Thursday, April 13, 2023

ಅಭ್ಯರ್ಥಿ ಮಂಗೋಟೆ ರುದ್ರೇಶ್ ಗೆಲುವಿಗಾಗಿ ಪೂರ್ವ ಸಿದ್ದತೆ : ಮಂಡಲ ಬೂತ್ ಪ್ರಭಾರಿಗಳ ಸಭೆ

ಭದ್ರಾವತಿಯಲ್ಲಿ ಭಾರತೀಯ ಜನತಾ ಪಕ್ಷದ ತಾಲೂಕು ಮಂಡಲ ವತಿಯಿಂದ ಗುರುವಾರ ಪಕ್ಷದ ಕಛೇರಿಯಲ್ಲಿ ಬೂತ್ ಪ್ರಭಾರಿಗಳ ಸಭೆ ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.
    ಭದ್ರಾವತಿ, ಏ. ೧೩:  ಭಾರತೀಯ ಜನತಾ ಪಕ್ಷ ವಿಧಾನಸಭಾ ಚುನಾವಣೆಗೆ ಈಗಾಗಲೇ ಕ್ಷೇತ್ರದಲ್ಲಿ ನ್ಯಾಯವಾದಿ, ಯುವ ಮುಖಂಡ ಮಂಗೋಟೆ ರುದ್ರೇಶ್ ಅಭ್ಯರ್ಥಿಯನ್ನಾಗಿ ಘೋಷಿಸಿದ್ದು, ಪಕ್ಷದ ತಾಲೂಕು ಮಂಡಲ ರುದ್ರೇಶ್ ಗೆಲುವಿಗಾಗಿ ಪೂರ್ವ ಸಿದ್ದತೆಗಳನ್ನು ತ್ವರಿತಗತಿಯಲ್ಲಿ ಕೈಗೊಳ್ಳುತ್ತಿದೆ.
    ರುದ್ರೇಶ್‌ರವರ ಆಯ್ಕೆಗೆ ಸಂಬಂಧಿಸಿದಂತೆ ಇದುವರೆಗೂ ಕ್ಷೇತ್ರದಲ್ಲಿ ಯಾವುದೇ ಗೊಂದಲಗಳು ಕಂಡು ಬಂದಿಲ್ಲ. ಈ ಬಾರಿ ಚುನಾವಣೆಯಲ್ಲಿ ಎಲ್ಲರೂ ಸಹ ಒಗ್ಗಟ್ಟಿನಿಂದ ಗೆಲುವಿಗಾಗಿ ಶ್ರಮಿಸಲು ಮುಂದಾಗಿದ್ದಾರೆ. ಈ ಹಿನ್ನಲೆಯಲ್ಲಿ ಗುರುವಾರ ಬೂತ್ ಪ್ರಭಾರಿಗಳ ಸಭೆ ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.
    ಸಭೆ ಆರಂಭದಲ್ಲಿ ಅಭ್ಯರ್ಥಿ ರುದ್ರೇಶ್‌ರವರಿಗೆ ಶುಭಕೋರಲಾಯಿತು. ಚುನಾವಣಾ ಪ್ರಭಾರಿ ಅಶೋಕ್‌ಮೂರ್ತಿ, ರಾಜ್ಯ ಕಾರ್ಯಕಾರಿಣಿ ಸದಸ್ಯೆ ಆರ್.ಎಸ್ ಶೋಭಾ, ಮಂಡಲ ಕಾರ್ಯದರ್ಶಿ ಚನ್ನೇಶ್, ಕ್ಷೇತ್ರ ಚುನಾವಣಾ ಸಂಚಾಲಕ ಎಂ. ಮಂಜುನಾಥ್,   ಸಹ ಸಂಚಾಲಕ ಎಂ.ಎಸ್ ಸುರೇಶಪ್ಪ ಹಾಗೂ ಬೂತ್  ಪ್ರಭಾರಿಗಳು  ಹಾಗೂ ಪ್ರಮುಖ ಕಾರ್ಯಕರ್ತರು.ಸಭೆಯಲ್ಲಿ ಉಪಸ್ಥಿತರಿದ್ದರು.

