ಗುರುವಾರ, ಅಕ್ಟೋಬರ್ 16, 2025

ಅ.೧೯ರಂದು ಮಾಜಿ ಮುಖ್ಯಮಂತ್ರಿ ಜೆ.ಎಚ್ ಪಟೇಲರ ೯೬ನೇ ದಿನಾಚರಣೆ

ವ್ಯವಸ್ಥೆಯ ಸುಧಾರಣೆಯಲ್ಲಿ ನಮ್ಮ ಪಾತ್ರ' ವಿಚಾರ ಸಂಕೀರ್ಣ

ಭದ್ರಾವತಿಯಲ್ಲಿ ಅ.೧೯ರಂದು ಮಾಜಿ ಮುಖ್ಯಮಂತ್ರಿ ಜೆ.ಎಚ್ ಪಟೇಲರ ೯೬ನೇ ದಿನಾಚರಣೆ ಆಯೋಜಿಸಿರುವ ಕುರಿತು ಸಾಮಾಜಿಕ ಹೋರಾಟಗಾರ ಶಶಿಕುಮಾರ್ ಎಸ್. ಗೌಡ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. 
    ಭದ್ರಾವತಿ:  ಧೀಮಂತ ನಾಯಕ, ಸಮಾಜವಾದಿ ಮಾಜಿ ಮುಖ್ಯಮಂತ್ರಿ ದಿವಂಗತ ಜೆ.ಎಚ್.ಪಟೇಲರ ೯೬ನೇ ಜನ್ಮದಿನಾಚರಣೆ ಅ.೧೯ರ ಭಾನುವಾರ ಬೆಳಗ್ಗೆ ೧೧ ಗಂಟೆಗೆ ಹಳೇನಗರದ ಶ್ರೀ ವೀರಭದ್ರೇಶ್ವರ ಸಮುದಾಯ ಭನವದಲ್ಲಿ ಜೆ.ಎಚ್ ಪಟೇಲ್ ಅಭಿಮಾನಿ ಬಳಗದ ವತಿಯಿಂದ ಆಯೋಜಿಸಲಾಗಿದೆ ಎಂದು ಎಂದು ಸಾಮಾಜಿಕ ಹೋರಾಟಗಾರ ಶಶಿಕುಮಾರ್ ಎಸ್.ಗೌಡ ತಿಳಿಸಿದರು. 
    ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜೆ.ಎಚ್ ಪಟೇಲರು ಕನ್ನಡ ನಾಡಿನ ಜನರು ಎಂದಿಗೂ ಮರೆಯಲಾಗದ ಜನಪರ ನಾಯಕ, ಪ್ರಜಾಪ್ರಭುತ್ವ ಆಡಳಿತ ವ್ಯವಸ್ಥೆಯನ್ನು ಎತ್ತಿಹಿಡಿದು ಉತ್ತಮ ಆಡಳಿತ ನೀಡಿದ ರಾಜಕೀಯ ಮುತ್ಸದ್ದಿ. ಎಲ್ಲಾ ಧರ್ಮದ, ಜಾತಿ ಜನಾಂಗದ, ಬಡವರ, ದೀನದಲಿತರ ಆಶಾ ಕಿರಣವಾಗಿ ಇತಿಹಾಸದ ಪುಟಗಳಲ್ಲಿ ಅಚ್ಚಳಿಯದೆ ಉಳಿದು ಕೊಂಡಿದ್ದಾರೆ. ಇವರ ಆದರ್ಶತನಗಳು, ಚಿಂತನೆಗಳು, ಆಡಳಿತ ವ್ಯವಸ್ಥೆ, ಜನಪರ ಕಾಳಜಿ ಇಂದಿನ ರಾಜಕೀಯ ವ್ಯಕ್ತಿಗಳಿಗೆ ಮಾರ್ಗದರ್ಶಕವಾಗಿವೆ ಎಂದರು. 
    ಜೆ.ಎಚ್ ಪಟೇಲರ ಜನ್ಮದಿನಾಚರಣೆ ಅರ್ಥಪೂರ್ಣವಾಗಿ ಆಚರಿಸಬೇಕೆಂಬ ಉದ್ದೇಶದೊಂದಿಗೆ ಅಂದು `ವ್ಯವಸ್ಥೆಯ ಸುಧಾರಣೆಯಲ್ಲಿ ನಮ್ಮ ಪಾತ್ರ' ಮತ್ತು ಮೈಕ್ರೋ ಫೈನಾನ್ಸ್‌ಗಳಿಂದ ಎದುರಾಗುತ್ತಿರುವ ಸಮಸ್ಯೆಗಳನ್ನು ನಿಯಂತ್ರಿಸುವ ಕುರಿತ ವಿಚಾರ ಸಂಕೀರ್ಣ ಏರ್ಪಡಿಸಲಾಗಿದೆ ಎಂದರು.
    ಜ.ಎಚ್ ಪಟೇಲರ ಪುತ್ರ, ಮಾಜಿ ಶಾಸಕ ಮಹಿಮಾ ಜೆ. ಪಟೇಲ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಕಡೂರಿನ ಮಾಜಿ ಶಾಸಕ ವೈ.ಎಸ್.ವಿ ದತ್ತ ಪಟೇಲರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಿದ್ದಾರೆ. ಕರ್ನಾಟಕ ರಾಜ್ಯ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಹಾಗೂ ವಿಧಾನ ಪರಿಷತ್ ಸದಸ್ಯೆ ಬಲ್ಕೀಶ್‌ಬಾನು  ಸೇರಿದಂತೆ ಇನ್ನಿತರರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
    ಪತ್ರಿಕಾ ಗೋಷ್ಠಿಯಲ್ಲಿ ಕರುನಾಡ ಹಿತ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ವೈ. ಶಶಿಕುಮಾರ್, ಮುಖಂಡರುಗಳಾದ ಯೋಗೇಶ್‌ನಾಯ್ಕ್, ಸೈಯ್ಯದ್ ಜಾಫರ್, ವಿಜಯಕುಮಾರ್, ಶಿವಕುಮಾರ್, ಟಿ.ಜಿ ಬಸವರಾಜಯ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ಬ್ಲಾಕ್ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷರಾಗಿ ಬಿ.ಎ ಮಂಜುನಾಥ್ ನೇಮಕ

