Monday, September 26, 2022

ಬೆಂಕಿಪುರ ಭದ್ರಾವತಿಯಾಗಿ ರೂಪುಗೊಳ್ಳಲು ಮೈಸೂರು ಸಂಸ್ಥಾನದ ಕೊಡುಗೆ ಅಪಾರ : ಡಿ.ಸಿ ಮಾಯಣ್ಣ

ನಗರಸಭೆ ವತಿಯಿಂದ ಹಮ್ಮಿಕೊಳ್ಳಲಾಗಿರುವ ನಾಡಹಬ್ಬ ದಸರಾ ೧೦ ದಿನಗಳ ಆಚರಣೆಗೆ ಚಾಲನೆ

ಭದ್ರಾವತಿ ನಗರಸಭೆವತಿಯಿಂದ ಹಮ್ಮಿಕೊಳ್ಳಲಾಗಿರುವ ನಾಡಹಬ್ಬ ದಸರಾ ೧೦ ದಿನಗಳ ಆಚರಣೆಗೆ ಹಿರಿಯ ಕಾರ್ಮಿಕ ಹೋರಾಟ ಡಿ.ಸಿ ಮಾಯಣ್ಣ ಸೋಮವಾರ ಚಾಲನೆ ನೀಡಿದರು.
    ಭದ್ರಾವತಿ, ಸೆ. ೨೬ : ಬೆಂಕಿಪುರ ನಗರವನ್ನು ಭದ್ರಾವತಿವನ್ನಾಗಿಸಿದ ಹಿರಿಮೆ ಮೈಸೂರು ಸಂಸ್ಥಾನಕ್ಕೆ ಲಭಿಸುತ್ತದೆ ಎಂದು ಹಿರಿಯ ಕಾರ್ಮಿಕ ಹೋರಾಟ ಡಿ.ಸಿ ಮಾಯಣ್ಣ ಹೇಳಿದರು.
    ಅವರು ಸೋಮವಾರ ನಗರಸಭೆವತಿಯಿಂದ ಹಮ್ಮಿಕೊಳ್ಳಲಾಗಿರುವ ನಾಡಹಬ್ಬ ದಸರಾ ೧೦ ದಿನಗಳ ಆಚರಣೆಗೆ ಚಾಲನೆ ನೀಡಿ ಮಾತನಾಡಿದರು. ಮೈಸೂರು ಸಂಸ್ಥಾನದ ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಅಭಿವೃದ್ಧಿ ಚಿಂತನೆಗಳು ಹಾಗು ಭಾರತರತ್ನ ಸರ್.ಎಂ ವಿಶ್ವೇಶ್ವರಾಯ ಅವರ ಶ್ರಮದ ಫಲವಾಗಿ ಮೈಸೂರು ಸಂಸ್ಥಾನದಲ್ಲಿ ಅಭಿವೃದ್ಧಿ ಕಾರ್ಯಗಳು ಬೆಳವಣಿಗೆ ಹೊಂದಿದವು. ಏಷ್ಯಾದಲ್ಲಿಯೇ ಮೊದಲ ಬಾರಿಗೆ ಈ ಭಾಗದಲ್ಲಿ ಜಲವಿದ್ಯುತ್ ಯೋಜನೆಯನ್ನು ಆರಂಭಿಸಲಾಯಿತು. ಕೆಮ್ಮಣ್ಣು ಗುಂಡಿಯಲ್ಲಿ ಅದಿರು ನಿಕ್ಷೇಪವಿರುವುದನ್ನು ಪತ್ತೆಹಚ್ಚುವ ಮೂಲಕ ಕಬ್ಬಿಣದ ಅದಿರು ಕಾರ್ಖಾನೆಯನ್ನು ಪ್ರಾರಂಭಿಸಲಾಯಿತು. ನಂತರ ಕಾಗದ ಕಾರ್ಖಾನೆ ಸಹ ಆರಂಭಿಸಲಾಯಿತು. ಆರಂಭದಲ್ಲಿ ಎರಡು ಕಾರ್ಖಾನೆಗಳನ್ನು ನಂಬಿ ಸುಮಾರು ೨೦ ಸಾವಿರಕ್ಕೂ ಹೆಚ್ಚಿನ ಕಾರ್ಮಿಕ ಕುಟುಂಬಗಳು ಬದುಕು ರೂಪಿಸಿಕೊಂಡಿದ್ದವು. ಇವೆಲ್ಲದರ ಪರಿಣಾಮ ಬೆಂಕಿಪುರ ಭದ್ರಾವತಿಯಾಗಿ ವಿಶ್ವದ ಭೂಪಟದಲ್ಲಿ ಗುರುತಿಸಿ ಸಾಧ್ಯವಾಯಿತು ಎಂದರು.
    ಪ್ರಸ್ತುತ ಎರಡು ಕಾರ್ಖಾನೆಗಳು ಅವನತಿ ದಾರಿಯಲ್ಲಿ ಸಾಗುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ. ಇದುವರೆಗೂ ಯಾವುದೇ ಸರ್ಕಾರ ಈ ಎರಡು ಕಾರ್ಖಾನೆಗಳ ಅಭಿವೃದ್ಧಿಗೆ ಇಚ್ಛಾಶಕ್ತಿ ತೋರಿಸಿಲ್ಲ. ಮುಂಬರುವ ಸರ್ಕಾರಗಳು ಈ ಎರಡು ಕಾರ್ಖಾನೆಗಳನ್ನು ಅಭಿವೃದ್ಧಿಪಡಿಸುವಂತಾಗಲಿ ಎಂದು ಚಾಮುಂಡೇಶ್ವರಿ ದೇವಿಯಲ್ಲಿ ಪ್ರಾರ್ಥಿಸುತ್ತೇನೆ ಎಂದರು.
    ಶಾಸಕ ಬಿ.ಕೆ ಸಂಗಮೇಶ್ವರ್ ಮಾತನಾಡಿ, ಪ್ರಸ್ತುತ ಕೇಂದ್ರ ಹಾಗು ರಾಜ್ಯ ಸರ್ಕಾರಗಳು ಜನ ವಿರೋಧಿ ನೀತಿಗಳನ್ನು ಅನುಸರಿಸುತ್ತಿವೆ. ಮುಂಬರುವ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ. ಈ ಸರ್ಕಾರದಲ್ಲಿ ಸಚಿವನಾಗುವುದು ಖಚಿತ. ಈ ಎರಡು ಕಾರ್ಖಾನೆಗಳನ್ನು ಅಭಿವೃದ್ಧಿ ಪಡಿಸುವುದು ನನ್ನ ಮುಂದಿನ ಗುರಿಯಾಗಿದೆ ಎಂದರು.
    ವೇದಿಕೆಯಲ್ಲಿ ನಗರಸಭೆ ನೂತನ ಅಧ್ಯಕ್ಷೆ ಅನುಸುಧಾ ಮೋಹನ್ ಪಳನಿ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್‌ಕುಮಾರ್, ವಿವಿಧ ಸಮಿತಿ ಅಧ್ಯಕ್ಷರುಗಳಾದ ವಿ. ಕದಿರೇಶ್, ಲತಾ ಚಂದ್ರಶೇಖರ್, ಆರ್. ಶ್ರೇಯಸ್(ಚಿಟ್ಟೆ), ಜಾರ್ಜ್, ಕಾಂತರಾಜು, ಕೋಟೇಶ್ವರರಾವ್, ಮಾಜಿ ಅಧ್ಯಕ್ಷರಾದ ಗೀತಾ ರಾಜ್‌ಕುಮಾರ್, ಬಿ.ಟಿ ನಾಗರಾಜ್, ಡಾ.ಎಸ್.ಎಸ್ ವಿಜಯದೇವಿ, ಪೌರಾಯುಕ್ತ ಮನುಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಧನಲಕ್ಷ್ಮಿ ಪ್ರಾರ್ಥಿಸಿದರು. ಉಪಾಧ್ಯಕ್ಷ ಚನ್ನಪ್ಪ ಸ್ವಾಗತಿಸಿದರು. ಸಮುದಾಯ ಸಂಘಟನಾ ಅಧಿಕಾರಿ ಸುವಾಸಿನಿ ವಂದಿಸಿದರು.
    ಇದಕ್ಕೂ ಮೊದಲು ಮಾಧವಚಾರ್ ವೃತ್ತದಿಂದ ಡಿ.ಸಿ ಮಾಯಣ್ಣ ಅವರನ್ನು ಮಂಗಳ ವಾದ್ಯಗಳೊಂದಿಗೆ ಮೆರವಣಿಯಲ್ಲಿ ಕರೆ ತರಲಾಯಿತು. ನಂತರ ಶ್ರೀ ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
    ನಗರಸಭೆ ಸದಸ್ಯರು, ಅಧಿಕಾರಿಗಳು, ಸಿಬ್ಬಂದಿಗಳು, ಪೌರಸೇವಾ ನೌಕರರ ಸೇವಾ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ಪೌರಕಾರ್ಮಿಕರು, ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.


