ಭಾನುವಾರ, ಸೆಪ್ಟೆಂಬರ್ 14, 2025

ಶ್ರೀಕೃಷ್ಣನನ್ನು ಮನಃಪೂರ್ವಕವಾಗಿ ಶ್ರದ್ಧಾಭಕ್ತಿಯಿಂದ ಸ್ಮರಿಸಿದರೆ ಸಾಕು ನಮ್ಮ ಎಲ್ಲಾ ಸಂಕಷ್ಠಗಳು ದೂರ

ಭದ್ರಾವತಿ ಹಳೇನಗರದ ಶ್ರೀ ವಾದಿರಾಜಸ್ವಾಮಿ, ಶ್ರೀ ರಾಘವೇಂದ್ರಸ್ವಾಮಿಗಳವರ ಶ್ರೀ ಮಠದಲ್ಲಿ ಗುರುರಾಜ ಸೇವಾ ಸಮಿತಿ ಮತ್ತು ಕರಾವಳಿ ವಿಪ್ರ ಬಳಗದ ವತಿಯಿಂದ ಶ್ರೀಕೃಷ್ಣ ಜಯಂತಿ ಪ್ರಯುಕ್ತ ಲಕ್ಷ್ಯ ತುಳಸಿ ಅರ್ಚನೆ ಏರ್ಪಡಿಸಲಾಗಿತ್ತು. 
    ದ್ರಾವತಿ: ಶ್ರೀಕೃಷ್ಣನನ್ನು ಮನಃಪೂರ್ವಕವಾಗಿ ಶ್ರದ್ಧಾಭಕ್ತಿಯಿಂದ ಸ್ಮರಿಸಿದರೆ ಸಾಕು ನಮ್ಮ ಎಲ್ಲಾ ಸಂಕಷ್ಠಗಳನ್ನೂ ಸಹ ದೂರಮಾಡುತ್ತಾನೆ ಎಂದು ಪಂಡಿತ ಗೋಪಾಲಾಚಾರ್ ಹೇಳಿದರು.
    ಅವರು ಭಾನುವಾರ ಹಳೇನಗರದ ಶ್ರೀ ವಾದಿರಾಜಸ್ವಾಮಿ, ಶ್ರೀ ರಾಘವೇಂದ್ರಸ್ವಾಮಿಗಳವರ ಶ್ರೀ ಮಠದಲ್ಲಿ ಗುರುರಾಜ ಸೇವಾ ಸಮಿತಿ ಮತ್ತು ಕರಾವಳಿ ವಿಪ್ರ ಬಳಗದ ವತಿಯಿಂದ ಶ್ರೀಕೃಷ್ಣ ಜಯಂತಿ ಪ್ರಯುಕ್ತ ಏರ್ಪಡಿಸಲಾಗಿದ್ದ ಲಕ್ಷ್ಯತುಳಸಿ ಅರ್ಚನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶ್ರೀಕೃಷ್ಣನಿಗೆ ತುಳಸಿ ಅರ್ಚನೆ ಮಾಡುವುದರ ಮಹತ್ವದ ಕುರಿತು ಉಪನ್ಯಾಸ ನೀಡಿದರು. 
