Friday, January 26, 2024

ಲೋಕಸಭಾ ಕ್ಷೇತ್ರಗಳ ಕಾಂಗ್ರೆಸ್ ಚುನಾವಣಾ ಕಮಿಟಿ ಸದಸ್ಯರಾಗಿ ಎಸ್.ಎನ್ ಶಿವಪ್ಪ ನೇಮಕ

ಎಸ್.ಎನ್ ಶಿವಪ್ಪ 
    ಭದ್ರಾವತಿ: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಪರಿಶಿಷ್ಟ ಜಾತಿ ವಿಭಾಗದ ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ, ನಗರದ ಎಸ್.ಎನ್ ಶಿವಪ್ಪ ಅವರನ್ನು ಶಿವಮೊಗ್ಗ ಮತ್ತು ಹಾಸನ ಲೋಕಸಭಾ ಕ್ಷೇತ್ರಗಳ ಚುನಾವಣಾ ಕಮಿಟಿ(ಇ.ಸಿ ಮೆಂಬರ್) ಸದಸ್ಯರನ್ನಾಗಿ ನೇಮಕಗೊಳಿಸಲಾಗಿದೆ.
    ಶಿವಪ್ಪ ಅವರಿಗೆ ಎರಡು ಲೋಕಸಭಾ ಕ್ಷೇತ್ರಗಳ ಚುನಾವಣಾ ಕಮಿಟಿ(ಇ.ಸಿ ಮೆಂಬರ್) ಸದಸ್ಯರನ್ನಾಗಿ ನೇಮಕಗೊಳಿಸಿದ್ದು, ಈ ಕುರಿತು ಜ.24ರಂದು ಕೆಪಿಸಿಸಿ ಪರಿಶಿಷ್ಟ ಜಾತಿ ವಿಭಾಗದ ರಾಜ್ಯಾಧ್ಯಕ್ಷ, ವಿಧಾನ ಪರಿಷತ್ ಮಾಜಿ ಸದಸ್ಯ ಆರ್. ಧರ್ಮಸೇನ ಅವರು ಆದೇಶ ಹೊರಡಿಸಿದ್ದಾರೆ.
    ಶಿವಪ್ಪ ಅವರು ರಾಜಕೀಯ ಹೆಚ್ಚಿನ ಅನುಭವ ಹೊಂದಿದ್ದು, ಈ ಹಿಂದಿನ ಚುನಾವಣೆ ಸಂದರ್ಭದಲ್ಲಿ ಲೋಕಸಭಾ ಕ್ಷೇತ್ರಗಳ ವೀಕ್ಷಕರನ್ನಾಗಿ ನೇಮಕಗೊಳಿಸಲಾಗಿತ್ತು.

ಸಂಗಮೇಶ್ವರ್‌ಗೆ ಎರಡನೇ ಬಾರಿಗೆ ಕೆಆರ್‌ಐಡಿಎಲ್ ಅಧ್ಯಕ್ಷ ಪಟ್ಟ

ಶಾಸಕ ಬಿ.ಕೆ ಸಂಗಮೇಶ್ವರ್
    ಭದ್ರಾವತಿ: ಶಾಸಕ ಬಿ.ಕೆ ಸಂಗಮೇಶ್ವರ್‌ಗೆ 2ನೇ ಬಾರಿಗೆ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ನಿಗಮ(ಕೆಆರ್‌ಐಡಿಎಲ್) ಅಧ್ಯಕ್ಷ ಪಟ್ಟ ಒಲಿದು ಬಂದಿದ್ದು, ಕ್ಷೇತ್ರದ ಜನತೆಯಲ್ಲಿ ಸ್ವಲ್ಪಮಟ್ಟಿಗೆ ಸಮಾಧಾನ ಉಂಟು ಮಾಡಿದೆ.  
    4 ಬಾರಿ ಕ್ಷೇತ್ರದ ಶಾಸಕರಾಗಿರುವ ಸಂಗಮೇಶ್ವರ್‌ಗೆ ಈ ಬಾರಿ ಬಹುತೇಕ ಸಚಿವ ಸ್ಥಾನ ಲಭಿಸುವ ನಿರೀಕ್ಷೆ ಇತ್ತು. ಆದರೆ ಕ್ಷೇತ್ರದ ಜನರ ನಿರೀಕ್ಷೆ ಹುಸಿಯಾಗುವ ಮೂಲಕ ಸರ್ಕಾರದ ವಿರುದ್ಧ ಅಸಮಾಧಾನ ಕಂಡು ಬಂದಿತ್ತು. ಈ ನಡುವೆ ಸಂಗಮೇಶ್ವರ್ ಬೆಂಬಲಿಗರು, ಅಭಿಮಾನಿಗಳು ಸಚಿವ ಸ್ಥಾನ ನೀಡುವಂತೆ ನಿರಂತರವಾಗಿ ಆಗ್ರಹಿಸುತ್ತಿದ್ದರು. ಅಲ್ಲದೆ ಸಂಗಮೇಶ್ವರ್ ಸಹ ಸಚಿವ ಸ್ಥಾನಕ್ಕಾಗಿ ತೀವ್ರ ಪೈಪೋಟಿ ನಡೆಸಿದ್ದರು. ಇದೀಗ ಪುನಃ ಎರಡನೇ ಬಾರಿ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ನಿಗಮ(ಕೆಆರ್‌ಐಡಿಎಲ್) ಅಧ್ಯಕ್ಷ ಪಟ್ಟ ಲಭಿಸಿದೆ.
    ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸಂಗಮೇಶ್ವರ್ ಪುನಃ ಆಯ್ಕೆಯಾದಲ್ಲಿ ಸಚಿವ ಸ್ಥಾನ ನೀಡುವುದಾಗಿ ಹಲವು ಬಾರಿ ಬಹಿರಂಗ ಸಭೆಗಳಲ್ಲಿ ಭರವಸೆ ನೀಡಿದ್ದರು. ಅಲ್ಲದೆ ಕಳೆದ ಸುಮಾರು 9 ವರ್ಷಗಳಿಂದ ಸ್ಥಗಿತಗೊಂಡಿರುವ ರಾಜ್ಯ ಸರ್ಕಾರಿ ಸ್ವಾಮ್ಯದ ಮೈಸೂರು ಕಾಗದ ಕಾರ್ಖಾನೆ ಪುನರ್ ಆರಂಭಿಸುವುದಾಗಿ ಸಹ ಭರವಸೆ ನೀಡಲಾಗಿತ್ತು. ಇದೀಗ ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್ ಕ್ಷೇತ್ರದ ಜನತೆಗೆ ನೀಡಿರುವ ಒಂದು ಭರವಸೆ ಕೈತಪ್ಪಿ ಹೋಗಿದ್ದು,  ಕಾರ್ಖಾನೆ ಪುನರ್ ಆರಂಭಿಸುವ ಮೂಲಕ ಎರಡನೇ ಭರವಸೆಯನ್ನಾದರೂ ಈಡೇರಿಸಲು ಮುಂದಾಗಬೇಕಾಗಿದೆ.

