ಭದ್ರಾವತಿ ನಗರಸಭೆ ವಾರ್ಡ್ ನಂ.೧೨ರ ಎನ್.ಎಂ.ಸಿ ಎಡಭಾಗ ೭ನೇ ಕ್ರಾಸ್ ಮುತ್ತು ಮಾರಿಯಮ್ಮ ದೇವಸ್ಥಾನ ರಸ್ತೆಯಲ್ಲಿರುವ ಗಣೇಶ್ ರೈಸ್ ಮಿಲ್‌ನಲ್ಲಿ ಗುರುವಾರ ಸಂಜೆ ನಡೆದ ಬಾಯ್ಲರ್ ಸ್ಪೋಟದಿಂದ ರೈಸ್ ಮಿಲ್ ಕಾಂಪೌಂಡ್ ಛಿದ್ರಗೊಂಡಿರುವುದು.
ಭದ್ರಾವತಿ: ನಗರಸಭೆ ವಾರ್ಡ್ ನಂ.೧೨ರ ಎನ್.ಎಂ.ಸಿ ಎಡಭಾಗ ೭ನೇ ಕ್ರಾಸ್ ಮುತ್ತು ಮಾರಿಯಮ್ಮ ದೇವಸ್ಥಾನ ರಸ್ತೆಯಲ್ಲಿರುವ ಗಣೇಶ್ ರೈಸ್ ಮಿಲ್‌ನಲ್ಲಿ ಗುರುವಾರ ಸಂಜೆ ನಡೆದ ಬಾಯ್ಲರ್ ಸ್ಪೋಟದಿಂದ ಹೆಚ್ಚಿನ ಪ್ರಾಣ ಹಾನಿ ಸಂಭವಿಸದಿದ್ದರೂ ಸಹ ಹೆಚ್ಚಿನ ಕೋಟ್ಯಾಂತರ ರು. ಆಸ್ತಿಪಾಸ್ತಿ ನಷ್ಟ ಸಂಭವಿಸಿದೆ.
ಸ್ಪೋಟದ ತೀವ್ರತೆಯಿಂದ ಕೋಟ್ಯಾಂತರ ರು. ನಷ್ಟ ಉಂಟಾಗಿದ್ದು, ಬಾಯ್ಲರ್ ಕಬ್ಬಿಣದ ತುಂಡುಗಳು ಸುಮಾರು ಅರ್ಧ ಕಿ.ಮೀ ವ್ಯಾಪ್ತಿವರೆಗೂ ಬಿದ್ದಿವೆ. ಅಲ್ಲದೆ ಸುಮಾರು ೨ ಕಿ.ಮೀ ವರೆಗೂ ಸ್ಟೋಟದ ಕಂಪನ ವ್ಯಾಪಿಸಿದೆ. ಸ್ಪೋಟದಿಂದ ಸಮೀಪದ ಮನೆಗಳಿಗೆ, ಅಂಗಡಿಮುಂಗಟ್ಟುಗಳಿಗೆ ಹಾನಿ ಉಂಟಾಗಿದೆ. ರೈಲ್ ಮಿಲ್ ಆವರಣದಲ್ಲಿದ್ದ ಒಂದು ಲಾರಿ ಸಂಪೂರ್ಣವಾಗಿ ಜಖಂಗೊಂಡಿದ್ದು, ಉಳಿದ ಕೆಲವು ಲಾರಿಗಳಿಗೂ ಸ್ವಲ್ಪ ಪ್ರಮಾಣದಲ್ಲಿ ಹಾನಿಯಾಗಿದೆ. ಅಲ್ಲದೆ ರೈಸ್‌ಮಿಲ್‌ನಲ್ಲಿ ಕೆಲಸ ಮಾಡುವ ಕಾರ್ಮಿಕರ ಸುಮಾರು ೭-೮ ದ್ವಿಚಕ್ರ ವಾಹನಗಳು ಸಹ ಸಂಪೂರ್ಣವಾಗಿ ಜಖಂಗೊಂಡಿವೆ. ರೈಸ್ ಮಿಲ್ ಮೇಲ್ಛಾವಣಿ, ಯಂತ್ರೋಪಕರಣಗಳು, ವಿದ್ಯುತ್ ಪರಿವರ್ತಕ ಹಾಗು ಕಟ್ಟಡ ಬಹುತೇಕ ಹಾನಿಯಾಗಿದ್ದು, ಕೋಟ್ಯಾಂತರ ರು. ನಷ್ಟ ಸಂಭವಿಸಿದೆ.
