ಬುಧವಾರ, ಸೆಪ್ಟೆಂಬರ್ 24, 2025

ಪ್ರೇಯಸಿಯನ್ನು ಭದ್ರಾ ಕಾಲುವೆಗೆ ತಳ್ಳಿ ಕೊಲೆ ಮಾಡಿರುವ ಆರೋಪ : ಪ್ರಿಯಕರ ಸೇರಿ ಇಬ್ಬರ ವಿರುದ್ಧ ಪ್ರಕರಣ ದಾಖಲು

ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು : ಪ್ರಿಯಕರ, ಆತನ ತಂದೆ ವಶಕ್ಕೆ ಪಡೆದ ಪೊಲೀಸರು

ಕೊಲೆಯಾದ ಸ್ವಾತಿ, ಭದ್ರಾ ಕಾಲುವೆ
    ಭದ್ರಾವತಿ:  ಪ್ರೇಯಸಿಯನ್ನು ಕಾಲುವೆಗೆ ತಳ್ಳಿ ಕೊಲೆ ಮಾಡಿರುವ ಆರೋಪದ ಮೇಲೆ ಪ್ರಿಯಕರ ಹಾಗು ಆತನ ತಂದೆಯನ್ನು ಪೊಲೀಸರು ಬುಧವಾರ ವಶಕ್ಕೆ ಪಡೆದು ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. 
    ತಾಲೂಕಿನ ಉಕ್ಕುಂದ ಗ್ರಾಮದ ಸಮೀಪದ ಭದ್ರಾ ಕಾಲುವೆಯಲ್ಲಿ ಕಳೆದ ೩ ದಿನಗಳ ಹಿಂದೆ ಘಟನೆ ನಡೆದಿದ್ದು, ಪ್ರೇಯಸಿ ಸ್ವಾತಿಯನ್ನು ಸೂರ್ಯ ಕೊಲೆ ಮಾಡಿದ್ದಾನೆಂದು ಆರೋಪಿಸಲಾಗಿದೆ. ಸ್ವಾತಿಯನ್ನು ಕಾಲುವೆಗೆ ತಳ್ಳಿದ ನಂತರ ವಿಷ ಸೇವಿಸಿ ತಾನೂ ಆತ್ಮಹತ್ಯೆಗೆ ಯತ್ನಿಸುವ ಮೂಲಕ ಹೈಡ್ರಾಮಾವೇ ನಡೆಸಿದ್ದ ಎನ್ನಲಾಗಿದೆ. ಸದ್ಯ ಆತನ ಬಣ್ಣ ಬಯಲಾಗಿದ್ದು, ಸೂರ್ಯ ಮತ್ತು ಆತನ ತಂದೆ ಸ್ವಾಮಿ ವಿರುದ್ಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.
    ಪ್ರಕರಣದ ವಿವರ: 
    ಸೂರ್ಯ ಮತ್ತು ಸ್ವಾತಿ ಇಬ್ಬರು ಪ್ರೀತಿಸುತ್ತಿದ್ದರು. ಸ್ವಾತಿ ಪದವಿ ಎರಡನೇ ವರ್ಷ ವ್ಯಾಸಾಂಗ ಮಾಡುತ್ತಿದ್ದಳು. ಸೂರ್ಯ ಮದುವೆ ಆಗುವುದಕ್ಕೆ ಪೀಡಿಸುತ್ತಿದ್ದ. ಆದರೆ ಇತ್ತ ಸ್ವಾತಿ ಮನೆಯವರು ಓದು ಮುಗಿಯುವವರೆಗೆ ಮದುವೆ ಬೇಡ ಅಂದಿದ್ದಾರೆ. ಸೆ. ೨೧ ರಂದು ಇದೇ ವಿಚಾರವಾಗಿ ಇಬ್ಬರ ನಡುವೆ ಗಲಾಟೆ ಕೂಡ ನಡೆದಿತ್ತು.
    ಸೆ.೨೧ರಂದು ಸ್ವಾತಿಯನ್ನು ಸೂರ್ಯ ಮನೆಯಿಂದ ಭದ್ರಾ ಕಾಲುವೆಗೆ ಕರೆದೊಯ್ದು ಅಲ್ಲಿಂದ ತಳ್ಳಿ ಕೊಲೆ ಮಾಡಿರುವ ಆರೋಪ ಮಾಡಲಾಗಿದೆ. ಮಂಗಳವಾರ ಸಂಜೆ ಯುವತಿಯ ಶವ ಪತ್ತೆಯಾಗಿದೆ. ಸ್ವಾತಿ ಕುಟುಂಬಸ್ಥರಿಂದ ಸೂರ್ಯ ಮತ್ತು ಕೊಲೆಗೆ ಕುಮ್ಮಕ್ಕು ಹಿನ್ನಲೆ ಆತನ ತಂದೆ ಸ್ವಾಮಿ ಮೇಲೆ ಸೆ. ೨೩ ರಂದು ಠಾಣೆಗೆ ದೂರು ನೀಡಿದ್ದರು.
    ಸದ್ಯ ಗ್ರಾಮಾಂತರ ಪೊಲೀಸರು ಎ೧ ಸೂರ್ಯ ಮತ್ತು ಎ೨ ಸ್ವಾಮಿ ವಿರುದ್ಧ ಕೊಲೆ ಕೇಸ್ ದಾಖಲಿಸಿ, ಈಗಾಗಲೇ ಇಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಸಿದ್ದಾರ್ಥ ಅಂಧರ ಕೇಂದ್ರ, ತರಂಗ ಕಿವುಡು ಮಕ್ಕಳ ಶಾಲೆಯಲ್ಲಿ ಆರ್‌ಎಎಫ್ ಸ್ವಚ್ಛತಾ ಕಾರ್ಯ

