ಗುರುವಾರ, ಆಗಸ್ಟ್ 7, 2025

ಪೌರಾಯುಕ್ತ ಪ್ರಕಾಶ್ ಎಂ. ಚನ್ನಪ್ಪನವರ್‌ಗೆ ಬೀಳ್ಕೊಡುಗೆ, ಕೆ.ಎನ್ ಹೇಮಂತ್‌ಗೆ ಸ್ವಾಗತ

ಭದ್ರಾವತಿ ನಗರಸಭೆ ಪೌರಾಯುಕ್ತರಾಗಿ ಒಂದು ವರ್ಷ ಎಂಟು ತಿಂಗಳು ಕರ್ತವ್ಯ ನಿರ್ವಹಿಸಿ ಮುಂಬಡ್ತಿ ಹೊಂದಿ ಶಿರಸಿ ನಗರಸಭೆಗೆ ವರ್ಗಾವಣೆಗೊಂಡಿರುವ ಪ್ರಕಾಶ್ ಎಂ. ಚನ್ನಪ್ಪನವರ್ ಹಾಗು ನೂತನ ಪೌರಾಯುಕ್ತರಾಗಿ ಆಗಮಿಸಿರುವ ಕೆ.ಎನ್ ಹೇಮಂತ್‌ರವರನ್ನು ಕರ್ನಾಟಕ ರಾಜ್ಯ ಪೌರ ಸೇವಾ ನೌಕರರ ಸೇವಾ ಸಂಘದ ವತಿಯಿಂದ ಗುರುವಾರ ಸನ್ಮಾನಿಸಿ ಗೌರವಿಸಲಾಯಿತು. 
    ಭದ್ರಾವತಿ : ನಗರಸಭೆ ಪೌರಾಯುಕ್ತರಾಗಿ ಒಂದು ವರ್ಷ ಎಂಟು ತಿಂಗಳು ಕರ್ತವ್ಯ ನಿರ್ವಹಿಸಿ ಮುಂಬಡ್ತಿ ಹೊಂದಿ ಶಿರಸಿ ನಗರಸಭೆಗೆ ವರ್ಗಾವಣೆಗೊಂಡಿರುವ ಪ್ರಕಾಶ್ ಎಂ. ಚನ್ನಪ್ಪನವರ್ ಹಾಗು ನೂತನ ಪೌರಾಯುಕ್ತರಾಗಿ ಆಗಮಿಸಿರುವ ಕೆ.ಎನ್ ಹೇಮಂತ್‌ರವರನ್ನು ಕರ್ನಾಟಕ ರಾಜ್ಯ ಪೌರ ಸೇವಾ ನೌಕರರ ಸೇವಾ ಸಂಘದ ವತಿಯಿಂದ ಗುರುವಾರ ಸನ್ಮಾನಿಸಿ ಗೌರವಿಸಲಾಯಿತು. 
    ನಗರಸಭೆ ಸಭಾಂಗಣದಲ್ಲಿ ಅಧ್ಯಕ್ಷೆ ಗೀತಾರಾಜ್‌ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವರ್ಗಾವಣೆಗೊಂಡ ಪ್ರಕಾಶ್ ಎಂ. ಚನ್ನಪ್ಪನವರ್ ಕರ್ತವ್ಯ ಕುರಿತು ನಗರಸಭೆ ಅಧ್ಯಕ್ಷೆ ಗೀತಾರಾಜ್‌ಕುಮಾರ್, ಉಪಾಧ್ಯಕ್ಷ ಮಣಿ ಎಎನ್‌ಎಸ್, ಸದಸ್ಯರಾದ ವಿ. ಕದಿರೇಶ್, ಬಿ.ಕೆ ಮೋಹನ್, ಚನ್ನಪ್ಪ, ಟಿಪ್ಪುಸುಲ್ತಾನ್, ಬಿ.ಟಿ ನಾಗರಾಜ್, ಅನುಸುಧಾ ಮೋಹನ್‌ಪಳನಿ, ಬಸವರಾಜ್ ಬಿ. ಆನೇಕೊಪ್ಪ, ಆರ್ ಮೋಹನ್ ಕುಮಾರ್, ಶೃತಿ ವಸಂತ್‌ಕುಮಾರ್, ಪಲ್ಲವಿ ಸೇರಿದಂತೆ ಇನ್ನಿತರ ಸದಸ್ಯರು, ವಿವಿಧ ಸಂಘಟನೆಗಳ ಮುಖಂಡರಾದ ಸತ್ಯ ಭದ್ರಾವತಿ, ಚಿನ್ನಯ್ಯ, ಬಿ.