Wednesday, February 19, 2025

ಹಿಂದೂ ಧರ್ಮ ರಕ್ಷಣೆಗಾಗಿ ಶಿವಾಜಿ ಮಹಾರಾಜರ ಹೋರಾಟ ಅವಿಸ್ಮರಣೀಯ : ಬಿ.ಕೆ ಶಿವಕುಮಾರ್

ಭದ್ರಾವತಿಯಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ ಮತ್ತು ನಗರಸಭೆ, ಛತ್ರಪತಿ ಶಿವಾಜಿ ಸೇವಾ ಸಂಘ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಕಾರ್ಯಕ್ರಮ ನಡೆಯಿತು. 
    ಭದ್ರಾವತಿ : ಹಿಂದೂ ಧರ್ಮ ರಕ್ಷಣೆಗಾಗಿ ಛತ್ರಪತಿ ಶಿವಾಜಿ ಮಹಾರಾಜರು ನಡೆಸಿರುವ ಹೋರಾಟ ಇಂದಿಗೂ ಅವಿಸ್ಮರಣೀಯವಾಗಿದೆ ಎಂದು ಪಿಎಲ್‌ಡಿ ಅಧ್ಯಕ್ಷ ಬಿ.ಕೆ ಶಿವಕುಮಾರ್ ಹೇಳಿದರು. 
    ಅವರು ಬುಧವಾರ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ ಮತ್ತು ನಗರಸಭೆ, ಛತ್ರಪತಿ ಶಿವಾಜಿ ಸೇವಾ ಸಂಘ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಕಾರ್ಯಕ್ರಮ ಪಾಲ್ಗೊಂಡು ಮಾತನಾಡಿದರು 
    ರಾಷ್ಟ್ರಭಕ್ತರಾಗಿ, ಧರ್ಮ ರಕ್ಷಕರಾಗಿ, ಶಿವಾಜಿ ಮಹಾರಾಜರು ನೀಡಿರುವ ಕೊಡುಗೆ ಯಾರು ಮರೆವಂತಿಲ್ಲ. ಸನಾತನ ಕಾಲದಿಂದಲೂ ಹಿಂದೂ ಧರ್ಮ ನಾಶಪಡಿಸಲು ನಡೆಸುತ್ತಿದ್ದ ಕುತಂತ್ರ ಹಾಗು ಹಿಂದೂಗಳ ಮೇಲೆ ನಡೆಯುತ್ತಿದ್ದ ದೌರ್ಜನ್ಯ, ದಬ್ಬಾಳಿಕೆ ಬಾಲ್ಯದಲ್ಲಿಯೇ ಅರಿತುಕೊಂಡಿದ್ದ ಶಿವಾಜಿ ಮಹಾರಾಜರು ತಮ್ಮ ಜೀವನದ ಕೊನೆಯವರೆಗೂ ಹಿಂದೂ ಧರ್ಮ ರಕ್ಷಣೆಗಾಗಿ ಹೋರಾಟ ನಡೆಸಿದರು ಎಂದರು. 
    ಶಿವಾಜಿ ಮಹಾರಾಜರಿಗೆ ತಾಯಿಯೇ ಮೊದಲ ಗುರು. ರಾಷ್ಟ್ರ ಭಕ್ತರಾಗಿ, ಹಿಂದೂ ರಕ್ಷಕರಾಗಿ ಜಾತಿ, ಧರ್ಮ ಬೇಧಭಾವವಿಲ್ಲದೆ ಪ್ರಜೆಗಳಿಗೆ ಉತ್ತಮ ಆಡಳಿತ ನೀಡುವ ಮೂಲಕ ಇತಿಹಾಸದ ಪುಟದಲ್ಲಿ ಉಳಿದುಕೊಂಡಿದ್ದಾರೆ. ಅವರ ಆದರ್ಶ ಗುಣಗಳನ್ನು ನಾವೆಲ್ಲರೂ ಅನುಸರಿಸಬೇಕಾಗಿದೆ ಎಂದರು. 
    ಉಪ ತಹಸೀಲ್ದಾರ್ ಮಂಜಾನಾಯ್ಕ, ಉದ್ಯಮಿ ಬಿ.ಕೆ ಜಗನ್ನಾಥ್,  ಛತ್ರಪತಿ ಶಿವಾಜಿ ಸೇವಾ ಸಂಘದ ತಾಲೂಕು ಅಧ್ಯಕ್ಷ ಎಚ್.ಆರ್ ಲೋಕೇಶ್ವರ್‌ರಾವ್ ದೊಂಬಾಳೆ, ಪುರಸಭೆ ಮಾಜಿ ಉಪಾಧ್ಯಕ್ಷ ಟಿ. ವೆಂಕಟೇಶ್, ಡಿಎಸ್‌ಎಸ್ ಮುಖಂಡ ಈಶ್ವರಪ್ಪ, ಬಸವಂತಪ್ಪ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಮುಖಂಡರು, ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳು, ತಾಲೂಕು ಕಛೇರಿ ಸಿಬ್ಬಂದಿಗಳು, ಛತ್ರಪತಿ ಶಿವಾಜಿ ಸೇವಾ ಸಂಘದ ಪದಾಧಿಕಾರಿಗಳು, ನಿರ್ದೇಶಕರು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು. 