ಭದ್ರಾವತಿ ನಗರಸಭೆವತಿಯಿಂದ ಹಮ್ಮಿಕೊಳ್ಳಲಾಗಿರುವ ನಾಡಹಬ್ಬ ದಸರಾ ಆಚರಣೆ ಉದ್ಘಾಟಿಸಲು ಆಗಮಿಸಿದ ಡಿ.ಸಿ ಮಾಯಣ್ಣ ಅವರನ್ನು ಮಾಧವಚಾರ್ ವೃತ್ತದಿಂದ ಮಂಗಳ ವಾದ್ಯಗಳೊಂದಿಗೆ ಮೆರವಣಿಯಲ್ಲಿ ಕರೆ ತರಲಾಯಿತು

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಧರಣಿ ಸತ್ಯಾಗ್ರಹ

ಅಮಾನತುಗೊಂಡಿರುವ ನ್ಯಾಯಾಬೆಲೆ ಅಂಗಡಿಗಳನ್ನು ವಜಾಗೊಳಿಸುವುದು, ಕರ್ತವ್ಯ ಲೋಪವೆಸಗಿರುವ ಆಹಾರ ಇಲಾಖೆ ಅಧಿಕಾರಿಗಳನ್ನು ಸೇವೆಯಿಂದ ಅಮಾನತುಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸೋಮವಾರ ಭದ್ರಾವತಿ ತಾಲೂಕು ಕಛೇರಿ ಮಿನಿ ವಿಧಾನಸೌಧದ ಮುಂಭಾಗ ಧರಣಿ ಸತ್ಯಾಗ್ರಹ ಆರಂಭಗೊಂಡಿದೆ.
    ಭದ್ರಾವತಿ, ಸೆ. ೨೬: ಅಮಾನತುಗೊಂಡಿರುವ ನ್ಯಾಯಾಬೆಲೆ ಅಂಗಡಿಗಳನ್ನು ವಜಾಗೊಳಿಸುವುದು, ಕರ್ತವ್ಯ ಲೋಪವೆಸಗಿರುವ ಆಹಾರ ಇಲಾಖೆ ಅಧಿಕಾರಿಗಳನ್ನು ಸೇವೆಯಿಂದ ಅಮಾನತುಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸೋಮವಾರ ತಾಲೂಕು ಕಛೇರಿ ಮಿನಿ ವಿಧಾನಸೌಧದ ಮುಂಭಾಗ ಧರಣಿ ಸತ್ಯಾಗ್ರಹ ಆರಂಭಗೊಂಡಿದೆ.
    ಸರ್ಕಾರದ ಆದೇಶದ ಪ್ರಕಾರ ನ್ಯಾಯಬೆಲೆ ಅಂಗಡಿಗಳು ಬೆಳಿಗ್ಗೆ ೮ ಗಂಟೆಯಿಂದ ಮಧ್ಯಾಹ್ನ ೧೨ ಗಂಟೆವರೆಗೆ ಹಾಗು ಸಂಜೆ ೪ ರಿಂದ ರಾತ್ರಿ ೮ ಗಂಟೆವರೆಗೆ ಕಾರ್ಯ ನಿರ್ವಹಿಸಬೇಕು. ಮಂಗಳವಾರ ಹೊರತುಪಡಿಸಿ ಉಳಿದ ಎಲ್ಲಾ ದಿನ ಕಡ್ಡಾಯವಾಗಿ ತೆರೆದಿರಬೇಕು ಹಾಗು ಅಂಗಡಿ ಮುಂಭಾಗದಲ್ಲಿ ಸ್ಥಳೀಯ ಆಹಾರ ಇಲಾಖೆ ಅಧಿಕಾರಿಗಳ ದೂರವಾಣಿ ಸಂಖ್ಯೆ, ಜಾಗೃತಿ ಸಮಿತಿ ಸದಸ್ಯರ ಹೆಸರು, ಸಂಖ್ಯೆ, ಸಿಸಿಟಿವಿ ಕ್ಯಾಮೆರಾ ಅಳವಡಿಕೆ, ಕಾರ್ಯ ನಿರ್ವಹಿಸುವ ಸಮಯ ಮತ್ತು ರಜಾ ದಿನದ ಬಗ್ಗೆ ಕಪ್ಪು ಹಲಗೆಯ ಮೇಲೆ ನಮೂದಿಸಬೇಕು. ಆದರೆ ಸ್ಥಳೀಯ ಅಧಿಕಾರಿಗಳ ಕುಮ್ಮಕ್ಕಿನಿಂದ ಸರ್ಕಾರದ ಆದೇಶಗಳನ್ನು ನ್ಯಾಯಬೆಲೆ ಅಂಗಡಿಗಳು ಪಾಲಿಸುತ್ತಿಲ್ಲ ಎಂದು ಆರೋಪಿಸಲಾಯಿತು.