ಎನ್ ರಾಜು, ತೀರ್ಥೇಶ್, ನಗರಸಭೆ ಸಮುದಾಯ ಸಂಘಟನಾಧಿಕಾರಿ ಎಂ. ಸುಹಾಸಿನಿ, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಸೇರಿದಂತೆ ಇನ್ನಿತರರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. 
    ಬೀಳ್ಕೊಡುಗೆ ಸನ್ಮಾನ ಸ್ವೀಕರಿಸಿ ಮಾತನಾಡಿದ ಪ್ರಕಾಶ್ ಎಂ. ಚನ್ನಪ್ಪನವರ್, ವೃತ್ತಿ ಬದುಕಿನಲ್ಲಿ ಹಲವಾರು ರೀತಿಯ ಅನುಭವಗಳನ್ನು ಕಂಡಿದ್ದೇನೆ. ವಿಶೇಷವಾಗಿ ಭದ್ರಾವತಿ ನಗರಸಭೆಯಲ್ಲಿ ಲಭಿಸಿದ ಉತ್ತಮ ಸಹಕಾರ ಎಂದಿಗೂ ಮರೆಯಲು ಸಾಧ್ಯವಿಲ್ಲ. ಅಧಿಕಾರಿಗಳು ಉತ್ತಮವಾಗಿ ಕರ್ತವ್ಯ ನಿರ್ವಹಿಸಲು ಪ್ರತಿಯೊಬ್ಬರ ಸಹಕಾರ ಮುಖ್ಯವಾಗಿದೆ. ನಗರಸಭೆ ಸಹದ್ಯೋಗಿಗಳು, ಸಿಬ್ಬಂದಿ ವರ್ಗದವರು, ಪೌರಕಾರ್ಮಿಕರು, ನಗರಸಭೆ ಚುನಾಯಿತ ಹಾಗು ನಾಮನಿರ್ದೇಶಿತ ಸದಸ್ಯರು, ವಿವಿಧ ಸಂಘ-ಸಂಸ್ಥೆಗಳು, ವಿವಿಧ ಸರ್ಕಾರಿ ಇಲಾಖೆ ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು. 
    ಕರ್ನಾಟಕ ರಾಜ್ಯ ಪೌರ ಸೇವಾ ನೌಕರರ ಸೇವಾ ಸಂಘದ ಜಿಲ್ಲಾಧ್ಯಕ್ಷ ಡಿ.ಎಸ್ ಹೇಮಂತ್ ಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರ್. ನರಸಿಂಹಮೂರ್ತಿ, ತಾಲೂಕು ಅಧ್ಯಕ್ಷ ವತಿಯಿಂದ ಎಸ್. ಚೇತನ್ ಕುಮಾರ್, ಪ್ರಧಾನ ಕಾರ್ಯದರ್ಶಿ ಸಿ. ರವಿಪ್ರಸಾದ್, ಉಪಾಧ್ಯಕ್ಷ ಎಸ್. ಪವನ್ ಕುಮಾರ್, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಸಯ್ಯದ್ ರಿಯಾಜ್, ನಗರಸಭೆ ವ್ಯವಸ್ಥಾಪಕಿ ಸುನಿತಾಕುಮಾರಿ, ನಗರಸಭೆ ಸದಸ್ಯರು, ಅಧಿಕಾರಿಗಳು, ಸಿಬ್ಬಂದಿ ವರ್ಗದವರು, ಪೌರಕಾರ್ಮಿಕರು, ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಉಪಸ್ಥಿತರಿದ್ದರು.