ಭದ್ರಾವತಿ ನಗರದ ಮಿಲ್ಟ್ರಿಕ್ಯಾಂಪ್ ಕ್ಷಿಪ್ರ ಕಾರ್ಯ ಪಡೆ-೯೭ ಬೆಟಾಲಿಯನ್ ವತಿಯಿಂದ ನ್ಯೂಟೌನ್ ಸಿದ್ದಾರ್ಥ ಅಂಧರ ಕೇಂದ್ರ ಹಾಗು ತರಂಗ ಕಿವುಡು ಮಕ್ಕಳ ಶಾಲೆಯಲ್ಲಿ ಸ್ವಚ್ಛತಾ ಅಭಿಯಾನ ಅಂಗವಾಗಿ ಸ್ವಚ್ಛತಾ ಕಾರ್ಯ ನಡೆಸಲಾಯಿತು. 
    ಭದ್ರಾವತಿ: ನಗರದ ಮಿಲ್ಟ್ರಿಕ್ಯಾಂಪ್ ಕ್ಷಿಪ್ರ ಕಾರ್ಯ ಪಡೆ-೯೭ ಬೆಟಾಲಿಯನ್ ವತಿಯಿಂದ ನ್ಯೂಟೌನ್ ಸಿದ್ದಾರ್ಥ ಅಂಧರ ಕೇಂದ್ರ ಹಾಗು ತರಂಗ ಕಿವುಡು ಮಕ್ಕಳ ಶಾಲೆಯಲ್ಲಿ ಸ್ವಚ್ಛತಾ ಅಭಿಯಾನ ಅಂಗವಾಗಿ ಸ್ವಚ್ಛತಾ ಕಾರ್ಯ ನಡೆಸಲಾಯಿತು. 
    ಆರ್‌ಎಎಫ್ ಅಧಿಕಾರಿಗಳು ಹಾಗು ಸಿಬ್ಬಂದಿಗಳು ಸೇರಿದಂತೆ ಸುಮಾರು ೪೦ಕ್ಕೂ ಹೆಚ್ಚು ಮಂದಿ ಸಿದ್ದಾರ್ಥ ಅಂಧರ ಕೇಂದ್ರ ಹಾಗು ತರಂಗ ಕಿವುಡು ಮಕ್ಕಳ ಶಾಲಾ ಆವರಣದಲ್ಲಿ ಬೆಳೆದುನಿಂತ ಗಿಡಗಂಟಿಗಳನ್ನು ಕಿತ್ತು ಹಾಕಿ, ಪ್ಲಾಸ್ಟಿಕ್ ಸೇರಿದಂತೆ ಇನ್ನಿತರ ತ್ಯಾಜ್ಯ ತೆಗೆದು ಸ್ವಚ್ಛಗೊಳಿಸಿದರು. ಅಲ್ಲದೆ ತೆಂಗು, ಅಡಕೆ, ಹಣ್ಣು ಹಾಗು ಹೂವಿನ ಗಿಡಗಳಿಗೆ ನೀರೆರೆದರು. 
    ಆರ್‌ಎಎಫ್ ಕಮಾಂಡೆಂಟ್ ಕಮಲೇಶ್ ಕುಮಾರ್, ಉಪ ಕಮಾಂಡೆಂಟ್ ಸುನಿಲ್ ಕುಮಾರ್ ಹಾಗೂ ನಿರೀಕ್ಷಕ ದೀಪಕ್ ಕುಮಾರ್ ಹಾಗು ಸೇರಿದಂತೆ ಸಿದ್ದಾರ್ಥ ಅಂಧರ ಕೇಂದ್ರದ ಅಧ್ಯಕ್ಷ ಶಿವಬಸಪ್ಪ, ಅಂಧ ವಿಕಲಚೇತನರು, ಕಿವುಡು ಮಕ್ಕಳ ಶಾಲೆ ಕಾರ್ಯದರ್ಶಿ ಸುಭಾಷ್ ಮತ್ತು ಶಿಕ್ಷಕ ಹಾಗು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. 

ಗುಂಡಿ ಬಿದ್ದ ರಸ್ತೆಗೆ ಮರಳು-ಸೀಮೆಂಟ್ ಸುರಿದು ದುರಸ್ತಿಪಡಿಸಿ ವಿಶಿಷ್ಟ ಪ್ರತಿಭಟನೆ

ಬಿಜೆಪಿ ಮುಖಂಡರು, ಕಾರ್ಯಕರ್ತರಿಂದ ರಾಜ್ಯ ಸರ್ಕಾರದ ವಿರೋಧ ಆಕ್ರೋಶ

ಭದ್ರಾವತಿ ನಗರದ ಪ್ರಮುಖ ರಸ್ತೆಯಾಗಿರುವ ಡಾ. ರಾಜ್‌ಕುಮಾರ್ ರಸ್ತೆ(ಬಿ.ಎಚ್ ರಸ್ತೆ) ರೈಲ್ವೆ ನಿಲ್ದಾಣ ಸಮೀಪ ತಿಮ್ಮಯ್ಯ ಮಾರುಕಟ್ಟೆ ಮುಂಭಾಗ ಗುಂಡಿ ಬಿದ್ದ ರಸ್ತೆಗೆ ಮರಳು-ಸೀಮೆಂಟ್ ಸುರಿದು ದುರಸ್ತಿಪಡಿಸುವ ಮೂಲಕ ಬಿಜೆಪಿ ನಗರ ಮಂಡಲದ ವತಿಯಿಂದ ಬುಧವಾರ ವಿಶಿಷ್ಟವಾಗಿ ಪ್ರತಿಭಟನೆ ನಡೆಸಲಾಯಿತು. 
    ಭದ್ರಾವತಿ : ನಗರದ ಪ್ರಮುಖ ರಸ್ತೆಯಾಗಿರುವ ಡಾ. ರಾಜ್‌ಕುಮಾರ್ ರಸ್ತೆ(ಬಿ.ಎಚ್ ರಸ್ತೆ) ರೈಲ್ವೆ ನಿಲ್ದಾಣ ಸಮೀಪ ತಿಮ್ಮಯ್ಯ ಮಾರುಕಟ್ಟೆ ಮುಂಭಾಗ ಗುಂಡಿ ಬಿದ್ದ ರಸ್ತೆಗೆ ಮರಳು-ಸೀಮೆಂಟ್ ಸುರಿದು ದುರಸ್ತಿಪಡಿಸುವ ಮೂಲಕ ಬಿಜೆಪಿ ನಗರ ಮಂಡಲದ ವತಿಯಿಂದ ಬುಧವಾರ ವಿಶಿಷ್ಟವಾಗಿ ಪ್ರತಿಭಟನೆ ನಡೆಸಲಾಯಿತು. 
    ರಾಜ್ಯಾದ್ಯಂತ ಹದಗೆಟ್ಟ ರಸ್ತೆಗಳನ್ನು ದುರಸ್ತಿ ಮಾಡದೆ ನಿರ್ಲಕ್ಷತನವಹಿಸಲಾಗಿದೆ ಎಂದು ಆರೋಪಿಸಿ ಪಕ್ಷದ ಮುಖಂಡರು, ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. 
    ನಗರ ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್ ಮಾತನಾಡಿ, ಗ್ಯಾರಂಟಿ ನೆಪದಲ್ಲಿ ಅಧಿಕಾರಕ್ಕೆ ಬಂದ ರಾಜ್ಯ ಸರ್ಕಾರ ಗ್ಯಾರಂಟಿಯನ್ನು ಸಹ ಸರಿಯಾಗಿ ನೀಡದೆ, ಯಾವುದೇ ಅಭಿವೃದ್ಧಿ ಕಾರ್ಯವನ್ನು ಸಹ ಕೈಗೊಳ್ಳದೆ ಜನರ ಜನರ ಹಿತಕಾಪಾಡುವಲ್ಲಿ ವಿಫಲವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯರವರು ತಕ್ಷಣವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು. 
    ಈ ನಡುವೆ ಪ್ರತಿಭಟನಾ ಸ್ಥಳದಲ್ಲಿಯೇ ಲೋಕೋಪಯೋಗಿ ಇಲಾಖೆ ಅಭಿಯಂತರರಿಗೆ ಕರೆ ಮಾಡಿ ಚರ್ಚಿಸಲಾಯಿತು. ರಸ್ತೆ ದುರಸ್ತಿ ಮಾಡುವುದಾಗಿ ಭರವಸೆ ನೀಡಿದ ಹಿನ್ನಲೆಯಲ್ಲಿ ಪ್ರತಿಭಟನೆ ಅಂತ್ಯಗೊಳಿಸಲಾಯಿತು. ಪ್ರತಿಭಟನೆಯಿಂದ ಕೆಲ ನಿಮಿಷ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು. 
    ಪ್ರತಿಭಟನೆಗೂ ಮೊದಲು  ಸರ್ ಎಂ. ವಿಶ್ವೇಶ್ವರಾಯ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. 
    ಹಿರಿಯ ಕಾರ್ಯಕರ್ತರಾದ ಎನ್ ವಿಶ್ವನಾಥರಾವ್, ಉಕ್ಕುಂದ ಶಾಂತಣ್ಣ, ಸಿದ್ದಾಪುರ ಪರಮೇಶಣ್ಣ, ಕರುಣಾಕರ್, ರಾಘವೇಂದ್ರ, ಸುಬ್ರಮಣಿ, ಎಂ.ಎಸ್ ಸುರೇಶಪ್ಪ, ಸಿದ್ದಾಪುರ ನಂಜಪ್ಪ,  ಸುಲೋಚನ ಪ್ರಕಾಶ್, ಪ್ರಧಾನ ಕಾರ್ಯದರ್ಶಿಗಳಾದ ಚನ್ನೇಶ್, ರಘುರಾವ್, ಮೊಸರಳ್ಳಿ ಅಣ್ಣಪ್ಪ, ಬಿ.ಎಸ್ ಶ್ರೀನಾಥ್, ಧನುಷ್ ಬೋಸ್ಲೆ, ಅನ್ನಪೂರ್ಣ, ರೇಖಾ ಪದ್ಮಾವತಿ, ಶಕುಂತಲ, ಪ್ರೇಮ ಸೇರಿದಂತೆ ಮಂಡಲ ಪದಾಧಿಕಾರಿಗಳು, ಮಹಿಳಾ ಕಾರ್ಯಕರ್ತರು, ಹಿರಿಯ ಮುಖಂಡರು, ವಿವಿಧ ಮೋರ್ಚಗಳ, ಮಹಾಶಕ್ತಿ ಕೇಂದ್ರಗಳ  ಅಧ್ಯಕ್ಷರು, ಪದಾಧಿಕಾರಿಗಳು ಸೇರಿದಂತೆ ಇನ್ನಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. 