ಸಾಮಾಜಿಕ ಸೇವೆ : ಶ್ರೀ ಬಸವೇಶ್ವರ ಧರ್ಮ ಸಂಸ್ಥೆ ಅಧ್ಯಕ್ಷ ಶಿವಕುಮಾರ್‌ಗೆ ಸನ್ಮಾನ, ಗೌರವ

ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ತಾಲೂಕು ಆಡಳಿತ, ನಗರಸಭೆ, ತಾಲೂಕು ಪಂಚಾಯಿತಿ, ಶಿಕ್ಷಣ ಇಲಾಖೆ ಹಾಗು ವಿವಿಧ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಭದ್ರಾವತಿ ಹಳೇನಗರದ ಕನಕ ಮಂಟಪ ಮೈದಾನದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ 75ನೇ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ಸಾಮಾಜಿಕ ಸೇವೆಯನ್ನು ಗುರುತಿಸಿ ಶ್ರೀ ಬಸವೇಶ್ವರ ಧರ್ಮ ಸಂಸ್ಥೆ ಅಧ್ಯಕ್ಷ ಶಿವಕುಮಾರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

    ಭದ್ರಾವತಿ: ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ತಾಲೂಕು ಆಡಳಿತ, ನಗರಸಭೆ, ತಾಲೂಕು ಪಂಚಾಯಿತಿ, ಶಿಕ್ಷಣ ಇಲಾಖೆ ಹಾಗು ವಿವಿಧ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಹಳೇನಗರದ ಕನಕ ಮಂಟಪ ಮೈದಾನದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ 75ನೇ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ಸಾಮಾಜಿಕ ಸೇವೆಯನ್ನು ಗುರುತಿಸಿ ಶ್ರೀ ಬಸವೇಶ್ವರ ಧರ್ಮ ಸಂಸ್ಥೆ ಅಧ್ಯಕ್ಷ ಶಿವಕುಮಾರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

    ಶಿವಕುಮಾರ್ ಅವರು ಹಲವಾರು ವರ್ಷಗಳಿಂದ ಬಡ ಮಕ್ಕಳ ಶಿಕ್ಷಣಕ್ಕೆ ಪೂರಕವಾಗುವ ನಿಟ್ಟಿನಲ್ಲಿ ಸೇವಾ ಕಾರ್ಯಗಳನ್ನು ಕೈಗೊಳ್ಳುವ ಜೊತೆಗೆ ಸ್ವಯಂ ಸೇವಾ ಸಂಸ್ಥೆಗಳ ಸೇವಾ ಕಾರ್ಯಗಳಲ್ಲೂ ಕೈಜೋಡಿಸುತ್ತಿದ್ದಾರೆ. ಇವರ ಸೇವೆಯನ್ನು ಗುರುತಿಸಿ ಗೌರವಿಸಲಾಗಿದೆ.

