Wednesday, April 5, 2023

ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಪಥ ಸಂಚಲನ


ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬುಧವಾರ ಭದ್ರಾವತಿ ನಗರದ ಪ್ರಮುಖ ರಸ್ತೆಗಳಲ್ಲಿ ಪೊಲೀಸ್ ಉಪ ವಿಭಾಗ ಹಾಗು ಸಿಆರ್‌ಪಿಎಫ್ ವತಿಯಿಂದ ಪಥ ಸಂಚಲನ (ರೂಟ್ ಮಾರ್ಚ್) ನಡೆಸಲಾಯಿತು. 
    ಭದ್ರಾವತಿ, ಏ. ೫ : ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬುಧವಾರ ನಗರದ ಪ್ರಮುಖ ರಸ್ತೆಗಳಲ್ಲಿ ಪೊಲೀಸ್ ಉಪ ವಿಭಾಗ ಹಾಗು ಸಿಆರ್‌ಪಿಎಫ್ ವತಿಯಿಂದ ಪಥ ಸಂಚಲನ (ರೂಟ್ ಮಾರ್ಚ್) ನಡೆಸಲಾಯಿತು.
    ಉಪ ವಿಭಾಗದ ಉಪಾಧೀಕ್ಷಕ ಜಿತೇಂದ್ರ ಕುಮಾರ್ ದಯಾಮ ಮತ್ತು ಸಿಆರ್‌ಪಿಎಫ್ ಅಸಿಸ್ಟೆಂಟ್ ಕಮಾಂಡೆಂಟ್ ಶಿವಾರೆಡ್ಡಿ ನೇತೃತ್ವದಲ್ಲಿ ನಗರದ ರಂಗಪ್ಪ ವೃತ್ತದಿಂದ ಆರಂಭಗೊಂಡ ಪಥ ಸಂಚಲನ ಮಾಧವಾಚಾರ್ ವೃತ್ತ, ತರೀಕೆರೆ ರಸ್ತೆಯ ಗಾಂಧಿ ವೃತ್ತ, ಓಎಸ್‌ಎಂ ರಸ್ತೆ ಮುಖಾಂತರ ಹೊಸಮನೆ ಶಿವಾಜಿ ವೃತ್ತದವರೆಗೂ ನಡೆಯಿತು


    ನಗರ ಪೊಲೀಸ್ ವೃತ್ತ ನಿರೀಕ್ಷಕ ಶಾಂತಿನಾಥ್, ವಿವಿಧ ಪೊಲೀಸ್ ಠಾಣೆಗಳ ಠಾಣಾಧಿಕಾರಿಗಳು,  ಸಿಆರ್‌ಪಿಎಫ್(ಕೇಂದ್ರ ಮೀಸಲು ಪೊಲೀಸ್ ಪಡೆ)ಅಧಿಕಾರಿ ಮತ್ತು ಸಿಬ್ಬಂಧಿಗಳು ಪಥ ಸಂಚಲನದಲ್ಲಿ ಪಾಲ್ಗೊಂಡಿದ್ದರು.

