ಬುಧವಾರ, ಜುಲೈ 23, 2025

ಮುಂದಿನ ಚುನಾವಣೆಯಲ್ಲಿ ಪಕ್ಷದ ವರ್ಚಸ್ಸು, ಕಾರ್ಯಕರ್ತರು, ಅಭಿಮಾನಿ ಬಳಗದ ಶಕ್ತಿಯಿಂದ ಶಾರದ ಅಪ್ಪಾಜಿ ಗೆಲ್ಲಿಸಿಕೊಳ್ಳುತ್ತೇವೆ

ಜೆಡಿಎಸ್ ಸದಸ್ಯತ್ವ ಅಭಿಯಾನ ಕಾರ್ಯಕ್ರಮದಲ್ಲಿ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ 

ಭದ್ರಾವತಿ ನಗರದ ಬಿ.ಎಚ್ ರಸ್ತೆ, ಶ್ರೀ ಮಂಜುನಾಥ ಸ್ವಾಮಿ ಕಲ್ಯಾಣ ಮಂಟಪದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ಜೆಡಿಎಸ್ ಸದಸ್ಯತ್ವ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮಾತನಾಡಿದರು. 
    ಭದ್ರಾವತಿ: ಕ್ಷೇತ್ರದಲ್ಲಿ ಮುಂದಿನ ೨೦೨೮ರ ಚುನಾವಣೆಯಲ್ಲಿ ಶಾರದ ಅಪ್ಪಾಜಿ ಗೆಲುವು ಖಚಿತ. ಇದು ಸಾಧ್ಯವಾಗದಿದ್ದಲ್ಲಿ ನನ್ನ ಜನ್ಮವಿರುವತನಕ ಈ ಕ್ಷೇತ್ರಕ್ಕೆ ತಲೆ ಹಾಕುವುದಿಲ್ಲ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು. 
    ಅವರು ಬುಧವಾರ ನಗರದ ಬಿ.ಎಚ್ ರಸ್ತೆ, ಶ್ರೀ ಮಂಜುನಾಥ ಸ್ವಾಮಿ ಕಲ್ಯಾಣ ಮಂಟಪದಲ್ಲಿ ಜೆಡಿಎಸ್ ಸದಸ್ಯತ್ವ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕ್ಷೇತ್ರದಲ್ಲಿ ಮಾಜಿ ಶಾಸಕರಾದ ದಿವಂಗತ ಎಂ.ಜೆ ಅಪ್ಪಾಜಿಯವರ ಕೊಡುಗೆ ಅಪಾರವಾಗಿದೆ. ಅವರ ಅಭಿಮಾನ ಬಳಗ, ಪಕ್ಷದ ಕಾರ್ಯಕರ್ತರು ಇನ್ನೂ ಜೀವಂತವಾಗಿದ್ದಾರೆ. ಸೋಲಿನಿಂದ ಯಾರು ಸಹ ದೃತಿಗೆಡುವ ಅಗತ್ಯವಿಲ್ಲ. ಈ ಬಾರಿ ಶಾರದ ಅಪ್ಪಾಜಿಯವರು ಅಲ್ಪಮತಗಳ ಅಂತರದಿಂದ ಸೋಲು ಕಂಡಿದ್ದಾರೆ. ನಾನು, ನಮ್ಮ ತಂದೆ ಕೇಂದ್ರ ಸಚಿವರಾದ ಎಚ್.ಡಿ ಕುಮಾರಸ್ವಾಮಿ ಹಾಗು ನಮ್ಮ ತಾತ ಮಾಜಿ ಪ್ರಧಾನಿಗಳಾದ ಎಚ್.ಡಿ ದೇವೇಗೌಡರು ಮುಂದಿನ ಚುನಾವಣೆಯಲ್ಲಿ ಶಾರದ ಅಪ್ಪಾಜಿ ಅವರನ್ನು ಗೆಲ್ಲಿಸುತ್ತೇವೆ. ಒಂದು ವೇಳೆ ಇದು ಸಾಧ್ಯವಾಗದಿದ್ದಲ್ಲಿ ಈ ಕ್ಷೇತ್ರಕ್ಕೆ ನನ್ನ ಜನ್ಮವಿರುವತನಕ ತಲೆ ಹಾಕುವುದಿಲ್ಲ ಎಂದರು. 
    ಕ್ಷೇತ್ರದಲ್ಲಿನ ಕಾಂಗ್ರೆಸ್ ಶಾಸಕರು ಹಾಗು ಅವರ ಕುಟುಂಬ ವರ್ಗದರಿಂದ ನಿರಂತರವಾಗಿ ಪಕ್ಷದ ಮುಖಂಡರು, ಕಾರ್ಯಕರ್ತರ ಮೇಲೆ ದೌರ್ಜನ್ಯ, ದಬ್ಬಾಳಿಕೆ ನಡೆಯುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಧಿಕಾರ ಯಾರಿಗೂ ಶಾಶ್ವತವಲ್ಲ. ಇದನ್ನು ಅವರು ಅರ್ಥಮಾಡಿಕೊಂಡು ಸುಮ್ಮನಿರಬೇಕು. ಇಲ್ಲವಾದಲ್ಲಿ ಮುಂದಿನ ಚುನಾವಣೆಯಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು ಸಿಡಿದೆದ್ದು ಹೋರಾಟ ನಡೆಸಿದ್ದಲ್ಲಿ ಅಧಿಕಾರ ಕಳೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು. 
    ಕ್ಷೇತ್ರದಲ್ಲಿ ಇಸ್ಪೀಟ್, ಮಟ್ಕಾ, ಜೂಜಾಟ, ಗಾಂಜಾ ಸೇರಿದಂತೆ ಕಾನೂನುಬಾಹಿರ ಚಟುವಟಿಕೆಗಳು ಹೆಚ್ಚಾಗುತ್ತಿವೆ. ಇದರಿಂದ ಯುವ ಜನರು ದಾರಿ ತಪ್ಪುತ್ತಿದ್ದಾರೆ. ಶಾಸಕರ ಆಡಳಿತದಲ್ಲಿ ಕುಟುಂಬ ವರ್ಗದವರು ಹಸ್ತಕ್ಷೇಪ ಮಾಡುತ್ತಿದ್ದಾರೆ. ಅಧಿಕಾರಿಗಳು, ಮಹಿಳೆಯರ ಮೇಲೆ ದೌರ್ಜನ್ಯ, ದಬ್ಬಾಳಿಕೆ ಹೆಚ್ಚಾಗುತ್ತಿವೆ. ಇವುಗಳಿಗೆ ಕಡಿವಾಣ ಹಾಕಲು ಪಕ್ಷದ ಮುಖಂಡರು, ಕಾರ್ಯಕರ್ತರು ಸದಸ್ಯತ್ವ ಹೆಚ್ಚಿಸುವ ಮೂಲಕ ಪಕ್ಷವನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ಸಂಘಟಿಸುವ ಅಗತ್ಯವಿದೆ ಎಂದರು. 
