Wednesday, April 12, 2023

ಆರ್‌ಎಸ್‌ಎಸ್‌ಎನ್ ಸೊಸೈಟಿ ಕಾರ್ಯದರ್ಶಿ ಕುಮಾರ್ ನಿಧನ

ಕುಮಾರ್ 
    ಭದ್ರಾವತಿ, ಏ. ೧೨ : ನಗರಸಭೆ ವ್ಯಾಪ್ತಿಯ ಹೊಸಸಿದ್ದಾಪುರ, ಉಜ್ಜನಿಪುರ ರೈತರ ಸಹಕಾರ ಸಂಘ ನಿಯಮಿತ (ಆರ್‌ಎಸ್‌ಎಸ್‌ಎನ್ ಸೊಸೈಟಿ) ಕಾರ್ಯದರ್ಶಿ ಕುಮಾರ್(೪೬) ನಿಧನ ಹೊಂದಿದರು.
    ಪತ್ನಿ, ಒಂದು ವರ್ಷದ ಗಂಡು ಮಗು ಇದ್ದು, ಸುಮಾರು ೩ ವರ್ಷಗಳ ಹಿಂದೆ ವಿವಾಹವಾಗಿದ್ದರು. ಸುಮಾರು ೧೫ ವರ್ಷಗಳಿಂದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಇವರ ಅಂತ್ಯಕ್ರಿಯೆ ತುರುವೇಕೆರೆ ತಾಲೂಕಿನ ಗೋಚಿಹಳ್ಳಿ ಗ್ರಾಮದಲ್ಲಿ ಬುಧವಾರ ನೆರವೇರಿತು.  
    ಇವರ ನಿಧನಕ್ಕೆ ಕರ್ನಾಟಕ ಸರ್ಕಾರಿ ಪಡಿತರ ವಿತರಕರ ಸಂಘದ ಜಿಲ್ಲಾಧ್ಯಕ್ಷ ಸಿದ್ದಲಿಂಗಯ್ಯ ಸೇರಿದಂತೆ ಇನ್ನಿತರರು ಸಂತಾಪ ಸೂಚಿಸಿದ್ದಾರೆ.  

ಮಂಜುಳಾ ಬಾಯಿ ನಿಧನ

ಮಂಜುಳಾ ಬಾಯಿ
    ಭದ್ರಾವತಿ, ಏ. ೧೨ : ಕಾಗದನಗರದ ನಿವಾಸಿ, ಕುಂಟೆ ಟೈಲರ‍್ಸ್‌ನ ದಿವಂಗತ ಕೆ.ಎಸ್ ಗುರುನಾಥರಾವ್ ಕುಂಟೆಯವರ ಧರ್ಮಪತ್ನಿ ಮಂಜುಳಾ ಬಾಯಿ(೭೬) ಬುಧವಾರ ಬೆಳಿಗ್ಗೆ ನಿಧನ ಹೊಂದಿದರು.
    ಇಬ್ಬರು ಪುತ್ರರು, ಇಬ್ಬರು ಪುತ್ರಿಯರು, ಅಳಿಯಂದಿರು, ಸೊಸೆಯಂದಿರು ಮೊಮ್ಮಕ್ಕಳನ್ನು ಇದ್ದರು. ಇವರ ಅಂತ್ಯಕ್ರಿಯೆ ಬುಳ್ಳಾಪುರ ಶಂಕ್ರಪ್ಪನಕಟ್ಟೆ ಸಮೀಪದ ಶ್ರೀ ಸತ್ಯಹರಿಶ್ಚಂದ್ರ ಹಿಂದೂ ರುದ್ರಭೂಮಿಯಲ್ಲಿ ಸಂಜೆ ನೆರವೇರಿತು.
    ಮಂಜುಳಾ ಬಾಯಿ ಹಿರಿಯ ಪತ್ರಕರ್ತ ಕೆ.ಎನ್ ರವೀಂದ್ರನಾಥ್(ಬ್ರದರ್)ರವರ ಚಿಕ್ಕಮ್ಮ. ಇವರ ನಿಧನಕ್ಕೆ ಭಾವಸಾರ ಕ್ಷತ್ರಿಯ ಕೋ-ಆಪರೇಟಿವ್ ಸೊಸೈಟಿ ಆಡಳಿತ ಮಂಡಳಿ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು ಸಂತಾಪ ಸೂಚಿಸಿವೆ.