ದಾಸವರೇಣ್ಯೇರೇ ಹೇಳಿರುವಂತೆ ಶ್ರೀಕೃಷ್ಣನಿಗೆ ನಾವು ಏನೇ ಅರ್ಪಿಸಿದರೂ ಸಹ ತುಳಸಿ ಇಲ್ಲದ ಪೂಜೆಯನ್ನು ಅವನು ಸ್ವೀಕರಿಸುವುದಿಲ್ಲ. ಅದ್ದರಿಂದ ಶ್ರೀ ಕೃಷ್ಣನಿಗೆ ಪ್ರಿಯವಾದ ತುಳಸಿಯನ್ನು ಅವನಿಗೆ ಮನಃಪೂರ್ವಕವಾಗಿ ಅರ್ಪಿಸಿದರೆ ನಮ್ಮ ಜೀವನವನ್ನು ಅವನು ಪಾವನಗೊಳಿಸಿ ಮೋಕ್ಷ ನೀಡುತ್ತಾನೆ. ಅಂತಹ ತುಳಸಿ ಲಕ್ಷ್ಯಾರ್ಚನೆಯಲ್ಲಿ ಭಗವಂತನ ನಾಮಸ್ಮರಣೆ ಪೂರ್ವಕವಾಗಿ ಭಕ್ತಾಧಿಗಳು ಲಕ್ಷ್ಯವಿಟ್ಟು ಭಾಗವಹಿಸಿರುವುದಿರಂದ ಎಲ್ಲರಿಗೂ ಶ್ರೀಕೃಷ್ಣ ಸಕಲ ಮಂಗಳವನ್ನುಂಟುಮಾಡುತ್ತಾನೆ ಎಂದರು.
    ಶ್ರೀಕೃಷ್ಣನ ಮೂರ್ತಿಯನ್ನು ತೊಟ್ಟಿಲೊಳಗಿರಿಸಿ ತುಳಸಿ ಹಾಗೂ ಪುಷ್ಪಗಳೊಂದಿಗೆ ವಿಷ್ಣು ಸಹಸ್ರನಾಮಾವಳಿ ಪಠಣ ಹಾಗೂ ಶ್ರೀಕೃಷ್ಣನ ಮಂತ್ರ ಸ್ತೋತ್ರದೊಂದಿಗೆ ಅರ್ಚನೆ ಮಾಡಲಾಯಿತು. ಅರ್ಚನೆ ನಂತರ ಶ್ರೀಕ್ಥಷ್ಣಾರ್ಘ್ಯ, ಚಂದ್ರಾರ್ಘ್ಯನ್ನು ನೀಡಿ ಮಹಾಮಗಳಾರತಿ ನೆರವೇರಿಸಿ ಭಕ್ತಾದಿಗಳಿಗೆ ತೀರ್ಥ, ಪ್ರಸಾದ ವಿತರಿಸುವುದರೊಂದಿಗೆ ಕಾರ್ಯಕ್ರಮ ಸಂಪನ್ನಗೊಳಿಸಲಾಯಿತು.
    ಶ್ರೀ ವಾದಿರಾಜಸ್ವಾಮಿ, ಶ್ರೀ ರಾಘವೇಂದ್ರಸ್ವಾಮಿಗಳ ಬೃಂದಾವನಕ್ಕೆ ತುಳಸಿಮಾಲೆಯ ಅಲಂಕಾರ ಕೈಗೊಳ್ಳಲಾಗಿತ್ತು. ಮಾಡಲಾಗಿತ್ತು. ಗುರುರಾಜ ಸೇವಾ ಸಮಿತಿ ಅಧ್ಯಕ್ಷ ಮುರಳೀಧರತಂತ್ರಿ, ಉಪಾಧ್ಯಕ್ಷರಾದ ಸುಮಾ ರಾಘವೇಂದ್ರ ತಂತ್ರಿ, ಕಾರ್ಯದರ್ಶಿ ಜಿ. ರಮಾಕಾಂತ, ಖಜಾಂಚಿ ನಿರಂಜನ  ಹಾಗೂ ಪಂಡಿತ ಶ್ರೀನಿವಾಸಾಚಾರ್, ಶ್ರೀಮಠದ ಅರ್ಚಕರು, ಮಾಧುರಾವ್, ಜಯತೀರ್ಥ, ಶೇಷಗಿರಿ ಸೇರಿದಂತೆ ಭಕ್ತರು ಭಾಗವಹಿಸಿದ್ದರು.