ಹಿಂದೂಪರ ಕಾರ್ಯಕರ್ತರಿಂದ ಮಹಾ ಕುಂಭಮೇಳ ಕುರಿತು ಜಾಗೃತಿ

ಭದ್ರಾವತಿ ನಗರದ  ಹಿಂದೂಪರ ಕಾರ್ಯಕರ್ತರ ತಂಡ ಉತ್ತರ ಪ್ರದೇಶ  ಮಹಾ ಕುಂಭಮೇಳದಲ್ಲಿ ಪಾಲ್ಗೊಂಡು ಗಮನ ಸೆಳೆದಿದ್ದಾರೆ. ಪ್ರಸ್ತುತ ದೇಶದಲ್ಲಿ ಕುಂಭಮೇಳ ಕುರಿತು ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಪ್ರತಿಪಾದಿಸಿದ್ದಾರೆ.
    ಭದ್ರಾವತಿ :  ನಗರದ  ಹಿಂದೂಪರ ಕಾರ್ಯಕರ್ತರ ತಂಡ ಉತ್ತರ ಪ್ರದೇಶ  ಮಹಾ ಕುಂಭಮೇಳದಲ್ಲಿ ಪಾಲ್ಗೊಂಡು ಗಮನ ಸೆಳೆದಿದ್ದಾರೆ. ಪ್ರಸ್ತುತ ದೇಶದಲ್ಲಿ ಕುಂಭಮೇಳ ಕುರಿತು ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಪ್ರತಿಪಾದಿಸಿದ್ದಾರೆ.
    ಕುಂಭಮೇಳ ಕುರಿತು ಹಲವು ರೀತಿ ವಿಭಿನ್ನ ಹೇಳಿಕೆಗಳು ವ್ಯಕ್ತವಾಗುತ್ತಿರುವ ಸಂದರ್ಭದಲ್ಲಿ ಪ್ರಯಾಗ್ ರಾಜ್   ಕುಂಭಮೇಳ ತ್ರಿವೇಣಿ ಸಂಗಮದಲ್ಲಿ ಅಮೃತ ಸ್ನಾನ ಮಾಡಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹಿಂದುತ್ವ ಹಾಗೂ  ಸನಾತನ ಧರ್ಮಕ್ಕೆ ಕುಂಭ ಮೇಳ ಕೊಡುಗೆ  ಅಪಾರವಾಗಿದೆ.  144 ವರ್ಷಗಳ ಬಳಿಕ ಬಂದಿರುವ ಮಹಾ ಕುಂಭಮೇಳ ಹಿಂದುತ್ವ ಸನಾತನ ಪರಂಪರೆಯನ್ನು ಎತ್ತಿ ಸಾರುತ್ತಿದೆ ಎಂದು  ತಿಳಿಸಿದ್ದಾರೆ.
    ಹಿಂದೂಪರ ಕಾರ್ಯಕರ್ತರಾದ ರುದ್ರೇಶ್, ಕಿರಣ್, ಗಂಗಾಧರ್, ನವೀನ ಹಾಗೂ ಸೋಮ ಸೇರಿದಂತೆ ಇನ್ನಿತರರು ತಂಡದಲ್ಲಿ ಪಾಲ್ಗೊಂಡಿದ್ದಾರೆ.

