Thursday, November 9, 2023

ಸೌಂದರ್ಯ ಲಹರಿ ಸಪ್ತಾಹ ಸಂಪನ್ನ

ಶ್ರೀ ಭಾರತೀ ತೀರ್ಥ ಮಹಾ ಸನ್ನಿದಾನಂಗಳರವರು ಹಾಗೂ ಶ್ರೀ ವಿಧುಶೇಖರ ಭಾರತೀ ಸನ್ನಿದಾನಂಗಳರವರ ಆಶೀರ್ವಾದೊಂದಿಗೆ ಲಲಿತಾ ಸಂಘದ ವತಿಯಿಂದ ಭದ್ರಾವತಿ ನ್ಯೂಟೌನ್ ಶ್ರೀ ದತ್ತಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದ ಸೌಂದರ್ಯ ಲಹರಿ ಸಪ್ತಾಹ ಗುರುವಾರ ಸಂಪನ್ನಗೊಂಡಿತು.
    ಭದ್ರಾವತಿ :  ಶ್ರೀ ಭಾರತೀ ತೀರ್ಥ ಮಹಾ ಸನ್ನಿದಾನಂಗಳರವರು ಹಾಗೂ ಶ್ರೀ ವಿಧುಶೇಖರ ಭಾರತೀ ಸನ್ನಿದಾನಂಗಳರವರ ಆಶೀರ್ವಾದೊಂದಿಗೆ ಲಲಿತಾ ಸಂಘದ ವತಿಯಿಂದ ನ್ಯೂಟೌನ್ ಶ್ರೀ ದತ್ತಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದ ಸೌಂದರ್ಯ ಲಹರಿ ಸಪ್ತಾಹ ಗುರುವಾರ ಸಂಪನ್ನಗೊಂಡಿತು.
    ಲೋಕಕಲ್ಯಾಣಾರ್ಥವಾಗಿ ನ.೩ರಿಂದ ಸೌಂದರ್ಯ ಲಹರಿ ಸಪ್ತಾಹ ಆರಂಭಗೊಂಡಿದ್ದು, ಜನ್ನಾಪುರ ಶ್ರೀ ಮಹಾಗಣಪತಿ ದೇವಸ್ಥಾನದ ಪ್ರಧಾನ ಅರ್ಚಕರಾದ ವೇ||ಬ್ರ|| ಕೃಷ್ಣಮೂತಿ೯ ಸೋಮಯಾಜಿಯವರ ಅಧ್ಯಕ್ಷತೆಯಲ್ಲಿ ಸಂಪನ್ನಗೊಂಡಿತು. ಲಲಿತಾ ಸಂಘದ ಮಹಿಳಾ ಪ್ರಮುಖರು ಸೇರಿದಂತೆ ಭಕ್ತರು ಸೌಂದರ್ಯ ಲಹರಿ ಸಪ್ತಾಹದಲ್ಲಿ ಪಾಲ್ಗೊಂಡಿದ್ದರು.