    ಜೆಡಿಎಸ್ ಸದಸ್ಯತ್ವ ಅಭಿಯಾನದ ಕಾರ್ಯಕ್ರಮಕ್ಕೆ ಜನರು ಅಭೂತಪೂರ್ವ ಬೆಂಬಲ ನೀಡುತ್ತಿರುವುದು ಗಮನಿಸಿದರೆ, ಇದು ಮುಂದಿನ ಚುನಾವಣೆಯ ದಿಕ್ಸೂಚಿ ತೊರಿಸುತ್ತದೆ. ಬದಲಾವಣೆಯ ಗಾಳಿ ತೊರುತ್ತದೆ ಎಂದರು.
    ಪಕ್ಷದ ನಿಷ್ಠಾವಂತ ಕಾರ್ಯಕರ್ತರ ಸಂಪರ್ಕ ನಿರಂತರವಾಗಿ ಇಟ್ಟುಕೊಳ್ಳುವ ನಿಮ್ಮ ಬಳಿಗೆ ನಾನು ಬಂದಿದ್ದೇನೆ. ಜನರ ಧ್ವನಿಯಾಗಿರುವ, ಪಕ್ಷ ಕಟ್ಟಲು ಶ್ರಮಿಸುವ ನಿಷ್ಟಾವಂತರನ್ನು ಗುರುತಿಸಿ ಕಾರ್ಯಕರ್ತರ ಸಮಕ್ಷಮ ತಾಪಂ, ಜಿಪಂ ಕ್ಷೇತ್ರಗಳಿಗೆ ಆಯ್ಕೆ ಮಾಡಲಾಗುತ್ತದೆ ಎಂದರು.
    ವೇದಿಕೆಯಲ್ಲಿ ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕಿ ಶಾರದ ಪೂರ್‍ಯಾನಾಯ್ಕ, ವಿಧಾನಪರಿಷತ್ ಸದಸ್ಯ ಎಸ್.ಎಲ್ ಬೋಜೇಗೌಡ, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಶಾರದ ಅಪ್ಪಾಜಿ, ಯುವ ಘಟಕದ ಜಿಲ್ಲಾಧ್ಯಕ್ಷ ಮಧು ಕುಮಾರ್, ಆರ್. ಕರುಣಾಮೂರ್ತಿ, ಎಂ.ಎ ಅಜಿತ್, ಟಿ. ಚಂದ್ರೇಗೌಡ, ತಿಮ್ಮೇಗೌಡ, ಮಧುಸೂದನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ವಿಐಎಸ್‌ಎಲ್ ಕಾರ್ಖಾನೆ ಮರುನಿರ್ಮಾಣ ಕುಮಾರಣ್ಣ ಶಪಥ : ನಿಖಿಲ್ ಕುಮಾರಸ್ವಾಮಿ

ಭದ್ರಾವತಿ ನಗರದ ಬಿ.ಎಚ್ ರಸ್ತೆ, ಶ್ರೀ ಮಂಜುನಾಥ ಸ್ವಾಮಿ ಕಲ್ಯಾಣ ಮಂಟಪದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ಜೆಡಿಎಸ್ ಸದಸ್ಯತ್ವ ಅಭಿಯಾನ ಕಾರ್ಯಕ್ರಮ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಉದ್ಘಾಟಿಸಿದರು. 
    ಭದ್ರಾವತಿ: ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ (ವಿಐಎಸ್‌ಎಲ್)ಯನ್ನು ಮರುನಿರ್ಮಾಣ ಮಾಡಲು ಕುಮಾರಣ್ಣ ಶಪಥ ಮಾಡಿದ್ದಾರೆ. ಇದರಲ್ಲಿ ಯಾವುದೇ ಸಂಶಯ ಬೇಡ. ಅತೀ ಶೀಘ್ರದಲ್ಲಿ  ಕಾರ್ಖಾನೆ ಮರುಸ್ಥಾಪನೆ ಆಗುತ್ತದೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು. 
    ಅವರು ಬುಧವಾರ ನಗರದ ಬಿ.ಎಚ್ ರಸ್ತೆ, ಶ್ರೀ ಮಂಜುನಾಥ ಸ್ವಾಮಿ ಕಲ್ಯಾಣ ಮಂಟಪದಲ್ಲಿ ಜೆಡಿಎಸ್ ಸದಸ್ಯತ್ವ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕಾರ್ಖಾನೆಯನ್ನು ಪುನಶ್ಚೇತನಗೊಳಿಸಲು ಕುಮಾರಣ್ಣ ಕೇಂದ್ರದ ಸಚಿವರಾಗುತ್ತಿದ್ದಂತೆ ವಿಶೇಷ ಕಾಳಜಿ ವಹಿಸಿದ್ದಾರೆ. ನೂರಕ್ಕೆ ನೂರರಷ್ಟು ಇದಕ್ಕೆ ಮರು ಜೀವ ಕೊಡುತ್ತಾರೆ. ಜಿಲ್ಲೆಯ ಜನತೆಗೆ ಶಾಶ್ವತವಾಗಿ ಬದುಕು ಕಟ್ಟಿಕೊಳ್ಳುವುದಕ್ಕೆ ಈ ನಿರ್ಧಾರ ಮಾಡಿದ್ದಾರೆ ಎಂದರು.
    ಆಂಧ್ರ ಪ್ರದೇಶದ ವಿಶಾಖಪಟ್ಟಣದ ರಾಷ್ಟ್ರೀಯ ಉಕ್ಕು ಕಾರ್ಖಾನೆ (ಆರ್‌ಎನ್‌ಐಎಲ್)/ ವೈಜಾಗ್ ಸ್ಟೀಲ್ ಕಂಪನಿ ಸಂಪೂರ್ಣವಾಗಿ ಮುಚ್ಚಲಾಗಿತ್ತು. ಕುಮಾರಣ್ಣ ಅವರ ದೃಢ ನಿರ್ಧಾರದಿಂದ ೧೧,೪೪೦ ಕೋ. ರು. ವೆಚ್ಚದಲ್ಲಿ ಮರುಜೀವ ನೀಡಿರುವುದು ನಮ್ಮ ಕಣ್ಮುಂದೆ ಇದೆ ಎಂದರು.