ವಿಐಎಸ್‌ಎಲ್ ಕಾರ್ಖಾನೆ ಮುಂದಿನ ಪೀಳಿಗೆಗೆ ಹಸ್ತಾಂತರಗೊಂಡಾಗ ಮಾತ್ರ ಸಂಸ್ಥಾಪಕ ಅಧ್ಯಕ್ಷರಿಗೆ ಗೌರವ

ಇಂದು ಭಾರತರತ್ನ, ದೇಶದ ಅಪ್ರತಿಮ ಅಭಿಯಂತರ ಸರ್. ಮೋಕ್ಷಾಗುಂಡಂ ವಿಶ್ವೇಶ್ವರಾಯ ಜನ್ಮದಿನ 

ಭದ್ರಾವತಿ ವಿಐಎಸ್‌ಎಲ್ ಕಾರ್ಖಾನೆ. 
    * ಅನಂತಕುಮಾರ್ 
    ಭದ್ರಾವತಿ : ಭಾರತರತ್ನ, ದೇಶದ ಅಪ್ರತಿಮ ಅಭಿಯಂತರ ಸರ್. ಮೋಕ್ಷಾಗುಂಡಂ ವಿಶ್ವೇಶ್ವರಾಯ ಅವರ ಪರಿಶ್ರಮದ ಫಲವಾಗಿ ಸ್ಥಾಪನೆಗೊಂಡ ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಹೊಸದಾಗಿ ಪುನರ್ ಆರಂಭಗೊಳ್ಳುವ ಮೂಲಕ ಕಳೆದು ಹೋಗಿರುವ ತನ್ನ ವೈಭವ ಮರಳಿ ಪಡೆಯುವ ಆಶಾಭಾವನೆ ಇಲ್ಲಿನ ನಿವಾಸಿಗಳು ಹೊಂದಿದ್ದಾರೆ. ಮತ್ತೊಂದೆಡೆ ವಿಶ್ವೇಶ್ವರಾಯ ಅವರಿಗೆ ಗೌರವ ಸಲ್ಲಬೇಕಾದರೆ ಈ ಕಾರ್ಖಾನೆಯನ್ನು ಮುಂದಿನ ಪೀಳಿಗೆಗೂ ಹಸ್ತಾಂತರಿಸಬೇಕು. ಆ ಮೂಲಕ ಎಂದಿಗೂ ಕಾರ್ಖಾನೆ ಮುಚ್ಚಬಾರದು ಎಂಬ ನಿಲುವು ಸಹ ಹೊಂದಿದ್ದಾರೆ. 
    ಕಾರ್ಖಾನೆ ಆರಂಭಗೊಳ್ಳಲು ಸರ್.ಎಂ ವಿಶ್ವೇಶ್ವರಾಯ ಅವರ ದೂರದೃಷ್ಟಿ ಹಾಗು ಪರಿಶ್ರಮ ಕಾರಣ ಎಂಬುದನ್ನು ಇಲ್ಲಿನ ನಿವಾಸಿಗಳು ಇಂದಿಗೂ ಮರೆತ್ತಿಲ್ಲ. ಇಲ್ಲಿ ವಾಸಿಸುತ್ತಿರುವ ಬಹುತೇಕ ನಿವಾಸಿಗಳು ನಿವೃತ್ತ ಕಾರ್ಮಿಕರು, ಕಾಯಂ ಹಾಗು ಗುತ್ತಿಗೆ ಕಾರ್ಮಿಕರು ಮತ್ತು ಕಾರ್ಖಾನೆಯ ಅವಲಂಬಿತರು. ಈ ಹಿನ್ನಲೆಯಲ್ಲಿ ವಿಶ್ವೇಶ್ವರಾಯ ಅವರ ಕೊಡುಗೆ ಎಲ್ಲರಿಗೂ ತಿಳಿದಿದ್ದು, ಇಂದಿಗೂ ಅನ್ನದಾತರಾಗಿ ಉಳಿದುಕೊಂಡಿದ್ದಾರೆ. 
    ಕಾರ್ಖಾನೆ ಆರಂಭಗೊಂಡ ಪರಿಣಾಮ ಭದ್ರಾವತಿ ನಗರ ವಿಶ್ವದ ಭೂಪಟದಲ್ಲಿ ಗುರುತಿಸಿಕೊಳ್ಳಲು ಕಾರಣವಾಯಿತು. ಅಲ್ಲದೆ ಸಾವಿರಾರು ಜನರಿಗೆ ಉದ್ಯೋಗ ಲಭಿಸಿ, ಲಕ್ಷಾಂತರ ಜನರು ಒಂದೆಡೆ ನೆಲೆಗೊಳ್ಳಲು ಸಾಧ್ಯವಾಯಿತು. ಈ ಮೂಲಕ ದೇಶ ಹಾಗು ರಾಜ್ಯಕ್ಕೆ ತನ್ನದೇ ಕೊಡುಗೆಗಳನ್ನು ನೀಡಿ ವೈಭವದ ದಿನಗಳನ್ನು ಕಾಣಲು ಸಾಧ್ಯವಾಯಿತು.  ಈ ಕಾರ್ಖಾನೆ ಕೇವಲ ಯಂತ್ರಗಳು, ಸರಕುಗಳಿಂದ ಕೂಡಿಲ್ಲ. ಇಲ್ಲೊಂದು ಪರಂಪರೆ ಅಡಗಿದ್ದು, ಸಾಂಸ್ಕೃತಿಕ ರಾಯಬಾರಿಯಾಗಿ ಇಂದಿಗೂ ಉಳಿದುಕೊಂಡಿದೆ. 