ಅಮೃತ ನಗರೋತ್ಥಾನ-೪ರ ಪ್ರಗತಿ ಪರಿಶೀಲನಾ ಸಭೆ : ಗುತ್ತಿಗೆದಾರರು, ಅಧಿಕಾರಿಗಳ ವಿರುದ್ಧ ಆಕ್ರೋಶ

ತಕ್ಷಣ ಅಭಿವೃದ್ಧಿ ಕಾಮಗಾರಿಗಳನ್ನು ಪೂರ್ಣಗೊಳಿಸಿ : ನಗರಸಭೆ ಸದಸ್ಯರ ಆಗ್ರಹ

ಭದ್ರಾವತಿ ನಗರಸಭೆ ಸಭಾಂಗಣದಲ್ಲಿ ಗುರುವಾರ ಅಧ್ಯಕ್ಷೆ ಶೃತಿ ಸಿ. ವಸಂತಕುಮಾರ್ ಕೆ.ಜಿ ಅಧ್ಯಕ್ಷತೆಯಲ್ಲಿ ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ-೪ರ ಪ್ರಗತಿ ಪರಿಶೀಲನಾ ಸಭೆ ನಡೆಯಿತು.
    ಭದ್ರಾವತಿ: ನಗರಸಭೆ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾಮಗಾರಿಗಳು ವಿಳಂಬವಾಗುತ್ತಿದ್ದು, ಇದರಿಂದಾಗಿ ಸಾಕಷ್ಟು ಸಮಸ್ಯೆಗಳು ಎದುರಾಗುತ್ತಿವೆ. ಕಾಮಗಾರಿಗಳನ್ನು ತಕ್ಷಣ ಆರಂಭಿಸದೆ ನಿರ್ಲಕ್ಷ್ಯವಹಿಸಿರುವ ಹಾಗು ಕಾಮಗಾರಿ ವಿಳಂಬ ಮಾಡುತ್ತಿರುವ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳುವಂತೆ ನಗರಸಭಾ ಸದಸ್ಯರು ಆಗ್ರಹಿಸಿದರು.
    ನಗರಸಭೆ ಸಭಾಂಗಣದಲ್ಲಿ ಗುರುವಾರ ಅಧ್ಯಕ್ಷೆ ಶೃತಿ ಸಿ. ವಸಂತಕುಮಾರ್ ಕೆ.ಜಿ ಅಧ್ಯಕ್ಷತೆಯಲ್ಲಿ ನಡೆದ ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ-೪ರ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸದಸ್ಯರು ನಗರಸಭೆ ಅಧಿಕಾರಿಗಳು ಹಾಗು ಗುತ್ತಿಗೆದಾರರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರು.
    ಬಿ.ಕೆ ಮೋಹನ್ ಸೇರಿದಂತೆ ಹಲವು ಸದಸ್ಯರು ಕಾಮಗಾರಿಗಳ ವಿಳಂಬಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ಕೆಲವು ಗುತ್ತಿದಾರರು ಗುತ್ತಿಗೆಪಡೆದು ಕಾಮಗಾರಿ ಆರಂಭಿಸದಿರುವುದು ಕಂಡುಬಂದಿತು. ಇಂತಹ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸುವಂತೆ ಒತ್ತಾಯಿಸಿ ವಿಳಂಬವಾಗಿರುವ ಕಾಮಗಾರಿಗಳನ್ನು ತಕ್ಷಣ ಪೂರ್ಣಗೊಳಿಸುವಂತೆ ಆಗ್ರಹಿಸಿದರು. ಅಲ್ಲದೆ ಕೆಲವು ನಗರಸಭೆ ಅಧಿಕಾರಿಗಳ ಬೇಜವಾಬ್ದಾರಿತನದ ವಿರುದ್ಧ ಸಹ ಆಕ್ರೋಶ ವ್ಯಕ್ತಪಡಿಸಿ ಇಂತಹ ಅಧಿಕಾರಿಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವುದಿಲ್ಲವೇ ಎಂದು ಪೌರಾಯುಕ್ತರನ್ನು ಪ್ರಶ್ನಿಸಿದರು.
