Sunday, May 11, 2025

ಆತ್ಮಹತ್ಯೆಗೆ ಯತ್ನಿಸಿದ ಯುವಕನ ರಕ್ಷಣೆ : ಕಾರ್ಯವೈಖರಿಗೆ ಜಿಲ್ಲಾ ರಕ್ಷಣಾಧಿಕಾರಿ ಪ್ರಶಂಸೆ


ಇಆರ್‌ಎಸ್‌ಎಸ್-೧೧೨ ವಾಹನದ  ಚಾಲಕ ಸಂತೋಷ್ ಕುಮಾರ್‌
ಭದ್ರಾವತಿ : ತಕ್ಷಣ ಕಾರ್ಯ ಪ್ರವೃತ್ತರಾಗಿ ಕರ್ತವ್ಯ ನಿಷ್ಠೆ ಮೆರೆಯುವ ಮೂಲಕ ಆತ್ಮಹತ್ಯೆಗೆ ಯತ್ನಿಸಿದ್ದ ಯುವಕನೋರ್ವನನ್ನು ರಕ್ಷಿಸುವಲ್ಲಿ ಇಆರ್‌ಎಸ್‌ಎಸ್-೧೧೨ ವಾಹನದ ಅಧಿಕಾರಿ ಹಾಗು ಸಿಬ್ಬಂದಿ ಯಶಸ್ವಿಯಾಗಿರುವ ಘಟನೆ ನಡೆದಿದೆ. 
ತಾಲೂಕಿನ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ವೀರಾಪುರ ಗ್ರಾಮದ ಯುವಕನೋರ್ವ ಚಾಲಕ ಹುದ್ದೆ ಕಳೆದುಕೊಳ್ಳುವ ಭೀತಿಯಲ್ಲಿ ಮೇ.೭ರಂದು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು, ವಿಷಯ ತಿಳಿದ ಯುವಕನ ತಾಯಿ ೧೧೨ ವಾಹನಕ್ಕೆ ತುರ್ತು ಕರೆ ಮಾಡಿದ ಹಿನ್ನಲೆಯಲ್ಲಿ ಸ್ಥಳಕ್ಕೆ ಆಗಮಿಸಿದ ಇಆರ್‌ಎಸ್‌ಎಸ್ ಅಧಿಕಾರಿ, ಗ್ರಾಮಾಂತರ ಪೊಲೀಸ್ ಠಾಣೆ ಸಿಬ್ಬಂದಿ ವಿನಯ್ ಕುಮಾರ್ ಹಾಗು ಚಾಲಕ ಸಂತೋಷ್ ಕುಮಾರ್‌ರವರು ತಕ್ಷಣ ಕಾರ್ಯಪ್ರವೃತ್ತರಾಗಿ ಸ್ಥಳಕ್ಕೆ ಆಗಮಿಸಿ ಆತ್ಮಹತ್ಯೆ ಯತ್ನ ತಡೆದು ಯುವಕನಿಗೆ ಧೈರ್ಯ ತುಂಬಿದ್ದಾರೆ.  


ಇಆರ್‌ಎಸ್‌ಎಸ್-೧೧೨ ವಾಹನದ ಅಧಿಕಾರಿ ವಿನಯ್ ಕುಮಾರ್ 
    ಇಆರ್‌ಎಸ್‌ಎಸ್-೧೧೨ ವಾಹನದ ಅಧಿಕಾರಿ ಹಾಗು ಸಿಬ್ಬಂದಿ ಕಾರ್ಯವೈಖರಿಗೆ ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ ಮಿಥುನ್ ಕುಮಾರ್ ಪ್ರಶಂಸೆ ವ್ಯಕ್ತಪಡಿಸುವ ಮೂಲಕ ಅಭಿನಂದಿಸಿದ್ದಾರೆ.  

