Friday, November 11, 2022

ಕನಕದಾಸರ ವಿಚಾರಧಾರೆಗಳು ನಿತ್ಯನಿರಂತವಾಗಲಿ : ಬಿ.ಕೆ ಸಂಗಮೇಶ್ವರ್

ಭದ್ರಾವತಿಯಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿವತಿಯಿಂದ ನಡೆದ ಕನಕಜಯಂತಿ ಹಾಗೂ ಒನಕೆ ಓಬವ್ವ ಜಯತ್ಯೋಂತ್ಸವ ಶಾಸಕ ಬಿ.ಕೆ.ಸಂಗಮೇಶ್ವರ್ ಉದ್ಘಾಟಿಸಿದರು.
    ಭದ್ರಾವತಿ, ನ. ೧೧ ; ದಾಸ ಶ್ರೇಷ್ಠ ಕನಕದಾಸರ ವಿಚಾರಧಾರೆಗಳು ಕೇವಲ ಒಂದು ದಿನಕ್ಕೆ ಸೀಮಿತವಾಗಬಾರದು. ನಿತ್ಯನಿರಂತರವಾದಾಗ ಮಾತ್ರ ಆವರ ಜನ್ಮದಿನಾಚರಣೆ ಸಾರ್ಥಕಗೊಳ್ಳುತ್ತದೆ ಎಂದು ಶಾಸಕ ಬಿ.ಕೆ ಸಂಗಮೇಶ್ವರ್ ಹೇಳಿದರು.
    ಅವರು ಶುಕ್ರವಾರ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ತಾಲೂಕು ಕುರುಬರ ಸಮಾಜ ಮತ್ತು ಛಲವಾದಿ ಸಮಾಜದ ವತಿಯಿಂದ ತಾಲೂಕು ಪಂಚಾಯತಿ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ದಾಸ ಶ್ರೇಷ್ಠ ಕನಕದಾಸ ಜಯಂತಿ ಹಾಗೂ ಒನಕೆ ಓಬವ್ವ ಜಯಂತ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ಕನಕದಾಸರು ಕೇವಲ ಒಂದು ಕುಲಕ್ಕೆ ಸೀಮಿತರಾದವರಲ್ಲ ಇಡೀ ಮಾನವಕುಲಕ್ಕೆ ಸೀಮಿತರಾದವರು. ಅವರ ತತ್ವ, ಆದರ್ಶಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಇಂತಹ ದಾರ್ಶನಿಕರ ಜಯಂತಿಗೆ ಅರ್ಥ ಬರುತ್ತದೆ. ಸಮಾಜದಲ್ಲಿ ಜಾತೀಯತೆ, ಅಸೂಯೆ ಭಾವನೆಗಳು ಹೋಗಲಾಡಿಸಿ ಸಹೋದರತ್ವ ಸಹಬಾಳ್ವೆಗಳನ್ನು ಬೆಳಸಿಕೊಳ್ಳಬೇಕೆಂದರು.