ಯರೇಹಳ್ಳಿ ಸರ್ಕಾರಿ ಶಾಲೆಗೆ `ಅತ್ಯುತ್ತಮ ಶಾಲೆ ರಾಜ್ಯ ಪ್ರಶಸ್ತಿ'


ಚೇತನ ಫೌಂಡೇಷನ್ ಕರ್ನಾಟಕ, ಪವರ್ ಆಫ್ ಯೂತ್ಸ್ ಫೌಂಡೇಷನ್ ಹುಬ್ಬಳಿ ಮತ್ತು ಅಪ್ನಾದೇಶ್ ಫೌಂಡೇಷನ್ ಧಾರವಾಡ ವತಿಯಿಂದ ಭದ್ರಾವತಿ ತಾಲೂಕಿನ ಯರೇಹಳ್ಳಿ ಗ್ರಾಮದ ಸರ್ಕಾರಿ ಉನ್ನತೀಕರಿಸಿದ ಕನ್ನಡ ಮತ್ತು ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ಉತ್ತಮ ಕಾರ್ಯ ಚಟುವಟಿಕೆಗಳನ್ನು ಗುರುತಿಸಿ ಅತ್ಯುತ್ತಮ ಶಾಲೆ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. 
    ಭದ್ರಾವತಿ : ಚೇತನ ಫೌಂಡೇಷನ್ ಕರ್ನಾಟಕ, ಪವರ್ ಆಫ್ ಯೂತ್ಸ್ ಫೌಂಡೇಷನ್ ಹುಬ್ಬಳಿ ಮತ್ತು ಅಪ್ನಾದೇಶ್ ಫೌಂಡೇಷನ್ ಧಾರವಾಡ ವತಿಯಿಂದ ತಾಲೂಕಿನ ಯರೇಹಳ್ಳಿ ಗ್ರಾಮದ ಸರ್ಕಾರಿ ಉನ್ನತೀಕರಿಸಿದ ಕನ್ನಡ ಮತ್ತು ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ಉತ್ತಮ ಕಾರ್ಯ ಚಟುವಟಿಕೆಗಳನ್ನು ಗುರುತಿಸಿ ಅತ್ಯುತ್ತಮ ಶಾಲೆ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. 
    ವಾರ್ತೆ, ಸುಭಾಷಿತ, ಗಾದೆ, ಒಗಟು, ದಿನಕ್ಕೊಂದು ಪ್ರಶ್ನೆ, ದಿನಕೊಂದು ಪುಸ್ತಕ ಪರಿಚಯ, ಪ್ರಾರ್ಥನೆ ಸಂದರ್ಭ ಕಡ್ಡಾಯವಾಗಿ ಎಲ್ಲಾ ಮಕ್ಕಳನ್ನು ಬಳಸಿಕೊಂಡು ಪ್ರತಿ ವಾರ ರಸಪ್ರಶ್ನೆ ಕಾರ್ಯಕ್ರಮ, ಗುಂಪು ಕಲಿಕೆ,  ಸರ್ಕಾರದ ಶಾಲಾ ಯೋಜನೆಗಳ ಸದ್ಬಳಕೆಯಲ್ಲಿ ಕ್ರಿಯಾಶೀಲತೆ, ಪ್ರೇರಣಾ ಕ್ಲಬ್ ಸೇರಿದಂತೆ ವಿವಿಧ ಸಂಘಗಳ ನಿರ್ವಹಣೆ, ಕಂಪ್ಯೂಟರ್ ಕಲಿಕೆ, ಎಲ್‌ಕೆಜಿ ಮತ್ತು ಯುಕೆಜಿ ಮಕ್ಕಳಿಗೆ ವಿಶೇಷ ತರಗತಿಗಳು, ಶಾಲಾ ಅಮೃತ ಮಹೋತ್ಸವ ಹಾಗೂ ಹಳೆಯ ವಿದ್ಯಾರ್ಥಿಗಳ ಯಶಸ್ವಿ ಸಮಾವೇಶ, ಶಾರದಾ ಮೂರ್ತಿ ಪ್ರತಿಷ್ಠಾಪನೆ, ಭೋಜನ ಕೊಠಡಿ ಸುಣ್ಣ ಬಣ್ಣ, ಟೈಲ್ಸ್ ಅಳವಡಿಕೆ, ಪ್ರತಿಭಾ ಕಾರಂಜಿ ಮತ್ತು ಕ್ರೀಡಾ ಕೂಟಗಳಲ್ಲಿ ಬಹುಮಾನ ಹಾಗು ಇಲಾಖೆ ಕಾರ್ಯಕ್ರಮಗಳ ಯಶಸ್ವಿ ಅನುಷ್ಠಾನ ಸೇರಿದಂತೆ ಇನ್ನಿತರ ಕಾರ್ಯ ಚಟುವಟಿಕೆಗಳನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. 
    ಫೆ.೨೨ರ ಮಧ್ಯಾಹ್ನ ೨.೩೦ಕ್ಕೆ ಧಾರವಾಡ ಕರ್ನಾಟಕ ವಿದ್ಯಾವರ್ಧಕ ಸಂಘದ ನಾಡೋಜ ಡಾ. ಪಾಟೀಲ ಪುಟ್ಟಪ್ಪ ಸಭಾಂಗಣದಲ್ಲಿ ನಡೆಯಲಿರುವ ಅಖಿಲ ಕರ್ನಾಟಕ ಶಿಕ್ಷಕರ ಸಮ್ಮೇಳನದಲ್ಲಿ ಪ್ರಶಸ್ತಿ ವಿತರಣೆ ನಡೆಯಲಿದೆ. 
    ಶಾಲೆಯ ಬಡ್ತಿ ಮುಖ್ಯ ಶಿಕ್ಷಕ ಕೋಗಲೂರು ತಿಪ್ಪೇಸ್ವಾಮಿ, ಶಿಕ್ಷಕ ವೃಂದ, ಸಿಬ್ಬಂದಿ ವರ್ಗದವರು, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರು, ಸದಸ್ಯರು, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು, ಗ್ರಾಮದ ಮುಖಂಡರು, ಗ್ರಾಮಸ್ಥರು ಈ ಶಾಲೆಯನ್ನು ಅಭಿನಂದಿಸಿದ್ದಾರೆ.  