ವಿಜೃಂಭಣೆಯಿಂದ ಜರುಗಿದ ನರಸಿಂಹ ಜಯಂತಿ

ಭದ್ರಾವತಿ ಹಳೇನಗರದ ಪುರಾಣ ಪ್ರಸಿದ್ದ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಭಾನುವಾರ ನರಸಿಂಹ ಜಯಂತಿ ವಿಜೃಂಭಣೆಯಿಂದ ಜರುಗಿತು. 
    ಭದ್ರಾವತಿ : ಹಳೇನಗರದ ಪುರಾಣ ಪ್ರಸಿದ್ದ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಭಾನುವಾರ ನರಸಿಂಹ ಜಯಂತಿ ವಿಜೃಂಭಣೆಯಿಂದ ಜರುಗಿತು. 
    ಬೆಳಿಗ್ಗೆ ೬ ಗಂಟೆಗೆ ನಿರ್ಮಾಲ್ಯ ೮ ಗಂಟೆಗೆ ಪಂಚಾಮೃತ ಅಭಿಷೇಕ ಹಾಗೂ ದೇವಸ್ಥಾನದಿಂದ ಉತ್ಸವ ಮೂರ್ತಿ ಮೆರವಣಿಗೆ ಆರಂಭಗೊಂಡು ಬ್ರಾಹ್ಮಣರ ಬೀದಿ, ರಥ ಬೀದಿ ರಸ್ತೆ,  ತರಿಕೆರೆ ರಸ್ತೆ, ಹಾಗು ಎನ್.ಎಸ್.ಟಿ ರಸ್ತೆ ಮೂಲಕ ಪುನಃ ದೇವಸ್ಥಾನಕ್ಕೆ ಹಿಂದಿರುಗಿತು. 
    ವೇದಘೋಷ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ, ರಾತ್ರಿ ೮ ಗಂಟೆಗೆ ಕಲ್ಯಾಣೋತ್ಸವ ನಡೆಯಿತು. ಮೇ.೧೨ರಂದು ಮಧ್ಯಾಹ್ನ ೧೨ ಗಂಟೆಗೆ ಸ್ವಾಮಿಯ ರಥೋತ್ಸವ ಜರುಗಲಿದೆ. 
    ದೇವಸ್ಥಾನದ ಪ್ರಧಾನ ಅರ್ಚಕ ವೇದಬ್ರಹ್ಮ ಶ್ರೀ ರಂಗನಾಥ ಶರ್ಮ ನೇತೃತ್ವದಲ್ಲಿ ಧಾರ್ಮಿಕ ಆಚರಣೆಗಳು ಜರುಗಿದವು.  ಸಹಾಯಕ ಅರ್ಚಕ ಶ್ರೀನಿವಾಸ್ ಜಿಲ್ಲಾ ಧಾರ್ಮಿಕ ಪರಿಷತ್ ನಿರ್ದೇಶಕ ಜಿ. ರಾಮಕಾಂತ್ ಹಾಗೂ ಎಸ್ ನರಸಿಂಹಾಚಾರ್, ರವಿ ಮಾಸ್ಟರ್, ಸುದರ್ಶನ್, ಸುಧೀಂದ್ರ,  ಶ್ರೀಧರ್, ಅಡುಗೆ ರಂಗಣ್ಣ ಸೇರಿದಂತೆ ಭಕ್ತರು ಪಾಲ್ಗೊಂಡಿದ್ದರು.