    ನಗರಸಭೆ ಸದಸ್ಯರ ಮಾತುಗಳನ್ನು ಆಲಿಸಿದ ಪೌರಾಯುಕ್ತ ಎಚ್.ಎಂ ಮನುಕುಮಾರ್, ಅಧಿಕಾರಿಗಳು ಜನಪ್ರತಿನಿಧಿಗಳಿಗೆ ದಿಕ್ಕುತಪ್ಪಿಸದೆ ಸರಿಯಾಗಿ ಮಾಹಿತಿನೀಡಿ. ನಮ್ಮ ಬಳಿ ಒಂದು ರೀತಿ ಹೇಳಿಕೆ, ಜನಪ್ರತಿನಿಧಿಗಳ ಬಳಿ ಒಂದು ರೀತಿ ಹೇಳಿಕೆ ನೀಡಬಾರದು. ಉತ್ತಮ ಕೆಲಸಗಾರರನ್ನು ನೇಮಿಸಿಕೊಂಡು ಕೆಲಸ ಬೇಗ ಮುಗಿಸುವಂತೆ ತಾಕೀತು ಮಾಡಿದರು.
    ನಗರೋತ್ಥಾನ-೪ರ ಪ್ರಗತಿ ಕುರಿತು ಮಾಹಿತಿ ನೀಡಿದ ಎಚ್.ಎಂ ಮನುಕುಮಾರ್, ೧೧,೮೭೫ ಮೀ. ಡಾಂಬರ್ ರಸ್ತೆ, ೧೦,೧೩೮ ಮೀ. ಕಾಂಕ್ರೀಟ್ ರಸ್ತೆ, ೨೯,೭೯೧ ಮೀ. ಚರಂಡಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಒಟ್ಟು ೧೮.೫ ಕೋ.ರು. ವೆಚ್ಚ ಮಾಡಲಾಗುತ್ತಿದ್ದು, ಈ ಪೈಕಿ ಇದುವರೆಗೂ ೩,೫೪೬ ಮೀ. ಚರಂಡಿ ಕಾಮಗಾರಿ ಕೈಗೊಳ್ಳಲಾಗಿದೆ ಎಂದರು.
    ಕಾರ್ಯಪಾಲಕ ಅಭಿಯಂತರರಾದ ವಹೀದಾ ಬೇಗಂ, ೨೦೨೩-೨೪ರ ಅಮೃತ್ ನಗರೋತ್ಥಾನ ಯೋಜನೆಯಡಿ ವಿದ್ಯುತ್ ಕಾಮಗಾರಿಗಳಿಗೆ ೩.೩೮ ಕೋಟಿ ಅನುದಾನ ಮಂಜೂರಾಗಿದ್ದು, ೧.೬೦ಕೋಟಿ ವೆಚ್ಚದ ಕಾಮಗಾರಿಗಳು ಪೂರ್ಣಗೊಂಡಿರುವುದಾಗಿ ಮಾಹಿತಿ ನೀಡಿದರು.
    ಇದಕ್ಕೆ ಪ್ರತಿಕ್ರಿಯಿಸಿದ ನಗರಸಭೆ ಸದಸ್ಯ ಬಿ.ಕೆ.ಮೋಹನ್, ಬೇರೆ ತಾಲ್ಲೂಕುಗಳಲ್ಲಿ ಬೀದಿದೀಪಗಳ ಅಳವಡಿಕೆ ಉತ್ತಮವಾಗಿದೆ. ಆದರೆ ಭದ್ರಾವತಿಯಲ್ಲಿ ನಕ್ಷೆ ತಯಾರಿಕೆಯೇ ಅವೈಜ್ಞಾನಿಕವಾಗಿದೆ. ಝಡ್ ಮಾಧರಿಯಲ್ಲಿ ಬೀದಿದೀಪ ಅಳವಡಿಸುವ ಬದಲು ಒಂದೇ ಬದಿಯಲ್ಲಿ ಅಳವಡಿಸಿರುವುದು ನಗರದ ಅಂದವನ್ನು ಕೆಡಿಸಿದೆ ಎಂದು ಆರೋಪಿಸಿದರು.
    ಸಭೆಯಲ್ಲಿ ಉಪಾಧ್ಯಕ್ಷೆ ಸರ್ವಮಂಗಳ ಭೈರಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್ ಕುಮಾರ್ ಉಪಸ್ಥಿತರಿದ್ದರು. ನಗರಸಭೆ ಸದಸ್ಯರಾದ ವಿ. ಕದಿರೇಶ್, ಬಿ.ಟಿ.ನಾಗರಾಜ್, ಲತಾ ಚಂದ್ರಶೇಖರ್, ಚನ್ನಪ್ಪ, ಮಣಿ ಎಎನ್‌ಎಸ್, ಜಾರ್ಜ್, ಆರ್. ಮೋಹನ್ ಕುಮಾರ್, ಉದಯ ಕುಮಾರ್, ಟಿಪ್ಪು ಸುಲ್ತಾನ್, ಬಷೀರ್ ಅಹಮದ್, ರಿಯಾಜ್ ಅಹಮದ್, ಕೋಟೇಶ್ವರರಾವ್, ಅನಿತಾ ಮಲ್ಲೇಶ್, ಪಲ್ಲವಿ ದಿಲೀಪ್, ಜಯಶೀಲ ಸುರೇಶ್, ಅನುಪಮ ಚನ್ನೇಶ್, ಶಶಿಕಲಾ ನಾರಾಯಣಪ್ಪ, ಮಂಜುಳ ಸುಬ್ಬಣ್ಣ, ಅನುಸುಧಾ ಮೋಹನ್ ಪಳನಿ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