ಅಂಬೇಡ್ಕರ್‌ರವರ ೧೨ ಅಡಿ ಎತ್ತರದ ಕಂಚಿನ ಪ್ರತಿಮೆಗೆ ಹಾಲಿನ ಅಭಿಷೇಕ

ವಿವಿಧ ಬೇಡಿಕೆಗಳ ಈಡೇರಿಕೆಗೆ ಮುಖ್ಯಮಂತ್ರಿಗಳಿಗೆ ಮನವಿ 


ಭದ್ರಾವತಿ: ನಗರದ ಬಿ.ಎಚ್ ರಸ್ತೆ, ಅಂಡರ್‌ಬ್ರಿಡ್ಜ್ ಬಳಿ, ಅಂಬೇಡ್ಕರ್ ವೃತ್ತದಲ್ಲಿ ನೂತನವಾಗಿ ಉದ್ಘಾಟನೆಗೊಂಡಿರುವ ಭಾರತ ರತ್ನ, ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್‌ರವರ ಪುತ್ಥಳಿಗೆ ಕರ್ನಾಟಕ ರಾಜ್ಯ ಚಾಣುಕ್ಯ ಸೇನೆ ವತಿಯಿಂದ ಬುಧವಾರ ಹಾಲಿನ ಅಭಿಷೇಕದೊಂದಿಗೆ ಬೃಹತ್ ಹೂವಿನ ಮಾಲಾರ್ಪಣೆ ನಡೆಯಿತು.
    ಭದ್ರಾವತಿ: ನಗರದ ಬಿ.ಎಚ್ ರಸ್ತೆ, ಅಂಡರ್‌ಬ್ರಿಡ್ಜ್ ಬಳಿ, ಅಂಬೇಡ್ಕರ್ ವೃತ್ತದಲ್ಲಿ ನೂತನವಾಗಿ ಉದ್ಘಾಟನೆಗೊಂಡಿರುವ ಭಾರತ ರತ್ನ, ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್‌ರವರ ಪುತ್ಥಳಿಗೆ ಕರ್ನಾಟಕ ರಾಜ್ಯ ಚಾಣುಕ್ಯ ಸೇನೆ ವತಿಯಿಂದ ಬುಧವಾರ ಹಾಲಿನ ಅಭಿಷೇಕದೊಂದಿಗೆ ಬೃಹತ್ ಹೂವಿನ ಮಾಲಾರ್ಪಣೆ ನಡೆಯಿತು.
    ನಗರಸಭೆ ವತಿಯಿಂದ ಪ್ರತಿಷ್ಠಾಪಿಸಲಾಗಿರುವ ೧೨ ಅಡಿ ಎತ್ತರದ ಡಾ. ಬಿ.ಆರ್ ಅಂಬೇಡ್ಕರ್‌ರವರ ನೂತನ ಕಂಚಿನ ಪ್ರತಿಮೆ ಜ.೨೬ರಂದು ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟನೆಗೊಳಿಸಿದ್ದರು. ಕರ್ನಾಟಕ ರಾಜ್ಯ ಚಾಣುಕ್ಯ ಸೇನೆ ವತಿಯಿಂದ ಪ್ರತಿಮೆಗೆ ಹಾಲಿನ ಅಭಿಷೇಕದೊಂದಿಗೆ ಬೃಹತ್ ಹೂವಿನ ಮಾಲಾರ್ಪಣೆ ಜೊತೆಗೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯರವರಿಗೆ ಮನವಿ ಮಾಡಲಾಯಿತು. 
