Sunday, July 30, 2023

ಕ್ಷೇತ್ರದಲ್ಲಿ ಕಾಂಗ್ರೆಸ್‌ಸಂಘಟಿಸಿ ಮುಂಬರುವ ಚುನಾವಣೆಗಳಲ್ಲಿ ಉತ್ತಮ ಸಾಧನೆ

 ಬ್ಲಾಕ್‌ಕಾಂಗ್ರೆಸ್‌ನಗರದ ಘಟಕದ ನೂತನ ಅಧ್ಯಕ್ಷ ಎಸ್.  ಕುಮಾರ್‌

ಭದ್ರಾವತಿ ಬ್ಲಾಕ್‌ಕಾಂಗ್ರೆಸ್‌ನಗರ ಘಟಕದ ನೂತನ ಅಧ್ಯಕ್ಷರಾಗಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್. ಕುಮಾರ್ ನೇಮಕಗೊಂಡ ನಂತರ ಮೊದಲ ಬಾರಿಗೆ ಅವರು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಈ ಸಂದರ್ಭದಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಅಭಿನಂದಿಸಿದರು.  
    ಭದ್ರಾವತಿ, ಜು. ೩೦ : ಕ್ಷೇತ್ರದಲ್ಲಿ ಕಾಂಗ್ರೆಸ್‌ಪಕ್ಷವನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ಸಂಘಟಿಸುವ ಮೂಲಕ ಮುಂಬರುವ ಚುನಾವಣೆಗಳಲ್ಲಿ ಉತ್ತಮ ಸಾಧನೆ ಕಂಡುಕೊಳ್ಳಲಾಗುವುದು ಎಂದು ಬ್ಲಾಕ್‌ಕಾಂಗ್ರೆಸ್‌ನಗರ ಘಟಕದ ನೂತನ ಅಧ್ಯಕ್ಷ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್. ಕುಮಾರ್‌ವಿಶ್ವಾಸ ವ್ಯಕ್ತಪಡಿಸಿದರು.
    ಅಧ್ಯಕ್ಷರಾಗಿ ನೇಮಕಗೊಂಡ ನಂತರ ಮೊದಲ ಬಾರಿಗೆ ಅವರು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
    ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್‌ಪಕ್ಷದ ತತ್ವ, ಸಿದ್ದಾಂತಗಳನ್ನು ಮೆಚ್ಚಿ ಕಾಂಗ್ರೆಸ್‌ಪಕ್ಷಕ್ಕೆ ಸೇರ್ಪಡೆಗೊಂಡಿದ್ದು, ಚುನಾವಣೆಯಲ್ಲಿ ಉತ್ತಮ ಫಲಿತಾಂಶ ಲಭಿಸಿದೆ. ಇದೀಗ ಪಕ್ಷ ನನ್ನನ್ನು ನಗರ ಘಟಕದ ಅಧ್ಯಕ್ಷರನ್ನಾಗಿ ನೇಮಕಗೊಳಿಸಿದೆ. ನನಗೆ ನೀಡಿರುವ ಜವಾಬ್ದಾರಿಯನ್ನು ಉತ್ತಮವಾಗಿ ನಿಭಾಯಿಸುವ ವಿಶ್ವಾಸವಿದೆ ಎಂದರು.