ಭಾರತ ದೇಶ ಯುದ್ಧ ಬಯಸಿಲ್ಲ, ಆರಂಭಿಸಿಲ್ಲ : ಕದನವಿರಾಮ ಪಾಕಿಸ್ತಾನದ ಆಯ್ಕೆ

ಅಮೇರಿಕಾ ದೇಶದ ಮಧ್ಯಸ್ಥಿಕೆ ಭಾರತ ದೇಶಕ್ಕೆ ಅಗತ್ಯವಿಲ್ಲ 

ಜಿ. ಧರ್ಮಪ್ರಸಾದ್, ಅಧ್ಯಕ್ಷರು, ತಾಲೂಕು ಬಿಜೆಪಿ ಮಂಡಲ, ಭದ್ರಾವತಿ 
    ಭದ್ರಾವತಿ : ಭಾರತ ದೇಶ ಪಾಕಿಸ್ತಾನದ ಮೇಲೆ ಯುದ್ಧ ನಡೆಸಿಲ್ಲ. ಈಗಲೂ ಸಹ ಯುದ್ಧ ನಡೆಸಲು ಬಯಸಲ್ಲ. ಭಯೋತ್ಪಾದಕನ್ನು ನಿರ್ಮೂಲನೆ ಮಾಡುವುದು ಭಾರತದ ಗುರಿಯಾಗಿದೆ. ಈ ನಿಟ್ಟಿನಲ್ಲಿ ನಡೆದ ಕಾರ್ಯಾಚರಣೆ ಯುದ್ಧದ ರೂಪಕ್ಕೆ ಬದಲಾಗಿದೆ. ಈ ವಿಚಾರದಲ್ಲಿ ಭಾರತ ಕೈಗೊಂಡಿರುವ ನಿಲುವುಗಳು ಈ ದೇಶದ ಜನರ ನಿಲುವುಗಳಾಗಿವೆ ಹೊರತು ಯಾವುದೇ ವ್ಯಕ್ತಿ, ಪಕ್ಷ, ಸಂಸ್ಥೆ ಕೈಗೊಂಡ ನಿಲುವುಗಳಲ್ಲ ಎಂದು ತಾಲೂಕು ಬಿಜೆಪಿ ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್ ತಿಳಿಸಿದ್ದಾರೆ. 
    ಭಾರತ ಮತ್ತು ಪಾಕಿಸ್ತಾನದ ನಡುವೆ ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ಯುದ್ಧ ಕುರಿತು ಕೆಲವರಲ್ಲಿ ತಪ್ಪು ಕಲ್ಪನೆಗಳಿವೆ. ಯುದ್ಧದ ಸ್ಪಷ್ಟನೆ ಅರಿತುಕೊಳ್ಳಬೇಕಾಗಿದೆ. ಪಾಕಿಸ್ತಾನ ಭಯೋತ್ಪಾದಕರಿಗೆ ಆಶ್ರಯ ನೀಡುವ ಮೂಲಕ ಪೋಷಿಸುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಇದು ಬಹಳಷ್ಟು ಸಂದರ್ಭಗಳಲ್ಲಿ ಸಾಬೀತಾಗಿದೆ. ಈ ಹಿನ್ನಲೆಯಲ್ಲಿ ಭಾರತ ದೇಶ ಭಯೋತ್ಪಾದಕರು ಹಾಗು ಅವರ ಉಗ್ರ ಚಟುವಟಿಕೆಗಳ ತಾಣಗಳ ಮೇಲೆ ನಡೆಸಿದ ದಾಳಿಯನ್ನು ಅದು ಸಹಿಸಿಕೊಳ್ಳುವುದು ಅನಿವಾರ್ಯವಾಗಿದೆ. ಅಲ್ಲದೆ ಈ ವಿಚಾರ ನೇರವಾಗಿ ಭಾರತ ದೇಶ ಪಾಕಿಸ್ತಾನ ತಿಳಿಸಿದೆ. ಆದರೂ ಸಹ ವಿನಾಃಕಾರಣ ಭಾರತ ದೇಶದ ಮೇಲೆ ಯುದ್ದ ನಡೆಸಿದೆ. ಮೇಲ್ನೋಟಕ್ಕೆ ಕದನ ವಿರಾಮ ಎಂದು ಘೋಷಿಸಲಾಗಿದೆಯಾದರೂ ಈ ಯುದ್ಧ ಈಗಲೂ ನಿಂತಿಲ್ಲ ಮುಂದುವರೆಯುತ್ತಿದೆ ಎಂದರು. 