    ಶತಮಾನ ಪೂರೈಸಿರುವ ಕಾರ್ಖಾನೆ ಪ್ರಸ್ತುತ ಮುಚ್ಚುವ ಹಂತಕ್ಕೆ ತಲುಪಿದ್ದು, ಆಡಳಿತ ನಡೆಸುತ್ತಿರುವ ಸರ್ಕಾರಗಳು ಕಾರ್ಖಾನೆ ಅಭಿವೃದ್ಧಿಪಡಿಸುವ ಭರವಸೆಗಳನ್ನು ಆಗಾಗ ನೀಡುತ್ತಾ ಬಂದಿದ್ದಾರೆ. ಆದರೆ ಇಂದಿಗೂ ಭರವಸೆಗಳು ಈಡೇರಿಲ್ಲ. ಪ್ರಸ್ತುತ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಕೇಂದ್ರ ಸಚಿವರಾಗಿರುವ ರಾಜ್ಯದ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿಯವರು ಕಾರ್ಖಾನೆಯನ್ನು ಹೊಸದಾಗಿ ಪುನರ್ ಆರಂಭಿಸುವುದಾಗಿ ಕಳೆದ ಕೆಲವು ತಿಂಗಳ ಹಿಂದೆ ಹೇಳಿಕೆ ನೀಡಿದ್ದು, ವರ್ಷದ ಅಂತ್ಯದೊಳಗೆ ರೂಪುರೇಷೆಗಳು ಸಿದ್ದಗೊಂಡು ಪ್ರಧಾನಿ ನರೇಂದ್ರ ಮೋದಿಯವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆಂದು ಭರವಸೆ ನೀಡಿದ್ದಾರೆ. ಈ ಸಂಬಂಧ ಉನ್ನತ ಅಧಿಕಾರಿಗಳ ತಂಡ ಈಗಾಗಲೇ ಕಾರ್ಖಾನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ತೆರಳಿದೆ. ಆದರೆ ಕಾರ್ಖಾನೆ ಹೊಸದಾಗಿ ಆರಂಭಿಸುವ ಸಂಬಂಧ ರೂಪಿಸಲಾಗಿರುವ ರೂಪುರೇಷೆಗಳ ಬಗ್ಗೆ ಇನ್ನೂ ಯಾವುದೇ ಸ್ಪಷ್ಟ ಮಾಹಿತಿ ಇಲ್ಲವಾಗಿದೆ. 
    ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿಯವರು ಕಾರ್ಖಾನೆಯನ್ನು ಹೊಸದಾಗಿ ಪುನರ್ ಆರಂಭಿಸುವ ವಿಚಾರದಲ್ಲಿ ಕಾರ್ಖಾನೆಯ ಸಂಸ್ಥಾಪಕರು, ಮೊದಲ ಅಧ್ಯಕ್ಷರಾಗಿರುವ  ಸರ್.ಎಂ ವಿಶ್ವೇಶ್ವರಾಯ ಅವರನ್ನು ಪ್ರತಿಬಾರಿ ಸ್ಮರಿಸುವ ಮೂಲಕ  ಕಳೆದು ಹೋಗಿರುವ ವೈಭವ ಮರಳಿ ತಂದು ಕೊಡುವುದಾಗಿ ಭರವಸೆ ನೀಡುತ್ತಿದ್ದಾರೆ. ಈ ನಡುವೆ ಕಳೆದ ಸುಮಾರು ಎರಡೂವರೆ ವರ್ಷಗಳಿಂದ ಕಾರ್ಖಾನೆ ಮುಂಭಾಗ ನಿರಂತರವಾಗಿ ಹೋರಾಟ ನಡೆಸುತ್ತಿರುವ ಗುತ್ತಿಗೆ ಕಾರ್ಮಿಕರು ಹಲವಾರು ಬಾರಿ ಕುಮಾರಸ್ವಾಮಿಯವರನ್ನು ಭೇಟಿ ಮಾಡಿ ಕಾರ್ಖಾನೆ ಯಾವುದೇ ಕಾರಣಕ್ಕೂ ಮುಚ್ಚದೆ ಅಭಿವೃದ್ಧಿಪಡಿಸುವಂತೆ ಮನವಿ ಮಾಡಿದ್ದಾರೆ. ಅಲ್ಲದೆ ಕಾಯಂ ಹಾಗು ನಿವೃತ್ತ ಕಾರ್ಮಿಕರು ಸಹ ಮನವಿ ಮಾಡಿದ್ದಾರೆ. ಅಲ್ಲದೆ ವಿವಿಧ ಮಠಾಧೀಶರು, ಗಣ್ಯರು, ಸಂಘ-ಸಂಸ್ಥೆಗಳು, ಹೋರಾಟಗಾರರು ಸಹ ಕೇಂದ್ರ ಸರ್ಕಾರಕ್ಕೆ ಕಾರ್ಖಾನೆ ಅಭಿವೃದ್ಧಿಗೊಳಿಸುವಂತೆ ಒತ್ತಾಯಿಸುತ್ತಾ ಬಂದಿದ್ದಾರೆ. 
    ಸೆ.೧೫ ವಿಶ್ವೇಶ್ವರಾಯ ಅವರ ೧೬೫ನೇ ಜನ್ಮದಿನವಾಗಿದ್ದು, ಈ ಶುಭದಿನದಂದು ಅವರ ಸ್ಮರಣೆಯ ಮೂಲಕ ಕಾರ್ಖಾನೆ ಅಭಿವೃದ್ಧಿಗೊಂಡು ಇತಿಹಾಸದ ವೈಭವ ಮರಳಿ ಪಡೆಯುವ  ಆಶಾಭಾವನೆ ಇಲ್ಲಿನ ನಿವಾಸಿಗಳು ಎದುರು ನೋಡುತ್ತಿದ್ದಾರೆ. 
 