ಅಪಘಾತದಲ್ಲಿ ದಿವ್ಯರಾಜ್ ನಿಧನ

ದಿವ್ಯರಾಜ್
    ಭದ್ರಾವತಿ, ಏ. ೧೨ : ನಗರದ ವೇಲೂರು ಶೆಡ್ ನಿವಾಸಿ, ವಿವಿಧ ಸಂಘಟನೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ದಿವ್ಯರಾಜ್(೩೭) ಮಂಗಳವಾರ ಶಿವಮೊಗ್ಗದಲ್ಲಿ ನಡೆದ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
    ಪತ್ನಿ, ಓರ್ವ ಪುತ್ರ ಇದ್ದರು. ಇವರ ಅಂತ್ಯಕ್ರಿಯೆ ಹುತ್ತಾಕಾಲೋನಿ ಹಿಂದೂ ರುದ್ರಭೂಮಿಯಲ್ಲಿ ಬುಧವಾರ ಸಂಜೆ ನೆರವೇರಿತು. ದಿವ್ಯರಾಜ್ ಜಯಕರ್ನಾಟಕ, ಕೇಸರಿ ಪಡೆ ಹಾಗು ಕನ್ನಡಪರ ಸಂಘಟನೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಇವರ ನಿಧನಕ್ಕೆ ಜಯಕರ್ನಾಟಕ, ಕೇಸಪಡೆ ಸೇರಿದಂತೆ ವಿವಿಧ ಸಂಘಟನೆಗಳು ಸಂತಪಾ ಸೂಚಿಸಿವೆ.

ಏ.೧೪ರಂದು ಶ್ರೀ ಅಂತರಘಟ್ಟಮ್ಮನವರ ರಥೋತ್ಸವ, ೧೬ರಂದು ಕುಸ್ತಿ ಪಂದ್ಯಾವಳಿ

ಭದ್ರಾವತಿ ಹಳೇನಗರದ ಉಪ್ಪಾರ ಬೀದಿ ಶ್ರೀ ಅಂತರಘಟ್ಟಮ್ಮನವರ ಜಾತ್ರಾ ಮಹೋತ್ಸವ ಅಂಗವಾಗಿ ಮಂಗಳವಾರ ಅಮ್ಮನವರಿಗೆ ವಿಶೇಷ ಅಲಂಕಾರ ಕೈಗೊಳ್ಳಲಾಗಿತ್ತು.
    ಭದ್ರಾವತಿ, ಏ. ೧೨: ಹಳೇನಗರದ ಉಪ್ಪಾರ ಬೀದಿ ಶ್ರೀ ಅಂತರಘಟ್ಟಮ್ಮನವರ ಜಾತ್ರಾ ಮಹೋತ್ಸವ ಏ.೧೬ರವರೆಗೆ ನಡೆಯಲಿದ್ದು, ಏ.೧೪ರಂದು ರಥೋತ್ಸವ ನಡೆಯಲಿದೆ.