  ಪ್ರತಿಯೊಬ್ಬರೂ ತಮ್ಮ ಬದುಕಿನಲ್ಲಿ ಆತ್ಮಸ್ಥೈರ್ಯ ಬೆಳೆಸಿಕೊಳ್ಳಬೇಕು. ವೀರವನಿತೆ ಒನಕೆ ಓಬವ್ವ ಅವರು ಈ ನಾಡಿಗೆ ಕೊಟ್ಟಂತಹ ಕೊಡುಗೆ ಅಪಾರವಾಗಿದೆ. ಅವರು ನಾಡಿನ ರಕ್ಷಣೆಯಲ್ಲಿ ತೋರಿದ ಹೋರಾಟದ ಗುಣಗಳು, ಆದರ್ಶತನಗಳು ಎಲ್ಲರಿಗೂ ಮಾದರಿಯಾಗಿದೆ ಎಂದರು.  
    ತಾಲೂಕು ಕುರುಬರ ಸಂಘದ ಅಧ್ಯಕ್ಷ ಬಿ.ಎಂ ಸಂತೋಷ್ ಮಾತನಾಡಿ, ಕನಕದಾಸರಂತೆ ಬೆಂಗಳೂರು ನಿರ್ಮಾತೃ ಕೆಂಪೇಗೌಡರು ಸಹ ಈ ನಾಡಿನ ಅಭಿವೃದ್ದಿಗೆ ಶ್ರಮಿಸಿದವರು. ಕನಕದಾಸರ ಜಯಂತಿಯಂದು ಅವರ ಪ್ರತಿಮೆ ಅನಾವರಣಗೊಳ್ಳುತ್ತಿರುವುದು ಈ ನಾಡಿನ ಜನರ ಹೆಮ್ಮೆಯ ಸಂಗತಿಯಾಗಿದೆ.  ಕನಕದಾಸರು ಮತ್ತು ಒನಕೆ ಓಬವ್ವ ಜಯಂತ್ಯೋತ್ಸವ ಈ ಬಾರಿ ಒಟ್ಟಿಗೆ ಆಚರಣೆ ಮಾಡುತ್ತಿರುವುದು ಅರ್ಥ ಪೂರ್ಣವಾಗಿದ್ದು, ಈ ಇಬ್ಬರು ಮಹಾನ್ ವ್ಯಕ್ತಿಗಳ ಆದರ್ಶ ಗುಣಗಳನ್ನು ಮೈಗೂಡಿಸಿಕೊಂಡಾಗ ಬದುಕು ಸಾರ್ಥಕವಾಗುತ್ತದೆ ಎಂದರು.
    ಛಲವಾಧಿ ಸಮಾಜದ ಅಧ್ಯಕ್ಷ ಸುರೇಶ್ ಮಾತನಾಡಿ, ಸರ್ಕಾರ ಈ ಬಾರಿ ಒನಕೆ ಓಬವ್ವ ಜಯಂತ್ಯೋತ್ಸವ ಆಚರಣೆ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಆದರೆ ಒನಕೆ ಓಬವ್ವ ಅವರನ್ನು ಒಂದು ಜಾತಿಗೆ ಸೀಮಿತಗೊಳಿಸುವ ಹುನ್ನಾರ ಮಾಡಬಾರದು. ರಾಜಪ್ರಭುತ್ವವನ್ನು ಉಳಿಸಿಕೊಳ್ಳಲು ಹೋರಾಟ ಮಾಡಿದ ಓಬವ್ವರಂತೆ ಪ್ರಜಾಪ್ರಭುತ್ವ ವಿರೋಧಿ ಶಕ್ತಿಗಳನ್ನು ಮಟ್ಟ ಹಾಕಲು ಛಲವಾಧಿ ಸಮಾಜದಿಂದ ಹೋರಾಟ ಮಾಡಲಾಗುವುದು ಎಂದರು.
    ಉಪನ್ಯಾಸ ನೀಡಿದ ಹೊಸಮನೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಜಿ ಧನಂಜಯ ಮಾತನಾಡಿ, ಹಿಂದುಳಿದ ಶೋಷಿತ ಸಮುದಾಯದಲ್ಲಿ ಜನಿಸಿದ ಕನಕದಾಸರು,  ಜಾತಿ ಅಂಧಕಾರ, ಮೌಡ್ಯತೆಯಿಂದ ತುಂಬಿದ ಅಂದಿನ ಸಮಾಜದಲ್ಲಿ ತಮ್ಮದೇ ವಿಚಾರಧಾರೆಗಳ ಮೂಲಕ ದಾಸರಲ್ಲಿಯೇ ಅಗ್ರಗಣ್ಯ ಸ್ಥಾನದಲ್ಲಿ ಗುರುತಿಸಿಕೊಳ್ಳುವ ಜೊತೆಗೆ ಸಮಾಜ ಸುಧಾರಣೆಗಾಗಿ ಶ್ರಮಿಸಿದವರು. ಕನ್ನಡ ಭಾಷೆ, ಸಾಹಿತ್ಯಕ್ಕೆ ಅವರ ಕೊಡುಗೆ ಅಪಾರವಾಗಿದೆ. ಕನಕದಾಸರ ವಿಚಾರಧಾರೆಗಳು ಸರ್ವಕಾಲಿಕವಾಗಿದ್ದು, ಇವರ ಕುರಿತ ವಿಚಾರಧಾರೆಗಳನ್ನು ಪ್ರತಿಯೊಬ್ಬರು ತಿಳಿದುಕೊಳ್ಳಬೇಕೆಂದರು
    ತಹಸೀಲ್ದಾರ್ ಆರ್. ಪ್ರದೀಪ್, ಗ್ರೇಡ್-೨ ತಹಸೀಲ್ದಾರ್ ರಂಗಮ್ಮ, ನಗರಸಭೆ ಪೌರಾಯುಕ್ತ ಮನುಕುಮಾರ್, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ. ಸಿದ್ದಬಸಪ್ಪ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಮೇಶ್, ನಗರಸಭಾ ಸದಸ್ಯರಾದ ಶಶಿಕಲಾ, ಕಾಂತರಾಜ್, ಮಂಜುಳಾ, ಆರ್. ಶ್ರೇಯಸ್(ಚಿಟ್ಟೆ), ತಾಲೂಕು ಕುರುಬ ಸಮಾಜದ ನಿರ್ದೇಶಕರಾದ ಬಿ.ಎಸ್ ನಾರಾಯಣಪ್ಪ, ಹೇಮಾವತಿ, ಮಂಜುನಾಥ್(ಕೊಯ್ಲಿ), ಕೆ. ಕೇಶವ, ಪ್ರವೀಣ್, ಜಿ. ವಿನೋದ್ ಕುಮಾರ್, ನಾಗರಾಜ್, ಸಣ್ಣಯ್ಯ, ಬಿ.ಎಚ್ ವಸಂತ, ಬಿ.ಎ ರಾಜೇಶ್, ಜೆ. ಕುಮಾರ್, ಛಲವಾದಿ ಸಮಾಜದ ಹಿರಿಯ ಮುಖಂಡ ಎನ್. ಶ್ರೀನಿವಾಸ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ಸಂಗೊಳ್ಳಿ ರಾಯಣ್ಣ ಯುವ ಪಡೆ ಅಧ್ಯಕ್ಷ ಅಭಿಲಾಷ್ ನಿರೂಪಿಸಿದರು. ಉಪತಹಸೀಲ್ದಾರ್ ಮಂಜಾನಾಯ್ಕ ಸ್ವಾಗತಿಸಿದರು. ನಗರದ ಗಾಯಕ ಸುಬ್ರಮಣ್ಯ ಅವರ ಕಂಠದಲ್ಲಿ ಕನಕದಾಸರ ಕೀರ್ತನೆಗಳ ಧ್ವನಿ ಸುರಳಿ ಬಿಡುಗಡೆಗೊಳಿಸಲಾಯಿತು. ತಾಲೂಕು ಕುರುಬರ ಸಂಘ ಹಾಗು ಕನಕ ವಿದ್ಯಾಸಂಸ್ಥೆಗೆ ಸಂಗೊಳ್ಳಿ ರಾಯಣ್ಣನವರ ಭಾವಚಿತ್ರ ದಾನಿಗಳಿಂದ ಕೊಡುಗೆಯಾಗಿ ನೀಡಲಾಯಿತು.

