![](https://blogger.googleusercontent.com/img/a/AVvXsEjb1U6d-JxX7mwEf99J9wbRJjF9jSiHdif-fEcYtY4cadCSfka2wrRWlkI-JocciGmY34SYegAnzQac_ngkPJFGHhmFo8E6rVmsHScZW7Btd-eNiQ5SxT2dD-SEa3HwINmfk-yvGp0PCjnwEgIlmxIVvLVkMfe5LmazAJUSLvss5-NUWrxKwUk5dFKc7SWj=w400-h211-rw)
ಭದ್ರಾವತಿಯಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ತಾಲೂಕು ಆಡಳಿತ, ನಗರಸಭೆ, ತಾಲೂಕು ಪಂಚಾಯಿತಿ ಹಾಗು ಸರ್ಕಾರದ ವಿವಿಧ ಇಲಾಖೆಗಳು ಮತ್ತು ಭೋವಿ ಸಮಾಜ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ತಾಲೂಕು ಪಂಚಾಯಿತಿ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ೮೫೨ನೇ ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮ ಹಿರಿಯ ಮುಖಂಡ ಬಿ.ಕೆ ಜಗನ್ನಾಥ ಉದ್ಘಾಟಿಸಿದರು.
ಭದ್ರಾವತಿ: ಶ್ರೀ ಶಿವಯೋಗಿ ಸಿದ್ದರಾಮೇಶ್ವರರು ೧೨ನೇ ಶತಮಾನದಲ್ಲಿ ಆಧ್ಯಾತ್ಮಿಕ ಬದುಕಿನ ಜೊತೆಗೆ ಶ್ರಮ ಜೀವಿಗಳಿಗೆ ಮಾರ್ಗದರ್ಶಕರಾಗಿ ಸಾಮಾಜಿಕ ಸುಧಾರಣೆಯಲ್ಲಿ ತೊಡಗಿಸಿಕೊಂಡಿದ್ದರು. ಅವರ ಆದರ್ಶತನ ನಾವೆಲ್ಲರೂ ಅರ್ಥಮಾಡಿಕೊಂಡು ಮುನ್ನಡೆಯಬೇಕೆಂದು ನಗರದ ಹಿರಿಯ ಮುಖಂಡ ಬಿ.ಕೆ ಜಗನ್ನಾಥ ಹೇಳಿದರು.
ಅವರು ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ತಾಲೂಕು ಆಡಳಿತ, ನಗರಸಭೆ, ತಾಲೂಕು ಪಂಚಾಯಿತಿ ಹಾಗು ಸರ್ಕಾರದ ವಿವಿಧ ಇಲಾಖೆಗಳು ಮತ್ತು ಭೋವಿ ಸಮಾಜ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ತಾಲೂಕು ಪಂಚಾಯಿತಿ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ೮೫೨ನೇ ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಯಾವುದೇ ತಂತ್ರಜ್ಞಾನದ ಅರಿವಿಲ್ಲದ ಹಾಗು ಯಾವುದೇ ಸೌಲಭ್ಯಗಳು ಇಲ್ಲದ ಅಂದಿನ ಕಾಲದಲ್ಲಿ ನೀರಿನ ಮಹತ್ವ ಅರಿತು ಕೆರೆ, ಕಟ್ಟೆ, ಜಲಾಶಯಗಳನ್ನು ನಿರ್ಮಾಣ ಮಾಡುವ ಸಂಕಲ್ಪದೊಂದಿಗೆ ಭೋವಿ ಸಮಾಜದ ಶ್ರಮ ಜೀವಿಗಳಿಗೆ ಮಾರ್ಗದರ್ಶಕರಾಗಿ ಆ ಮೂಲಕ ಸಮಾಜದ ಎಲ್ಲಾ ವರ್ಗದ, ಎಲ್ಲಾ ಜಾತಿಯ ಜನರಿಗೂ ನೀರಿನ ಸೌಕರ್ಯಗಳು ಲಭಿಸಲು ಕಾರಣಕರ್ತರಾದರು. ಅಲ್ಲದೆ ಭೋವಿ ಸಮಾಜದವರು ಕೇವಲ ಕೆರೆ, ಕಟ್ಟೆ, ಜಲಾಶಯಗಳು ಮಾತ್ರವಲ್ಲ, ದೇವಸ್ಥಾನ ಸೇರಿದಂತೆ ಹಲವಾರು ಕಟ್ಟಡಗಳನ್ನು ಸಹ ನಿರ್ಮಾಣ ಮಾಡಿದ್ದಾರೆ. ಇಂದಿಗೂ ಶ್ರಮ ನಂಬಿ ಬದುಕು ಕಟ್ಟಿಕೊಂಡಿದ್ದಾರೆ ಎಂದರು.