    ಸಿದ್ದರ ಪೂಜೆ ಮತ್ತು ಧ್ವಜಾರೋಹಣದೊಂದಿಗೆ ಸೋಮವಾರದಿಂದ ಜಾತ್ರಾ ಮಹೋತ್ಸವ ಆರಂಭಗೊಂಡಿದ್ದು, ಮಂಗಳವಾರ ರಾತ್ರಿ ರಾಜಬೀದಿ ಉತ್ಸವ, ಬುಧವಾರ ಬೆಳಿಗ್ಗೆ ಗಂಗೆ ಪೂಜೆ ನಂತರ ಹಳೇನಗರದ ಕನಕಮಂಟಪ ಮೈದಾನದಲ್ಲಿ ಕೆಂಡಾರ್ಚನೆ ನಡೆಯಿತು.
    ಏ.೧೩ರ ಗುರುವಾರ ಮಧ್ಯಾಹ್ನ ೩ ಗಂಟೆಗೆ ಕುದುರೆ ವಾಹನದೊಂದಿಗೆ ರಾಜಬೀದಿ ಉತ್ಸವ, ೧೪ರಂದು ಸಂಜೆ ೫ ಗಂಟೆಗೆ ಶ್ರೀ ಅಂತರಘಟ್ಟಮ್ಮ ದೇವಿಯವರ ಧಾರೆ ಮಹೋತ್ಸವ ನಂತರ ರಥೋತ್ಸವ ಮತ್ತು ರಾತ್ರಿ ೮ಕ್ಕೆ ಪ್ರಸಾದ ವಿತರಣೆ ಹಾಗು ೧೫ರಂದು ಮಧ್ಯಾಹ್ನ ೧೨ ಗಂಟೆಗೆ ಓಕಳಿ ನಡೆಯಲಿದೆ.
    ಏ.೧೬ರಂದು ಕುಸ್ತಿ ಪಂದ್ಯಾವಳಿ :
    ಕುಸ್ತಿ ಪಂದ್ಯಾವಳಿ ಆಯೋಜಿಸುವುದು ಈ ಜಾತ್ರಾ ಮಹೋತ್ಸವದ ವಿಶೇಷತೆಗಳಲ್ಲಿ ಒಂದಾಗಿದ್ದು, ಏ.೧೬ ರಂದು ಬೆಳಿಗ್ಗೆ ೧೧ ರಿಂದ ಸಂಜೆ ೬ ಗಂಟೆವರೆಗೆ ಕನಕಮಂಟಪ ಮೈದಾನದಲ್ಲಿ ಕುಸ್ತಿ ಪಂದ್ಯಾವಳಿ ನಡೆಯಲಿದೆ. ಈ ಭಾಗದಲ್ಲಿ ಕುಸ್ತಿ ಫೈಲ್ವಾನ್‌ಗಳು ಹೆಚ್ಚಾಗಿದ್ದು, ಪಂದ್ಯಾವಳಿಯಲ್ಲಿ ಭಾಗವಹಿಸಿ ಉತ್ತಮ ಪ್ರದರ್ಶನ ನೀಡಲಿದ್ದಾರೆ.