    ಪಕ್ಷದ ಮುಖಂಡರು, ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಗರಸಭೆ ವ್ಯಾಪ್ತಿಯ ಎಲ್ಲಾ ೩೫ ವಾರ್ಡ್‌ಗಳಲ್ಲೂ ಪಕ್ಷವನ್ನು ಮತ್ತಷ್ಟು ಸಂಘಟಿಸಲಾಗುವುದು. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಮತಗಳು ಕಾಂಗ್ರೆಸ್‌ಪಕ್ಷಕ್ಕೆ ಲಭಿಸಲಿವೆ. ಈ ನಿಟ್ಟಿನಲ್ಲಿ ಈಗಾಗಲೇ ಕಾರ್ಯ ತಂತ್ರಗಳನ್ನು ರೂಪಿಸಿಕೊಳ್ಳಲಾಗಿದೆ. ಸರ್ಕಾರದ ಜನಪರ ಕಾರ್ಯಗಳನ್ನು ಜನಸಾಮಾನ್ಯರಿಗೆ ತಲುಪಿಸುವ ನಿಟ್ಟಿನಲ್ಲಿ ಹೆಚ್ಚಿನ ಗಮನ ಹರಿಸಲಾಗುವುದು. ಅಲ್ಲದೆ ಗ್ರಾಮಾಂತರ ಭಾಗದಲ್ಲೂ ಪಕ್ಷವನ್ನು ಹೆಚ್ಚಿನ ರೀತಿಯಲ್ಲಿ ಸಂಘಟಿಸುವ ಮೂಲಕ ಮುಂಬರುವ ತಾಲೂಕು ಹಾಗು ಜಿಲ್ಲಾ ಪಂಚಾಯಿತಿ ಚುನಾವಣೆಗಳಲ್ಲೂ ಉತ್ತಮ ಸಾಧನೆ ಕಂಡುಕೊಳ್ಳಲಾಗುವುದು ಎಂದರು.
    ನಗರದ ವಿಐಎಸ್‌ಎಲ್‌ಮತ್ತು ಎಂಪಿಎಂ ಕಾರ್ಖಾನೆಗಳ ಅಭಿವೃದ್ಧಿಗೆ ಪಕ್ಷ ಬದ್ಧವಾಗಿದ್ದು, ಈ ನಿಟ್ಟಿನಲ್ಲಿ ಪಕ್ಷ ಹೋರಾಟ ಮುಂದುವರೆಸಲಿದೆ ಎಂದರು.
    ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್‌ಕಾಂಗ್ರೆಸ್‌ಗ್ರಾಮಾಂತರ ಘಟಕದ ಅಧ್ಯಕ್ಷ ಎಚ್.ಎಲ್‌ಷಡಾಕ್ಷರಿ, ನಗರಸಭೆ ಅಧ್ಯಕ್ಷೆ ಶೃತಿ ವಸಂತಕುಮಾರ್‌, ಉಪಾಧ್ಯಕ್ಷೆ ಸರ್ವಮಂಗಳ ಭೈರಪ್ಪ, ಪ್ರಮುಖರಾದ ಬಲ್ಕೀಶ್‌ಬಾನು, ಅನುಸುಧಾ ಮೋಹನ್‌ಪಳನಿ, ಬಿ.ಕೆ ಬಸವೇಶ್‌, ಸಿ.ಎಂ ಖಾದರ್‌, ಎಸ್. ಮಣಿಶೇಖರ್‌, ಅಂತೋಣಿ ವಿಲ್ಸನ್‌, ಚನ್ನಪ್ಪ, ಮಣಿ ಎಎನ್‌ಎಸ್‌, ಗೋವಿಂದಸ್ವಾಮಿ, ಗಂಗಾಧರ್‌, ಫೀರ್‌ಷರೀಫ್‌, ಡಿ. ನರಸಿಂಹಮೂರ್ತಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಗುತ್ತಿಗೆ ಕಾರ್ಮಿಕರಿಗೆ ಉದ್ಯೋಗ ಹೆಚ್ಚಿಸಲು ೭೫ ಕೋ. ರು. ಬಿಡುಗಡೆಗೆ ಪ್ರಯತ್ನ : ಬಿ.ವೈ ರಾಘವೇಂದ್ರ