ಎನ್.ಆರ್ ಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಧನಂಜಯ ಮಾತನಾಡಿ, ೧೨ನೇ ಶತಮಾನದಲ್ಲಿ ಬಸವಣ್ಣನವರ ಅನುಭವ ಮಂಟಪದಲ್ಲಿದ್ದ ಪ್ರಮುಖ ಕಾಯಕ ಯೋಗಿ ಶ್ರೀ ಶಿವಯೋಗಿ ಸಿದ್ದರಾಮೇಶ್ವರರು. ಇವರು ಕಾಯಕದ ಜೊತೆಗೆ ಸಮಾಜದಲ್ಲಿನ ಶೋಷಣೆಗಳ ವಿರುದ್ಧ ಧ್ವನಿ ಎತ್ತಿದರು. ಅಂದಿನ ಅನುಭವ ಮಂಟದಲ್ಲಿನ ಚಿಂತನೆಗಳು, ಆಶಯಗಳನ್ನು ಬಾಬಾ ಸಾಹೇಬ್ ಅಂಬೇಡ್ಕರ್‌ರವರು ಪ್ರತಿಪಾದಿಸುವ ಮೂಲಕ ಇಂದು ನಮ್ಮೆಲ್ಲರಿಗೂ ಬೆಳಕಾಗಿದ್ದಾರೆ. ಇವರೆಲ್ಲರ ಆಶಯಗಳಂತೆ ನಾವುಗಳು ಮುನ್ನಡೆಯುವ ಮೂಲಕ ಭವಿಷ್ಯದ ಸಮಾಜ ರೂಪಿಸಬೇಕೆಂದರು.
ತಾಲೂಕು ಬಗರ್ ಹುಕುಂ ಸಮಿತಿ ಅಧ್ಯಕ್ಷ ಎಸ್. ಮಣಿಶೇಖರ್, ನಗರಸಭೆ ಆಶ್ರಯ ಸಮಿತಿ ಅಧ್ಯಕ್ಷ ಬಿ.ಎಸ್ ಗೋಪಾಲ್, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ. ಸಿದ್ದಬಸಪ್ಪ, ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಂ. ಗಂಗಣ್ಣ, ಉಪತಹಸೀಲ್ದಾರ್ ಮಂಜ್ಯಾನಾಯ್ಕ, ಸೂಡಾ ಸದಸ್ಯ ಎಚ್. ರವಿಕುಮಾರ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಿ.ಕೆ ಶಿವಕುಮಾರ್, ನಗರಸಭೆ ಸದಸ್ಯರಾದ ಬಿ.ಟಿ ನಾಗರಾಜ್, ಬಿ.ಎಂ ಮಂಜುನಾಥ್, ಕಂದಾಯಾಧಿಕಾರಿ ರಮೇಶ್, ಪ್ರಮುಖರಾದ ಭೋವಿ ಸಮಾಜದ ಅಧ್ಯಕ್ಷ ಶಿವು ಪಾಟೀಲ್, ಚೌಡಪ್ಪ, ಅರ್ಜುನ್, ಟಿ.ಎಂ ಮಂಜುನಾಥ್, ಪ್ರಕಾಶ್, ಯಲ್ಲಪ್ಪ, ರಾಮಣ್ಣ, ದಶರಥಗಿರಿ, ಶಿವಬಸಪ್ಪ, ರಂಗನಾಥ್, ವೆಂಕಟೇಶ್, ತಮ್ಮಣ್ಣ, ವೈ. ಮಂಜುನಾಥ್, ಬಸವಂತಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪೃಥ್ವಿರಾಜ್ ಸ್ವಾಗತಿಸಿ, ಎಸ್.ಕೆ ಮೋಹನ್ ಕಾರ್ಯಕ್ರಮ ನಿರೂಪಿಸಿದರು. ಸುಮತಿ ಕಾರಂತ್, ಕೋಕಿಲ ತಂಡದವರು ಪ್ರಾರ್ಥಿಸಿದರು.