ಕನಕ ಜಯಂತಿ : ಭವ್ಯ ಮೆರವಣಿಗೆ

ಭದ್ರಾವತಿ: ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಶುಕ್ರವಾರ  ದಾಸ ಶ್ರೇಷ್ಠ  ಕನಕದಾಸರ ಮತ್ತು ವೀರವನಿತೆ ಓನಕೆ ಓಬವ್ವ ಜಯಂತೋತ್ಸವ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಭವ್ಯ ಮೆರವಣಿಗೆ ಸಂಗಮೇಶ್ವರ್ ಚಾಲನೆ ನೀಡಿದರು.
  ನಗರದ ಬಿ.ಎಚ್ ರಸ್ತೆ ಲೋಯರ್ ಹುತ್ತಾದಿಂದ ಆರಂಭಗೊಂಡ ಮೆರವಣಿಗೆ ಅಂಬೇಡ್ಕರ್‌ ವೃತ್ತ, ಹಾಲಪ್ಪ ವೃತ್ತ, ಮಾಧವಚಾರ್ ವೃತ್ತ ಮತ್ತು ರಂಗಪ್ಪ ವೃತ್ತ ಮೂಲಕ ತಾಲೂಕು ಕಛೇರಿ ತಲುಪಿತು. 
     ತಹಸೀಲ್ದಾರ್ ಆರ್ ಪ್ರದೀಪ್,  ತಾಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ರಮೇಶ್,  ನಗರಸಭೆ ಅಧ್ಯಕ್ಷ ಅನುಸುಧಾ ಮೋಹನ್ ಪಳನಿ, ಉಪಾಧ್ಯಕ್ಷ ಚನ್ನಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ ಸುದೀಪ್ ಕುಮಾರ್,  ಪೌರಾಯುಕ್ತ ಮನುಕುಮಾರ್ ಹಾಗು ಸದಸ್ಯರು, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ  ಅಧ್ಯಕ್ಷ  ಬಿ. ಸಿದ್ದಬಸಪ್ಪ, ತಾಲೂಕು ಕುರುಬ ಸಮಾಜ, ಸಂಗೊಳ್ಳಿ ರಾಯಣ್ಣ ಯುವ ಪಡೆ, ಕನಕ ಯುವ ಪಡೆ, ಕನಕ ಪತ್ತಿನ ಸಹಕಾರ ನಿಯಮಿತ, ಛಲವಾದಿ ಮಹಾಸಭಾ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಪಾಲ್ಗೊಂಡಿದ್ದರು.

Thursday, November 10, 2022

ಕನಕದಾಸರ ಜಯಂತಿ : ಹಾಲು, ಹಣ್ಣು, ಬ್ರೆಡ್ ವಿತರಣೆ



ಭದ್ರಾವತಿ, ನ. 10: ದಾಸ ಶ್ರೇಷ್ಠ ಕನಕದಾಸರ ಜಯಂತಿ ಅಂಗವಾಗಿ ನ.11ರಂದು ಬೆಳಿಗ್ಗೆ 9 ಗಂಟೆಗೆ ಹಾಲು, ಹಣ್ಣು, ಬ್ರೆಡ್ ವಿತರಣೆ ನಡೆಯಲಿದೆ. ಹಳೇನಗರದ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಕನಕ ಯುವ ಪಡೆಯಿಂದ ಕಾರ್ಯಕ್ರಮ ಆಯೋಜಿಸಲಾಗಿದ್ದು, ಯಶಸ್ವಿಗೊಳಿಸುವಂತೆ ಕೋರಲಾಗಿದೆ.