    ಡಾ. ಬಿ.ಆರ್ ಅಂಬೇಡ್ಕರ್‌ರವರ ಜನ್ಮದಿನಾಚರಣೆ ಅಂಗವಾಗಿ ರಾಜ್ಯದ ವಿವಿಧ ಸಂಘ ಸಂಸ್ಥೆಗಳಲ್ಲಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ವ್ಯಕ್ತಿಗಳಿಗೆ ಡಾ. ಬಿ.ಆರ್ ಅಂಬೇಡ್ಕರ್‌ರವರ ಪ್ರಶಸ್ತಿ ನೀಡಿ ಗೌರವಿಸುವುದರ ಜೊತೆಗೆ ಪ್ರಶಸ್ತಿ ಪುರಸ್ಕೃತರಿಗೆ ೫ ಲಕ್ಷ ರು. ಸಹಾಯ ಧನ ನೀಡುವುದು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಅಲ್ಪಾಸಂಖ್ಯಾತರ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ (ಸೋನಮಸೂರಿ) ಅಕ್ಕಿ ನೀಡುವುದು. ರಾಜ್ಯದಲ್ಲಿ ವಿಧವೆಯರ ಅಭಿವೃದ್ದಿ ನಿಗಮ ಸ್ಥಾಪಿಸಿ, ಆ ನಿಗಮಕ್ಕೆ ವಿಧವೆ ಮಹಿಳೆಯರನ್ನು ಮಾತ್ರ ಅಧ್ಯಕ್ಷರನ್ನಾಗಿ ಮಾಡುವಂತೆ ಒತ್ತಾಯಿಸಲಾಗಿದೆ. 
    ರಾಜ್ಯದ ಎಲ್ಲಾ ಇಲಾಖೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿರುವವರನ್ನು ಸರ್ಕಾರ `ಡಿ' ಗ್ರೂಪ್ ನೌಕರರೆಂದು ಪರಿಗಣಿಸಿ ಅವರಿಗೆ ಪ್ರತಿ ತಿಂಗಳು ಏಜೆನ್ಸಿ ಮೂಲಕ ವೇತನ ನೀಡುವ ಬದಲಿಗೆ ಜಿಲ್ಲಾಧಿಕಾರಿಗಳ ಮೂಲಕ ನೀಡುವುದು. ಅವರ ಪ್ರತಿ ತಿಂಗಳ ವೇತನ ಸುಮಾರು ೩೫ ಸಾವಿರ ರು.ಗಳಿಗೆ ಹೆಚ್ಚಿಸುವುದು. ರಾಜ್ಯದ ಶಾಲಾ-ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರಿಗೆ ಮತ್ತು ಉದ್ಯೋಗಸ್ಥ ಮಹಿಳೆಯರಿಗೆ ಋತು ಚಕ್ರದ ರಜೆ ಘೋಷಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಮಾಡಲಾಗಿದ್ದು, ಒಂದು ವೇಳೆ ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ರಾಜ್ಯ ವ್ಯಾಪ್ತಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಲಾಗಿದೆ.  
    ಕರ್ನಾಟಕ ರಾಜ್ಯ ಚಾಣುಕ್ಯ ಸೇನೆ ರಾಜ್ಯಾಧ್ಯಕ್ಷ ನಾರಾಯಣ ಐಹೊಳೆ, ಆದಿ ಜಾಂಬವ ರಾಜ್ಯಾಧ್ಯಕ್ಷ ಪ್ರಕಾಶ್, ಕರ್ನಾಟಕ ಅಂಬೇಡ್ಕರ್ ವೈಚಾರಿಕೆ ವೇದಿಕೆ ಸಂಚಾಲಕ ಪಿ. ಮೂರ್ತಿ ಸೇರಿದಂತೆ ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು.  