ಭದ್ರಾವತಿ ಹಳೇನಗರದ ಉಪ್ಪಾರ ಬೀದಿ ಶ್ರೀ ಅಂತರಘಟ್ಟಮ್ಮನವರ ಜಾತ್ರಾ ಮಹೋತ್ಸವ ಅಂಗವಾಗಿ ಮಂಗಳವಾರ ರಾತ್ರಿ ಜರುಗಿದ ರಾಜಬೀದಿ ಉತ್ಸವ ಹಾಗು ಇನ್ನಿತರ ಧಾರ್ಮಿಕ ಆಚರಣೆಗಳಲ್ಲಿ ಸುತ್ತಮುತ್ತಲ ಪ್ರದೇಶಗಳ ಭಕ್ತರು ಪಾಲ್ಗೊಂಡಿದ್ದರು.

ಮನೆ ಕಳ್ಳತನ : ಓರ್ವ ಮಹಿಳೆ ಸೆರೆ

ಬೆಳ್ಳಿ, ಚಿನ್ನಾಭರಣ ಇನ್ನಿತರ ವಸ್ತುಗಳು ವಶ

ಭದ್ರಾವತಿ ತಾಲೂಕಿನ ಕುಮರಿ ನಾರಾಯಣಪುರ ಗ್ರಾಮದ ಮನೆಯೊಂದರಲ್ಲಿ ಕಳ್ಳತನ ಮಾಡಿದ್ದ ಮಹಿಳೆಯೋರ್ವಳನ್ನು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿ ಬೆಳ್ಳಿ, ಚಿನ್ನಾಭರಣ ಸೇರಿದಂತೆ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಂಡಿರುವ ಘಟನೆ ನಡೆದಿದೆ.
    ಭದ್ರಾವತಿ, ಏ. ೧೨: ತಾಲೂಕಿನ ಕುಮರಿ ನಾರಾಯಣಪುರ ಗ್ರಾಮದ ಮನೆಯೊಂದರಲ್ಲಿ ಕಳ್ಳತನ ಮಾಡಿದ್ದ ಮಹಿಳೆಯೋರ್ವಳನ್ನು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿ ಬೆಳ್ಳಿ, ಚಿನ್ನಾಭರಣ ಸೇರಿದಂತೆ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಂಡಿರುವ ಘಟನೆ ನಡೆದಿದೆ.
    ಕುಮರಿ ನಾರಾಯಣಪುರದ ನಿವಾಸಿ ರಂಜಿತಾ(೨೪) ಬಂಧಿತ ಮಹಿಳೆಯಾಗಿದ್ದು, ಈಕೆಯಿಂದ ಒಟ್ಟು ಸುಮಾರು ೪೩ ಸಾವಿರ ರು ಮೌಲ್ಯದ ಬೆಳ್ಳಿ, ಚಿನ್ನಾಭರಣ, ೧ ರೆಫ್ರಿಜರೇಟರ್, ೧ ಬೀರು(ಅಲ್ಮೆರಾ) ಮತ್ತು ೧ ಕುಕ್ಕರ್ ವಶಪಡಿಸಿಕೊಳ್ಳಲಾಗಿದೆ.
    ಗ್ರಾಮದ ನಿವಾಸಿ ಹನುಮಂತಪ್ಪ ಎಂಬುವರು ಮಾ.೧೬ರಂದು ಮನೆಗೆ ಬೀಗ ಹಾಕಿಕೊಂಡು ಪತ್ನಿಯೊಂದಿಗೆ ಕೂಲಿ ಕೆಲಸಕ್ಕೆ ಹೋಗಿದ್ದು, ಸಂಜೆ ಮನೆಗೆ ಬಂದಾಗ ಮನೆಯ ಬೀಗ ಮುರಿದು ಬೀರುವಿನದ್ದ ನಗದು, ಆಭರಣ ಕಳ್ಳತನ ಮಾಡಿಕೊಂಡು ಹೋಗಿರುವುದು ಕಂಡು ಬಂದಿದೆ. ಈ ಸಂಬಂಧ ಪೊಲೀಸರಿಗೆ ದೂರು ನೀಡಲಾಗಿತ್ತು.
    ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಅನಿಲ್‌ಕುಮಾರ್ ಭೂಮರೆಡ್ಡಿ ಮತ್ತು ಹಿರಿಯ ಸಹಾಯಕ ಪೊಲೀಸ್ ಅಧೀಕ್ಷಕ ಜಿತೇಂದ್ರಕುಮಾರ್ ದಯಾಮರವರ ಮಾರ್ಗದರ್ಶನದಲ್ಲಿ ಗ್ರಾಮಾಂತರ ಠಾಣೆ ಪಿ.ಐ ಜಿ. ರಮೇಶ್, ಪಿಎಸ್‌ಐ ಶ್ರೀಶೈಲ ಕೆಂಚಣ್ಣನವರ, ಜಯಪ್ಪ ನೇತೃತ್ವದಲ್ಲಿ ಸಿಬ್ಬಂದಿಗಳಾದ ನಾಗರಾಜ್, ಶಿವಪ್ಪ, ಈರಯ್ಯ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ ಮಿಥುನ್‌ಕುಮಾರ್ ಪ್ರಶಂಸಿದ್ದಾರೆ.