ಶಿವಮೊಗ್ಗ ಜಿಲ್ಲಾ ಸಾಂಸ್ಕೃತಿಕ ಕಲಾವಿದರ ಸಂಘದ ಅಧ್ಯಕ್ಷ, ನಿವೃತ್ತ ಸರ್ಕಾರಿ ನೌಕರ ಬಿ.ಎ ಮಂಜುನಾಥ್‌ರವರನ್ನು ಭದ್ರಾವತಿ ನಗರ ಬ್ಲಾಕ್ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷರನ್ನಾಗಿ ನೇಮಕಗೊಳಿಸಲಾಗಿದೆ. 
    ಭದ್ರಾವತಿ : ಶಿವಮೊಗ್ಗ ಜಿಲ್ಲಾ ಸಾಂಸ್ಕೃತಿಕ ಕಲಾವಿದರ ಸಂಘದ ಅಧ್ಯಕ್ಷ, ನಿವೃತ್ತ ಸರ್ಕಾರಿ ನೌಕರ ಬಿ.ಎ ಮಂಜುನಾಥ್‌ರವರನ್ನು ನಗರ ಬ್ಲಾಕ್ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷರನ್ನಾಗಿ ನೇಮಕಗೊಳಿಸಲಾಗಿದೆ. 
    ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ಆರ್. ಧರ್ಮಸೇನರವರ ಆದೇಶ ಹಾಗು ಶಾಸಕ ಬಿ.ಕೆ ಸಂಗಮೇಶ್ವರ್‌ರವರ ಸೂಚನೆ ಮೇರೆಗೆ ಮತ್ತು ಜಿಲ್ಲಾಧ್ಯಕ್ಷ ಆರ್. ಪ್ರಸನ್ನಕುಮಾರ್‌ರವರ ಶಿಫಾರಸ್ಸಿನ ಮೇರೆಗೆ ಪರಿಶಿಷ್ಟ ಜಾತಿ ವಿಭಾಗದ ಜಿಲ್ಲಾಧ್ಯಕ್ಷ ಆರ್. ಶಿವಣ್ಣ ನೇಮಕಗೊಳಿಸಿ ಆದೇಶ ಹೊರಡಿಸಿದ್ದಾರೆ. 
    ಕಾಂಗ್ರೆಸ್ ಪಕ್ಷದ ತತ್ವ ಸಿದ್ದಾಂತಗಳಿಗೆ ಬದ್ಧರಾಗಿ ಪಕ್ಷದ ಸ್ಥಳೀಯ ಮುಖಂಡರು, ಕಾರ್ಯಕರ್ತರನ್ನು ಸಂಘಟಿಸುವ ಮೂಲಕ ಪಕ್ಷವನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ಬಲಪಡಿಸಬೇಕೆಂದು ಸೂಚಿಸಲಾಗಿದೆ. 
    ನೂತನ ನಗರ ಬ್ಲಾಕ್ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷರಾಗಿ ನೇಮಕಗೊಂಡಿರುವ ಬಿ.ಎ ಮಂಜುನಾಥ್‌ರವರನ್ನು ಶಾಸಕ ಬಿ.ಕೆ ಸಂಗಮೇಶ್ವರ್, ಪ್ರಮುಖರಾದ ಬ್ಲಾಕ್ ಕಾಂಗ್ರೆಸ್ ನಗರ ಅಧ್ಯಕ್ಷ ಎಸ್. ಕುಮಾರ್, ಗ್ರಾಮಾಂತರ ಅಧ್ಯಕ್ಷ ಎಚ್.ಎಲ್ ಷಡಾಕ್ಷರಿ, ಶಿವಮೊಗ್ಗ ಜಿಲ್ಲಾ ಸಾಂಸ್ಕೃತಿಕ ಕಲಾವಿದರ ಸಂಘದ ಪ್ರಮುಖರು ಸೇರಿದಂತೆ ಇನ್ನಿತರರು ಅಭಿನಂದಿಸಿದ್ದಾರೆ. 

ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನಕ್ಕೆ ವ್ಯವಸ್ಥಾಪನ ಸಮಿತಿ ರಚನೆ

ಅಧ್ಯಕ್ಷರಾಗಿ ಜಿಲ್ಲಾ ಧಾರ್ಮಿಕ ಪರಿಷತ್ ನಿರ್ದೇಶಕ ಜಿ. ರಮಾಕಾಂತ್ ಆಯ್ಕೆ 

ಭದ್ರಾವತಿ ಹಳೇನಗರದ ಪುರಾಣ ಪ್ರಸಿದ್ದ, ಮುಜರಾಯಿ ಇಲಾಖೆಗೆ ಒಳಪಟ್ಟಿರುವ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ರಚನೆಯಾಗಿದ್ದು, ನೂತನ ಅಧ್ಯಕ್ಷರಾಗಿ ಜಿ. ರಮಾಕಾಂತ್ ಅಧಿಕಾರ ಸ್ವೀಕರಿಸಿದರು. 
    ಭದ್ರಾವತಿ : ಹಳೇನಗರದ ಪುರಾಣ ಪ್ರಸಿದ್ದ, ಮುಜರಾಯಿ ಇಲಾಖೆಗೆ ಒಳಪಟ್ಟಿರುವ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ರಚನೆಯಾಗಿದ್ದು, ನೂತನ ಅಧ್ಯಕ್ಷರಾಗಿ ಜಿ. ರಮಾಕಾಂತ್ ಅಧಿಕಾರ ಸ್ವೀಕರಿಸಿದರು. 
    ಜಿಲ್ಲಾ ಧಾರ್ಮಿಕ ಪರಿಷತ್ ನಿರ್ದೇಶಕರಾಗಿರುವ ಜಿ. ರಮಾಕಾಂತ್‌ರವರು ಧಾರ್ಮಿಕ ಕ್ಷೇತ್ರದಲ್ಲಿ ಸಾಕಷ್ಟು ಸೇವೆ ಸಲ್ಲಿಸುತ್ತಿದ್ದಾರೆ. ತಾಲೂಕು ಬ್ರಾಹ್ಮಣ ಮಹಾಸಭಾ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು, ಪ್ರಸ್ತುತ ಉಪಾಧ್ಯಕ್ಷರಾಗಿದ್ದಾರೆ. ಹಳೇನಗರ ಗುರು ಸಾರ್ವಭೌಮ ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠದ ಶ್ರೀ ಗುರುರಾಜ ಸೇವಾ ಸಮಿತಿ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇದೀಗ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. 
    ಪುರಾಣ ಪ್ರಸಿದ್ದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನ ತನ್ನದೇ ಆದ ವಿಶಿಷ್ಟತೆಯನ್ನು ಹೊಂದಿದ್ದು, ದೇವಸ್ಥಾನದ ಭವ್ಯ ಪರಂಪರೆ ಇತಿಹಾಸದ ಪುಟಗಳಲ್ಲಿ ಅಚ್ಚಳಿಯದಂತೆ ಉಳಿದು ಕೊಂಡಿದೆ. ಪ್ರಸ್ತುತ ಈ ದೇವಸ್ಥಾನ ಸಾಕಷ್ಟು ಅಭಿವೃದ್ಧಿ ಹೊಂದಬೇಕಾಗಿದ್ದು, ಕೆಲವು