ಜೆಡಿಎಸ್, ಬಿಜೆಪಿ ಪಕ್ಷಗಳಿಂದ ನನ್ನ ವಿರುದ್ಧ ಷಡ್ಯಂತ್ರ, ಅಪಪ್ರಚಾರ : ಬಿ.ಎಸ್ ಬಸವೇಶ್
ಭದ್ರಾವತಿ ಶಾಸಕ ಬಿ.ಕೆ ಸಂಗಮೇಶ್ವರ್ ಪುತ್ರ ಬಿ.ಎಸ್ ಬಸವೇಶ್ ಶನಿವಾರ ನಗರಸಭೆ ಅಧ್ಯಕ್ಷರಾಗಿ ಪುನಃ ೨ನೇ ಬಾರಿಗೆ ಆಯ್ಕೆಯಾದ ಗೀತಾರಾಜ್‌ಕುಮಾರ್ ಅವರನ್ನು ಅಭಿನಂದಿಸಿದರು.
ಭದ್ರಾವತಿ: ಅಕ್ರಮ ಮರಳು ಗಣಿಗಾರಿಕೆ ನಿಯಂತ್ರಣಕ್ಕೆ ಮುಂದಾದ ಮಹಿಳಾ ಅಧಿಕಾರಿಗೆ ಅವಾಚ್ಯ ಶಬ್ದಗಳಿಂದ ಹೀನಾಯವಾಗಿ ನಿಂದಿಸಿರುವುದಾಗಿ ಆರೋಪಿಸಿ ನನ್ನ ವಿರುದ್ಧ ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳು ಷಡ್ಯಂತ್ರ ನಡೆಸುತ್ತಿದ್ದು, ನನಗೂ ಈ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಶಾಸಕ ಬಿ.ಕೆ ಸಂಗಮೇಶ್ವರ್ ಪುತ್ರ ಬಿ.ಎಸ್ ಬಸವೇಶ್ ಹೇಳಿದರು.
ಅವರು ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿ, ನನ್ನ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಲಾಗುತ್ತಿದೆ. ನನಗೂ ಈ ಘಟನೆಗೂ ಯಾವುದೇ ಸಂಬಂಧವಿಲ್ಲದಿದ್ದರೂ ಸಹ ವಿನಾಕಾರಣ ಅಪಪ್ರಚಾರ ನಡೆಸಲಾಗುತ್ತಿದೆ. ನಾನು ಆ ಮಹಿಳಾ ಅಧಿಕಾರಿಯನ್ನು ಇದುವರೆಗೂ ನೋಡೇ ಇಲ್ಲ. ಟಿ.ವಿ ಹಾಗೂ ಪತ್ರಿಕೆಗಳಲ್ಲಿ ಬಂದ ಮೇಲೆಯೇ ನನಗೆ ಆ ಮಹಿಳಾ ಅಧಿಕಾರಿ ಗೊತ್ತಾಗಿರುವುದು. ನಾನು ಇದುವರೆಗೂ ಯಾವ ಅಧಿಕಾರಿಗಳು ಆ ರೀತಿ ಮಾತಾಡಿಲ್ಲ ಎಂದರು.
ಈ ಘಟನೆ ಸಂಬಂಧ ನನ್ನ ವಿರುದ್ಧ ಯಾವುದೇ ದೂರು ಸಹ ದಾಖಲಾಗಿಲ್ಲ. ಇದುವರೆಗೂ ಪೊಲೀಸರು ಸಹ ನನ್ನನ್ನು ಸಂಪರ್ಕಿಸಿಲ್ಲ. ನನ್ನ ವಿರುದ್ಧ ನಡೆಸಲಾಗುತ್ತಿರುವ ಅಪಪ್ರಚಾರದ ವಿರುದ್ಧ ನ್ಯಾಯಾಲಯದಲ್ಲಿ ಹೋರಾಟ ಮಾಡುತ್ತೇನೆ ಎಂದರು.