ಎಸ್.ಜಿ ಮೇಘನಾಗೆ ಪಿಎಚ್‌ಡಿ ಪದವಿ

ಎಸ್.ಜಿ ಮೇಘನಾ 
    ಭದ್ರಾವತಿ : ದೆಹಲಿ ಸಮೀಪದ ಗ್ರೆಟರ್ ನೊಯಿಡಾದಲ್ಲಿರುವ ಶಾರದ ವಿಶ್ವವಿದ್ಯಾಲಯದಿಂದ ಎಸ್.ಜಿ ಮೇಘನಾ ಮನೋವಿಜ್ಞಾನ (ಸೈಕಾಲಾಜಿ)ದಲ್ಲಿ ಪಿಎಚ್‌ಡಿ ಪದವಿ ಪಡೆದುಕೊಂಡಿದ್ದಾರೆ. 
    `ದಿ ಎಪೆಕ್ಟ್ ಆಫ್ ಮೈಂಡ್‌ಫುಲ್‌ನೆಸ್ ಬೇಸ್ಡ್ ಕಾಂಗ್ನಿಟಿವ್ ಥೆರಾಪಿ(ಎಂಬಿಸಿಟಿ) ಅಂಡ್ ರೆಸಿಲಿಯಂಟ್ ಥೆರಾಪಿ(ಆರ್‌ಟಿ) ಆನ್ ಮೈಂಡ್‌ಫುಲ್‌ನೆಸ್, ರೆಸಿಲಿಯನ್ಸ್, ಕ್ರಿಯೇಟಿವಿಟಿ, ಮೆಂಟಲ್ ಹೆಲ್ತ್ ಅಂಡ್ ಮೈಂಡ್‌ವಂಡೆರಿಂಗ್ ಅಮಾಂಗ್ ದಿ ಅಂಡರ್ ಗ್ರಾಜ್ಯುಯೇಟ್ ಸ್ಟೂಡೆಂಟ್' (`The Effect of Mindfulness Based Cognitive Therapy(MBCT) and Resilient Therapy(RT) on Mindfulness, Resilience, Creativity, Mental Health and Mind Wandering among the Undergraduates Students')ಎಂಬ ವಿಷಯ ಡಾ. ರುಚಿಗೌಡ ಮಾರ್ಗದರ್ಶನದಲ್ಲಿ ಮಂಡಿಸಿದ್ದರು. 
    ಅಮೇರಿಕದಲ್ಲಿರುವ ಮೇಘನಾ ಸಹೋದರ ವಿಜ್ಞಾನಿ ಡಾ. ಎಸ್.ಜಿ ಪೃಥ್ವಿ ಸಾಧನೆಗೆ ಸಹಕರಿಸಿದ್ದು, ಮೇಘನಾ ನಗರದ ಹೊಸಸೇತುವೆ ರಸ್ತೆಯ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಆಶ್ರಿತದ ವಿಶ್ವೇಶ್ವರಾಯ ವಿದ್ಯಾಸಂಸ್ಥೆ ದೈಹಿಕ ಶಿಕ್ಷಣ ನಿರ್ದೇಶಕ ಶಿವಲಿಂಗೇಗೌಡ-ಎಂ.ಎನ್ ಗೌರಮ್ಮ ದಂಪತಿ ಪುತ್ರಿಯಾಗಿದ್ದಾರೆ. 

ಬುಧವಾರ, ಆಗಸ್ಟ್ 6, 2025

ಸಂದೀಪ್‌ಗೆ ಪಿಎಚ್‌ಡಿ ಪದವಿ


ಆರ್. ಸಂದೀಪ್
ಭದ್ರಾವತಿ: `ಪಂಚಮಸಾಲಿ ಸಮುದಾಯ : ಒಂದು ಸಮಾಜಶಾಸ್ತ್ರ ಅಧ್ಯಯನ' ಎಂಬ ವಿಷಯದ ಮೇಲೆ ನಡೆಸಿದ ಸಂಶೋಧನೆಗೆ ಆರ್. ಸಂದೀಪ್‌ರವರಿಗೆ ಕುವೆಂಪು ವಿಶ್ವವಿದ್ಯಾಲಯದ ಪಿಎಚ್‌ಡಿ ಪದವಿ ಲಭಿಸಿದೆ. 
ಶಿವಮೊಗ್ಗ ಸಹ್ಯಾದ್ರಿ ಕಲಾ ಕಾಲೇಜಿನ ಪ್ರಾಧ್ಯಾಪಕ ಪ್ರೊ. ಎಂ. ಪೂರ್ವಾಚಾರ್‌ರವರ ಮಾರ್ಗದರ್ಶನದಲ್ಲಿ ಸಂಶೋಧನಾ ವರದಿ ಮಂಡಿಸಿದ್ದರು.  ಸಂದೀಪ್ ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ಚಿಕ್ಕಬನ್ನಿಹಟ್ಟಿ ಗ್ರಾಮದ ಪ್ರಗತಿಪರ ರೈತ ಕೆ.ಜಿ ರೇವಣಸಿದ್ದಪ್ಪ-ನಾಗರತ್ನಮ್ಮ ದಂಪತಿ ಪುತ್ರರಾಗಿದ್ದಾರೆ.  ಇವರ ಸಾಧನೆಯನ್ನು ಸ್ನಾತಕೋತ್ತರ ಸಮಾಜಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಅಧ್ಯಕ್ಷರು, ಪ್ರಾಧ್ಯಾಪಕರು ಹಾಗೂ ಸಿಬ್ಬಂದಿವರ್ಗ ಅಭಿನಂದಿಸಿದ್ದಾರೆ. 
 