    ಕಳೆದ ೩ ವರ್ಷಗಳಿಂದ ಈ ಸಂಬಂಧ ಹಲವು ಬಾರಿ ಮನವಿ ಮಾಡಿದರೂ ಸಹ ಯಾವುದೇ ಪ್ರಯೋಜನವಾಗಿರುವುದಿಲ್ಲ. ಈ ಹಿನ್ನಲೆಯಲ್ಲಿ ಕರ್ತವ್ಯ ಲೋಪವೆಸಗಿರುವ ಆಹಾರ ಇಲಾಖೆಯ ನಗರ ಮತ್ತು ಗ್ರಾಮಾಂತರ ಭಾಗದ ಅಧಿಕಾರಿಗಳನ್ನು ಸೇವೆಯಿಂದ ಅಮಾನತುಗೊಳಿಸುವುದು. ಅಮಾನತುಗೊಂಡಿರುವ ನಗರದ ೭ ನ್ಯಾಯಬೆಲೆ ಅಂಗಡಿಗಳನ್ನು ವಜಾಗೊಳಿಸುವುದು ಹಾಗು ಕೆಎಫ್‌ಎಸ್‌ಸಿಎಸ್ ಗೋದಾಮು ಭ್ರಷ್ಟಾಚಾರ ನಿಯಂತ್ರಿಸಬೇಕೆಂದು ಆಗ್ರಹಿಸಲಾಯಿತು.
    ಜನತಾದಳ(ಸಂಯುಕ್ತ) ಕರ್ನಾಟಕ ವತಿಯಿಂದ ನಗರದ ಮಾನವ ಹಕ್ಕುಗಳ ಹೋರಾಟ ಸಮಿತಿ ಹಾಗು ಕೆಆರ್‌ಎಸ್ ಪಕ್ಷ ಸಹಕಾರದೊಂದಿಗೆ ಹಮ್ಮಿಕೊಳ್ಳಲಾಗಿರುವ ಧರಣಿ ಸತ್ಯಾಗ್ರಹದಲ್ಲಿ ಪ್ರಮುಖರಾದ eಡಿಯು ರಾಜ್ಯ ಕಾರ್ಯದರ್ಶಿ ಶಶಿಕುಮಾರ್ ಗೌಡ, ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು, ರಘು ಸಂಕ್ಲಿಪುರ, ಬಾಬುದೀಪಕ್‌ಕುಮಾರ್ ಹಾಗು ಕೆಆರ್‌ಎಸ್ ಪಕ್ಷದ ಪ್ರಮುಖರು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

Sunday, September 25, 2022

ಹಿರಿಯ ಕಾರ್ಮಿಕ ಹೋರಾಟಗಾರ ಡಿ.ಸಿ ಮಾಯಣ್ಣನವರಿಗೆ ದಸರಾ ಉದ್ಘಾಟನೆ ಭಾಗ್ಯ

ಸೆ.೨೬ರಂದು ನಗರಸಭೆ ಆವರಣದಲ್ಲಿ ಚಾಲನೆ

ಡಿ.ಸಿ ಮಾಯಣ್ಣ
        
    * ಅನಂತಕುಮಾರ್
    ಭದ್ರಾವತಿ, ಸೆ. ೨೫: ನಗರಸಭೆ ವತಿಯಿಂದ ಹಮ್ಮಿಕೊಳ್ಳಲಾಗಿರುವ ಈ ಬಾರಿ ನಾಡಹಬ್ಬ ದಸರಾ ಉದ್ಘಾಟನೆ ಭಾಗ್ಯ ಹಿರಿಯ ಕಾರ್ಮಿಕ ಹೋರಾಟಗಾರ ಡಿ.ಸಿ ಮಾಯಣ್ಣ ಅವರಿಗೆ ಒಲಿದು ಬಂದಿದೆ.
    ಮೂಲತಃ ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ದಂಡಿನಶಿವರ ಗ್ರಾಮದ ೮೮ರ ಹರೆಯದ ಡಿ.ಸಿ ಮಾಯಣ್ಣ ಅವರು ಸೆ.೨೬ರಂದು ನಗರಸಭೆ ಆವರಣದಲ್ಲಿ ನಾಡಹಬ್ಬ ದಸರಾ ಆಚರಣೆಗೆ ಚಾಲನೆ ನೀಡಲಿದ್ದಾರೆ.