ವರ್ಷಗಳಿಂದ ವ್ಯವಸ್ಥಾಪನಾ ಸಮಿತಿ ರಚನೆಯಾಗದೆ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿದ್ದವು. ಪ್ರಸ್ತುತ ನೂತನವಾಗಿ ರಚನೆಯಾಗಿರುವ ಸಮಿತಿ ದೇವಸ್ಥಾನ ಅಭಿವೃಧ್ಧಿಗೆ ಗಮನ ಹರಿಸಬೇಕಾಗಿದೆ. 
    ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ನೂತನ ಪದಾಧಿಕಾರಿಗಳು : 
    ಅಧ್ಯಕ್ಷರು : ಜಿ. ರಮಾಕಾಂತ್, ನಿರ್ದೇಶಕರು : ಕೆ.ಎನ್ ಮಂಜುನಾಥ್, ಬಿ.ಆರ್ ಮಹೇಶ್, ಎಂ.ಎಸ್ ಸತೀಶ್, ಕೆ.ಎನ್ ನಾಗೇಶ್, ಎಂ.ಬಿ ರಂಗನಾಥ್, ಆರ್. ಹಾಲಮ್ಮ ಮತ್ತು ಜಿ. ಆಶಾ, ಪ್ರಧಾನ ಅರ್ಚಕರು :ಎಸ್. ರಂಗನಾಥ ಶರ್ಮ, ಸಹಾಯಕ ಅರ್ಚಕರು ಎಸ್. ಶ್ರೀನಿವಾಸ್ 
    ಇದುವರೆಗೂ ಆಡಳಿತಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಕಂದಾಯ ನಿರೀಕ್ಷಕ ಪ್ರಶಾಂತ್‌ರವರು ನೂತನ ವ್ಯವಸ್ಥಾಪನ ಸಮಿತಿಗೆ ಅಧಿಕಾರ ಹಸ್ತಾಂತರಿಸಿದರು.

ಬುಧವಾರ, ಅಕ್ಟೋಬರ್ 15, 2025

ಅ.೨೬ರಂದು ವಿಐಎಸ್‌ಎಲ್ ಎಂಪ್ಲಾಯಿಸ್ ಅಸೋಸಿಯೇಷನ್ ಚುನಾವಣೆ


    ಭದ್ರಾವತಿ : ಎಐಟಿಯುಸಿ ಕಾರ್ಮಿಕ ಸಂಘಟನೆಯ ನಗರದ ನ್ಯೂಟೌನ್ ವಿಐಎಸ್‌ಎಲ್ ಎಂಪ್ಲಾಯಿಸ್ ಅಸೋಸಿಯೇಷನ್ ಚುನಾವಣೆ ಅ.೨೬ರಂದು ನಡೆಯಲಿದ್ದು, ಅಭ್ಯರ್ಥಿಗಳ ನಡುವೆ ತೀವ್ರ ಪೈಪೋಟಿ ಕಂಡು ಬರುತ್ತಿದೆ. 
    ಅ.೧೭ ನಾಮಪತ್ರ ಹಿಂಪಡೆಯುವ ದಿನವಾಗಿದ್ದು, ನಂತರ ೧೯ರಂದು ಅಂತಿಮ ಅಭ್ಯರ್ಥಿಗಳ ಪಟ್ಟಿ ಪ್ರಕಟಗೊಳ್ಳಲಿದೆ. ವಿಐಎಸ್‌ಎಲ್ ಎಂಪ್ಲಾಯಿಸ್ ಅಸೋಸಿಯೇಷನ್ ಕಛೇರಿಯಲ್ಲಿ ೨೬ರಂದು ಬೆಳಿಗ್ಗೆ ೧೦ ಗಂಟೆಯಿಂದ ಸಂಜೆ ೪ ಗಂಟೆವರೆಗೆ ಚುನಾವಣೆ ನಡೆಯಲಿದೆ. ಇದೆ ದಿನ ಮತ ಎಣಿಕೆ ನಡೆದು ಫಲಿತಾಂಶ ಪ್ರಕಟಗೊಳ್ಳಲಿದೆ ಎಂದು ಚುನಾವಣಾಧಿಕಾರಿ, ನ್ಯಾಯವಾದಿ ಎಸ್. ರವಿಕುಮಾರ್ ತಿಳಿಸಿದ್ದಾರೆ. 