ಮಂಗಳವಾರ, ಸೆಪ್ಟೆಂಬರ್ 23, 2025

ಇಂಧನ ರಹಿತ ಆಹಾರ ತಯಾರಿಕೆಯಿಂದ ಶ್ರಮ, ಸಮಯ ಉಳಿತಾಯ : ಭಾಗ್ಯ ಮೂರ್ತಿ

ನಾಡಹಬ್ಬ ದಸರಾ ಅಂಗವಾಗಿ ಭದ್ರಾವತಿ ನಗರದ ಬಿ.ಎಚ್ ರಸ್ತೆ ಶ್ರೀ ಮಂಜುನಾಥಸ್ವಾಮಿ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಇಂಧನ ರಹಿತ ಆಹಾರ ತಯಾರಿಕೆ ಸ್ಪರ್ಧೆ ಆರ್ಟ್ ಲೀವಿಂಗ್ ಯೋಗ ಶಿಕ್ಷಕ ಭಾಗ್ಯ ಮೂರ್ತಿ ಉದ್ಘಾಟಿಸಿದರು. 
    ಭದ್ರಾವತಿ : ಇಂಧನ ರಹಿತ ಆಹಾರ ತಯಾರಿಕೆಯಿಂದ ಹೆಚ್ಚಿನ ಶ್ರಮ ಹಾಗು ಸಮಯ ಉಳಿತಾಯವಾಗಲಿದ್ದು, ಮಹಿಳೆಯರು ಅಡುಗೆ ತಯಾರಿಕೆಯಲ್ಲಿ ಶುದ್ಧತೆ ಕಾಪಾಡಿಕೊಳ್ಳಬೇಕೆಂದು ಆರ್ಟ್ ಲೀವಿಂಗ್ ಯೋಗ ಶಿಕ್ಷಕ ಭಾಗ್ಯ ಮೂರ್ತಿ ಹೇಳಿದರು. 
    ಅವರು ಮಂಗಳವಾರ ನಾಡಹಬ್ಬ ದಸರಾ ಅಂಗವಾಗಿ ನಗರದ ಬಿ.ಎಚ್ ರಸ್ತೆ ಶ್ರೀ ಮಂಜುನಾಥಸ್ವಾಮಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ ಇಂಧನ ರಹಿತ ಆಹಾರ ತಯಾರಿಕೆ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು. 
    ವಿವಿಧ ಬಗೆಯ ಆಹಾರ ತಯಾರಿಕೆಗಳಿದ್ದು, ಇವುಗಳ ಬಗ್ಗೆ ಮಹಿಳೆಯರು ಇನ್ನೂ ಹೆಚ್ಚಿನ ಮಾಹಿತಿ ಹೊಂದಬೇಕು. ಉತ್ತಮ ಆಹಾರ ಸೇವನೆಯಿಂದ ಉತ್ತಮ ಆರೋಗ್ಯ ಇದನ್ನು ಅರಿತುಕೊಳ್ಳಬೇಕೆಂದರು. 
    ಪೌರಾಯುಕ್ತ ಎನ್.ಕೆ ಹೇಮಂತ್ ಮಾತನಾಡಿ, ಮಹಿಳೆಯರು ಅಡುಗೆ ಮಾಡಿ ಬಡಿಸುವುದರಿಂದ ಪುರುಷರಾದ ನಾವುಗಳು ಸದೃಢವಾಗಿ, ಆರೋಗ್ಯದಿಂದರಲು ಸಾಧ್ಯವಾಗಿದೆ. ದಸರಾ ಅಂಗವಾಗಿ ಏರ್ಪಡಿಸಲಾಗಿರುವ ಸ್ಪರ್ಧೆಯಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಕೋರಿದರು.
    ನಗರಸಭೆ ಅಧ್ಯಕ್ಷೆ ಜೆ.ಸಿ ಗೀತಾರಾಜ್‌ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ನಾಡಹಬ್ಬ ದಸರಾ ಆಚರಣೆ ವಿವಿಧ ಸಮಿತಿಗಳ ಅಧ್ಯಕ್ಷರು, ಸದಸ್ಯರು ಉಪಸ್ಥಿತರಿದ್ದರು. ತೀರ್ಪುಗಾರರಾಗಿ ಶಿವಮೊಗ್ಗ ಪುಷ್ಪ ಶೆಟ್ಟಿ, ಸುಜಾತ ಮತ್ತು ರೇಖಾ ಕಾರ್ಯ ನಿರ್ವಹಿಸಿದರು. ಸಮುದಾಯ ಸಂಘಟನಾ ಅಧಿಕಾರಿ ಎಂ. ಸುಹಾಸಿನಿ ಕಾರ್ಯಕ್ರಮ ನಿರೂಪಿಸಿದರು. 
    ನಗರದ ಸ್ವ-ಸಹಾಯ ಸಂಘಗಳ ಮಹಿಳೆಯರು ಹಾಗು ವಿವಿಧ ಮಹಿಳಾ ಸಂಘಟನೆಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. 