Tuesday, February 18, 2025

ಫೆ.೨೦ರಂದು ವಾಣಿಜ್ಯ ಮತ್ತು ನಿರ್ವಹಣೆ ವೇದಿಕೆ ಉದ್ಘಾಟನೆ

    ಭದ್ರಾವತಿ : ನಗರದ ನ್ಯೂಟೌನ್ ಸರ್.ಎಂ.ವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಫೆ.೨೦ರಂದು ಬೆಳಿಗ್ಗೆ ೧೧ ಗಂಟೆಗೆ ವಾಣಿಜ್ಯ ಮತ್ತು ನಿರ್ವಹಣೆ ವೇದಿಕೆ ಉದ್ಘಾಟನೆ ನಡೆಯಲಿದೆ. 
    ಕಾಲೇಜಿನ ವಾಣಿಜ್ಯ ಮತ್ತು ನಿರ್ವಹಣೆ ವಿಭಾಗದ ವತಿಯಿಂದ ಐಕ್ಯೂಎಸಿ ಸಹಯೋಗದೊಂದಿಗೆ ಆಯೋಜಿಸಲಾಗಿರುವ ಕಾರ್ಯಕ್ರಮ ಕುವೆಂಪು ವಿ.ವಿ ವಾಣಿಜ್ಯ ಶಾಸ್ತ್ರ ವಿಭಾಗದ ಡೀನ್, ಹಿರಿಯ ಪ್ರಾಧ್ಯಾಪಕ ಪ್ರೊ. ಆರ್. ಹಿರೇಮಣಿ ನಾಯ್ಕ್ ಉದ್ಘಾಟಿಸಲಿದ್ದಾರೆ. ಕರ್ನಾಟಕ ರಾಜ್ಯ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್, ಐಕ್ಯೂಎಸಿ  ಸಂಯೋಜಕ ಸಹಾಯಕ ಪ್ರಾಧ್ಯಾಪಕ ಎಂ. ಮಹಮದ್ ನಜೀಬ್, ವಾಣಿಜ್ಯ ಶಾಸ್ರ್ತ ವಿಭಾಗದ ಮುಖ್ಯಸ್ಥ ಆರ್. ಮಂಜಪ್ಪ, ನಿರ್ವಹಣಾ ಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಟಿ.ಜಿ ಉಮಾ, ವೇದಿಕೆ ಸಂಯೋಜಕ, ಸಹಾಯಕ ಪ್ರಾಧ್ಯಾಪಕ ವಿ.ಬಿ ಚಿರಂಜೀವಿ, ಆರ್. ವೆಂಕಟೇಶ್, ಬಿ.ಜಿ ಅಕ್ಷತಾ, ಕೆ. ಶಂಕರ್ ಯಾದವ್, ಎಚ್.ಎನ್ ಸುಷ್ಮ ಮತ್ತು ಎಸ್. ಶಾಂತಿ ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು. ಕಾಲೇಜಿನ ಪ್ರಾಂಶುಪಾಲರಾದ ಡಾ. ಶೈಲಜಾ ಎಸ್. ಹೊಸಳ್ಳೇರ್ ಅಧ್ಯಕ್ಷತೆ ವಹಿಸಲಿದ್ದಾರೆ. 