ಅಸಂಘಟಿತ ಕಾರ್ಮಿಕರ ಸಂಘ : ನೂತನ ಪದಾಧಿಕಾರಿಗಳ ಪದಗ್ರಹಣ

ರಾಜ್ಯ ಅಸಂಘಟಿತ ಕಾರ್ಮಿಕರ ಸಂಘ ಭದ್ರಾವತಿ ಗ್ರಾಮಾಂತರ ಮತ್ತು ನಗರ ಘಟಕಗಳ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜಿಲ್ಲಾಧ್ಯಕ್ಷ ರಮೇಶ್ ಮಡಿವಾಳ ಬಂದಗದ್ದೆರವರ ಅಧ್ಯಕ್ಷತೆಯಲ್ಲಿ ಯಶಸ್ವಿಯಾಗಿ ನಡೆಯಿತು. 
    ಭದ್ರಾವತಿ : ರಾಜ್ಯ ಅಸಂಘಟಿತ ಕಾರ್ಮಿಕರ ಸಂಘ ಗ್ರಾಮಾಂತರ ಮತ್ತು ನಗರ ಘಟಕಗಳ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜಿಲ್ಲಾಧ್ಯಕ್ಷ ರಮೇಶ್ ಮಡಿವಾಳ ಬಂದಗದ್ದೆರವರ ಅಧ್ಯಕ್ಷತೆಯಲ್ಲಿ ಯಶಸ್ವಿಯಾಗಿ ನಡೆಯಿತು. 
    ರಾಜ್ಯಾಧ್ಯಕ್ಷ ಪ್ರದೀಪ್ ಹೊನ್ನಪ್ಪ, ರಾಜ್ಯ ಕಾರ್ಯದರ್ಶಿ ಸುರೇಖಾ ಪಾಲಾಕ್ಷಪ್ಪ, ಜಿಲ್ಲಾ ಉಪಾಧ್ಯಕ್ಷೆ ಅಶ್ವಿನಿ ಗೌಡ, ತಾಲೂಕು ನಗರ ಅಧ್ಯಕ್ಷೆ ರೂಪ ನಾಗರಾಜ್, ಗ್ರಾಮಾಂತರ ಅಧ್ಯಕ್ಷೆ ಶಕುಂತಲಾ ಪ್ರದೀಪ್ ಅರಳಿಹಳ್ಳಿ  ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 
    ಡ್ರೈವರ್, ಕ್ಲೀನರ್, ಹೆಲ್ಪರ್, ಮೆಕ್ಯಾನಿಕ್, ಬ್ಯೂಟಿಷಿಯನ್, ಪೈಂಟರ್, ಹಮಾಲಿ, ಹೋಟೆಲ್ ಕೂಲಿ ಕಾರ್ಮಿಕರುಗಳು, ದಿನಗೂಲಿ ಕಾರ್ಮಿಕರು ಸೇರಿದಂತೆ ಎಲ್ಲಾ ತರಹದ ಅಸಂಘಟಿತ ಕಾರ್ಮಿಕರಿಗೆ ಇಲಾಖೆಯಿಂದ ಲಭ್ಯವಾಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಲಾಯಿತು
    ತಾಲೂಕು ಗ್ರಾಮಾಂತರ ಸಮಿತಿ ನೂತನ ಪದಾಧಿಕಾರಿಗಳು : 
    ಅಧ್ಯಕ್ಷೆ ಶಕುಂತಲಾ ಪ್ರದೀಪ್ ಅರಳಿಹಳ್ಳಿ, ಪ್ರಧಾನ ಕಾರ್ಯದರ್ಶಿ ಶಶಿಕಲಾ ಕುಮಾರ್, ಉಪಾಧ್ಯಕ್ಷರು ಟಿ. ಶಿವಮೂರ್ತಿ ತಳ್ಳಿಕಟ್ಟೆ. ಸೈಯದ್ ಜಬಿವುಲ್ಲಾ ಗೌಡರಹಳ್ಳಿ. ಸರಸ್ವತಿ ವಿಜಯಕುಮಾರ್ ಗುಡ್ಡದನೇರಳೆಕೆರೆ. ಚನ್ನಪ್ಪ ನಾಗತಿಬೆಳಗಲು, ಕಾರ್ಯದರ್ಶಿ ಜಯಶೀಲ ಅತ್ತಿಗುಂದ, ಧನಿಕ್ ಕುಮಾರ್ ತಳ್ಳಿಕಟ್ಟೆ, ಪಾರ್ವತಿ ಸೀಗೆಬಾಗಿ, ಪದ್ಮಪ್ರಿಯ ಸೀತಾರಾಮಪುರ, ಅಫ್ರೋಜ್ ಗುಡ್ಡದನೇರಳೆಕೆರೆ. ಸಂಘಟನಾ ಕಾರ್ಯದರ್ಶಿ ನೇತ್ರಾವತಿ ಎಡೇಹಳ್ಳಿ. 