ಭದ್ರಾವತಿ ವಿಐಎಸ್‌ಎಲ್ ಕಾರ್ಖಾನೆಗೆ ಈ ಹಿಂದೆ ಕೇಂದ್ರ ಉಕ್ಕು ಖಾತೆ ಸಚಿವ ಎಚ್.ಡಿ ಕುಮಾರಸ್ವಾಮಿಯವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.  

ಸೀರತ್ ಅಭಿಯಾನ : ರಕ್ತದಾನ ಶಿಬಿರ

ಜಮಾಅತೆ ಇಸ್ಲಾಮಿ ಹಿಂದ್ ವತಿಯಿಂದ ಮಹಮ್ಮದ್ ಫೈಗಂಬರರ ಜನ್ಮದಿನಾಚರಣೆ ಅಂಗವಾಗಿ ಸೆ.೧೪ರವರೆಗೆ ರಾಜ್ಯಾದ್ಯಂತ ಸೀರತ್ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ಅಭಿಯಾನದ ಹಿನ್ನಲೆಯಲ್ಲಿ ಹಲವಾರು ಕಾರ್ಯಕ್ರಮ ಆಯೋಜಿಸಿಕೊಂಡು ಬರಲಾಗುತ್ತಿತ್ತು. ಭಾನುವಾರ ಭದ್ರಾವತಿ ನಗರದ ಬಿ.ಎಚ್ ರಸ್ತೆ, ಆಯಿಷಾ ಮಸೀದಿಯಲ್ಲಿ ರಕ್ತದಾನ ಶಿಬಿರ ಜರುಗಿತು.
    ಭದ್ರಾವತಿ: ಜಮಾಅತೆ ಇಸ್ಲಾಮಿ ಹಿಂದ್ ವತಿಯಿಂದ ಮಹಮ್ಮದ್ ಫೈಗಂಬರರ ಜನ್ಮದಿನಾಚರಣೆ ಅಂಗವಾಗಿ ಸೆ.೧೪ರವರೆಗೆ ರಾಜ್ಯಾದ್ಯಂತ ಸೀರತ್ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ಅಭಿಯಾನದ ಹಿನ್ನಲೆಯಲ್ಲಿ ಹಲವಾರು ಕಾರ್ಯಕ್ರಮ ಆಯೋಜಿಸಿಕೊಂಡು ಬರಲಾಗುತ್ತಿತ್ತು. ಭಾನುವಾರ ನಗರದ ಬಿ.ಎಚ್ ರಸ್ತೆ, ಆಯಿಷಾ ಮಸೀದಿಯಲ್ಲಿ ರಕ್ತದಾನ ಶಿಬಿರ ಜರುಗಿತು.
    ಜೀವ ಸಂಜೀವಿನಿ ಸ್ವಯಂಪ್ರೇರಿತ ರಕ್ತ ಕೇಂದ್ರದ ಸಹಯೋಗದೊಂದಿಗೆ ಜಮಾಅತೆ ಇಸ್ಲಾಮಿ ಹಿಂದ್ ತಾಲೂಕು ಶಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಶಿಬಿರದಲ್ಲಿ ಯುವ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ರಕ್ತದಾನ ಮಾಡಿದರು. ರಕ್ತದಾನ ಮಹಾದಾನ ಎಂಬುದನ್ನು ಪ್ರತಿಯೊಬ್ಬರು ಅರಿತುಕೊಂಡು ಸಮಾಜಮುಖಿ ಮಾನವೀಯ ಕಾರ್ಯದಲ್ಲಿ ಎಲ್ಲರೂ ಕೈಜೋಡಿಸಬೇಕೆಂದು ಕರೆ ನೀಡಲಾಯಿತು. 
    ಜಮಾಅತೆ ಇಸ್ಲಾಮಿ ಹಿಂದ್ ತಾಲೂಕು ಅಧ್ಯಕ್ಷ ಮೌಲಾನಾ ಸುಲ್ತಾನ್ ಬೇಗ್, ನಯಾಜ್, ಜುನೇದ್,  ಮುಬಿನ್, ಹೈದರ್ ಮತ್ತು ಖದೀರ್. ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ಶನಿವಾರ, ಸೆಪ್ಟೆಂಬರ್ 13, 2025