ವಿಕಲಚೇತನರಿಂದ ಮತದಾನ ಜಾಗೃತಿ ಜಾಥಾ

 ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಬುಧವಾರ ಭದ್ರಾವತಿಯಲ್ಲಿ ವಿಕಲಚೇತನರಿಂದ ಮತದಾನ ಜಾಗೃತಿ ಜಾಥಾ ನಗರದ ರಂಗಪ್ಪ ವೃತ್ತದಿಂದ ತಾಲೂಕು ಪಂಚಾಯಿತಿವರೆಗೂ ನಡೆಸಲಾಯಿತು.  
    ಭದ್ರಾವತಿ, ಏ. ೫ : ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಬುಧವಾರ ವಿಕಲಚೇತನರಿಂದ ಮತದಾನ ಜಾಗೃತಿ ಜಾಥಾ ನಗರದ ರಂಗಪ್ಪ ವೃತ್ತದಿಂದ ತಾಲೂಕು ಪಂಚಾಯಿತಿವರೆಗೂ ನಡೆಸಲಾಯಿತು.
    ಭಾರತ ಚುನಾವಣಾ ಆಯೋಗ, ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ವಿಕಲಚೇತನರ ಹಾಗು ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಹಾಗು ವಿಆರ್‌ಡಬ್ಲ್ಯೂ ಮತ್ತು ಎಂಆರ್‌ಡಬ್ಲ್ಯೂ, ಜಿಲ್ಲೆಯ ಎಲ್ಲಾ ಸ್ವಯಂ ಸೇವಾ ಸಂಘ-ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿತ್ತು.
    ತಹಸೀಲ್ದಾರ್ ಸುರೇಶ್ ಆಚಾರ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಮೇಶ್ ಸೇರಿದಂತೆ ಇನ್ನಿತರರು ಜಾಥಾದಲ್ಲಿ ಪಾಲ್ಗೊಂಡಿದ್ದರು.

ಗಾಂಜಾ ಮಾರಾಟದಲ್ಲಿ ತೊಡಗಿದ್ದ ವ್ಯಕ್ತಿ ಬಂಧನ : ೧೫೦ ಗ್ರಾಮ ಗಾಂಜಾ ವಶ

    ಭದ್ರಾವತಿ, ಏ. ೫ : ಗಾಂಜಾ ಮಾದಕ ವಸ್ತು ಮಾರಾಟದಲ್ಲಿ ತೊಡಗಿದ್ದ ವ್ಯಕ್ತಿಯೋರ್ವನನ್ನು ಬಂಧಿಸಿ ಸುಮಾರು ೬ ಸಾವಿರ ರು. ಮೌಲ್ಯದ ಒಟ್ಟು ೧೫೦ ಗ್ರಾಂ. ಒಣ ಗಾಂಜಾ ಹಾಗು ೫೩೦ ರು. ನಗದು ವಶಪಡಿಸಿಕೊಂಡಿರುವ ಘಟನೆ ನಡೆದಿದೆ.
    ಸತ್ಯಸಾಯಿ ನಗರದ ನಿವಾಸಿ ಮುತ್ಯಾನ್ ಸಾಬ್ ಅಲಿಯಾಸ್ ಮುಕ್ತುಂ ಸಾಬ್(೬೬) ಬಂಧಿತ ವ್ಯಕ್ತಿಯಾಗಿದ್ದು, ಈತ ಮಂಗಳವಾರ ಮಧ್ಯಾಹ್ನ ಸತ್ಯಸಾಯಿ ನಗರದ ನೀರಿನ ಟ್ಯಾಂಕ್ ಹತ್ತಿರ ಗಾಂಜಾ ಮಾದಕ ವಸ್ತು ಮಾರಾಟದಲ್ಲಿ ತೊಡಗಿದ್ದಾಗ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಬಂಧಿಸಲಾಗಿದೆ.
  ಪೊಲೀಸ್ ಉಪಾಧೀಕ್ಷಕ ಜಿತೇಂದ್ರ ಕುಮಾರ್ ದಯಾಮ ಮಾರ್ಗದರ್ಶನದಲ್ಲಿ ಹೊಸಮನೆ ಶಿವಾಜಿ ಸರ್ಕಲ್ ಪೊಲೀಸ್ ಠಾಣೆಯ ಠಾಣಾಧಿಕಾರಿ ನಿಂಗಪ್ಪ ಕರಕಣ್ಣನವರ್ ನೇತೃತ್ವದ ಸಿಬ್ಬಂದಿಗಳನ್ನೊಳಗೊಂಡ ತಂಡ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿತ್ತು.
    ಈ ಸಂಬಂಧ ಬಂಧಿತ ಮುತ್ಯಾನ್ ಸಾಬ್ ಅಲಿಯಾಸ್ ಮುಕ್ತುಂ ಸಾಬ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗಿದೆ. 