ವಿನಾಯಕ ಮೂರ್ತಿ ಪ್ರತಿಷ್ಠಾಪನೆ : ರಕ್ತದಾನ ಶಿಬಿರ

ಭದ್ರಾವತಿ ನಗರಸಭೆ ವ್ಯಾಪ್ತಿಯ ಸುರಗಿತೋಪು ೪ನೇ ತಿರುವಿನ ರಸ್ತೆಯಲ್ಲಿ ಶ್ರೀ ಅನ್ನಪೂರ್ಣೇಶ್ವರಿ ಯುವಕರ ಸೇವಾ ಸಮಿತಿಯಿಂದ ಸುಮಾರು ೫೦ ವರ್ಷಗಳಿಂದ ಪ್ರತಿ ವರ್ಷ ವಿಭಿನ್ನವಾದ, ಆಕರ್ಷಕವಾದ ವಿನಾಯಕ ಮೂರ್ತಿ ಪ್ರತಿಷ್ಠಾಪನೆ ಮಾಡಿಕೊಂಡು ಬರಲಾಗುತ್ತಿದೆ. ಈ ಬಾರಿ ವಿಶೇಷ ಎಂದರೆ ರಕ್ತದಾನ ಶಿಬಿರ ಆಯೋಜಿಸುವ ಮೂಲಕ ರಕ್ತದಾನ ಕುರಿತು ಜಾಗೃತಿ ಮೂಡಿಸಲಾಯಿತು. 
    ಭದ್ರಾವತಿ : ನಗರಸಭೆ ವ್ಯಾಪ್ತಿಯ ಸುರಗಿತೋಪು ೪ನೇ ತಿರುವಿನ ರಸ್ತೆಯಲ್ಲಿ ಶ್ರೀ ಅನ್ನಪೂರ್ಣೇಶ್ವರಿ ಯುವಕರ ಸೇವಾ ಸಮಿತಿಯಿಂದ ಸುಮಾರು ೫೦ ವರ್ಷಗಳಿಂದ ಪ್ರತಿ ವರ್ಷ ವಿಭಿನ್ನವಾದ, ಆಕರ್ಷಕವಾದ ವಿನಾಯಕ ಮೂರ್ತಿ ಪ್ರತಿಷ್ಠಾಪನೆ ಮಾಡಿಕೊಂಡು ಬರಲಾಗುತ್ತಿದೆ. ಈ ಬಾರಿ ವಿಶೇಷ ಎಂದರೆ ರಕ್ತದಾನ ಶಿಬಿರ ಆಯೋಜಿಸುವ ಮೂಲಕ ರಕ್ತದಾನ ಕುರಿತು ಜಾಗೃತಿ ಮೂಡಿಸಲಾಯಿತು. 
    ಬುಧವಾರ ಶಿವಮೊಗ್ಗ ಸುಬ್ಬಯ್ಯ ಮೆಡಿಕಲ್ ಕಾಲೇಜು ಆಸ್ಪತ್ರೆ ರಕ್ತಕೇಂದ್ರದ ಸಹಯೋಗದೊಂದಿಗೆ ವಿನಾಯಕ ಮೂರ್ತಿ ಪ್ರತಿಷ್ಠಾಪನೆ ಸ್ಥಳದಲ್ಲಿ ಶಿಬಿರ ಆಯೋಜಿಸಲಾಗಿತ್ತು. ಸುಮಾರು ೧೯ ಮಂದಿ ರಕ್ತದಾನ ಮಾಡಿದರು. ಈ ಭಾಗದ ವಾರ್ಡ್ ನಗರಸಭೆ ಸದಸ್ಯೆ ಜಯಶೀಲ ಸುರೇಶ್, ರಕ್ತ ಕೇಂದ್ರದ ಸಿಬ್ಬಂದಿಗಳು, ಶ್ರೀ ಅನ್ನಪೂರ್ಣೇಶ್ವರಿ ಯುವಕರ ಸೇವಾ ಸಮಿತಿ ಪದಾಧಿಕಾರಿಗಳು, ಸೇವಾಕರ್ತರು, ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು. 
    ಅ.೧೬ರ ಗುರುವಾರ ಬೆಳಿಗ್ಗೆ ಗಣಹೋಮ ಹಾಗು ಮಧ್ಯಾಹ್ನ ೧ ಗಂಟೆಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯಶಸ್ವಿಗೊಳಿಸುವಂತೆ ಕೋರಲಾಗಿದೆ. 