    ವಿಐಎಸ್‌ಎಲ್ ಕಾರ್ಮಿಕನಾಗಿ ಹೋರಾಟದ ಬದುಕು:
    ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ದಂಡಿನಶಿವರ ಗ್ರಾಮದಲ್ಲಿ ಚಿಕ್ಕಣ್ಣ ಮತ್ತು ನಂಜಮ್ಮ ದಂಪತಿಯ ಹಿರಿಯ ಮಗನಾಗಿ ೨೦ ಜೂನ್ ೧೯೩೪ರಲ್ಲಿ ಜನಿಸಿದ ಮಾಯಣ್ಣ ಅವರು ತಮ್ಮ ಪ್ರಾಥಮಿಕ ಹಾಗು ಪ್ರೌಢಶಿಕ್ಷಣವನ್ನು ತಿಪಟೂರಿನಲ್ಲಿ ಪೂರೈಸಿದರು. ಕಡುಬಡತನದ ಹಿನ್ನಲೆಯಲ್ಲಿ ತಮ್ಮ ಪದವಿ ಶಿಕ್ಷಣ ಮೊಟಕುಗೊಳಿಸಿ ಭದ್ರಾವತಿಗೆ ಆಗಮಿಸಿ ೧೯೫೭ರಲ್ಲಿ ವಿಐಎಸ್‌ಎಲ್ ಕಾರ್ಖಾನೆ ಕಾರ್ಮಿಕರಾಗಿ ಸೇರ್ಪಡೆಗೊಳ್ಳುವ ಮೂಲಕ ಕಾರ್ಮಿಕರಾಗಿ ವೃತ್ತಿ ಜೀವನ ಆರಂಭಿಸಿದರು.
    ಮಾಯಣ್ಣನವರು ಪ್ರೌಢ ಶಿಕ್ಷಣ ವ್ಯಾಸಂಗ ನಡೆಸುತ್ತಿದ್ದ ಸಂದರ್ಭದಲ್ಲಿ ಟಿ.ಎಚ್ ವೆಂಕಟಪ್ಪರವರು ಬೋಧಿಸುತ್ತಿದ್ದ ಚರಿತ್ರೆಯ ಪಾಠಗಳಿಂದ ಪ್ರಭಾವಿತರಾಗಿ ಕಮ್ಯೂನಿಸಂ ಸಿದ್ದಾಂತದ ಜನಕರಾದ ಕಾರ್ಲ್ ಮಾಕ್ಸ್, ಫ್ರೆಢರಿಕ್, ಏಂಗೆಲ್ಸ್, ಲೆನಿನ್, ಸ್ಟಾಲಿನ್‌ರವರ ಬರವಣಿಗೆಗಳಿಂದ ಪ್ರೇರೇಪಿತರಾಗಿದ್ದರು. ಈ ನಡುವೆ ಕಾರ್ಖಾನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಕಮ್ಯೂನಿಸಂ ಸಿದ್ದಾಂತಗಳನ್ನು ಮೈಗೂಡಿಸಿಕೊಂಡಿದ್ದ ಕಾರ್ಮಿಕ ಹೋರಾಟಗಾರರಾದ ಎಚ್.ಎನ್ ಚಂದ್ರಶೇಖರ್, ವೆಂಕಟಪ್ಪ, ಹನುಮಂತರಾವ್ ಸಲಗರ್, ಅಂಕಪ್ಪ, ಬಿ.ಎನ್ ಚಂದ್ರಶೇಖರ್, ಮುನಿಸ್ವಾಮಿ ಹಾಗು ನಾಗರಾಜ್ ಸೇರಿದಂತೆ ಇನ್ನಿತರರ ಒಡನಾಟದಿಂದ ಕಮ್ಯೂನಿಸ್ಟ್ ಸಿದ್ದಾಂತಗಳು ಸಾಕಾರಗೊಳ್ಳಲು ಕಾರಣವಾದವು.


    ಹೋರಾಟ ಎಂದರೆ ಡಿ.ಸಿ ಮಾಯಣ್ಣ :
    ಆರಂಭದಲ್ಲಿ ಕಾರ್ಖಾನೆಯ ಕಾರ್ಮಿಕ ಸಂಘದ ಜೊತೆಸೇರಿ ಕಾರ್ಮಿಕರ ಹೋರಾಟಗಳಿಗೆ ಧ್ವನಿಯಾದವರು ಮಾಯಣ್ಣ ಎಂದರೆ ತಪ್ಪಾಗಲಾರದು. ಕಾರ್ಮಿಕರ ತುಟಿಭತ್ಯೆಗಾಗಿ ಆಡಳಿತ ಮಂಡಳಿ ವಿರುದ್ಧ ಹೋರಾಟ ನಡೆಸಿ ಈ ಪ್ರಕರಣ ೧೯೬೫ರಲ್ಲಿ ಸರ್ವೋಚ್ಛ ನ್ಯಾಯಾಲಯದ ಮೆಟ್ಟಿಲೇರಬೇಕಾಯಿತು. ಸುಮಾರು ೬ ವರ್ಷಗಳ ವಿಚಾರಣೆ ನಡೆದು ಅಂತಿಮವಾಗಿ ಕಾರ್ಮಿಕರಿಗೆ ನ್ಯಾಯ ಒದಗಿಸಿಕೊಡುವಲ್ಲಿ ಯಶಸ್ವಿಯಾದರು. ಈ ನಡುವೆ ಕಾರ್ಖಾನೆ ಆಡಳಿತ ಮಂಡಳಿ ನ್ಯಾಯಾಲಯದ ಆದೇಶ ಉಲ್ಲಂಘಿಸಿದೆ ಎಂಬ ಆರೋಪದ ಮೇಲೆ ೧೯೭೨ರಲ್ಲಿ ಕಾರ್ಖಾನೆ ಲಾಕ್‌ಔಟ್‌ಗೊಳಿಸಲು ಆದೇಶಿಸಲಾಯಿತು. ಈ ಸಂದರ್ಭದಲ್ಲಿ ಪ್ರತಿಭಟನೆಯಲ್ಲಿ ತೊಡಗಿದ್ದ ಮಾಯಣ್ಣನವರು ವಾರಗಟ್ಟಲೆ ಪೊಲೀಸರ ವಶದಲ್ಲಿರಬೇಕಾಯಿತು.
    ಮಾಯಣ್ಣನವರು ಕಾರ್ಮಿಕ ಸಂಘದಿಂದ ಹೊರಬಂದು ೧೯೭೮ರಲ್ಲಿ ವಿಐಎಸ್‌ಎಲ್ ಎಂಪ್ಲಾಯಿಸ್ ಅಸೋಸಿಯೇಷನ್(ಎಐಟಿಯುಸಿ) ಸಂಘಟಿಸುವ ಮೂಲಕ ಅದರ ಅಧ್ಯಕ್ಷರಾಗಿ ಕಾರ್ಮಿಕರ ಹಲವಾರು ಹೋರಾಟಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಕಾರ್ಮಿಕರಿಗೆ ನ್ಯಾಯ ಒದಗಿಸಿಕೊಡುವಲ್ಲಿ ಯಶಸ್ವಿಯಾದರು.