ಅಗ್ನಿವೀರ್ ಯುವಕರಿಗೆ ಉಚಿತ ತರಬೇತಿ

ಅಗ್ನಿವೀರ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ತಾಲೂಕಿನ ನಗರ ಹಾಗು ಗ್ರಾಮೀಣ ಪ್ರದೇಶದ ಯುವಕರಿಗೆ ಭಾರತೀಯ ಸೈನ್ಯಕ್ಕೆ ಸೇರ್ಪಡೆಗೊಳ್ಳಲು ಭದ್ರಾವತಿ ತಾಲೂಕು ಮಾಜಿ ಸೈನಿಕರ ಸಂಘದ ವತಿಯಿಂದ ಉಚಿತ ತರಬೇತಿ ನೀಡಲಾಗುತ್ತಿದೆ.
    ಭದ್ರಾವತಿ : ಅಗ್ನಿವೀರ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ತಾಲೂಕಿನ ನಗರ ಹಾಗು ಗ್ರಾಮೀಣ ಪ್ರದೇಶದ ಯುವಕರಿಗೆ ಭಾರತೀಯ ಸೈನ್ಯಕ್ಕೆ ಸೇರ್ಪಡೆಗೊಳ್ಳಲು ತಾಲೂಕು ಮಾಜಿ ಸೈನಿಕರ ಸಂಘದ ವತಿಯಿಂದ ಉಚಿತ ತರಬೇತಿ ನೀಡಲಾಗುತ್ತಿದೆ. 
    ನಗರದ ನ್ಯೂಟೌನ್ ವಿಐಎಸ್‌ಎಲ್ ಕ್ರೀಡಾಂಗಣದಲ್ಲಿ ಆ.೪ರಿಂದ ತರಬೇತಿ ನೀಡಲಾಗುತ್ತಿದ್ದು, ಸಂಘದ ಅಧ್ಯಕ್ಷ ಸುಬೇದಾರ್ ಗುಲ್ಗುಲೆ, ಕಾರ್ಯದರ್ಶಿ ವೆಂಕಟಗಿರಿ, ಉಪಾಧ್ಯಕ್ಷ ಮಹೇಶ್, ತರಬೇತಿ ಶಿಬಿರದ ಶಿಕ್ಷಕರಾದ ಕಮಾಂಡೋ ಗಿರಿ, ಸುರೇಶ್, ಪ್ರಸಾದ್ ಮತ್ತು ರಮೇಶ್ ಸೇರಿದಂತೆ ಇನ್ನಿತರರ ಸಮ್ಮುಖದಲ್ಲಿ ಶಿಬಿರಕ್ಕೆ ಚಾಲನೆ ನೀಡಲಾಗಿದೆ. 


    ಪ್ರಸ್ತುತ ಶಿಬಿರದಲ್ಲಿ ೮ ರಿಂದ ೧೦ ಯುವಕರು ಪಾಲ್ಗೊಂಡಿದ್ದು, ಆಸಕ್ತರು ತರಬೇತಿ ಪಡೆಯಲು ಹಾಗು ಹೆಚ್ಚಿನ ಮಾಹಿತಿಗಾಗಿ ಸುಬೇದಾರ್ ಗುಲ್ಗುಲೆ, ಮೊ: ೯೪೪೯೪೨೩೨೬೭, ವೆಂಕಟಗಿರಿ, ಮೊ: ೯೯೦೦೧೮೮೫೩೪, ಪಿ.ಕೆ ಹರೀಶ್, ಮೊ: ೯೬೧೧೭೬೩೬೦೩ ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ. 