ಕನಕ ಜಯಂತಿ : ಹಲವು ಕಾರ್ಯಕ್ರಮ

ಯಶಸ್ವಿಗೊಳಿಸಲು ವೈ. ನಟರಾಜ್ ಮನವಿ

ವೈ. ನಟರಾಜ್
    ಭದ್ರಾವತಿ, ನ. ೧೧: ಈ ಬಾರಿ ದಾಸ ಶ್ರೇಷ್ಠ ಕನಕದಾಸರ ಜಯಂತಿ ಕಾರ್ಯಕ್ರಮ ವಿಜೃಂಭಣೆಯಿಂದ ಆಚರಿಸಲಾಗುತ್ತಿದ್ದು, ಅಲ್ಲದೆ ಹಲವಾರು ಸೇವಾ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಕನಕ ಪತ್ತಿನ ಸಹಕಾರ ಸಂಘ ನಿಯಮಿತ ನಿರ್ದೇಶಕ ವೈ. ನಟರಾಜ್ ತಿಳಿಸಿದ್ದಾರೆ.
    ಅನ್ನಸಂತರ್ಪಣೆ, ಸಿಹಿ ಹಾಗು ಹಣ್ಣು ವಿತರಣೆ ಸೇರಿದಂತೆ ಇನ್ನಿತರ ಸೇವಾ ಕಾರ್ಯಗಳು ಜರುಗಲಿವೆ. ನಗರದ ವಿವಿಧೆಡೆ ವಿವಿಧ ಸಂಘ-ಸಂಸ್ಥೆಗಳಿಂದ ಹಲವಾರು ಕಾರ್ಯಕ್ರಮಗಳು ಜರುಗಲಿವೆ. ಅಲ್ಲದೆ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಕನಕದಾಸರ ಭಾವಚಿತ್ರದೊಂದಿಗೆ ಭವ್ಯ ಮೆರವಣಿಗೆ ನಡೆಯಲಿದ್ದು, ಎಲ್ಲಾ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸುವಂತೆ ಕೋರಿದ್ದಾರೆ.