    ಪಾಕಿಸ್ತಾನದ ಮೇಲೆ ಯುದ್ದ ನಿಲ್ಲಿಸಲು ಭಾರತ ಯುದ್ಧ ಆರಂಭಿಸಿಲ್ಲ. ಪಾಕಿಸ್ತಾನವೇ ಯುದ್ಧ ಆರಂಭಿಸಿ ಇದೀಗ ಕದನ ವಿರಾಮಕ್ಕೆ ಮನವಿ ಮಾಡಿದೆ. ಇದಕ್ಕೆ ಭಾರತ ದೇಶ ಸ್ಪಂದಿಸಿದೆ. ಪಾಕಿಸ್ತಾನ ಯುದ್ದ ನಿಲ್ಲಿಸಿದರೆ ಭಾರತವೂ ಯುದ್ಧ ನಿಲ್ಲಿಸುತ್ತದೆ. ಇದು ಸತ್ಯವಾದ ವಿಚಾರವಾಗಿದೆ. ಆದರೆ ಈ ವಿಚಾರದಲ್ಲಿ ಅಮೇರಿಕಾ ದೇಶದ ಮಧ್ಯಸ್ಥಿಗೆಯಿಂದ ಭಾರತ ದೇಶ ಯುದ್ಧ ನಿಲ್ಲಿಸಿದೆ ಎಂಬುದು ಸತ್ಯಕ್ಕೆ ದೂರವಾಗಿದೆ. ಕಾಶ್ಮೀರದ ವಿಚಾರವಾಗಲಿ ಅಥವಾ ಯುದ್ಧದ ವಿಚಾರವಾಗಲಿ ಸೂಕ್ತ ನಿರ್ಣಯ ಕೈಗೊಳ್ಳುವ ಶಕ್ತಿ ಭಾರತ ದೇಶ ಹೊಂದಿದೆ. ಪ್ರಸ್ತುತ ಭಾರತ ದೇಶ ಕೈಗೊಂಡಿರುವ ಎಲ್ಲಾ ನಿಲುವುಗಳು ಪರಿಪೂರ್ಣವಾಗಿವೆ, ಸ್ಪಷ್ಟತೆಯಿಂದ ಕೂಡಿವೆ ಎಂದರು. 
    ಯುದ್ಧದ ಸಂದರ್ಭದಲ್ಲಿ ದೇಶದ ಜನರು ಸಾರ್ವಭೌಮತೆಯನ್ನು ಬೆಂಬಲಿಸಬೇಕಾಗಿದೆ. ದೇಶದ ಆಡಳಿತ ನಡೆಸುವ ಸರ್ಕಾರ ಹಾಗು ಅದರ ನೇತೃತ್ವ ವಹಿಸಿರುವ ನಾಯಕನನ್ನು ನಾವೆಲ್ಲರೂ ಬೆಂಬಲಿಸಬೇಕಾಗಿದೆ. ಇಲ್ಲಿ ಪಕ್ಷ ಬೇಧ ಮರೆತು ಎಲ್ಲರೂ ನಾಯಕನ ಹಿಂಬಾಲಕರಾಗಬೇಕು ಅಷ್ಟೆ. ಇದರ ಯಶಸ್ಸು ಸರ್ಕಾರ ಮತ್ತು ನಾಯಕನಿಗೆ ಸಲ್ಲುತ್ತದೆ. ಅಂದರೆ ಇಡೀ ದೇಶದ ಜನರಿಗೆ ಸಲ್ಲುತ್ತದೆ ಹೊರತು. ಯಾವುದೋ ಪಕ್ಷಕ್ಕೆ ಅಥವಾ ಸಂಸ್ಥೆಗೆ ಸಲ್ಲುವುದಿಲ್ಲ. ಇದನ್ನು ಜನಸಾಮಾನ್ಯರು ಅರಿತುಕೊಳ್ಳಬೇಕೆಂದರು. 