    ಶಾಸಕ ಬಿ.ಕೆ ಸಂಗಮೇಶ್ವರ್ ನಗರಸಭೆ ಅಧ್ಯಕ್ಷೆ ಲತಾ ಚಂದ್ರಶೇಖರ್, ಉಪಾಧ್ಯಕ್ಷೆ ಬಿ.ಪಿ ಸರ್ವಮಂಗಳ ಭೈರಪ್ಪ, ಸ್ಥಾಯಿಸಮಿತಿ ಅಧ್ಯಕ್ಷ ಕಾಂತರಾಜ್, ಕರ್ನಾಟಕ ರಾಜ್ಯ ಸ.ನೌ. ಸಂಘದ ಅಧ್ಯಕ್ಷ ಬಿ. ಸಿದ್ದಬಸಪ್ಪ, ಪೌರಾಯುಕ್ತ ಪ್ರಕಾಶ್ ಎಂ ಚನ್ನಪ್ಪನವರ್, ತಹಸೀಲ್ದಾರ್ ಗ್ರೇಡ್-2 ರಂಗಮ್ಮ, ಉಪ ತಹಸೀಲ್ದಾರ್ ರಾಧಾಕೃಷ್ಣ ಭಟ್, ಮಂಜಾನಾಯ್ಕ, ತಾಲೂಕು ಆರೋಗ್ಯಾಧಿಕಾರಿ ಡಾ.ಎಂ.ವಿ ಅಶೋಕ್, ಲಯನ್ಸ್ ಕ್ಲಬ್ ಕಾರ್ಯದರ್ಶಿ ದಿವಾಕರ್, ನಗರ ಸ್ಥಳೀಯ ಸಂಸ್ಥೆಗಳ ಸದಸ್ಯರುಗಳು ಹಾಗೂ ಎಲ್ಲಾ ಚುನಾಯಿತ ಜನಪ್ರತಿನಿಧಿಗಳು, ವಿವಿಧ ಸಂಘ ಸಂಸ್ಥೆಗಳ ಮುಖಂಡರುಗಳು, ಪದಾಧಿಕಾರಿಗಳು ಹಾಗೂ ಸದಸ್ಯರುಗಳು, ಸ್ವಾತಂತ್ರ ಹೋರಾಟಗಾರರು, ಸರ್ಕಾರಿ ಅಧಿಕಾರಿಗಳು ಹಾಗೂ ನೌಕರರು ಉಪಸ್ಥಿತರಿದ್ದರು.

Thursday, January 25, 2024

ಅಂಬೇಡ್ಕರ್‌ರವರ ಆಶಯದಂತೆ ಎಲ್ಲರೂ ಸಮಾನತೆಯಿಂದ ಬದುಕಬೇಕಾಗಿದೆ : ಸಂಗಮೇಶ್ವರ್

 


ಭದ್ರಾವತಿ:  ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ತಾಲೂಕು ಆಡಳಿತ, ನಗರ ಸಭೆ, ತಾಲೂಕು ಪಂಚಾಯಿತಿ, ಶಿಕ್ಷಣ ಇಲಾಖೆ ಹಾಗು ವಿವಿಧ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಹಳೇನಗರದ ಕನಕ ಮಂಟಪ ಮೈದಾನದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ 75ನೇ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ತಹಸೀಲ್ದಾರ್ ಕೆ.ಆರ್ ನಾಗರಾಜು ಧ್ವಜಾರೋಹಣ ನೆರವೇರಿಸಿದರು.

  ಶಾಸಕ ಬಿ.ಕೆ ಸಂಗಮೇಶ್ವರ ಅಧ್ಯಕ್ಷತೆವಹಿಸಿ ಮಾತನಾಡಿ, ಬಾಬಾ ಸಾಹೇಬ್ ಅಂಬೇಡ್ಕರ್‌ರವರ ಆಶಯದಂತೆ ಎಲ್ಲರೂ ಸಮಾನತೆಯಿಂದ ಬದುಕಬೇಕಾಗಿದೆ. ಈ ನಿಟ್ಟಿನಲ್ಲಿ ಭವಿಷ್ಯದ ಸಮಾಜ ನಿರ್ಮಾಣಗೊಳ್ಳಬೇಕಾಗಿದೆ ಎಂದರು.

