕ್ಷ ನೆಡುವ ಅಭಿಯಾನದಡಿ ಆಚರಿಸಲಾಯಿತು.
    ನ್ಯೂಟೌನ್ ಶ್ರೀ ಆದಿಚುಂಚನಗಿರಿ ವಿದ್ಯಾಸಂಸ್ಥೆ (ಎಸ್‌ಎವಿ ಶಾಲೆ), ವಿಐಎಸ್‌ಎಸ್‌ಜೆ ಸರ್ಕಾರಿ ಪಾಲಿಟೆಕ್ನಿಕ್, ವಿಐಎಸ್‌ಎಲ್ ಟೆನಿಸ್ ಕ್ಲಬ್ ಮತ್ತು ಸಹಕಾರಿ ಬ್ಯಾಂಕ್ ಹಾಗು ಕಾರ್ಖಾನೆಯ ನೌಕರರು ಮತ್ತು ಕುಟುಂಬ ವರ್ಗದವರಿಗೆ ಒಟ್ಟು ೬೨೫ ಸಸಿಗಳನ್ನು ವಿತರಿಸಲಾಯಿತು.
    ಇದಕ್ಕೂ ಮೊದಲು ಕಾರ್ಖಾನೆ ಆಡಳಿತ ಕಛೇರಿ ಮುಂಭಾಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾರ್ಯಪಾಲಕ ನಿರ್ದೇಶಕ ಪರಿಸರ ಧ್ವಜಾರೋಹಣ ನೆರವೇರಿಸಿದರು. ಉಕ್ಕು ಪ್ರಾಧಿಕಾರದ ಪರಿಸರ ನೀತಿಯನ್ನು ಹಿರಿಯ ಪ್ರಬಂಧಕ ಪಾರ್ಥಸಾರಥಿ ಮಿಶ್ರ ವಾಚಿಸಿದರು. ಮುಖ್ಯ ವೈದ್ಯಾಧಿಕಾರಿ ಡಾ. ಎಂ.ವೈ ಸುರೇಶ್, ಮಹಾಪ್ರಬಂಧಕ(ಸುರಕ್ಷತೆ) ಕೆ. ಹರಿಶಂಕರ್ ಮತ್ತು ಮಹಾಪ್ರಬಂಧಕ(ಎಂ.ಎಂ&ಸಿ.ಸಿ) ಎನ್.ಕೆ ಶಶಿಧರ್ ಕನ್ನಡ, ಹಿಂದಿ ಮತ್ತು ಆಂಗ್ಲಭಾಷೆಯಲ್ಲಿ ಪರಿಸರ ಪ್ರತಿಜ್ಞೆ ಬೋಧಿಸಿದರು.
ಮಹಾಪ್ರಬಂಧಕ(ಇ.ಎಂ.ಡಿ & ಸಿ.ಈ ಪ್ಲಾಂಟ್) ಡಿ. ಲೋಕೆಶ್ವರ್ ಸ್ವಾಗತಿಸಿದರು. ಎಂ.ಜಿ.ಎಂ(ವಿಜಿಲೆನ್ಸ್) ಎಲ್. ಕುತಲನಾಥನ್ ನಿರೂಪಿಸಿದರು.
    ಎಸ್‌ಎವಿ ವಿದ್ಯಾಸಂಸ್ಥೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಡಾ. ಎಸ್. ಹರಿಣಾಕ್ಷಿ ಮತ್ತು ಮುಖ್ಯೋಪಾಧ್ಯಾಯಿನಿ ಅನುರಾಧ ಹಾಗು ವಿಐಎಸ್‌ಎಸ್‌ಜೆ ಸರ್ಕಾರಿ ಪಾಲಿಟೆಕ್ನಿಕ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಮಹಾಲಿಂಗಪ್ಪ, ಅಧ್ಯಾಪಕ ಗುರುಮೂರ್ತಿ ಸೇರಿದಂತೆ ಸಿಬ್ಬಂದಿ ವರ್ಗದವರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. 