Saturday, May 10, 2025

ಭದ್ರಾ ನದಿ ಕಾಲುವೆಯಲ್ಲಿ ಕಾಡುಕೋಣದ ಮೃತದೇಹ ತುಂಡು ಮಾಡಿ ಎಸೆದು ನಿರ್ಲಕ್ಷ್ಯತನ

ತಪ್ಪಿತಸ್ಥ ಅರಣ್ಯ ಇಲಾಖೆ ಸಿಬ್ಬಂದಿಗಳು, ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಿ : ಶಿವಕುಮಾರ್ ಆಗ್ರಹ 

 ಅರಣ್ಯ ಇಲಾಖೆ ಸಿಬ್ಬಂದಿಗಳು ಭದ್ರಾವತಿ ತಾಲೂಕಿನ ಶಿವಪುರ ಗ್ರಾಮದ ಭದ್ರಾ ನಾಲೆಯಲ್ಲಿ ಮೃತಪಟ್ಟ ಕಾಡುಕೋಣದ ದೇಹ ಜೆಸಿಬಿ ಯಂತ್ರ ಬಳಸಿ ತುಂಡು ಮಾಡಿ ಭದ್ರಾ ನದಿ ಕಾಲುವೆಗೆ ಎಸೆದಿರುವುದು. 
    ಭದ್ರಾವತಿ: ಮೃತಪಟ್ಟ ಕಾಡುಕೋಣದ ಮರಣೋತ್ತರ ಪರೀಕ್ಷೆ ನಡೆಸದೆ ಹಾಗು ಮೃತದೇಹ ತುಂಡು ಮಾಡಿ ಭದ್ರಾ ನದಿ ಕಾಲುವೆಗೆ ಎಸೆದು ಅರಣ್ಯ ಇಲಾಖೆ ಸಿಬ್ಬಂದಿಗಳು ನಿರ್ಲಕ್ಷ್ಯತನದಿಂದ ವರ್ತಿಸಿದ್ದಾರೆ. ಈ ಸಂಬಂಧ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಇಲಾಖೆಯ ಉನ್ನತ ಅಧಿಕಾರಿಗಳಿಗೆ ಸಾಮಾಜಿಕ ಕಾರ್ಯಕರ್ತ ಶಿವಕುಮಾರ್ ಆಗ್ರಹಿಸಿದ್ದಾರೆ. 
    ಅರಣ್ಯ ಇಲಾಖೆ ಸಿಬ್ಬಂದಿಗಳು ತಾಲೂಕಿನ ಶಿವಪುರ ಗ್ರಾಮದ ಭದ್ರಾ ನಾಲೆಯಲ್ಲಿ ಮೃತಪಟ್ಟ ಕಾಡುಕೋಣದ ದೇಹ ಜೆಸಿಬಿ ಯಂತ್ರ ಬಳಸಿ ತುಂಡು ಮಾಡಿ ಮೇ.೬ರಂದು ಬೆಳಗ್ಗೆ ೮ ಗಂಟೆ ಸಮಯದಲ್ಲಿ ಕಾಲುವೆಯಿಂದ ಎಸೆದಿದ್ದು, ಇದನ್ನು ಸ್ಥಳೀಯರು ಗಮನಿಸಿ ಚಿತ್ರೀಕರಿಸಿಕೊಂಡಿದ್ದಾರೆ.  ಮೇ.೭ರಂದು ಮಧ್ಯಾಹ್ನ೩ ಗಂಟೆ ಸಮಯದಲ್ಲಿ ಚಿತ್ರೀಕರಿಸಿಕೊಂಡಿದ್ದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಇದನ್ನು ಗಮನಿಸಿದ ಸಿಬ್ಬಂದಿಗಳು ತಕ್ಷಣ ಸಂಜೆ ೫ ಗಂಟೆ ಸಮಯದಲ್ಲಿ ನೀರಿನಲ್ಲಿ ಸುಮಾರು ೮ ಕಿ.ಮೀ ದೂರ ತೇಲಿಕೊಂಡು ಬಂದು ಕೆಂಚಮ್ಮನಹಳ್ಳಿ ನಾಲೆ ಸೇತುವೆಯಲ್ಲಿ ಸಿಕ್ಕಿಹಾಕಿಕೊಂಡಿದ್ದ ತುಂಡು ಮಾಡಿದ್ದ ದೇಹಗಳನ್ನು ಪುನಃ ಜೆಸಿಬಿ ಯಂತ್ರ ಬಳಸಿ ಹೊರ ತೆಗೆದಿದ್ದಾರೆಂದು ಶಿವಕುಮಾರ್ ಆರೋಪಿಸಿದ್ದಾರೆ. 
    ಅಲ್ಲದೆ ನಾಲೆ ಸೇತುವೆಯಿಂದ ಹೊರ ತೆಗೆದ ತುಂಡು ಮಾಡಿದ್ದ ದೇಹಗಳನ್ನು ಅಂತರಗಂಗೆ ಪಶು ವೈದ್ಯರನ್ನು ಕರೆಸಿ ಮರಣೋತ್ತರ ಪರೀಕ್ಷೆ ನಡೆಸಿ ತರಾತುರಿಯಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳ ಅನುಪಸ್ಥಿತಿಯಲ್ಲಿ ಉಕ್ಕುಂದ ಗ್ರಾಮದ ಸ್ಮಶಾನದಲ್ಲಿ ಸುಟ್ಟು ಹಾಕಿದ್ದಾರೆ. ಇದು ವನ್ಯಜೀವಿ ಕಾಯ್ದೆ ಉಲ್ಲಂಘನೆಯಾಗಿದೆ. ಅಲ್ಲದೆ ಮೃತದೇಹ ತುಂಡು ಮಾಡಿ ಕಾಲುವೆಗೆ ಎಸೆದಿರುವುದರಿಂದ ಕಾಡುಕೋಣದ ಸಾವಿಗೆ ನಿಖರವಾದ ಕಾರಣ ಮರಣೋತ್ತರ ಪರೀಕ್ಷೆಯಿಂದ ತಿಳಿದು ಬರುವುದಿಲ್ಲ ಎಂದು ಶಿವಕುಮಾರ್ ದೂರಿದ್ದಾರೆ. 
    ಈ ಹಿನ್ನಲೆಯಲ್ಲಿ ಅರಣ್ಯ ಇಲಾಖೆ ಉನ್ನತ ಅಧಿಕಾರಿಗಳು ಈ ಸಂಬಂಧ ಸೂಕ್ತ ತನಿಖೆ ನಡೆಸುವಂತೆ ಆದೇಶಿಸುವ ಮೂಲಕ ತಪ್ಪಿತಸ್ಥ ಸಿಬ್ಬಂದಿಗಳು ಹಾಗು ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. 