ಭದ್ರಾವತಿಯಲ್ಲಿ ಸಂಸದ ಬಿ.ವೈ ರಾಘವೇಂದ್ರ ಭಾನುವಾರ  ಕಾರ್ಖಾನೆ ಆಡಳಿತ ಮಂಡಳಿ ಅಧಿಕಾರಿಗಳು, ಗುತ್ತಿಗೆ, ಕಾಯಂ ಹಾಗು ನಿವೃತ್ತ  ಕಾರ್ಮಿಕರ ಸಂಘಟನೆಗಳೊಂದಿಗೆ ಸಭೆ ನಡೆಸಿ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
    ಭದ್ರಾವತಿ, ಜು. ೩೦ : ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಉಕ್ಕಿನ ಕಾರ್ಖಾನೆಯಲ್ಲಿರುವ ಗುತ್ತಿಗೆ ಕಾರ್ಮಿಕರಿಗೆ ಉದ್ಯೋಗದ ದಿನ ಹೆಚ್ಚಿಸಲು ಸುಮಾರು ೭೫ ಕೋ. ರು. ಅನುದಾನದ ಅಗತ್ಯವಿದ್ದು, ಈ ನಿಟ್ಟಿನಲ್ಲಿ ಎಲ್ಲಾ ರೀತಿಯ ಪ್ರಯತ್ನ ನಡೆಸಲಾಗುತ್ತಿದೆ ಎಂದು ಸಂಸದ ಬಿ.ವೈ ರಾಘವೇಂದ್ರ ಹೇಳಿದರು.
    ಅವರು ಭಾನುವಾರ  ಕಾರ್ಖಾನೆ ಆಡಳಿತ ಮಂಡಳಿ ಅಧಿಕಾರಿಗಳು, ಗುತ್ತಿಗೆ, ಕಾಯಂ ಹಾಗು ನಿವೃತ್ತ  ಕಾರ್ಮಿಕರ ಸಂಘಟನೆಗಳೊಂದಿಗೆ ಸಭೆ ನಡೆಸಿ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
    ಈ ಹಿಂದೆ ಕಾರ್ಖಾನೆಯಲ್ಲಿ ಗುತ್ತಿಗೆ ಕಾರ್ಮಿಕರಿಗೆ ಪ್ರತಿ ತಿಂಗಳು ೨೪ ದಿನ  ಉದ್ಯೋಗ ಕಲ್ಪಿಸಿ ಕೊಡಲಾಗಿತ್ತು. ಇದೀಗ ಕೇವಲ ೧೩ ದಿನ ಮಾತ್ರ ಉದ್ಯೋಗ ನೀಡುತ್ತಿರುವುದು ವಿಪರ್ಯಾಸದ ಸಂಗತಿಯಾಗಿದ್ದು,  ಗುತ್ತಿಗೆ ಕಾರ್ಮಿಕರ ಸಂಕಷ್ಟ ನನಗೆ ತಿಳಿದಿದೆ. ಹೆಚ್ಚು ದಿನಗಳ ಉದ್ಯೋಗ ಸೃಷ್ಟಿಗಾಗಿ ಕಾರ್ಖಾನೆ ಉತ್ಪಾದನಾ ಚಟುವಟಿಕೆ ಮತ್ತಷ್ಟು ಹೆಚ್ಚಾಗಬೇಕಿದ್ದು, ಅದಕ್ಕೆ  ಬೇಕಾಗಿರುವ ಅಗತ್ಯ ಕಚ್ಚಾವಸ್ತುಗಳ ಸರಬರಾಜಿಗೆ ಸುಮಾರು ೭೫ ಕೋ. ರು. ಅನುದಾನ ಅಗತ್ಯವಿದೆ.  ಈ ನಿಟ್ಟಿನಲ್ಲಿ ಎಲ್ಲಾ ಪ್ರಯತ್ನಗಳು ನಡೆಸಲಾಗುತ್ತಿದೆ.  ಉತ್ತಮ ಫಲಿತಾಂಶ ದೊರೆಯುವ ವಿಶ್ವಾಸವಿದೆ ಎಂದರು.