ಡಾ. ಬಾಬು ಜಗಜೀವನ ರಾಂರವರ ೧೧೬ನೇ ಜಯಂತಿ

ಭದ್ರಾವತಿಯಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಬುಧವಾರ ಹಸಿರು ಕ್ರಾಂತಿ ಹರಿಕಾರ, ಮಾಜಿ ಉಪ ಪ್ರಧಾನಿ ಡಾ. ಬಾಬು ಜಗಜೀವನ ರಾಂರವರ ೧೧೬ನೇ ಜಯಂತಿ ಆಚರಿಸಲಾಯಿತು.
    ಭದ್ರಾವತಿ, ಏ. ೫ : ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಬುಧವಾರ ಹಸಿರು ಕ್ರಾಂತಿ ಹರಿಕಾರ, ಮಾಜಿ ಉಪ ಪ್ರಧಾನಿ ಡಾ. ಬಾಬು ಜಗಜೀವನ ರಾಂರವರ ೧೧೬ನೇ ಜಯಂತಿ ಆಚರಿಸಲಾಯಿತು.
    ಚುನಾವಣೆ ನೀತಿ ಸಂಹಿತೆ ಹಿನ್ನಲೆಯಲ್ಲಿ ತಹಸೀಲ್ದಾರ್ ಸುರೇಶ್ ಆಚಾರ್ ನೇತೃತ್ವದಲ್ಲಿ ಸರಳವಾಗಿ ಆಚರಿಸಲಾಯಿತು. ಡಾ. ಬಾಬು ಜಗಜೀವನ ರಾಂರವರ ಭಾವಚಿತ್ರಕ್ಕೆ ಪುಷ್ಪ ನಮನದೊಂದಿಗೆ ಗೌರವ ಸಲ್ಲಿಸಲಾಯಿತು.
    ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಮೇಶ್, ಸಮಾಜ ಕಲ್ಯಾಣ ನಿರ್ದೇಶಕ ಸಹಾಯಕ ನಿರ್ದೇಶಕ ಗೋಪಾಲಪ್ಪ ಹಾಗು ತಾಲೂಕು ಕಛೇರಿ ವಿವಿಧ ಶಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳು, ದಲಿತ ಸಂಘರ್ಷ ಸಮಿತಿ ಪ್ರಮುಖರು ಪಾಲ್ಗೊಂಡಿದ್ದರು.  