ಮೇ.೧೫ರವರೆಗೆ ಡಿಪ್ಲೋಮಾ ಪ್ರವೇಶಕ್ಕೆ ಅರ್ಜಿ ಅಹ್ವಾನ

    ಭದ್ರಾವತಿ: ಎಸ್‌ಎಸ್‌ಎಲ್‌ಸಿ ವಿದ್ಯಾರ್ಹತೆಗೆ ಅನುಗುಣವಾದ ೨೦೨೫-೨೬ನೇ ಸಾಲಿನ ಪ್ರಥಮ ಸೆಮಿಸ್ಟರ್ ಡಿಪ್ಲೋಮಾ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದ್ದು, ಇದರ ಸದುಪಯೋಗಪಡೆದುಕೊಳ್ಳುವಂತೆ ಕೋರಲಾಗಿದೆ. 
    ಅಭ್ಯರ್ಥಿಗಳು ಮೆರಿಟ್ ಆಧಾರಿತ ಆನ್‌ಲೈನ್ ಪ್ರವೇಶಾತಿಗಾಗಿ ಅರ್ಜಿ ಸಲ್ಲಿಸಲು ಏ.೧೧ ರಿಂದ ಆಹ್ವಾನಿಸಲಾಗಿದ್ದು, ಪ್ರವೇಶ ಬಯಸುವ ಅಭ್ಯರ್ಥಿಗಳು ತಮ್ಮ ಇಚ್ಚಾನುಸಾರ ಆದ್ಯತಾ ಪಟ್ಟಿಯಲ್ಲಿ ಕೋರ್ಸುಗಳ ಆಯ್ಕೆಗಳನ್ನು ನಮೂದಿಸಿ ಒಂದೇ ಅರ್ಜಿಯನ್ನು ಸಮೀಪದ ಯಾವುದಾದರೂ ಸಕಾರಿ ಪಾಲಿಟೆಕ್ನಿಕ್ ಪ್ರಾಂಶುಪಾಲರಿಗೆ ಸಲ್ಲಿಸುವುದು.
    ಅಭ್ಯರ್ಥಿಗಳು ನೀಡುವ ಆದ್ಯತೆ ಅನುಸಾರ ಮೆರಿಟ್ ಹಾಗೂ ರೋಸ್ಟರ್ ಅನುಗುಣವಾಗಿ ಆನ್‌ಲೈನ್ ಮೂಲಕ ಸೀಟು ಹಂಚಿಕೆ ಮಾಡಲಾಗುವುದು. ಅರ್ಜಿ ಹಾಗು ಆಷ್ಷನ್ ಎಂಟ್ರಿಗಳನ್ನು ದಾಖಲಿಸಲು ಮೇ. ೧೫ ಸಂಜೆ ೫.೩೦ ರವರೆಗೆ ಅವಕಾಶ ಇರುತ್ತದೆ. ಹೆಚ್ಚಿನ ಮಾಹಿತಿ ಪಾಲಿಟೆಕ್ನಿಕ್ ಕಚೇರಿ ವೇಳೆಯಲ್ಲಿ ಪಡೆಯಬಹುದಾಗಿದ್ದು, ಅಲ್ಲದೆ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಅಧಿಕೃತ dtek.karnataka.gov.in or dtetech.karnataka.gov.in/kartechnical  ವೆಬ್‌ಸೈಟ್‌ಗಳನ್ನು ಸಂಪರ್ಕಿಸಬಹುದಾಗಿದೆ.
    ನಗರದ ನ್ಯೂಟೌನ್ ವಿಐಎಸ್‌ಎಸ್‌ಜೆ ಸರ್ಕಾರಿ ಪಾಲಿಟೆಕ್ನಿಕ್ ಪ್ರಾಂಶುಪಾಲರು: ೮೭೬೨೭೧೭೧೯೬/೮೮೬೧೯೩೧೫೩೯/೭೯೭೫೦೪೧೧೩೪ ಸಂಪರ್ಕಿಸಲು ಕೋರಲಾಗಿದೆ. 