ಕಾರ್ಮಿಕರಿಗೆ ದ್ರೋಹ ಮಾಡುವುದಿಲ್ಲ :
    ಕಾರ್ಖಾನೆ ಸಂಬಂಧ ಕಳೆದ ೧೧ ವರ್ಷಗಳಿಂದಲೂ ಹಗ್ಗ-ಜಗ್ಗಾಟ ಪ್ರಕ್ರಿಯೆ ನಡೆಯುತ್ತಲೇ ಬರುತ್ತಿದೆ. ಕಾರ್ಖಾನೆ ಕ್ಲೋಸರ್ ಪ್ರಕ್ರಿಯೆಗೆ ಒಳಪಟ್ಟರೂ ಇದುವೆರೆಗೂ ಉತ್ಪಾದನೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲು ಬಿಟ್ಟಿಲ್ಲ. ಕಾರ್ಮಿಕರಿಗೆ ಇಎಸ್‌ಐ ಸೌಲಭ್ಯ ಸಿಗುವಷ್ಟರ ಮಟ್ಟಕ್ಕಾದರೂ ಉದ್ಯೋಗ ದೊರಕಿಸಿಕೊಡಲಾಗಿದೆ. ನೀವು ನಮ್ಮ ಮೇಲೆ ಇಟ್ಟಿರುವ ನಂಬಿಕೆಗೆ ನಾನೆಂದೂ ದ್ರೋಹ ಮಾಡುವುದಿಲ್ಲ. ಕಾರ್ಖಾನೆಯನ್ನು ಶೇ,೫೦ ಸಹಭಾಗಿತ್ವದಲ್ಲಿ ನಡೆಸುವ,  ಇಲ್ಲವೆ ಸಂಪೂರ್ಣ ಖಾಸಗಿಯವರಿಗೆ ನೀಡುವ ಕಾರ್ಯಕ್ಕೆ ಯಾವ ಖಾಸಗಿ ಕಂಪನಿಗಳು ಮುಂದೆ ಬರದಿರುವುದು ನಮ್ಮ ಶ್ರಮಕ್ಕೆ ಸ್ವಲ್ಪ ಹಿನ್ನಡೆಯಾಗಿದೆ ಅಷ್ಟೇ. ಮುಂದೆ ಕಾರ್ಖಾನೆ ಅಭಿವೃದ್ದಿಯತ್ತ ಸಾಗುವ ಸಂಪೂರ್ಣ ವಿಶ್ವಾಸ ನನಗಿದೆ. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರೂ ಸಹ ಸೈಲ್ ಆಡಳಿತ ಮಂಡಳಿಗೆ ಪತ್ರ ಬರೆದಿದ್ದಾರೆ ಎಂಬ ಸುದ್ದಿಯೂ ಸಹ ಇದೆ ಎಂದರು.
    ಕಾರ್ಮಿಕ ಸಂಘದ ಅಧ್ಯಕ್ಷ ಜೆ. ಜಗದೀಶ್‌, ಗುತ್ತಿಗೆ ಕಾರ್ಮಿಕರ ಸಂಘಟನೆಗಳ ಅಧ್ಯಕ್ಷರಾದ ಸುರೇಶ್‌, ಕುಮಾರಸ್ವಾಮಿ, ನಿವೃತ್ತ ಕಾರ್ಮಿಕರ ಕಲ್ಯಾಣ ಕೇಂದ್ರದ ಅಧ್ಯಕ್ಷ ಬಿ.ಜೆ ರಾಮಲಿಂಗಯ್ಯ,  ಬಿಜೆಪಿ ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್,  ಯುವ ಮುಖಂಡರಾದ ಮಂಗೋಟೆ ರುದ್ರೇಶ್,  ಜಿ.‌ ಆನಂದಕುಮಾರ್ ಮತ್ತು ಮಹಿಳಾ ಆಯೋಗದ ಮಾಜಿ ಅಧ್ಯಕ್ಷ ಸಿ. ಮಂಜುಳಾ ಸೇರಿದಂತೆ  ಇನ್ನಿತರರು ಉಪಸ್ಥಿತರಿದ್ದರು.