ಮಕ್ಕಳನ್ನು ಕ್ರಿಯಾತ್ಮಕ ಚಟುವಟಿಕೆಗಳೊಂದಿಗೆ ಆಧ್ಯಾತ್ಮಿಕವಾಗಿ ಬೆಳೆಸಿ : ಸ್ಟೀವನ್ ಡೇಸಾ

ಧರ್ಮೋಪದೇಶ ತರಗತಿಯ ಸಮಾರೋಪ ಸಮಾರಂಭ 

ಭದ್ರಾವತಿ ಹಳೇನಗರ ಗಾಂಧಿನಗರದ ವೇಳಾಂಗಣಿ ಆರೋಗ್ಯ ಮಾತೆ ಪುಣ್ಯಕ್ಷೇತ್ರದ ಪ್ರಾವಿಡೆನ್ಸ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಧರ್ಮೋಪದೇಶ ತರಗತಿಗಳ ಸಮಾರೋಪ ಸಮಾರಂಭದಲ್ಲಿ ಧರ್ಮೋಪದೇಶ ಶಿಕ್ಷಕಿಯರಿಗೆ ಸನ್ಮಾನಿಸಿ ಗೌರವಿಸಲಾಯಿತು.  
    ಭದ್ರಾವತಿ : ಮಕ್ಕಳನ್ನು ಕ್ರಿಯಾತ್ಮಕ ಚಟುವಟಿಕೆಗಳೊಂದಿಗೆ ಆಧ್ಯಾತ್ಮಿಕವಾಗಿ ಬೆಳೆಸುವುದು ಅತಿ ಅವಶ್ಯಕ ಎಂದು ಹಳೇನಗರ ಗಾಂಧಿನಗರದ ವೇಳಾಂಗಣಿ ಆರೋಗ್ಯ ಮಾತೆ ಪುಣ್ಯಕ್ಷೇತ್ರದ ಧರ್ಮಗುರು ಸ್ಟೀವನ್ ಡೇಸಾ ಹೇಳಿದರು. 
    ಅವರು ಪುಣ್ಯಕ್ಷೇತ್ರದ ಪ್ರಾವಿಡೆನ್ಸ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಧರ್ಮೋಪದೇಶ ತರಗತಿಗಳ ಸಮಾರೋಪ ಸಮಾರಂಭದ ನೇತೃತ್ವವಹಿಸಿ ಮಾತನಾಡಿದರು. ಮಕ್ಕಳು ಏನೇ ಕಲಿತರು ದಯೆ, ಕರುಣೆ, ಮಮಕಾರ, ಪ್ರೀತಿ, ತಾಳ್ಮೆ, ಕುಟುಂಬದೊಂದಿಗೆ ಹೊಂದಿಕೊಂಡು ಹೋಗುವುದು ಮತ್ತು ಇತರರಿಗೆ ಸಹಾಯ ಮಾಡುವ ಗುಣಗಳು ಧರ್ಮೋಪದೇಶ ತರಗತಿಯಲ್ಲಿ ಮಕ್ಕಳು ಪಡೆಯುತ್ತಾರೆ ಎಂದರು.  
    ಧರ್ಮೋಪದೇಶ ಹೇಳಿಕೊಡುವ ಧರ್ಮ ಕೇಂದ್ರದ ಶಿಕ್ಷಕಿಯರು ಯಾವುದೇ ಸಂಭಾವನೆ ಇಲ್ಲದೆ ತಮ್ಮ ವೈಯಕ್ತಿಕ ಕೆಲಸ ಕಾರ್ಯಗಳನ್ನು ಬದಿಗೊತ್ತಿ ಧರ್ಮ ಕೇಂದ್ರದ ಮಕ್ಕಳಿಗೆ ಧರ್ಮೋಪದೇಶ ಬೋಧಿಸುವುದರೊಂದಿಗೆ ತಮ್ಮ ನಿಸ್ವಾರ್ಥ ಸೇವೆಯನ್ನು ಧರ್ಮ ಕೇಂದ್ರಕ್ಕೆ ಸಲ್ಲಿಸುತ್ತಿದ್ದಾರೆ. ಇವರ ಸೇವೆ ಶ್ಲಾಘನೀಯ ಮತ್ತು ಮೆಚ್ಚುವಂಥದ್ದು ಎಂದು ತಿಳಿಸಿದರು.
    ಪ್ರಸ್ತುತ ಮುಂಬೈನ ಧರ್ಮ ಕೇಂದ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಗುರುಗಳಾದ ಫಾದರ್ ಅಶ್ವಿಲ್ ಡಯಾಸ್, ನಿರ್ಮಲ ಆಸ್ಪತ್ರೆಯ ಸುಪಿರಿಯರ್ ಸಿಸ್ಟರ್ ವಿಲ್ಮಾ, ಧರ್ಮೋಪದೇಶ ತರಗತಿಗಳ ನಿರ್ದೇಶಕಿ ಸಿಸ್ಟರ್ ತೆರೇಸಾ, ಸಿಸ್ಟರ್ ಶೋಭಾನ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 
  ಮಕ್ಕಳಿಂದ ಮನರಂಜನೆ ಕಾರ್ಯಕ್ರಮ ನಡೆಯಿತು. ನಂತರ ೨೦೨೪-೨೫ನೇ ಸಾಲಿನಲ್ಲಿ ವಾರಕ್ಕೊಮ್ಮೆ ನಡೆದ ಧರ್ಮೋಪದೇಶ ತರಗತಿಯಲ್ಲಿ ಶೇ. ೭೫ ರಷ್ಟು ಹಾಜರಿ ಪಡೆದ ಮಕ್ಕಳಿಗೆ ಹಾಗೂ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆದ ಮಕ್ಕಳಿಗೆ ಬಹುಮಾನ ವಿತರಣೆ ವಿತರಿಸಲಾಯಿತು.  ಧರ್ಮೋಪದೇಶ ಶಿಕ್ಷಕಿಯರಿಗೆ ಸನ್ಮಾನಿಸಿ ಗೌರವಿಸಲಾಯಿತು.  ಪೋಷಕರು, ಮಕ್ಕಳು ಪಾಲ್ಗೊಂಡಿದ್ದರು.  ಪ್ರಿಯ ನಿರೂಪಿಸಿ ಜೋಶುವ ಥಾಮಸ್ ಸ್ವಾಗತಿಸಿದರು. ಕುಮಾರ್ ಜೆಸ್ಟಿನ್ ವಂದಿಸಿದರು.