ನಿವೃತ್ತ ಕಾರ್ಮಿಕರ ವಸತಿಗೃಹ ಬಾಡಿಗೆ ದರ ಕಡಿತಕ್ಕೆ ಪೂರಕ ಸ್ಪಂದನೆ

ದೆಹಲಿಗೆ ತೆರಳಿದ ನಿಯೋಗಕ್ಕೆ ಸಂಸದರ ನೇತೃತ್ವ

ಭದ್ರಾವತಿ ವಿಐಎಸ್‌ಎಲ್ ನಿವೃತ್ತ ಕಾರ್ಮಿಕರ ಕಲ್ಯಾಣ ಕೇಂದ್ರದ ನಿಯೋಗವನ್ನು ಸಂಸದ ಬಿ.ವೈ ರಾಘವೇಂದ್ರರವರು ದೆಹಲಿಗೆ ಬರಮಾಡಿಕೊಂಡು ಖುದ್ದಾಗಿ ಕೇಂದ್ರ ಬೃಹತ್ ಕೈಗಾರಿಕೆ ಹಾಗು ಉಕ್ಕು ಖಾತೆ ಸಚಿವರ ಆಪ್ತ ಕಾರ್ಯದರ್ಶಿ, ಐಎಎಸ್ ಅಧಿಕಾರಿ ತೆಕಾತ್ ಸಿಂಗ್‌ರವರನ್ನು ಭೇಟಿಮಾಡಿಸಿ ವಸತಿಗೃಹಗಳ ಬಾಡಿಗೆ ಕಡಿತಗೊಳಿಸುವ ಸಂಬಂಧ ಚರ್ಚಿಸಿದ್ದಾರೆ. 
    ಭದ್ರಾವತಿ: ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ನಿವೃತ್ತ ಕಾರ್ಮಿಕರ ವಸತಿಗೃಹಗಳ ಬಾಡಿಗೆ ದರ ಕಡಿಮೆಗೊಳಿಸುವುದು ಹಾಗು ಕಾರ್ಮಿಕರು ನಿವೃತ್ತಿ ಹೊಂದಿದ ೧ ವರ್ಷದ ನಂತರ ವಸತಿ ಗೃಹಗಳ ಬಾಡಿಗೆ ದರದಲ್ಲಿ ವ್ಯತ್ಯಸ ಮಾಡುವ(ರೆಟೆನ್ಷನ್ ಸ್ಕೀಮ್) ಪ್ರಕ್ರಿಯೆ ಕೈಬಿಟ್ಟು ಬಾಡಿಗೆ ದರದಲ್ಲಿ ಸ್ಥಿರತೆ ಕಾಯ್ದುಕೊಳ್ಳುವಂತೆ ವಿಐಎಸ್‌ಎಲ್ ನಿವೃತ್ತ ಕಾರ್ಮಿಕರ ಕಲ್ಯಾಣ ಕೇಂದ್ರದಿಂದ ಸಲ್ಲಿಸಲಾಗಿದ್ದ ಮನವಿಗೆ ಕೇಂದ್ರ ಬೃಹತ್ ಕೈಗಾರಿಕೆ ಹಾಗು ಉಕ್ಕು ಖಾತೆ ಸಚಿವಾಲಯದಿಂದ ಪೂರಕ ಸ್ಪಂದನೆ ವ್ಯಕ್ತವಾಗಿದೆ.
    ನಿವೃತ್ತ ಕಾರ್ಮಿಕರ ವಸತಿಗೃಹಗಳಿಗೆ ಪ್ರತಿ ೧೧ ತಿಂಗಳಿಗೆ ಸ್ವಯಂಚಾಲಿತವಾಗಿ ಬಾಡಿಗೆದರ ಏರಿಕೆಯಾಗುತ್ತಿದ್ದು, ಅದರಲ್ಲೂ ಹೆಚ್ಚಿನ ಬಾಡಿಗೆ ದರ ವಿಧಿಸಲಾಗುತ್ತಿದೆ. ಇದನ್ನು ಕಡಿಮೆಗೊಳಿಸುವುದು. ಪ್ರಸ್ತುತ ೧೧ ತಿಂಗಳ ಬಾಡಿಗೆ ಪರಿಷ್ಕರಣೆಯನ್ನು ಪ್ರತಿ ೫ ವರ್ಷಗಳಿಗೆ ನಿಗದಿಪಡಿಸುವಂತೆ ಮತ್ತು  ಕಾರ್ಮಿಕರು ನಿವೃತ್ತಿ ಹೊಂದಿದ ೧ ವರ್ಷದ ನಂತರ ವಸತಿ ಗೃಹಗಳ ಬಾಡಿಗೆ ದರದಲ್ಲಿ ವ್ಯತ್ಯಸ ಮಾಡುವ(ರೆಟೆನ್ಷನ್ ಸ್ಕೀಮ್) ಪ್ರಕ್ರಿಯೆ ಕೈಬಿಡುವಂತೆ ಕೋರಿ ಈ ಹಿಂದೆ ಸಂಸದ ಬಿ.