ಜಲಪಾತದಲ್ಲಿ ಕೊಚ್ಚಿಹೋಗಿದ್ದ ಶರತ್‌ಕುಮಾರ್‌ ಮೃತದೇಹವಾಗಿ ಪತ್ತೆ

ಶರತ್‌ಕುಮಾರ್‌
    ಭದ್ರಾವತಿ, ಜು. ೩೦: ಒಂದು ವಾರದ ಹಿಂದೆ ಜಲಪಾತ ವೀಕ್ಷಣೆಗೆ ತೆರಳಿದ್ದ ವೇಳೆ ಕಾಲುಜಾರಿ ಕೆಳಗೆಬಿದ್ದು ಜಲಪಾತದ ನೀರಿನಲ್ಲಿ ಕೊಚ್ಚಿ ಹೋಗಿದ್ದ ತಾಲೂಕಿನ ಕೆಂಗಲ್ ಹನುಮಂತಯ್ಯ ನಗರ(ಕೆ.ಎಚ್‌ ನಗರ) ಗ್ರಾಮದ ನಿವಾಸಿ ಶರತ್ ಕುಮಾರ್  ಭಾನುವಾರ ಹೆಣವಾಗಿ ಪತ್ತೆಯಾಗಿದ್ದು, ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.
    ಕೊಲ್ಲೂರಿನ ಅರಿಶಿನ ಗುಂಡಿ ಜಲಪಾತ ವೀಕ್ಷಣೆಗೆ ಸ್ವಂತ ಕಾರಿನಲ್ಲಿ ಸ್ನೇಹಿತ ಗುರು ಜೊತೆ ತೆರಳಿದ್ದ ಶರತ್‌ಕುಮಾರ್‌ ಕಳೆದ ಭಾನುವಾರ ಜಲಪಾತ ವೀಕ್ಷಣೆ ವೇಳೆ ಆಕಸ್ಮಿಕವಾಗಿ ಕಾಲುಜಾರಿ ಕೆಳಗೆಬಿದ್ದು ಜಲಪಾತದ ನೀರಿನಲ್ಲಿ ಕೊಚ್ಚಿ ಹೋಗಿದ್ದ ಕೊಲ್ಲೂರಿನ ಪೊಲೀಸರು, ಅರಣ್ಯ ಇಲಾಖೆ ಮತ್ತು ಅಗ್ನಿಶಾಮಕ ಸಿಬ್ಬಂದಿಗಳು, ಸ್ಥಳೀಯರು, ಸ್ನೇಹಿತರು ಶರತ್‌ಕುಮಾರ್‌ ಪತ್ತೆಗಾಗಿ ನಿರಂತರವಾಗಿ ಕಾರ್ಯಾಚರಣೆ  ಕೈಗೊಂಡಿದ್ದರು.  ಅಲ್ಲದೆ ಕಾರ್ಖಾನೆಯಲ್ಲಿ ಡ್ರೋನ್‌ ನೆರವು ಪಡೆದುಕೊಳ್ಳಲಾಗಿತ್ತು. ಜಲಪಾತದಿಂದ ಸುಮಾರು ೪೦೦ ಮೀಟರ್‌ ಅಂತರದಲ್ಲಿ ಕಲ್ಲಿನ ಕೊರಕಲಲ್ಲಿ ಶರತ್‌ಕುಮಾರ್‌    ಮೃತದೇಹ ಪತ್ತೆಯಾಗಿದೆ.
    ಬದುಕಿರುವ ಭರವಸೆ :
    ಕುಟುಂಬಕ್ಕೆ ಆಧಾರವಾಗಿದ್ದ ಶರತ್‌ಕುಮಾರ್‌ಗೆ ಈಜು ಬರುವ ಹಿನ್ನಲೆಯಲ್ಲಿ ಮಗ ಬದುಕಿರುವ ಬಗ್ಗೆ ತಂದೆ ಮೇಸ್ತ್ರಿ ಮುನಿಸ್ವಾಮಿ ಕುಟುಂಬ ವರ್ಗದವರು  ಭರವಸೆ ಹೊಂದಿದ್ದರು. ಆದರೆ ಇದೀಗ ಮೃತದೇಹ ಪತ್ತೆಯಾಗಿರುವುದು ಬರ ಸಿಡಿಲು ಬಡಿದಂತಾಗಿದೆ.
    ಅಡಕೆ ತಟ್ಟೆ ತಯಾರಿಕಾ ಘಟಕ ನಿರ್ಮಿಸಿ ಸ್ವಯಂ ಉದ್ಯೋಗ ಆರಂಭಿಸಿ ಜೊತೆಗೆ ಹಿಟಾಚಿ ಯಂತ್ರ ಬಾಡಿಗೆಗೆ ಕಳುಹಿಸಿ
    ಬರುವ ಆದಾಯದಲ್ಲಿ ಬದುಕು ಕಟ್ಟಿಕೊಳ್ಳುವ ಮೂಲಕ ಶರತ್‌ಕುಮಾರ್‌ ಕುಟುಂಬಕ್ಕೆ ಆಧಾರವಾಗಿದ್ದನು.