Wednesday, November 8, 2023

ಪ್ರೊ. ಬಿ. ಕೃಷ್ಣಪ್ಪನವರ ೮೬ನೇ ಜನ್ಮದಿನ

ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ತಾಲೂಕು ಶಾಖೆ ವತಿಯಿಂದ ದಲಿತ ಚಳುವಳಿಯ ರೂವಾರಿ, ಸಮಿತಿ ಸಂಸ್ಥಾಪಕ ಪ್ರೊ. ಬಿ. ಕೃಷ್ಣಪ್ಪನವರ ೮೬ನೇ ಜನ್ಮದಿನ ಭದ್ರಾವತಿ ಹಳೇನಗರದ ಅಕ್ಕಮಹಾದೇವಿ ಸಮುದಾಯ ಭವನದಲ್ಲಿ ಆಚರಿಸಲಾಯಿತು. ಪರಿಶಿಷ್ಟ ಜಾತಿ/ಪಂಗಡದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
    ಭದ್ರಾವತಿ: ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ತಾಲೂಕು ಶಾಖೆ ವತಿಯಿಂದ ದಲಿತ ಚಳುವಳಿಯ ರೂವಾರಿ, ಸಮಿತಿ ಸಂಸ್ಥಾಪಕ ಪ್ರೊ. ಬಿ. ಕೃಷ್ಣಪ್ಪನವರ ೮೬ನೇ ಜನ್ಮದಿನ ಹಳೇನಗರದ ಅಕ್ಕಮಹಾದೇವಿ ಸಮುದಾಯ ಭವನದಲ್ಲಿ ಆಚರಿಸಲಾಯಿತು.
    ಸಮಿತಿ ಜಿಲ್ಲಾ ಪ್ರಧಾನ ಸಂಚಾಲಕ ಟಿ.ಎಚ್ ಹಾಲೇಶಪ್ಪ ಕಾರ್ಯಕ್ರಮ ಉದ್ಘಾಟಿಸಿದರು. ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್ ಕುಮಾರ್, ಹಿರಿಯ ಸದಸ್ಯ ಬಿ.ಕೆ ಮೋಹನ್, ಪ್ರಗತಿಪರ ಹೋರಾಟಗಾರ ಸುರೇಶ್, ಬಿಜೆಪಿ ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್ ಮತ್ತು ದಲಿತ ಮುಖಂಡ ಹನುಮಂತಪ್ಪ ಕಲ್ಲಿಹಾಳ್, . ಸಮಿತಿ ಜಿಲ್ಲಾ ದಲಿತ ವಿದ್ಯಾರ್ಥಿ ಒಕ್ಕೂಟದ ಸಂಚಾಲಕ ಎಸ್. ಗೋವಿಂದರಾಜು, ಸಮಿತಿ ರಾಜ್ಯ ಮಹಿಳಾ ಸಂಘಟನಾ ಸಂಚಾಲಕಿ ರುದ್ರಮ್ಮ, ಸಮಿತಿ ಹಿರಿಯೂರು ಹೋಬಳಿ ಸಂಚಾಲಕ ಅಣ್ಣಪ್ಪ, ಜಿಲ್ಲಾ ಸಂಘಟನಾ ಸಂಚಾಲಕ ಆರ್. ಹರೀಶ್, ಶಿವಮೊಗ್ಗ ತಾಲೂಕು ಪ್ರಧಾನ ಸಂಚಾಲಕರಾದ  ಶೇಷಪ್ಪ ಹುಣುಸೂಡು, ಪರಮೇಶ್ ಸೂಗೂರು, ಮಂಜಣ್ಣ, ಸಂತೋಷ್ ಹಿರಿಯೂರು, ಗೋವಿಂದ್ ಕಾಶಿಪುರ, ಟಿ. ಮಹೇಶ್ ಅತ್ತಿಗುಂದ, ಡಿ. ನರಸಿಂಹಮೂರ್ತಿ, ರಾಮನಾಯ್ಕ, ಪ್ರಭು, ಹನುಮಂತು, ದುರ್ಗಪ್ಪ, ನವೀನ, ಈಶ್ವರಪ್ಪ, ರಾಜು, ರಮೇಶ್, ನಿಂಗಣ್ಣ, ಬಸವರಾಜ್, ಮನು  ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
    ಸಮಿತಿ ತಾಲೂಕು ಪ್ರಧಾನ ಸಂಚಾಲಕ ಎಸ್. ಪುಟ್ಟರಾಜು ಅಧ್ಯಕ್ಷತೆ ವಹಿಸಿದ್ದರು. ತಾಲೂಕಿನ ಪರಿಶಿಷ್ಟ ಜಾತಿ/ಪಂಗಡದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಇದಕ್ಕೂ ಮೊದಲು ನಗರದ ಅಂಬೇಡ್ಕರ್ ವೃತ್ತದಿಂದ ಅಕ್ಕಮಹಾದೇವಿ ಸಮುದಾಯ ಭವನದವರೆಗೂ ಡಾ. ಬಿ.ಆರ್ ಅಂಬೇಡ್ಕರ್ ಭಾವಚಿತ್ರದೊಂದಿಗೆ ಮೆರವಣಿಗೆ ನಡೆಸಲಾಯಿತು.