ವೈ ರಾಘವೇಂದ್ರ ಅವರಿಗೆ ಮನವಿ ಸಲ್ಲಿಸಲಾಗಿತ್ತು. 
    ಮನವಿಗೆ ಸ್ಪಂದಿಸಿದ್ದ ಸಂಸದರು ಕೇಂದ್ರ ಬೃಹತ್ ಕೈಗಾರಿಕೆ ಹಾಗು ಉಕ್ಕು ಖಾತೆ ಸಚಿವರ ಆಪ್ತ ಕಾರ್ಯದರ್ಶಿ, ಐಎಎಸ್ ಅಧಿಕಾರಿ ತೆಕಾತ್ ಸಿಂಗ್‌ರವರಿಗೆ ಪತ್ರ ಬರೆದು ಕೋರಿದ್ದರು. ಈ ನಡುವೆ ನಿವೃತ್ತ ಕಾರ್ಮಿಕರ ಕಲ್ಯಾಣ ಕೇಂದ್ರದ ನಿಯೋಗವನ್ನು ಸಂಸದರು ದೆಹಲಿಗೆ ಬರಮಾಡಿಕೊಂಡು ಖುದ್ದಾಗಿ ತೆಕಾತ್ ಸಿಂಗ್ ಅವರನ್ನು ಭೇಟಿಮಾಡಿಸಿ ಚರ್ಚಿಸಿದ್ದಾರೆ. ಇದಕ್ಕೆ ಪೂರಕವಾಗಿ ಸ್ಪಂದನೆ ವ್ಯಕ್ತವಾಗಿದ್ದು, ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಲಾಗಿದೆ.  
    ಈ ಕುರಿತು ವಿಐಎಸ್‌ಎಲ್ ನಿವೃತ್ತ ಕಾರ್ಮಿಕರ ಕಲ್ಯಾಣ ಕೇಂದ್ರದ ಅಧ್ಯಕ್ಷ ಬಿ.ಜಿ ರಾಮಲಿಂಗಯ್ಯ ಪತ್ರಿಕೆಗೆ ಮಾಹಿತಿ ನೀಡಿ, ಕೇಂದ್ರ ಬೃಹತ್ ಕೈಗಾರಿಕೆ ಹಾಗು ಉಕ್ಕು ಖಾತೆ ಸಚಿವ ಎಚ್.ಡಿ ಕುಮಾರಸ್ವಾಮಿ ಹಾಗು ಸಂಸದ ಬಿ.ವೈ ರಾಘವೇಂದ್ರರವರಿಗೆ ನಿವೃತ್ತ ಕಾರ್ಮಿಕರು ಕೃತಜ್ಞತೆ ಸಲ್ಲಿಸಿದ್ದಾರೆ. ನಿವೃತ್ತ ಕಾರ್ಮಿಕರ ಮತ್ತಷ್ಟು ಬೇಡಿಕೆಗಳಿದ್ದು, ಮುಂದಿನ ದಿನಗಳಲ್ಲಿ ಬಗೆಹರಿಯುವ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ. 
    ನಿಯೋಗದಲ್ಲಿ ಕಲ್ಯಾಣ ಕೇಂದ್ರದ ಅಧ್ಯಕ್ಷ ಬಿ.ಜಿ ರಾಮಲಿಂಗಯ್ಯ, ಉಪಾಧ್ಯಕ್ಷ ಅಡವೀಶಯ್ಯ, ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಉಪಸ್ಥಿತರಿದ್ದರು. 