Saturday, July 29, 2023

ವಿಐಎಸ್‌ಎಲ್‌ ಕಾರ್ಖಾನೆ ಮುಚ್ಚುವ ಆದೇಶ ಪುನರ್‌ ಪರಿಶೀಲಿಸಿ

ಮುಖ್ಯಮಂತ್ರಿಯಿಂದ ಕೇಂದ್ರ ಉಕ್ಕು ಸಚಿವರಿಗೆ ಪತ್ರ

ಭದ್ರಾವತಿ ವಿಐಎಸ್‌ಎಲ್‌ ಕಾರ್ಖಾನೆ
    ಭದ್ರಾವತಿ, ಜು. ೨೯: ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಮುಚ್ಚುವ ಆದೇಶ ಪುನಃ ಪರಿಶೀಲನೆ ನಡೆಸುವಂತೆ ಕೇಂದ್ರ ಉಕ್ಕು ಸಚಿವರಿಗೆ ರಾಜ್ಯ ಸರ್ಕಾರ ಮನವಿ ಮಾಡಿದೆ.
    ಈ ಕುರಿತು ಕೇಂದ್ರ ಸಚಿವ  ಜ್ಯೋತಿರಾದಿತ್ಯ ಸಿಂಧ್ಯಾ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜು.೨೭ರಂದು ಪತ್ರ ಬರೆದಿದ್ದು, ಭದ್ರಾವತಿ ಕ್ಷೇತ್ರದ ಜನರು ವಿಐಎಸ್‌ಎಲ್‌ ಕಾರ್ಖಾನೆಯನ್ನು ನಂಬಿ ಬದುಕು ಕಟ್ಟಿಕೊಂಡಿದ್ದಾರೆ. ಅಲ್ಲದೆ ಈ  ಕಾರ್ಖಾನೆ ಕರ್ನಾಟಕ ರಾಜ್ಯದ ಇತಿಹಾಸದ ಭವ್ಯ ಪರಂಪರೆಯಾಗಿದೆ. ಭಾರತರತ್ನ, ಶ್ರೇಷ್ಠ ತಂತ್ರಜ್ಞ ಸರ್‌.ಎಂ ವಿಶ್ವೇಶ್ವರಾಯ ಅವರಿಗೆ ಗೌರವ ಸಲ್ಲಿಸಬೇಕಾದರೆ ಈ ಕಾರ್ಖಾನೆ ಉಳಿಯಬೇಕಾಗಿದೆ.  ಈ ಹಿಂದೆ ೨೦೧೮ರಲ್ಲಿ ರಾಜ್ಯ ಸರ್ಕಾರ ೧೫೦ ಎಕರೆ ಕಬ್ಬಿಣ ಅದಿರು ಗಣಿ ಕಾರ್ಖಾನೆಗೆ  ಮಂಜೂರಾತಿ ಮಾಡಿದ್ದು, ಈಗಾಗಲೇ ಎಲ್ಲಾ ಪ್ರಕ್ರಿಯೆಗಳು ಮುಕ್ತಾಯಗೊಂಡಿದೆ. ೨೦೨೪ರಿಂದ ಗಣಿಯಲ್ಲಿ ಅದಿರು ಉತ್ಪಾದನೆ ಆರಂಭಗೊಳ್ಳಲಿದೆ. ಈ ಹಿನ್ನಲೆಯಲ್ಲಿ ಕಾರ್ಖಾನೆಯನ್ನು ಯಾವುದೇ ಕಾರಣಕ್ಕೂ ಮುಚ್ಚದೆ ಮುನ್ನಡೆಸಿಕೊಂಡು ಹೋಗುವ ಸಂಬಂಧ  ಪುನರ್‌ ಪರಿಶೀಲನೆ ಮಾಡುವಂತೆ ಮನವರಿಕೆ ಮಾಡಿದ್ದಾರೆ.
    ಮುಖ್ಯಮಂತ್ರಿಗಳು ಕೇಂದ್ರ ಸಚಿವರಿಗೆ ಬರೆದಿರುವ ಪತ್ರ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಕಾರ್ಮಿಕರು ಮುಂದಿನ ಬೆಳವಣಿಗೆಯನ್ನುಎದುರು ನೋಡುತ್ತಿದ್ದಾರೆ. ಕಾರ್ಖಾನೆ ಮುಂಭಾಗ ಕಳೆದ ಸುಮಾರು ೬ ತಿಂಗಳಿನಿಂದ ಗುತ್ತಿಗೆ ಕಾರ್ಮಿಕರು ಹೋರಾಟ ನಡೆಸುತ್ತಿದ್ದು, ಹೋರಾಟಕ್ಕೆ ಇದುವರೆಗೂ ಯಾವುದೇ ಪ್ರತಿಫಲ ಲಭಿಸದಿರುವುದು ವಿಪರ್ಯಾಸದ ಸಂಗತಿಯಾಗಿದೆ.