ದಲಿತ ಸಮುದಾಯಕ್ಕೆ ಅವಮಾನ ಮಾಡಿರುವ ಯತ್ನಾಳ್ ಶಾಸಕ ಸ್ಥಾನ ವಜಾ ಮಾಡಿ ಪ್ರಕರಣ ದಾಖಲಿಸಿ

ತಹಸೀಲ್ದಾರ್ ಮೂಲಕ ರಾಜ್ಯಪಾಲರಿಗೆ ಡಿಎಸ್‌ಎಸ್ ಮನವಿ ಸಲ್ಲಿಸಿ ಆಗ್ರಹ 

ನಾಡಹಬ್ಬ ದಸರಾ ಅಚರಣೆ ಸಂದರ್ಭದಲ್ಲಿ ದಲಿತ ಮಹಿಳೆಯರ ಭಾವನೆಗಳಿಗೆ ಧಕ್ಕೆ ಬರುವಂತೆ ಹೇಳಿಕೆ ನೀಡುವ ಮೂಲಕ ಇಡೀ ದಲಿತ ಸಮುದಾಯಕ್ಕೆ ಅವಮಾನ ಮಾಡಿರುವ ವಿಜಯಪುರ ನಗರ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿ ಬಂಧಿಸುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ(ಮಹಾತ್ಮ ಪ್ರೊ. ಬಿ. ಕೃಷ್ಣಪ್ಪ ಸ್ಥಾಪಿತ) ಆಗ್ರಹಿಸಿ ಮಂಗಳವಾರ ರಾಜ್ಯಪಾಲರಿಗೆ ಮನವಿ ಸಲ್ಲಿಸಿದೆ. 
    ಭದ್ರಾವತಿ: ನಾಡಹಬ್ಬ ದಸರಾ ಅಚರಣೆ ಸಂದರ್ಭದಲ್ಲಿ ದಲಿತ ಮಹಿಳೆಯರ ಭಾವನೆಗಳಿಗೆ ಧಕ್ಕೆ ಬರುವಂತೆ ಹೇಳಿಕೆ ನೀಡುವ ಮೂಲಕ ಇಡೀ ದಲಿತ ಸಮುದಾಯಕ್ಕೆ ಅವಮಾನ ಮಾಡಿರುವ ವಿಜಯಪುರ ನಗರ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿ ಬಂಧಿಸುವಂತೆ ಕರ್ನಾಟಕ    ದಲಿತ ಸಂಘರ್ಷ ಸಮಿತಿ(ಮಹಾತ್ಮ ಪ್ರೊ. ಬಿ. ಕೃಷ್ಣಪ್ಪ ಸ್ಥಾಪಿತ) ಆಗ್ರಹಿಸಿ ಮಂಗಳವಾರ ರಾಜ್ಯಪಾಲರಿಗೆ ಮನವಿ ಸಲ್ಲಿಸಿದೆ. 
    ಈ ಬಾರಿ ನಾಡಹಬ್ಬ ದಸರಾ ಉದ್ಘಾಟನೆಗೆ ಸಾಹಿತಿ ಬಾನು ಮುಸ್ತಾಕ್ ಅವರನ್ನು ರಾಜ್ಯ ಸರ್ಕಾರ ಆಯ್ಕೆ ಮಾಡಿದ ನಂತರ ಕೋಮುವಾದಿಗಳು ನಿರಂತರವಾಗಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಕೂಡ ವಿರೋಧ ವ್ಯಕ್ತಪಡಿಸುವ ಜೊತೆಗೆ `ತಾಯಿ ಶ್ರೀ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡಲು ಸನಾತನ ಧರ್ಮದವರು ಹೊರತುಪಡಿಸಿ ಒಬ್ಬ ದಲಿತ ಮಹಿಳೆಗೂ ಕೂಡ ಅಧಿಕಾರ ಇಲ್ಲ' ಎಂದು ಹೇಳಿಕೆ ನೀಡುವ ಮೂಲಕ ಇಡೀ ದಲಿತ ಸಮುದಾಯಕ್ಕೆ ಅವಮಾನ ಮಾಡಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಲಾಯಿತು. 
    ಈ ಹೇಳಿಕೆ ಮೂಲಕ ಯತ್ನಾಳ್ ಕೋಮು ಬಣ್ಣ ಬಯಲಾಗಿದೆ. ಈ ದೇಶದ ಸಂವಿಧಾನದಲ್ಲಿ ಎಲ್ಲಾ ಜಾತಿ, ಎಲ್ಲಾ ಧರ್ಮದವರಿಗೂ ಸಮಾನತೆ ನೀಡಲಾಗಿದೆ. ಪ್ರತಿಯೊಬ್ಬರು ಸಮಾನರು ಎಂದು ಬಾಬಾ ಸಾಹೇಬ್ ಅಂಬೇಡ್ಕರ್‌ರವರು ಸಂವಿಧಾನದಲ್ಲಿ ಹೇಳಿದ್ದಾರೆ. ಸಂವಿಧಾನವನ್ನು ಗಾಳಿಗೆ ತೂರಿ ಅಗೌರವದಿಂದ ವರ್ತಿಸುವ ಜೊತೆಗೆ ಇಡೀ ದಲಿತ ಸಮುದಾಯಕ್ಕೆ ಅವಮಾನ ಮಾಡಿರುವ ಯತ್ನಾಳ್ ವಿರುದ್ಧ ಕ್ರಮ ಕೈಗೊಂಡು ಶಾಸಕ ಸ್ಥಾನದಿಂದ ವಜಾಗೊಳಿಸುವಂತೆ ಆಗ್ರಹಿಸಲಾಯಿತು. 
    ಇದಕ್ಕೂ ಮೊದಲು ರಂಗಪ್ಪ ವೃತ್ತದಿಂದ ತಾಲೂಕು ಕಛೇರಿವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಘೋಷಣೆಗಳನ್ನು ಕೂಗಲಾಯಿತು. ನಂತರ ತಹಸೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು. 
    ಡಿಎಸ್‌ಎಸ್ ರಾಜ್ಯ ಖಜಾಂಚಿ ಸತ್ಯ ಭದ್ರಾವತಿ, ರಾಜ್ಯ ಮಹಿಳಾ ಸಹ ಸಂಚಾಲಕಿ ಶಾಂತಮ್ಮ, ಜಿಲ್ಲಾ ಸಂಚಾಲಕ ಚಿನ್ನಯ್ಯ, ತಾಲೂಕು ಸಂಚಾಲಕ ಸಂದೀಪ್ ಆರ್. ಅರಹತೊಳಲು, ಜಿಲ್ಲಾ ಸಹ ಸಂಚಾಲಕ ಈಶ್ವರಪ್ಪ, ಜಿಲ್ಲಾ ಸಮಿತಿ ಸದಸ್ಯ ಮಣಿ ಜಿಂಕ್‌ಲೈನ್, ಜಿಲ್ಲಾ ಸಂಘಟನಾ ಸಂಚಾಲಕಿ ಸುವರ್ಣಮ್ಮ, ಜಿಲ್ಲಾ ಸಮಿತಿ ಸದಸ್ಯ ಕೆ. ರಂಗನಾಥ್, ಜಿಲ್ಲಾ ಅಂಗವಿಕಲರ ವಿಭಾಗದ ಕಾಣಿಕ್‌ರಾಜ್, ತಾಲೂಕು ಸಂಘಟನಾ ಸಂಚಾಲಕ ಕೆ. ಸುರೇಶ್, ನರಸಿಂಹ, ಪಿ.ಸಿ ರಾಜು(ದಾಸ್), ಸುರೇಶ್ ಅಗರದಹಳ್ಳಿ, ಗಿರೀಶ್, ಕೃಷ್ಣಪ್ಪ, ಬಿ. ಸಂಗಮೇಶ, ಯೋಗೇಶ್ವರ ನಾಯ್ಕ, ರಫೀಕ್ ಅಹಮದ್, ಕೆ. ರಾಮಲಿಂಗಂ, ಎನ್. ಪ್ರಸನ್ನಕುಮಾರ್, ಎಂ. ರೇಖಾ, ಆರ್. ವೆಂಕಟೇಶ್, ಸಿ. ಜಯಪ್ಪ, ಪರಮೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ಜಿ.ಎಸ್.ಟಿ ದರಗಳಲ್ಲಿ ಭಾರಿ ಕಡಿತ, ಸುಧಾರಣೆ : ಬಡ-ಮಧ್ಯಮ ವರ್ಗದವರಿಗೆ ಅನುಕೂಲ