Tuesday, April 4, 2023

ಅತಂತ್ರದಲ್ಲಿ ವಿಐಎಸ್‌ಎಲ್ ಗುತ್ತಿಗೆ ಕಾರ್ಮಿಕರ ಹೋರಾಟ

ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರಿಗೆ ಮನವಿ

ಭದ್ರಾವತಿ ವಿಐಎಸ್‌ಎಲ್ ಗುತ್ತಿಗೆ ಕಾರ್ಮಿಕ ಸಂಘಟನೆಗಳ ಮುಖಂಡರು ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ, ರಾಜ್ಯಸಭಾ ಸದಸ್ಯರಾದ ಡಾ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿ ಮಾಡಿ ಕಾರ್ಖಾನೆ ಉಳಿಸುವಂತೆ ಮನವಿ ಮಾಡಿದ್ದಾರೆ.
    ಭದ್ರಾವತಿ, ಏ. ೫: ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಉಳಿವಿಗಾಗಿ ಹೋರಾಟ ಮುಂದುವರೆದಿದ್ದು, ಗುತ್ತಿಗೆ ಕಾರ್ಮಿಕರ ಅನಿರ್ಧಿಷ್ಟಾವಧಿ ಹೋರಾಟ ಈಗಾಗಲೇ ೭೫ ದಿನಗಳನ್ನು ಪೂರೈಸಿದೆ. ಈ ಹಿಂದೆ ಮಾ.೩೧ರಿಂದ ಕಾರ್ಖಾನೆಯಲ್ಲಿ ಉತ್ಪಾದನೆ ಸ್ಥಗಿತಗೊಳ್ಳಲಿದೆ ಎಂಬ ಸುದ್ದಿ ವ್ಯಾಪಕವಾಗಿ ಹರಿದಾಡುತ್ತಿತ್ತು. ಆದರೆ ಈ ಕುರಿತು ಆಡಳಿತ ಮಂಡಳಿ ಇದುವರೆಗೂ ಯಾವುದೇ ಸ್ಪಷ್ಟನೆ ನೀಡಿಲ್ಲ. ಈ ನಡುವೆ ಗುತ್ತಿಗೆ ಕಾರ್ಮಿಕರು ಅತಂತ್ರದಲ್ಲಿ ಹೋರಾಟ ಮುಂದುವರೆಸುವಂತಾಗಿದೆ.
    ಒಂದೆಡೆ ರಾಜ್ಯ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಈಗಾಗಲೇ ಚುನಾವಣಾ ನೀತಿ ಸಂಹಿತೆ ಜಾರಿಯಾಗಿದ್ದು, ಇದರಿಂದಾಗಿ ಹೋರಾಟಕ್ಕೆ ಬೆಂಬಲ ನೀಡುವವರು ಮೌನಕ್ಕೆ ಒಳಗಾಗುವಂತಾಗಿದೆ. ಮತ್ತೊಂದೆಡೆ ಕೇಂದ್ರ ಸರ್ಕಾರಕ್ಕೆ ಅಥವಾ ಆಡಳಿತ ಮಂಡಳಿಗೆ ಕಾರ್ಖಾನೆ ಕುರಿತು ಸೂಕ್ತ ನಿರ್ಧಾರ ಕೈಗೊಂಡು ಪ್ರಕಟಿಸಲು ಸಹ  ಸಾಧ್ಯವಾಗುತ್ತಿಲ್ಲ. ಈ ಹಿನ್ನಲೆಯಲ್ಲಿ ಚುನಾವಣೆ ಪ್ರಕ್ರಿಯೆ ಮುಕ್ತಾಯಗೊಳ್ಳುವವರೆಗೂ ಗುತ್ತಿಗೆ ಕಾರ್ಮಿಕರು ತಮ್ಮ ಮುಂದಿನ ಹೋರಾಟ ಕುರಿತು ಯಾವುದೇ ನಿರ್ಧಾರ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಒಟ್ಟಾರೆ ಅತಂತ್ರ ಸ್ಥಿತಿ ಎದುರಾಗಿದ್ದು, ಸಂಕಷ್ಟದಲ್ಲಿಯೇ ಗುತ್ತಿಗೆ ಕಾರ್ಮಿಕರು ತಮ್ಮ ಹೋರಾಟ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ.
    ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರಿಗೆ ಮನವಿ :
    ಗುತ್ತಿಗೆ ಕಾರ್ಮಿಕ ಸಂಘಟನೆಗಳ ಮುಖಂಡರು ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ, ರಾಜ್ಯಸಭಾ ಸದಸ್ಯರಾದ ಡಾ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿ ಮಾಡಿ ಕಾರ್ಖಾನೆ ಉಳಿಸುವಂತೆ ಮನವಿ ಮಾಡಿದ್ದಾರೆ.
    ಮನವಿಗೆ ಸ್ಪಂದಿಸಿರುವ ಡಾ. ವೀರೇಂದ್ರ ಹೆಗ್ಗಡೆಯವರು ಪೂರಕವಾಗಿ ಸ್ಪಂದಿಸಿದ್ದಾರೆ. ಸಿಐಟಿಯು ಉಪಾಧ್ಯಕ್ಷ ಮಂಜುನಾಥ್, ಕಾರ್ಯದರ್ಶಿ ವಿನಯ್ ಕುಮಾರ್, ಅವಿನಾಶ್, ಎಐಟಿಯುಸಿ ಅಧ್ಯಕ್ಷ ಕುಮಾರ ಸ್ವಾಮಿ, ಶಿವನಾಗು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಲೋಕಾಯುಕ್ತ ಡಿವೈಎಸ್ಪಿ ಹೆಸರಿನಲ್ಲಿ ಹಣದ ಬೇಡಿಕೆಯೊಂದಿಗೆ ಕಿರುಕುಳ

ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪೊಲೀಸರಿಗೆ ದೂರು


    ಭದ್ರಾವತಿ, ಏ. ೪ : ಅಕ್ರಮದಲ್ಲಿ ಭಾಗಿಯಾಗಿರುವ ಬಗ್ಗೆ ಇಲಾಖೆಗೆ ನಿಮ್ಮ ವಿರುದ್ಧ ದೂರು ಬಂದಿದ್ದು, ನಿಮ್ಮನ್ನು ಪ್ರಕರಣದಿಂದ ಪಾರು ಮಾಡಲು ಹಣ ನೀಡುವಂತೆ ವ್ಯಕ್ತಿಯೋರ್ವ ಶಿಶು ಅಭಿವೃದ್ಧಿ ಯೋಜನಾಧಿಕಾರಿ(ಸಿಡಿಪಿಓ)ಗೆ ಕರೆ ಮಾಡಿ ಮಾನಸಿಕವಾಗಿ ಕಿರುಕುಳ ನೀಡಿದ್ದಾನೆ. ಈ ಹಿನ್ನಲೆಯಲ್ಲಿ ಹಳೇನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
    ವ್ಯಕ್ತಿಯೋರ್ವ ನಾನು ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕ ಎಂದು ಹೇಳಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸುರೇಶ್‌ರವರಿಗೆ ಮೊಬೈಲ್ ಮೂಲಕ ಕರೆ ಮಾಡಿದ್ದು, ಅಂಗನವಾಡಿ ಆಹಾರ ವಿತರಣೆಯಲ್ಲಿ ಹಗರಣ ನಡೆದಿರುವ ಬಗ್ಗೆ ನಿಮ್ಮ ವಿರುದ್ಧ ದೂರು ಬಂದಿದೆ. ಈ ಹಿನ್ನಲೆಯಲ್ಲಿ ಇಲಾಖೆ ವಿಚಾರಣಾಧಿಕಾರಿಗಳು ಬೆಂಗಳೂರಿನಿಂದ ಬರುತ್ತಿದ್ದಾರೆ.  ನಿಮ್ಮನ್ನು ಪಾರು ಮಾಡಲು ೧.೨೦ ಲಕ್ಷ ರು. ಹಣ ನೀಡುವಂತೆ ಬೇಡಿಕೆ ಇಟ್ಟಿದ್ದಾನೆ.
    ನಿರಂತರವಾಗಿ ಕರೆ ಮಾಡಿ ಮಾನಸಿಕವಾಗಿ ಕಿರುಕುಳ ನೀಡಿದ್ದು, ಇದರಿಂದ ಅನುಮಾನಗೊಂಡ ಸುರೇಶ್‌ರವರು ಕರೆ ಮಾಡಿರುವ ವ್ಯಕ್ತಿ ಕುರಿತು ಮಾಹಿತಿ ತಿಳಿದುಕೊಂಡಿದ್ದಾರೆ. ಆತ ನಕಲಿ ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕ ಎಂಬುದು ತಿಳಿದು ಬಂದಿದೆ. ಈ ಹಿನ್ನಲೆಯಲ್ಲಿ ಹಳೇನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.  