ನ.೯ರಂದು ಮ್ಯಾಮೊಗ್ರಫಿ ಸ್ತನ ಕ್ಯಾನ್ಸರ್ ತಪಾಸಣೆ ಶಿಬಿರ

    ಭದ್ರಾವತಿ: ನಗರದ ಕಲ್ಪವೃಕ್ಷ ಸೇವಾ ಟ್ರಸ್ಟ್ ವತಿಯಿಂದ ಶಿವಮೊಗ್ಗ ನಾರಾಯಣ ಹೆಲ್ತ್‌ಕೇರ್, ನಾರಾಯಣ ಹೃದಯಾಲಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಸಹಯೋಗದೊಂದಿಗೆ ನ.೯ರಂದು ಬೆಳಿಗ್ಗೆ ೧೦ ಗಂಟೆಗೆ ಉಚಿತ ಮ್ಯಾಮೊಗ್ರಫಿ-ಸ್ತನಕ್ಯಾನ್ಸರ್ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿದೆ.
    ಜನ್ನಾಪುರ ಜಯಶ್ರೀ ವೃತ್ತದ ಸಮೀಪದ ಲೇಡಿಸ್ ಕ್ಲಬ್ ಮುಂಭಾಗದಲ್ಲಿರುವ ಟ್ರಸ್ಟ್ ಕಛೇರಿಯಲ್ಲಿ ಶಿಬಿರ ನಡೆಯಲಿದ್ದು, ಸಾರ್ವಜನಿಕರು ಇದರ ಸದುಪಯೋಗಪಡಿಸಿಕೊಳ್ಳುವಂತೆ ಟ್ರಸ್ಟ್ ಅಧ್ಯಕ್ಷ ಲಾಜರ್ ಕೋರಿದ್ದಾರೆ.

ಪಿ. ಈಶ್ವರ್‌ರಾವ್ ನಿಧನ

ಪಿ. ಈಶ್ವರ್‌ರಾವ್
    ಭದ್ರಾವತಿ : ಹಿಂದೂ ಮಹಾಸಭಾ ಹಾಗು ಬಿಜೆಪಿ ಮುಖಂಡ, ಹೊಸಮನೆ ನಿವಾಸಿ ಪಿ. ಈಶ್ವರರಾವ್(೬೦) ಬುಧವಾರ ನಿಧನ ಹೊಂದಿದರು.
    ಪತ್ನಿ, ಓರ್ವ ಪುತ್ರ ಹಾಗು ಇಬ್ಬರು ಪುತ್ರಿಯರು ಇದ್ದರು. ಈಶ್ವರರಾವ್ ಮೂಲತಃ ಹಿಂದೂ ಮಹಾಸಭಾ ಕಾರ್ಯಕರ್ತರಾಗಿದ್ದು, ಬಿಜೆಪಿ ಪಕ್ಷದಲ್ಲೂ ಸಕ್ರಿಯವಾಗಿ ಗುರುತಿಸಿಕೊಂಡಿದ್ದರು. ಇವರ ನಿಧನಕ್ಕೆ ಹಿಂದೂ ಮಹಾಸಭಾ ಪ್ರಮುಖರು ಹಾಗು ಬಿಜೆಪಿ ಪಕ್ಷದ ಮುಖಂಡರು, ಕಾರ್ಯಕರ್ತರು, ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು, ಸಹೋದರ ಪಿ. ಗಣೇಶ್‌ರಾವ್ ಸೇರಿದಂತೆ ಇನ್ನಿತರರು ಸಂತಾಪ ಸೂಚಿಸಿದ್ದಾರೆ.