ತಹಸೀಲ್ದಾರ್‌ ಟಿ.ಜಿ ಸುರೇಶ್‌ ಆಚಾರ್‌ ವರ್ಗಾವಣೆ

ಟಿ.ಜಿ ಸುರೇಶ್‌ ಆಚಾರ್‌
    ಭದ್ರಾವತಿ, ಜು. ೨೯ : ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ತಹಸೀಲ್ದಾರ್‌ ಗ್ರೇಡ್‌-೧ ಹುದ್ದೆಗೆ ವರ್ಗಾವಣೆಯಾಗಿ ಬಂದಿದ್ದ ಟಿ.ಜಿ ಸುರೇಶ್‌ ಆಚಾರ್‌ ಅವರನ್ನು ಪುನಃ ವರ್ಗಾವಣೆಗೊಳಿಸಲಾಗಿದೆ.
    ಈ ಹಿಂದಿನ ತಹಸೀಲ್ದಾರ್‌ ಆರ್‌. ಪ್ರದೀಪ್‌ ಅವರ ಸ್ಥಳಕ್ಕೆ ವರ್ಗಾವಣೆಗೊಂಡು ಬಂದಿದ್ದ ಸುರೇಶ್‌ ಆಚಾರ್‌ ಅವರನ್ನು ಮೈಸೂರು ಜಿಲ್ಲೆ ಟಿ. ನರಸೀಪುರ ತಾಲೂಕಿನ ತಹಸೀಲ್ದಾರ್‌ ಗ್ರೇಡ್‌-೧ ಹುದ್ದೆಗೆ ವರ್ಗಾವಣೆಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ. ಇವರಿಂದ ತೆರವಾಗಿರುವ ಹುದ್ದೆಗೆ ಇದುವರೆಗೂ ಯಾರನ್ನು ನಿಯೋಜನೆಗೊಳಿಸಿಲ್ಲ.

Friday, July 28, 2023

ಜು.೨೯ರಂದು ʻಭಾರತ ದರ್ಶನʼ ಉಪನ್ಯಾಸ ಕಾರ್ಯಕ್ರಮ

    ಭದ್ರಾವತಿ, ಜು. ೨೮: ನ್ಯೂಕಾಲೋನಿ ತರುಣ ಭಾರತಿ ವಿದ್ಯಾಕೇಂದ್ರದ ವತಿಯಿಂದ ಕೇಶವಪುರ ಬಡಾವಣೆಯಲ್ಲಿರುವ ತರುಣ ಭಾರತಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜು.೨೯ರಂದು ೧೨.೧೫ಕ್ಕೆ ʻಭಾರತ ದರ್ಶನʼ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
    ಮತ್ತೂರಿನ ಸಾಮಾಜಿಕ ಕಾರ್ಯಕರ್ತ ಟಿ.ಎನ್‌ ಸ್ವಾಮಿ ಉಪನ್ಯಾಸ ನೀಡಲಿದ್ದು, ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಕೋರಲಾಗಿದೆ.  

ಇಸ್ಪೀಟ್‌ ಅಡ್ಡೆ ಮೇಲೆ ದಾಳಿ

    ಭದ್ರಾವತಿ, ಜು. ೨೮: ನ್ಯೂಟೌನ್‌ ಠಾಣೆ ಪೊಲೀಸರು ಇಸ್ಪೀಟ್‌ ಅಡ್ಡೆಯೊಂದರ ಮೇಲೆ ದಾಳಿ ನಡೆಸಿ ಘಟನೆ ಗುರುವಾರ ನಡೆದಿದೆ.
    ಜಿಂಕ್ ಲೈನ್ ಸಾರ್ವಜನಿಕ ಸಮುದಾಯ ಭವನದ ಪಕ್ಕದಲ್ಲಿ 5-6 ಜನರ ಗುಂಪೊಂದು ಇಸ್ಪೀಟ್‌ ಜೂಜಾಟದಲ್ಲಿ ತೊಡಗಿದ್ದು, ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ನ್ಯಾಯಾಲಯದ ಅನುಮತಿ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.