    ಮಾಯಣ್ಣನವರು ಕೇವಲ ವಿಐಎಸ್‌ಎಲ್ ಕಾರ್ಮಿಕರ ಪರವಾದ ಹೋರಾಟಗಳಲ್ಲದೆ ಕುವೆಂಪು ವಿಶ್ವ ವಿದ್ಯಾನಿಲಯದ ಗುತ್ತಿಗೆ ಕಾರ್ಮಿಕರು, ಅಕ್ಷರ ದಾಸೋಹ ಬಿಸಿಯೂಟ, ಅಂಗನವಾಡಿ ಕಾರ್ಯಕರ್ತೆಯರು, ಪೌರಕಾರ್ಮಿಕರು, ಹಮಾಲಿ ಮತ್ತು ಬೀಡಿ ಕಾರ್ಮಿಕರನ್ನು ಸಂಘಟಿಸಿ ಅವರ ಬೇಡಿಕೆಗಳು ಸರ್ಕಾರದ ಗಮನ ಸೆಳೆಯುವಂತೆ ಮಾಡಿದ್ದಾರೆ. ಎಂಪಿಎಂ ನಾನ್ ಪಿಎಫ್ ಗುತ್ತಿಗೆ ಕಾರ್ಮಿಕರ ವೇತನ ತಾರತಮ್ಯ ನಿವಾರಿಸಲು ೨೦೦೮ರಲ್ಲಿ ಕಾರ್ಖಾನೆ ಮುಂಭಾಗ ಸುಮಾರು ೧ ತಿಂಗಳ ನಿರಂತರವಾಗಿ ಹೋರಾಟ ನಡೆಸಿ ನ್ಯಾಯ ಒದಗಿಸಿಕೊಡುವಲ್ಲಿ ಯಶಸ್ವಿಯಾಗಿದರು. ೨೦೧೩ರಲ್ಲಿ ವಿಐಎಸ್‌ಎಲ್ ಖಾಸಗಿ ಸಹಭಾಗಿತ್ವದ ವಿರುದ್ಧ ಸುಮಾರು ಒಂದು ತಿಂಗಳಿಗೂ ಹೆಚ್ಚು ಕಾಲ ಧರಣಿ ನಡೆಸಿದರು. ಸರ್ಕಾರಗಳ ಜನವಿರೋಧಿ ನೀತಿ, ಬೆಲೆ ಏರಿಕೆ, ಭ್ರಷ್ಟಾಚಾರ ವಿರುದ್ಧ ಹೋರಾಟ ನಡೆಸುವ ಮೂಲಕ ಪ್ರಗತಿಪರ ಚಳುವಳಿಗಳಲ್ಲಿ ತೊಡಗಿಸಿಕೊಂಡಿದ್ದಾರೆ.
    ವಿಧಾನಸಭಾ ಚುನಾವಣೆಗೆ ಸ್ಪರ್ಧೆ :
    ವಿಐಎಸ್‌ಎಲ್ ಕಾರ್ಖಾನೆಯಲ್ಲಿ ಸಾಮಾನ್ಯ ಕಾರ್ಮಿಕರಾಗಿದ್ದ ಖುದ್ದೂಸ್ ಅನ್ವರ್ ೨ ಬಾರಿ ಹಾಗು ಎಂ.ಜೆ ಅಪ್ಪಾಜಿ ೩ ಬಾರಿ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿರುವುದು ಇತಿಹಾಸದ ಪುಟಗಳಲ್ಲಿ ಅಚ್ಚಳಿಯದಂತೆ ಉಳಿದುಕೊಂಡಿದೆ. ಮಾಯಣ್ಣನವರು ಸಹ ೧೯೮೯ರಲ್ಲಿ ಸಿಪಿಐ ಪಕ್ಷದ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಿದ್ದರು. ಚುನಾವಣೆಯಲ್ಲಿ ಸೋಲು ಕಂಡ ನಂತರ ರಾಜಕೀಯದಿಂದ ದೂರ ಉಳಿದು ಹೋರಾಟಗಳಲ್ಲಿ ಮತ್ತಷ್ಟು ಸಕ್ರಿಯವಾಗ ತೊಡಗಿದರು. ಈಗಲೂ ವಿಐಎಸ್‌ಎಲ್ ಎಂಪ್ಲಾಯಿಸ್ ಅಸೋಸಿಯೇಷನ್(ಎಐಟಿಯುಸಿ) ಗೌರವಾಧ್ಯಕ್ಷರಾಗಿದ್ದು, ಕಾರ್ಮಿಕರ ಪರವಾದ ಧ್ವನಿಯಾಗಿ ಉಳಿದುಕೊಂಡಿದ್ದಾರೆ.
    ಮಾಯಣ್ಣನವರು ಇಬ್ಬರು ಹೆಣ್ಣು ಹಾಗು ಮೂವರು ಗಂಡು ಮಕ್ಕಳನ್ನು ಹೊಂದಿದ್ದಾರೆ. ೮೮ರ ಹರೆಯದಲ್ಲೂ ಲವಲವಿಕೆಯಿಂದ ಇದ್ದು, ಇಂದಿನ ಪೀಳಿಗೆಯವರಿಗೆ ಮಾದರಿಯಾಗಿದ್ದಾರೆ.