ನ.೯ರಂದು ಶುದ್ಧ, ಸುರಕ್ಷಿತ ಕುಡಿಯುವ ನೀರು ಪೂರೈಕೆ ಕುರಿತು ಅರಿವು

    ಭದ್ರಾವತಿ: ನಗರಸಭೆ ವತಿಯಿಂದ `ವುಮೆನ್ ಆಫ್ ವಾಟರ್, ವಾಟರ್ ಆಫ್ ವುಮೆನ್ ಕ್ಯಾಂಪೇನ್' ಜಲ್ ದಿವಾಳಿ ಅಭಿಯಾನದ ಅಂಗವಾಗಿ ಮಹಿಳಾ ಸ್ವ-ಸಹಾಯ ಸಂಘದ ಸದಸ್ಯರುಗಳಿಗೆ ನ. ೯ರಂದು ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
    ಬೈಪಾಸ್ ರಸ್ತೆ, ಆನೇಕೊಪ್ಪದಲ್ಲಿರುವ ನಗರಸಭೆ ಜಲ ಶುದ್ಧೀಕರಣ ಘಟಕದಲ್ಲಿ ಬೆಳಿಗ್ಗೆ ೧೦ ಗಂಟೆಯಿಂದ ಮಧ್ಯಾಹ್ನ ೧ ಗಂಟೆವರೆಗೆ ಕಾರ್ಯಕ್ರಮ ನಡೆಯಲಿದ್ದು, ನಗರಸಭೆ ವ್ಯಾಪ್ತಿಯ ೩೦ ಮಹಿಳಾ ಸ್ವ-ಸಹಾಯ ಸಂಘದ ಸದಸ್ಯರುಗಳಿಗೆ ಶುದ್ಧ ಮತ್ತು ಸುರಕ್ಷಿತ ಕುಡಿಯುವ ನೀರು ಪೂರೈಕೆಯ ಪ್ರಕ್ರಿಯೆ ಹಾಗು ಮಾಲೀಕತ್ವದ ಭಾವನೆ ಕುರಿತು ಅರಿವು ಮೂಡಿಸಲಾಗುವುದು. ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಪೌರಾಯುಕ್ತ ಎಚ್.ಎಂ ಮನುಕುಮಾರ್ ಕೋರಿದ್ದಾರೆ.