ಮಂಗಳವಾರ, ಆಗಸ್ಟ್ 5, 2025

ಮುಷ್ಕರದ ನಡುವೆಯೂ ಕೆಲವು ಬಸ್‌ಗಳ ಸಂಚಾರ : ಕೆಲವು ನೌಕರರು ಕರ್ತವ್ಯಕ್ಕೆ ಹಾಜರು

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಮುಷ್ಕರದ ನಡುವೆಯೂ ಭದ್ರಾವತಿಯಲ್ಲಿ  ಮಂಗಳವಾರ ಬಸ್‌ಗಳ ಸಂಚಾರ ಕಂಡು ಬಂದಿತು. ಈ ನಡುವೆ ಖಾಸಗಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಹೆಚ್ಚಾಗಿ ಕಂಡು ಬಂದರು. 
    ಭದ್ರಾವತಿ : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಮುಷ್ಕರದ ನಡುವೆಯೂ ನಗರದಲ್ಲಿ ಮಂಗಳವಾರ ಬಸ್‌ಗಳ ಸಂಚಾರ ಕಂಡು ಬಂದಿತು. ಈ ನಡುವೆ ಕೆಲವು ನೌಕರರು ಕರ್ತವ್ಯ ಹಾಜರಾಗಿದ್ದು, ಉಳಿದಂತೆ ಬಹುತೇಕ ನೌಕರರು ಮುಷ್ಕರಕ್ಕೆ ಬೆಂಬಲ ಸೂಚಿಸಿದ್ದಾರೆ. 
    ಶಿವಮೊಗ್ಗ-ಭದ್ರಾವತಿ ನಡುವಿನ ಬಸ್ ಸಂಚಾರ ಎಂದಿನಂತೆ ಕಂಡು ಬಂದಿತು. ಆದರೆ ವೇಗದೂತ ಬಸ್‌ಗಳ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಸೋಮವಾರ ದೂರದ ಊರುಗಳಿಂದ ಪ್ರಯಾಣ ಬೆಳೆಸಿದ್ದ ಪ್ರಯಾಣಿಕರು ಮಾತ್ರ ನಿಲ್ದಾಣಗಳಲ್ಲಿ ಕಂಡು ಬಂದರು. 
    ನಗರದ ಸಾರಿಗೆ ಘಟಕದಲ್ಲಿ ಸುಮಾರು ೫೦ ರಿಂದ ೬೦ ಬಸ್‌ಗಳಿದ್ದು, ಪ್ರತಿದಿನ ಸುಮಾರು ೪೦-೪೫ ಬಸ್‌ಗಳು ಸೂಚಿತ ಮಾರ್ಗಗಳಲ್ಲಿ ಸಂಚರಿಸುತ್ತವೆ. ಮುಷ್ಕರದಿಂದಾಗಿ ಕೆಲವೇ ಕೆಲವು ಬಸ್‌ಗಳು ಸಂಚಾರ ಆರಂಭಿಸಿವೆ. ಉಳಿದಂತೆ ಖಾಸಗಿ ಬಸ್‌ಗಳ ಸಂಚಾರ ಎಂದಿನಂತೆ ಕಂಡು ಬಂದಿತು. ಬುಧವಾರ ಮುಷ್ಕರದಿಂದ ಪ್ರಯಾಣಿಕರ ಮೇಲೆ ಹೆಚ್ಚಿನ ಪರಿಣಾಮ ಬೀರುವ ಸಾಧ್ಯತೆ ಕಂಡು ಬರುತ್ತಿದೆ.