ಮಹಾಲಯ ಅಮಾವಾಸ್ಯೆ ಹಿನ್ನಲೆಯಲ್ಲಿ ಭದ್ರಾ ನದಿಯಲ್ಲಿ ಹಿರಿಯರಿಗೆ ಪಿಂಡ ಸಮರ್ಪಣೆ

ಪಿತೃಪಕ್ಷ ಕೊನೆಯ ದಿನವಾದ ಮಹಾಲಯ ಅಮಾವಾಸ್ಯೆ ಹಿನ್ನಲೆಯಲ್ಲಿ ಭದ್ರಾವತಿ ಹಳೇ ಸೇತುವೆ ಸಮೀಪದ ಶ್ರೀ ಸಂಗಮೇಶ್ವರ ಸ್ವಾಮಿ ದೇವಸ್ಥಾನದ ಬಳಿ ಹಿರಿಯರಿಗೆ ಪಿಂಡ ಸಮರ್ಪಣೆ ನಡೆಸಲಾಯಿತು.
    ಭದ್ರಾವತಿ, ಸೆ. ೨೫: ಪಿತೃಪಕ್ಷ ಕೊನೆಯ ದಿನವಾದ ಮಹಾಲಯ ಅಮಾವಾಸ್ಯೆ ಹಿನ್ನಲೆಯಲ್ಲಿ ಹಳೇ ಸೇತುವೆ ಸಮೀಪದ ಶ್ರೀ ಸಂಗಮೇಶ್ವರ ಸ್ವಾಮಿ ದೇವಸ್ಥಾನದ ಬಳಿ ಹಿರಿಯರಿಗೆ ಪಿಂಡ ಸಮರ್ಪಣೆ ನಡೆಸಲಾಯಿತು.
    ಪ್ರತಿ ವರ್ಷದಂತೆ ಈ ಬಾರಿ ಸಹ ಶ್ರೀ ರಾಮೇಶ್ವರ ದೇವಸ್ಥಾನದ ಆವರಣದಲ್ಲಿ ಪುರೋಹಿತರಿಂದ ಧಾರ್ಮಿಕ ಆಚರಣೆಗಳು ಜರುಗಿದವು. ನಗರದ ವಿವಿಧೆಡೆಗಳಿಂದ ಆಗಮಿಸಿದ್ದ ನೂರಾರು ಮಂದಿ ಧಾರ್ಮಿಕ ಆಚರಣೆಗಳ ಮೂಲಕ ಹಿರಿಯರನ್ನು ಸ್ಮರಿಸಿ ಅವರ ಆತ್ಮಕ್ಕೆ ಶಾಂತಿ ಬಯಸುವ ಮೂಲಕ ಆಶೀರ್ವಾದ ಕೋರಿದರು. ಕೊನೆಯಲ್ಲಿ ಭದ್ರಾ ನದಿಯಲ್ಲಿ ಪಿಂಡ ಸಮರ್ಪಣೆ ನೆರವೇರಿಸಿದರು.


ಪಿತೃಪಕ್ಷ ಕೊನೆಯ ದಿನವಾದ ಮಹಾಲಯ ಅಮಾವಾಸ್ಯೆ ಹಿನ್ನಲೆಯಲ್ಲಿ ಭದ್ರಾವತಿ ಶ್ರೀ ರಾಮೇಶ್ವರ ದೇವಸ್ಥಾನದ ಆವರಣದಲ್ಲಿ ಪುರೋಹಿತರಿಂದ ಧಾರ್ಮಿಕ ಆಚರಣೆಗಳು ಜರುಗಿದವು.

ರ‍್ಯಾಮ್ಕೋಸ್ ವತಿಯಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ : ಅಭಿನಂದನೆ

ಭದ್ರಾವತಿಯಲ್ಲಿ ರೈತರ ಅಡಕೆ ಮಾರಾಟ ಮತ್ತು ಪರಿಷ್ಕರಣ ಸಹಕಾರ ಸಂಘದ ಸರ್ವಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಭಾನುವಾರ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
    ಭದ್ರಾವತಿ, ಸೆ. ೨೫ : ರೈತರ ಅಡಕೆ ಮಾರಾಟ ಮತ್ತು ಪರಿಷ್ಕರಣ ಸಹಕಾರ ಸಂಘದ ಸರ್ವಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಭಾನುವಾರ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
    ಸಂಘದ ಅಧ್ಯಕ್ಷ ಸಿ. ಮಲ್ಲೇಶಪ್ಪ ಅಧ್ಯಕ್ಷತೆ ವಹಿಸಿದ್ದರು. ಪ್ರಾಸ್ತಾವಿಕವಾಗಿ ಮಾತನಾಡಿದ ಮುಖ್ಯ ಕಾರ್ಯನಿರ್ವಾಹಕ ಎಂ. ವಿರುಪಾಕ್ಷಪ್ಪ, ಪ್ರಸಕ್ತ ಸಾಲಿನ ವರ್ಷಾಂತ್ಯಕ್ಕೆ ೧೮೯ ಲಕ್ಷ ಷೇರುಧನ, ೩೬೬೩ ಸದಸ್ಯರನ್ನು ಸಂಘ ಹೊಂದಿದೆ. ೧೪೪ ಲಕ್ಷ ಆಪದ್ಧನನಿಧಿ ಹೊಂದಿದ್ದು, ಸುಮಾರು ೨೭ ಕೋ. ರು. ವಿವಿಧ ಠೇವಣಿಗಳನ್ನು ಒಳಗೊಂಡಿದೆ.  ೯೨೭೭ ಕ್ವಿಂಟಾಲ್(೧೩೨೫೩ ಚೀಲ)  ರು. ೪೩ ಕೋ. ಅಡಕೆ ವಹಿವಾಟು ನಡೆಸಿದ್ದು, ದಲ್ಲಾಳಿ ರು. ೫೩.೬೦ ಲಕ್ಷ ಗಳಿಸಿದೆ. ಸಂಘದ ಎಲ್ಲಾ ಖರ್ಚುವೆಚ್ಚಗಳನ್ನು ಕಳೆದು ರು.೧೦೪.೫೪ ಲಕ್ಷ ನಿವ್ವಳ ಲಾಭ ಗಳಿಸಿದೆ. ಇದು ಸಂಘದ ೨೮ ವರ್ಷದಲ್ಲೇ ಅತ್ಯಂತ ಗರಿಷ್ಠ ಲಾಭವಾಗಿದೆ ಎಂದರು.
    ಉಪಾಧ್ಯಕ್ಷ ಎಚ್.ಟಿ ಉಮೇಶ್, ನಿರ್ದೇಶಕರಾದ ಜಿ.ಈ ಚನ್ನಪ್ಪ, ಯು. ಗಂಗನಗೌಡ, ಎಚ್.ಆರ್ ತಿಮ್ಮಪ್ಪ, ಸಿ. ಹನುಮಂತು, ಬಿ.ಜಿ ಜಗದೀಶ್‌ಗೌಡ, ಮಹೇಶ್, ಎಚ್.ಎಲ್ ಷಡಾಕ್ಷರಿ, ಎಂ.ಎಸ್ ಬಸವರಾಜಪ್ಪ, ಎಚ್.ಎಸ್ ಸಂಜೀವಕುಮಾರ್, ಎಸ್. ಮಹೇಶ್ವರಪ್ಪ, ಉಮಾ, ಲಲಿತಮ್ಮ ಸೇರಿದಮತೆ ಇನ್ನಿತರರು ಉಪರಿದ್ದರು. ನಿರ್ದೇಶಕ ಎಂ. ಪರಮೇಶ್ವರಪ್ಪ ಸ್ವಾಗತಿಸಿದರು.