Tuesday, November 7, 2023

ಸಂಬಂಧಿಕನಿಂದಲೇ ಚಿನ್ನದ ಮಾಂಗಲ್ಯ ಸರ ಅಪಹರಣ

೨೪ ಗಂಟೆಯೊಳಗೆ ಪ್ರಕರಣ ಭೇದಿಸಿದ ನ್ಯೂಟೌನ್ ಪೊಲೀಸರು

ಘಟನೆ ನಡೆದ ೨೪ ಗಂಟೆಯೊಳಗೆ ಪ್ರಕರಣ ಭೇದಿಸಿ ವ್ಯಕ್ತಿಯೋರ್ವನನ್ನು ಬಂಧಿಸುವಲ್ಲಿ ಭದ್ರಾವತಿ ನ್ಯೂಟೌನ್ ಠಾಣೆ ಪೊಲೀಸರು ಯಶಸ್ವಿಯಾಗಿರುವ ಘಟನೆ ನಡೆದಿದೆ.
    ಭದ್ರಾವತಿ: ಘಟನೆ ನಡೆದ ೨೪ ಗಂಟೆಯೊಳಗೆ ಪ್ರಕರಣ ಭೇದಿಸಿ ವ್ಯಕ್ತಿಯೋರ್ವನನ್ನು ಬಂಧಿಸುವಲ್ಲಿ ನ್ಯೂಟೌನ್ ಠಾಣೆ ಪೊಲೀಸರು ಯಶಸ್ವಿಯಾಗಿರುವ ಘಟನೆ ನಡೆದಿದೆ.
    ಕಡದಕಟ್ಟೆಯ ಮಹಿಳೆಯೊಬ್ಬರ ಚಿನ್ನದ ಮಾಂಗಲ್ಯ ಸರ ಅಪಹರಿಸಿರುವ ಘಟನೆಗೆ ಸಂಬಂಧಿಸಿದ ಮಂಡ್ಯ ಮಳವಳ್ಳಿ ತಾಲೂಕಿನ ಕುರುಬನಪುರ ಗ್ರಾಮದ ನಿವಾಸಿ ಕೆ.ಎನ್ ನಾಗರಾಜ(೩೨) ಎಂಬಾತನನ್ನು ಬಂಧಿಸಿ ೮೮ ಗ್ರಾಂ. ತೂಕದ ಸುಮಾರು ೪.೫ ಲಕ್ಷ ರು. ಮೌಲ್ಯದ ಚಿನ್ನದ ಮಾಂಗಲ್ಯ ಸರ ವಶಪಡಿಸಿಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
    ಘಟನೆ ವಿವರ:  ನ.೬ ರಂದು ಬೆಳಗ್ಗೆ ಕಡದಕಟ್ಟೆಯ ಮಹಿಳೆಯೊಬ್ಬರ ಮನೆಗೆ ಆಕೆಯ ಗಂಡನ ಅಣ್ಣನ ಮಗ ಕೆ.ಎನ್ ನಾಗರಾಜ ಬಂದಿದ್ದು, ಆತನು ತನ್ನ ಹತ್ತಿರ ಇದ್ದ ಟವಲ್ ತೆಗೆದುಕೊಂಡು ಮಹಿಳೆಯ ಕುತ್ತಿಗೆಗೆ ಬಿಗಿದು ಆಕೆಯ ಕುತ್ತಿಗೆಯಲ್ಲಿದ್ದ ಚಿನ್ನದ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿದ್ದಾನೆಂದು ದೂರು ದಾಖಲಾಗಿತ್ತು.
    ಈ ಸಂಬಂಧ ಮಹಿಳೆ ನೀಡಿದ ದೂರಿನ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು. ಪತ್ತೆಗಾಗಿ ಜಿಲ್ಲಾ ಪೊಲೀಸ್ ಅಧೀಕ್ಷಕ ಜಿ.ಕೆ ಮಿಥುನ್ ಕುಮಾರ್,  ಹೆಚ್ಚುವರಿ ಅಧೀಕ್ಷಕ ಅನಿಲ್ ಕುಮಾರ್ ಭೂಮರಡ್ಡಿರವರ ಮಾರ್ಗದರ್ಶನದಲ್ಲಿ, ಪೊಲೀಸ್ ಉಪಾಧೀಕ್ಷಕ ಕೆ.ಆರ್ ನಾಗರಾಜ್‌ರವರ ಮೇಲ್ವಿಚಾರಣೆಯಲ್ಲಿ,  ನಗರ ಪೊಲೀಸ್ ವೃತ್ತ ನಿರೀಕ್ಷಕ ಜೆ. ಶ್ರೀಶೈಲ ಕುಮಾರ ನೇತೃತ್ವದಲ್ಲಿ  ಠಾಣಾಧಿಕಾರಿ ಟಿ. ರಮೇಶ್ ಮತ್ತು ಸಿಬ್ಬಂದಿಗಳಾದ  ನವೀನ್, ಮಲ್ಲಿಕಾರ್ಜುನ, ರಾಕೇಶ, ಗಿರೀಶ್ ಮತ್ತು ವಿನೋದ್‌ರವರುಗಳನ್ನೊಳಗೊಂಡ ತಂಡ ರಚಿಸಲಾಗಿತ್ತು.
    ತನಿಖಾ ತಂಡ ಪ್ರಕರಣ ದಾಖಲಾದ ೨೪ ಗಂಟೆಯೊಳಗಾಗಿ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿದ್ದು, ತನಿಖಾ ತಂಡದ ಕಾರ್ಯವನ್ನು ಜಿಲ್ಲಾ ಪೊಲೀಸ್ ಪ್ರಶಂಸಿಸಿ ಅಭಿನಂದಿಸಿದೆ.