 

  ಭದ್ರಾವತಿ ಬೈಪಾಸ್ ರಸ್ತೆಯಲ್ಲಿರುವ ಅಗ್ನಿಶಾಮಕ ಠಾಣೆಯಲ್ಲಿ ಭಾನುವಾರ ವಿಶ್ವ ಪರಿಸರ ದಿನ ಆಚರಿಸಲಾಯಿತು. ಠಾಣಾಧಿಕಾರಿ ವಸಂತಕುಮಾರ್ ನೇತೃತ್ವದಲ್ಲಿ ಸಸಿ ನೆಡುವ ಮೂಲಕ ಸರಳವಾಗಿ ಆಚರಿಸಲಾಯಿತು.

      ಅಗ್ನಿಶಾಮಕ ಠಾಣೆಯಲ್ಲಿ ವಿಶ್ವ ಪರಿಸರ ದಿನ :
  ನಗರದ ಬೈಪಾಸ್ ರಸ್ತೆಯಲ್ಲಿರುವ ಅಗ್ನಿಶಾಮಕ ಠಾಣೆಯಲ್ಲಿ ಭಾನುವಾರ ವಿಶ್ವ ಪರಿಸರ ದಿನ ಆಚರಿಸಲಾಯಿತು. ಠಾಣಾಧಿಕಾರಿ ವಸಂತಕುಮಾರ್ ನೇತೃತ್ವದಲ್ಲಿ ಸಸಿ ನೆಡುವ ಮೂಲಕ ಸರಳವಾಗಿ ಆಚರಿಸಲಾಯಿತು.
    ಪ್ರಮುಖ ಅಗ್ನಿಶಾಮಕ ಬಾಬು ಎಸ್ ಗೌಡ, ಅಗ್ನಿಶಾಮಕ ಚಾಲಕ ಜಿ.ಟಿ ಶ್ರೀನಿವಾಸ್, ಅಗ್ನಿಶಾಮಕರಾದಂತಹ ವಿನೂತನ್, ಕರಿಯಣ್ಣ, ಹರೀಶ್, ರಾಜ ನಾಯ್ಕ್, ಹೊಸಳ್ಳಿ ತಿಪ್ಪೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


ಭದ್ರಾವತಿ ಬಿ.ಎಚ್ ರಸ್ತೆ, ಕಡದಕಟ್ಟೆಯಲ್ಲಿರುವ ನವಚೇತನ ಮತ್ತು ದಿವ್ಯ ವಿದ್ಯಾಸಂಸ್ಥೆ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಜಾಗೃತಿ ಜಾಥಾ ನಡೆಸಲಾಯಿತು.

    ನವಚೇತನ ಹಾಗು ದಿವ್ಯ ವಿದ್ಯಾಸಂಸ್ಥೆಯಲ್ಲಿ ಪರಿಸರ ದಿನ :
    ನಗರದ ಬಿ.ಎಚ್ ರಸ್ತೆ, ಕಡದಕಟ್ಟೆಯಲ್ಲಿರುವ ನವಚೇತನ ಮತ್ತು ದಿವ್ಯ ವಿದ್ಯಾಸಂಸ್ಥೆ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಜಾಗೃತಿ ಜಾಥಾ ನಡೆಸಲಾಯಿತು.
    ಜಾಗೃತಿ ಮೂಡಿಸುವ ಘೋಷವಾಕ್ಯಗಳನ್ನೊಳಗೊಂಡ ಫಲಕಗಳನ್ನು ಹಿಡಿದು ವಿದ್ಯಾರ್ಥಿಗಳು ಕಡದಕಟ್ಟೆ, ಭಂಡಾರಹಳ್ಳಿ, ಐಟಿಐ ಸೇರಿದಂತೆ ಇನ್ನಿತರ ಮಾರ್ಗಗಳಲ್ಲಿ ಜಾಥಾ ನಡೆಸಿದರು. ನಂತರ ಶಾಲಾ ಕೈತೋಟದಲ್ಲಿ ಸಸಿಗಳನ್ನು ನೆಡಲಾಯಿತು. ಪೋಷಕರು, ಮುಖ್ಯೋಪಾಧ್ಯಾಯರು, ಶಿಕ್ಷಕರು,ವಿದ್ಯಾರ್ಥಿಗಳು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.