 ನಗರಸಭೆ ಅಧ್ಯಕ್ಷೆ ಲತಾ ಚಂದ್ರಶೇಖರ್, ಉಪಾಧ್ಯಕ್ಷೆ  ಬಿ.ಪಿ ಸರ್ವಮಂಗಳ ಭೈರಪ್ಪ, ಸ್ಥಾಯಿಸಮಿತಿ ಅಧ್ಯಕ್ಷ ಕಾಂತರಾಜ್, ಕರ್ನಾಟಕ ರಾಜ್ಯ ಸ.ನೌ. ಸಂಘದ ಅಧ್ಯಕ್ಷ ಬಿ. ಸಿದ್ದಬಸಪ್ಪ, ಪೌರಾಯುಕ್ತ ಪ್ರಕಾಶ್ ಎಂ ಚನ್ನಪ್ಪನವರ್, ತಹಸೀಲ್ದಾರ್ ಗ್ರೇಡ್-2 ರಂಗಮ್ಮ, ಉಪಸ್ಥಿತರಿದ್ದರು. ಉಪ ತಹಸೀಲ್ದಾರ್  ರಾಧಾಕೃಷ್ಣ ಭಟ್, ಮಂಜಾನಾಯ್ಕ, ತಾಲೂಕು ಆರೋಗ್ಯಾಧಿಕಾರಿ ಡಾ.ಎಂ.ವಿ ಅಶೋಕ್, ನಗರ ಸ್ಥಳೀಯ ಸಂಸ್ಥೆಗಳ  ಸದಸ್ಯರುಗಳು ಹಾಗೂ ಎಲ್ಲಾ ಚುನಾಯಿತ ಜನಪ್ರತಿನಿಧಿಗಳು, ವಿವಿಧ ಸಂಘ ಸಂಸ್ಥೆಗಳ ಮುಖಂಡರುಗಳು, ಪದಾಧಿಕಾರಿಗಳು ಹಾಗೂ ಸದಸ್ಯರುಗಳು, ಸ್ವಾತಂತ್ರ ಹೋರಾಟಗಾರರು ಪ್ರತಿಕಾ ಪ್ರತಿನಿಧಿಗಳು,  ಸರ್ಕಾರಿ ಅಧಿಕಾರಿಗಳು ಹಾಗೂ ನೌಕರರು ಮತ್ತು  ನಾಗರೀಕರು ಹಾಗು ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. 

     ಇದಕ್ಕೂ ಮೊದಲು ಶ್ರೀಶೈಲ ಕೆಂಚಣ್ಣನವರು ಪಥ ಸಂಚಲನದ ವಂದನೆ ಸ್ವೀಕರಿಸಿದರು.  ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಸ್ವಾಗತಿಸಿ, ಅಪೇಕ್ಷ ಮಂಜುನಾಥ್ ನಿರೂಪಿದರು. 