    ಇದೆ ರೀತಿ ವಿಐಎಸ್‌ಎಲ್ ಕಾರ್ಖಾನೆ ಸಹ ಮರುಜೀವ ಪಡೆಯಲಿದ್ದು, ಈಗಾಗಲೇ ಕಾರ್ಖಾನೆ ಮರುನಿರ್ಮಾಣ ಮಾಡುವ ಸಂಬಂಧ ವಿಸ್ತೃತ ಯೋಜನಾ ವರದಿ ಸಿದ್ಧವಾಗುತ್ತಿದೆ. ಇಡೀ ಕಾರ್ಖಾನೆಯನ್ನು ಹೊಸದಾಗಿ ಅತ್ಯಾಧುನಿಕವಾಗಿ ಮರುನಿರ್ಮಾಣ ಮಾಡಬೇಕೆಂದು ಕುಮಾರಣ್ಣ ಅವರು ಶಪಥ ಮಾಡಿದ್ದಾರೆ. ನಿಮ್ಮೆಲ್ಲರ ಸಹಕಾರದಿಂದ ಅತಿ ಶೀಘ್ರದಲ್ಲೇ ಪುನಶ್ಚೇತನ ಯೋಜನೆಯನ್ನು ಕಾರ್ಯರೂಪಕ್ಕೆ ತರಲಾಗುವುದು ಎಂದು ಒತ್ತಿ ಹೇಳಿದರು.

ದಲಿತ, ಪ್ರಗತಿಪರ ಸಂಘಟನೆಗಳ ಒಗ್ಗೂಡಿಸಲು ನೂತನ ಸಮಿತಿ ಅಸ್ತಿತ್ವಕ್ಕೆ : ವಿ. ವಿನೋದ್

ಭದ್ರಾವತಿ ಸಿ.ಎನ್ ರಸ್ತೆ, ಗಂಗಾಪರಮೇಶ್ವರಿ ಸಮುದಾಯ ಭವನದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ತರಲಾಗಿರುವ ಕರ್ನಾಟಕ ದಲಿತ ಸಮನ್ವಯ ಸಮಿತಿ ಪ್ರಪ್ರಥಮ ಪದಾಧಿಕಾರಿಗಳ ಸಭೆಯಲ್ಲಿ ನಡೆಯಿತು. 
    ಭದ್ರಾವತಿ : ಸಂವಿಧಾನ ಶಿಲ್ಪಿ, ಭಾರತರತ್ನ ಡಾ. ಬಾಬಾ ಸಾಹೇಬ್ ಅಂಬೇಡ್ಕರ್‌ರವರ ಆಶಯಗಳನ್ನು ಮೈಗೂಡಿಸಿಕೊಂಡು ಹಾಗು ಕ್ಷೇತ್ರದಲ್ಲಿ ದಲಿತ ಚಳುವಳಿ ಹುಟ್ಟು ಹಾಕಿದ ಪ್ರೊ. ಬಿ. ಕೃಷ್ಣಪ್ಪನವರ ಹೋರಾಟದ ದಾರಿಯಲ್ಲಿ ಸಾಗುತ್ತಿರುವ ಪ್ರಸ್ತುತ ಜಿಲ್ಲೆಯಲ್ಲಿ ಅಸ್ತಿತ್ವದಲ್ಲಿರುವ ದಲಿತ ಸಂಘಟನೆಗಳಲ್ಲಿ ಭಿನ್ನಾಭಿಪ್ರಾಯಗಳು ಎದ್ದು ಕಾಣುತ್ತಿದ್ದು, ಅಲ್ಲದೆ ಒಗ್ಗಟ್ಟು ಇಲ್ಲದಿರುವುದು ಕಂಡು ಬರುತ್ತಿದೆ. ಈ ಹಿನ್ನಲೆಯಲ್ಲಿ ಹೊಸದಾಗಿ ದಲಿತ ಸಂಘಟನೆಯ ಅಗತ್ಯವಿದ್ದು, ಕರ್ನಾಟಕ ದಲಿತ ಸಮನ್ವಯ ಸಮಿತಿ ಅಸ್ತಿತ್ವಕ್ಕೆ ತರಲಾಗಿದೆ ಎಂದು ಸಮಿತಿ ಸಂಸ್ಥಾಪಕ ರಾಜ್ಯಾಧ್ಯಕ್ಷ ವಿ. ವಿನೋದ್ ಹೇಳಿದರು. 
    ಅವರು ನಗರದ ಸಿ.ಎನ್ ರಸ್ತೆ, ಗಂಗಾಪರಮೇಶ್ವರಿ ಸಮುದಾಯ ಭವನದಲ್ಲಿ ಜರುಗಿದ ಕರ್ನಾಟಕ ದಲಿತ ಸಮನ್ವಯ ಸಮಿತಿ ಪ್ರಪ್ರಥಮ ಪದಾಧಿಕಾರಿಗಳ ಸಭೆಯಲ್ಲಿ ಪಾಲ್ಗೊಂಡು ಪ್ರಾಸ್ತಾವಿಕವಾಗಿ ಮಾತನಾಡಿದರು. 
