ಭದ್ರಾ ಜಲಾಶಯ ಸಮೀಪ ಮುಖ್ಯ ಕಾಲುವೆಯಲ್ಲಿ ಮಣ್ಣು ಕುಸಿತ
![](https://blogger.googleusercontent.com/img/a/AVvXsEjilq5aXx4BR8cDYS_Lu_whjQ2LpuGmF2OpLh8RXHFg7E5KDRitH8t6S0Pqfg2QODAG6e98WS4-gx-2pjAyRGhehusgyH55nNsRAmdPkj13mEhxt9JJdWyUBIlZCYQFGf_uvCOgApF9UCZBeIFMcqXErr4h4XCzmNRtrFBDgLLhw_lR2RGvy-6bnpjwCQ=w400-h300-rw)
ಭದ್ರಾ ಜಲಾಶಯದಿಂದ ಸ್ವಲ್ಪ ದೂರದಲ್ಲಿ ಮುಖ್ಯ ಕಾಲುವೆಯ ಎರಡು ಬದಿ ಭಾನುವಾರ ಮಣ್ಣು ಕುಸಿತವಾಗಿರುವ ಘಟನೆ ನಡೆದಿದೆ.
ಭದ್ರಾವತಿ, ಜು. ೧೮: ನಗರದ ಹೃದಯ ಭಾಗದಲ್ಲಿ ಹರಿಯುತ್ತಿರುವ ಭದ್ರಾ ನದಿಯಲ್ಲಿ ಕಳೆದ ೩ ದಿನಗಳಿಂದ ಉಂಟಾಗಿದ್ದ ಪ್ರವಾಹ ಇಳಿಮುಖವಾಗಿದ್ದು, ಹೊಸಸೇತುವೆ ಮುಳುಗಡೆಯಿಂದ ಮುಕ್ತಿ ಪಡೆದಿದೆ.
ಭದ್ರಾ ಜಲಾಶಯದಿಂದ ನದಿಗೆ ಬಿಡಲಾಗುತ್ತಿರುವ ಹೆಚ್ಚುವರಿ ನೀರಿನ ಪ್ರಮಾಣ ಕಡಿಮೆಗೊಳಿಸಿರುವ ಕಾರಣ ನಗರದ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದ ಬಳಿ ಇರುವ ಹೊಸಸೇತವೆ ಸೋಮವಾರ ಬೆಳಿಗ್ಗೆ ಮುಳುಗಡೆಯಿಂದ ಮುಕ್ತಿ ಪಡೆದಿದೆ. ಜೆಸಿಬಿ ಯಂತ್ರದಿಂದ ಸೇತುವೆ ಮೇಲೆ ಸಿಲುಕಿಕೊಂಡಿದ್ದ ಮರದ ದಿಂಬಿ, ಕಸಕಡ್ಡಿ, ತ್ಯಾಜ್ಯ ತೆರವುಗೊಳಿಸಲಾಯಿತು. ಸೇತುವೆಯಿಂದ ಅರ್ಧ ಅಡಿಯಷ್ಟು ಮಾತ್ರ ನೀರು ಕಡಿಮೆಯಾಗಿದ್ದು, ಈ ಹಿನ್ನಲೆಯಲ್ಲಿ ಸೇತುವೆ ಮೇಲೆ ವಾಹನಗಳ ಸಂಚಾರಕ್ಕೆ ಅವಕಾಶ ನೀಡಿಲ್ಲ.
ಮುಕ್ತಿ ಪಡೆಯದ ಸಂಗಮೇಶ್ವರ :
ಹಳೇಸೇತುವೆ ಬಳಿ ಭದ್ರಾ ನದಿಯಲ್ಲಿರುವ ಸಂಗಮೇಶ್ವರ ದೇವಸ್ಥಾನ ಪ್ರವಾಹದಿಂದ ಇನ್ನೂ ಮುಕ್ತಿ ಪಡೆದಿಲ್ಲ. ಪ್ರತಿ ಬಾರಿ ದೇವಸ್ಥಾನ ನೀರಿನಲ್ಲಿ ಸಂಪೂರ್ಣವಾಗಿ ಮುಳುಗಡೆಯಾಗುತ್ತಿದ್ದು, ಆದರೂ ಸಹ ದೇವಸ್ಥಾನಕ್ಕೆ ಹೆಚ್ಚಿನ ಹಾನಿಯಾಗದಿರುವುದು ವಿಶೇಷತೆಯಾಗಿದೆ. ಪ್ರತಿ ವರ್ಷ ಮಹಾಶಿವರಾತ್ರಿಯಂದು ಈ ದೇವಸ್ಥಾನ ಪ್ರಮುಖ ಆಕರ್ಷಕ ಕೇಂದ್ರವಾಗಿ ಕಂಡು ಬರುತ್ತದೆ.