ಸೆ.೧೫ರಂದು ಮಾವಿನಕರೆ ಗ್ರಾಮದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ

    ಭದ್ರಾವತಿ: ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ತನ್ನ ಸಾಮಾಜಿಕ ಹೊಣೆಗಾರಿಕೆಯಡಿ(ಸಿಎಸ್‌ಆರ್) ತಾಲೂಕಿನ ಮಾವಿನಕೆರೆ ಗ್ರಾಮದಲ್ಲಿ ಸೆ.೧೫ರ ಸೋಮವಾರ ಬೆಳಿಗ್ಗೆ ೯ ಗಂಟೆಯಿಂದ ಮಧ್ಯಾಹ್ನ ೨ ಗಂಟೆವರೆಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಿದೆ. 
    ಗ್ರಾಮ ಪಂಚಾಯಿತಿ ಸಮೀಪದ ಸಮುದಾಯ ಭವನದಲ್ಲಿ ಆಯೋಜಿಸಲಾಗಿರುವ ಶಿಬಿರದಲ್ಲಿ ಸಾಮಾನ್ಯ ಆರೋಗ್ಯ ತಪಾಸಣೆ, ಹೃದಯ, ನೇತ್ರ, ಮೂಳೆ ಮತ್ತು ದಂತ ತಪಾಸಣೆ, ರಕ್ತದೊತ್ತಡ(ಬಿ.ಪಿ), ಸಕ್ಕರೆ(ಮಧುಮೇಹ), ನರರೋಗ ಮತ್ತು ಸ್ತ್ರೀರೋಗ ತಜ್ಞರಿಂದ ತಪಾಸಣೆ ನಡೆಯಲಿದೆ. ಉಚಿತ ಔಷಧ ವಿತರಣೆ ನಡೆಯಲಿದ್ದು, ಅಲ್ಲದೆ ಇದೆ ಸಂದರ್ಭದಲ್ಲಿ ಗ್ರಾಮಸ್ಥರಿಗೆ ಪಪ್ಪಾಯಿ ಮತ್ತು ನುಗ್ಗೆ ಬೀಜಗಳ ಉಚಿತ ವಿತರಣೆ ಸಹ ನಡೆಯಲಿದೆ. ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶಿಬಿರ ಸದುಪಯೋಗಪಡೆದುಕೊಳ್ಳುವಂತೆ ಕಾರ್ಖಾನೆಯ ಸಾರ್ವಜನಿಕ ಸಂಪರ್ಕ ಇಲಾಖೆ ಮಹಾಪ್ರಬಂಧಕ ಎಲ್. ಪ್ರವೀಣ್‌ಕುಮಾರ್ ಕೋರಿದ್ದಾರೆ. 