Tuesday, April 11, 2023

ಕೊನೆಗೂ ಸಾಮಾನ್ಯ ಕಾರ್ಯಕರ್ತನಿಗೆ ಅವಕಾಶ : ಮಂಗೋಟೆ ರುದ್ರೇಶ್ ಬಿಜೆಪಿ ಅಭ್ಯರ್ಥಿ

ಮಂಗೋಟೆ ರುದ್ರೇಶ್
    ಭದ್ರಾವತಿ, ಏ. ೧೧ : ಈ ಬಾರಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಸ್ಥಳೀಯರಿಗೆ ಅದರಲ್ಲೂ ಪಕ್ಷದ ಸಾಮಾನ್ಯ ಕಾರ್ಯಕರ್ತರಿಗೆ ಅವಕಾಶ ನೀಡಬೇಕೆಂಬ ಮನವಿಗೆ ಬಿಜೆಪಿ ಪಕ್ಷ ಪೂರಕವಾಗಿ ಸ್ಪಂದಿಸಿದ್ದು, ಯುವ ಮುಖಂಡ ಮಂಗೋಟೆ ರುದ್ರೇಶ್ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದಾರೆ.
    ವಿದ್ಯಾರ್ಥಿ ಪರಿಷತ್ ಮೂಲಕ ಬಿಜೆಪಿ ಪಕ್ಷದಲ್ಲಿ ಸಕ್ರಿಯ ಕಾರ್ಯಕರ್ತನಾಗಿ ಪ್ರವೇಶಿಸುವ ಮೂಲಕ ಪಕ್ಷದ ವಿವಿಧ ಹುದ್ದೆಗಳನ್ನು ಯಶಸ್ವಿಯಾಗಿ ನಿಭಾಯಿಸಿರುವ ಮಂಗೋಟೆ ರುದ್ರೇಶ್ ಅಭ್ಯರ್ಥಿಯಾಗಿ ಆಯ್ಕೆಯಾಗಿರುವುದು ಎಲ್ಲರನ್ನು ಬೆರಗುಗೊಳಿಸಿದೆ.
    ರುದ್ರೇಶ್ ಮೂಲತಃ ವಕೀಲರಾಗಿದ್ದು, ಇವರ ತಂದೆ ಮಂಗೋಟೆ ಮುರುಗೆಪ್ಪ ಸಹ ಪ್ರಸಿದ್ದ ವಕೀಲರಾಗಿದ್ದರು. ಅಲ್ಲದೆ ತಾಲೂಕು ವಕೀಲರ ಸಂಘದ ಮೊದಲ ಅಧ್ಯಕ್ಷರಾಗಿದ್ದರು. ಸಮಾಜವಾದಿ ಸಿದ್ದಾಂತಗಳನ್ನು ಮೈಗೂಡಿಸಿಕೊಂಡು ಮಾಜಿ ಮುಖ್ಯಮಂತ್ರಿ ಜೆ.ಎಚ್ ಪಟೇಲ್ ಅವರೊಂದಿಗೆ ಗುರುತಿಸಿಕೊಂಡಿದ್ದರು.
    ಲಿಂಗಾಯತ ಸಮುದಾಯಕ್ಕೆ ಸೇರಿದ್ದು, ಸುಮಾರು ಒಂದು ವರ್ಷದ ಹಿಂದೆಯೇ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಸಂಸದ ರಾಘವೇಂದ್ರ ಸಹ ಈ ಬಾರಿ ಮಂಗೋಟೆ ರುದ್ರೇಶ್‌ಗೆ ಅವಕಾಶ ಸಿಗುವ ವಿಶ್ವಾಸ ವ್ಯಕ್ತಪಡಿಸಿದ್ದರು.
    ಈ ಬಾರಿ ಚುನಾವಣೆಗೆ ಸ್ಪರ್ಧಿಸಲು ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷೆ  ಪವಿತ್ರ ರಾಮಯ್ಯ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್. ಕುಮಾರ್, ಮುಖಂಡರಾದ ತೀರ್ಥಯ್ಯ, ಕೂಡ್ಲಿಗೆರೆ ಹಾಲೇಶ್, ಉದ್ಯಮಿ ಎಚ್.ಸಿ ರಮೇಶ್, ಬಿಜೆಪಿ ತಾಲೂಕು ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್ ಸೇರಿದಂತೆ ಇನ್ನಿತರರು ಪೈಪೋಟಿಗೆ ಮುಂದಾಗಿದ್ದರು.
    ಮಂಗೋಟೆ ರುದ್ರೇಶ್ ಸುಮಾರು ಒಂದು ವರ್ಷದಿಂದ ಕ್ಷೇತ್ರದಾದ್ಯಂತ ಪ್ರಚಾರ ಕೈಗೊಂಡಿದ್ದರು. ಅಲ್ಲದೆ ವಿಇಎಸ್ ವಿದ್ಯಾಸಂಸ್ಥೆ ಆವರಣದಲ್ಲಿ ಬೃಹತ್ ಉದ್ಯೋಗ ಮೇಳ ಆಯೋಜಿಸುವ ಮೂಲಕ ಗಮನ ಸೆಳೆದಿದ್ದರು.