ಸಿಹಿ ಹಂಚಿಕೆ ಮೂಲಕ ಪಟಾಕಿ ಸಿಡಿಸಿ ಬಿಜೆಪಿ ಮಂಡಲದಿಂದ ಸಂಭ್ರಮಾಚರಣೆ  



ಕೇಂದ್ರ ಸರ್ಕಾರ ಜಿ.ಎಸ್.ಟಿ ದರಗಳಲ್ಲಿ ಭಾರಿ ಕಡಿತ ಹಾಗೂ ಸುಧಾರಣೆ ಜಾರಿಗೆ ತಂದಿರುವ ಹಿನ್ನೆಲೆಯಲ್ಲಿ ಭದ್ರಾವತಿಯಲ್ಲಿ ಬಿಜೆಪಿ ನಗರ ಹಾಗೂ ಗ್ರಾಮಾಂತರ ಮಂಡಲ ವತಿಯಿಂದ ನಗರದ ರಂಗಪವೃತ್ತದಲ್ಲಿ ಸಾರ್ವಜನಿಕರಿಗೆ ಸಿಹಿ ಹಂಚುವ ಮೂಲಕ ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಲಾಯಿತು.
    ಭದ್ರಾವತಿ : ಕೇಂದ್ರ ಸರ್ಕಾರ ಜಿ.ಎಸ್.ಟಿ ದರಗಳಲ್ಲಿ ಭಾರಿ ಕಡಿತ ಹಾಗೂ ಸುಧಾರಣೆ ಜಾರಿಗೆ ತಂದಿರುವ ಹಿನ್ನೆಲೆಯಲ್ಲಿ ಬಿಜೆಪಿ ನಗರ ಹಾಗೂ ಗ್ರಾಮಾಂತರ ಮಂಡಲ ವತಿಯಿಂದ ನಗರದ ರಂಗಪವೃತ್ತದಲ್ಲಿ ಸಾರ್ವಜನಿಕರಿಗೆ ಸಿಹಿ ಹಂಚುವ ಮೂಲಕ ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಲಾಯಿತು.
      ನಗರ ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನೀಡಿರುವ ಭಾರಿ ಆದಾಯ ತೆರಿಗೆ ವಿನಾಯಿತಿಯಿಂದ ದಿನಬಳಕೆಯ ಹಲವಾರು ವಸ್ತುಗಳ ಬೆಲೆಗಳು ಕಡಿಮೆಯಾಗಲಿದ್ದು, ಆಹಾರ ಪದಾರ್ಥಗಳು, ಔಷಧಿಗಳು, ಸೋಪು, ಬ್ರಷ್, ಪೇಸ್ಟ್, ಆರೋಗ್ಯ ಮತ್ತು ಜೀವವಿಮೆ ಸೌಲಭ್ಯ ಸೇರಿದಂತೆ ಅನೇಕ ಸರಕು ಮತ್ತು ಸೇವೆಗಳು ತೆರಿಗೆ ಮುಕ್ತ ಅಥವಾ ಕೇವಲ ಶೇ.೫ರಷ್ಟು ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ಇದು ಪ್ರಧಾನಿ  ನರೇಂದ್ರ ಮೋದಿಯವರು ನೀಡಿರುವ ದಸರಾ ಹಬ್ಬದ ಕೊಡುಗೆಯಾಗಿದ್ದು, ಹಬ್ಬದ ದಿನದಿಂದಲೇ ಜಾರಿಗೆ ಬಂದಿರುತ್ತದೆ ಎಂದರು.
    ಭಾರಿ ಕಡಿತ ಹಾಗೂ ಸುಧಾರಣೆ ಜಾರಿಗೆ ತಂದಿರುವುದು ವ್ಯಾಪಾರಿಗಳು, ಉದ್ದಿಮೆದಾರರು, ವೃತ್ತಿಪರರು, ಮುಖ್ಯವಾಗಿ ಬಡ ಹಾಗು ಮಧ್ಯಮ ವರ್ಗದವರು ಸೇರಿದಂತೆ ಎಲ್ಲಾ ವರ್ಗದ ಜನರಿಗೂ ಅನುಕೂಲವಾಗಲಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಹಾಗು ಕೇಂದ್ರ ಬಿಜೆಪಿ ಸರ್ಕಾರಕ್ಕೆ ಧನ್ಯವಾದ ಸಲ್ಲಿಸುತ್ತೇನೆ ಎಂದರು. 
    ಪ್ರಮುಖರಾದ ಮಂಗೋಟೆ ರುದ್ರೇಶ್, ಎಂ.ಎಸ್ ಸುರೇಶಪ್ಪ, ಚನ್ನೇಶ್, ರಘುರಾವ್, ಮೊಸರಳ್ಳಿ ಅಣ್ಣಪ್ಪ, ಹನುಮಂತನಾಯ್ಕ, ಪ್ರಸನ್ನ ಕುಮಾರ್,  ಜಿ.ವಿ ಕುಮಾರ್, ರವಿಕುಮಾರ್, ಅಶೋಕ್ ರಾವ್, ರಾಜಶೇಖರ್ ಉಪ್ಪಾರ್, ಧನುಷ್ ಬೋಸ್ಲೆ, ಶ್ರೀನಾಥ್ ಆಚಾರ್, ಬಿ.ಆರ್ ಸಚ್ಚಿದಾನಂದ, ಈಶ್ವರ್, ದಿವ್ಯ ಆದರ್ಶ್, ಪ್ರದೀಪ್ ಗೌಡರ್, ಆರ್. ದೀಪಕ್, ರುದ್ರೇಶ್ ಜಾವಳ್ಳಿ, ನಂಜಪ್ಪ, ಪ್ರೇಮ್, ಹರೀಶ್ ಕುಮಾರ್, ನಂದೀಶ್, ಸುಲೋಚನಾ ಪ್ರಕಾಶ್, ಲೋಲಾಕ್ಷಿ ರಾಜ್‌ಗುರು, ಆಶಾ ಪುಟ್ಟಸ್ವಾಮಿ, ಜಯಲಕ್ಷ್ಮಿ, ಕವಿತಾರಾವ್ ಸೇರಿದಂತೆ ಪಕ್ಷದ ವಿವಿಧ ಮೋರ್ಚಾಗಳ ಅಧ್ಯಕ್ಷರು, ಪದಾಧಿಕಾರಿಗಳು, ಕಾರ್ಯಕರ್ತರು ಪಾಲ್ಗೊಂಡಿದ್ದರು.  
 