  ಕರ್ನಾಟಕ ದಲಿತ ಸಮನ್ವಯ ಸಮಿತಿ ರಾಜ್ಯಮಟ್ಟದ ಸಂಘಟನೆಯಾಗಿದ್ದು, ಬಾಬಾ ಸಾಹೇಬ್ ಅಂಬೇಡ್ಕರ್‌ರವರ ಸಂವಿಧಾನದ ಆಶಯದಂತೆ ಮತ್ತು ಕರ್ನಾಟಕದ ಅಂಬೇಡ್ಕರ್ ಎಂದೇ ಖ್ಯಾತಿ ಪಡೆದಿರುವ ಪ್ರೊ. ಬಿ. ಕೃಷ್ಣಪ್ಪನವರ ಹೋರಾಟದ ಹಾದಿಯಲ್ಲಿ ಮುನ್ನಡೆಸಲಾಗುವುದು. ಈ ಸಂಘಟನೆ ಮೂಲಕ ಬಡವರು, ಕಾರ್ಮಿಕರು, ರೈತರು ಮತ್ತು ಮಹಿಳೆಯರ ಧ್ವನಿಯಾಗಿ ಹಾಗೂ ಭವಿಷ್ಯದ ಮಕ್ಕಳ ಶಿಕ್ಷಣದ ಹಕ್ಕುಗಳು, ಅಲ್ಪಸಂಖ್ಯಾತರು, ದೀನ ದಲಿತರ ಹಕ್ಕುಗಳಿಗಾಗಿ ಚಳುವಳಿಗಳನ್ನು, ಹೋರಾಟಗಳನ್ನು ರೂಪಿಸಲಾಗುವುದು ಎಂದರು
    ದಲಿತ ಹಾಗು ಪ್ರಗತಿಪರ ಎಲ್ಲಾ ಸಂಘಟನೆಗಳನ್ನು, ಎಲ್ಲಾ ಹೋರಾಟಗಾರರು ಹಾಗೂ ಚಿಂತಕರನ್ನು ಸಮನ್ವಯಗೊಳಿಸಿಕೊಂಡು ಸಾಗುವ ಸದುದ್ದೇಶ ನೂತನವಾಗಿ ಅಸ್ತಿತ್ವಕ್ಕೆ ತರಲಾಗಿರುವ ಸಮಿತಿ ಹೊಂದಿದೆ. ಈ ಹಿನ್ನಲೆಯಲ್ಲಿ ರಾಜ್ಯದ ಎಲ್ಲಾ ಹೋರಾಟಗಾರರು, ಚಿಂತಕರು, ಪ್ರಗತಿಪರರು, ನೌಕರರು, ಶಿಕ್ಷಣಾಸಕ್ತರು, ಸಾಹಿತಿಗಳು ಸಮಿತಿಯೊಂದಿಗೆ ಕೈಜೋಡಿಸಲು ಕೋರುತ್ತೇನೆ.  ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಎಲ್ಲಾ ಜಿಲ್ಲೆ ತಾಲೂಕು ಹೋಬಳಿ ವಿಭಾಗ ಮಟ್ಟದ ಸಮಿತಿಗಳನ್ನು ಪ್ರಜಾಸತ್ತಾತ್ಮಕವಾಗಿ ಆಯ್ಕೆ ಮಾಡಲಾಗುವುದು ಎಂದರು. 
    ಸಾರಿಗೆ ಇಲಾಖೆಯ ಎನ್. ಮಂಜುನಾಥ್ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಗೌರವಾಧ್ಯಕ್ಷ ಯು. ಮಹದೇವಪ್ಪ ಮತ್ತು ಕರ್ನಾಟಕ ಜಾನಪದ ಪರಿಷತ್ ತಾಲೂಕು ಅಧ್ಯಕ್ಷ ಎಂ.ಆರ್ ರೇವಣಪ್ಪರವರು ಸಭೆಯಲ್ಲಿ ಉಪಸ್ಥಿತರಿದ್ದು, ಸಲಹೆ, ಸೂಚನೆ, ಮಾರ್ಗದರ್ಶನ ನೀಡಿದರು. 
    ಕೇಂದ್ರ ಕಾರ್ಯಕಾರಿ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಲಾಯಿತು. ಸಭೆಯಲ್ಲಿ ಸುನಿಲ್ ಕೋಟಿ ಸ್ವಾಗತಿಸಿ, ನೇತ್ರ ಕಾಳಿಂಗನಹಳ್ಳಿ ವಂದಿಸಿದರು.

ಒಗ್ಗಟ್ಟಾಗಿ ಮುನ್ನಡೆಯುವ ಮೂಲಕ ಸಮುದಾಯಕ್ಕೆ ಗೌರವ ತಂದುಕೊಡುವ ಕೆಲಸ ಮಾಡಿ : ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಭದ್ರಾವತಿ ತಾಲೂಕು ಶಾಖೆ ವತಿಯಿಂದ ಸಿದ್ಧಾರೂಢನಗರದ ಶ್ರೀ ಬಸವೇಶ್ವರ ಸಭಾ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರತಿಭಾ ಪುರಸ್ಕಾರ, ಸಮಾಜದ ಹಿರಿಯರಿಗೆ ಗೌರವ ಮತ್ತು ಜನಪ್ರತಿನಿಧಿಗಳಿಗೆ ಸನ್ಮಾನ ಸಮಾರಂಭ ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ವೀರಸಿಂಹಾಸನಾಧೀಶ್ವರ ಶ್ರೀ ಜಗದ್ಗುರು ಪ್ರಸನ್ನ ರೇಣುಕ ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸೇರಿದಂತೆ ಇನ್ನಿತರರು ಉದ್ಘಾಟಿಸಿದರು. 
    ಭದ್ರಾವತಿ: ವೀರಶೈವ ಲಿಂಗಾಯತ ಸಮುದಾಯದವರು ಸಮಾಜದಲ್ಲಿನ ಎಲ್ಲರೊಂದಿಗೆ ಒಗ್ಗಟ್ಟಾಗಿ ಮುನ್ನಡೆಯುವ ಮೂಲಕ ಸಮುದಾಯಕ್ಕೆ ಗೌರವ ತಂದುಕೊಡುವ ಕೆಲಸ ಮಾಡಬೇಕೆಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು. 
    ಅವರು ಬುಧವಾರ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಶಾಖೆ ವತಿಯಿಂದ ಸಿದ್ಧಾರೂಢನಗರದ ಶ್ರೀ ಬಸವೇಶ್ವರ ಸಭಾ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರತಿಭಾ ಪುರಸ್ಕಾರ, ಸಮಾಜದ ಹಿರಿಯರಿಗೆ ಗೌರವ ಮತ್ತು ಜನಪ್ರತಿನಿಧಿಗಳಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು. 