ಜಾತಿ ಗಣತಿ : ಸೂಕ್ತ ಮಾಹಿತಿ ನೀಡಿ ಮೂಲ ಜಾತಿ ದಾಖಲಿಸಿ

ಭದ್ರಾವತಿ ನ್ಯೂಟೌನ್ ಜಯಶ್ರೀ ವೃತ್ತ ಸಮೀಪದ ತಾಲೂಕು ಛಲವಾದಿಗಳ(ಪ.ಜಾ) ಸಮಾಜದ ಸಂಘದ ಕಛೇರಿಯಲ್ಲಿ ಜಾತಿ ಗಣತಿ ಸಂಬಂಧ ಸಭೆ ನಡೆಸಲಾಯಿತು.
    ಭದ್ರಾವತಿ : ಜಾತಿ ಗಣತಿಗಾಗಿ ಮನೆಗೆ ಬರುವವರಿಗೆ ಸೂಕ್ತ ಮಾಹಿತಿ ನೀಡುವ ಮೂಲಕ ಮೂಲ ಜಾತಿ ಛಲವಾದಿ ಅಥವಾ ಬಲಗೈ ಅಥವಾ ಹೊಲೆಯ ಎಂದು ದಾಖಲಿಸುವಂತೆ ತಾಲೂಕು ಛಲವಾದಿಗಳ(ಪ.ಜಾ) ಸಮಾಜ ಮನವಿ ಮಾಡಿದೆ. 
    ನಗರದ ನ್ಯೂಟೌನ್ ಜಯಶ್ರೀ ವೃತ್ತ ಸಮೀಪದ ಸಂಘದ ಕಛೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಸಮಾಜದ ಪ್ರಮುಖರು, ಈ ಹಿಂದೆ ಗಣತಿ ಕಾರ್ಯದ ಸಂದರ್ಭದಲ್ಲಿ ಪರಿಶಿಷ್ಟ ಜಾತಿ(ಆದಿ ಕರ್ನಾಟಕ)ಗೆ ಸೇರಿರುವ ಛಲವಾದಿ ಸಮಾಜದವರು ಮೋಸ ಹೋಗಿದ್ದಾರೆ. ಆದರೆ ಈ ಬಾರಿ ಆ ರೀತಿಯಾಗದಂತೆ ಸಮಾಜದವರು ಎಚ್ಚರ ವಹಿಸಬೇಕಾಗಿದೆ. ಮೂಲ ಜಾತಿ ವಿಷಯದಲ್ಲಿ ಛಲವಾದಿ ಅಥವಾ ಬಲಗೈ ಅಥವಾ ಹೊಲೆಯ ಎಂಬುದನ್ನು ದಾಖಲಿಸಬಹುದಾಗಿದೆ. ರಾಜ್ಯದ ವಿವಿಧೆಡೆ ಸಮಾಜ ಬಂಧುಗಳು ಆಯಾ ಭಾಗಕ್ಕೆ ತಕ್ಕಂತೆ ಮೂಲ ಜಾತಿ ದಾಖಲಿಸಲು ನಿರ್ಧರಿಸಿದ್ದಾರೆ. ಈ ಹಿನ್ನಲೆಯಲ್ಲಿ ತಾಲೂಕಿನಲ್ಲಿರುವ ಸಮಾಜ ಬಂಧುಗಳು ಸಹ ತಮ್ಮ ಇಚ್ಛೆಯಂತೆ ಛಲವಾದಿ ಅಥವಾ ಬಲಗೈ ಅಥವಾ ಹೊಲೆಯ ಈ ಮೂರು ಹೆಸರಿನಲ್ಲಿ ಯಾವುದಾದರೂ ಒಂದು ದಾಖಲಿಸುವಂತೆ ಮನವಿ ಮಾಡಿದರು. 
    ಸಮಾಜದ ಜಿಲ್ಲಾಧ್ಯಕ್ಷ ಸಿದ್ದಪ್ಪ, ತಾಲೂಕು ಅಧ್ಯಕ್ಷ ಚನ್ನಪ್ಪ, ಪ್ರಮುಖರಾದ ಸಾವಕ್ಕನವರ್, ಎಸ್.ಎಸ್ ಭೈರಪ್ಪ, ಡಿ. ನರಸಿಂಹಮೂರ್ತಿ, ಶ್ರೀನಿವಾಸ್(ನಂಜಾಪುರ), ನಿತ್ಯಾನಂದ, ಎಚ್.ಎಂ ಮಹಾದೇವಯ್ಯ, ಹುಚ್ಚಯ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Friday, May 9, 2025