ಏ.೧೬ರಂದು ತಾಲೂಕು ೧೦ನೇ ಕನ್ನಡ ಸಾಹಿತ್ಯ ಸಮ್ಮೇಳನ : ಡಿ. ಮಂಜುನಾಥ್

ಭದ್ರಾವತಿ ತಾಲೂಕು ೧೦ನೇ ಕನ್ನಡ ಸಾಹಿತ್ಯ ಸಮ್ಮೇಳನ ಏ.೧೬ರ ಭಾನುವಾರ ನ್ಯೂಟೌನ್ ಮಹಾತ್ಮಗಾಂಧಿ ಉದ್ಯಾನವನ ಮುಂಭಾಗದಲ್ಲಿರುವ ಶ್ರೀ ರಾಮ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ. ಮಂಜುನಾಥ್ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
    ಭದ್ರಾವತಿ, ಏ. ೧೧: ತಾಲೂಕು ೧೦ನೇ ಕನ್ನಡ ಸಾಹಿತ್ಯ ಸಮ್ಮೇಳನ ಏ.೧೬ರ ಭಾನುವಾರ ನ್ಯೂಟೌನ್ ಮಹಾತ್ಮಗಾಂಧಿ ಉದ್ಯಾನವನ ಮುಂಭಾಗದಲ್ಲಿರುವ ಶ್ರೀ ರಾಮ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ. ಮಂಜುನಾಥ್ ಹೇಳಿದರು.
    ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಮ್ಮೇಳನಾಧ್ಯಕ್ಷರಾಗಿ ತಾಲೂಕಿನ ಬಿಆರ್‌ಪಿ ನಿವಾಸಿ ಹಿರಿಯ ಸಾಹಿತಿ ಹೊಸಹಳ್ಳಿ ದಾಳೇಗೌಡರನ್ನು ಆಯ್ಕೆ ಮಾಡಲಾಗಿದೆ.  ಸಮ್ಮೇಳನ ಯಶಸ್ವಿಗೆ ಸ್ವಾಗತ ಸಮಿತಿ, ಹಣಕಾಸು ಸಮಿತಿ, ವೇದಿಕೆ ಸಮಿತಿ, ಮೆರವಣಿಗೆ ಸಮಿತಿ, ನೋಂದಣಿ ಸಮಿತಿ, ಪ್ರಚಾರ ಸಮಿತಿ, ಆಹಾರ ಸಮಿತಿ ಮತ್ತು ಸತ್ಕಾರ ಸಮಿತಿಗಳನ್ನು ರಚನೆ ಮಾಡಲಾಗಿದೆ.
    ಅಂದು ಬೆಳಿಗ್ಗೆ ೯ ಗಂಟೆಗೆ ಧ್ವಜಾರೋಹಣ ನಡೆಯಲಿದ್ದು, ೯.೩೦ಕ್ಕೆ ವಿವಿಧ ಸಾಂಸ್ಕೃತಿಕ ಕಲಾ ತಂಡಗಳೊಂದಿಗೆ ನಗರದ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದಿಂದ ನಾಡದೇವಿ ಭುವನೇಶ್ವರಿ ಹಾಗು ಸರ್ವಾಧ್ಯಕ್ಷರ ಮೆರವಣಿಗೆ ನಡೆಯಲಿದೆ. ನಗರಸಭೆ ಪೌರಾಯುಕ್ತ ಮನುಕುಮಾರ್ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ.
    ೧೦.೩೦ಕ್ಕೆ ವೇದಿಕೆ ಕಾರ್ಯಕ್ರಮ ನಡೆಯಲಿದ್ದು, ನಿಟ್ಟೂರು ಹಿರಿಯ ಸಾಹಿತಿ ಡಾ. ಶಾಂತರಾಮ್‌ಪ್ರಭು ಉದ್ಘಾಟಿಸಲಿದ್ದಾರೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ. ಮಂಜುನಾಥ್ ಆಶಯ ನುಡಿಗಳನ್ನಾಡಲಿದ್ದು, ಸಮ್ಮೇಳನಾಧ್ಯಕ್ಷ ಹೊಸಹಳ್ಳಿ ದಾಳೇಗೌಡ ಮತ್ತು ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಎ.ಪಿ ಕುಮಾರ್ ಉಪಸ್ಥಿತರಿರುವರು.