    ಸಮಾಜದಲ್ಲಿ ಯಾರೊಂದಿಗೂ ಬೇಧಭಾವ ತೋರದೆ ಸಮುದಾಯದವರು ಮುನ್ನಡೆಯುವ ಮೂಲಕ ವೀರಶೈವ ಲಿಂಗಾಯತ ಸಮುದಾಯದ ಘನತೆ-ಗೌರವ ಮತ್ತಷ್ಟು ಹೆಚ್ಚಿಸುವಂತಾಗಬೇಕು. ಪ್ರಸ್ತುತ ಒಂದೇ ವೇದಿಕೆಯಲ್ಲಿ ವೀರಶೈವ ಲಿಂಗಾಯತ ಸಮುದಾಯದವರೆಲ್ಲರೂ ಒಗ್ಗಟ್ಟಿನ ಶಕ್ತಿ ಪ್ರದರ್ಶಿಸುವ ಮೂಲಕ ಸಮುದಾಯದ ಶಕ್ತಿ ಸಮಾಜಕ್ಕೆ ತೋರಿಸಿರುವುದು ಶ್ಲಾಘನೀಯ ಕಾರ್ಯವಾಗಿದೆ. ಸಮುದಾಯದಲ್ಲೂ ಬಹಳಷ್ಟು ಜನ ಹಿಂದುಳಿದವರು ಇದ್ದಾರೆ. ಅವರನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ನಡೆಯಲಿ ಎಂದರು. 
    ಮಹಾಸಭಾ ರಾಜ್ಯಾಧ್ಯಕ್ಷ ಶಂಕರ ಮಹಾದೇವ ಬಿದರಿ ಮಾತನಾಡಿ, ವೀರಶೈವ ಮತ್ತು ಲಿಂಗಾಯತ ಎರಡೂ ಒಂದೇ ಎಂಬುದನ್ನು ಸಮುದಾಯದ ಪ್ರತಿಯೊಬ್ಬರು ಅರ್ಥ ಮಾಡಿಕೊಳ್ಳಬೇಕು. ಸಮುದಾಯದ ಏಳಿಗೆಗೆ ಪ್ರತಿಯೊಬ್ಬರು ಸಹ ತಮ್ಮ ಕೊಡುಗೆಗಳನ್ನು ನೀಡಬೇಕು. ತಮ್ಮಿಂದ ಏನು ಸಹ ಮಾಡಲು ಸಾಧ್ಯವಿಲ್ಲದಿದ್ದಲ್ಲಿ ಸುಮ್ಮನಿರಬೇಕು. ಸಂಘಟನೆಯಲ್ಲಿ ತೊಡಗಿರುವವರಿಗೆ ಯಾವುದೇ ರೀತಿ ತೊಂದರೆ ಕೊಡದಿದ್ದರೆ ಅಷ್ಟೆ ಸಾಕು ಎಂದರು. 
    ವಿಧಾನಪರಿಷತ್ ಸದಸ್ಯ ಎಸ್. ರುದ್ರೇಗೌಡ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಷ್ಟ್ರೀಯ ಕಾರ್ಯದರ್ಶಿ ಎಚ್.ಎಂ ರೇಣುಕ ಪ್ರಸನ್ನ ಸೇರಿದಂತೆ ಇನ್ನಿತರರು ಮಾತನಾಡಿದರು. 
    ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ವೀರಸಿಂಹಾಸನಾಧೀಶ್ವರ ಶ್ರೀ ಜಗದ್ಗುರು ಪ್ರಸನ್ನ ರೇಣುಕ ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ದಿವ್ಯ ಸಾನಿಧ್ಯ ವಹಿಸಿದ್ದರು. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ಕೆ.ಎಸ್ ವಿಜಯಕುಮಾರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. 
    ಎಡೆಯೂರು ಕ್ಷೇತ್ರದ ಶ್ರೀ ರೇಣುಕ ಶಿವಾಚಾರ್ಯ ಸ್ವಾಮೀಜಿ ಮತ್ತು ಬಿಳಿಕಿ ಹಿರೇಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ ಉಪಸ್ಥಿತರಿದ್ದರು. 
    ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಷ್ಟ್ರೀಯ ಉಪಾಧ್ಯಕ್ಷರಾದ ಅಣಬೇರು ರಾಜಣ್ಣ, ಶಾಸಕ ಬಿ.ಕೆ ಸಂಗಮೇಶ್ವರ್, ನಗರಸಭೆ ಅಧ್ಯಕ್ಷೆ ಜೆ.ಸಿ ಗೀತಾ ರಾಜ್‌ಕುಮಾರ್, ನಟರಾಜ ಸಾಗರನಹಳ್ಳಿ, ಎಂ.ಜಿ ಶಶಿಕಲಾಮೂರ್ತಿ, ರುದ್ರಮುನಿ ಎನ್. ಸಜ್ಜನ್, ಬಳ್ಳೇಕೆರೆ ಸಂತೋಷ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು. 
     ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದು ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿರುವ ಪ್ರತಿಭಾವಂತ ಮಕ್ಕಳನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಹಿರಿಯ ಗಣ್ಯರಾದ ಎಚ್.ವಿ ಶಿವರುದ್ರಪ್ಪ, ವಿಶ್ವನಾಥ ಕೋಠಿ, ಡಾ. ವಿಜಯದೇವಿ, ಜಿ.ಕೆ ನವಿಲಪ್ಪ, ಕೆ.ಬಿ ಪರಮೇಶ್ವರಪ್ಪ ಮತ್ತು ಎಚ್.ಎಸ್ ಮಲ್ಲೇಶಪ್ಪ ಸೇರಿದಂತೆ ಇನ್ನಿತರರಿಗೆ ಗೌರವ ಸಮರ್ಪಣೆ ಸಲ್ಲಿಸಲಾಯಿತು.  
    ಆರಂಭದಲ್ಲಿ ವಟುಗಳಿಂದ ವೇದಘೋಷ ನಡೆಯಿತು.  ಅನುಪಮ ಚನ್ನೇಶ್, ಮಮತಾ ಪ್ರಾರ್ಥಿಸಿ, ಆರ್.ಎಸ್.ಶೋಭಾ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಹೆಬ್ಬಂಡಿ ನಟರಾಜ್ ಸ್ವಾಗತಿಸಿ, ನಿವೃತ್ತ ಪ್ರಾಂಶುಪಾಲ ಭುವನೇಶ್ವರ್ ನಿರೂಪಿಸಿದರು.  