ನೋಂದಣಿಗೆ ಕಾವೇರಿ ೨.೦ ಜಾಲತಾಣ ಹೆಚ್ಚಿನ ಸಹಕಾರಿ : ಗಿರೀಶ್ ಬಸ್ತನ್ ಗೌಡರ್

ನೋಂದಣಿ ಮತ್ತು ಮುದ್ರಾಂಕ ಇಲಾಖೆ ಭದ್ರಾವತಿ ಕಛೇರಿಯಲ್ಲಿ ಪತ್ರಬರಹಗಾರರಿಗೆ, ದಸ್ತಾವೇಜುಗಾರರಿಗೆ, ವಕೀಲರಿಗೆ ಮತ್ತು ಸೈಬರ್ ಸೆಂಟರ್‌ಗಳಲ್ಲಿ ಕಾರ್ಯನಿರ್ವಹಿಸುವವರಿಗೆ ಕಾವೇರಿ ೨.೦ ಜಾಲತಾಣ ನಿರ್ವಹಿಸುವ ಕುರಿತ ಮಾಹಿತಿ ಸಭೆ ನಡೆಯಿತು.
ಭದ್ರಾವತಿ ಏ ೧೩ :  ನೋಂದಣಿ ಮಾಡಿಸಲು ಬರುವವರಿಗೆ ಪ್ರಸ್ತುತ ಎದುರಾಗುತ್ತಿರುವ ಸಮಸ್ಯೆಗಳನ್ನು ಬಗೆಹರಿಸಿ ಹೆಚ್ಚಿನ ಅನುಕೂಲ ಕಲ್ಪಿಸಿಕೊಡುವ ಉದ್ದೇಶದಿಂದ ಸರ್ಕಾರ ಕಾವೇರಿ ೨.೦ ಎಂಬ ಜಾಲತಾಣ ಅರಂಭಿಸಿದೆ ಎಂದು ಜಿಲ್ಲಾ ನೋಂದಣಿ ಅಧಿಕಾರಿ ಮತ್ತು ಕಾವೇರಿ ೨.೦ ಜಾಲತಾಣದ ನೋಡಲ್ ಅಧಿಕಾರಿ ಗಿರೀಶ್ ಬಸ್ತನ್ ಗೌಡರ್ ತಿಳಿಸಿದರು.
    ನೋಂದಣಿ ಮತ್ತು ಮುದ್ರಾಂಕ ಇಲಾಖೆ ಕಛೇರಿಯಲ್ಲಿ ಪತ್ರಬರಹಗಾರರಿಗೆ, ದಸ್ತಾವೇಜುಗಾರರಿಗೆ, ವಕೀಲರಿಗೆ ಮತ್ತು ಸೈಬರ್ ಸೆಂಟರ್‌ಗಳಲ್ಲಿ ಕಾರ್ಯನಿರ್ವಹಿಸುವವರಿಗೆ ಕಾವೇರಿ ೨.೦ ಜಾಲತಾಣ ನಿರ್ವಹಿಸುವ ಕುರಿತ ಮಾಹಿತಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
       ಶಿವಮೊಗ್ಗ ಜಿಲ್ಲೆಯಲ್ಲಿ ಮೇ.೧೫ ರಿಂದ ಈ ಜಾಲತಾಣ ಪ್ರಾರಂಭಿಸಲಾಗುತ್ತಿದ್ದು, ಅದರಲ್ಲೂ ಭದ್ರಾವತಿಯನ್ನು ಪ್ರಥಮ ಹಂತವಾಗಿ ಅಯ್ಕೆ ಮಾಡಿಕೊಳ್ಳಲಾಗಿದೆ. ಪತ್ರ ಬರಹಗಾರರು ಇಂದಿನಿಂದಲೇ ಈ ಜಾಲತಾಣ ಬಳಸಿಕೊಂಡು ನೋಂದಣಿ ಕಾರ್ಯ ಆರಂಭಿಸಬಹುದು ಎಂದರು.