ಭದ್ರಾವತಿಯಲ್ಲಿ ಬೈಪಾಸ್ ರಸ್ತೆಯಿಂದ ತಿಮ್ಲಾಪುರಕ್ಕೆ ಸಂಪರ್ಕಗೊಂಡಿರುವ ರಸ್ತೆಯಲ್ಲಿರುವ ಗೌಸಿಯಾ ಈದ್‌ಗಾಹ್ ಮತ್ತು ಕಬರಸ್ತಾನದಲ್ಲಿ ವಿಶ್ವ ಪರಿಸರ ದಿನ ಆಚರಿಸಲಾಯಿತು.

       ಕಬರ್‌ಸ್ತಾನದಲ್ಲಿ ವಿಶ್ವ ಪರಿಸರ ದಿನ :
    ನಗರದ ಬೈಪಾಸ್ ರಸ್ತೆಯಿಂದ ತಿಮ್ಲಾಪುರಕ್ಕೆ ಸಂಪರ್ಕಗೊಂಡಿರುವ ರಸ್ತೆಯಲ್ಲಿರುವ ಗೌಸಿಯಾ ಈದ್‌ಗಾಹ್ ಮತ್ತು ಕಬರಸ್ತಾನದಲ್ಲಿ ವಿಶ್ವ ಪರಿಸರ ದಿನ ಆಚರಿಸಲಾಯಿತು.
    ನಗರಸಭೆ ಉಪಾಧ್ಯಕ್ಷ ಚನ್ನಪ್ಪ ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಜೆ.ಬಿ.ಟಿ ಬಾಬು ಹಾಗು ಕಬರಸ್ತಾನ ಸಮಿತಿಯ ಪ್ರಮುಖರು ಉಪಸ್ಥಿತರಿದ್ದರು.


Sunday, June 5, 2022

ಅಗ್ನಿಶಾಮಕ ಠಾಣೆಯಲ್ಲಿ ವಿಶ್ವ ಪರಿಸರ ದಿನ



ಭದ್ರಾವತಿ: ನಗರದ ಬೈಪಾಸ್ ರಸ್ತೆಯಲ್ಲಿರುವ ಅಗ್ನಿಶಾಮಕ ಠಾಣೆಯಲ್ಲಿ ಭಾನುವಾರ ವಿಶ್ವ ಪರಿಸರ ದಿನ ಆಚರಿಸಲಾಯಿತು. ಠಾಣಾಧಿಕಾರಿ ವಸಂತಕುಮಾರ್ ನೇತೃತ್ವದಲ್ಲಿ ಸಸಿ ನೆಡುವ ಮೂಲಕ ಸರಳವಾಗಿ ಆಚರಿಸಲಾಯಿತು. ಪ್ರಮುಖ ಅಗ್ನಿಶಾಮಕ ಬಾಬು ಎಸ್ ಗೌಡ, ಅಗ್ನಿಶಾಮಕ ಚಾಲಕ ಜಿ.ಟಿ ಶ್ರೀನಿವಾಸ್, ಅಗ್ನಿಶಾಮಕರಾದಂತಹ ವಿನೂತನ್, ಕರಿಯಣ್ಣ, ಹರೀಶ್, ರಾಜ ನಾಯ್ಕ್, ಹೊಸಳ್ಳಿ ತಿಪ್ಪೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.