ಅರ್ಧ ಕಿ.ಮೀ ದೂರದ ಆರ್‌ಸಿಸಿ ಮನೆಯ ಮೇಲೆ ಬಿದ್ದ ಕಬ್ಬಿಣ ಭಾರಿ ಗಾತ್ರದ ತುಂಡು:
ಬಾಯ್ಲರ್ ಸ್ಪೋಟದಿಂದ ಕಬ್ಬಿಣದ ಭಾರಿ ಗಾತ್ರದ ತುಂಡು ಸುಮಾರು ಅರ್ಧ ಕಿ.ಮೀ. ಅನ್ವರ್ ಕಾಲೋನಿ, ಇಂದಿರಾನಗರದಲ್ಲಿರುವ ಆರ್‌ಸಿಸಿ ಮನೆಯೊಂದರ ಮೇಲೆ ಬಿದ್ದಿದ್ದು, ಇದರಿಂದ ಆರ್‌ಸಿಸಿ ಮೇಲ್ಛಾವಣಿ ಕುಸಿದು ಬಿದ್ದಿದೆ. ಮನೆಯಲ್ಲಿ ಯಾರು ಇಲ್ಲದ ಕಾರಣ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಈ ಘಟನೆಯಿಂದ ಸ್ಥಳೀಯರು ಹೆಚ್ಚಿನ ಭಯಭೀತರಾಗಿದ್ದಾರೆ.
ಅಗ್ನಿಶಾಮಕ ದಳ ಸಿಬ್ಬಂದಿಯಿಂದ ಸುಮಾರು ೯ ಗಂಟೆ ಕಾರ್ಯಾಚರಣೆ:
ಸ್ಥಳೀಯ ಅಗ್ನಿಶಾಮಕ ದಳ ಸಿಬ್ಬಂದಿ ಮಾಹಿತಿ ತಿಳಿದ ತಕ್ಷಣ ಸುಮಾರು ೭ ಗಂಟೆ ಸಮಯಕ್ಕೆ ಘಟನಾ ಸ್ಥಳಕ್ಕೆ ತೆರಳಿದ್ದು, ಆರಂಭದಲ್ಲಿ ಬಾಯ್ಲರ್ ಸ್ಪೋಟದಿಂದ ಉಂಟಾದ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಉಳಿದ ಕಾರ್ಯಾಚರಣೆ ಬೆಳಗಿನ ಜಾವ ಸುಮಾರು ೩.೩೦ರ ವರೆಗೂ ಕೈಗೊಂಡಿದ್ದು, ಈ ಘಟನೆಯಲ್ಲಿ ಸುಮಾರು ೮ ಜನ ಗಾಯಾಳುಗಳನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಒಂದು ಅಗ್ನಿಶಾಮಕ ವಾಹನ ಕಾರ್ಯಾಚರಣೆಗೆ ಬಳಸಲಾಗಿದ್ದು, ಶಿವಮೊಗ್ಗ ಹಾಗು ಸ್ಥಳೀಯ ಅಗ್ನಿಶಾಮಕ ಠಾಣಾಧಿಕಾರಿಗಳ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು.
ಮಾಲೀಕರ ವಿರುದ್ಧ ಪ್ರಕರಣ ದಾಖಲು:
ಗಣೇಶ್ ರೈಸ್ ಮಿಲ್ ಮಾಲೀಕರಾದ ಗಿರಿರಾಜ್ ಶೆಟ್ಟಿ ಹಾಗು ದೀಪಕ್ ಶೆಟ್ಟಿ ವಿರುದ್ಧ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸಮನೆ ಶಿವಾಜಿ ಸರ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಲ್ಲದೆ ವಿವಿಧ ಇಲಾಖೆಗಳ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದು, ಕಾನೂನಾತ್ಮಕ ಕ್ರಮಗಳನ್ನು ಕೈಗೊಂಡಿದ್ದಾರೆ.
ಬಾಯ್ಲರ್ ಸ್ಪೋಟದಿಂದ ಕಬ್ಬಿಣದ ಭಾರಿ ಗಾತ್ರದ ತುಂಡು ಸುಮಾರು ಅರ್ಧ ಕಿ.ಮೀ. ಅನ್ವರ್ ಕಾಲೋನಿ, ಇಂದಿರಾನಗರದಲ್ಲಿರುವ ಆರ್‌ಸಿಸಿ ಮನೆಯೊಂದರ ಮೇಲೆ ಬಿದ್ದಿದ್ದು, ಇದರಿಂದ ಆರ್‌ಸಿಸಿ ಮೇಲ್ಛಾವಣಿ ಕುಸಿದು ಬಿದ್ದಿದೆ.