    ಈ ಹಿಂದೆ ಪತ್ರಗಳನ್ನು ನೋಂದಣಿ ಮಾಡಿಸಲು ಹೆಚ್ಚಿನ ಸಮಯ, ಶ್ರಮ ವ್ಯಯವಾಗುತ್ತಿತ್ತು. ಸಾಕ್ಷಿಗಳು ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಅಲ್ಲದೆ ಕಛೇರಿಯಲ್ಲಿ ಜನದಟ್ಟಣೆ ಅಧಿಕವಾಗುತ್ತಿತ್ತು. ಈ ಎಲ್ಲಾ ಸಮಸ್ಯೆಗಳನ್ನು ಮನಗಂಡು ಸರ್ಕಾರ ಕಾವೇರಿ ೧.೦  ಜಾಲತಾಣ ಜಾರಿಗೆ ತಂದಿತ್ತು, ಅದರಲ್ಲಿನ ಕೆಲ ನ್ಯೂನತೆ ಕಂಡು ಕಾವೇರಿ ೧.೦ನ್ನು ಸರಳೀಕರಿಸಿ ಕಾವೇರಿ ೨.೦ ಜಾರಿಗೆ ತರಲಾಗಿದೆ ಎಂದರು.    
    ಕಾವೇರಿ ೨.೦ ಜಾಲತಾಣದ ವಿವಿಧ ಹಂತಗಳ ಬಗ್ಗೆ ಸಾಗರದ ಉಪನೋಂದಣಾಧಿಕಾರಿ ಚೇತನ್‌ರಾಜ್ ಗುತ್ತಲ್ ಮಾಹಿತಿ ನೀಡಿದರು. ಈ ಜಾಲತಾಣದ ಮೂಲಕ ತಮ್ಮ ಸ್ವಂತ ಖಾತೆ ತೆರೆದು ನೋಂದಣಿ ಮಾಡಿಸಬಹುದು.  ಪತ್ರಬರಹಗಾರರು ಪ್ರಾಯೋಗಿಕ ಪ್ರಾತ್ಯಕ್ಷತೆ ಪಡೆಯುವ ಮೂಲಕ ಸಹಕರಿಸುವಂತೆ ಮನವಿ ಮಾಡಿದರು.  ಹಿರಿಯ ನೋಂದಣಾಧಿಕಾರಿ ಲಕ್ಷ್ಮೀಕಾಂತ ಉಪಸ್ಥಿತರಿದ್ದರು.

ಮನೆಯ ಅಂಗಳದಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನ ಕಳವು

    ಭದ್ರಾವತಿ, ಏ. ೧೩ : ಮನೆಯ ಅಂಗಳದಲ್ಲಿ ನಿಲ್ಲಿಸಲಾಗಿದ್ದ ಹೀರೋ ಸ್ಪ್ಲೆಂಡರ್ ಪ್ಲಸ್ ದ್ವಿಚಕ್ರ ವಾಹನ ಕಳುವಾಗಿರುವ ಘಟನೆ ತಾಲೂಕಿನ ಅರಳಿಹಳ್ಳಿ ಗ್ರಾಮದಲ್ಲಿ ನಡೆದಿದೆ.
    ಏ.೬ರಂದು ಮಧ್ಯ ರಾತ್ರಿ ಸುಮಾರು ೧ ಗಂಟೆ ಸಮಯದಲ್ಲಿ ದ್ವಿಚಕ್ರ ವಾಹನ ಮನೆಯ ಅಂಗಳದಲ್ಲಿ ನಿಲ್ಲಿಸಿದ್ದು, ಬೆಳಿಗ್ಗೆ ೬ ಗಂಟೆ ಸಮಯದಲ್ಲಿ ಎದ್ದು ನೋಡಿದಾಗ ಕಳುವಾಗಿರುವುದು ಕಂಡು ಬಂದಿದೆ. ಈ ಸಂಬಂಧ ಸಾಧಿಕ್ ಎಂಬುವರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಕ್ರಿಕೆಟ್ ಬೆಟ್ಟಿಂಗ್ ಜೂಜಾಟ : ಇಬ್ಬರ ವಿರುದ್ಧ ಪ್ರಕರಣ ದಾಖಲು