ನಿಧಿ ರೂಪದ ಚಿನ್ನದ ನಾಣ್ಯ ಕಡಿಮೆ ಬೆಲೆಗೆ ಮಾರಾಟ ಮಾಡುವುದಾಗಿ ನಂಬಿಸಿ ಲಕ್ಷಾಂತರ ವಂಚನೆ


    ಭದ್ರಾವತಿ, ನ. ೧೧: ನಿಧಿ ರೂಪದಲ್ಲಿ ಸಿಕ್ಕಿರುವ ಚಿನ್ನದ ನಾಣ್ಯಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುವುದಾಗಿ ನಂಬಿಸಿ ಲಕ್ಷಾಂತರ ರು. ಪಡೆದು ವಂಚಿಸಿರುವ ಘಟನೆ ತಾಲೂಕಿನ ಹೊಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.
    ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಚಿಮುಡ ಗ್ರಾಮದ ನಿವಾಸಿ ಸದಾಶಿವಪ್ಪ ಮೇಸ್ತ್ರೀ ವಂಚನೆಗೆ ಒಳಗಾಗಿದ್ದು, ಈ ಸಂಬಂಧ ಕಳೆದ ೪ ದಿನಗಳ ಹಿಂದೆ ಪ್ರಕರಣ ದಾಖಲಾಗಿದೆ.  
    ಘಟನೆ ವಿವರ :  ಸದಾಶಿವಪ್ಪ ಮೇಸ್ತ್ರೀಯವರು ಕಳೆದ ೩ ತಿಂಗಳ ಹಿಂದೆ ಆಗಸ್ಟ್‌ನಲ್ಲಿ ಶ್ರೀಶೈಲಕ್ಕೆ ತೆರಳಿದ್ದಾಗ ಇವರ ಕಾರಿನ ಚಾಲಕ ಸೋಮಯ್ಯ ಹಿರೇಮಠರಿಗೆ ಶಿವಮೊಗ್ಗ ಜಿಲ್ಲೆಯವನು ಎಂದು ನಾಗರಾಜ್ ಎಂಬಾತ ಪರಿಚಯವಾಗಿದ್ದು, ಚಾಲಕನ ಮೂಲಕ ಪರಿಚಯವಾದ ನಾಗರಾಜ್ ಸದಾಶಿವಪ್ಪನವರ ಮೊಬೈಲ್ ನಂಬರ್ ಪಡೆದು ಸ್ನೇಹ ಸಂಪಾದಿಸಿದ್ದಾನೆ.
    ಹೀಗೆ ಒಂದು ವಾರದ ನಂತರ ಸದಾಶಿವಪ್ಪನವರ ಮೊಬೈಲ್‌ಗೆ ಕರೆ ಮಾಡಿದ ನಾಗರಾಜ್, ನಮ್ಮ ಅಜ್ಜಿಗೆ ೮ ಕೆ.ಜಿ. ನಿಧಿಯ ರೂಪದಲ್ಲಿ ಚಿನ್ನ ನಾಣ್ಯಗಳು ಸಿಕ್ಕಿವೆ. ಇದನ್ನು ನಿಮಗೆ ಕೊಡಬೇಕೆಂದು ಕನಸು ಬಿದ್ದಿದೆ. ಇಷ್ಟುದೊಡ್ಡ ಪ್ರಮಾಣದ ಚಿನ್ನದ ನಾಣ್ಯಗಳನ್ನು ಕೇವಲ ೨೦ ಲಕ್ಷಕ್ಕೆ ಕೊಡುತ್ತೇವೆ ನೀವು ಖರೀದಿಸಲೇಬೇಕೆಂದು ನಂಬಿಸಿದ್ದಾನೆ.
    ಚಿನ್ನವನ್ನು ಎಲ್ಲಿ ಬೇಕಾದರು ತಪಾಸಣೆ ನಡೆಸಿ ಪರಿಶೀಲಿಸಿ ನಂತರ ನಮಗೆ ಹಣ ಕೊಡಿ ಎಂದಿದ್ದು, ಇದಕ್ಕೆ ಒಪ್ಪಿದ ಸದಾಶಿವಪ್ಪ ತಾಲೂಕಿನ ದಾನವಾಡಿ ಗ್ರಾಮಕ್ಕೆ ಬಂದಿದ್ದಾರೆ. ಈ ಸಂದರ್ಭದಲ್ಲಿ ನಾಗರಾಜ್ ಸದಾಶಿವಪ್ಪನ ಪತ್ನಿ ಮತ್ತು ಚಾಲಕನಿಗೆ ಎರಡು ಚಿನ್ನದ ನಾಣ್ಯಗಳನ್ನು ನೀಡಿ ಪರಿಶೀಲಿಸಲು ತಿಳಿಸಿದ್ದಾನೆ. ಚಿನ್ನದ ನಾಣ್ಯ ಅಸಲಿ ಎಂದು ತಿಳಿದುಬಂದಿದೆ.
    ಈ ಹಿನ್ನಲೆಯಲ್ಲಿ ಸದಾಶಿವಪ್ಪ ತನ್ನ ಜಮೀನನ್ನು ಮಾರಾಟ ಮಾಡಿ ೨೦ ಲಕ್ಷ ರು. ಹಣ ಹೊಂದಿಸಿಕೊಂಡು ಬಂದಿದ್ದು,  ನಾಗರಾಜ್ ಹಣ ಪಡೆದು ಕೇವಲ ೪-೫ ಚಿನ್ನದ ನಾಣ್ಯಗಳನ್ನು ನೀಡಿ ಉಳಿದ ಚಿನ್ನ ನಾಣ್ಯ ತಂದುಕೊಡುವುದಾಗಿ ಹೇಳಿ ಪರಾರಿಯಾಗಿದ್ದಾನೆ ಎನ್ನಲಾಗಿದೆ.