ಸೋಮವಾರ, ಸೆಪ್ಟೆಂಬರ್ 22, 2025

ಜಾತಿ, ಮತ, ಧರ್ಮ, ಜನಾಂಗ, ಲಿಂಗಬೇಧಗಳಿಲ್ಲದೆ ಸರ್ವರನ್ನು ಒಳ್ಳಗೊಳ್ಳುವ ನಾಡಹಬ್ಬ ದಸರಾ ಜಗತ್ತಿಗೆ ಮಾದರಿ 

ನಾಡಹಬ್ಬ ದಸರಾ ಆಚರಣೆಗೆ ಹಿರಿಯ ಸಮಾಜ ಸೇವಕ ಹೆಬ್ಬಂಡಿ ವೀರಪ್ಪ ಶಿವರುದ್ರಪ್ಪ ಅದ್ದೂರಿ ಚಾಲನೆ 

ಭದ್ರಾವತಿ ನಗರಸಭೆಯಿಂದ ಹಮ್ಮಿಕೊಳ್ಳಲಾಗಿರುವ ನಾಡಹಬ್ಬ ದಸರಾ ಆಚರಣೆಗೆ ಸೋಮವಾರ ಹಿರಿಯ ಸಮಾಜ ಸೇವಕ ಹೆಬ್ಬಂಡಿ ವೀರಪ್ಪ ಶಿವರುದ್ರಪ್ಪ ಚಾಲನೆ ನೀಡಿದರು. 
    ಭದ್ರಾವತಿ : ನಾಡಹಬ್ಬ ದಸರಾ ಆಚರಣೆ ಜಾತಿ, ಮತ, ಧರ್ಮ, ಜನಾಂಗ, ಲಿಂಗಬೇಧಗಳಿಲ್ಲದೆ ಸರ್ವರನ್ನು ಒಳ್ಳಗೊಳ್ಳುವ ಮೂಲಕ ಜಗತ್ತಿಗೆ ಮಾದರಿಯಾಗಿದೆ ಎಂದು ಹಿರಿಯ ಸಮಾಜ ಸೇವಕ ಹೆಬ್ಬಂಡಿ ವೀರಪ್ಪ ಶಿವರುದ್ರಪ್ಪ ಹೇಳಿದರು. 
    ಅವರು ಈ ಬಾರಿ ನಗರಸಭೆಯಿಂದ ಹಮ್ಮಿಕೊಳ್ಳಲಾಗಿರುವ ನಾಡಹಬ್ಬ ದಸರಾ ಆಚರಣೆಗೆ ಸೋಮವಾರ ಚಾಲನೆ ನೀಡಿ ಮಾತನಾಡಿದರು. 11 ದಿನಗಳ ನಾಡಹಬ್ಬ ದಸರಾ ಮಹೋತ್ಸವ ಆಚರಣೆಗೆ ಒಂದು ಮಹತ್ವವಿದೆ. ರಾಜಮಹಾರಾಜರ ಕಾಲದಿಂದಲೂ ಅಂದರೆ 15ನೇ ಶತಮಾನದಿಂದಲೂ ವೈಭವಯುತವಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಈ ಮಹೋತ್ಸವ ಹಲವು ವಿಶಿಷ್ಟತೆಗಳಿಂದ ಕೂಡಿದ್ದು, ನಾಡಿನ ಸರ್ವರನ್ನು ಭಾವನಾತ್ಮಕವಾಗಿ ಒಂದುಗೂಡಿಸಿದೆ. ನಾಡಿನ ಮೂಲೆ ಮೂಲೆಗಳಲ್ಲಿರುವ ಕಲಾ ತಂಡಗಳ ಕಲೆ, ಸಾಹಿತ್ಯ, ಸಂಸ್ಕೃತಿ, ಸಂಗೀತ, ವೇಷಭೂಷಣ, ಆಚಾರ-ವಿಚಾರ ಮತ್ತು ಪ್ರತಿಭೆಗಳು ಅನಾವರಣಗೊಳ್ಳಲು ಇರುವ ವೇದಿಕೆಯಾಗಿದೆ ಎಂದರು. 
     ಶ್ರೀ ಚಾಮುಂಡೇಶ್ವರಿ ತಾಯಿ ದುಷ್ಟ ಶಕ್ತಿಯ ವಿರುದ್ಧ ಹೋರಾಡಿ ಶಿಷ್ಟರನ್ನು ಸಂರಕ್ಷಿಸುವ ಪರಿ ನಿಜಕ್ಕೂ ವಿಸ್ಮಯ ಮತ್ತು ಜನರ ದೈವಿಕ ನಂಬಿಕೆಗೆ ಸಾಕ್ಷಿಯೂ ಆಗಿದೆ. ಶ್ರೀ ಚಾಮುಂಡೇಶ್ವರಿ ದೇವಿ ಪ್ರತಿಯೊಬ್ಬರಿಗೂ ಒಳ್ಳೆಯದನ್ನು ಮಾಡಲಿ ಎಂದರು. 
     ಸಮಾಜಕ್ಕೆ ಸಲ್ಲಿಸಿರುವ ಸೇವೆ ಹಾಗು ಹಿರಿತನ ಪರಿಗಣಿಸಿ ನನಗೆ ಉದ್ಘಾಟನೆಗೆ ಅವಕಾಶ ಕಲ್ಪಿಸಿಕೊಟ್ಟಿರುವುದು ನನ್ನ ಸೌಭಾಗ್ಯವಾಗಿದ್ದು, ಕ್ಷೇತ್ರದ ಶಾಸಕಾರದ ಬಿ.ಕೆ ಸಂಗಮೇಶ್ವರ್ ಹಾಗು ನಗರಸಭೆ ಆಡಳಿತಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು. 