ಮತ ಹಾಕುವ ಮತದಾರ ಯೋಚಿಸಿ ಎಚ್ಚರಿಕೆಯಿಂದ ಮತದಾನ ಮಾಡಿ : ನ್ಯಾ. ಟಿ. ಶ್ರೀಕಾಂತ್

ತಾಲೂಕು ಆಡಳಿತ ಹಾಗು ತಾಲೂಕು ಕಾನೂನು ಸೇವೆಗಳ ಸಮಿತಿ ವತಿಯಿಂದ ತಾಲೂಕು ಕಚೇರಿ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮದಲ್ಲಿ ಮತದಾರರ ಪ್ರತಿಜ್ಞಾವಿಧಿ ಬೋಧಿಸಲಾಯಿತು.
ಭದ್ರಾವತಿ; ನಮ್ಮ ಸಂವಿಧಾನ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಮತದಾನದ ಹಕ್ಕು ನೀಡಿದ್ದು, ಮತ ಹಾಕುವ ಮತದಾರ ಯೋಚಿಸಿ ಎಚ್ಚರಿಕೆಯಿಂದ ಮತದಾನ ಮಾಡಬೇಕು ಎಂದು ನಗರದ ಜೆಎಂಎಫ್‌ಸಿ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶರಾದ ಟಿ. ಶ್ರೀಕಾಂತ್ ಹೇಳಿದರು.
ತಾಲೂಕು ಆಡಳಿತ ಹಾಗು ತಾಲೂಕು ಕಾನೂನು ಸೇವೆಗಳ ಸಮಿತಿ ವತಿಯಿಂದ ತಾಲೂಕು ಕಚೇರಿ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮತದಾನ ಎನ್ನುವುದು ಸಂವಿಧಾನ ನಮಗೆ ಕೊಟ್ಟಿರುವ ಹಕ್ಕು ಮಾತ್ರವಲ್ಲದೆ ಅದು ನಮ್ಮೆಲ್ಲರ ಕರ್ತವ್ಯವೂ ಆಗಿದೆ. ನಾವು ಹಾಕುವ ಒಂದು ಮತದಿಂದ ಗೆಲ್ಲುವ ಚುನಾಯಿತ ಪ್ರತಿನಿಧಿಗಳು, ಮಾಡುವ ಕಾನೂನುಗಳಿಂದ ಸಮಾಜದ ಮೇಲೆ ಹಾಗು ನಮ್ಮ ಮೇಲೆ ಸಾಕಷ್ಟು ಉತ್ತಮ ಪರಿಣಾಮ ಬೀರುತ್ತವೆ. 
ಹಿಂದೆ ನ್ಯಾಯವಾದಿಗಳು ಹೆಚ್ಚಾಗಿ ರಾಜಕೀಯ ರಂಗ ಪ್ರವೇಶಿಸುತ್ತಿದ್ದರು. ಕಾನೂನುಗಳ ಅರಿವು ತಿಳುವಳಿಕೆ ಕೂಡ ಹೊಂದಿರುತ್ತಿದ್ದರು, ಇತ್ತೀಚೆಗೆ ರಾಜಕೀಯ ಪ್ರವೇಶ ಕಡಿಮೆಯಾಗಿದೆ. ಇಂದಿಗೂ ಬ್ರಿಟಿಷರು ಮಾಡಿರುವ ಕಾನೂನುಗಳನ್ನೇ ನಾವು ಒಪ್ಪಿಕೊಂಡು ಬಳಕೆ ಮಾಡಿಕೊಳ್ಳುತ್ತಿದ್ದೇವೆ. ಅವುಗಳನ್ನು ತಿದ್ದುಪಡಿ ಮಾಡುವುದೂ ಸಹ ಕಷ್ಟವಾಗಿದೆ. ತಿದ್ದುಪಡಿ ಮಾಡುವ ಅವಕಾಶ  ಜನಪ್ರತಿನಿಧಿಗಳಿಗಿದ್ದು,  ತಿಳುವಳಿಕೆಯುಳ್ಳ ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡುವುದು ಯುವ ಪೀಳಿಗೆಯ ಜವಾಬ್ದಾರಿಯಾಗಿದೆ ಎಂದರು.
ತಹಸೀಲ್ದಾರ್ ಕೆ.ಆರ್ ನಾಗರಾಜ್ ಮಾತನಾಡಿ, ಭದ್ರಾವತಿ ವಿಧಾನಸಭಾ ಕ್ಷೇತ್ರದಲ್ಲಿ ಪ್ರಸ್ತುತ ಒಟ್ಟು 2,12,770 ಮತದಾರರಿದ್ದಾರೆ. ಈ ಪೈಕಿ 3,372 ಯುವ ಮತದಾರರಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸದೃಢ ಪ್ರಜಾಪ್ರಭುತ್ವ ಕಟ್ಟಲು ಮತದಾರರ ಪಾತ್ರ ಮಹತ್ವದ್ದಾಗಿದ್ದು, ಮತದಾನ ಮಾಡಲು ಪ್ರತಿಯೊಬ್ಬರೂ ಮುಂದಾಗಬೇಕೆAದರು.
ನ್ಯಾಯಾಧೀಶರಾದ ಸಿ.ಎನ್ ಲೋಕೇಶ್ ಪ್ರತಿಜ್ಞಾ ವಿಧಿ ಭೋಧಿಸಿದರು.  ಸಹಾಯಕ ಸರ್ಕಾರಿ ಅಭಿಯೋಜಕ ನಾಗರಾಜ್, ಪಿ. ರತ್ನಮ್ಮ, ವಕೀಲರ ಸಂಘದ ಅಧ್ಯಕ್ಷ ಉಮೇಶ್, ಪೌರಾಯುಕ್ತ ಪ್ರಕಾಶ್ ಎಂ ಚನ್ನಪ್ಪನವರ್, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ., ಗ್ರೇಡ್-2 ತಹಸೀಲ್ದಾರ್ ರಂಗಮ್ಮ, ಮಂಜಾನಾಯ್ಕ, ರಾಧಾಕೃಷ್ಣ ಭಟ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ಜೀವನದಲ್ಲಿ ವಿದ್ಯೆಗೆ ಹೆಚ್ಚಿನ ಗೌರವ, ಮಹತ್ವ ಅರಿತುಕೊಳ್ಳಿ : ಬಿ.ಕೆ ಮೋಹನ್