ಫೆ.೧೯ರಂದು ಅಂಬೇಡ್ಕರ್‌ರವರ ೧೨ ಅಡಿ ಎತ್ತರದ ಕಂಚಿನ ಪ್ರತಿಮೆಗೆ ಹಾಲಿನ ಅಭಿಷೇಕ, ಬೃಹತ್ ಮಾಲಾರ್ಪಣೆ

ಅಂಬೇಡ್ಕರ್‌ರವರ ೧೨ ಅಡಿ ಎತ್ತರದ ಕಂಚಿನ ಪ್ರತಿಮೆ
    ಭದ್ರಾವತಿ: ನಗರದ ಬಿ.ಎಚ್ ರಸ್ತೆ, ಅಂಡರ್‌ಬ್ರಿಡ್ಜ್ ಬಳಿ, ಅಂಬೇಡ್ಕರ್ ವೃತ್ತದಲ್ಲಿ ನೂತನವಾಗಿ ಉದ್ಘಾಟನೆಗೊಂಡಿರುವ ಭಾರತ ರತ್ನ, ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್‌ರವರ ಪುತ್ಥಳಿಗೆ ಕರ್ನಾಟಕ ರಾಜ್ಯ ಚಾಣುಕ್ಯ ಸೇನೆ ವತಿಯಿಂದ ಫೆ. ೧೯ರಂದು ಹಾಲಿನ ಅಭಿಷೇಕ ಮತ್ತು ಬೃಹತ್ ಮಾಲಾರ್ಪಣೆ ನಡೆಯಲಿದೆ. 
    ನಗರಸಭೆ ವತಿಯಿಂದ ಪ್ರತಿಷ್ಠಾಪಿಸಲಾಗಿರುವ ೧೨ ಅಡಿ ಎತ್ತರದ ಡಾ. ಬಿ.ಆರ್ ಅಂಬೇಡ್ಕರ್‌ರವರ ನೂತನ ಕಂಚಿನ ಪ್ರತಿಮೆ ಜ.೨೬ರಂದು ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟನೆಗೊಳಿಸಿದ್ದರು. ಈ ಹಿಂದೆ ಪ್ರತಿಷ್ಠಾಪಿಸಲಾಗಿದ್ದ ಮೂರ್ತಿ ಬದಲಿಗೆ ಹೊಸದಾಗಿ ಅಂಬೇಡ್ಕರ್ ನೈಜತೆ ಹೋಲುವ ಪ್ರತಿಮೆ ಪ್ರತಿಷ್ಠಾಪಿಸುವಂತೆ ಪ್ರಗತಿಪರ ಹಾಗು ದಲಿತ ಸಂಘಟನೆಗಳು ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು, ಹೋರಾಟಗಾರರ ಬಹಳ ವರ್ಷಗಳ ಬೇಡಿಕೆಗೆ ಸ್ಪಂದಿಸಿ ನೂತನ ಪ್ರತಿಮೆ ಪ್ರತಿಮೆ ಪ್ರತಿಷ್ಠಾಪಿಸಲಾಗಿದೆ. 
    ಬೆಳಿಗ್ಗೆ ೧೧ ಗಂಟೆಗೆ ನಡೆಯಲಿರುವ ಹಾಲಿನ ಅಭಿಷೇಕ ಮತ್ತು ಬೃಹತ್ ಮಾಲಾರ್ಪಣೆ ಕಾರ್ಯಕ್ರಮಕ್ಕೆ ಕ್ಷೇತ್ರದ ಸಮಸ್ತ ನಾಗರೀಕರು ಪಾಲ್ಗೊಳ್ಳುವ ಮೂಲಕ ಯಶಸ್ವಿಗೊಳಿಸುವಂತೆ ಕರ್ನಾಟಕ ರಾಜ್ಯ ಚಾಣುಕ್ಯ ಸೇನೆ ರಾಜ್ಯಾಧ್ಯಕ್ಷ ನಾರಾಯಣ ಐಹೊಳೆ ಕೋರಿದ್ದಾರೆ.