 
ರಾಜ್ಯ ಸರ್ಕಾರ ಈ ಹಿಂದೆ ಕೈಗೊಂಡಿದ್ದ  ಜಾತಿ ಗಣತಿ ಸಂಬಂಧ ಸಾಕಷ್ಟು ಚರ್ಚೆಗಳು ನಡೆದಿದ್ದು, ವೀರಶೈವ ಲಿಂಗಾಯತ ಸಮುದಾಯದ ಜನಪ್ರತಿನಿಧಿಗಳು ಒಟ್ಟಾಗಿ ಗಣತಿಯಲ್ಲಿನ ಲೋಪದೋಷಗಳನ್ನು ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿಕೊಡಲಾಯಿತು. ಇದಕ್ಕೆ ಪೂರಕವಾಗಿ ಸ್ಪಂದಿಸಿದ ಮುಖ್ಯಮಂತ್ರಿಗಳು ಪುನಃ ಜಾತಿಗಣತಿಗೆ ಆದೇಶಿಸಿದ್ದಾರೆ. ಈ ಹಿನ್ನಲೆಯಲ್ಲಿ ಸಮುದಾಯದವರು ಜಾತಿಗಣತಿಗೆ ಬರುವವರಿಗೆ ಕಡ್ಡಾಯವಾಗಿ ಅಗತ್ಯ ಮಾಹಿತಿಗಳನ್ನು ನೀಡುವ ಮೂಲಕ ಭವಿಷ್ಯದಲ್ಲಿ ಸಮುದಾಯದ ಏಳಿಗೆಗೆ ಪ್ರತಿಯೊಬ್ಬರು ಕೈಜೋಡಿಸಬೇಕು. 
                                                                                                                                                   - ಲಕ್ಷ್ಮೀ ಹೆಬ್ಬಾಳ್ಕರ್, ಸಚಿವೆ.    
 

ಮಂಗಳವಾರ, ಜುಲೈ 22, 2025

ವೇತನ ಪರಿಷ್ಕರಣೆ ಯಥಾಸ್ಥಿತಿ ಮುಂದುವರೆಸಲು ಒತ್ತಾಯಿಸಿ ಪ್ರತಿಭಟನೆ

ನಿವೃತ್ತ ಸರ್ಕಾರಿ ನೌಕರರಿಗೆ ವೇತನ ಪರಿಷ್ಕರಣೆ ಈ ಹಿಂದಿನಂತೆ ಯಥಾಸ್ಥಿತಿ ಮುಂದುವರೆಸುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿ ಭದ್ರಾವತಿ ತಾಲೂಕು ನಿವೃತ್ತ ಸರ್ಕಾರಿ ನೌಕರರ ಸಂಘದ ವತಿಯಿಂದ ತಾಲೂಕು ಕಚೇರಿ ಆವರಣದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಮನವಿ ಸಲ್ಲಿಸಲಾಯಿತು. 
    ಭದ್ರಾವತಿ: ನಿವೃತ್ತ ಸರ್ಕಾರಿ ನೌಕರರಿಗೆ ವೇತನ ಪರಿಷ್ಕರಣೆ ಈ ಹಿಂದಿನಂತೆ ಯಥಾಸ್ಥಿತಿ ಮುಂದುವರೆಸುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿ ತಾಲೂಕು ನಿವೃತ್ತ ಸರ್ಕಾರಿ ನೌಕರರ ಸಂಘದ ವತಿಯಿಂದ ತಾಲೂಕು ಕಚೇರಿ ಆವರಣದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಮನವಿ ಸಲ್ಲಿಸಲಾಯಿತು. 
    ಪ್ರಧಾನ ಕಾರ್ಯದರ್ಶಿ ಎಚ್.ಎನ್ ಮಹಾರುದ್ರ ಮಾತನಾಡಿ,  ಮಾರ್ಚ್ ತಿಂಗಳಿನಲ್ಲಿ ಲೋಕಸಭೆಯಲ್ಲಿ ಹೊಸ ಪಿಂಚಣಿ ಹಾಗೂ ಹಳೇ ಪಿಂಚಣಿ  ಪರಿಷ್ಕರಣೆ ಮಾಡುವ ವಿಷಯ ಮಂಡಿಸಲಾಗಿದೆ. ಆದರೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ರವರು ಆರ್ಥಿಕ ಬಿಲ್ ಮಂಡಿಸುವಾಗ ೦೧.೦೪.೨೦೨೬ಕ್ಕೆ ಮೊದಲು ನಿವೃತ್ತಿಯಾಗುವ ಸರ್ಕಾರಿ ನೌಕರರಿಗೆ ಪಿಂಚಣಿ, ಕುಟುಂಬ ಪಿಂಚಣಿ ಹಾಗೂ ತುಟ್ಟಿ ಭತ್ಯೆ ಪರಿಷ್ಕರಿಸಲು ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದಾರೆ. ಇದು ನಿವೃತ್ತ ನೌಕರರಿಗೆ ಅಘಾತ ಉಂಟುಮಾಡಿದೆ.  ಅಲ್ಲದೆ ಇದು ಅತ್ಯಂತ ಹೇಯ ಕೃತ್ಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 
    ಸರ್ಕಾರಿ ನೌಕರರು ತಮ್ಮ ಕರ್ತವ್ಯದ ಅವಧಿಯಲ್ಲಿ ನೌಕರಿಯನ್ನೇ ನಂಬಿ ಬಂದವರು. ಆಳುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಾರಿಗೊಳಿಸುವ ಎಲ್ಲಾ ಯೋಜನೆಗಳನ್ನು ಪ್ರ್ರಾಮಾಣಿಕವಾಗಿ ಜನರಿಗೆ ಮುಟ್ಟಿಸುವ ಕಾರ್ಯ ನಿರ್ವಹಿಸಿರುತ್ತೇವೆ. ಕರ್ತವ್ಯದ ಅವಧಿಯಲ್ಲಿ ಕರ್ತವ್ಯವೇ ದೇವರೆಂದು ನಂಬಿ ಜೀವವನ್ನು ಮುಡುಪಾಗಿಟ್ಟಿದ್ದೇವೆ.  ನಿವೃತ್ತಿಯಾದ ಮೇಲೆ ಬರುವ ಪಿಂಚಣಿಯನ್ನು ನಂಬಿ ಇಳಿವಯಸ್ಸಿನಲ್ಲಿ ಬದುಕು ಕಟ್ಟಿಕೊಂಡವರು. ಇಂತಹ ಹಿರಿಯ ಜೀವಗಳಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಜೀವನೋಪಾಯಕ್ಕೆ ಬೇಕಾದ ಸೌಲತ್ತುಗಳನ್ನು ಕೊಡುವ ಬದಲು ಕತ್ತರಿ ಹಾಕುವ ಕೆಲಸ ಮಾಡುತ್ತಿರುವುದು ಸರಿಯಲ್ಲ ಎಂದು ಖಂಡಿಸಿದರು. ತಹಸೀಲ್ದಾರ್-ಗ್ರೇಡ್-೨ ಮಂಜಾನಾಯ್ಕರವರ ಮೂಲಕ  ಮನವಿ ಸಲ್ಲಿಸಿಲಾಯಿತು. 