ಸ್ವಯಂ ಪ್ರೇರಣೆಯಿಂದ ಎಲ್ಲರೂ ಕೈಜೋಡಿಸಿದಾಗ ಮಾತ್ರ ಪರಿಸರ ರಕ್ಷಣೆ ಸಾಧ್ಯ : ಚನ್ನಪ್ಪ


ಭದ್ರಾವತಿಯಲ್ಲಿ ಯಾವುದೇ ನೆರವಿಲ್ಲದೆ ಸ್ವಯಂ ಪ್ರೇರಣೆಯಿಂದ ನಗರಸಭೆ ಉದ್ಯಾನವನ ನಿರ್ವಹಣೆಯಲ್ಲಿ ತೊಡಗಿಸಿಕೊಂಡಿರುವ ರಾಧಾಬಾಯಿ ಹಾಗು ಬಾಲಾಜಿ ಸಿಂಗ್ ಅವರನ್ನು ಭಾನುವಾರ ಹಮ್ಮಿಕೊಳ್ಳಲಾಗಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
    ಭದ್ರಾವತಿ: ಪ್ರತಿಯೊಂದು ಕೆಲಸ ಸರ್ಕಾರದಿಂದಲೇ ನಡೆಯಬೇಕೆಂಬ ಮನೋಭಾವದಿಂದ ಹೊರಬಂದು ನಮ್ಮಿಂದಲೂ ಏನಾದರೂ ಸಮಾಜಕ್ಕೆ ಕೊಡುಗೆ ನೀಡಬೇಕು ಎಂಬ ಭಾವನೆ ಬೆಳೆಸಿಕೊಂಡಾಗ ಮಾತ್ರ ಪರಿಸರ ರಕ್ಷಣೆ ಮಾಡಲು ಸಾಧ್ಯ ಎಂದು ನಗರಸಭೆ ಉಪಾಧ್ಯಕ್ಷ ಚನ್ನಪ್ಪ ಹೇಳಿದರು.
    ಅವರು ಭಾನುವಾರ ಸಿದ್ದಾಪುರ ಎನ್‌ಟಿಬಿ ಲೇಔಟ್ ಉದ್ಯಾನವನದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
    ಪ್ರಸ್ತುತ ನಮ್ಮ ಸುತ್ತಮುತ್ತಲಿನ ಪರಿಸರ ದಿನದಿಂದ ದಿನಕ್ಕೆ ನಾಶವಾಗುತ್ತಿದೆ. ಇದರಿಂದ ಹಲವಾರು ಸಮಸ್ಯೆಗಳು ಉಲ್ಬಣಗೊಳ್ಳುತ್ತಿವೆ. ನಾವೆಲ್ಲರೂ ಎಚ್ಚೆತ್ತುಕೊಳ್ಳತ್ತಿದ್ದರೇ ಅಪಾಯ ಖಚಿತ.  ಎಲ್ಲವನ್ನು ಸರ್ಕಾರದಿಂದಲೇ ಮಾಡಲು ಸಾಧ್ಯವಿಲ್ಲ. ಇದನ್ನು ಅರಿತುಕೊಂಡು ಸ್ವಯಂಪ್ರೇರಣೆಯಿಂದ ಪರಿಸರ ರಕ್ಷಣೆಗೆ ಮುಂದಾಗಬೇಕು. ಒಬ್ಬೊಬ್ಬರು ಒಂದೊಂದು ಸಸಿ ನೆಡುವ, ಒಗ್ಗಟ್ಟಾಗಿ ಉದ್ಯಾನವನ ಅಭಿವೃದ್ಧಿಪಡಿಸುವ, ಸ್ವಚ್ಛತಾ ಕಾರ್ಯಗಳಲ್ಲಿ ಪಾಲ್ಗೊಳ್ಳುವ ಮೂಲಕ ಪರಿಸರ ರಕ್ಷಣೆಯಲ್ಲಿ ತಮ್ಮ ಬದ್ಧತೆಯನ್ನು ಪ್ರದರ್ಶಿಸಬೇಕು ಎಂದರು.
    ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ನಗರ ಬೆಳವಣಿಗೆ ಪರಿಣಾಮ ಗಿಡಮರಗಳು ನಾಶವಾಗುತ್ತಿವೆ. ಉತ್ತಮ ಪರಿಸರವಿಲ್ಲದ ವಾತಾವರಣದಲ್ಲಿ ನಾವೆಲ್ಲರೂ ಬದುಕುತ್ತಿದ್ದೇವೆ. ಈ ಹಿನ್ನೆಲೆಯಲ್ಲಿ ಅತಿ ಅವಶ್ಯಕವಿರುವ ವ್ಯಾಪ್ತಿಗಳಲ್ಲಿ ನಗರಸಭೆ ವತಿಯಿಂದ ಪರಿಸರ ರಕ್ಷಣೆಗೆ ಮೊದಲ ಆದ್ಯತೆ ನೀಡುತ್ತಿದ್ದೇವೆ ಇಂತಹ ಕಾರ್ಯಗಳಿಗೆ ಸ್ಥಳೀಯರು ಸಹ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
    ನಗರಸಭೆ ಅಧ್ಯಕ್ಷೆ ಗೀತಾ ರಾಜಕುಮಾರ್ ಅಧ್ಯಕ್ಷತೆವಹಿಸಿದ್ದರು. ನಗರಸಭೆ ಸದಸ್ಯೆ ನಾಗರತ್ನ, ಪರಿಸರ ಅಭಿಯಂತರ ಪ್ರಭಾಕರ್ ಉಪಸ್ಥಿತರಿದ್ದರು. ನಗರಸಭೆ ಸದಸ್ಯರಾದ ಲತಾ ಚಂದ್ರಶೇಖರ್, ಅನುಸುಧಾಮೋಹನ್, ಸವಿತಾ ಉಮೇಶ್, ಶೃತಿ ವಸಂತ ಕುಮಾರ್ ಸೇರಿದಂತೆ ನಗರಸಭೆ ಅಧಿಕಾರಿಗಳು, ಸಿಬ್ಬಂದಿಗಳು, ಮಹಿಳಾ ಒಕ್ಕೂಟಗಳ ಪ್ರಮುಖರು, ಸ್ಥಳೀಯರು ಪಾಲ್ಗೊಂಡಿದ್ದರು.
    ಯಾವುದೇ ನೆರವಿಲ್ಲದೆ ಸ್ವಯಂ ಪ್ರೇರಣೆಯಿಂದ  ನಗರಸಭೆ ಉದ್ಯಾನವನ ನಿರ್ವಹಣೆಯಲ್ಲಿ ತೊಡಗಿಸಿಕೊಂಡಿರುವ ರಾಧಾಬಾಯಿ ಹಾಗು ಬಾಲಾಜಿ ಸಿಂಗ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ನಗರಸಭೆ ಕಂದಾಯಾಧಿಕಾರಿ ರಾಜ್‌ಕುಮಾರ್ ಕಾರ್ಯಕ್ರಮ ನಿರೂಪಿಸಿದರು.