ಹೊಸ ಸೇತುವೆಗೆ ಹಾನಿ :
ಪ್ರತಿ ಬಾರಿ ಮಳೆಗಾಲದ ಸಂದರ್ಭದಲ್ಲಿ ಹೊಸಸೇತುವೆಯ ಎರಡು ಬದಿಯ ತಡೆಗೋಡೆಗಳು ನೀರಿನಲ್ಲಿ ಕೊಚ್ಚಿ ಹೋಗುತ್ತಿವೆ. ಬೃಹತ್ ಗಾತ್ರದ ನೀರಿನ ಕೊಳವೆ, ದೂರವಾಣಿ ಕೇಬಲ್‌ಗಳು ಸಹ ನೀರಿನಲ್ಲಿ ಕತ್ತರಿಸಿ ಹೋಗುತ್ತಿವೆ. ಇದರಿಂದಾಗಿ ಲಕ್ಷಾಂತರ ರು. ವ್ಯಯಿಸುವಂತಾಗಿದೆ. ಕಳೆದ ಬಾರಿ ಕೊಚ್ಚಿ ಹೋಗಿದ್ದ ತಡೆಗೋಡೆ ನಿರ್ಮಿಸಿ ೬ ತಿಂಗಳು ಕಳೆದಿಲ್ಲ. ಪುನಃ ಇದೀಗ ಕೊಚ್ಚಿ ಹೋಗಿದೆ. ಈ ನಡುವೆ ಹಲವಾರು ವರ್ಷಗಳಿಂದ ಈ ಸೇತುವೆಗೆ ಬದಲಿ ಸೇತುವೆ ನಿರ್ಮಿಸುವಂತೆ ಬೇಡಿಕೆ ಸಹ ಇದೆ. ಆದರೆ ಇದುವರೆಗೂ ಬೇಡಿಕೆ ಈಡೇರಿಲ್ಲ.
ಭದ್ರಾ ಜಲಾಶಯ ಸಮೀಪ ಮುಖ್ಯ ಕಾಲುವೆಯಲ್ಲಿ ಮಣ್ಣು ಕುಸಿತ :
ಜಲಾಶಯದಿಂದ ಸ್ವಲ್ಪ ದೂರದಲ್ಲಿ ಮುಖ್ಯ ಕಾಲುವೆಯ ಎರಡು ಬದಿ ಭಾನುವಾರ ಮಣ್ಣು ಕುಸಿತವಾಗಿರುವ ಘಟನೆ ನಡೆದಿದೆ. ಜಲಾಶಯದಿಂದ ಅಧಿಕ ಪ್ರಮಾಣದಲ್ಲಿ ಹೆಚ್ಚುವರಿ ನೀರನ್ನು ನದಿಗೆ ಬಿಟ್ಟ ಹಿನ್ನಲೆಯಲ್ಲಿ ಮುಖ್ಯ ಕಾಲುವೆ ಎರಡು ಬದಿ ಮಣ್ಣು ಕುಸಿತವಾಗಿದೆ ಎನ್ನಲಾಗಿದೆ. ಅದರಲ್ಲೂ ಒಂದು ಬದಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕುಸಿತವಾಗಿದ್ದು, ಜಲಾಶಯ ವೀಕ್ಷಣೆಗೆ ಬರುವವರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಪೊಲೀಸರು ಮುನ್ನಚ್ಚರಿಕೆ ಕ್ರಮವಾಗಿ ಬ್ಯಾರಿಗೇಡ್‌ಗಳನ್ನು ಅಳವಡಿಸಿದ್ದಾರೆ.
ಕಳೆದ ತಿಂಗಳು ಸಹ ಈ ಭಾಗದಲ್ಲಿ ಕುಸಿತವಾಗಿದ್ದು, ಆದರೆ ಜಲಾಶಯದ ಅಧಿಕಾರಿಗಳು ಗಮನ ಹರಿಸಿಲ್ಲ ನಿರ್ಲಕ್ಷ್ಯತನ ವಹಿಸಿದ್ದಾರೆ. ಅನಾಹುತಗಳು ಸಂಭವಿಸುವ ಮೊದಲು ಎಚ್ಚೆತ್ತುಕೊಂಡು ದುರಸ್ತಿ ಕಾರ್ಯ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
ಕಳೆದ ಬಾರಿ ಜಲಾಶಯದಿಂದ ನದಿಗೆ ನೀರು ಹರಿಸುವುದು ಸ್ಥಗಿತಗೊಳಿಸಿದ ನಂತರ ತಳ ಭಾಗದಲ್ಲಿ ಕಳಪೆ ಕಾಮಗಾರಿ ನಡೆದಿರುವುದು ಬೆಳಕಿಗೆ ಬಂದಿದ್ದು, ಈ ಸಂಬಂಧ ರೈತ ಸಂಘ ಸೇರಿದಂತೆ ವಿವಿಧ ಸಂಘಟನೆಗಳು ಹೋರಾಟ ನಡೆಸಿ ಪುನಃ ಗುಣಮಟ್ಟದ ಕಾಮಗಾರಿ ನಡೆಸುವಂತೆ ಆಗ್ರಹಿಸಲಾಗಿತ್ತು.
ಭದ್ರಾವತಿ ನಗರದ ಹೃದಯ ಭಾಗದಲ್ಲಿ ಹರಿಯುತ್ತಿರುವ ಭದ್ರಾ ನದಿಯಲ್ಲಿ ಕಳೆದ ೩ ದಿನಗಳಿಂದ ಉಂಟಾಗಿದ್ದ ಪ್ರವಾಹ ಇಳಿಮುಖವಾಗಿದ್ದು, ಹೊಸಸೇತುವೆ ಮುಳುಗಡೆಯಿಂದ ಮುಕ್ತಿ ಪಡೆದಿದೆ. ಸೋಮವಾರ ಜೆಸಿಬಿ ಮೂಲಕ ಸೇತುವೆ ಮೇಲೆ ಸಿಲುಕಿಕೊಂಡಿದ್ದ ಮರದ ದಿಂಬಿ, ಕಸಕಡ್ಡಿ, ತ್ಯಾಜ್ಯ ತೆರವುಗೊಳಿಸಲಾಯಿತು.