ಸೆ.೧೫ರಂದು ಕರಾವೇ ನೂತನ ಅಧ್ಯಕ್ಷರ ಆಯ್ಕೆ, ಪದಾಧಿಕಾರಿಗಳ ಸೇರ್ಪಡೆ ಕಾರ್ಯಕ್ರಮ


    ಭದ್ರಾವತಿ: ಟಿ.ಎ ನಾರಾಯಣಗೌಡ ನೇತೃತ್ವದ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕಿನ ನೂತನ ಮಹಿಳಾ ಅಧ್ಯಕ್ಷರ ಆಯ್ಕೆ ಮತ್ತು ಪದಾಧಿಕಾರಿಗಳ ಸೇರ್ಪಡೆ ಕಾರ್ಯಕ್ರಮ ಸೆ.೧೫ರ ಸೋಮವಾರ ಸಂಜೆ ೪ ಗಂಟೆಗೆ ನಗರದ ಬಿ.ಎಚ್ ರಸ್ತೆ, ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣ ಮುಂಭಾಗದ ನಂದಿನಿ ಹೋಟೆಲ್ ಸಭಾಂಗಣದಲ್ಲಿ ನಡೆಯಲಿದೆ. 
    ವೇದಿಕೆ ಪ್ರಮುಖರಾದ ಮಂಜು(ಕೇಬಲ್ ಮಂಜು), ಎಸ್. ವೆಂಕಟೇಶ್ ಮತ್ತು ರೂಪ ನಾಗರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ವೇದಿಕೆ ಜಿಲ್ಲಾಧ್ಯಕ್ಷೆ ಜ್ಯೋತಿ ಸೋಮಶೇಖರ್ ಕೋರಿದ್ದಾರೆ. 

ಸೆ.೧೫ರಂದು ಅಂಬೇಡ್ಕರ್ ಭವನ, ತಾಲೂಕು ಕಛೇರಿ ಮುಂಭಾಗ ಹೋರಾಟ


    ಭದ್ರಾವತಿ: ನಗರದ ಹೃದಯ ಭಾಗದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಸಮೀಪ ನೂತನವಾಗಿ ನಿರ್ಮಾಣಗೊಂಡಿರುವ ಭಾರತರತ್ನ, ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಭವನ ರಾಜ್ಯದ ಮುಖ್ಯಮಂತ್ರಿ  ಲೋಕಾರ್ಪಣೆಗೊಳಿಸುವಂತೆ ಹಾಗು ತಾಲೂಕಿನ ಎಲ್ಲಾ ಗ್ರಾಮಪಂಚಾಯಿತಿಗಳಲ್ಲಿ ಈ-ಸ್ವತ್ತು, ಜಾತಿ ಮತ್ತು ಆದಾಯ ಪ್ರಮಾಣಪತ್ರ ವಿತರಣೆ ಸೇರಿದಂತೆ ಇನ್ನಿತರ ಸೇವೆಗಳಲ್ಲಿ ಉಂಟಾಗುತ್ತಿರುವ ಸಮಸ್ಯೆಗಳನ್ನು ಖಂಡಿಸಿ ಸೆ.೧೫ರಂದು ನಗರದ ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ಹೋರಾಟ ಹಮ್ಮಿಕೊಳ್ಳಲಾಗಿದೆ. 
    ಹಲವು ದಶಕಗಳ ನಿರಂತರ ಹೋರಾಟದ ಫಲವಾಗಿ ನಗರದಲ್ಲಿ ೨೦೧೮ರಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ಭವನ ಕಾಮಗಾರಿ ಆರಂಭಗೊಂಡಿದ್ದು, ಸುಮಾರು ೭ ವರ್ಷಗಳ ನಂತರ ಪೂರ್ಣಗೊಂಡಿದೆ. ದಲಿತ ಚಳುವಳಿ ಹುಟ್ಟಿದ ನೆಲದಲ್ಲಿ ವಿಶ್ವಜ್ಞಾನ ಡಾ. ಬಿ.ಆರ್ ಅಂಬೇಡ್ಕರ್‌ರವರನ್ನು ಗೌರವಿಸಲು ನೂತನವಾಗಿ ನಿರ್ಮಾಣಗೊಂಡಿರುವ ಭವನ ನಾಡಿನ ಹಿಂದುಳಿದ ವರ್ಗಗಳ, ದೀನದಲಿತರ ನಾಯಕ, ಹಿರಿಯ ರಾಜಕೀಯ ಮುತ್ಸದ್ದಿ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಲೋಕಾರ್ಪಣೆಗೊಳಿಸಬೇಕೆಂದು ಸಮಿತಿ ಒತ್ತಾಯಿಸುತ್ತದೆ. 
    ತಾಲೂಕಿನ ಗ್ರಾಮ ಪಂಚಾಯಿತಿಗಳಲ್ಲಿ ಸರ್ಕಾರದ ಸೇವೆಗಳನ್ನು ಪಡೆದುಕೊಳ್ಳಲು ಗ್ರಾಮೀಣ ಜನರು ಸಾಕಷ್ಟು ತೊಂದರೆ ಎದುರಿಸುತ್ತಿದ್ದು, ಈ ಹಿನ್ನಲೆಯಲ್ಲಿ ಕಾಲ ಕಾಲಕ್ಕೆ ಗ್ರಾಮ ಸಭೆ, ವಾರ್ಡ್ ಸಭೆ ನಡೆಸುವಂತೆ ಹಾಗು ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಉಂಟಾಗುತ್ತಿರುವ ಸಮಸ್ಯೆಗಳು, ಈ-ಸ್ವತ್ತು, ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳ ವಿತರಣೆಯಲ್ಲಿ ಮತ್ತು ಬಗರ್ ಹುಕುಂ ರೈತರಿಗೆ ಎದುರಾಗುತ್ತಿರುವ ಸಮಸ್ಯೆಗಳನ್ನು ಬಗೆಹರಿಸುವಂತೆ ಸಮಿತಿ ಆಗ್ರಹಿಸುತ್ತದೆ. 
    ಈ ಹಿನ್ನಲೆಯಲ್ಲಿ ಸಮಿತಿ ವತಿಯಿಂದ ಸೆ.೧೫ರಂದು ಬೆಳಿಗ್ಗೆ ೧೦ ಗಂಟೆಗೆ ಅಂಬೇಡ್ಕರ್ ಭವನ ಮುಂಭಾಗ ಧರಣಿ ನಡೆಸಿ ನಂತರ ತಾಲೂಕು ಕಛೇರಿ ಮುಂಭಾಗದಲ್ಲಿ ಧರಣಿ ಸತ್ಯಾಗ್ರಹ ನಡೆಸಲಾಗುವುದು. ವಿವಿಧ ಸಂಘ-ಸಂಸ್ಥೆಗಳು, ಕಾರ್ಮಿಕರು, ರೈತರು, ಮಹಿಳೆಯರು, ಗ್ರಾಮಸ್ಥರು, ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯಶಸ್ವಿಗೊಳಿಸುವಂತೆ ಕೋರಲಾಗಿದೆ. 