    ಭದ್ರಾವತಿ, ಏ. ೧೩:  ಐಪಿಎಲ್ ಟಿ-೨೦ ಕ್ರಿಕೆಟ್ ಬೆಟ್ಟಿಂಗ್ ಜೂಜಾಟ ಸಂಬಂಧ ಇಬ್ಬರ ವಿರುದ್ಧ ನ್ಯಾಯಾಲಯದ ಅನುಮತಿ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
    ಹೊಸಮನೆ ಶಿವಾಜಿ ಸರ್ಕಲ್ ಪೊಲೀಸ್ ಠಾಣೆ ಪೊಲೀಸರು ಏ.೧೧ರಂದು ಸಂಜೆ ೭ ಗಂಟೆ ಸಮಯದಲ್ಲಿ ಕೆ.ಎಚ್ ನಗರ ಬಸ್ ನಿಲ್ದಾಣದ ಸಾರ್ವಜನಿಕ ಸ್ಥಳದಲ್ಲಿ ಮದನ್ ಮತ್ತು ಉಮೇಶ್ ಎಂಬುವರು ಮೊಬೈಲ್ ಮೂಲಕ ಐಪಿಎಲ್ ಟಿ-೨೦ ಕ್ರಿಕೆಟ್ ಬೆಟ್ಟಿಂಗ್ ಜೂಜಾಟದಲ್ಲಿ ತೊಡಗಿರುವ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Wednesday, April 12, 2023

ಆರ್‌ಎಸ್‌ಎಸ್‌ಎನ್ ಸೊಸೈಟಿ ಕಾರ್ಯದರ್ಶಿ ಕುಮಾರ್ ನಿಧನ

ಕುಮಾರ್ 
    ಭದ್ರಾವತಿ, ಏ. ೧೨ : ನಗರಸಭೆ ವ್ಯಾಪ್ತಿಯ ಹೊಸಸಿದ್ದಾಪುರ, ಉಜ್ಜನಿಪುರ ರೈತರ ಸಹಕಾರ ಸಂಘ ನಿಯಮಿತ (ಆರ್‌ಎಸ್‌ಎಸ್‌ಎನ್ ಸೊಸೈಟಿ) ಕಾರ್ಯದರ್ಶಿ ಕುಮಾರ್(೪೬) ನಿಧನ ಹೊಂದಿದರು.
    ಪತ್ನಿ, ಒಂದು ವರ್ಷದ ಗಂಡು ಮಗು ಇದ್ದು, ಸುಮಾರು ೩ ವರ್ಷಗಳ ಹಿಂದೆ ವಿವಾಹವಾಗಿದ್ದರು. ಸುಮಾರು ೧೫ ವರ್ಷಗಳಿಂದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಇವರ ಅಂತ್ಯಕ್ರಿಯೆ ತುರುವೇಕೆರೆ ತಾಲೂಕಿನ ಗೋಚಿಹಳ್ಳಿ ಗ್ರಾಮದಲ್ಲಿ ಬುಧವಾರ ನೆರವೇರಿತು.  
    ಇವರ ನಿಧನಕ್ಕೆ ಕರ್ನಾಟಕ ಸರ್ಕಾರಿ ಪಡಿತರ ವಿತರಕರ ಸಂಘದ ಜಿಲ್ಲಾಧ್ಯಕ್ಷ ಸಿದ್ದಲಿಂಗಯ್ಯ ಸೇರಿದಂತೆ ಇನ್ನಿತರರು ಸಂತಾಪ ಸೂಚಿಸಿದ್ದಾರೆ.  