ಛಾಯಾಗ್ರಾಹಕರ ಪತ್ತಿನ ಸೌಹಾರ್ದ ಸಹಕಾರಿ ಸಂಘ : ಅಧ್ಯಕ್ಷರಾಗಿ ಅರುಣ್ ಕುಮಾರ್ ಆಯ್ಕೆ

ಭದ್ರಾವತಿ ತಾಲೂಕಿನ ಛಾಯಾಗ್ರಾಹಕರ ಪತ್ತಿನ ಸೌಹಾರ್ದ ಸಹಕಾರಿ ಸಂಘ ನಿಯಮಿತ ನೂತನ ಅಧ್ಯಕ್ಷರಾಗಿ ಅರುಣ್ ಕುಮಾರ್ ಹಾಗು ಉಪಾಧ್ಯಕ್ಷರಾಗಿ ಚಲುವರಾಜ್ ಆಯ್ಕೆಯಾಗಿದ್ದಾರೆ. 
    ಭದ್ರಾವತಿ: ತಾಲೂಕಿನ ಛಾಯಾಗ್ರಾಹಕರ ಪತ್ತಿನ ಸೌಹಾರ್ದ ಸಹಕಾರಿ ಸಂಘ ನಿಯಮಿತ ನೂತನ ಅಧ್ಯಕ್ಷರಾಗಿ ಅರುಣ್ ಕುಮಾರ್ ಹಾಗು ಉಪಾಧ್ಯಕ್ಷರಾಗಿ ಚಲುವರಾಜ್ ಆಯ್ಕೆಯಾಗಿದ್ದಾರೆ. 
    ನಿರ್ದೇಶಕರಾದ ಎಚ್. ಶ್ರೀನಿವಾಸ್, ಸಿ. ಶೇಖರ್, ಬಿ.ಸಿ ಶಿವಾನಂದ, ಪಿ. ಸುರೇಶ್, ಕೆಂಪಯ್ಯ, ಎಚ್.ಆರ್ ಸುರೇಶ್, ಕೃಷ್ಣ ಮೂರ್ತಿ, ಜಿ. ಅರುಣ್, ಎಂ.ಆರ್ ಶೈಲೇಶ್ ಕುಮಾರ್ ಮತ್ತು ಕೆ. ಗೀತಾರವರು ನೂತನ ಅಧ್ಯಕ್ಷರು ಹಾಗು ಉಪಾಧ್ಯಕ್ಷರನ್ನು ಆಯ್ಕೆ ಮಾಡಿದ್ದಾರೆ. 
    ನೂತನ ಅಧ್ಯಕ್ಷ ಅರಣ್‌ಕುಮಾರ್ ಹಾಗೂ ಉಪಾಧ್ಯಕ್ಷ ಚಲುವರಾಜ್ ಅವರಿಗೆ ತಾಲೂಕಿನ ಛಾಯಾ ಗ್ರಾಹಕರು, ವಿವಿಧ  ಸಂಘ-ಸಂಸ್ಥೆಗಳ ಪ್ರಮುಖರು, ಗಣ್ಯರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.