ಶಾಸಕ ಬಿ.ಕೆ ಸಂಗಮೇಶ್ವರ್ ಪ್ರಚಾರ ವಾಹನ ವಶಕ್ಕೆ

ನೀತಿ ಸಂಹಿತೆ ಉಲ್ಲಂಘನೆ ದೂರು ದಾಖಲು


ಭದ್ರಾವತಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶಾಸಕ ಬಿ.ಕೆ ಸಂಗಮೇಶ್ವರ್ ಪರವಾಗಿ ಪ್ರಚಾರ ನಡೆಸುತ್ತಿದ್ದ ವಾಹನ ಚುನಾವಣಾ ಫ್ಲೈಯಿಂಗ್ ಸ್ಕ್ವಾಡ್ ತಂಡ ವಶಕ್ಕೆ ಪಡೆದಿರುವುದು.
    ಭದ್ರಾವತಿ, ಏ. ೪ : ಕಾಂಗ್ರೆಸ್ ಅಭ್ಯರ್ಥಿ ಶಾಸಕ ಬಿ.ಕೆ ಸಂಗಮೇಶ್ವರ್ ಪರವಾಗಿ ಪ್ರಚಾರ ನಡೆಸುತ್ತಿದ್ದ ವಾಹನ ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿರುವ ಘಟನೆ ನಡೆದಿದೆ.
    ಟಾಟಾ ಏಸ್ ವಾಹನದಲ್ಲಿ ಸಂಗಮೇಶ್ವರ್ ಪರವಾಗಿ ಪ್ರಚಾರ ನಡೆಸುತ್ತಿದ್ದು, ಚುನಾವಣಾ ಆಯೋಗದಿಂದ ಅನುಮತಿ ಪಡೆಯದೆ ಶಾಸಕರ ಭಾವಚಿತ್ರ, ಕಾಂಗ್ರೆಸ್ ಪಕ್ಷದ ಚಿಹ್ನೆ, ಬಾವುಟದೊಂದಿಗೆ ಹಾಗು ಎಲ್‌ಇಡಿ ಪರದೆ ಮೂಲಕ ಶಾಸಕರ ಸಾಧನೆಗಳ ಪ್ರದರ್ಶನ ಮಾಡುವ ಮೂಲಕ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಲಾಗಿದೆ ಎಂದು ವಾಹನವನ್ನು ವಶಕ್ಕೆ ಪಡೆದು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
    ಘಟನೆ ವಿವರ :
    ಶಾಸಕ ಬಿ.ಕೆ ಸಂಗಮೇಶ್ವರ್ ಪರವಾಗಿ ಕಳೆದ ಸುಮಾರು ೨ ತಿಂಗಳಿನಿಂದ ಕ್ಷೇತ್ರದಾದ್ಯಂತ ಟಾಟಾ ಏಸ್ ವಾಹನದಲ್ಲಿ ಶಾಸಕರ ಭಾವಚಿತ್ರ, ಕಾಂಗ್ರೆಸ್ ಪಕ್ಷದ ಚಿಹ್ನೆ, ಬಾವುಟದೊಂದಿಗೆ ಹಾಗು ಎಲ್‌ಇಡಿ ಪರದೆ ಮೂಲಕ ಶಾಸಕರ ಸಾಧನೆಗಳ ಪ್ರದರ್ಶನ ಮಾಡುವ ಮೂಲಕ ಪ್ರಚಾರ ನಡೆಸಲಾಗುತ್ತಿದ್ದು, ಸೋಮವಾರ ಸಂಜೆ ಚುನಾವಣಾ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿ ಗವಿರಂಗಪ್ಪ ನೇತೃತ್ವದ ತಂಡ ಈ ವಾಹನ ತಪಾಸಣೆ ನಡೆಸಿದಾಗ ಚುನಾವಣೆ ನೀತಿ ಸಂಹಿತೆ ಘೋಷಣೆಯಾದ ನಂತರ ಸಂಬಂಧಪಟ್ಟ ಅಧಿಕಾರಿಗಳಿಂದ ಅನುಮತಿ ಪಡೆಯದೆ ಪ್ರಚಾರ ಕಾರ್ಯ ಕೈಗೊಳ್ಳುತ್ತಿರುವುದು ಕಂಡು ಬಂದಿದೆ. ಈ ಹಿನ್ನಲೆಯಲ್ಲಿ ಚಾಲಕನನ್ನು ಬಂಧಿಸಿ ವಾಹನ ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.