ಫೆ.೧೪ರಂದು ಪ್ರತಿಭಾ ಪುರಸ್ಕಾರ, ನಿವೃತ್ತ ಶಿಕ್ಷಕರಿಗೆ ಗೌರವ ಸನ್ಮಾನ


    ಭದ್ರಾವತಿ: ತಾಲೂಕು ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರ ಪತ್ತಿನ ಸಹಕಾರ ಸಂಘದ ವತಿಯಿಂದ ಸೆ.೧೪ರ ಭಾನುವಾರ ಬೆಳಗ್ಗೆ ೧೦ ಗಂಟೆಗೆ ನಗರದ ಹೊಸಸೇತುವೆ ರಸ್ತೆಯ ಸಿದ್ಧಾರೂಢನಗರದ ವಿಶ್ವೇಶ್ವರಾಯ ವಿದ್ಯಾಸಂಸ್ಥೆಯಲ್ಲಿ ಈ ಬಾರಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದಿರುವ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮತ್ತು ನಿವೃತ್ತ ಸದಸ್ಯ ಶಿಕ್ಷಕರಿಗೆ ಗೌರವ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 
    ಸಂಘದ ಸದಸ್ಯರ ಹಿತ ಕಾಯ್ದುಕೊಳ್ಳುವ ಜೊತೆಗೆ ವಿಶೇಷವಾಗಿ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿಕೊಂಡು ಬರಲಾಗುತ್ತಿದೆ. ಸಂಘದ ೨೯ನೇ ವಾರ್ಷಿಕ ಮಹಾಸಭೆಯಲ್ಲಿ ಪ್ರತಿಭಾ ಪುರಸ್ಕಾರ ಮತ್ತು ಗೌರವ ಸನ್ಮಾನ ನಡೆಯಲಿದ್ದು, ಸಂಘದ ಅಧ್ಯಕ್ಷ ರಾಜಾನಾಯ್ಕ ನಲ್ಲಿಸರ ಅಧ್ಯಕ್ಷತೆವಹಿಸಲಿದ್ದಾರೆ. ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಕಾರ್ಯದರ್ಶಿ ಆರ್. ನಿಖಿಲ್ ಕೋರಿದ್ದಾರೆ.