ಭದ್ರಾವತಿ ನ್ಯೂಟೌನ್ ಸರ್.ಎಂ.ವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಗುರುವಾರ ಆಯೋಜಿಸಲಾಗಿದ್ದ ೨೦೨೩-೨೪ನೇ ಸಾಲಿನ ಸಹ ಪಠ್ಯ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ನಗರಸಭೆ ಹಿರಿಯ ಸದಸ್ಯ ಬಿ.ಕೆ ಮೋಹನ್ ಉದ್ಘಾಟಿಸಿದರು.
    ಭದ್ರಾವತಿ: ಜೀವನದಲ್ಲಿ ವಿದ್ಯೆಗೆ ಹೆಚ್ಚಿನ ಗೌರವವಿದ್ದು, ಮಕ್ಕಳು ಶಾಲಾ-ಕಾಲೇಜು ದಿನಗಳಲ್ಲಿಯೇ ವಿದ್ಯೆಯ ಮಹತ್ವ ತಿಳಿಯಬೇಕು. ಇಲ್ಲವಾದಲ್ಲಿ ಭವಿಷ್ಯದಲ್ಲಿ ಬಹಳ ಕಷ್ಟ ಅನುಭವಿಸಬೇಕಾಗುತ್ತದೆ ಎಂದು ನಗರಸಭೆ ಹಿರಿಯ ಸದಸ್ಯ ಬಿ.ಕೆ ಮೋಹನ್ ಹೇಳಿದರು.
    ನಗರದ ನ್ಯೂಟೌನ್ ಸರ್.ಎಂ.ವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಗುರುವಾರ ಆಯೋಜಿಸಲಾಗಿದ್ದ ೨೦೨೩-೨೪ನೇ ಸಾಲಿನ ಸಹ ಪಠ್ಯ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
    ಪ್ರಸ್ತುತ ಪ್ರಜಾಪ್ರಭುತ್ವ ವ್ಯವಸ್ಥೆ ಬಲಗೊಳ್ಳಲು ಬಸವಣ್ಣ ಮತ್ತು ಅಂಬೇಡ್ಕರ್ ಅವರ ಆದರ್ಶಗಳು ಅಗತ್ಯ. ಶಾಲಾ-ಕಾಲೇಜುಗಳಲ್ಲಿ ಸಣ್ಣ ಘಟನೆಗಳಿಗೂ ಅನಗತ್ಯವಾಗಿ ಚಳುವಳಿಗಳನ್ನು ನಡೆಸುವುದು ದುರಂತ ಸಂಗತಿ ಎಂದರು.
ಶಿವಮೊಗ್ಗದ ಡಾ. ಕಟೀಲ್ ಅಶೋಕ್ ಪೈ ಮೆಮೋರಿಯಲ್ ಕಾಲೇಜಿನ ಪ್ರಿನ್ಸಿಪಲ್ ಡಾ. ಸಂಧ್ಯಾ ಕಾವೇರಿ ಮಾತನಾಡಿ, ಶಿಕ್ಷಣ ಎಂದರೆ ಕೇವಲ ಪಠ್ಯವಲ್ಲ. ಜೀವನವನ್ನು ಸುಂದರವನ್ನಾಗಿಸುವ ಸಾಧನ. ಶಿಕ್ಷಣ ಸಂಸ್ಥೆಗಳ ದೊಡ್ಡ ಜವಾಬ್ದಾರಿ ವಿದ್ಯಾರ್ಥಿಗಳ ವ್ಯಕ್ತಿತ್ವ ರೂಪಿಸುವುದು ಎಂದರು.
    ಸರ್.ಎಂ.ವಿ ಕಾಲೇಜು ಸುಸಜ್ಜಿತವಾಗಿದ್ದು, ವಿದ್ಯಾರ್ಥಿಗಳು ಇದನ್ನು ಉತ್ತಮ ರೀತಿ ಬಳಸಿಕೊಳ್ಳಬೇಕು. ಪ್ರಸ್ತುತ ಇಂದಿನ ದಿನಗಳು ಸಂಶೋಧನೆಯ ಯುಗ, ಆಧುನಿಕತೆಯ ಯುಗವಾಗಿರುವುದರ ಜೊತೆಗೆ ಸಾಧನೆಯ ಯುಗವೂ ಆಗಿದೆ ಎಂಬುದನ್ನು ತಿಳಿಯಬೇಕಿದೆ ಎಂದರು.
    ವಿಧಾನ ಪರಿಷತ್ ಮಾಜಿ ಸದಸ್ಯ ಆಯನೂರು ಮಂಜುನಾಥ್, ನಗರಸಭೆ ಉಪಾಧ್ಯಕ್ಷೆ ಸರ್ವಮಂಗಳ ಭೈರಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಕಾಂತರಾಜ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮಣಿಶೇಖರ್, ಮುಖಂಡರಾದ ಎಸ್.ಎಸ್ ಭೈರಪ್ಪ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಮುಕುಂದಪ್ಪ, ಕಿರಣ್ ಬಾರಂದೂರು, ಸೈಯದ್ ಸರ್ಪರಾಜ್ ನವಾಜ್, ಪ್ರಮೋದ್, ಯಲ್ಲೋಜಿರಾವ್(ಬಾಬು), ನಂಜುಂಡಪ್ಪ, ಪಿ.ಕೆ ಹರೀಶ್, ಇಮ್ರಾನ್, ರಿಚರ್ಡ್, ಎಂ.ಎ ವೆಂಕಟೇಶ್, ಟಿ.ಆರ್ ಯೋಗೇಶಪ್ಪ, ಲೀಲಾವತಿ, ಗಂಗಾಧರ್, ಎಂ.ಜಿ ರಾಮಚಂದ್ರನ್, ಇಸ್ರೆಲ್, ವಿವಿಧ ವೇದಿಕೆಗಳ ಸಂಚಾಲಕರಾದ ಎಂ. ವೆಂಕಟೇಶ್, ಎಂ. ಮೊಹಮ್ಮದ್ ನಜೀಬ್, ಅಕ್ರಂಪಾಷ, ಆರ್. ವೆಂಕಟೇಶ್, ಡಾ. ಎಚ್.ಎಸ್ ಶಿವರುದ್ರಪ್ಪ, ಡಾ. ಎಸ್. ವರದರಾಜ, ಬಿ. ಗುರುಪ್ರಸಾದ್, ಡಾ. ಬಿ.ಜಿ ಅಕ್ಷತ, ಡಾ. ಟಿ.ಜಿ ಉಮಾ, ಕಾಲೇಜಿನ ಸಾಂಸ್ಕೃತಿಕ ವೇದಿಕೆ ವಿದ್ಯಾರ್ಥಿ ಪದಾಧಿಕಾರಿಗಳಾದ ವಿ. ಪ್ರೇಮ್ ಕುಮಾರ್, ಅಬ್ದುಲ್ ಹಸೀಬ್ ಖಾನ್, ಟಿ. ಶ್ಯಾಂ ಬಾಬು ಮತ್ತು ಆರ್. ಪುಷ್ಪಲತಾ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
    ಕಾಲೇಜಿನ ಪ್ರಾಂಶುಪಾಲರಾದ ಡಾ.ಶೈಲಜಾ ಎಸ್ ಹೊಸಳ್ಳೇರ ಅಧ್ಯಕ್ಷತೆ ವಹಿಸಿದ್ದರು. ಶಾಯಿದ್ ಮತ್ತು ಸಂಗಡಿಗರು ನಾಡಗೀತೆ ಹಾಗು ವಚನಗಾಯನ ಹಾಡಿದರು. ಪ್ರೊ. ಎನ್. ರವಿ ಸ್ವಾಗತಿಸಿದರು.  ವಿವಿಧ ಕ್ರೀಡೆಗಳಲ್ಲಿ ಸ್ಪರ್ಧಿಸಿ ಉತ್ತಮ ಸಾಧನೆ ಮಾಡಿರುವ ಕ್ರೀಡಾಪಟುಗಳು, ಸ್ಕೌಟ್ ಸದಸ್ಯರು ಹಾಗು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಪ್ರೊ. ಶ್ರೀದೇವಿ ಮತದಾರರ ಪ್ರತಿಜ್ಞಾ ವಿಧಿ ಬೋಧಿಸಿದರು.