ನಗರಸಭೆ ವತಿಯಿಂದ ಸೆ.೨೬ರಿಂದ ನಾಡಹಬ್ಬ ದಸರಾ ಆಚರಣೆ

ಭದ್ರಾವತಿಯಲ್ಲಿ ನಗರಸಭೆ ವತಿಯಿಂದ ೧೦ ದಿನಗಳ ಕಾಲ ಹಮ್ಮಿಕೊಳ್ಳಲಾಗಿರುವ ನಾಡಹಬ್ಬ ದಸರಾ ಆಚರಣೆ ಹಿನ್ನಲೆಯಲ್ಲಿ ನಗರದ ಪ್ರಮುಕ ವೃತ್ತಗಳಲ್ಲಿ ಮಹಾದ್ವಾರ ನಿರ್ಮಿಸಿರುವುದು.
    ಭದ್ರಾವತಿ, ಸೆ. ೨೫ : ನಗರಸಭೆ ವತಿಯಿಂದ ೧೦ ದಿನಗಳ ಕಾಲ ಹಮ್ಮಿಕೊಳ್ಳಲಾಗಿರುವ ನಾಡಹಬ್ಬ ದಸರಾ ಆಚರಣೆಗೆ ಸೆ.೨೬ರಂದು ಬೆಳಿಗ್ಗೆ ೧೧ ಗಂಟೆಗೆ ನಗರಸಭೆ ಆವರಣದಲ್ಲಿ ಚಾಲನೆ ದೊರೆಯಲಿದೆ.
    ಶಾಸಕ ಬಿ.ಕೆ ಸಂಗಮೇಶ್ವರ್‌ರವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಹಿರಿಯ ಕಾರ್ಮಿಕ ಹೋರಾಟಗಾರ ಡಿ.ಸಿ ಮಾಯಣ್ಣ ಚಾಲನೆ ನೀಡಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಡಾ. ಕೆ.ಸಿ ನಾರಾಯಣಗೌಡ, ಗೃಹ ಸಚಿವ ಅರಗಜ್ಞಾನೇಂದ್ರ, ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಸಂಸದ ಬಿ.ವೈ ರಾಘವೇಂದ್ರ, ವಿಧಾನ ಪರಿಷತ್ ಸದಸ್ಯರಾದ ಆಯನೂರು ಮಂಜುನಾಥ್, ಎಸ್.ಎಸ್ ಭೋಜೆಗೌಡ, ಎಸ್. ರುದ್ರೇಗೌಡ, ಭಾರತಿ ಶೆಟ್ಟಿ, ಡಿ.ಎಸ್ ಅರುಣ್, ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಕೆ.ಎಸ್ ಗುರುಮೂರ್ತಿ, ನಗರಸಭೆ ಅಧ್ಯಕ್ಷೆ ಅನುಸುಧಾ ಮೋಹನ್ ಪಳನಿ, ಕಾಡಾ ಅಧ್ಯಕ್ಷೆ ಪವಿತ್ರ ರಾಮಯ್ಯ, ಜಿಲ್ಲಾಧಿಕಾರಿ ಡಾ. ಸೆಲ್ವಮಣಿ, ನಗರಸಭೆ ಉಪಾಧ್ಯಕ್ಷ ಚನ್ನಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್‌ಕುಮಾರ್, ಪೌರಾಯುಕ್ತ ಎಚ್.ಎಂ ಮನುಕುಮಾರ್ ಹಾಗು ನಗರಸಭೆ ದಸರಾ ಆಚರಣೆ ವಿವಿಧ ಸಮಿತಿಗಳ ಅಧ್ಯಕ್ಷರು, ಸದಸ್ಯರು ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು.
    ಮೊದಲ ಬಾರಿಗೆ ನಗರಸಭೆ ಆವರಣದಲ್ಲಿ ದಸರಾ ಹಬ್ಬಕ್ಕೆ ಚಾಲನೆ :
    ನಗರಸಭೆ ಆವರಣದಲ್ಲಿ ನೂತನವಾಗಿ ಶ್ರೀ ಚಾಮುಂಡೇಶ್ವರಿ ದೇವಿ ದೇವಸ್ಥಾನ ನಿರ್ಮಾಣಗೊಂಡ ನಂತರ ಮೊದಲ ಬಾರಿಗೆ ದಸರಾ ಆಚರಣೆಗೆ ಚಾಲನೆ ನೀಡಲಾಗುತ್ತಿದೆ. ಈ ಹಿಂದೆ ೩೩ ಗ್ರಾಮಗಳ ಅದಿದೇವತೆ ಹಳೇನಗರದ ಶ್ರೀ ಹಳದಮ್ಮ ದೇವಿ ದೇವಸ್ಥಾನದಲ್ಲಿ ನಾಡಹಬ್ಬಕ್ಕೆ ಚಾಲನೆ ನೀಡಲಾಗುತ್ತಿತ್ತು. ನಗರಸಭೆ ವತಿಯಿಂದ ಕೆಲವು ವರ್ಷಗಳ ಹಿಂದೆ ಪಂಚ ಲೋಹದಿಂದ ಕೂಡಿದ ಶ್ರೀ ಚಾಮುಂಡೇಶ್ವರಿ ದೇವಿ ವಿಗ್ರಹ ಖರೀದಿಸಲಾಗಿದ್ದು, ದಸರಾ ಉತ್ಸವ ಮೆರವಣಿಗೆಯಲ್ಲಿ ಈ ವಿಗ್ರಹವನ್ನು ಬಳಸಲಾಗುತ್ತಿದೆ. ಇದಕ್ಕೂ ಮೊದಲು ಚಾಮುಂಡೇಶ್ವರಿ ವಿಗ್ರಹವನ್ನು ಬಾಡಿಗೆಗೆ ಪಡೆಯಲಾಗುತ್ತಿತ್ತು.
    ಪ್ರಮುಖ ವೃತ್ತಗಳಲ್ಲಿ ಮಹಾದ್ವಾರ ನಿರ್ಮಾಣ :
    ೧೦ ದಿನಗಳ ನಾಡಹಬ್ಬ ದಸರಾ ಆಚರಣೆ ಹಿನ್ನಲೆಯಲ್ಲಿ ನಗರದ ಅಂಬೇಡ್ಕರ್ ವೃತ್ತ, ಮಾಧವಚಾರ್ ವೃತ್ತ, ರಂಗಪ್ಪ ವೃತ್ತ ಸೇರಿದಂತೆ ಪ್ರಮುಖ ವೃತ್ತಗಳಲ್ಲಿ ಮಹಾದ್ವಾರಗಳನ್ನು ನಿರ್ಮಿಸಲಾಗಿದೆ.
    ರಂಗಪ್ಪ ವೃತ್ತದಲ್ಲಿ ಅಳವಡಿಸಲಾಗಿರುವ ಮಹಾದ್ವಾರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಂಸದ ಬಿ.ವೈ ರಾಘವೇಂದ್ರ ಹಾಗು ಶಾಸಕ ಬಿ.ಕೆ ಸಂಗಮೇಶ್ವರ್ ಅವರ ಬೃಹತ್ ಭಾವಚಿತ್ರಗಳು ರಾರಾಜಿಸುತ್ತಿವೆ.