ಭದ್ರಾವತಿಯಲ್ಲಿ ನಾಡಹಬ್ಬ ದಸರಾ ಉದ್ಘಾಟನೆಗೆ ಆಗಮಿಸಿದ ಹಿರಿಯ ಸಮಾಜ ಸೇವಕ ಹೆಬ್ಬಂಡಿ ವೀರಪ್ಪ ಶಿವರುದ್ರಪ್ಪರನ್ನು ಸಾರೋಟ ಮೂಲಕ ನಗರಸಭೆ ಆವರಣದವರೆಗೂ ಮೆರವಣಿಗೆಯಲ್ಲಿ ಕರೆ ತರಲಾಯಿತು. 
    ನಗರಸಭೆ ಅಧ್ಯಕ್ಷೆ ಜೆ.ಸಿ ಗೀತಾ ರಾಜ್‌ಕುಮಾರ್ ಮಾತನಾಡಿ, ಈ ಬಾರಿ ನಾಡಹಬ್ಬ ದಸರಾ ಉದ್ಘಾಟನೆಯನ್ನು ನಮ್ಮೆಲ್ಲರಿಗೂ ಹಿರಿಯರಾದ ಎಚ್.ವಿ ಶಿವರುದ್ರಪ್ಪರವರು ಉದ್ಘಾಟಿಸಿರುವುದು ತುಂಬಾ ಸಂತೋಷವನ್ನುಂಟು ಮಾಡಿದೆ. ಅವರು ಸಮಾಜದಲ್ಲಿ ಸಲ್ಲಿರುವ ಸೇವೆ ಅಪಾರವಾಗಿದ್ದು, ಧಾರ್ಮಿಕ ಕಾರ್ಯಗಳಿಗೆ, ಸೇವಾ ಕಾರ್ಯಗಳಿಗೆ ಸಾಕಷ್ಟು ನೆರವಾಗಿದ್ದಾರೆ. ಅವರ ಮಾರ್ಗದರ್ಶನ ಇಂದಿನವರೆಗೆ ಅಗತ್ಯವಾಗಿದೆ. ನಾವೆಲ್ಲರೂ ಒಟ್ಟಾಗಿ 11 ದಿನಗಳ ಕಾಲ ತಾಯಿ ಚಾಮುಂಡೇಶ್ವರಿ ಆರಾಧನೆ ಮಾಡುವ ಮೂಲಕ ಸಮಾಜದಲ್ಲಿ ದೃಷ್ಟ ಶಕ್ತಿಗಳು ನಾಶವಾಗುವಂತಾಗಲಿ ಎಂದರು. 
     ಹಿರಿಯ ಸದಸ್ಯ ಬಿ.ಟಿ ನಾಗರಾಜ್ ಮಾತನಾಡಿ, ಬಹಳ ವರ್ಷಗಳ ಹಿಂದೆಯೇ ನಗರಸಭೆಯಿಂದ ನಾಡಹಬ್ಬ ದಸರಾ ಆಚರಣೆ ವಿಜೃಂಭಣೆಯಿಂದ ಆಚರಿಸಲು ತೀರ್ಮಾನ ತೆಗೆದುಕೊಳ್ಳಲಾಗಿತ್ತು. ಎಲ್ಲರ ಸಹಕಾರದಿಂದ ಅಂದಿನಿಂದಲೂ ವಿಜೃಂಭಣೆಯಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಪ್ರಸ್ತುತ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿದ್ದು, ಶಾಸಕ ಸಂಗಮೇಶ್ವರ್‌ರವರು ಎಲ್ಲಾ ರೀತಿಯಿಂದಲೂ ಕ್ಷೇತ್ರವನ್ನು ಅಭಿವೃದ್ಧಿಗೊಳಿಸಲು ಪ್ರಮಾಣಿಕವಾಗಿ ಪ್ರಯತ್ನಿಸುತ್ತಿದ್ದಾರೆ ಎಂದರು. 
     ಹಿರಿಯ ಸದಸ್ಯ ಬಿ.ಕೆ ಮೋಹನ್ ಮಾತನಾಡಿ, ನಾಡಹಬ್ಬ ದಸರಾ ಆಚರಣೆ ಜಾತಿ, ಮತ, ಪಂಥಗಳನ್ನು ಮೀರಿದೆ. ಇಂತಹ ಹಬ್ಬದ ಆಚರಣೆಗೆ ಕೆಲವರು ಅಡ್ಡಿ ಮಾಡಲು ಯತ್ನಿಸಿದರು. ನ್ಯಾಯಾಲಯವೇ ಅಡ್ಡಿಪಡಿಸಲು ಯತ್ನಿಸಿದವರಿಗೆ ಸೂಕ್ತ ಉತ್ತರ ನೀಡಿದೆ. ಕ್ಷೇತ್ರದಲ್ಲಿ ಶಾಸಕರು ಜನರಿಗೆ ನೀಡಿರುವ ಬಹುತೇಕ ಭರವಸೆಗಳನ್ನು ಈಡೇರಿಸಿದ್ದಾರೆ. ಅಲ್ಲದೆ 4 ಬಾರಿ ಶಾಸಕರಾಗಿ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ. ಸರ್ವಧರ್ಮಗಳನ್ನು ಪ್ರೀತಿಸಿ, ಗೌರವಿಸುವ ಶಾಸಕರು ಎಲ್ಲಾ ಜಾತಿ, ಧರ್ಮದವರ ಅಭಿವೃದ್ಧಿಗೆ ಬದ್ಧರಾಗಿದ್ದಾರೆ. ಪ್ರಸ್ತುತ ನಗರದ ಬಹುತೇಕ ರಸ್ತೆಗಳಿಗೆ ಹಲವಾರು ಮಹಾನ್ ವ್ಯಕ್ತಿಗಳ ಹೆಸರು ನಾಮಕರಣಗೊಳಿಸಿದ್ದಾರೆ. ಈ ನಡುವೆ ಶಾಸಕರ ವಿರುದ್ಧ ಕೆಲವರು ವಿನಾಕಾರಣ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ಇವುಗಳಿಗೆ ಕ್ಷೇತ್ರದ ಜನರು ಕಿವಿಗೊಡುವುದಿಲ್ಲ ಎಂದರು. 
     ನಗರಸಭೆ ಉಪಾಧ್ಯಕ್ಷ ಎಂ. ಮಣಿ ಎಎನ್‌ಎಸ್, ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ರಿಯಾಜ್, ಪೌರಾಯುಕ್ತ ಎನ್.ಕೆ ಹೇಮಂತ್, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ನಗರ ಆಶ್ರಯ ಸಮಿತಿ ಅಧ್ಯಕ್ಷ ಬಿ.ಎಸ್ ಗೋಪಾಲ್, ಸರ್ಕಾರದ 5 ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ತಾಲೂಕು ಅಧ್ಯಕ್ಷ ಬಿ.ಎಸ್ ಗಣೇಶ್ ಸೇರಿದಂತೆ ನಾಡಹಬ್ಬ ದಸರಾ ಆಚರಣೆ ವಿವಿಧ ಸಮಿತಿಗಳ ಅಧ್ಯಕ್ಷರು, ಸದಸ್ಯರು ಹಾಗು ನಗರಸಭೆ ಬಹುತೇಕ ಸದಸ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು. 