Saturday, June 4, 2022

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಾಮಾಜಿಕ ಚಟುವಟಿಕೆಗಳಲ್ಲೂ ಮುಂಚೂಣಿ


ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್  (ಭದ್ರಾವತಿ-೦೧) ವತಿಯಿಂದ ಭದ್ರಾವತಿ ಬಿ.ಎಚ್ ರಸ್ತೆ, ಹುತ್ತಾ ಕಾಲೋನಿ ಶ್ರೀ ಭದ್ರೇಶ್ವರ ಸಮುದಾಯ ಭವನದಲ್ಲಿ ವಿಶ್ವ ತಂಬಾಕು ವಿರೋಧಿ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು.  
    ಭದ್ರಾವತಿ, ಜೂ. ೩ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೇವಲ ಆರ್ಥಿಕ ಚಟುವಟಿಕೆಗಳಿಗೆ ಸೀಮಿತವಾಗಿರದೆ ಸಾಮಾಜಿಕ ಚಟುವಟಿಕೆಗಳಲ್ಲೂ ತೊಡಗಿಸಿಕೊಂಡಿದೆ. ಆ ಮೂಲಕ ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಮುಂದಾಗಿದೆ ಎಂದು ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್ ಹೇಳಿದರು.
    ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್  (ಭದ್ರಾವತಿ-೦೧) ವತಿಯಿಂದ ನಗರದ ಬಿ.ಎಚ್ ರಸ್ತೆ, ಹುತ್ತಾ ಕಾಲೋನಿ ಶ್ರೀ ಭದ್ರೇಶ್ವರ ಸಮುದಾಯ ಭವನದಲ್ಲಿ  ಹಮ್ಮಿಕೊಳ್ಳಲಾಗಿದ್ದ ವಿಶ್ವ ತಂಬಾಕು ವಿರೋಧಿ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.  
    ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಡೆಯವರ ದೂರದೃಷ್ಟಿ ಫಲವಾಗಿ ಆರಂಭಗೊಂಡಿರುವ ಯೋಜನೆ ಮಹಿಳೆಯರನ್ನು ಆರ್ಥಿಕವಾಗಿ ಸಬಲರನ್ನಾಗಿಸುವ ಜೊತೆಗೆ ಸಾಮಾಜಿಕವಾಗಿ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಧೂಮಪಾನ, ಮದ್ಯಪಾನ, ತಂಬಾಕು ಪದಾರ್ಥಗಳು ಹಾಗು ಮಾದಕ ವಸ್ತುಗಳ ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸುವ ಮೂಲಕ ವ್ಯಸನ ಮುಕ್ತ ಸಮಾಜಕ್ಕೆ ಮುಂದಾಗಿದೆ. ಜನರು ಯೋಜನೆಯ ಆಶಯಗಳನ್ನು ಅರಿತುಕೊಂಡು ದುಶ್ಚಟಗಳಿಗೆ ಬಲಿಯಾಗದಂತೆ ಎಚ್ಚರ ವಹಿಸಬೇಕೆಂದರು.
    ಶಿವಮೊಗ್ಗ ಮಲ್ನಾಡ್ ಕ್ಯಾನ್ಸರ್ ಆಸ್ಪತ್ರೆ  ವೈದ್ಯೆ ಡಾ. ನಮ್ರತಾ ಉಡುಪ ಮಾತಾನಾಡಿ,  ತಂಬಾಕು ಪದಾರ್ಥಗಳ ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ  ಮಾಹಿತಿಯನ್ನು ನೀಡಿದರು.  
     ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ಆರ್. ಕರುಣಾಮೂರ್ತಿ, ಗೊಂದಿ ಜಯರಾಂ, ಯೋಜನಾಧಿಕಾರಿ ವೈ. ಪ್ರಕಾಶ್, ನಗರಸಭಾ ಸದಸ್ಯರಾದ ಸವಿತಾ ಉಮೇಶ್, ಲತಾ ಚಂದ್ರಶೇಖರ್, ಶಾಂತ ಹಾಗೂ ಸುಧಾ ಮಹಿಳಾ ಸಂತ್ವಾನ ಕೇಂದ್ರದ ಅಧೀಕ್ಷಕರು, ತಾಲೂಕಿನ ವಲಯಗಳ ಮೇಲ್ವಿಚಾರಕರಾದ ಉಮೇಶ್, ವೀರೇಶ್ ಹಾಗೂ ಪ್ರದೀಪ್, ಒಕ್ಕೂಟದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಸೇವಾಪ್ರತಿನಿಧಿಗಳು ಹಾಗೂ ಸಂಘದ ಸದಸ್ಯರು ಸೇರಿದಂತೆ ಇನ್ನಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.