Saturday, September 24, 2022

ಕಾಂಗ್ರೆಸ್ ಒಬಿಸಿ ನಗರ ಘಟಕದಿಂದ ಮಧು ಬಂಗಾರಪ್ಪಗೆ ಸ್ವಾಗತ

ಪ್ರದೇಶ ಕಾಂಗ್ರೆಸ್ ಸಮಿತಿ ಹಿಂದುಳಿದ(ಒಬಿಸಿ) ಘಟಕದ ನೂತನ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡಿರುವ ಮಾಜಿ ಶಾಸಕ ಮಧು ಬಂಗಾರಪ್ಪ ಅವರನ್ನು ಶನಿವಾರ ಭದ್ರಾವತಿನಗರದ ಬೈಪಾಸ್ ರಸ್ತೆ ಬಿಳಿಕಿ ವೃತ್ತದಲ್ಲಿ ಹಿಂದುಳಿದ ನಗರ ಘಟಕದ ಪ್ರಮುಖರು ಸ್ವಾಗತಿಸುವ ಮೂಲಕ ಅಭಿನಂದಿಸಿದರು.
    ಭದ್ರಾವತಿ, ಸೆ. ೨೪: ಪ್ರದೇಶ ಕಾಂಗ್ರೆಸ್ ಸಮಿತಿ ಹಿಂದುಳಿದ(ಒಬಿಸಿ) ಘಟಕದ ನೂತನ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡಿರುವ ಮಾಜಿ ಶಾಸಕ ಮಧು ಬಂಗಾರಪ್ಪ ಅವರನ್ನು ಶನಿವಾರ ನಗರದ ಬೈಪಾಸ್ ರಸ್ತೆ ಬಿಳಿಕಿ ವೃತ್ತದಲ್ಲಿ ಹಿಂದುಳಿದ ನಗರ ಘಟಕದ ಪ್ರಮುಖರು ಸ್ವಾಗತಿಸುವ ಮೂಲಕ ಅಭಿನಂದಿಸಿದರು.
    ಹಿಂದುಳಿದ ನಗರ ಘಟಕದ ಅಧ್ಯಕ್ಷ ಬಿ. ಗಂಗಾಧರ್ ನೇತೃತ್ವದಲ್ಲಿ ಮಧು ಬಂಗಾರಪ್ಪ ಅವರನ್ನು ಅಭಿನಂದಿಸಿ ಸನ್ಮಾನಿಸಲಾಯಿತು. ಉಪಾಧ್ಯಕ್ಷ ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಜಗದೀಶ್, ಕಾರ್ಯದರ್ಶಿ ಸತೀಶ್, ಜಿಲ್ಲಾ ಕಾರ್ಯದರ್ಶಿ ಕೃಷ್ಣರಾಜ್, ಯುವ ಕಾಂಗ್ರೆಸ್ ವಕ್ತಾರ ಅಮೋಸ್, ನ್ಯಾಯವಾದಿ ಬಸವರಾಜ್, ತಾಲೂಕು ಮಡಿವಾಳ ಸಮಾಜದ ಉಪಾಧ್ಯಕ್ಷ ಮಂಜಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.