ಬಿಜೆಪಿ ನಗರ, ಗ್ರಾಮಾಂತರ ಮಂಡಲಗಳಿಗೆ ನೂತನ ಪದಾಧಿಕಾರಿಗಳ ನೇಮಕ

ಭದ್ರಾವತಿ ಬಿಜೆಪಿ ನಗರ ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್
    ಭದ್ರಾವತಿ: ವಿಧಾನಸಭಾ ಕ್ಷೇತ್ರದ ಬಿಜೆಪಿ ನಗರ ಮತ್ತು ಗ್ರಾಮಾಂತರ ಮಂಡಲಗಳಿಗೆ ನೂತನ ಪದಾಧಿಕಾರಿಗಳನ್ನು ನೇಮಕಗೊಳಿಸಿ ಆದೇಶ ಹೊರಡಿಸಲಾಗಿದೆ.  
       ನಗರ ಮಂಡಲ ಅಧ್ಯಕ್ಷರಾಗಿ ೪ನೇ ಬಾರಿಗೆ ಜಿ. ಧರ್ಮಪ್ರಸಾದ್ ಮುಂದುವರೆದಿದ್ದಾರೆ. ಉಳಿದಂತೆ ಉಪಾಧ್ಯಕ್ಷರಾಗಿ ಸುಲೋಚನ ಪ್ರಕಾಶ್, ಎಚ್.ಎಸ್ ಸುಬ್ರಮಣ್ಯ, ರವಿಚಂದ್ರನ್, ಶ್ರೀನಾಥ್ ಆಚಾರಿ, ಕೃಷ್ಣಮೂರ್ತಿ(ಕಿಟ್ಟಿ) ಮತ್ತು ಯೋಗೇಶ್ ಗುಜ್ಜಾರ್, ಪ್ರಧಾನ ಕಾರ್ಯದರ್ಶಿಗಳಾಗಿ ಎಸ್. ಚನ್ನೇಶ್ ೩ನೇ ಬಾರಿಗೆ ಮುಂದುವರೆದಿದ್ದು, ಹೊಸದಾಗಿ ರಘುರಾವ್ ಸೇರ್ಪಡೆಗೊಂಡಿದ್ದಾರೆ. 
    ಕಾರ್ಯದರ್ಶಿಗಳಾಗಿ ಸಾಗರ್, ಆರ್.ಪಿ ವೆಂಕಟೇಶ್, ಕವಿತಾ ರಾವ್, ಲತಾ ಪ್ರಭಾಕರ್, ಆಶಾ ಪುಟ್ಟಸ್ವಾಮಿ ಮತ್ತು ಧನುಷ್ ಬೋಸ್ಲೆ ಹಾಗು ಖಜಾಂಚಿಯಾಗಿ ಸಂಪತ್ ರಾಜ್ ಬಾಂಟಿಯ ೯ನೇ ಬಾರಿಗೆ ನೇಮಕಗೊಂಡಿದ್ದು, ಮಾಧ್ಯಮ್ ಪ್ರಮುಖರಾಗಿ ಕಾ.ರಾ ನಾಗರಾಜ್, ಸಾಮಾಜಿಕ ಜಾಲ ತಾಣಕ್ಕೆ ಪ್ರೇಮ ಮಂಜುನಾಥ್ ನೇಮಿಸಲಾಗಿದೆ. 


ಭದ್ರಾವತಿ ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಕೆ.ಎಚ್ ತೀರ್ಥಯ್ಯ. 
    ಗ್ರಾಮಾಂತರ ಮಂಡಲ ಅಧ್ಯಕ್ಷರಾಗಿ ಮೊದಲ ಬಾರಿಗೆ ಕೆ.ಎಚ್ ತೀರ್ಥಯ್ಯ ನೇಮಕಗೊಂಡಿದ್ದು, ಉಪಾಧ್ಯಕ್ಷರಾಗಿ ಶಿವಾನಂದ ಮೂರ್ತಿ, ಕೆ.ಟಿ ಪ್ರಸನ್ನ, ಪಿ. ರಂಗಸ್ವಾಮಿ, ಗಣಪತಿಭಟ್ಟರು, ಗೌರಮ್ಮ ಮತ್ತು ಕೆ.ಎಚ್ ರವಿಕುಮಾರ್, ಪ್ರಧಾನ ಕಾರ್ಯದರ್ಶಿಗಳಾಗಿ ಬಿ. ಅಣ್ಣಪ್ಪ ಮತ್ತು ಹನುಂತನಾಯ್ಕ ಎರಡನೇ ಬಾರಿಗೆ ಮುಂದುವರೆದಿದ್ದಾರೆ. ಕಾರ್ಯದರ್ಶಿಗಳಾಗಿ ಎಂ.ಬಿ ವಿಶ್ವನಾಥ್, ಲೋಲಾಕ್ಷಿ ರಾಜಗುರು, ಎನ್. ದಿವ್ಯಾದರ್ಶ, ಟಿ.ಜೆ ರಾಕೇಶ್, ಆರ್. ದೀಪಕ್ ಮತ್ತು ಜೆ.ಬಿ ರುದ್ರೇಶ್, ಖಜಾಂಚಿಯಾಗಿ ಸಚಿನ್ ಛಾಯಾಪತಿ ನೇಮಕವಾಗಿದ್ದಾರೆ.