ಮಂಜುಳಾ ಬಾಯಿ ನಿಧನ

ಮಂಜುಳಾ ಬಾಯಿ
    ಭದ್ರಾವತಿ, ಏ. ೧೨ : ಕಾಗದನಗರದ ನಿವಾಸಿ, ಕುಂಟೆ ಟೈಲರ‍್ಸ್‌ನ ದಿವಂಗತ ಕೆ.ಎಸ್ ಗುರುನಾಥರಾವ್ ಕುಂಟೆಯವರ ಧರ್ಮಪತ್ನಿ ಮಂಜುಳಾ ಬಾಯಿ(೭೬) ಬುಧವಾರ ಬೆಳಿಗ್ಗೆ ನಿಧನ ಹೊಂದಿದರು.
    ಇಬ್ಬರು ಪುತ್ರರು, ಇಬ್ಬರು ಪುತ್ರಿಯರು, ಅಳಿಯಂದಿರು, ಸೊಸೆಯಂದಿರು ಮೊಮ್ಮಕ್ಕಳನ್ನು ಇದ್ದರು. ಇವರ ಅಂತ್ಯಕ್ರಿಯೆ ಬುಳ್ಳಾಪುರ ಶಂಕ್ರಪ್ಪನಕಟ್ಟೆ ಸಮೀಪದ ಶ್ರೀ ಸತ್ಯಹರಿಶ್ಚಂದ್ರ ಹಿಂದೂ ರುದ್ರಭೂಮಿಯಲ್ಲಿ ಸಂಜೆ ನೆರವೇರಿತು.
    ಮಂಜುಳಾ ಬಾಯಿ ಹಿರಿಯ ಪತ್ರಕರ್ತ ಕೆ.ಎನ್ ರವೀಂದ್ರನಾಥ್(ಬ್ರದರ್)ರವರ ಚಿಕ್ಕಮ್ಮ. ಇವರ ನಿಧನಕ್ಕೆ ಭಾವಸಾರ ಕ್ಷತ್ರಿಯ ಕೋ-ಆಪರೇಟಿವ್ ಸೊಸೈಟಿ ಆಡಳಿತ ಮಂಡಳಿ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು ಸಂತಾಪ ಸೂಚಿಸಿವೆ.

ಅಪಘಾತದಲ್ಲಿ ದಿವ್ಯರಾಜ್ ನಿಧನ

ದಿವ್ಯರಾಜ್
    ಭದ್ರಾವತಿ, ಏ. ೧೨ : ನಗರದ ವೇಲೂರು ಶೆಡ್ ನಿವಾಸಿ, ವಿವಿಧ ಸಂಘಟನೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ದಿವ್ಯರಾಜ್(೩೭) ಮಂಗಳವಾರ ಶಿವಮೊಗ್ಗದಲ್ಲಿ ನಡೆದ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
    ಪತ್ನಿ, ಓರ್ವ ಪುತ್ರ ಇದ್ದರು. ಇವರ ಅಂತ್ಯಕ್ರಿಯೆ ಹುತ್ತಾಕಾಲೋನಿ ಹಿಂದೂ ರುದ್ರಭೂಮಿಯಲ್ಲಿ ಬುಧವಾರ ಸಂಜೆ ನೆರವೇರಿತು. ದಿವ್ಯರಾಜ್ ಜಯಕರ್ನಾಟಕ, ಕೇಸರಿ ಪಡೆ ಹಾಗು ಕನ್ನಡಪರ ಸಂಘಟನೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಇವರ ನಿಧನಕ್ಕೆ ಜಯಕರ್ನಾಟಕ, ಕೇಸಪಡೆ ಸೇರಿದಂತೆ ವಿವಿಧ ಸಂಘಟನೆಗಳು ಸಂತಪಾ ಸೂಚಿಸಿವೆ.