ಯಾವುದೇ ಸರ್ಕಾರವಿದ್ದರೂ ಸೈದ್ದಾಂತಿಕವಾಗಿ ನಾನು ನೌಕರರ ಪರವಾಗಿರುತ್ತೇನೆ : ಪೂರ್ಣ ಪ್ರಮಾಣದ ರಾಜಕಾರಣಿ ಅಲ್ಲ, ಹೋರಾಟಗಾರ

ನೈರುತ್ಯ ಪದವೀಧರರ ಕ್ಷೇತ್ರ  ಕಾಂಗ್ರೆಸ್ ಪಕ್ಷದ ಸಂಭವನೀಯ ಅಭ್ಯರ್ಥಿ, ಮಾಜಿ ಸಂಸದ ಆಯನೂರು ಮಂಜುನಾಥ್

\

ಭದ್ರಾವತಿ ಹಳೇನಗರದ ಪತ್ರಿಕಾಭವನದಲ್ಲಿ ಗುರುವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾಜಿ ಸಂಸದ ಆಯನೂರು ಮಂಜುನಾಥ್ ಮಾತನಾಡಿದರು.
    ಭದ್ರಾವತಿ: ಕಳೆದ 40 ವರ್ಷಗಳಿಂದ ನನ್ನನ್ನು ನಾನೇ ನೌಕರರ ಹಾಗೂ ಕಾರ್ಮಿಕರ ವರ್ಗಕ್ಕೆ ಮೀಸಲಿಟ್ಟುಕೊಂಡಿದ್ದು, ಯಾವುದೇ ಸರ್ಕಾರವಿದ್ದರೂ ಸೈದ್ದಾಂತಿಕವಾಗಿ ನಾನು ನೌಕರರ ಪರವಾಗಿರುತ್ತೇನೆ. ಪೂರ್ಣ ಪ್ರಮಾಣದ ರಾಜಕಾರಣಿ ಅಲ್ಲ, ಹೋರಾಟಗಾರ  ಎಂದು ನೈರುತ್ಯ ಪದವೀಧರರ ಕ್ಷೇತ್ರ  ಕಾಂಗ್ರೆಸ್ ಪಕ್ಷದ ಸಂಭವನೀಯ ಅಭ್ಯರ್ಥಿ, ಮಾಜಿ ಸಂಸದ ಆಯನೂರು ಮಂಜುನಾಥ್ ಹೇಳಿದರು.
      ಹಳೇನಗರದ ಪತ್ರಿಕಾಭವನದಲ್ಲಿ  ಗುರುವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ವಿದ್ಯಾರ್ಥಿ ದಿನಗಳಿಂದಲೂ ಕಾರ್ಮಿಕ, ಶ್ರಮಿಕ, ನೌಕರರ ಮತ್ತು ಜನಸಾಮಾನ್ಯರ ಪರವಾಗಿ ಹಾಗೂ ಅನ್ಯಾಯಗಳ ವಿರುದ್ಧ ಸದಾ ಕಾಲ ಹಲವಾರು ಹೋರಾಟಗಳನ್ನು ಮಾಡುತ್ತಾ ಬಂದಿದ್ದೇನೆ. ಈ ಹಿಂದೆ ಶಾಸಕನಾಗಿ ಆಯ್ಕೆಯಾದಾಗ ಲಭಿಸಿದ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಂಡು ಸದನದ ಒಳಗೂ,  ಹೊರಗೂ ಶ್ರಮಿಕ ವರ್ಗದ ಪರವಾಗಿ ಧ್ವನಿಎತ್ತಿದ್ದೇನೆ ಎಂದರು.
       ನೌಕರರ, ಶಿಕ್ಷಕರ , ಅತಿಥಿ ಉಪನ್ಯಾಸಕರ, ಅತಿಥಿ ಶಿಕ್ಷಕರ ಹಾಗೂ ಬಡ್ತಿಯಿಂದ ಶಿಕ್ಷಕರಿಗೆ ಉಂಟಾದ ಸಮಸ್ಯೆ, ಸಿ ಅಂಡ್ ಆರ್ ಇತ್ಯಾದಿ ವಿಷಯಗಳು, ಆರೋಗ್ಯ ಇಲಾಖೆ ಎನ್.ಎಚ್.