    ಸಂಘದ ಅಧ್ಯಕ್ಷ ಬಿ.ಎಲ್.ರಂಗಸ್ವಾಮಿ ಪ್ರಭಟನೆ ನೇತೃತ್ವ ವಹಿಸಿದ್ದರು. ಪ್ರಮುಖರಾದ ಟಿ.ಜಿ ಚಂದ್ರಪ್ಪ, ಶಿವಲಿಂಗಪ್ಪ, ಚಂದ್ರಶೇಖರ ಚಕ್ರಸಾಲಿ, ಕಾಂತಪ್ಪ, ಸಿ. ಜಯಪ್ಪ, ಬಲರಾಮಗಿರಿ, ಶಿವೇಗೌಡ, ಚಿದಾನಂದ, ರಂಗಸ್ವಾಮಿ, ರಾಧಾಕೃಷ್ಣ ಭಟ್, ಮೋಹನ್‌ಕುಮಾರ್, ತಿಪ್ಪಮ್ಮ, ಸರೋಜಮ್ಮ ಸೇರಿದಂತೆ ನಿವೃತ್ತ ಸರ್ಕಾರಿ ನೌಕರರು ಪಾಲ್ಗೊಂಡಿದ್ದರು. 

ಅನನ್ಯ ಎಜ್ಯುಕೇಷನ್ ಟ್ರಸ್ಟ್‌ನಿಂದ ಶಾಲಾ ಮಕ್ಕಳಿಗೆ ಉಚಿತ ಕಣ್ಣಿನ ತಪಾಸಣೆ

ಭದ್ರಾವತಿ ನಗರದ ಅಪ್ಪರ್ ಹುತ್ತಾ, ಅನನ್ಯ ಎಜ್ಯುಕೇಷನ್ ಟ್ರಸ್ಟ್ ವತಿಯಿಂದ ಶಿವಮೊಗ್ಗ ಆಶೀರ್ವಾದ ಕಣ್ಣಿನ ಆಸ್ಪತ್ರೆ ಸಹಯೋಗದೊಂದಿಗೆ ಮಂಗಳವಾರ ಅನನ್ಯ ಪ್ರೌಢಶಾಲಾ ಆವರಣದಲ್ಲಿ ೩ ರಿಂದ ೧೦ನೇ ತರಗತಿ ವಿದ್ಯಾರ್ಥಿಗಳಿಗೆ ಉಚಿತ ಕಣ್ಣಿನ ತಪಾಸಣೆ ಶಿಬಿರ ಆಯೋಜಿಸಲಾಗಿತ್ತು. 
    ಭದ್ರಾವತಿ: ನಗರದ ಅಪ್ಪರ್ ಹುತ್ತಾ, ಅನನ್ಯ ಎಜ್ಯುಕೇಷನ್ ಟ್ರಸ್ಟ್ ವತಿಯಿಂದ ಶಿವಮೊಗ್ಗ ಆಶೀರ್ವಾದ ಕಣ್ಣಿನ ಆಸ್ಪತ್ರೆ ಸಹಯೋಗದೊಂದಿಗೆ ಮಂಗಳವಾರ ಅನನ್ಯ ಪ್ರೌಢಶಾಲಾ ಆವರಣದಲ್ಲಿ ೩ ರಿಂದ ೧೦ನೇ ತರಗತಿ ವಿದ್ಯಾರ್ಥಿಗಳಿಗೆ ಉಚಿತ ಕಣ್ಣಿನ ತಪಾಸಣೆ ಶಿಬಿರ ಆಯೋಜಿಸಲಾಗಿತ್ತು. 
    ನೇತ್ರ ತಜ್ಞ ಡಾ. ಅರುಣ್ ನೇತೃತ್ವದಲ್ಲಿ  ನಡೆದ ಶಿಬಿರದಲ್ಲಿ ೩ ರಿಂದ ೧೦ನೇ ತರಗತಿವರೆಗಿನ ಎಲ್ಲಾ ವಿದ್ಯಾರ್ಥಿಗಳಿಗೂ ತಪಾಸಣೆ ನಡೆಸುವ ಜೊತೆಗೆ ಕಣ್ಣಿನ ದೃಷ್ಠಿ ಸಮಸ್ಯೆ ಹೊಂದಿರುವ ಮಕ್ಕಳ ಪೋಷಕರನ್ನು ಕರೆಸಿ ಅವರಿಗೆ ಅವರ ಮಕ್ಕಳ ಕಣ್ಣಿನ ದೃಷ್ಠಿ ಸಮಸ್ಯೆಗಳನ್ನು ಮನವರಿಕೆ ಮಾಡಿಕೊಡಲಾಯಿತು. 
    ಡಾ.ಅರುಣ್ ಮಾತನಾಡಿ, ಒಳ್ಳೆಯ ಆಹಾರ ಸ್ವೀಕರಿಸುವುದರಿಂದ ಕಣ್ಣಿನ ರಕ್ಷಣೆ ಮಾಡಿಕೊಳ್ಳಬಹುದಾಗಿದೆ. ಮಿತಿಮೀರಿದ ಮೊಬೈಲ್ ವೀಕ್ಷಣೆಯು ನಮ್ಮ ಕಣ್ಣಿಗೆ ಸಮಸ್ಯೆಯುಂಟು ಮಾಡುತ್ತದೆ. ಈ ಹಿನ್ನಲೆಯಲ್ಲಿ ಮೊಬೈಲ್ ವೀಕ್ಷಣೆ ನಿರ್ಧಿಷ್ಟ ಸಮಯಕ್ಕೆ ಮಾತ್ರ ಮೀಸಲಿರಿಸಿಕೊಳ್ಳಬೇಕೆಂದು ಮಕ್ಕಳಿಗೆ ಸಲಹೆ ನೀಡಿದರು. 
    ಅನನ್ಯ ಎಜ್ಯುಕೇಷನ್ ಟ್ರಸ್ಟ್ ಕಾರ್ಯದರ್ಶಿ ಬಿ.ಎಸ್ ಅನಿಲ್ ಕುಮಾರ್ ಶಿಬಿರದ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕಿ ರಾಧಿಕಾ ಕಾರ್ಯಕ್ರಮದಲ್ಲಿ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.  