ಭದ್ರಾವತಿಯಲ್ಲಿ ನಾಡಹಬ್ಬ ದಸರಾ ಆಚರಣೆ ಹಿನ್ನಲೆಯಲ್ಲಿ ರಂಗಪ್ಪ ವೃತ್ತದಲ್ಲಿ ಅಳವಡಿಸಲಾಗಿರುವ ಶ್ರೀ ಚಾಮುಂಡೇಶ್ವರಿ ದೇವಿಯ ಬೃಹತ್ ಫ್ಲೆಕ್ಸ್ಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
     ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಅಧ್ಯಕ್ಷತೆ ವಹಿಸಿದ್ದರು. ಸದಸ್ಯ ಚನ್ನಪ್ಪ ಸ್ವಾಗತಿಸಿ, ಸುನಂದ ಸಂಗಡಿಗರು ಪ್ರಾರ್ಥಿಸಿದರು. ಸಿದ್ದಾರ್ಥ ಅಂಧರ ಕೇಂದ್ರದ ವಿಕಲಚೇತನರು ನಾಡಗೀತೆ ಹಾಡಿದರು. ನರಸಿಂಹಮೂರ್ತಿ ನಿರೂಪಿಸಿದರು. 
 ವೇದಿಕೆ ಕಾರ್ಯಕ್ರಮಕ್ಕೂ ಮೊದಲು ಬೆಳಿಗ್ಗೆ 11.30ರ ಸಮಯದಲ್ಲಿ ನಗರದ ರಂಗಪ್ಪ ವೃತ್ತಕ್ಕೆ ಆಗಮಿಸಿದ ಶಿವರುದ್ರಪ್ಪರವರನ್ನು ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್, ನಗರಸಭೆ ಅಧ್ಯಕ್ಷೆ ಜೆ.ಸಿ ಗೀತಾರಾಜ್‌ಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ರಿಯಾಜ್, ಪೌರಾಯುಕ್ತ ಎನ್.ಕೆ ಹೇಮಂತ್, ನಾಡಹಬ್ಬ ದಸರಾ ಆಚರಣೆ ವಿವಿಧ ಸಮಿತಿಗಳ ಅಧ್ಯಕ್ಷರು, ಸದಸ್ಯರು, ಪೌರ ಸೇವಾ ನೌಕರರ ಸೇವಾ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ನಗರಸಭೆ ಅಧಿಕಾರಿಗಳು, ಸಿಬ್ಬಂದಿಗಳು, ಪೌರ ಕಾರ್ಮಿಕರು, ವಿವಿಧ ಮಹಿಳಾ ಸ್ವಸಹಾಯ ಸಂಘಗಳ ಮಹಿಳೆಯರು ಸೇರಿದಂತೆ ಇನ್ನಿತರರು ಮೈಸೂರು ಪೇಟ ತೊಡಿಸಿ, ಶಾಲು ಹೊದಿಸಿ ಅದ್ದೂರಿಯಾಗಿ ಸ್ವಾಗತಿಸಿದರು. 
 ಇದೆ ವೇಳೆ ರಂಗಪ್ಪ ವೃತ್ತದಲ್ಲಿ ಅಳವಡಿಸಲಾಗಿರುವ ಶ್ರೀ ಚಾಮುಂಡೇಶ್ವರಿ ದೇವಿಯ ಬೃಹತ್ ಫ್ಲೆಕ್ಸ್ಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ಶಿವರುದ್ರಪ್ಪರವರನ್ನು ಸಾರೋಟ ಮೂಲಕ ನಗರಸಭೆ ಆವರಣದವರೆಗೂ ಮೆರವಣಿಗೆಯಲ್ಲಿ ಕರೆ ತರಲಾಯಿತು. ನಂತರ ಶ್ರೀ ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಜಿಲ್ಲಾ ಧಾರ್ಮಿಕ ಪರಿಷತ್ ನಿರ್ದೇಶಕ ರಮಾಕಾಂತ್ ಮತ್ತು ಕಂಚಿನಬಾಗಿಲು ಶ್ರೀ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕ ಪವನ್ ಕುಮಾರ್ ಉಡುಪ ನೇತೃತ್ವದಲ್ಲಿ ಧಾರ್ಮಿಕ ಆಚರಣೆಗಳು ಜರುಗಿದವು. ಶ್ರೇಯಸ್ ರಾವ್ ಭರತ್ಯ ನಾಟ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.