ಎಂ ನೌಕರರ, ಅರಣ್ಯ ಇಲಾಖೆ, ಪೌರ ಕಾರ್ಮಿಕರ ಸಮಸ್ಯೆ, ಕಾರ್ಖಾನೆಗಳ ಕಾರ್ಮಿಕರ ಬಗ್ಗೆ ಮತ್ತು ಪೊಲೀಸ್ ಇಲಾಖೆಯಲ್ಲಿ ಔರಾದ್ ಕರ್ ವರದಿಯಿಂದ ಉಂಟಾದ ವೇತನ ಹಾಗೂ ಭತ್ಯೆಯ ತಾರತಮ್ಯ, ಸೇವಾ ಜ್ಯೇಷ್ಠತೆ, ಕಡೆಗಣನೆಯ ವಿರುಧ್ದ ಕರ್ನಾಟಕ ರಾಜ್ಯದ ಪೊಲೀಸರ ಪರವಾಗಿ ಧ್ವನಿ ಎತ್ತಿ ಅವರ ಸಮಸ್ಯೆಯ ಬಗ್ಗೆ ಚರ್ಚಿಸಿ, ತಾರ್ಕಿಕ ಅಂತ್ಯ ಕಾಣಿಸುವ ಹೋರಾಟ ಮಾಡಿದ್ದೇನೆ ಎಂದು ವಿವರಿಸಿದರು.
      ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಉಡುಪಿ, ಮಂಗಳೂರು ಜಿಲ್ಲೆ ಹಾಗೂ ದಾವಣಗೆರೆ ಜಿಲ್ಲೆಯ ಚನ್ನಗಿರಿ, ಹೊನ್ನಾಳಿ ಮತ್ತು ನ್ಯಾಮತಿ ತಾಲೂಕಿನ ಒಟ್ಟು 30 ವಿಧಾನಸಭಾ ಹಾಗೂ 5 ಲೋಕಸಭಾ ಕ್ಷೇತ್ರದ ವ್ಯಾಪ್ತಿಯನ್ನು ಹೊಂದಿರುವ ನೈರುತ್ಯ ಪದವೀಧರ ಕ್ಷೇತ್ರದ ಮತದಾರರಾಗಿ ಹೆಸರನ್ನು ನೊಂದಾಯಿಸಿಕೊAಡಿರುವ ಮತದಾರರು ಮತದಾನದಲ್ಲಿ ಪಾಲ್ಗೊಳ್ಳಬಹುದು ಎಂದು ತಿಳಿಸಿದರು.      
      ಪದವೀಧರ ನೌಕರರು, ಸ್ವಯಂ ಉದ್ಯೋಗಿ ಮತ್ತು ನಿರುದ್ಯೋಗಿ ಪದವೀಧರರ ಪರವಾಗಿ ಸದನದಲ್ಲಿ ಧ್ವನಿಯಾಗಲು ಮತ್ತೊಮ್ಮೆ ನೈರುತ್ಯ ಪದವೀಧರರ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುತ್ತಿದ್ದು, ಕ್ಷೇತ್ರ ವ್ಯಾಪ್ತಿಯ ಪದವೀಧರ ಮತದಾರರು ತಪ್ಪದೆ ಮತದಾನ ಮಾಡುವ ಮೂಲಕ ಅವಕಾಶ ನೀಡಿ, ಹರಸಬೇಕೆಂದು ಮನವಿ ಮಾಡಿದರು.
      ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಪಕ್ಷದ ಜಿಲ್ಲಾ ಮುಖಂಡ ವೈ.ಎಚ್ ನಾಗರಾಜ್, ನಗರಸಭೆ ಅಧ್ಯಕ್ಷೆ ಲತಾ ಚಂದ್ರಶೇಖರ್, ಉಪಾಧ್ಯಕ್ಷೆ ಸರ್ವಮಂಗಳ ಭೈರಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಕಾಂತರಾಜ್,  ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್, ಮಾಜಿ ಉಪಾಧ್ಯಕ್ಷ ಚನ್ನಪ್ಪ, ಬ್ಲಾಕ್ ಕಾಂಗ್ರೆಸ್ ನಗರ ಅಧ್ಯಕ್ಷ ಎಸ್. ಕುಮಾರ್,  ಜಿ.ಪಂ. ಸದಸ್ಯ ಎಸ್. ಮಣಿಶೇಖರ್ ಉಪಸ್ಥಿತರಿದ್ದರು.