Wednesday, November 9, 2022

ಪರಿಸರದ ಬಗ್ಗೆ ಅಭಿಮಾನ ಬೆಳೆಸಿಕೊಂಡಾಗ ಸ್ವಚ್ಛತೆ ತಾನಾಗಿಯೇ ಮೂಡಲಿದೆ : ಆಶಾ ಭಟ್



ಭದ್ರಾವತಿ, ನ. 10: ನಗರದ ಸ್ವಚ್ಛತೆಯಲ್ಲಿ ಪ್ರತಿಯೊಬ್ಬರ ಪಾತ್ರ ಬಹಳ ಮುಖ್ಯವಾಗಿದ್ದು, ನಮ್ಮ ಸುತ್ತಮುತ್ತಲ ಪರಿಸರದ ಮೇಲೆ ಅಭಿಮಾನ ಬೆಳೆಸಿ ಕೊಂಡಾಗ ಮಾತ್ರ ಸ್ವಚ್ಛತೆಯ ಅರಿವು ಸಹ ತಾನಾಗಿಯೇ ಬರಲಿದೆ ಎಂದು ನಗರಸಭೆ ಸ್ವಚ್ಛತಾ ರಾಯಭಾರಿ, ಚಲನಚಿತ್ರ ನಟಿ ಆಶಾ ಭಟ್ ಹೇಳಿದರು.
ಅವರು ಗುರುವಾರ ನಗರಸಭೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಸಾರ್ವಜನಿಕ ಸ್ಥಳಗಳಲ್ಲಿ ಕಂಡ ಕಂಡಲ್ಲಿ ಕಸ ಎಸೆಯುವುದು, ಮಲಿನಗೊಳಿಸುವುದು ಸೇರಿದಂತೆ ಪರಿಸರಕ್ಕೆ ಧಕ್ಕೆ ತರುವಂತಹ ಕೆಲಸಗಳನ್ನು ಮಾಡಬಾರದು. ನಮ್ಮ ಮನೆಯನ್ನು ಯಾವ ರೀತಿ ಸ್ವಚ್ಛವಾಗಿಟ್ಟುಕೊಳ್ಳುತ್ತೇವೆಯೋ, ಅದೇ ರೀತಿ ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸಹ ಸ್ವಚ್ಛವಾಗಿಟ್ಟುಕೊಳ್ಳಬೇಕೆಂದರು. ನಮ್ಮ ಪರಿಸರದ ಸ್ವಚ್ಛತೆಯಲ್ಲಿ  ಪ್ರಮುಖ ಪಾತ್ರ ವಹಿಸಿರುವ ಪೌರ ಕಾರ್ಮಿಕರಿಗೆ ನಾವೆಲ್ಲರೂ ಮೊದಲು ಗೌರವ ನೀಡಬೇಕು. ಸ್ವಚ್ಛತೆ ಎಂಬುದು ಒಂದು ದಿನಕ್ಕೆ ಸೀಮಿತ ಅಲ್ಲ ಅದು ನಮ್ಮ ಬದುಕಿನುದ್ದಕ್ಕೂ ಸಾಗಬೇಕು ಎಂದರು. 
 ಪ್ರಾಸ್ತಾವಿಕವಾಗಿ ಮಾತನಾಡಿದ ಪೌರಾಯುಕ್ತ ಮನು ಕುಮಾರ್, ಸ್ವಚ್ಛತೆಯಲ್ಲಿ ಪೌರಕಾರ್ಮಿಕರ ಶ್ರಮ ಹೆಚ್ಚಿನದಾಗಿದೆ. ಸಾರ್ವಜನಿಕರು ಕಸ ವಿಲೇವಾರಿಯಲ್ಲಿ ಹೆಚ್ಚಿನ ಸಹಕಾರ ನೀಡಬೇಕು. ಮನೆಯಲ್ಲಿಯೇ ಕಸವನ್ನು ಬೇರ್ಪಡಿಸಬೇಕು.  ಸಾಧ್ಯವಾದಷ್ಟು ಮರುಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನಿಸಬೇಕು. ಸ್ವಚ್ಛತೆಯಲ್ಲಿ ನಗರಸಭೆ ಉನ್ನತ ಮಟ್ಟ ತಲುಪಬೇಕು. ಈ ನಿಟ್ಟಿನಲ್ಲಿ  ಸಾರ್ವಜನಿಕರು  ಸಹಕಾರ ನೀಡಬೇಕೆಂದು ಮನವಿ ಮಾಡಿದರು. 
ನಗರಸಭೆ ಹಿರಿಯ ಸದಸ್ಯ ಬಿ.ಕೆ ಮೋಹನ್ ಉಪಾಧ್ಯಕ್ಷ ಚನ್ನಪ್ಪ ಸೇರಿದಂತೆ ಇನ್ನಿತರರು ಮಾತನಾಡಿದರು. 
ನಗರಸಭೆ ಅಧ್ಯಕ್ಷ ಅನುಸುಧಾ ಮೋಹನ್ ಪಳನಿ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ ಸುದೀಪ್ ಕುಮಾರ್ ಸದಸ್ಯರಾದ ಅನುಪಮ ಚೆನ್ನೇಶ್ ಲತಾ ಚಂದ್ರಶೇಖರ್ ಜಾರ್ಜ್ ಆರ್ ಮೋಹನ್ ಕುಮಾರ್ ಮಣಿ ಎಎನ್ಎಸ್, ಬಸವರಾಜ್, ಪೌರ ಸೇವಾ ನೌಕರರ ಸಂಘದ ಅಧ್ಯಕ್ಷ ಮಂಜುನಾಥ್, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಹಾಗೂ ಆಶಾ ಭಟ್ ಪೋಷಕರು ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಆಶಾ ಭಟ್ ಅವರನ್ನು ನಗರಸಭೆ ವತಿಯಿಂದ ಅಭಿನಂದಿಸಲಾಯಿತು. ಕಂದಾಯ ಅಧಿಕಾರಿ ರಾಜಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಪರಿಸರ ಅಭಿಯಂತರ ಪ್ರಭಾಕರ್ ಸ್ವಾಗತಿಸಿದರು. ವಿವಿಧ ಸಂಘ ಸಂಸ್ಥೆಗಳ ಪ್ರಮುಖರು, ನಗರಸಭೆ ಅಧಿಕಾರಿಗಳು, ಸಿಬ್ಬಂದಿಗಳು, ಪೌರಕಾರ್ಮಿಕರು, ವಿವಿಧ ಶಾಲೆಗಳ ಮಕ್ಕಳು ಅಭಿಯಾನದಲ್ಲಿ ಭಾಗವಹಿಸಿದ್ದರು.