    ಕುವೆಂಪು ವಿಶ್ವವಿದ್ಯಾನಿಲಯ ಉಪಕುಲಪತಿ ಬಿ.ಪಿ ವೀರಭದ್ರಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ಲೋಕೋಪಯೋಗಿ ಇಲಾಖೆ ಅಭಿಯಂತರ ಬಿ.ಆರ್ ದಯಾನಂದ್, ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳ ರಾಜ್ಯ ಸಂಯೋಜಕ ಡಿ. ಪ್ರಭಾಕರ ಬೀರಯ್ಯ, ದಲಿತ ಸಂಘರ್ಷ ಸಮಿತಿ ರಾಜ್ಯ ಖಜಾಂಚಿ ಭದ್ರಾವತಿ ಸತ್ಯ, ಉದ್ಯಮಿ ಎ. ಮಾಧು, ಸಿದ್ದಾರ್ಥ ಅಂಧರ ಕೇಂದ್ರದ ಅಧ್ಯಕ್ಷ ಶಿವಬಸಪ್ಪ ಮತ್ತು ಪರಿಷತ್ ಹಿರಿಯೂರು ಹೋಬಳಿ ಘಟಕದ ಅಧ್ಯಕ್ಷ ಎಚ್.ಬಿ ಸಿದ್ದೋಜಿರಾವ್ ಸೇರಿದಂತೆ ಇನ್ನಿತರರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ದೇವರಹಳ್ಳಿ ಕಾ.ನಾ ರಂಗನಾಥ್‌ರವರ ಪುಸ್ತಕ ಬಿಡುಗಡೆಗೊಳ್ಳಲಿದೆ ಎಂದರು.
    ಭದ್ರಾವತಿಯ-ಬದುಕಿನ ತಲ್ಲಣಗಳು ವಿಚಾರ ಕುರಿತ ಗೋಷ್ಠಿ-೧, ಸಮ್ಮೇಳನಾಧ್ಯಕ್ಷರ ಬದುಕು ಬರಹ ಕುರಿತ ಗೋಷ್ಠಿ-೨ ಮತ್ತು ಕವಿಗೋಷ್ಠಿ ಗೋಷ್ಠಿ-೩ ನಡೆಯಲಿದೆ. ಸಂಜೆ ೫.೩೦ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಬೆಂಗಳೂರಿನ ಹಿರಿಯ ಕವಿ ಎಚ್. ದುಂಡಿರಾಜ್ ಸಮಾರೋಪ ನುಡಿಗಳನ್ನಾಡಲಿದ್ದಾರೆ. ತಾಲೂಕು ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಕೋಡ್ಲು ಯಜ್ಞಯ್ಯ ಅಧ್ಯಕ್ಷತೆ ವಹಿಸಲಿದ್ದು, ಸಮಾಜ ಸೇವಕ ಸಿ. ಮಹೇಶ್‌ಕುಮಾರ್, ವಕೀಲರ ಸಂಘದ ಅಧ್ಯಕ್ಷ ಕೆ.ಎನ್ ಶ್ರೀಹರ್ಷ, ಕೋಗಲೂರು ತಿಪ್ಪೇಸ್ವಾಮಿ, ನಗರಸಭೆ ಕಂದಾಯಾಧಿಕಾರಿ ಎಂ.ಎಸ್ ರಾಜ್‌ಕುಮಾರ್, ರಮೇಶ್, ಶಿವಕುಮಾರ್, ಕೆ.ಎಸ್ ರೇವಪ್ಪ ಮತ್ತು ಸಿ. ಜಯಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು.
    ಪತ್ರಿಕಾಗೋಷ್ಠಿಯಲ್ಲಿ ಸಮ್ಮೇಳನಾಧ್ಯಕ್ಷ ಹೊಸಹಳ್ಳಿ ದಾಳೇಗೌಡ, ಪ್ರಮುಖರಾದ ಕೋಡ್ಲು ಯಜ್ಞಯ್ಯ, ಎಚ್. ತಿಮ್ಮಪ್ಪ, ಎಂ.ಈ ಜಗದೀಶ್, ಎಂ.ಎಸ್ ಸುಧಾಮಣಿ, ಬಿ. ಕಮಲಾಕರ್, ಡಿ. ನಾಗೋಜಿರಾವ್, ಕೆ.ಎಸ್ ರೇವಪ್ಪ, ಬಿ.ಎಚ್ ಪ್ರಶಾಂತ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.