    ಆಡಳಿತಾಧಿಕಾರಿ ವೇಣುಗೋಪಾಲ್, ಮುಖ್ಯ ಶಿಕ್ಷಕ ಕೆ. ಕಲ್ಲೇಶ್ ಕುಮಾರ್, ಉಪ ಮುಖ್ಯೋಪಾಧ್ಯಾಯಿನಿ ಆರ್. ಸುನಿತಾ, ಅನನ್ಯ ಹ್ಯಾಪಿ ಹಾರ್ಟ್‌ನ ಮುಖ್ಯ ಶಿಕ್ಷಕಿ ತನುಜ ಅನಿಲ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ಜು.೨೭ರಂದು ಸಂಗ್ಯಾ-ಬಾಳ್ಯಾ ನಾಟಕ ಪ್ರದರ್ಶನ

    ಭದ್ರಾವತಿ: ನಗರದ ಮಿತ್ರ ಕಲಾ ಮಂಡಳಿ ವತಿಯಿಂದ ಸಂಘದ ಸಹಾಯಾರ್ಥ ನಾಟಕ ಪ್ರದರ್ಶನ ಜು.೨೭ರ ಭಾನುವಾರ ಸಂಜೆ ೬ ಗಂಟೆಗೆ ನ್ಯೂಟೌನ್ ಶಾರದ ಮಂದಿರದಲ್ಲಿ ಆಯೋಜಿಸಲಾಗಿದೆ. 
    ರಂಗಕರ್ಮಿ, ಕಿರುತೆರೆ, ಚಲನಚಿತ್ರ ನಟ ಅಪರಂಜಿ ಶಿವರಾಜ್ ವಿನ್ಯಾಸ ಮತ್ತು ನಿರ್ದೇಶನದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರಶೇಖರ್ ಕಂಬಾರರ ಜಾನಪದ ನಾಟಕ `ಸಂಗ್ಯಾ ಬಾಳ್ಯಾ' ಪ್ರದರ್ಶನಗೊಳ್ಳಲಿದೆ. ಸಂಗ್ಯಾ-ಜೆ. ಭಾನುಪ್ರಕಾಶ್, ಬಾಳ್ಯಾ-ಎ.ಜಿ ಫ್ರಾನ್ಸಿಸ್, ಮೇಟಿತಾಳ-ವಿ. ಹಿರೇಮಠ್, ಈರ್‍ಯಾರಗಳೆ-ಭಾನುಪ್ರಕಾಶ್ ಬಾಬು, ಇರಪಕ್ಷಿ-ಎಸ್.ದೀಪಕ್, ಬಸವಂತ-ಬಿ.ಎಸ್ ಮಲ್ಲಿಕಾರ್ಜುನ್, ಮಾರವಾಡಿ-ಶಿವಮಹಾದೇವ, ಪೋಸ್ಟ್‌ಮ್ಯಾನ್-ಎಂ.ಎ ಬೆನಕೇಗೌಡ, ಬ್ಯಾಗರಿ-ಎಂ.ಕೆ ರಾಘವೇಂದ್ರ, ಆಳು-ಜಗದೀಶ್ವರಚಾರಿ, ಗಂಗಾ-ಪ್ರಿಯಾ ನಾಗರಾಜ್, ಪರಮ್ಮ-ಎಸ್. ಸರೋಜಮ್ಮ ಹಾಗು ಮಾಸ್ಟರ್ ಪ್ರತೀಕ್ ಡಿ. ಪ್ರಾತಧಾರಿಗಳಾಗಿದ್ದಾರೆ. 
    ಬಿ.ಕೆ ಮೋಹನ್ ಕುಮಾರ್ ಮತ್ತು ಡಿ.ಆರ್ ಹರೀಶ್-ಸಂಗೀತ, ಜಗದೀಶ್ವರಚಾರಿ-ಬೆಳಕು, ಎಂ.ಕೆ ರಾಘವೇಂದ್ರ ಮತ್ತು ವಿ. ಹಿರೇಮಠ್-ಅಲಂಕಾರ, ಮೇಳ-ಜಿ. ದಿವಾಕರ, ವಿ.ಎ ಮಾರ್ಟಿನ್, ಕೆ.ಕೆ ಸಾಯಿಕೃಷ್ಣ, ಜಿ.ಆರ್ ಭಾರ್ಗವಿ, ಸಿ.ಎಚ್ ಪುಷ್ಪಲತಾ ಮತ್ತು ಎಚ್.ಆರ್ ಸುಧಾ ಕಾರ್ಯ ನಿರ್ವಹಿಸಲಿದ್ದಾರೆ.  
    ಶಾಸಕ ಬಿ.ಕೆ ಸಂಗಮೇಶ್ವರ್ ನಾಟಕ ಉದ್ಘಾಟಿಸಲಿದ್ದು, ವಿಧಾನ ಪರಿಷತ್ ಸದಸ್ಯೆ ಬಲ್ಕೀಶ್ ಬಾನು, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಶಾರದ ಅಪ್ಪಾಜಿ, ಬ್ಲಾಕ್ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಎಸ್. ಕುಮಾರ್, ಪ್ರಶಾಂತಿ ಸೇವಾ ಟ್ರಸ್ಟ್ ಅಧ್ಯಕ್ಷ ಡಿ. ಪ್ರಭಾಕರ ಬೀರಯ್ಯ, ಬಿಜೆಪಿ ಯುವ ಮುಖಂಡ ಮಂಗೋಟೆ ರುದ್ರೇಶ್, ವಿಐಎಸ್‌ಎಲ್ ಕಾರ್ಖಾನೆ ಕಾರ್ಯಪಾಲಕ ನಿರ್ದೇಕ ಬಿ.ಎಲ್ ಚಂದ್ವಾನಿ, ಕಾರ್ಮಿಕ ಸಂಘದ ಅಧ್ಯಕ್ಷ ಜೆ. ಜಗದೀಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕ ಎಚ್. ಉಮೇಶ್, ನವೋದಯ ಕಲಾ ಸಂಘದ ಅಧ್ಯಕ್ಷ ಡಾ. ಜಿ.ಎಂ ನಟರಾಜ್, ಸಮಾಜ ಸೇವಕ ಪೊಲೀಸ್ ಉಮೇಶ್ ಸೇರಿದಂತೆ ಇನ್ನಿತರರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಅಭಿಮಾನಿಗಳು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಮಿತ್ರ ಕಲಾ ಮಂಡಳಿ ಕೋರಿದೆ.