ನ.10ರಂದು ನಗರಸಭೆ ವತಿಯಿಂದ ಸ್ವಚ್ಛತಾ ಅಭಿಯಾನ

ಭದ್ರಾವತಿ: ನಗರಸಭೆ ವತಿಯಿಂದ ನ.10ರಂದು ಬೆಳಗ್ಗೆ 11 ಗಂಟೆಗೆ ಸ್ವಚ್ಛತಾ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನಗರಸಭೆ ಅಧ್ಯಕ್ಷೆ ಅನುಸುಧಾ ಮೋಹನ್ ಪಳನಿರವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಅಭಿಯಾನಕ್ಕೆ ಚಲನಚಿತ್ರ ನಟಿ, ನಗರ ಸಭೆ ಸ್ವಚ್ಛತಾ ರಾಯಭಾರಿ ಆಶಾ ಭಟ್ ಉದ್ಘಾಟಿಸುವರು.
ಅಭಿಯಾನ ನಗರದ ಬಿ.ಹೆಚ್ ರಸ್ತೆ ಅಂಡರ್ ಬ್ರಿಡ್ಜ್ ಬಳಿ ಡಾ.ಬಿ.ಆರ್ ಅಂಬೇಡ್ಕರ್ ವೃತ್ತದಿಂದ ಆರಂಭಗೊಳ್ಳಲಿದೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಅಭಿಯಾನ ಯಶಸ್ವಿಗೊಳಿಸುವಂತೆ ಪೌರಾಯುಕ್ತ  ಮನು ಕುಮಾರ್ ಕೋರಿದ್ದಾರೆ.