ರೈಲ್ವೆ ಕ್ಯಾಂಟೀನ್ ಮಾಲೀಕ ಗುರುಪ್ರಸಾದ್ ನಿಧನ

 ಕೆ.ಬಿ.ಗುರುಪ್ರಸಾದ್(ಉನ್ನಿ) 
    ಭದ್ರಾವತಿ : ಬಹಳ ವರ್ಷಗಳಿಂದ ನಗರದ ರೈಲ್ವೆ ಕ್ಯಾಂಟೀನ್ ಮಾಲೀಕರಾಗಿರುವ, ನಗರಸಭೆ ವಾರ್ಡ್ ೩ರ ವ್ಯಾಪ್ತಿಯ ಚಾಮೇಗೌಡ ಏರಿಯಾ ನಿವಾಸಿ ಕೆ.ಬಿ.ಗುರುಪ್ರಸಾದ್(೫೮) ಗುರುವಾರ ರಾತ್ರಿ ನಿಧನ ಹೊಂದಿದರು. 
    ಪತ್ನಿ, ಓರ್ವ ಪುತ್ರ ಹಾಗು ಓರ್ವ ಪುತ್ರಿ ಇದ್ದಾರೆ. ಅನಾರೋಗ್ಯಕ್ಕೆ ಒಳಗಾಗಿದ್ದ ಇವರು ಶಿವಮೊಗ್ಗ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಇವರ ಅಂತ್ಯಕ್ರಿಯೆ ಶುಕ್ರವಾರ ಸಂಜೆ ಸಮೀಪದ ಭದ್ರಾ ನದಿ ತೀರದ ತೋಟದಲ್ಲಿ ನೆರವೇರಿತು.  ಸುಮಾರು ೫ ದಶಕಗಳಿಂದ ರೈಲ್ವೆ ಕ್ಯಾಂಟೀನ್ ಇವರ ಕುಟುಂಬಸ್ಥರು ನಡೆಸಿಕೊಂಡು ಬರುತ್ತಿದ್ದು, ಗುರುಪ್ರಸಾದ್‌ರವರು ಉನ್ನಿ ಎಂಬ ಹೆಸರಿನಲ್ಲಿ ಚಿರಪರಿಚಿತರಾಗಿದ್ದರು. 
    ಸಂತಾಪ:
    ಶಾಸಕ ಬಿ.ಕೆ.ಸಂಗಮೇಶ್ವರ್, ಉದ್ಯಮಿ ಬಿ.ಕೆ ಜಗನ್ನಾಥ್, ನಗರಸಭೆ ಸದಸ್ಯ ಬಿ.ಕೆ ಮೋಹನ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಿ.ಕೆ ಶಿವಕುಮಾರ್, ಎರೇಹಳ್ಳಿ ಗ್ರಾ.ಪಂ. ಸದಸ್ಯ ಸಿ.ಆರ್ ಶಿವರಾಂ, ಬಿಜೆಪಿ ಮುಖಂಡ ಕೂಡ್ಲಿಗೆರೆ ಹಾಲೇಶ್, ವೀರಶೈವ ಲಿಂಗಾಯಿತ ಮಹಾಸಭಾ ಮಾಜಿ ಅಧ್ಯಕ್ಷ ಸಿದ್ದಲಿಂಗಯ್ಯ, ಮುಖಂಡರಾದ ಕರುಣಾಕರ್, ಮುಕುಂದರಾವ್, ರೈಲ್ವೆ ಅಧಿಕಾರಿಗಳು ಸಿಬ್ಬಂದಿಗಳು, ಅನೇಕ ಸಂಘ ಸಂಸ್ಥೆಗಳ ಮುಖಂಡರು ಸಂತಾಪ ಸೂಚಿಸಿದ್ದಾರೆ.